ಚಳ್ಳಕೆರೆ ಪಟ್ಟಣದಿಂದ ನಾಯಕನಟ್ಟಿಗೆ ಹೋಗುವ ದಾರಿಯಲ್ಲಿಯೇ ಖುದಾಪುರ ಎಂಬ ಗ್ರಾಮದ ಬಳಿ ಬೋರೇದೇವರ ಗುಡಿ ಇದೆ. ಇದೂ ಮ್ಯಾಸಬೇಡರ ದೇವತೆಯೇ. ಆಧುನಿಕವಾಗಿ ಕಟ್ಟಿದ ಗುಡಿಯಲ್ಲಿರುವ ಭೈರವ ದೇವರು ಬೋರೇದೇವರೆನಿಸಿಕೊಂಡಿದ್ದಾನೆ. ಗುಡಿಯೊಳಗೆ ಕುದುರೆಯ ಮೇಲೆ ಕೂತ ವೀರನೊಬ್ಬನ ವಿಗ್ರಹ, ಅದರ ಬಳಿಯೇ ಭೂಮಿಯಲ್ಲಿ ಹೂತ ಒಂದು ಬಂಡೆಗಲ್ಲು ಇದೆ. ಈ ಹೂತ ಬಂಡೆಗಲ್ಲನೇ ಬೋರೇದೇವರು ಎಂದು ಜನ ತಿಳಿದಿದ್ದಾರೆ. ಇದು ಮಿಯಿಂದಲೇ ಉದ್ಭವವಾಗಿ, ಬೆಳೆಯುತ್ತಲೇ ಇದೆಯೆಂದು ಹೇಳುತ್ತಾರೆ. ಇದರ ಮೇಲೊಂದು ದಂತ ಕಥೆ ಇದೆ. ಆದಿಯಲ್ಲಿ ಶ್ರೀಶೈಲದ ಕಡೆಯಿಂದ ಬೇಡನಾಯಕ ಕಂಪಳವೊಂದು ಚಿತ್ರದುರ್ಗ ಸೀಮೆಯ ಕಡೆಗೆ ಬಂದಿತು. ಹಾಗೆ ಬಂದು ಬೀಡುಬಿಟ್ಟ ಊರು ಊಟಕುಂಟೆ. ಅರಿವಿನದಿದ್ದಿ ಗ್ರಾಮ. (ಈಗ ಅವು ಬೇಚರಾಕ್ ಗ್ರಾಮಗಳು) ಅಲ್ಲಿ ಪಾಳೆಯಗಾರನಾಗಿದ್ದವನು ಕೊಳಗನಬೊಮ್ಮ ನಾಯಕ.ಇವನಿಗೆ ಯಾರೇ ಆಗಲಿ ತಲೆಗಂದಾಯ, ಗಡಿಗೆ ತುಪ್ಪ ತಂದುಕೊಟ್ಟು ಬದುಕಬೇಕು. ಈತನ ಅಟ್ಟಹಾಸವೂ ಅತಿಯಾಗಿದ್ದಿತು. ಅದರಿಂದ ಅಲ್ಲಿ ನೆಲೆಸಿದ್ದ ಶ್ರೀಶೈಲದ ಕಡೆಯಿಂದ ಬಂದ ದೊಡ್ಡಸೂರನಾಯಕ, ಯರಮಂಚನಾಯಕ, ಪಾಲನಾಯಕ, ದೊಡ್ಡ ರಾಯಿನಾಯಿಕ ಇವರು ತಾವು ನೆಲೆಸಿದ್ದ ಜಾಗವನ್ನು ಬಿಟ್ಟು ಈ ಬೋರೇದೇವರ ಹಟ್ಟಿಯ ಬಯಲಲ್ಲಿ ನೆಲೆಸಿ ದೇವರ ದಯದಿಂದ ಪಾಳೆಯಗಾರರ ದಬ್ಬಾಳಿಕೆ ಅಡಗಲಿ ಎಂದು ಮಲಗಿದರು. ಹೀಗೆಂದು ಗುಂಪಿನ ಯಜಮಾನ ಮಲಗಿರುವ ರಾತ್ರಿಯ ಸರುಹೊತ್ತಿನಲ್ಲಿ ತಲೆಗೇನೋ ಒತ್ತಿದಂತಾಯಿತು. ಎದ್ದು ನೋಡಿದರೆ ಕಲ್ಲು. ಅದರ ಸುತ್ತ ಮಣ್ಣು ತಳ್ಳಿ ಸಮ ಮಾಡಿ ಮಲಗಿದ. ಆದರೆ ಬೆಳಗಾಗುವ ಹೊತ್ತಿಗೆ ಲಿಂಗ ಉದ್ಭವಿಸಿತ್ತು. ಈಗಲೂ ಆ ಲಿಂಗ ಬೆಳೆಯುತ್ತಲೇ ಇದೆಯೆಂದು ಎಲ್ಲರ ನಂಬಿಕೆ. ಬೋರೇದೇವರು ಆ ಸುತ್ತಿನ ಎಲ್ಲ ಪಶುಪಾಲಕ ಬೇಡಗಂಪಳವನ್ನು ರಕ್ಷಿಸಿದ ಎಂಬುದು ಇನ್ನೊಂದು ನಂಬಿಕೆ. ಆದರೆ ಭೂಮಿಯಿಂದ ಮೇಲೆದ್ದು ಕಾಣುವ ಬೋರೇ ದೇವರಿಗಿಂತ ಅದರ ಬಳಿಯಿರುವ ತುರುಗೋಳ್ ಹಿನ್ನೆಲೆಯ ವೀರನದೇ ನೆನಪಿನ ದೇವಾಲಯ ಅದಿರಬೇಕು. ಆದರೆ ಆತನ ಕಥೆ ಮುಚ್ಚಿ ಹೋಗಿ ಉದ್ಭವಲಿಂಗದ ಕಥೆಯೇ ಅಲ್ಲಿ ಪ್ರಧಾನವಾಗಿ ಬಿಟ್ಟಿದೆ. ಬೇಡನಾಯಕರ ಸಮೂಹದ ಈ ಗೀತೆಯನ್ನೂ ಸಿರಿಯಜ್ಜಿ ಹಾಡುತ್ತಾಳೆ.

ಬೋರೇದೇವರು ಗೀತೆ

ವುತ್ತ ವುಟ್ಟೀದಂಗೆ ವುಟ್ಯಾನು ಬೋರುವಯ್ಯ
ವುಕ್ಕೀನ ವುರಿಬಾಣ ಇಡಕಂಡು ಕುದಾಪುರ
ವುಟ್ಯಾನೆ ಗೋವಿವನದಾಗೆ

ಸೂರಿದ ಮೂಡಿದಂತೆ ಮೂಡ್ಯಾನೆ ಬೋರುವಯ್ಯ
ಸಾವುರದ ಬಾಣ ಇಡಕಂಡು ಕುದಾಪುರ
ಮೂಡ್ಯಾನೆ ಗೋವಿವನದಾಗೆ

ಆದಿಬೋರುವಯ್ಯ ಬೂದಿ ಪೂಸಿಕಂಡು
ಬೋಗಿನ್ನರಿಯ ನುಡಿಸೂತ ಕುದಾಪುರ
ಸ್ವಾಮಿ ವರಟಾನೆ ಪಡಿನಾಡ

ಕುಂಚೀನ ಕುಲಾಯಿ ಕೂಸೀಗೆ ಒಪ್ಯಾವು
ಜೋಗಿಗೊಪ್ಯಾವೆ ಜಗುಮಾಲೆ ಕುದಾಪುರ
ಬೋರಯ್ಯಗೊಪ್ಯಾವೆ ಎಲೆಪೂಜೆ

ದೊಡ್ಡ ದೊಡ್ಡ ಜೋಗಿ ದೊಡ್ಡ ಪಾತುರಜೋಗಿ
ದೊಡ್ಡ ಮರದಾಗೆ ಪರಿಗಾಳ ತಂದೈದೀನಿ
ಎಡ್ಡಾಟಬ್ಯಾಡ ಇಡಿಜ್ಯೋಗಿ

ಸಣ್ಣ ಸಣ್ಣ ಜೋಗಿ ಸಣ್ಣ ಪಾತರ ಜೋಗಿ
ಸಣ್ಣ ಮರದಾಗೆ ಪಡಿಗಳು ತಂದೈದೀನಿ
ಚಿನ್ನಬ್ಯಾಡ ಇಡಿಜೋಗಿ

ಜೋಗಪ್ಪ ಜೋಗಪ್ಪ ಯಾತರ ಗುಂಡೀಯ
ಕಾತೆ ಕಂಬಳದಯಲಿಯಾಸೆ ಚಿನ್ನದ
ಪಾತರದಾಗಾಲ ಸಲಿಸಯ್ಯ

ಮುದ್ದೀಯತಿಂಬಾರು ಸಿದ್ದೀಯ ಮಾಡ್ಯಾರು
ಎದ್ದೇ ಕಿನ್ನರಿಯ ನುಡಿಸ್ಯಾರು ಅಯ್ದಾರೆ
ಸ್ವಾಮಿ ಬೋರಯ್ನ ಮಟದಾಗೆ

ಬಂಗೀಯ ಕುಡಿವಾರ ಡಿಂಗಾಟಮಾಡ್ಯಾರು
ಮಂಡೆ ಕಿನ್ನರಿಯ ನುಡಿಸ್ಯಾರು ಅಯ್ದಾರೆ
ಅಣ್ಣ ಬೋರಯ್ನ ಮಟದಾಗೆ

ಸುಣ್ಣಾದ ಗ್ವಾಡೀಗೆ ವೊಂದಿ ನಿಂತಿರುವಾರೆ
ಇನ್ನಿಬ್ಬರ್ಯಾರೆ ವಸಬಾರು ಬೋರವಯ್ಯ
ಕಿನ್ನುರಿನಾಗ ಸರದಾರ

ಮುತ್ತೀನ ಗ್ವಾಡೀಗೆ ವತ್ತಿಕುಂತಿರುವಾಕೆ
ಮತ್ತಿಬ್ಬರ್ಯಾರೆ ವಸಬಾರು ಬೋರುವಯ್ಯ
ವತ್ತಿಗೆ ನಾಗ ಸರದಾರ

ಎಂತಾನೆ ಬೋರಯ್ಯ ಕಂತೆ ವೊದ್ದೈದಾನೆ
ಮಂಟಪದ ಮ್ಯಾಲೆ ಮಲಿಗ್ಯಾನೆ ಬೋರುವಯ್ಯ
ಮಂತ್ರಮಾನ್ಯರಿಗೆ ತಿಳಿಯಾವೆ

ಯಾವಾಗ ಬೋರಯ್ಯ ಕಾವಿವೊದ್ದೈದಾನೆ
ಮಾಳಿಗೆ ಮ್ಯಾಲೆಮನಿಗ್ಯಾನೆ ಬೋರುವಯ್ಯ
ಮಾಯಮಾನ್ಯರಿಗೆ ತಿಳಿಯಾವೆ

ಆಸೆಬಂಡೆಮ್ಯಾಲೆ ಬೀಸುಂಡರು ಬುತ್ತೀಯ
ಏಸೊಂದು ಜುಡಿಯಾ ಕೊಡಿವ್ಯಾರೆ ಕುದಾಪುರ
ದಾಸವಾಳದ ಮರಕ ಸಿವಬಂದ

ಗುಂಡುಕಲ್ಲಿನ ಮ್ಯಾಲೆ ತಂದುಂಡರು ಬುತ್ತೀಯ
ಕಂಡುಗದ ಜಡಿಯೆ ಕೊಡಿವ್ಯಾರೆ ಕುದಾಪುರ
ದುಂಡಾಲದ ಮರಕ ಸಿವಬಂದ

ಅತ್ತಿಯನ್ನ ಮರನ ಅತ್ತೋಗು ಸರಪಾನ
ನೆತ್ತೀಯನಿಡಿದು ನೆಲಕೊಡೆದು ಪ್ರಾಣಪಡೆದು
ಉತ್ತುಕೋಗಂದು ಕಳಿವ್ಯಾನೆ

ಆಲದನ್ನಮರನ ಏರೋಗೋ ಸರಪಾನ
ನಾಲೀಗೇನಿಡಿದು ನೆಲಕೊಡೆದು ಪ್ರಾಣಪಡೆದು
ಕೋವಿಗೋಗಂದು ಕಳಿವ್ಯಾನೆ

ನನ್ನಯ್ಯ ಇರುವೋದು ಚೆನ್ನಾದ ಗೋವಿಮರ
ಚೆನ್ನಂಗಿ ತೋಪೆ ಕಿರುನೆಲ್ಲಿ ಕಿತ್ತಳಿಬಾಳೆ
ಚೆನ್ನಿಗ ಬೋರಯ್ಯ ಇರುವಾದು

ಅಂಪಾರ ಸಿದ್ದಯ್ನ ಗಂಪಾನೋಡಾಲೋದೆ
ಅಂದಾರಗಲ್ಲ ಎಡವೀದೆ ಕುದಾಪುರ
ಸಂಪೀಗೆ ಸಿದ್ದಯ್ನ ದಯವಿರಲೋ

ರೇವಳ ಸಿದ್ದಯ್ನ ಪವುಳಿ ನೋಡಾಲೋದೆ
ದವನಾದಕಲ್ಲ ಎಡವೀದೆ ಕುದಾಪುರ
ರೇವಳಸಿದ್ದಯ್ಯ ದಯವಿರಲಿ

ಅಂದವುಳ್ಳ ತ್ವಾಟಾಕ ಚಂದವುಳ್ಳ ಏಣಿನಾಕಿ
ಸಾದಿನಚ್ಚಡವೇ ಮಡಲೊಡ್ಡಿ ಬೋರಯ್ಗೆ
ಸ್ವಾಮೀಗೂವೆತ್ತಲೊರಟಾನೆ

ಆಯವುಳ್ಳ ತ್ವಾಟಾಕ ಸಯವುಳ್ಳೇಣಿನಾಕಿ
ಗಂಜಿಯಚ್ಚಡದ ಮಡಲೊಡ್ಡಿ ಬೋರಯ್ಗೆ
ಅಣ್ಣಾಗೂವೆಲೊರಟಾನೆ

ಕಟ್ಟೆಮ್ಯಾಲೇಗೂ ಬಟ್ಟಮಲ್ಲಿಗೆ ಬಿಡಿಸೂತ
ಒಪ್ಪಕೊಂಡೆಜ್ಜೆ ನಡೆವೂತ ಬೋರಣ್ಣ
ಸ್ವಾಮಿಗೂವೆತ್ತಲೊರಟಾನೆ

ಏರಿಮ್ಯಾಲೋಗೂತ ಜಾಜಿ ಮಲ್ಲಿಗೆ ಬಿಡಿಸೂ
ಮೋವಾಕೊಂದೆಜ್ಜೆ ನಡೆವೂತ ಬೋರಣ್ಣ
ಅಪ್ಪಾಗೂವೆತ್ಲೊರಟಾನೆ

ಬಗತರು ತಂದೂವು ಬಾಗಿಲಿಗೆ ಸಾಲಾವಂದು
ಅಣ್ಣಾಬೋರಣ್ಣ ಮುನದಾನೆ ಬೋರಯ್ಯಗೆ
ವೊಕ್ಕಿ ಕೊಯ್ತಾರೆ ಎಳೆವೂವ

ಆಯಿತವಾರದಯ್ಯ ಅವು ಚೇಳಿನಯ್ಯ
ಆಲೆಂಜಲಯ್ಯ ಕರವುಂಡು ಬೋರಯ್ಯ
ಅಣ್ಣೆಂಜಲಯ್ಯ ಗಿಳಿಮುಟ್ಟಿ