ಕರ್ನಾಟಕದ ಗ್ರಾಮದೇವತೆಗಳ ನಡುವೆ ಇರುವ ಮುಖ್ಯ ಆಚರಣೆಗಳಲ್ಲಿ ಒಂದು ಜಲಧಿಗೆ ಹೋಗುವುದು. ಅಂದರೆ ದೇವತೆಯೂ ಜಲದಲ್ಲಿ ಮಿಂದು ಶುದ್ಧವಾಗಬೇಕು. ಈ ಪ್ರಕ್ರಿಯೆ ನಡೆಯುವುದು ಸಾಮಾನ್ಯವಾಗಿ ಫೆಬ್ರವರಿ – ಮಾರ್ಚ್ ತಿಂಗಳಲ್ಲಿ. ಕೆಲವು ಶಿಷ್ಟ ದೇವತೆಗಳು ಜಲಧಿಗೆ ಹೋಗುವುದಿಲ್ಲ. ಆದರೆ ಗ್ರಾಮದೇವತೆಗಳು ತಾವೇ ನೀರು ಇರುವಲ್ಲಿಗೆ ಹೋಗಿ ಶುದ್ಧಿಯಾಗಿ ಬರುತ್ತವೆ. ಸಾಮಾನ್ಯವಾಗಿ ಎಲ್ಲ ಗ್ರಾಮದೇವತೆಗಳೂ ಗುಡಿಯನ್ನು ಬಿಟ್ಟು ಮೆರವಣಿಗೆಯಲ್ಲಿ ನೀರು ಹರಿಯುವ ಜಾಗಕ್ಕೆ ಹೊರಡುತ್ತವೆ. ಜಲಧಿಯ ಬಳಿ ಬಾಯಿಗೆ ಬಟ್ಟೆ ಕಟ್ಟಿಕೊಂಡ ಪೂಜಾರಿ ದೇವರನ್ನು ಜಲದಲ್ಲಿ ಶುದ್ಧಗೊಳಿಸಿ ಮತ್ತೆ ಮೆರವಣಿಗೆ ಹೊರಡಿಸುತ್ತಾನೆ. ದೇವರ ಹಿಂದೆ ನಡೆಯುವ ಹೆಣ್ಣುಮಕ್ಕಳು ದೇವತೆಯನ್ನು ಕುರಿತಂತೆ ಸ್ತುತಿರೂಪದ ಗೀತೆಗಳನ್ನು ಹಾಡುತ್ತಾರೆ. ಜಲಧಿಯಿಂದ ವಾಪಸು ಹೊರಟ ದೇವರು ಗ್ರಾಮವನ್ನೆಲ್ಲ ಸುತ್ತುವರೆಯುತ್ತದೆ. ಸಂಪೂರ್ಣ ಆ ಸುತ್ತಾಟದಲ್ಲೆಲ್ಲ ಹಾಡಬೇಕಾಗಿರುವುದರಿಂದ ಈ ಜಲಧಿಗೆ ಅಥವಾ ಹೊಳೆಗೆಹೋಗುವ ಹಾಡು ದೀರ್ಘವಾಗಿಯೇ ಇರುತ್ತದೆ. ದೇವರ ಮಹಿಮೆ, ದೇವರನ್ನು ಅಲಂಕರಿಸಲು ಹೂವು ತರುವುದಕ್ಕೆಂದು ಜನ ಹೋಗುವುದು, ಪಲ್ಲಕ್ಕಿಯಲ್ಲಿ ಕೂರಿಸಿ ಹೊರುವುದು ಇದೆಲ್ಲ ಪುನರಾವರ್ತನೆಗೊಂಡಂತೆ ಪದ್ಯಗಳು ಬರುತ್ತವೆ. ಹೀಗೆ ರಾತ್ರಿಯೆಲ್ಲ ಊರಾಡಿ ಬೆಳಗಾಗುವ ಹೊತ್ತಿಗೆ ಗುಡಿಯ ಹ್ತಿರ ಬಂದರೆ, ದೇವರು ಗುಡಿಯ ಒಳಗೆ ಪ್ರವೇಶಿಸುವುದನ್ನು ‘ಗುಡಿ ದುಂಬಿಸುವ ಹಾಡು’ ಎಂತಲೇ ಹೇಳುತ್ತಾರೆ. ಕರ್ನಾಟಕದಾದ್ಯಂತ ಗ್ರಾಮದೇವತೆಗಳು ಜಲಧಿಗೆ ಹೋಗುವುದು, ಮೆರವಣಿಗೆಯಲ್ಲಿ ಬರುವುದು, ಗುಡಿದುಂಬಿಸುವುದು ಇದ್ದೇ ಇರುತ್ತದೆ. ಆಯಾ ಗ್ರಾಮದಲ್ಲಿ ಆಯಾ ದೇವತೆಯ ಹೆಸರು ಮಾತ್ರ ಬೇರೆಯಿದ್ದು, ಮಿಕ್ಕಂತೆ ತ್ರಿಪದಿಗಳು ಹಾಡುಗಾರಿಕೆಯ ಕ್ರಮ ಒಂದೇ ಆಗಿರುತ್ತದೆ.

ದೇವರು ಹೊಳೆಗೆ ಹೋಗುವ ಗೀತೆ

ಲಿಂಗಾನ ನೆನೆದಾರೆ ಬಂಗಾರ ಕಡಿಮಿಲ್ಲ
ಇಂಗ ಜಂಗಮರ ನೆನೆದಾರೆ ಬಡತನ
ಇಂಗ್ಯಾವು ಕಾಲ ಗಳಿಗ್ಯಾಗೆ

ಸಿದ್ಧಾರ ನೆನೆದಾರೆ ಸಿವದಾನ್ಯಕೆ ಕಡಿಮಿಲ್ಲ
ಸಿದ್ದನಿಂಗಣ್ಣ ನೆನೆದಾರೆ ಬಡತಾನ
ಎದ್ದಾವೆ ಕಾಲಗಳಿಗ್ಯಾಗೆ

ದಾಸಾನ ನೆನದಾರೆ ದಾನ್ಯವುಕ ಕಡಿಮಿಲ್ಲ
ದಾಸ ನರಸಿಮ್ಮನ ನೆನದಾರೆ ಬಡತಾನ
ಸೋಸ್ಯಾವೆ ಕಾಲಗಳಿಗ್ಯಾಗೆ

ಕರಿಯ ಕಂಬಳಿ ತಿರುವಿ ಗದ್ದುಗೆ ಮಾಡಿ
ಅರಿವಾಣ ಪೆಟ್ಟಿಗೆ ನಡುವಿಟ್ಟು ಸಾಣೆಕೆರೆಯ
ದೊರೆ ಮಗನೊರಿಯಾಕೆ ತಗುದಾರೆ

ಮಬ್ಬುಗಂಬಾಳಿ ತಿದ್ದಿಗದ್ದಿಗೆ ಮಾಡಿ
ಮುದ್ದಿರಿಕೆ ಕೋಲುನಡುವಿಟ್ಟು ಕ್ವಾಟೆಕೆರೆಯ
ದೊಡ್ಡೋನೊರಿಯಾಕೆ ತಗುದಾರೆ

ನಾಮಾದ ಕೋಲುತಿರುವಿ ವರಿಯಾಕಿಟ್ಟು
ನರಸಿಮ್ಮ ವರಿಯಾಕೆ ತಗುದಾರೆ

ನಾನೊಂದು ಬೀದೀಲಿ ಆನೆ ಬರುವದು ಕಂಡೆ
ಕೊಂಬಿಲ್ಲದಾನೆ ಕರಿಯಾನೆ ಸಾಣೆಕೆರೆಯ
ಸಿಂಗಾರದಾನೆ ವರವರಡೊ

ಮತ್ತೊಂದು ಬೀದೀಲಿ ಆನೆ ಬರುವದ ಕಂಡೆ
ಕೋಡಿಲ್ಲದಾನೆ
ಕರಿಯಾನೆ ಸೊಂಡೆಕೆರೆಯ
ರೂವಾರದೋನೆ ವರವರಡೊ

ಅಂಡಗಂಬಳಿ ಮಂಡುಗ ಸಿಂಬೆಮಾಡಿ
ಅಂಗಳದಾಗ ಸೇಜಿ ಅಸನಾಗಿ ಕ್ಯಾತಮ್ಮನ
ಕಂದಮ್ಮ ಸೇಜಿ ವೊರುಬಾರೊ

ಕರಿಯ ಕಂಬಳಿ ಮುರುದು ಸಿಂಬೆ ಮಾಡಿ
ವುದಿಯಾಗಿ ಸೇಜಿ ಅಸನಾಗಿ ಸಿಕ್ಕಮ್ಮಾನ
ಬಾಲ ಸೇಜಿ ವೊರುಬಾರೋ

ಸಾಲ್ಯೇದಚ್ಚಡವ ಆಯಕಸಿಂಬೆಮಾಡಿ
ಬಾಗಲ ಸೇಜಿ ಅಸನಾಗಿ ಸಿರಿಯಮ್ಮಾನ
ಬಾಲಯ್ಯ ಸೇಜಿ ವೊರುಬಾರೋ

 ಸಾಲ್ಯೇದಚ್ಚಡವ ಆಯಕಸಿಂಬೆಮಾಡಿ
ಬಾಗಲ ಸೇಜಿ ಅಸನಾಗಿ ಸಿರಿಯಮ್ಮಾನ
ಬಾಲಯ್ಯ ಸೇಜಿ  ವೊರುಬಾರೋ

ಅಣ್ಣಾವೊರುಬಾರೋ ಯಣ್ಣುಂಡ ಮೈಯೋನೆ
ಸಣ್ಣರುದ್ರಾಕ್ಸಿ ಸರದೋನೆ ಜಯಣ್ಣ
ಅಣ್ಣನಂದಲವೇ ವೊರುಬಾರೋ

ಅಪ್ಪಾನ ವೊರುಬಾರೋ ತುಪ್ಪುಂಡಮೈಯ್ಯೋನೆ
ಬಟ್ಟರುದ್ರಾಕ್ಸಿ ಸರದೋನೆ ಸಿರಿಯಣ್ಣ
ಅಪ್ಪನಂದಲವ ವೊರುಬಾರೋ

ದೇವಾರ ವೊರುಬಾರೋ ಆಲುಂಡಮೈಯೋನೆ
ಸಾಲೆ ರುದ್ರಾಕ್ಸಿ ಸರದೋನೆ ಕ್ಯಾತಣ್ಣ
ದೇವರಂದಲವ ವೊರುಬಾರೋ

ಅಪ್ಪಾನೊರುವಣ್ಣಾಗೆ ಪಟ್ಟೇದಚ್ಚಡವಿಲ್ಲ
ರಟ್ಟಿಗೆ ತಾಯ್ತ ಮಣೆಯಿಲ್ಲ ಕ್ಯಾತೆಮ್ಮ
ಪುತ್ರನೊರುವಾಕೆ ಕಳುವ್ಯಾಳು

ಅಣ್ಣಾನೊರುವಣ್ಣಾಗ ಬಣ್ಣದಚ್ಚಡವಿಲ್ಲ
ತೋಳೀಗೆ ತಾಯತ ಮಣಿಯಿಲ್ಲ ಚಿಕ್ಕಮ್ಮ
ಬಾಲನೊರಿಯಾಕ ಕಳುವ್ಯಾಳು

ರಂಗನೊರುವಣ್ಣಾಗೆ ಗೊಂಬೆಯಚ್ಚಡವಿಲ್ಲ
ತೋಳಿಗೆ ತಾಯತ ಮಣಿಯಿಲ್ಲ ಸಿರಿಯಮ್ಮ
ಬಾಲನೊರಿಯಾಕ ಕಳುವ್ಯಾಳು

ಅಪ್ಪಾನೊರುವಣ್ಣಾಗೆ ಪಟ್ಟೆದಚ್ಚಡವೈದಾವೆ
ರಟ್ಟೀಗೆ ತಾಯ್ತ ಮಣಿಯವೆ ಕ್ಯಾತಮ್ಮ
ಪುತ್ರನೊರುವಾಕ ಕಳುವಮ್ಮ

ದೇವನೊರುವಣ್ಣಾಗ ಸಾಲ್ಯೇದಚ್ಚಡವವೆ
ತೋಳೀಗೆ ತಾಯ್ತ ಮಣಿಯವೆ ಚಿಕ್ಕಮ್ಮ
ಬಾಲನೊರಿಯಾಕೆ ಕಳುವಮ್ಮ

ರಂಗಣ್ಣೊರುವಣ್ಣಾಗೆ ಗೊಂಬೆ ಅಚ್ಚಡವವೆ
ತೋಳಿಗೆ ತಾಯ್ತ ಮಣಿಯವೆ ಸಿರಿಯಮ್ಮ
ಬಾಲನೊರಿಯಾಕ ಕಳುವಮ್ಮ

ವಳಗೇಳು ಅಂದಾರೆ ಕಳಿಯವಿಲ್ಲವೆ ನಿಂಗಣ್ಣ
ಕಡಿವಾಣ ತಂದ ಕುದುರೀಗೆ ಪಂಜನಿಡುವ
ಕಂದ ನೀ ಮುಂದೆ ನಡಿಯೆಂದ

ಗಂಗೀಗೇಳು ಅಂದಾರೆ ಅಂದವಾದ ಈರಣ್ಣ
ಗೊಂಡೇವುತಂದ ಕುದುರೀಗೆ ಪಂಜನಿಡುವ
ಕಂದ ನೀ ಮುಂದೆ ನಡಿಯೆಂದ

ವಳಿಗೇಳು ಅಂದಾರೆ ಕಳೆಯಾದ ನರಸಣ್ಣ
ಕಡಿವಾಣ ತಂದ ಕುದುರೀಗೆ ಪಂಜನಿಡಿವ
ಬಾಲ ನೀ ಮುಂದೆ ನಡೆಯೆಂದ

ಉಗ್ರಾಣದ ಮನಿಯ ಬಗ್ಗೆ ಕೀಲು ತಗಿವೋಳೆ
ಗುಬ್ಬೆ ಸಿಂತಾಕರ ಕೊರಳೋಳೆ ಕ್ಯಾತಮ್ಮ
ಆಲು ನೀಡಮ್ಮ ಜಲದೀಗೆ

ದೇವಾರ ಮನಿಯಾ ವೋಗಿ ಕೀಲು ತಗುವೋಳೆ
ವಾಲೆ
ಸಿಂತಾಕದ ಕೊರಳೋಳೆ ಚಿಕ್ಕಮ್ಮ
ಅಣ್ಣು ನೀಡಮ್ಮ ಜಲದೀಗೆ

ಪಟ್ಟೇದ ಸೀರೆ ನೆತ್ತಿಮ್ಯಾಗಳಿಗೊಂಬೆ
ಮತ್ತೆ ಸಿವಬಗುತರ ಮಗಳಲ್ಲೆ ಕ್ಯಾತಮ್ಮ
ತುಪ್ಪನೀಡಮ್ಮ ಜಲದೀಗೆ

ಸಾಲ್ಯೇದ ಸೀರೆ ತೋಳಮ್ಯಾಗಳ ಗೊಂಬೆ
ನೀನು ಸಿವಬಗುತರ ಸೊಸಿಯಲ್ಲೆ ಚಿಕ್ಕಮ್ಮ
ಅಣ್ಣು ನೀಡಮ್ಮ ಜಲದೀಗೆ

ಗಂಜೀಯ ಸೀರೆ ಮುಂಗೈಯ್ಯಾಗಳ ಗೊಂಚಿ
ಇಂದೆ ಸುವಬಗುತರ ಮಗಳಲ್ಲೆ ಸಿರಿಯಮ್ಮ
ಆಯ ನೀಡಮ್ಮ ಜಲದೀಗೆ

ಮದ್ದಗಲಿಲ್ಲಾದೆ ದೊಡ್ಡೋನು ವೊರಡಾನು
ಕಾಪರಳ್ಳಿ ವರಪ್ಯಾಟೆ ರಂಗಣ್ಣ
ಇದ್ದಲ್ಲಿ ವಾಲೆ ಬರೆದಾರು

ವುರಿಮೆಯಿಲ್ಲಾದೆ ದೊರೆಯೆ ತಾನೊರಡಾನು
ವುರಿಮೆ ಕಾಪರಳ್ಳಿ ವರಪ್ಯಾಟೆ ರಂಗಣ್ಣ
ಇರುವಲ್ಲಿ ಗ್ವಾಲೆ ಬರೆದಾರೆ

ಕಪ್ಪೀನ ಕಿವಿಯ ನಿಸ್ತ್ರೇರ ಮನಿಯಾಗಿ
ಗಕ್ಕನೊಂದಡಿಗೆ ಬಿಸಿಮಾಡೆ ಇರಿಯಟ್ಟಿ
ಸೆಟ್ಟರೋಲಗಾಕೆ ಕರೆಸ್ಯಾರೊ

ವಾಲೀಯ ಕಿವಿಯ ನಾರೇರ ಮನಿಯಾಗೆ
ಬೇಗನೊಂದಡಿಗೆ ಬಿಸಿಮಾಡೆ ಇರಿಯಟ್ಟಿ
ರಾಯರೋಲಗಾಕೆ ಕರೆಸ್ಯಾರು

ಅಲ್ಲೇ ಇಲ್ಲೇ ಅರೆಯವಲ್ಲಾನೆ ನಿಂಗಣ್ಣ
ಅಲ್ಲೆ ಕಾಪರಳ್ಳಿ ದುರ್ಗಾವೆ ದ್ಯಾಮಣ್ಣ
ಮ್ಯಾಗದರಿಗಾಳ ತರಲೇಳೋ

ಅತ್ತಲಿತ್ತಲರಿಯ ಒಪ್ಪಾನೆ ಈರಣ್ಣ
ಚಿಕ್ಕಾಪರಳ್ಳಿ ದುರಗಾವ ದ್ಯಾಮಣ್ಣ
ಪಟ್ಟಿದಂಗಾಳೆ ಬರಲೆಂದು

ಅತ್ತೆಂಟು ಅರೆಯ ಜೊತ್ತಿಲಿ ಬಡಿಸ್ಯಾರೆ
ಅಪ್ಪನಿನ್ಯಾರ ವೊರಡಾನು ಕಾಪರಳ್ಳಿ
ಎಚ್ಚೀನ ಪಟ್ಟಿದೊರಿಗಾಳು ಬರಲಿಲ್ಲ

ಎಂದೀಗೆ ನಿಂಗಣ್ಣ ಇಂಬು ಬಿಟ್ಟವನಲ್ಲ
ಇಂದು ಕಾಪರಳ್ಳಿ ವೊಸವುರಿಯ ಸಬರಾಕೆ
ಇಂಬೆ ನಿಂಗಣ್ಣ ಕದಿಲ್ಯಾನೆ

ಯಾವಾಗ ಈರಣ್ಣ ತಾವು ಬಿಟ್ಟವನಲ್ಲ
ರಾಯ ಕಾಪರಳ್ಳಿ ವಸವುರಿಯ ಸಬುರಾಕೆ
ತಾನೆ ಈರಣ್ಣ ಕದಿಲ್ಯಾನೆ

ಅಪ್ಪಾನ ವೊರುಬಾರೋ ತುಪ್ಪುಂಡ ಮೈಯ್ಯೋನೆ
ಬಿಟ್ಟಾರುದ್ರಾಕ್ಸಿ ಸರದೋನೆ ಜಯಣ್ಣ
ಅಪ್ಪನಂದಲವ ವೊರುಬಾರೋ

ಅಣ್ಣಾನ ವೊರುಬಾರೋ ಎಣ್ಣುಂಡ ಮೈಯ್ಯೋನೆ
ಸಣ್ಣರುದ್ರಾಕ್ಸಿ ಸರದೋನೆ ಸಿರಿಯಣ್ಣ
ಅಣ್ಣನಂದಲವ ವೊರುಬಾರೋ

ನಿಂಗಾನ ವೊರುವಾಕೆ ಅಂಜ್ಯಾನೆ ಅಳುಕ್ಯಾನೆ
ಕಂದ ಗಡಗಡನೆ ನಡುಗ್ಯಾನೆ ಸಾಣಕೆರೆಯ
ನಿಂಗಣ್ಣ ಎಗಲೀಗೆ ಬರುವಾಗ

ದೇವಾರ ವೊರುವಾಕ ಬಾಗ್ಯಾನು ಬಳುಕ್ಯಾನು
ಬಾಲ ಗಡಗಡನೆ ನಡುಗ್ಯಾನು ಕ್ವಾಟೆಕೆರೆಯ
ಈರಣ್ಣ ಎಗಲೀಗೆ ಬರುವಾಗ

ರಂಗಾನ ವೊರುವಾಕ ಅಂಜ್ಯಾನಳುಕ್ಯಾನು
ಕಂದ ಗಡಗಡನಡುಗ್ಯಾನು ಸೊಂಡೆಕೆರೆಯ
ರಂಗಯ್ಯ ಎಗಲೀಗೆ ಬರುವಾಗ

ಅಟ್ಟಿಗೌಡರು ಮಗನೆ ಬಟ್ಟಮುತ್ತಗೋಸಣ್ಣ
ಮುತಿನದಂಡಿಗೆಯ ಬಿಗಿದೇರ ಸಾಣೆಕೆರೆಯ
ಅಪ್ಪನೊಳಿಗಕೆ ನಡೆಮುಂದೆ

ನಾಡಗೌಡರ ಮಗನೆ ಮನಮುತ್ತ ಸಿರಿಯಣ್ಣ
ವೂವಿನ ದಂಡಿಗೆಯ ಬಿಗಿದೋರೋ ಕ್ವಾಟೆ ಕೆರೆಯ
ಈರನೂಳಿಗಕೆ ನಡೆಮುಂದೆ

ಅಟ್ಟಿಗೌಡನ ಮಗನೆ ಬಟ್ಟ ಮುತ್ತಿನ ಕ್ಯಾತಣ್ಣ
ಮುತ್ತಿನದಂಡಿಗಿ ಬಿಗುದೇರೊ ಸೊಂಡೆ ಕೆರೆಯ
ಅಪ್ಪನೂಳಿಗಾಕೆ ನಡೆಮುಂದೆ

ನಾಡಗೌಡರ ಮನಗೆ ಮನಮುತ್ತ ಸಿರಿಯಣ್ಣ
ಮೂವಿನ ದಂಡಿಗೆಯ ಬಿಗಿದೇರೋ ಕ್ವಾಟೆಕೆರೆಯ
ಈರನೂಳಿಗಕೆ ನಡೆಮುಂದೆ

ಅಟ್ಟಿಗೌಡನ ಮಗನೆ ಬಟ್ಟಮುತ್ತಿನ ಕ್ಯಾತಣ್ಣ
ಮುತ್ತೀನದಂಡಿಗಿ ಬಿಗುದೇರೊ ಸೊಂಡೆಕೆರೆಯ
ಅಪ್ಪನೂಳಿಗಾಕೆ ನಡೆಮುಂದೆ

ಅಪ್ಪ ವಳಗೇಳೋ ಅಪ್ಪಯ್ಯ ವಳಗೇಳೋ
ಅಪ್ಪ ಮಾಲಿಂಗ ವಳಿಗೇಳೋ ವಕ್ಕಾಲುತಂದ
ಮುತ್ತಿನ ಚತ್ರಿಕೆ ನೆರಳಾಗಿ

ಅಣ್ಣಾ ವಳಗೇಳೋ ಅಣ್ಣಯ್ಯ ವಳಗೇಳೋ
ಅಣ್ಣ ಈರಣ್ಣ ವಳಿಗೇಳೋ ವಕ್ಕಾಲುತಂದ
ಅವಳದ ಚತ್ರಿಕೆ ನೆರಳಾಗೆ

ಸ್ವಾಮಿ ವಳಗೇಳೋ ಗೋವಿಂದ ವಳಿಗೇಳೋ
ಸ್ವಾಮಿ ಗೋವಿಂದ ವಳಿಗೇಳೋ ವಕ್ಕಲುತಂದ
ಚಿನ್ನದ ಚತ್ರಿಕೆ ನೆರಳೀಗೆ

ಅಪ್ಪಾನೊರುಬಾರೋ ತುಪ್ಪುಂಡ ಮೈಯ್ಯೋನೆ
ಸುತ್ತಗಂಬಿದಟ್ಟಿ ಸೆರಗೀನ ಜಯಣ್ಣ
ಅಪ್ಪನಂದಲವ ವೊರುಬಾರೋ

ಅಣ್ಣಾನೊರುಬಾರೋ ಎಣ್ಣುಂಡ ಮೈಯ್ಯೋನೆ
ಸಣ್ಣಗಂಬಿದಟ್ಟಿ ಸೆರಗೀನ ಸಿರಿಯಣ್ಣ
ಅಣ್ಣನಂದಲವ ವೊರುಬಾರೋ

ದೇವರೊರುಬಾರೋ ಆಲುಂಡ ಮೈಯ್ಯೋನೆ
ಸಾಲುಗಂಬದಲ್ಲಿ ಸೆರಗೀನ ಕ್ಯಾತಣ್ಣ
ದೇವರಂದಲವ ವೊರುಬಾರೋ

ಅಪ್ಪಾನೊರಿಸ್ಯಾರೆ ಪುತ್ರಗೊಮಾರಾಗೆ
ನಿಸ್ತ್ರೆ ಕ್ಯಾತಮ್ನ ಮಗನೀಗೆ ಜಯಣ್ಣಾಗೆ
ಪೆಟ್ಟಿಗೊರಿಸ್ಯಾರೆ ಇರಿಯೋರು

ದೇವರಿರಿಸ್ಯಾರೆ ಬಾಲಗೊಮಾರಾಗೆ
ನಾರಿ ಚಿಕ್ಕಮ್ನ ಮಗನೀಗೆ ಸಿರಿಯಣ್ಣಾಗೆ
ದೇವರೊರಿಸ್ಯಾರೆ ಇರಿಯೋರು

ರಂಗಾನ ವೊರಿಸ್ಯಾರೆ ಕಂದಗೊಮಾರಾಗೆ
ರೆಂಬೆ ಸಿರಿಯಮ್ನ ಮಗನೀಗೆ ಕ್ಯಾತಣ್ಣಾಗೆ
ರಂಗನೊರಿಸ್ಯಾರೆ ಇರಿಯೋರು

ಪಟ್ಟೇದಚ್ಚಡವ ವಪ್ಪಕ ನೆಡುವಕಟ್ಟಿ
ಮುತ್ತೀನ ಕೋಲ ಪರದಾನಿ ಈರಣ್ಣ
ಅಪ್ಪಾನ ಸೆದುರುಬಿಡಿಸ್ಯಾನೆ

ಸಾಲ್ಯೇದಚ್ಚಡವ ಆಯಕನೆಡುವ ಕಟ್ಟಿ
ವೂವೀನ ಕೋಲು ಪರದಾನಿ ಈರಣ್ಣ
ಈರಣ್ಣಗ ಸೆದರಬಿಡಿಸ್ಯಾನೆ

ಗಂಜಿಯಚ್ಚಡವ ಅಂದಕ ನಡುವಕಟ್ಟಿ
ಬಂಗಾರದ ಕೋಲು ಪರದಾನಿ ಕಂಗಣ್ಣ
ರಂಗಾಕೆ ಚೆದರ ಬಿಡಿಸ್ಯಾನೆ

ಗಂದಾದ ವುಂಡೀಗೆ ಮಂದೀಯ ಬೆಳಕೀಗೆ
ತಂದೆ ನಿಂಗಣ್ಣ ಬೆವುತಾನೆ ತನಮಕ್ಕಾಳ
ಅಂದಕಾಕ್ಯಾರೆ ಚೆವುರಾವ

ಪರಸೀಯ ಬೆಳಕೀಗೆ ಅರಿಸಿಣದ ವುಂಡೀಗೆ
ಅರಸೇ ಗೋವಿಂದ ಬೆವತಾನೆ ತನಮಕ್ಕಾಳ
ಸರಸಕಾಕ್ಯಾರೆ ಸವರಾವ

ನಲ್ಲೀಯ ಮರದ ನಿಲ್ಲಿಸಿ ಕುದುರೆಕಟ್ಟಿ
ಚೆಲ್ಲಿ ಚತ್ರಿಕೆಯ ನೆರಳಾವ ಗೆಜ್ಜೆ ಕುದುರೆ
ಬಲ್ಲಿದನೊಂಟನರುವ ಜಲದೀಗೆ

ಅಲಸೀನ ಮರಕ ನಿಲಿಸಿ ಕುದುರೆಕಟ್ಟಿ
ಕನಕ ಚತ್ರಿಕೆ ನೆರಳಾಗಿ ಗೆಜ್ಜೆ ಕುದುರೆ
ದನಿಕನೊರಟನರುವ ಜಲದೀಗೆ

ಬತ್ತಾಲಗುದುರಿ ಅತ್ತೀದಗಳಿಗ್ಯಾಗ
ಇಪ್ಪತ್ತೆಪಂಜು ಇಡಿಸ್ಯಾರು ಸಾಣೆಕೆರೆಯ
ಅಪ್ಪ ವೊರಟಾನು ಅರುವಜಲದೀಗೆ

ಕೆಂದ ಗುದುರೀಯ ವೊಂದೀಲೆ ಗಳಿಗ್ಯಾಗ
ಎಂಬತ್ತೆಪಂಜ ಇಡಿಸ್ಯಾರೆ ಕ್ವಾಟೆಕೆರೆಯ
ಈರೊರಟನರುವ ಜಲದೀಗೆ

ನೀಲಗುದುರೀಯ ಏರೀದ ಗಳಿಗ್ಯಾಗೆ
ನಲವತ್ತುಪಂಜ ಇಡಿಸ್ಯಾನೆ ಸೊಂಡೆಕೆರೆಯ
ಗೋವಿಂದನೊರಟಾನೆ ಜಲದೀಗೆ

  ಬೂಪ ವೊರಟ ಸುದ್ದಿ ಬಾಗಲಿಗೆ ಅರುದಾವೆ
ದೂಪಾದ ಗಮಲೆ ಎಸೆದಾವು ಕ್ವಾಟೆಕೆರೆಯ
ಬೂವೊರುಟಾನೆ ಅರುವ ಜಲದೀಗೆ

ರಂಗ ವೊರಟ ಸುದ್ದಿ ಅಂಗಳಕೆ ಅರುದಾವೆ
ವಂಬಾಳೆಗಮಲೆ ಎಸದಾವೆ ಸೊಂಡೆಕೆರೆಯ
ರಂಗವೊರಟಾನೆ ಅರುವ ಜಲದೀಗೆ

ನಿಂಗನಕ್ಯಾರೆ ರಂಗು ಮುತ್ತಿನ ಸರವ
ಅಂಗಳಕೆ ನೆರಳುಗವುದಾವೆ ಸಾಣೆಕೆರೆಯ
ನಿಂಗೊರಟಾನೆ ಅರವು ಜಲದೀಗೆ

ದನಿಕಗಾಕ್ಯಾರೆ ಕನಕ ಮುತ್ತಿನ ಸರ
ಜನಕೆಲ್ಲ ನೆರಳುಗವುದಾವೆ ಕ್ವಾಟೆಕೆರೆಯ
ದನಿಕನೊರಟಾನೆ ಅರಿವಜಲದೀಗೆ

ತುಪ್ಪಾ ಬಾನವ ಮೆದ್ದು ಇಪ್ಪತ್ತೀಳ್ಯವ ಮೆದ್ದು
ರೆಟ್ಯಾಳಿಬಾರೋ ಮಡಿವಾಳ ನಿಂಗಣ್ಣಾಗ
ಪಟ್ಟೇದ ಸೀರೆ ನಡಮುಡಿ

ಆಲುಬಾನವನುಂಡು ನಲವತ್ತೀಳ್ಯವಮೆದ್ದು
ದಾಯಾಳಿಬಾರೋ ಮಡಿವಾಳ ಈರಣ್ಣಾಗ
ಸಾಲ್ಯೇದ ಸೀರೆ ನಡಮುಡಿ

ನಡಿಮುಡಿಮ್ಯಾಲೆ ನಡೆದಾನೆ ನಿಂಗಣ್ಣ
ಎಡಿಯ ಕಳಿಂಗ ವೊಳೆವಂಗೆ ನಿಂಗಣ್ಣ
ನಡೆದಾನೆ ಅರುವ ಜಲದೀಗೆ

ತಂಗಲು ಮಡಿಯ ಮ್ಯಾಲೆ ಬಂದಾನು ಈರಣ್ಣ
ಸಿಂಬೆ ಕಾಳಿಂಗ ವಳೆತಂಕ ಈರಣ್ಣ
ಬಂದಾನೆ ಅರುವ ಜಲದೀಗೆ

ಅಟ್ಟಿ ವರಡಲುವಾಗ ಎನಂದ ಈರಣ್ಣ
ಪುತ್ರಮ್ಮ ಜತನ ಮನಿಜತನ ಸಾಣೆಕೆರೆಯ
ದಿಕ್ಕಾಯ ನೋಡಿಬರುತೀನಿ

ಬಾಗಲೊರಡಲುವಾಗ ಏನೆಂದ ಈರಣ್ಣ
ಬಾಲಮ್ಮ ಜತನ ಮನಿಜತನ ಕ್ವಾಟೆಕೆರೆಯ
ದೂರಾಯ ನೋಡಿ ಬರುತೀನಿ

ಎದ್ದೋನು ಎದ್ದಂಗೆ ಎದ್ದಾನೆ ನಿಂಗಣ್ಣ
ರುದ್ರವೀಣೆಗಳ ನುಡಸೂತ ನಿಂಗಣ್ಣ
ಎದ್ದಾನೆ ಅರುವ ಜಲದೀಗೆ

ವೋದೋನು ವೋದಂಗೆ ವೋದಾನೆ ಈರಣ್ಣ
ನಾಗ ವೀಣೆಗಳ ನುಡಿಸೂತ ಈರಣ್ಣ
ವೋದಾನೆ ಅರುವ ಜಲದೀಗೆ

ಅಟ್ಟಿ ಬಿಟ್ಟೋಗಲುವಾಗ ಏನಂದ ಈರಣ್ಣ
ಬೆಟ್ಟುಬೆಟ್ಟೀಗೆ ಗಜನಿಂಬೆ ತೆಂಗಿನಕಾಯಿ
ಇಟ್ಟಾಡಿರಣ್ಣವಳಿತಂಕ

ಊರು ಬಿಟ್ಟೋಗಲುವಾಗ ಏನಂದ ಈರಣ್ಣ
ಗೇಣು ಗೇಣಿಗೆ ಗಜನಿಂಬೆ ತೆಂಗಿನಕಾಯಿ
ಈಡಾಡಿರಣ್ಣ ವಳಿತಂಕ

ಎದ್ದೋನು ಎದ್ದಂಗೆ ಎದ್ದಾನೆ ನಿಂಗಣ್ಣ
ಇಬ್ಬನಿವುಲ್ಲು ತುಳುವೂತ ಸಾಣೆಕೆರೆಯ
ಎದ್ದಾನೆ ಅರುವ ಜಲದೀಗೆ