ಚಿಕ್ಕ ವೋಳಿಗೆ ಮಾಡಿ ರೆಟ್ಟೆರೆಡು ನಂದಾವು
ಬಟ್ಟಾಲ ಬೆಳಗಿ ಬುಜನಂದು ಗೋವಿಂದ
ಮಕ್ಕಳಸ್ತಾರು ಕಳುವಯ್ಯ

ವಳಿಗೆ ವೋಗಲುವಾಗ ವಂಬಾಳೆ ಅಲ್ಲಾಡ್ಯಾವೆ
ವಳಿಗೋಗಿ ಗುಡಿಗೆ ಬರುವಾಗ ನಿಂಗಣ್ಣಾನ
ಕಿರುಜಡೆ ಬೆನ್ನವೊಲುದಾವೆ

ಕೆರೆಗೆ ವೋಗಲುವಾಗ ಕೇದಿಗಲ್ಲಾಡ್ಯಾವೆ
ಕೆರಿಗೋಗಿ ಗುಡಿಗೆ ಬರುವಾಗ ಈರಣ್ಣಾನ
ಕತ್ತೀಯ ಬೆಳಕು ಜನಕೆಲ್ಲ

ಊರು ವೋಗುವಾಗ ಸೂರ್ಯದೇವರ ಬೆಳಕು
ಆರೋರ ಕೊರಳ ಮಣಿಬೆಳಕು ಸಿಂಗಣ್ಣಾನ
ಆದ್ಯೇದ ಬೆಳಕು ಜನರೆಲ್ಲ

ಚಿಕ್ಕಯಲಗಟ್ಟಿ ಗಚ್ಚಿನ ಬಾವಿ ನೀರಿಗೋಗಿ
ಕೊಟ್ಟೆನಂಗಳಕೆ ಸೆಳೆಯಾವ ನಿಂಗಣ್ಣ
ಮತ್ತಾಳಿದರಸ ಬರುತಾನೆ

ದಾಯ ಯಲಗಟ್ಟೆ ಗಾರೆಬಾವಿ ನೀರು
ಕೊಟ್ಟೆನಂಗಳಕೆ ಸೆಳೆಯಾವ ಸೊಂಡಿಕೆರೆಯ
ತಿರುನಾಳಿದರಸ ಬರುತಾನೆ

ಅಣ್ಣು ತೆಂಗಿನಕಾಯಿ ಅನ್ನೆರಡು ಈಡಾಡಿ
ಮಸರಿನ ಸೆಳೆಯ ಕೊಡಿರಮ್ಮ ಕ್ವಾಟೆಕೆರೆಯ
ತಿರುನಾಳಿದರಸ ಬರುತಾನೆ

ಕಬ್ಬಿಣದ ಡಮಗು ಡಬ್ಬಂದ ರವಸೀಗೆ
ನನ್ನೂರು ಬೂಮಿ ನಡುಗ್ಯಾವು ರಂಗನಕುದುರೆ
ವುಮ್ಮಳಿಸಿ ವುದಿಯ ವೊಗುತಾವೆ

ಅಪ್ಪಾ ನಿಂಗಣ್ಣಾನ ವಪ್ಪಾದ ಸೊಸಿಬಾರೆ
ಅತ್ತಗುಡಿಸಮ್ಮ ವುದಿಗಾಳ ನಿಂಗಣ್ಣಾಗೆ
ಎತ್ತಿ ಚೆಲ್ಲಮ್ಮ ರತನೀರ

ಸ್ವಾಮಿ ಈರಣ್ಣಾನ ಮೋವಾದ ಸೊಸಿಬಾರೆ
ಆಯಗುಡಿಸಮ್ಮ ವುದಿಗಾಳ ಈರಣ್ಣಾನ
ತೋರಿಸೆಲ್ಲಮ್ಮ ರತನೀರು

ತುಪ್ಪಬಾನವುಂಡು ಇಪ್ಪತ್ತೀಳ್ಯವ ಮೆದ್ದು
ರಟ್ಯಾಳಿ ಬಾರೋ ಮಡಿವಾಳ ನಿಂಗಣ್ಣಾಗ
ಪಟ್ಟೇದಚ್ಚಡ ನೆಡಮುಡಿ

ಆಲುಬೋನವುಂಡು ನಲವತ್ತೀಳ್ಯವ ಮೆದ್ದು
ದಾಯಾಳಿಬಾರೋ
ಮಡಿವಾಳ ಈರಣ್ಣಾನ
ಸಾಲ್ಯದಚ್ಚಡ ನಡೆಮುಡಿ

ಅಟ್ಯಾಗ ನಿಂಗಣ್ಣ ಕತ್ತೀಯ ನಿಲಿಯಾಕಿ
ಗಂದಾದ ಮಂಡೀಗೆ ಮಂದಿಯ ಬೆಳಕೀಗೆ
ತಂದೆ ನಿಂಗಣ್ಣ ಬೆವತಾನು

ಅರಸಿನದ ವುಂಡೀಗೆ ಪರಸೀಯ ಬೆಳಕೀಗೆ
ಅರಸೆ ಗೋವಿಂದ ಬೆವೆತಾನೆ ತನಮಕ್ಕಳ
ಸರಸಕಾಕ್ಯಾರೆ ಸವುಲಾವೆ

ಉಚ್ರಾಯ ಬರುವಾಗ ಪಟ್ಟೆಸಾಲ್ಯಾಗಿದ್ದೆ
ಮುತ್ತಿನಾರತಿ ಇಡಿದಿದ್ದೆ ಈರಣ್ಣಾನ
ಉಚ್ರಾಯ ವುದಿಯಾ ವೊಗುವಾಗ

ಪಾಲೀಕೆ ಬರುವಾಗ ಸಾಮ ಸಾಲ್ಯಾಗಿದ್ದೆ
ವೂವಿನಾರತಿ ಇಡಿದಿದ್ದೆ ನಿಂಗಣ್ಣಾನ
ಪಾಲುಕಿ ವುದಿಯೇ ವೊಗುವಾಗ

ಸಂಗಾತಿ ಗುಡ್ಡಾದ ಲಿಂಗ ಬಂದೈದಾನೆ
ಗಂಗಳವ ಬೆಳಗೆ ಅಡೆದಮ್ಮ ಸಾಣ್ರೆಕೆರೆಯ
ಲಿಂಗಣ್ಣಗಾರತಿಯ ಬೆಳಗೇನು

ಗೆಣೆಕಾತಿ ಗುಡ್ಡಾದ ದನಿಕ ಬಂದೈದಾನು
ಕಳಸಾವ ತಾರೆ ಅಡೆದಮ್ಮ ಕ್ವಾಟೆ ಕೆರೆಯ
ದನಿಕಾಗಾರಿಯ ಬೆಳಗೇನು

ಆಸೆಯಾನೆ ಕೇರಿ ಕಾತೆಮಕ್ಕಳಿರಾ
ರೇಸಿಮೆ ಸೀರೆ ವುಡಲೇಳಿ ಸಾಣೆಕೆರೆಯ
ಬೂಪಾಗಾರತಿಯ ಬೆಳಗೇಳೀರಿ

ಮುಂದಾಲ ಕೇರಿ ರೆಂಬೆಣ್ಣು ಮಕ್ಕಳಿರಾ
ಗಂಜೀಯ ಸೀರೆ ಉಡಲೇಳಿ ಸೊಂಡೆಕೆರೆಯ
ರಂಗಾಗಾರಿಯ ಬೆಳಗೇಳಿ

ಸುತ್ತಾಲ ಕೇರಿ ನಿಸ್ತ್ರೆಣ್ಣು ಮಕ್ಕಳಿರಾ
ಪಟ್ಟೇದ ಸೀರೆ ಉಡಲೇಳಿರಿಸಾಣೆಕೆರೆಯ
ದಿಟ್ಟಗಾರತಿಯ ಬೆಳಗೇಳಿ

ಅಟ್ಯಾಗ ನನ್ನಯ್ಯ ಸಿಟ್ಟುಗೊಳ್ಳುಲುದಿರೋ
ಗಟ್ಟಿ ಬಾಣಗಳು ನೆಲಬಿರುಸು ಪಂಚಾರತಿಯ
ಅಚ್ಚುತಲಿ ನಮಗೆ ತಡವಾಯ್ತು

ವೋಣ್ಯಾಗ ನನ್ನಯ್ಯ ಗ್ಯಾನಗೊಳ್ಳಲುದಿರೋ
ಜೋಡೆಬಾಣಗಳು ನೆಲಬಿರುಸು ಪಂಚಾರತಿಯ
ಜೋಡಿಸುತಲೆ ನಮಗೆ ತಡವಾಯ್ತು

ಕೆರೆಯಾಗೆ ಬರುವೋರು ಅರುವತ್ತೊಂದಾರತಿ
ಕೆರೆಯೆಲ್ಲ ಮಂಜೆ ಗವುದಾವೆ ಚಿಕ್ಕೇನಹಳ್ಳಿ
ಅರುದೇರಾರುತಿಯ ರವಸೀಗೆ

ಕಟ್ಯಾಗೆ ಬರುವೋವು ಇಪ್ಪತ್ತೊಂದಾರತಿ
ಕಟ್ಯೆಲ್ಲ ಮಂಜುಗವುದಾವೆ ಚಿಕ್ಕೇನಹಳ್ಳಿ
ನಿಸ್ತ್ರೇರಾರುತಿಯ ರವಸೀಗೆ

ಕೈಲಿ ಆರೂತಿ ಕೈಲಿ ಕೀರುತಿ
ದಾಟಿವೋಗೆ ಎಣ್ಣೆ ಅರುಗಾಗೆ ಸಾಣೆಕೆರೆಯ
ಗೋಪಗಾರತಿಯ ಬೆಳಗೇನು

ಅಂಗೈಲಿ ಆರುತಿ ಮುಂಗೈಲಿ ಕೀರುತಿ
ಮುಂದೋಗ ಎಣ್ಣೆ ಅರುಗಾಗೆ ಸೊಂಡೆಕೆರೆಯ
ಗಂಗಗಾರುತಿಯ ಬೆಳಗೇನು

ಕೈಲಿ ಆರುತಿ ಕೈಲಿ ಸಿರಿಗಂಧ
ಉರುವ ಕೆಂಜೆಡೆಗೆ ದವನಾವು ತಂವೈದಿನಿ
ಕಿರುಜಡೆ ಲಿಂಗ ದಯವಾಗೊ

ಅಂಗೈಲಿ ಆರೂತಿ ಮುಂಗೈಲಿ ಸಿರಿಗಂಧ
ಒಪ್ಪ ಕೆಂಜೆಡೆಗೆ ದವನ ತಂದೈದಿನಿ
ಅಪ್ಪ ಈರಣ್ಣ ದಯವಾಗೋ

ಉಚ್ರಾಯ ವೀರಣ್ಣ ರಚ್ಚೆದ್ದು ಬರುತಾನೆ
ನೋಡಿ ಚೆಲ್ಲೀರೊ ರತನೀರು ನಿಂಗಣ್ಣಾನ
ಉಚ್ರಾಯದ ಚೆಲ್ಲಿ ನೆನೆದಾವು

ಪಾಲಿಕೆ ನಿಂಗಣ್ಣ ಗ್ಯಾನದಲಿ ಬರುತಾನೆ
ನೋಡಿ ಚೆಲ್ಲೀರೋ ರತನೀರು ನಿಂಗಣ್ಣಾನ
ಪಾಲೀಕೆ ಚೆಲ್ಲಿ ನೆನನೆದಾವು

ಆರುತಿನಿಡಿದು ನಮ್ಮ ಆರುಬೆರಳುನೊಂದು
ಬಾಲಮ್ಮನೆತ್ತಿ ಬುಜನೊಂದು ಕ್ವಾಟೆಕೆರಿಯ
ಈರಣ್ಣನ ಸಾಗಿಬರಲೇಳೆ

ಕಳಸ ಇಡುದು ನಮ್ಮ ಮಳಕ್ಕೆನೊಂದಾವೆ
ಕುಣಕೀಯ ಅವಳ ಜಗುದಾವು ಸಾಣೆಕೆರೆಯ
ದನಿಕಾರ ಸಾಗಿ ಬರಲೇಳೆ

ಎಣ್ಣೀಲಿ ಅರುದಾವೆ ಮುನ್ನೂರು ದೀವಿಗೆ
ಸಣ್ಣ ಕರುಪುರದ ಸಿಳಿಗಾಳಿ ಸುಳಿದಾವೆ
ಅಣ್ಣನ್ವಾಲಗದ ನೆಡುವಾಕೆ

ತುಪ್ಪದಲಿ ಮರುದಾವೆ ಮುತ್ತನೂರು ದೀವಿಗೆ
ಸಣ್ಣ ಕರುಪುರವೆ ಸುಳಿಗಾಳಿ ಸುಳುದಾವೆ
ಅಪ್ಪನ್ವಾಲಗದ ನೆಡುವಾಕೆ

ಬಾಲನತಾಯಿ ವೋದಾಳೆ ಬಾಗಲಿಗೆ
ತಾಲಿಲಗ್ಗಣಿಯ ಇಡಕಂಡು ನಿಂಗಣ್ಣಾಗ
ರೂವಾರದ ಪಾದವ ತೊಳೆದಾಳೆ

ಕಂದಾನತಾಯಿ ಬಂದಾಳೆ ಬಾಗಿಲಿಗೆ
ಗಿಂಡಿಲಗ್ಗಣಿಯ ಇಡಕಂಡು ಈರಣ್ಣಾನ
ಬಂಗಾರದ ಪಾದ ತೊಳೆದಾಳೆ

ನೆತ್ತೀಗೆ ಬಿಸಿಲೇರಿ ಸಪ್ಪಗಾದವು ಮಾರಿ
ಮತ್ತಿಳಿನಿಂಗಣ್ಣ ಕುದುರೇಯ ಮ್ಯಾಗಾಳ
ಪುಸ್ವಬಾಡ್ಯಾವೆ ಬಿಸಿಲೀಗೆ

ಕೆನ್ನೀಗೆ ಬಿಸಿಲೇರಿ ಗಿನ್ನವಾದವು ಮಾರಿ
ಇನಇಳಿ ಈರಣ್ಣ ಕುದುರೀಯ ಮ್ಯಾಗಳ
ಬಣ್ಣಬಾಡ್ಯಾವು ಬಿಸಿಲೀಗೆ

ಅಪ್ಪ ನಿಮ್ಮ ಕುದುರೆ ಇಪ್ಪತ್ತು ಸಾವಿರ
ಇಕಮಡ್ಡಿ ತಿಂದು ಮದವೇರಿ ಬರುವಾಗ
ಇಟ್ಟಿನೆಡಿಗೆಯೋರೆ ಅರುಗಾಗಿ

ಅಣ್ಣ ನಿನ್ನ ಕುದುರೆ ಅನ್ನೆರಡು ಸಾವಿರ
ಅಣ್ಣು ಮಡ್ಡಿ ತಿಂದು ಮದವೇರಿ ಬರುವಾಗ
ಅಣ್ಣಿನಿಡಿಗ್ಯೋರು ಅರುಗಾಗಿ

ಎತ್ತು ನಿನ್ನೆಸರು ತುಪ್ಪ ನಿನ್ನ ಮೀಸಾಲು
ಚಿಕಮಕ್ಕಾಳು ನಿನ್ನೆಸರು ಗೋವಿಂದ
ಮತ್ತೀಟು ಐಸಿರಿಯ ಕೊಡುನಮಗೆ

ಅವು ನಿನ್ನೆಸರು ಆಲು ನಿನ್ನ ಮೀಸಲು
ಅಡಮಕ್ಕಳು ನಿನ್ನೆಸರು ಈರಣ್ಣ
ಇನ್ನೋಟೈಸಿರಿಯ ಕೊಡುನಮಗೆ

ಅಣ್ಣುವಿನೆಡಿಗೆ ಬಣ್ಣಾದ ಪಾಲೀಕೆ
ಎಣಮಕ್ಕಳರಕೆ ಬರುತಾವೆ ನಿಂಗಣ್ಣ
ಅಣ್ಣೊಪ್ಪಿಕೊಳ್ಳೊ ಮನದಾಗೆ

ಅಕ್ಕೀಯ ಏರು ರಕ್ಕಾದ ಪಾಲೀಕೆ
ವಕ್ಕಾಲ ಅರಕೆ ಬರುತಾವೆ ನರಸಯ್ಯ
ಅಪ್ಪೊಪ್ಪಿಕೊಳ್ಳೊಮನದಾಗೆ

ದೇವರು ಪೂಜೆ ಮಾಡಿದೂವು ಕರಡಿಗೆ ತುಂಬಿ
ದಾರಿವಂದಲದಾಟೆ ಬರುವೋನೆ ಜಯಣ್ಣಾಗೆ
ಬಾಲಕೇಸಾಳು ಮನಿಯಾಗೆ

ಅಪ್ಪನ ಪೂಜೆ ಮಾಡಿ ಪುಸ್ವಕರಡಿತುಂಬಿ
ವುತ್ರಾಸದಾಟಿ ಬರುವಾಗೆ ಕ್ಯಾತಣ್ಣಾಗೆ
ಮಕ್ಕಳೇಸಾಳು ಮನಿಯಾಗೆ

ಅತ್ತರಿಲಿಂದಬಂದೆ ಅಚ್ಚಕ ತುಪ್ಪತಂದೆ
ಅಪ್ಪ ನಿನಗ್ಯಾಕೋ ಅನುಮನಸು ಸೆನಿವಾರ
ತುಪ್ಪ ತಂದೈದೀನಿ ಸಲುಸೇಳೋ

ದೂರಲಿಂದ ಬಂದೆ ದೀವಿಗೆಣ್ಣೆ ತಂದೆ
ಸ್ವಾಮಿ ನಿನಗ್ಯಾಕೋ ಅನಮನಸು ಸ್ವಾಮಾರ
ಆಲು ತಂದೈದೀನಿ ಸಲಿಸೇಳೋ

ಅತ್ರಲಿಂದಬಂದೆ ಅಚ್ಚಕ ತುಪ್ಪತಂದೆ
ಅಪ್ಪನಿಂಗಣ್ಣ ತಗಿಕದವ ನಾನು ನಿನ್ನ
ಅಸ್ತಕ ತಂದೀನಿ ಇಡಿವೊನ್ನು

ದೇವಾರ ನೋಡೇನು ವಾರ್ಯಗ ಪೂಜಾರಿ
ಮ್ಯಾಗಾಳ ಕೀಲಸಡುಲಿಸೋ ನಿಂಗಣ್ಣಾನ
ಮೇಲುದೀವಿಗ್ಗೆಣ್ಣೆ ಎರುದೇನು

ಲಿಂಗಾನ ನೋಡೇನು ಇಂಬುಬಿಡು ಪೂಜಾರಿ
ಮುಂದಾಲಕೀಲ ಸಡುಲಿಸೋ ಈರಣ್ಣಾನ
ನಂದದೀವಿಗ್ಗೆಣ್ಣೆ ಎರದೇನು

 

ಮುದ್ರಿಸುವ ಪದಗಳು

ಅಪ್ಪ ನಿನ್ನ ಆಡೇನು ಅಪ್ಪ ನಿನ್ನ ಪಾಡೇನು
ಅಪ್ಪ ನಿಮ ನಿದ್ರೆ ತಡದೇನು ಸಾಣೆಕೆರೆಯ
ಪಟ್ಟಿಮಂಚಕದೊರೆಯ ಪವಡೀಸೊ

ಸ್ವಾಮಿ ನಿನ್ನ ಆಡೇನು ಸ್ವಾಮಿ ನಿನ್ನ ಪಾಡೇನು
ಸ್ವಾಮಿ ನಿನ್ನ ನಿದ್ರೆ ತಡದೇನು ಕ್ವಾಟೆಕೆರೆಯ
ತೂಗು ಮಂಚಕ ದೊರೆಯೆ ಪವಡಿಸೊ

ಅಲ್ಲವನೆ ಇಲ್ಲವನೆ ನಲ್ಲಗೇರ್ಯಗವನೆ
ಎಲ್ಲವನೆ ನಮ್ಮ ಮನೆ ಸ್ವಾಮಿ ನರಸಯ್ಯ
ಪಲ್ಲಕ್ಕಿವಳಗೆ ಸುಕನಿದ್ದೆ

ಅತ್ತವನೆ ಇತ್ತವನೆ ಸುತ್ತಲಗೇರ್ಯಾಗವನೆ
ಎತ್ತವನೆ ತಾರಮನಿಸ್ವಾಮಿ ನಿಂಗಣ್ಣ
ಸುಪ್ಪತ್ತಿಗ್ಯಾಗೆ ಸುಕನಿದ್ದೆ

ಗಲ್ಲುಮಲ್ಲೆಂಬ ವಲ್ಲೀಯ ಕೊಡವ್ಯಾಸ್ಯಾನೆ
ಮಲ್ಲೀಗೆ ವೂವು ಅರಡ್ಯಾನೆ ಸಾಣೆಕೆರೆಯ
ಬಲ್ಲಿದದೊರೆಯ ಪವಡಿಸೊ

ಕಂಚುಮಿಂಚೆಂಬ ಮಂಚ ಕೊಡವಾಸ್ಯಾನೆ
ಸಂಪೀಗೆ ವೂವು ಅರಡ್ಯಾನೆ ಕ್ವಾಟೆಕೆರೆಯ
ಸಂಪತ್ತಿನ ದೊರೆಯೆ ಪವಡಿಸೋ

ಉಗ್ರಗೋಪದಯ್ಯ ದಬ್ಯಾನುದಾರವಂದ
ನುಗ್ಗಿ ನುಗ್ಗುದಾವೆ ಮರದಲಿಗೆ ಗೋವಿಂದಾನ
ಉಗ್ರಗೋಪ ನಮಗೆ ಇಳಿಯಾವು

ಕಡಿಗೋಪದಯ್ಯ ಎಡವ್ಯಾನು ದಾರವಂದ
ಕಳಪಿಳಿಯಾದಾವೆ ಮರದಲಗೆ ಗೋವಿಂದಾನ
ಕಡುಕೋಪ ನಮಗೆ ಇಳಿಯಾವು

ಬಿಲ್ಲುಬಾಣದಯ್ಯ ನಿಲ್ಲಿರಿ ನಿಮ್ಮನಿಯಾಗೆ
ಬಿಲ್ಲುಬಾಣಾಕೆ ಅರಿಸ್ಯಾವೆ ಕೊಟ್ಟೇವು
ನಿಲೇ ನಮ್ಮನಿಯಾಗೆ ಅರುಗಳಿಗೆ

ದೋಳು ದಮಗಿನಯ್ಯ ತಾಳಿರಿ ನಮ್ಮನಿಯಾಗೆ
ದೋಳು ದಮಗೀಗೆ ಅರಸ್ಯಾವೆ ಕೊಟ್ಟೇವು
ತಾಳೆ ನಮ್ಮನಿಯಾಗೆ ಅರಗಳಿಗೆ

ಕಲ್ಲ ಕಂಬದಯ್ಯ ಬಿಲ್ಲುಬಾಣದಯ್ಯ
ಎಲ್ಲವನೆ ನಮ್ಮ ಮನಿಸ್ವಾಮಿ ಗೋವಿಂದ
ಬಿಲ್ಲುಪತ್ತರೆ ವನದಾಗೆ

ಮುದ್ದಮ್ಮ ಗುರುವೀಗೆ ಮುದ್ದಮ್ಮ ಸಿವನೀಗೆ
ಗೆಜ್ಜೆ ಕುದುರೆ ಮ್ಯಾಲೆ ಬರುವೋನೆ ನರಸಿಮ್ಮಗೆ
ಮುದ್ದುರಿಸಿ ಕೈಯ್ಯಾ ಮುಗುದೇವು

ಸೆರಣಮ್ಮ ಗುರುವೀಗೆ ಸೆರಣೆಮ್ಮ ಸಿವನೀಗೆ
ಸಾಲುಗುದುರಿಮ್ಯಾಲೆ ಬರುವೋನೆ ನಿಂಗಣ್ಣಾಗೆ
ಶರಣೆಂದು ಕೈಯ್ಯಾ ಮುಗುದೇವು

ನಡೆತಪ್ಪು ನುಡಿತಪ್ಪು ನುಡಿಯ ನಾಲಿಗೆ ತಪ್ಪು
ಸರ್ವ ತಪ್ಪಯ್ಯ ನಿಜಲಿಂಗ ನಿಂಗಣ್ಣ
ಸರಣೆಂದೆ ಕಯ್ಯ ಮುಗುದೇವು

ತಪ್ಪು ತಪ್ಪು ಆಡೋ ನಾಲಿಗೆ ತಪ್ಪು
ಎಲ್ಲ ತಪ್ಪಯ್ಯ ನರಸಿಮ್ಮ ನಾ ನಿನಗೆ
ನಿಲ್ಲಿಸಿ ಕಯ್ಯಾ ಮುಗುದೇನು

ಆತಾನ ಗುಡಿಮುಂದೆ ದೂಪಾದ ಮರನುಟ್ಟಿ
ಆತ ನಿಂಗಣ್ಣಾನ ಗುಡಿಮುಂದೆ ಇರುವೋದು
ಕಾತ ಕಸ್ತೂರಿ ಕಣಗಾಲು

ಲಿಂಗಾನ ಗುಡಿಮುಂದೆ ಗಂದಾದ ಮರನುಟ್ಟಿ
ತಂದೆ ನಿಂಗಣ್ಣನ ಗುಡಿಮುಂದೆ ಇರುವೋದು
ಗಂದ ಕಸ್ತೂರಿ ಕಣಗಾಲು