ವೋದೋನು ವೋದಂಗೆ ವೋದಾನೆ ಈರಣ್ಣ
ಬಾರೀಯ ವುಲ್ಲು ತುಳುವೂತ ಈರಣ್ಣ
ವೋದಾನೆ ಅರುವ ಜಲದೀಗೆ

ಮುಂದೆ ಮುಂದೆ ನಿಂಗಣ್ಣ ಇಂದಿಂದೆ ಈರಣ್ಣ
ದುಂಡುನಾಮಾದ ನರಸಿಮ್ಮ ಮೂವಾರು
ಮಾತಾಡಿ ವಳಿಯಾ ಇಳಿದಾರೆ

ಆಚೇಲಿ ನಿಂಗಣ್ಣ ಈಚೇಲಿ ಈರಣ್ಣ
ಕ್ಯಾಸಕ್ನಿ ಬಣ್ಣಾದ ನರಸಿಮ್ಮ ವೂವಾರು
ಮಾತಾಡಿ ವಳಿಯಾ ಇಳಿದಾರೆ

ಇಂದಕಿರಿಯರ ಬಿಟ್ಟು ಮುಂದಕಿರಿಯರ ಬಿಟ್ಟು
ಮುಂದವರಿಯದರನ ಕರಕಂಡು ನಿಂಗಣ್ಣ
ಗಂಗೆ ತೀರುಕತೆ ಇಳುದಾನೆ

ಆಚೆಕಿರಿಯರಬಿಟ್ಟು ಈಚೆಕಿರಿಯರಬಿಟ್ಟು
ಮಾತರಿಯದರನ ಕರಕಂಡು ಈರಣ್ಣ
ಕಾಸಿ ತೀರುತಕೆ ಇಳುದವನೆ

ಒಂದು ಅರಿಯದರನ ಕರಕಂಡು ಗೋವಿಂದ
ಗಂಗೆ ತೀರುತಕೆ ಇಳುದಾನೆ

ಆಚೇಯದಡದಲ್ಲಿ ದೂಪಾದಮರನುಟ್ಟಿ
ಆಕರಿಸುತಾವೆ ವುಲಿಕರಡಿ ನಿಂಗಣ್ಣ
ತೋತುರಿಸಿ ವಳೆಯಾ ಇಳಿದಾನೆ

ಗಂಗೇಯದಡದಲ್ಲಿ ಗಂದಾದ ಮರನುಟ್ಟಿ
ಅಂಬಲಿಸುತಾವೆ ವುಲಿಕರಡಿ ಈರಣ್ಣ
ನೆಂಬೂಸಿ ವಳೆಯ ಇಳಿದಾನೆ

ಕೆಳಕಾಳ ವಳಿಯಾಗ ಇಳಿದೇನು ಮಾಡ್ಯಾರೆ
ಎಳಿಯಾವಂಬಾಳೆ ಗೊನಿಬಾಳೆ ನಿಂಗಣ್ಣಾಗೆ
ಇಳಿರೇಳು ಸುರುವಿ ಕರೆದಾವೆ

ಮುಂದಾಲ ವಳಿಯಾಗ ಬಂದೇನು ಮಾಡ್ಯಾರೆ
ತೆಂಗಿನ ವಂಬಾಳೆ ಗೊನಿಬಾಳೆ ಈರಣ್ಣಾಗೆ
ಬಂದೇಳುಸುರುವಿ ಕರೆದಾವೆ

ತುಂಬಿ ಬರುವ ತೊರಿಯಾಗ ಇಂಬುನೋಡಿ
ವರತೆ ತೋಡಿ ಗಂಜಿಯಚ್ಚಡವ ತೆರೆಗಟ್ಟಿ ಗಂಗಮ್ಮ
ಇಂಬೆ ಬಿಡು ನಮ್ಮ ಗುರುವೀಗೆ

ಅರಿದು ಬರುವ  ತೊರಿಯಾಗ ಅರುಗೀಲೊರತೆ ತೋಡಿ
ಸಾಲ್ಯೇದಚ್ಚಡವ ತೆರಿಗಟ್ಟಿ ಗಂಗಮ್ಮ
ತಾವು ಬೀಡು ನಮ್ಮ ಗುರುವೀಗೆ

ಉದ್ದನ್ನ ನೀರಿನಾಕೆ ಮುದ್ದಿನುಂಗುರನಾಕಿ
ಎದ್ದೋಗೆ ಗಂಗೆ ಸಿವನಾಣೆ ಸಾಣೆಕೆರೆಯ
ದೊಡ್ಡೋನು ಮಜ್ಜಣಕೆ ಇಳಿದಾನೆ

ಅರುವ ನೀರಿನಾಕೆ ಅವಳದುಂಗುರನಾಕಿ
ಅರುದೋಗೆ ಗಂಗೆ ಸಿವನಾಣೆ ಕ್ವಾಟೆಕೆರೆಯ
ದೊರೆಮಗ ಮಜ್ಜಣಕೆ ಇಳಿದಾನೆ

ಅತ್ತುಗಂಟಿ ಬೆಳಗೆ ಬೆತ್ತದ ಕೋಲುಬೆಳಗೆ
ಅಪ್ಪಾನ ಬಿಲ್ಲು ಬೆಳಗಮ್ಮ ನಿಂಗಣ್ಣಾನ
ಬುಟ್ಟರುದ್ರಾಕ್ಸಿ ಬೆಳಗಮ್ಮ

ಆರು ಗಂಟೆ ಬೆಳಗಿ ನಾಮಾದಕೋಲುಬೆಳಗಿ
ಸ್ವಾಮೀಯಬಿಲ್ಲು ಬೆಳಗಮ್ಮ ಈರಣ್ಣಾನ
ತೋಳ ರುದ್ರಾಕ್ಸಿ ಬೆಳಗಮ್ಮ

ತುಂಬೀದ ತೊರಿಯಾಗ ಮಂದಾಡೊವರ್ಯಾರೆ
ಸಂಗನಬಸವಯ್ಯ ಸಮದಲ್ಲಿ ನಿಂಗಣ್ಣ
ಮಿಂದಾಡುತ್ತಿದ್ದ ತೊರೆಯಾಗೆ

ಅರುವತೊರಿಯಾಗೆ ಈಜಾಡರಿವರ್ಯಾರು
ಕೂಡಲು ಬಸವಯ್ಯ ಸಮದಲ್ಲಿ ಈರಣ್ಣ
ಈಜಾಡುತ್ತಿದ್ದ ತೊರೆಯಾಗೆ

ಮುಂಗಯ್ಯಾಗ ವಸ್ತ್ರ ಇಡಿವೊನ್ನು ಬಾಳ್ಯಾಗೆ
ಮಿಂದಗಂಗೆ ವಳಗೆ ಸಿವಪೂಜೆ ಮಾಡೋರು
ಸಿವಬಗುತರು ನಮ್ಮ ಗುರುಸ್ವಾಮಿ

ಕೆರಿಯಾಗಿರುವೋನು ಮಡಿವಾಳನೆಂಬುತ್ತಿದ್ದೆ
ಮಡಿವಾಳನಲ್ಲಿ ನಿಜಲಿಂಗ ನಿಂಗಣ್ಣ
ಮಡಿ ಮಾಡುತ್ತಿದ್ದ ಜಡೆನೂರು

ಕಟ್ಟೆಗಿರುವಾನ ಸೆಟ್ಟಿಗಾರ ನಂಬುತ್ತಿದ್ದೆ
ಸೆಟ್ಟಿಗಾರನಲ್ಲ ನಿಜಲಿಂಗ ಗೋವಿಂದ
ಗಟ್ಟಿಸುತ್ತಿದ್ದ ಜಡೆನೂರು

ಬಾವಿಯಾಗಿರುವಾಗ ಗೋವಿಂದನೆಂಬುತ್ತಿದ್ದೆ
ಗೋವಿಂದನಲ್ಲ ನರಸಿಮ್ಮ ನರಸಯ್ಯ
ಮಡಿ ಮಾಡುತ್ತಿದ್ದ ಜಡೆಮುಡಿ

ಪುಸ್ಮಕೋದನೆಂದು ಬಟ್ಟಲೊನ್ನ ಕೊಟ್ಟೆ
ಪಟ್ಟವಳಿಯ ಕೊಟ್ಟೆ ಮಡಲೀಗೆ ಜಯಣ್ಣ
ಪುಸ್ಮಕಿನ್ಯಾಕೆ ವರಡಾನೆ

ವೂವಿಗೋದನಂದು ಜೋಳಿಗೊನ್ನ ಕೊಟ್ಟೆ
ಸಾಲುವಳಿಯ ಕೊಟ್ಟೆ ಮಡಲೀಗೆ ಕ್ಯಾತಣ್ಣ
ವೂವಿಗಿನ್ನು ವರಡಾನೆ

ಬಿಸಿನೀರು ಮಿಂದಾನೆ ದಸಲೀಯ ವೊದ್ದಾನೆ
ಕುಸುಲದ ಕರಡೀಗೆ ಬಲಗೈಲಿ ಜಯಣ್ಣ
ಎಸಳುಮಲ್ಲಿಗೆ ಬಿಡಿಸಲೊರಟಾನೆ

ತಣ್ಣೀರು ಮಿಂದಾನೆ ಬಣ್ಣ ಕೊಡವಿಯೊದ್ದಾನೆ
ಚಿನ್ನಾದ ಕರಡೀಗೆ ಬಲಗೈಲಿ ಸಿರಿಯಣ್ದಣ
ಸಣ್ಣ ಮಲ್ಲಿಗೆ ಬಿಡಿಸಲೊರಟಾನೆ

ಪೂಜಾರಿ ಜಯಣ್ಣ ವೂವಿಗೋಗಲುವಾಗ
ಸಾಲುಗೇರ್ಯಲ್ಲ ಸೊಸಿಯೋರು ಎಣಮಕ್ಕಾಳು
ವೂವಿನಾರುತಿ ಬೆಳಗ್ಯಾರೆ

ಅಪ್ಪ ಸಿರಿಯಣ್ಣ ಪುಸ್ಮಕೋಗಲುವಾಗ
ಸುತ್ತಲುಗೇರ್ಯಲ್ಲ ಸೊಸಿಯೋರು ಎಣಮಕ್ಕಳು
ಮುತ್ತಿನಾರತಿಯ ಬೆಳಗ್ಯಾರೆ

ಎದ್ದು ಕೋಳಿಕೂಗಾದ ಮಜ್ಜಣಕೋಗಾಗ
ರುದ್ರಾಕ್ಸಿ ಪುಸ್ಮ ಅರಳ್ಯಾವೆ ಜಯಣ್ಣ
ದೊಡ್ಡಮಲ್ಲಿಗೆ ವನಕೆ ನಡೆದಾವೆ

ಮುಂಗೋಳಿ ಕೂಗಾಗಲ ಮೂಡುಕೆಂಪರಿಯಾಗ
ಸಣ್ಣಮಲ್ಲಿಗೆ ಬಾಯೆ ಅರಳ್ಯಾವೆ ಸಿರಿಯಣ್ಣ
ಸಣಮಲ್ಲಿಗೆ ವನಕೆ ನಡೆದಾನೆ

ವೂವಿಲ್ಲವಂದು ವೂವಿಗೋಗಲುದೀರೋ
ವೂವೆನಿಂಗಣ್ಣ ಗುಡಿಯಿಂದೆ ಸೂರ್ಯಕಾಂತಿ
ವೂವರಳಿಬಾಯ ಬಿಡುತಾವೆ

ಪಸ್ಮ ಇಲ್ಲವೆಂದು ಪುಸ್ಮಕ್ಕೋಗದಿರೋ
ಪುಸ್ಮ ಈರಣ್ಣ ಗಿಡಿಯಿಂದೆ ಸೂರ್ಯಕಾಂತಿ
ಪುಸ್ಮವರಳಿ ಬಾಯ ಬಿಡುತಾವೆ

ಮೊಗ್ಗು ಇಲ್ಲವೆಂದು ಮೊಗ್ಗಿಗೋಗಲುದಿರೋ
ಮೊಗ್ಗು ನರಸಯ್ನ ಗಿಡಿಯಿಂದೆ ಸೂರ್ಯಕಾಂತಿ
ಮೊಗ್ಗರಳಿ ಬಾಯ ಬಿಡುತಾವೆ

ಏರಿಮ್ಯಾಲೋಗೂತ ಜಾಜಿ ವೂವ ಬಿಡಿಸೂತ
ಜ್ಯಾವಕ್ಕೊಂದೆಜ್ಜೆನಿಡುವೂತ ಜಯಣ್ಣ
ದೇವರಿಗೂವೆತ್ತಲೊರಟಾನೆ

ಕಟ್ಟಿಮ್ಯಾಲೋಗೂ ಇಪ್ಪೆವೂವ ಬಿಡಿಸೂ
ಪಪ್ಪಕೊಂದೆಜ್ಜೆನಿಡವೂತ ಸಿರಿಯಣ್ಣ
ಅಪ್ಪಗೂವೆತ್ತಲೊರಟಾನೆ

ಅರಳ್ಯಾವೆ ಮಲ್ಲೀಗೆ ಒರಳ್ಯಾವೆ ಕೇದೀಗೆ
ಗರಿಯೆರಡಾದವೆ ಕನಗಾಲೂವು ಕ್ಯಾತಮ್ಮನ
ಮಗಬಂದೆ ವನವ ವೋಗುವಾಗ

ಅಂದ್ಯಾವೆ ಮಲ್ಲೀಗೆ ಕಂದ್ಯಾವೆ ಕೇದೀಗೆ
ಒಂದೆರಡಾದಾವೆ ಕನಗಾಲು ಚಿಕ್ಕಮ್ಮಾನ
ಕಂದ ಬಂದೆ ವನವ ವೋಗಲುವಾಗ

ಅಂದವುಳ್ಳ ತ್ವಾಟಾಕ ಚಂದವುಳ್ಳೇಣೀನಾಕಿ
ಗಂಜಿಯಚ್ಚಡವ ಮಡಲೊಡ್ಡಿ ವೂವಕೊಯ್ದ
ಚಂದ್ರಮ್ಮನ್ಯಾರ ಮಗನಮ್ಮ

ಚಂದ್ರನ್ಯಾರಮಗನಂದು ಕೇಳಿದರೆ
ರೆಂಬಿ ಕ್ಯಾತಮ್ಮನ ಮಗಜ್ಯಾಣ

ರೆಂಬಿ ಕ್ಯಾತಮ್ಮನ ಮಗಜ್ಯಾಣ ಜಯಣ್ಣ
ರೆಂಬಿಗೊಂದೊವ ಕೊಯ್ದಾನೆ
ರೆಂಬಿಗೊಂದುವ ಕೊಯ್ದಮಾಲೆ ಕಟ್ಟಿ

ಲಿಂಗವಂತರ ಕೂಟೆ ಕಳಿವ್ಯಾನೆ
ಆಯವುಳ್ಳ ತ್ವಾಟಕ ಸಯವುಳ್ಳೇಣಿನಾಕಿ
ಸಾಲ್ಯದಚ್ಚಡದ ಮಡಲೊಡ್ಡಿ ವೂವಕೊಟ್ಟು

ಸೂರಿದಮ್ಮನ್ಯಾರ ಮಗನಮ್ಮ
ಸೂರಿದಮ್ಮನ್ಯಾರ ಮಗನಮ್ಮಂದು ಸಿವಕೇಳಿದರೆ

ನಾರಿಚಿಕ್ಕಮ್ನ ಮಗಜ್ಯಾಣ
ನಾರಿಚಿಕ್ಕಮ್ನ ಮಗಜ್ಯಾಣ ಸಿರಿಯಣ್ಣ
ಬಾಳಿಗೊಂದೂರ ಕೊಯ್ದು ಮಾಲೆಗಟ್ಟಿ
ಸೀಲವಂತರ ಕೂಟೆ ಕಳಿವ್ಯಾನೆ

ಅರುಗೀದ ವಲದಾಗ ಮರುಗ ಬಿಡಿಸೋರ್ಯಾರೆ
ಮರಗಿನಬಾರಾಕ ಬಳುಕೋರ ಜಯಣ್ಣ
ಅವ ನಡೆದಮ್ಮ ನಿನ್ನಂತ ಸಿವಸೆರಣಾರೆ

ಬತ್ತೀದ ವಲದಾಗ ಪುಸ್ಮ ಬಿಡಿಸೋರ್ಯಾರೆ
ಪುಸ್ಮದ ಬಾರಾಕ ಬಳುಕೋರೆ ಸಿರಿಯಣ್ಣಾನ
ಅವನೆತ್ತಮ್ಮ ನಿನ್ನೆಂತ ಸಿವಸೆರಣಾರೆ

ಅಗಲೆಲ್ಲ ಕೊಯ್ದಾರೆ ಅರಳು ಮೂಗಮಡುಗ
ಇರುಳೆಲ್ಲ ದಂಡೆಯೆಣೆದಾರೆ ಸಾಣೆಕೆರೆಯ
ವಡಿಗಾಕ್ಯಾರೆ ಸರಸೂವ

ಮದ್ಯಾನಕೆ ಕೊಯ್ದಾರೆ ಮೊಗ್ಗು ಮೂಗಂಡುಗ
ನಿದ್ದಿಲ್ಲದೆ ದಂಡೆಯೆಣುದಾರೆ ಕ್ವಾಟೆಕೆರೆಯ
ದೊಡ್ಡೋನಿಗಾಕ್ಯಾರೆ ಸರನೂವ

ಅಣ್ಣಾನ ಪೂಜಾರಿ ಸಣ್ಣೆಂಬುತ್ತಿದ್ದೆ
ಅನ್ನೆರಡಾಳುದ್ದ ಕೆಡಗೀನ ಕಾಲ್ಯೇವುದಾಟಿ
ಅಣ್ಣ ವೂವೆತ್ತಲೊರಟಾನೆ

ಅಪ್ಪಾನ ಪೂಜಾರಿ ಚಿಕ್ಕಮಗನೆ ಚಿರಿಯಣ್ಣ
ಇಪ್ಪತ್ತಾಳುದ್ದ ಕೆಡಗೀನ ಆಲ್ಯೇವುದಾಟಿ
ಅಪ್ಪವೂವೆತ್ತಲೊರಟಾನೆ

ಕೆಂಪುಮಲ್ಲಿಗೆ ಬಂದಾವು ಸಂಪನ್ನೇಳು ಪೂಜಾರಿ
ಜಪಮಾಲೆ ಕಟ್ಟಿ ಬೆಳಗಾಗಿ ದೊಡ್ಡೋರಿ
ಸಂಪನ್ನರು ನೋಡಬರುತಾರೆ

ಬಿಳಿಯ ಕನಗಲುಂಬುದು ದೊರೆಯೇಳುಪೂಜಾರಿ
ವಲಮಾಲೆ ಕಟ್ಟಿ ಬೆಳಗಾಗಿ

ದೊಡ್ಡೋರಿ ದೊರೆಮಕ್ಕಳು ನೋಡಬರುತಾರೆ
ವೊಕ್ಕಾಲು ತಂದೂವು ಪಕ್ಕೇಗೆ ಸಾಲವಂದು
ವೊಕ್ಕಾಲಮಗನೆ ಜಯಣ್ಣ ತಂದೂವು
ಪಕ್ಕೇಗೆ ಮಾರಮಲೆತಾವೆ

ಪೂಜಾರಿ ತಂದೂವು ಪೂಜೀಗೆ ಸಾಲವಂದು
ಪೂಜಾರಿ ಮಗನೆ ಸಿರಿಯಣ್ಣ ತಂದೂವು
ಪೂಜೇಲಿ ಮಾರಮಲೆತಾವೆ

ಅಪ್ಪ ತಂದೂವು ಪಕ್ಕೇಗೆ ಸಾಲವಂದು
ಪೂಜಾರಿ ಮಗನೆ ಸಿರಿಯಣ್ಣ ತಂದೂವು
ಪೂಜೇಲಿ ಮಾರಮಲೆತಾವೆ

ಅಪ್ಪ ತಂದೂವು ಪಕ್ಕೇಗೆ ಸಾಲವಂದು
ಅಪ್ಪ ನಿಂಗಣ್ಣನ ಮನಸು ಜಯಣ್ಣ
ವೊಕ್ಕುವೊಂಬಾಳೆ ವೊಯ್ಬಾರೋ

ಪೂಜಾರಿತಂದೂವು ಪೂಜೇಗೆ ಸಾಲವಂದು
ಸ್ವಾಮಿ ಈರಣ್ಣಗೆ ಅನುಮನಸು ಕ್ಯಾತಣ್ಣ
ವೋಗಿ ವೊಂಬಾಳೆ ವೊಯ್‌ತಾರೊ

ಬಾಗಿ ಬಾಳೆ ಕೊಯ್ಯೋ ತೂಗಿನಿಂಬಿಕೊಯ್ಯೋ
ಏಣ್ಯಾಕಿ ಕೊಯ್ಯೊ ಎಲಿಗೊಯ್ಯೋ ಜಯಣ್ಣ
ದೇವರಿಗೆ ಕೊಯ್ಯೋ ದವನಾವೆ

ಕತ್ತರಿಸಿದಂಗ ಅತ್ತುಚಿಲುಮೆ ತೋಡಿ
ಅಪ್ಪ ನಿಂಗಣ್ಣಗ ಮಕತೊಳಿಯೋ ಜಯಣ್ಣ
ಬೊಟ್ಟು ಇಡಿರಣ್ಣ ಬೆಳಗಾಗಿ

ಅರಸೀದಂಗ ಅರುಚಿಲುಮೆ ಓಡಿ
ಸ್ವಾಮಿ ಗೋವಿಂದನ ಮಕತೊಳಿಯೋ ಕ್ಯಾತಣ್ಣ
ನಾಮ ಇಡಿರಣ್ಣ ಬೆಳಗಾಗಿ

ಆಸೆ ಪಾದದ ಮ್ಯಾಲೆ ಈಸೆ ಪಾದವನೂರಿ
ದಾಟಿದಾಟಿ ವೂವಮುಡಿಸೋನೆ ಜಯಣ್ಣಾಗೆ
ದೋರ ಬಂದಾಗೆ ಉಡುಗೊರೆ

ಮುಂದಲ ಪಾದದ ಮ್ಯಾಲೆ ಇಂದಲಪಾದನೂರಿ
ಒಂದೊಂದಿಸಿ ವೂವ ಮುಡಿಸ್ಯಾನೆ ಸಿರಿಯಣ್ಣಾಗೆ
ಉಂಗುರ ಬಂದಾವೆ ಉಡುಗೊರೆ

ಸಣ್ಣ ಸಣ್ಣ ಲಿಂಗ ಸಣ್ಣವೇಳುಲಿಂಗ
ದೊಡ್ಡ ನರಸಯ್ನ ಎದಿಯಮ್ಯಾಲೆ ಲಿಂಗ
ಅಡ್ಡಾದರಣತೆ ಅಣೆದಾವೆ

ಕವಳಿ ಹೂವಿನ ಪೂಜಿ ಕಳಿಯ ಎಲ್ಲವಂದು
ತಿರುಗಿ ನೋಡ್ಯಾರೆ ಗೌಡಾರು ಜಯಣ್ಣಾಗೆ
ಕೊಡಬಂದರು ಕೊರಳಪದಕಾವ

ಇಪ್ಪೇವೂವಿನ ಪೂಜೆ ವಪ್ಪವಾದವಂದು
ಸುತ್ತಿನೋಡ್ಯಾರೆ ಗೌಡಾರು ಸಿರಿಯಣ್ಣಾಗೆ
ಕೊಟ್ಟಾರೆ ಕೊರಳ ಪದಕಾವ

ಅಂಗೈಯೋಟು ಕೆರೆ ಮುಂಗೈಯೋಟು ತೂಬು
ಮುಂದೆ ಜಂಗಮರ ವೊಸಬಾವೆ ವೂವಿನ ತ್ವಾಟ
ತಂದೆ ನಿಂಗಣ್ಣನ ಸಿವಪೂಜೆ

ತಾಳೆಯೋಟು ಕೆರೆ ಲ್ಯಾವಣದೋಟು ತೂಬು
ಮ್ಯಾಲೆ ಜಂಗಮರ ವೊಸಬಾವಿ ವೂವಿನತ್ವಾಟ
ಸ್ವಾಮಿ ಈರಣ್ಣನ ಸಿವಪೂಜೆ

ಉದ್ದಕಲ್ಲಿನ ಮ್ಯಾಲೆ ಅವ್ನಾಕ ನಿಂತಾವೆ
ದೊಡ್ಡೋನೆ ನಿಂಗಣ್ಣನ ಸಿವಪೂಜೆ ಅಗಲುವಾಗ
ರುದ್ರಾಕ್ಸಿ ಪುಸ್ವ ಅರಳ್ಯಾವೆ

ನ್ಯಾರನ್ನ ಕಲ್ಲಿನ ಮ್ಯಾಲೆ ನೀರ್ಯಾಕೆ ನಿಂತಾವೆ
ಸ್ವಾಮಿ ಈರಣ್ಣನ ಸಿವಪೂಜೆ ಆಗಲುವಾಗ
ಸ್ಯಾವಂತಿಗೆ ಪುಸ್ವ ಅರಳ್ಯಾವೆ

ಆಕಾಸದಗ್ಗಣಿ ಕೊಂಬೆ ಮ್ಯಾಗಳ ಪುಸ್ವ
ನಾಕು ನಾಲಿಗೆ ಸಿವಗಂಟೆ ಆದಾವೆ
ಆತ ನರಸಯ್ಗೆ ಸಿವಪೂಜೆ

ಅಂಬಾರದಗ್ಗಾಣಿ ಕೊಂಬೆಮ್ಯಾಗಳ ಪುಸ್ವ
ಒಂದು ನಾಲೀಗೆ ಸಿವಗಂಟೆ ಆದಾವೆ
ತಂದೆ ನಿಂಗಣ್ಣಾಗೆ ಸಿವಪೂಜೆ

ಸಿವಪೂಜೆ ಆಗಲುವಾಗ ಸಿರಿಗಂದಾದ ಮರನಡುಗಿ
ಸಿಡಿದವೂವೆಲ್ಲ ಅರಳ್ಯಾಆವೆ ನಿಂಗಣ್ಣಾನ
ಸಿವಪೂಜೆ ಆಗೋರವಸೀಗೆ

ಮಜ್ಜಣ ಪೂಜ್ಯಾಗಲುವಾಗ ರುದ್ರಾಕ್ಸಿಮರನಡುಗಿ
ಬಿದ್ದ ವೂವೆಲ್ಲ ಅರಳ್ಯಾವೆ ಈರಣ್ಣಾನ
ಮಜ್ಜನಪೂಜೆ ಆಗುರವವಸೀಗೆ

ಗಂದಾದ ವಗಿವೋಗಿ ಅಂಬಾರಕ ಮುಟ್ಯಾವೆ
ತಂದೆ ನಿಂಗಣ್ಣಗ ಸಿವಪೂಜೆ ಆಗಲುವಾಗ
ಅಂಬಾರದ ಗಂಟೆ ಗರಳೆಂದು

ದೂಪಾದ ವಗೆ ವೋಗಿ ಆಕಾಸಕ ಮುಟ್ಯಾವೆ
ಆತನಕ ಸಯ್ಗೆ ಸಿವಪೂಜೆ ಆಗಲುವಾಗ
ಆಕಾಸದ ಗಂಟೆ ಗರಳೆಂದು

ಅಪ್ಪನೆಬ್ಬುರಿಸೋ ಅಟ್ಟಿಗೌಡರ ಮಗನೆ
ಜೊತ್ತೆರಡು ಮುತ್ತಿ ಕಿವಿಗಿಟ್ಟು ಸಾಣೆಕೆರೆಯ
ಮುತ್ತೆ ಸರವೇರಿ ಬರುತಾವೆ

ದನಿ ಸಣ್ಣಮಲ್ಲಿಗೆ ಮಾಲೆ ಅಯ್ಯಾಗೆ
ಚಿನ್ನಾದ ಗಂಟೆ ನಾದ

ದ್ಯಾವರೆಬ್ಬರಿಸೋ ನಾಡಗೌಡರ ಮಗನೆ
ಜೋಡೆರಡು ಮುತ್ತು ಕಿವಿಗಿಟ್ಟು ಸಾಣೆಕೆರೆಯ
ವೂವೆ ಸರವೇರಿ ಬರುತಾವೆ

ಅತ್ತುಸಾವಿರ ಕುದುರೆ ವೊಕ್ಕು ನೀರುಂಡಾಗ
ಅಪ್ಪ ಗಾಣಿಗನೆ ನಿಜಲಿಂಗ ನಿಂಗಣ್ಣ
ಗಟ್ಟಿಸ ಏರ್ಯಾನೆ ಕುದುರೇಯ

ಎಂಟು ಸಾವಿರ ಕುದುರೆ ಕುಂತು ನೀರುಂಬಾಗ
ಬಂಟ ಗಾಣಿಗನೆ ನಿಜಲಿಂಗ ಈರಣ್ಣ
ಕುಂತು ಏರ್ಯಾನೆ ಕುದುರೇಯ

ಆರು ಸಾವಿರ ಕುದುರೆ ವೋಗಿ ನೀರುಂಬಾಗ
ಸ್ವಾಮಿಗಾಣಿಗನೆ ನಿಜಲಿಂಗ ಗೋವಿಂದ
ವೋಗಿ ಏರ್ಯಾನೆ ಕುದುರೀಯ

ವಡಿಯಾಗಾಕ್ಯಾರೆ ತೊಡಿಯಾ ತ್ವಾರಣಗಂಟೆ
ನಡೆದಾರೆ ಜಂಗು ಗರಳೆಂದು ಸಾಣೆಕೆರೆಯ
ಕೆರೆಯೆಲ್ಲ ಮಂಜುಗವುದಾವೆ

ದೊಡ್ಡೋನಿಗಾಕ್ಯಾರೆ ಅಡ್ಡತ್ವಾರಣಗಂಟಿ
ಎದ್ದಾರೆ ಜಂಗುಗರಳೆಂದು ಕ್ವಾಟೆಕೆರಿಯ
ಗುಡ್ಡೆಲ್ಲ ಮಂಜುಗವುದಾವೆ

ಅರುವತೊರಿಯಾಗ ಅಲಗೀಜು ಬಿಟ್ಟಾರೆ
ಅರುದೇವೆ ವೋಗಿ ನೆರೆತಾರೆ ಈರಣ್ಣಾನ
ಅಲಗೇರಿ ಬರುವರವಸೀಗೆ

ತುಂಬೀದ ತೊರಿಯಾಗ ಮೊಂಬೀಜುಬಿಟ್ಟಾರೆ
ರೆಂಬೇರೆ ವೋಗಿ ನೆರೆತಾರೆ ನಿಂಗಣ್ಣನ
ವೊಂಬೀಜಿ ಬರುವ ರವಸೀಗೆ

ಅಳ್ಳಕೊಳ್ಳುವ ತಿರುಗಿ ಅಣ್ಣಯ್ಯ ಮರಳಿಬಂದ
ಇನ್ನೆ ದೂಳುಮರಿಯ ಕೊಡಿರಣ್ಣ ಯಲಗಟ್ಟಿ
ವುಪ್ಪರಿಗೆ ಮುಂದೆ ವೊಯ್ಯಾರೆ

ಎಲ್ಲಿಂದ ಎಲ್ಲಿಗಯ್ಯ ನೀನೋಗೋದು
ದಿಲ್ಲಿಮತ್ಯಾವುದಯ್ಯ

ಗಂಗಳ ಬೆಳೆಗಿಟ್ಟೆ ದುಂಡುಮಲ್ಲಿಗೆ ಸಾದಚ್ಚಿ
ನಂದ ದೀವಿಗೆ ನೆಡುವಿಟ್ಟಿ ಮಾಲಿಂಗ
ಕಂದರಸುದಾರೆ ಕಳುವಯ್ಯ

ಬಟ್ಟಲವ ಬೆಳಿಗಿಟ್ಟೆ ಬಟ್ಟಮಲ್ಲಿಗೆ ಸೋವಿಟ್ಟೆ
ನಿಚ್ಚದೀವೆಗೆ ನೆಡವಿಟ್ಟೆ ಈರಣ್ಣ
ಮಕ್ಕಳಸ್ತಾರೆ ಕಳುವಯ್ಯ

ಅಂಗಾರೋಳಿಗೆ ಮಾಡಿ ಮುಂಗೈನೆಂದಾವೆ
ಗಂಗಾಳ ಬೆಳಗಿ ಬುಜನೊಂದು ನಿಂಗಣ್ಣ
ಕಂದರಸ್ತಾರು ಕಳುವಯ್ಯ