ಕುಲಗುರು ರಾಮಾಚಾರಿಯ ಈ ಗೀತೆಯನ್ನು ಸಿರಿಯಜ್ಜಿ ಗೋಸಿಕೆರೆ ಮುನಿಯಪ್ಪನಿಂದ ಕಲಿತಂತೆ ಹೇಳುತ್ತಾಳೆ. ಸಿರಿಯಜ್ಜಿ ತನ್ನ ಹಟ್ಟಿಯ ಬಂಧು ಬಳಗದವರಷ್ಟೇ ಅಲ್ಲದೆ ಇತರ ಸಮೂಹದ ಪುರುಷರಿಂದಲೂ ಜನಪದ ಗೀತೆಗಳನ್ನು ಕಲಿತುಕೊಂಡಿರುತ್ತಾಳೆ. ರಾಮಾಚಾರಿಯ ಹಾಡನ್ನು ತಮ್ಮ ಕುಲಗುರುವಿನ ಪದ ಎಂತಲೇ ಹಾಡಿದವಳಾದರೂ ಈ ರಾಮಾಚಾರಿಗೂ ಕಾಡುಗೊಲ್ಲರಿಗೂ ಯಾವ ಬಗೆಯ ಸಂಬಂಧ ಎಂದು ತಿಳಿದುಬರುವುದಿಲ್ಲ. ಗೊಲ್ಲರು ಈ ಹೆಸರಿನಿಂದ ತಮ್ಮನ್ನು ಕರೆದುಕೊಳ್ಳುವುದೂ ಇಲ್ಲ. ಗೀತೆಯಲ್ಲಿ ರಾಮಾಚಾರಿ ಯಾವುದೋ ಒಂದು ಮಠದ ಹಿರಿಯನಾಗಿದ್ದಂತೆ ಪ್ರಸ್ತಾಪವಿದೆ.

ಗುರುವೆ ರಾಮಪ್ಪ ಬರಿಗಾಲಲಿ ಬರುವಾಗ
ತಿರರುಗಿ ನೋಡ್ಯಾನೆ ಸಿಸುಮಗ | ರುಸಿವೇಂದ್ರಿ
ಗಿರಿವಿಗಂದಲವ ಕಳಿವ್ಯಾನೆ ||

ಅಪ್ಪಗಳ ಗುರುವು ನೆತ್ತಿಮ್ಯಾಲಾಡೋವು
ಇಪ್ಪತ್ತೆಸಳೀನ ಸಿವದಾರ | ಸಿನ್ನದನಾಮ
ಅಪ್ಪಯ್ಯ ನಿಮ್ಮ ಗುರುವೀಗೆ ||

ಪದ್ಯಗಳಲ್ಲಿ ರಾಮಾಚಾರಿಯ ಹೆಸರು ಒಂದೆರಡು ಕಡೆ ಬಿಟ್ಟರೆ ಹೆಚ್ಚು ಪುನರಾವರ್ತನೆ ಯಾಗುವುದಿಲ್ಲ. ಆಂಧ್ರಪ್ರದೇಶದ ಕದ್ರಿ ಎಂಬ ಸ್ಥಳದ ಪ್ರಸ್ತಾಪ ಗೀತೆಯಲ್ಲಿದೆ. ಗೊಲ್ಲರಿಗೆ ಕದ್ರಿ ನರಸಿಂಹಸ್ವಾಮಿ ಆರಾಧ್ಯದೇವತೆ. ಈ ದೇವತೆಯನ್ನು ಕುರಿತು ಸಿರಿಯಜ್ಜಿ ನೂರಾರು ತ್ರಿಪದಿಗಳನ್ನು ಹಾಡುತ್ತಾಳೆ. ಕದ್ರಿ ಗುಡ್ಡದ ಜತೆಗೆ ಗೀತೆಯಲ್ಲಿ ಚಿತ್ರದುರ್ಗ ಪ್ರದೇಶದ ಸಾಣೆಕೆರೆ ಹೊಸದುರ್ಗ, ಚಿಕ್ಕೇನಹಳ್ಳಿ ಈ ಮುಂತಾದ ಊರುಗಳು ಹೆಸರೂ ಬರುತ್ತದೆ. ಬಹುಗೌರವದಿಂದಲೇ ರಾಮಾಚಾರಿಯನ್ನು ನೆನೆಯುವ ತ್ರಿಪದಿಗಳು ಈ ಗೀತೆಯಲ್ಲಿದ್ದು ಇದರ ಸೊಲ್ಲುಗಳು ಎರಡು :

) ಗುರುವ ಬಿಟ್ಟಿರಲಾರೆನೆ
ಗುರುವಿನ ಪಾದ ಬಿಟ್ಟಿರಲಾರೆನೆ

) ಪಾಲಿಕೆ ತಂದೇವೆ ನಾವು
ನಿಮಪಾದಕೆ ಬಂದೆವಯ್ಯ

 

ಕುಲಗುರು ರಾಮಾಚಾರಿ ಗೀತೆ

ತಂದೆಗಳ ಗುರುವು ಬಂದುರಂಬುದ ಕೇಳಿ
ಗಂದದಲಿ ಮನೆಯ ಬಳಿದೇವು ಬಾಗಿಲಿಗೆ
ದುಂಡುಮಲ್ಲಿಗೆ ಅರಡೇವೆ

ಮಾವುಗಳ ಗುರುವು ಹೋದರಂಬುದ ಕೇಳಿ
ಸಾದೀಲಿ ಮನೆಯ ಬಳಿದೇವೆ ಬಾಗಲಿಗೆ
ಜಾಜಿಮಲ್ಲಿಗೆ ಅರಡೇವೆ

ನಮ್ಮ ಗುರುವ ನೆನೆದು ನಾನು ದನ್ಯಳಾದೆ
ನಮ್ಮಲ್ಲಿ ಪಾಪ ಪರಿಯಾರ ಕಾದ್ರೀಯ
ಪುಣ್ಯೇವು ಗುರುವ ನೆನೆದೇವ

ಮುದ್ದು ಗುರುವೀನ ಸಿದ್ದ ನಿಮಪಾದಾದ
ಅಗ್ಗಣೆ ನಮ್ಮ ಮೈಮ್ಯಾಲೆ ಬಿದ್ದಾರೆ
ಇದ್ದ ಪಾಪಗಳು ಪರಿಯಾರ

ನಮ್ಮ ಗುರುವ ನೆನೆದು ನಾನು ಧನ್ಯಳಾದೆ
ನಮ್ಮಲ್ಲಿ ಪಾಪ ಪರಿಯಾರ ಕಾದ್ರೀಯ
ಪುಣ್ಯವುಳ್ಳ ಗುರುವ ನೆನೆದೇನೆ

ನಮ್ಮ ಗುರುವೀನ ಚಿನ್ನದ ಸಿರಿಪಾದಾದ
ಪನ್ನೀರೆ ನಮ್ಮ ಮೈಮ್ಯಾಲೆ ಬಿದ್ದಾರೆ
ನಮ್ಮ ಪಾಪಗಳು ಪರಿಯಾರ

ಸರ್ವ ತಪ್ಪ ಮಾಡಿ ಗುರುವೆ ನಿನ್ನ ಮರೆತಿದ್ದೆ
ಸರ್ವಾರದಾಗ ಅಡಕೀಯ ಗೊನೆಗೆಬಾಗಿ
ನಾವು ನಮ್ಮ ಗುರುವಮರಿಬಿದ್ದೆ

ರದ್ದುರನೆ ಗತಿಯೆಂದು ಬಿದ್ದೇನ ಪಾದಾಕೆ
ಎದ್ದೇಳೆ ಮಗಳೆ ಬಯವಿಲ್ಲ ವೊನ್ನಬಂಡೆ
ಸಿದ್ದರ ದೂಳತವ ದರಿಸ್ಯಾಳೆ

ಯೋಗೀಯೇ ಗತಿಯೆಂದು ಬಾಗೇವೆ ಪಾದಾಕೆ
ಏಳಮ್ಮ ಮಗಳೆ ಬಯವಿಲ್ಲ ಸಾಣೆ ಕೆರೆಯ
ಯೋಗಿದೂಳತವ ದರಿಸ್ಯಾರೆ

ಗಾಳೀಗೆ ಆರೋವು ನಾಣ್ಯ ವೊದ್ವೈದಾರೆ
ಮೇಲುದುರ್ಗದಿಂದ ಬರುವೋರು
ರಾಮಪ್ಪಾಗ ಏರಿಲೋದಾವೆ ಎಳೆನಾಯಿ

ಬಿಸಿಲೀಗೆ ಆರೋವು ದಸಲಿವೊದ್ದೈದಾವೆ
ಹೊಸದುರ್ಗದಿಂದ ಬರುವೋರು ಮುನಿಯಪ್ಪಾನೆ
ಅಪುವಿಲೋದಾವೆ ಎಳೆನಾಯಿ

ವೊತ್ತುಲುಂಟೆ ಎದ್ದು ಅಟ್ಟಿ ಸಾರಸ್ತಿದ್ದೆ
ಅಪ್ಪಗಳ ಮನಿಯ ಗುರುಸ್ವಾಮಿ ಬಂದರಂದ
ಕಪ್ಪಿನ ಮುರಿಬಾಗಿ ಶರಣೆಂಬೆ

ಕಪ್ಪಿನ ಮುರಿಬಾಗಿ ಶರಣೆಂದೋಗಲುವಾಗ
ಪುತ್ರಿ ನೀನ್ಯಾರ ಮಗಳಮ್ಮ

ಯಾರ ಮಗಳಂದಾರೆ ಏನು ಏಳಲಿ ಗುರುವೆ
ನಲವತ್ತೊಂದಳ್ಳಿ ಕುಸುವೀಯ ಸಿಮ್ಮಾಸನವ
ತೂಗಿ ಆಳೋರ ಮಗಳೆಂಬೆ

ಏಳುತಲಿ ಎದ್ದು ವೋಣಿ ಸಾರಿಸ್ತಿದ್ದೆ
ವೂವುಗಳ ಮನೆಯ ಗುರುಸ್ವಾಮಿ ಬಂದರೆಂದು
ವಾಲೆ ಮುರಿ ಬಾಗಿ ಸೆರಣೆಂದೆ

ವಾಲೆ ಮುರಿ ಬಾಗಿ ಸೆರಣಂದೊಗಲುವಾಗ
ಬಾಲಮ್ಮ ನೀನ್ಯಾರ ಸೊಸೆಯಮ್ಮ

ಯಾರ ಸೊಸೆಯೆಂದಾರೆ ಏನು ಏಳಾಲಿ ಗುರುವೆ
ನಲವತ್ತೊಂದಳ್ಳಿ ಕಸವೀಯ ಸಿಮ್ಮಾಸನದ
ತೂಗಿ ಆಳೋರ ಸೊಸೆಯೆಂಬ

ಯಾರ ಮಗಳೆಂದಾರೆ ಏನು ಏಳಾಲಿ ಗುರುವೆ
ಇಪ್ಪತ್ತೊಂದಳ್ಳಿ ಕಸವೀಯ ಸಿಮ್ಮಾಸನದ
ಅತ್ತಿ ಆಳೋರ ಮಗಳೆಂಬೆ

ಗುರುವು ಬರುತಾರಂದು ಗುಡ್ಡಾವಮರಿಗೊಂಬೆ
ಗುಡಾಣದಾಲ ಎಸರಿಟ್ಟೆ ನಮ್ಮ ನಿಯ
ಗುರುವೆ ರಾಮಪ್ಪ ಉಣಬಂದ್ರು

ಸ್ವಾಮಿ ಬರುತಾರಂದು ಸಾಮಸಾಲೆ ಮರಿಗೊಂಬೆ
ಸ್ವಾರೆಯೊಗಳಾಲ ಎಸರಿಟ್ಟೆ ನಮ್ಮನಿಯ
ಸ್ವಾಮಿ ಮುನಿಯಪ್ಪ ಉಣಬಂದ್ರು

ಅಪ್ಪಗಳ ಗುರುವು ವೊಕ್ಕರಂಬುದ ಕೇಳಿ
ರೊಟ್ಟಿನಂಗಳಕ ಸೆಳೆನೀರು ಚಿಕ್ಕೇನಳ್ಳಿ
ಪಟ್ಟ ನಮೆಗುರುವು ವೋಗುವಾಗ

ಮಾವುಗಳ ಗುರುವು ವೋದರೆಂಬುದ ಕೇಳಿ
ತೋರೆನಂಗಳಕ ಸೆಳೆನೀರು ಸೆನರುನಳ್ಳಿ
ಊರು ನಮ ಗುರುವು ವೋಗುವಾಗ

ಅಟ್ಯಾಗ ನಮ ಗುರುವು ಗಟ್ಟಿಸಿ ನಡೆದರೆ
ಎತಿನುಡಿಗೆಜ್ಜೆ ಗರಳೆಂದು ಚಿಕ್ಕೇನಳ್ಳಿ
ಪಟ್ನವೇ ನಮಗುರು ಇಳಿವಾಗ

ವೋಣ್ಯಾಗ ನಮಗುರುವು ಜಾಡಿಸಿ ನಡೆದಾರೆ
ವೋರಿ ವುರಿಗೆಜ್ಜೆ ಗರಳಂದು ಚಿಕ್ಕೇನಹಳ್ಳಿ
ವೋರೆ ನಮಗುರುವೆ ಇಳಿವಾಗ

ಅರಿವಾ ತೊರಿಯಾಗ ಬರುವೋರು ಇವರ್ಯಾರೆ
ಅರವತ್ತು ಕುದುರೆ ಕೈತಾಳ ಸಿವರಾತ್ರಿಗೆ
ಬರುವರಪ್ಪಗಳ ಗುರುಸ್ವಾಮಿ

ತುಂಬೀದ ತೊರಿಯಾಗಬಂದವರಿವರ್ಯಾರೆ
ಎಂಬತ್ತೇ ಕುದುರೆ ಕೈತಾಳ ಸಿವರಾತ್ರೀಗೆ
ಬಂದೋರು ಮಾವುಗಳ ಗುರುಸ್ವಾಮಿ

ಅತ್ತೆಂಟುಬಾಣ ಜೊತ್ತೀಲಿ ಬರುತಾವೆ
ಅಕ್ಕಯ್ಯ ತೋರೆ ನವಗುರುವೆ ಮಂಡೆಮ್ಯಾಲೆ
ಮತ್ತೆ ಅಂದುರಿಸಿ ಬಿಗುದಾವೆ

ಆರೆಂಟುಬಾಣ ಜೋಡೀಲಿ ಬರುತಾವೆ
ತಾಯಮ್ಮ ತೋರೆ ನಮುರುವ ಮಂಡೆಮ್ಯಾಲೆ
ವೂವೆ ಅಂದಲಿಸಿ ಬಿಗುದಾವು

ವೊತ್ತಿಲಿ ವೂಲಿಬಂಡಿ ಸುತ್ತಲಿ ಸುರೆಪಾನ
ಅಕ್ಕಯ್ಯ ಅವರ್ಯಾರೆ ಬರುವೋರು
ಅವರು ನಮ್ಮ ಅಪ್ಪಗಳ ಮನಿಯ ಗುರುಸ್ವಾಮಿ

ವಾರಿಯಾಲಿ ಬಂಡಿ ದೂರ ಸೂರೆಪಾನ
ತಾಯೆ ಅವರ್ಯಾರೆ ಬರುವೋರು ಅವರು ನಮ್ಮ
ಮಾವುಗಳ ಮನೆಯ ಗುರುಸ್ವಾಮಿ

ವೊತ್ತು ಮುಣುಗಿದ ಮ್ಯಾಲೆ ಚತ್ರಿಯಾರಿಗಿಡಿಸ್ಯಾರೆ
ಇಪ್ಪತ್ತ ರಾಜ್ಯೇದ ಅಡಗೀನ ಮ್ಯಾಲೆ ಬರುವ
ಚತ್ರಿ ಅಪ್ಪುಗಳ ಗುರುವೀಗೆ

ಸೂರಿದ ಮುಣುಗಿದ ಮ್ಯಾಲೆ ದಾಳ್ಯಾರಿಗಿಡಿಸ್ಯಾರೆ
ನಲವತ್ತು ರಾಜ್ಯೇದ ಅಡಗೀನ ಮ್ಯಾಲೆಬರುವ
ದಾಳೆ ಮಾವುಗಳ ಗುರುವೀಗೆ

ಅಪ್ಪಗಳು ಗುರುಬಂದರು ಮತ್ತೇನು ಆಸಾಲೆ
ಮುತ್ತಿನ ಕೋದಂಡ ರತನಾವೆ ಜ್ಯಾಡಿಮ್ಯಾಲೆ
ಮಾವುಗಳ ಗುರುವೆ ಸುಕನಿದ್ದೆ

ಗುರುವೀನ ಸಂಗಾಟ ಆದೀಯ ನಡೆದೇನೆ
ಆರಣ್ಯದಾಗ ಅಸಿದೇನೆ ಗುರುವೆನಿಮ್ಮ
ಪಾದ ಸೋಕಿದರೆ ಬದುಕೇನೆ

ಗುರುವೆ ರಾಮಪ್ಪ ಬರಿಗಾಲಲಿ ಬರುವಾಗ
ತಿರುಗಿ ನೋಡ್ಯಾನೆ ಸಿಸುಮಗ ರುಸಿವೇಂದ್ರಿ
ಗುರುವಿಗಂದಲವ ಕಳಿವ್ಯಾನೆ

ಅಲಸೀಗೆ ಅಣ್ಣು ಮೆಣಸೀನ ಗೂನೆ ಸಾಲು
ವುಲಿಪೆ ಬಂದಾವು ಗುರುಮಟಕ ಮುನಿಯಪ್ಪ
ಗಿಲಿಕೆ ಮಂಚಗಳ ಇಳಿಯಾರು

ಮಾವೀನ ಅಣ್ಣು ನೇರಾಲ ಗೊನೆಸಾಲು
ಮೂಲೆಬಂದಾವು ಗುರುವಟಿಕೆ ರಾಮಪ್ಪ
ತೂಗುಮಂಚಗಳ ಇಳಿಯಾರು

ಗದ್ದೀಗೆ ಕೆಳಗೆ ಇದ್ದಂಥ ಆವಿಗೆಯ
ವಜ್ರ ಮಾಣಿಕದ ಅರಳೆತ್ತಿ ಆವಿಗೆಯ
ವೋಗಿ ಮುಟ್ಟಿಸುವೆ ಗುರುವೀಗೆ

ಪಾಲಿಕೆ ಕೆಳಗೆ ಇರುವಂತ ಆವಿಗೆಯ
ನೀಲ ಮಾಣಿಕದ ಅರಳೊತ್ತಿ ಆವಿಗೆಯ
ವೋಗಿ ಮುಟ್ಟಿಸುವೆ ಗುರುವೀಗೆ

ವೊವುಗಳ ಗುರುವು ಮಾರೆ ಮ್ಯಾಲಾಡೋವು
ನಲವತ್ತೆಸಳೀನ ಸಿವದಾರ ಸಿನ್ನದನಾಮ
ಮಾವಯ್ಯ ನಿಮ್ಮ ಗುರುವೀಗೆ

ಅಪ್ಪಗಳ ಗುರುವು ನೆತ್ತಿ ಮ್ಯಾಲಾಡೋವು
ಇಪ್ಪತ್ತೆಸಳೀನ ಸಿವದಾರ ಸಿನ್ನದನಾಮ
ಅಪ್ಪಯ್ಯ ನಿಮ್ಮ ಗುರುವೀಗೆ

ಗುರುವೀಗೆ ಮಟದಾಗೆ ತಿರುಗಾಡನಿವನ್ಯಾರೆ
ಕರಿಯಂಗಿ ಕಾಲ ಸರಪಣಿ ತಿಪ್ಪಯ್ಯ
ಗುರುಸೇವೆ ಮಾಡಿ ಬರುತಾನೆ

ಗುರುವೀನ ಮಟಕೋಗಿ ಗುರುತೇನು ತಂದ್ಯಣ್ಣ
ಗುರುವೀನ ಮಡಲೆ ಗುರುತಾಯಿ ವುಟ್ಟಿರುವೋದು
ಸೆರಗಲ್ಲ ಚನ್ನಬಸವಯ್ಯ

ನನ್ನವೂರಮುಂದೆ ಬಿನ್ನ ಮಾಡುವನ್ಯಾರೆ
ಮುನ್ನೂರು ಸೆಂಕು ಕೈತಾಳ ಕ್ಯಾತಣ್ಣ
ಬಿನ್ನ ಮಾಡ್ಯಾನೆ ಗುರುವೀಗೆ