ಬಂದಾರೆ ಬಸವಯ್ನೋರು ನಿಂದರು ದರಣಿಮ್ಯಾಲೆ
ಕೆಂಗಣ್ಣು ನೋಟ ಮುಗಲುನೋಟ
ಕೆಂಗಣ್ಣು ನೋಟ ಮುಗಲುನೋಟ ಕೈಲಾಸದ
ಲಿಂಗನಿಗೆ ನಿಮ್ಮಗಳ ಕೊಡಬೇಕು

ವೋದಾರು ಬಸವಯ್ನೋರು ಬಂದಾರು ದರಣಿಮ್ಯಾಲೆ
ಮ್ಯಾಗಣ್ಣನೋಟ ಮುಗುಲುನೋಟ
ಮ್ಯಾಗಣ್ಣನೋಟ ಮುಗುಲುನೋಟ ಕೈಲಾಸದ
ಯೋಗಿಗೆ ನಿಮ್ಮಗಳ ಕೊಡಬೇಕು.

ಆವೀಗೆ ಬೂದಿ ಆಯಾಕದರಿಸವರೆ
ಆವುಸುತ್ತವರೆ ಕೊರಳೀಗೆ
ಆವು ಸುತ್ತವರೆ ಕೊರಳೀಗೆ ಕೈಲಾಸದ
ಯೋಗಿಗೆ ನಿಮ್ಮಗಳ ಕೊಡಿರಿ

ತಿಪ್ಪೇಯ ಬೂದೀಯ ವಪ್ಪಕದರಿಸವರೆ
ಸರ್ಪನಸುತ್ತವರೆ ಕೊರಳೀಗೆ
ಸರ್ಪಸುತ್ತವರೆ ಕೊರಳೀಗೆ ಕೈಲಾಸದ
ತಿರುಕರಿಗೆ ನಮ್ಮಗಳ ಕೊಡವೊಲ್ಲ

ತಿಪ್ಪೇಯ ಬೂದ್ಯಲ್ಲ ವಪ್ಪಕಾಣೆ ನನ್ನಡೆದಮ್ಮ
ಸರ್ಪಲ್ಲ ಕೊರಳಪದಕಾವೆ
ಸರ್ಪಲ್ಲ ಕೊರಳಪದಕಾವೆ ಕೈಲಾಸದ
ತಿರುಕರಿಗೆ ನನ್ನ ಕೊಡಬೇಕು

ಆವೀಗೆಬೂದ್ಯಲ್ಲ ಆಯಕಣ್ಣನನ್ನಡೆದಪ್ಪ
ಆವೆಲ್ಲ ಕೊರಳ ಪದಕಾವೆ
ಆವೆಲ್ಲ ಕೊರಳ ಪದಕಾವೆ ಕೈಲಾಸಾದ
ಯೋಗೀಗೆ ನನ್ನ ಕೊಡಬೇಕು

ಕೊಟ್ಟೆನೆಂದಳರಮ್ಮ ಕೊಡೆನಂದನವರಪ್ಪ
ಈಡುಪಾಡಂದ ಯಮನಕಾನ
ಈಡುಪಾಡಂದ ಯಮನಕಾನ ಮ್ಯಾಲೆ
ಕೆಂಗಣ್ಣು ಬಿಟ್ಟರು ಸಿವತಾನು

ಇರಿಯಪ್ಪ ಇರಿಯಮ್ಮ ಇರಿಯ ಸ್ವಾದರಮಾವ
ಅಡುಗೆಮನೆಯಾಗ ವಳಮಾತು
ಅಡುಗೆ ಮನೆಯಾಗ ವಳಮಾತು ಮಾತನಾಡಿ
ಇರಿಯೋಳು ಗೌರಾನ ಕೊಡಬೇಕು

ಚಿಕ್ಕಪ್ಪ ಚಿಕ್ಕಮ್ಮ ಚಿಕ್ಕಸ್ವಾದರಮಾವ
ಪಟ್ಟ ಸಾಲ್ಯಾಗ ವಳಮಾತು
ಪಟ್ಟ ಸಾಲ್ಯಾಗ ವಳಮಾತು ಮಾತನಾಡಿ
ಇರಿಯೋಳು ಗೌರಾನ ಕೊಡಬೇಕು

ಚಿಕ್ಕಪ್ಪಗಚ್ಚಡದ ಚಿಕ್ಕಮ್ಮನ ಸೀರೀಯ
ಎತ್ತೀನ ಕಣ್ಣೀಗೆ ಜವುಳೀಯ
ಎತ್ತೀನ
ಕಣ್ಣೀಗೆ ಜವುಳೀಯ ತಂದಾರೆ
ಚಿಕ್ಕ ಗೌರನ ಕೊಡತೀನಿ

ಇರಿಯಪ್ಪಗಚ್ಚಡ ಇರಿಯಮ್ಮಗ ಸೀರೆ
ಕರಿವಿನ ಕಣ್ಣೀಗೆ ಜವುಳೀಯ
ಕರಿವಿನ
ಕಣ್ಣೀಗೆ ಜವುಳೀಯ ತಂದಾರೆ
ಇರಿಯೋಳು ಗೌರನ ಕೊಡತೀನಿ

ಪಟ್ಟೀದ ಸೀರೆ ಗಟ್ಟಿಸಿ ಗಳಿಗೆ ಮಾಡಿ
ಇಟ್ಟಾಡಿರವರಮನೆತಂಕ
ಇಟ್ಟಾಡಿರವರಮನೆತಂಕ ಗೌರಮ್ಮನ
ಕೊಟ್ಟಾರೋ ಕೊಡರೋ ಬೆಸಗೊಳ್ಳಿ

ಸಾಲ್ಯಾದಸೀರೆ ಜ್ಯಾಡಿಸಿ ಗಳಿಗೆ ಮಾಡಿ
ಈಡಾಡಿರವರಮನೆತಂಕ
ಈಡಾಡಿರವರಮನೆತಂಕ ಗೌರಮ್ಮನ
ತೋರ್ಯಾರೋತೋರವರೊಬೆಸಗೊಳ್ಳಿ

ಚಿಕ್ಕಪ್ಪ ಚಿಕ್ಕಮ್ಮ ಚಿಕ್ಕ ಸ್ವಾದರಮಾವ
ಪಟ್ಟೆ ಸಾಲ್ಯಾಗ ವಳಮಾತು
ಪಟ್ಟೆ ಸಾಲ್ಯಾಗ ವಳಮಾತು ಮಾತನಾಡಿ
ಚಿಕ್ಕೋಳು ಗೌರನ ಕೊಡತೀವೆಂದರು

ಇರಿಯಪ್ಪ ಇರಿಯಮ್ಮ ಇರಿಯ ಸ್ವಾದರಮಾವ
ಅಡುಗೆ ಮನೆಯಾಗ ವಳಮಾತು
ಅಡುಗೆ ಮನೆಯಾಗ ವಳಮಾತು ಮಾತನಾಡಿ
ಇರಿಯೋಳು ಗೌರನ ಕೊಡತೀವಿ

ಸಾಣೆಕಲ್ಲಿನ ಮ್ಯಾಲೆ ಸಾಲಮಗ್ಗನೂಡಿ
ಸೀರೀಯನೇದ ಇರುಳೆಲ್ಲ
ಸೀರೀಯನೇದ
ಇರುಳೆಲ್ಲ ಗೌರಮ್ಮನ
ನಾರೀಯ ಮ್ಯಾಲ ಮುಸುಕೀಗೆ

ಗುಂಡುಕಲ್ಲಿನ ಮ್ಯಾಲೆ ದುಂಡಮಗ್ಗಮಾಡಿ
ಗೊಂಡೆವನೇವ ಇರುಳೆಲ್ಲ
ಗೊಂಡೆವನೇವ ಇರುಳೆಲ್ಲ ಗೌರಮ್ಮನ
ರೆಂಬೇಯ ಮೇಲು ಮುಸುಕೀಗೆ

ಎಳಿಯ ಬೆಳುದಿಂಗಾಳು ವಳಿಗಿಬ್ಬರಾರೋರು
ಗಳಿಗೆಬಟ್ಟಾಲ ಇಡಕಂಡು
ಗಳಿಗೆಬಟ್ಟಾಲ ಇಡಕಂಡು ಗೌರಮ್ಮನ
ಬೆಳುಗೀಲಿ ದಾರೇಯನೆರುದಾರೆ

ಸಂಜೆ ಬೆಳುದಿಂಗಾಳು ಇಬ್ಬರಾರೋರು
ಗಂದದ ಬಟ್ಟಲ ಇಡಕಂಡು
ಗಂದದ ಬಟ್ಟಲ ಇಡಕಂಡು ಗೌರಮ್ಮನ
ಮುಂಜೇಲಿ ದಾರೆಯೆರುದಾರೆ

ಕಾಲುಂಗ್ರ ಕಡಿಸೂಸ್ತ್ರ ಎಳೊನ್ನಿನ ತಾಳಿ
ದೀರಲರ್ಜುಣರ ಮಗಳೀಗೆ
ದೀರಲರ್ಜುಣರ ಮಗಳೀಗೆ ಗೌರಮ್ಮಾಗೆ
ತಾಳೀಯ ಸೂಡ ಸಿವಬಂದ

ಕಂಕಳ ಕಡಿಸೂಸ್ತ್ರ ಎಂಟೊನ್ನಿನ ತಾಳಿ
ತೆಂಕಲರ್ಜುಣರ ಮಗಳೀಗೆ
ತೆಂಕಲರ್ಜುಣರ ಮಗಳೀಗೆ ಗೌರಮ್ಮಾಗೆ
ಕಂಕಳವ ಸೂಡಿ ಸಿವಬಂದ

ಅಟ್ಟೀಯ ಸಕುನ ಇಷ್ಟ ದೇವರ ಕೇಳಿ
ದಕ್ಕೀತು ಎಣ್ಣುದರುಮರಿಗೆ
ದಕ್ಕೀತು ಎಣ್ಣುದರುಮರಿಗೆ ಸಲುವೈದೆತಾಳಿ
ಕಟ್ಯಾರು ಗಿರಿರಾಜನ ಮಗಳೀಗೆ

ಆದೀಯ ಸಕುನ ನಾಮದೇವರು ಕೇಳಿ
ಆಯಿತೀ ಎಣ್ಣು ದರುಮರಿಗೆ
ಆಯಿತೀ ಎಣ್ಣು ದರುಮರಿಗೆ ಸುಲುವೈದೆತಾಳಿ
ಸೂಡ್ಯಾರು ಗಿರಿರಾಜರ ಮಗಳೀಗೆ

ಆಸೆಕಂಬಾಕ ಸಾಕ್ಸಾತೀಸ್ವರ ಕುಂತ
ಈಸೆಕಂಬಾಕ ಸಿವನಿಂತ
ಈಸೆಕಂಬಾಕ ಗೌರಿನಿಂತು ಇಬ್ಬರಿಗೆ
ಬಾಸೇಯ ಮಾಡಿ ಅರುಗಾದರು

ಇಂದ್ಲ ಕಂಬಾಕ ನಂದಿಗೀಸ್ವರ ನಿಂತ
ಮುಂದ್ಲಕಂಬಾಕ ಗೌರಿ ನಿಂತು
ಮುಂದ್ಲ ಕಂಬಾಕ ಗೌರಿ ನಿಂತು ಇಬ್ಬರಿಗೆ
ನೆಂಬುಗೆ ಮಾಡಿ ಅರುಗಾದರು

ಆನೆಯ ಮ್ಯಾಲೆ ಜ್ಯಾಣಜಂಗಮಬಂದ
ಪಾಲುಕಿಮ್ಯಾಲೆ ಸಿವಬಂದ
ಪಾಲುಕಿಮ್ಯಾಲೆ ಸಿವಬಂದ ಇಬ್ಬರಿಗೆ
ಜ್ಯಾವೊತ್ತಿಗೆ ದಾರೆಯೆರುದಾರೆ

ಒಂಟೀಯ ಮ್ಯಾಲೆ ಕೆಂಚಬ್ರಮ್ಮ ಬಂದ
ಮಂಟಪದೊಳಗೆ ಸಿವಬಂದ
ಮಂಟಪದೊಳಗೆ ಸಿವಬಂದ ಅವರಿಬ್ರಿಗೆ
ಸಂಪತ್ತಿಲಿ ದಾರೆಯೆರುದಾರೆ

ಅಣ್ಣ ಆರೋರಣ್ಣಗೆ ಕೆನ್ನೆ ಮ್ಯಾಗಳ ಜುಟ್ಟು
ಅನ್ನೊಂದು ಎಳೆಯ ಜನಿವಾರ
ಅನ್ನೊಂದು ಎಳೆಯ ಜನಿವಾರ ಆರೋರಣ್ಣ
ಚಂದವಾಗಿ ಆಕೋ ಬ್ರಮ್ಮಗಂಟ

ಅಪ್ಪ ಆರೋರಣ್ಣಗೆ ನೆತ್ತಿಮ್ಯಾಗಳ ಜುಟ್ಟು
ಇಪ್ಪತ್ತೊಂದೆಳೆಯ ಜನಿವಾರ
ಇಪ್ಪತ್ತೊಂದೆಳೆಯ ಜನಿವಾರ ಆರೋರಣ್ಣ
ವಪ್ಪವಾಗಿ ಆಕೋಬ್ರಮ್ಮಗಂಟ

ಅಂದಾರದಡಿಯಲಿ ಗಂದಾದ ಕೊರಡಾಕಿ
ಬಂದುಬಂದೋರು ಪಾದಪಿಡಿದಾರೆ
ಬಂದುಬಂದೋರು ಪಾದಪಿಡಿದಾರೆ ಏನಂದಾರೆ
ನೀವು ನಿಮ್ಮ ಸತಿಯೋಳ ಎಸರೇಳಿ

ಪಟ್ಟಾದ ಅರಸಿ ಪಾರ್ವತಿದೇವಿ
ಮೆಚ್ಚಿಬಂದೋಳು ಸಿರಿಗಂಗೀಯಲ್ಲವೇ

ಸಿವನಾಡೀದ ಮಾತೀಗೆ ಜನರೆಲ್ಲ ನಕ್ಕಾರು
ಆಕೆ ಗೌರಮ್ಮನ ಕರೆಸ್ಯಾರೆ
ಆಕೆ ಗೌರಮ್ಮನ ಕರೆಸ್ಯಾರೆ ಕೇಳ್ಯಾರೆ
ನೀವೇಳಿರಿ ನಿಮ್ಮ ಪುರಸರೆಸರ

ಪಟ್ಟೇದವಸ್ತ್ರ ರಟ್ಟೇಲಿವರಸೋರು
ದೇವಾರಗೊಡಾವೆ ನಮಗ್ಯಾಕೆ
ದೇವಾರಗೊಡಾವೆ ನಮಗ್ಯಾಕೆ
ಮಾತೀಗೆ ಜನರೆಲ್ಲ ನಕ್ಕಾರೆ

ಗೌರಮ್ಮ ನಂದಮಾತೀಗೆ ಜನರೆಲ್ಲ ನಕ್ಕಾರೆ
ಆತ ಬಸವಯ್ನ ಕರೆಸ್ಯಾರೆ
ಆತ ಬಸವಯ್ನ ಕರೆಸ್ಯಾರೆ ಕೇಳ್ಯಾರೆ
ನೀವೇಳಿನಿಮ್ಮ ಸತಿಯೆಸರ

ಗೋವಾಗಿ ವುಟ್ಟೋಳು ರಾಜ್ಯೇವ ಸಲವೋಳು
ನಿಲುಲೋಚನೆಯಂದು ನುಡದಾನೆ ಬಸವಯ್ಯ

ಬಸವಣ್ಣನ ಮಾತೀಗೆ ಜನರೆಲ್ಲ ನಕ್ಕಾರು
ಆಕೆ ನೀಲಮ್ಮನ ಕರೆಸ್ಯಾರು
ಆಕೆ ನೀಲಮ್ಮನ ಕರೆಸ್ಯಾರು ಕೇಳ್ಯಾರು
ನೀವೇಳಿರಮ್ಮ ನಿಮ್ಮ ಪುರುಸರೆಸರ

ಎತ್ತಾಗಿ ವುಟ್ಟೋರು ಸತ್ಯೇವಪಡೆವೋದು
ಸತ್ಯಪಾಲಕ ಚನ್ನವಸವಯ್ಯ
ಸತ್ಯಪಾಲಕ ಚನ್ನವಸವಯ್ಯ ಅಂದಿನ್ನ
ನೀಲಲೋಚನೆ ನುಡುದಾಳೆ

ನೀಲಮ್ಮನ ಮಾತೀಗೆ ಜನರೆಲ್ಲ ನಕ್ಕಾರು
ಆಕೆ ಕಾಳಮ್ಮನ ಕರೆಸ್ಯಾರು
ಆಕೆ ಕಾಳಮ್ಮನ ಕರೆಸ್ಯಾರು ಕೇಳ್ಯಾರೆ
ನೀವೇಳಿನಿಮ್ಮ ಪುರುಸಾರೆಸರ

ಈರಾರು ಅಂಬೋರು ಈರಾರು ದೀರೋರು
ಎಲ್ಲ ದೇವರಿಗೆ ಅದಿಕಾರಿ
ಎಲ್ಲ ದೇವರಿಗೆ ಅದಿಕಾರಿ ಅಂದಿನ್ನ
ಕಾಳಮ್ಮ ಏಳಿ ನಗುತಾಳೆ

ಕಾಳಮ್ಮ ಮಾತೀಗೆ ಜನರೆಲ್ಲ ನಕ್ಕಾರು
ಆತ ಈರಣ್ಣಾನ ಕರೆಸ್ಯಾರು
ಆತ ಈರಣ್ಣಾನ ಕರೆಸ್ಯಾರು ಕೇಳ್ಯಾರೆ
ನೀವೇಳಿರಪ್ಪ ನಿಮ್ಮ ಸತಿಯೆಸರ

ಕಾಳಿಕರ್ರನ ಕಾಳಿ ಕಾಳಿಬದ್ರನ ಕಾಳಿ
ಮೂಗುತಿವಲ್ಲಾಳು ಸಟವೇಣು
ಮೂಗುತಿ ವಲ್ಲಾಳು ಸಟವೇಣು ಈರಣ್ಣ
ಕಾಳಮ್ಮ ನಂದು ನಡುದಾರೆ

 

ಗಿರಿಜಾ ಕಲ್ಯಾಣ ಹಾಡಿಗೆ ಮಂಗಳ ಪದ್ಯಗಳು

ಅರನೆ ಪಾರ್ವತಿದೇವಿ ಪರಮ ಸಂತೋಸದಲಿ
ಸರಸನಾಡುತಲಿ ತನ್ನ ಪುರುಸರೊಡನೆ
ಅರಬದ್ರ ಪದಸೂದ್ರ ತದಿಗೆ ನಾಳಿನ ದಿವಸ
ಅರಸತಿ ತವರಮನೆಗೋಗಿ ಬರುವೆ

ಮಂಗಳ ಜಯಮಂಗಳ ರಾಮಸುಬ ಮಂಗಳ

ಇಲ್ಲಿಂದ ವೋಗಲಿಕೆ ಅಲ್ಲ ನಿನಗ್ಯಾರುಂಟು
ಚಿಟ್ಟಿಗಂಗಳ ಚೆಟ್ಟಿ ದೇವಿಕೇಳಿ
ಎಲ್ಲರ್ಯಾತಕ ಸ್ವಾಮಿ ಅಲ್ಲಿ ಮೂರು ದಿವಸಿದ್ದು
ನಿಮ್ಮಗಳ ಪಾದಸೇವೆಗೆ ಒದಗಿಬರುವೆ

ಮಂಗಳಾ ಜಯಮಂಗಳ ರಾಮಸುಬ ಮಂಗಳಾ

ಆರುದಿನ ಮೂರುದಿನ ಮೀರಿದರೆ ಏಳುದಿನ
ದಾರಿಯನು ಕಾಯುವೆ ದೇವಿಕೇಳಿ
ಬಾರದಿದ್ದರೆ ನಗೆ ಮೀರಿದೊಳಸುವೆನು
ಬೇಗದಲಿ ನಗೆ ಬಾರೆಂದ ನಿಜಮೂರ್ತಿ

ಮಂಗಳ ಜಯಮಂಗಳ ರಾಮಸುಬ ಮಂಗಳಾ

ವೊತ್ತಿನಾಗಳ ನೀರು ಒಲೆಯಾಗಳೀಬೂತಿ
ಇಷ್ಟಕ್ಕೆ ತಾರವರು ಬಡವರೆ
ಇಷ್ಟಕ್ಕೆ ತಾರವರು ಬಡವರೆ ಏಸಿವನೇ
ವೊಪ್ಪತ್ತು ಇದ್ದಲ್ಲಿ ಬರುತೀನಿ

ಮಂಗಳ ಜಯಮಂಗಳ ರಾಮಸುಬ ಮಂಗಳಾ

ನಾಗಬೂಸುರನು ನಗುತ ಗೌರಿಯ ಕಂಡು
ವೋಗಿಬಂದ್ಯಾನಿನ್ನಾ ತವರೀಗೆ
ಈಗೇನುಕೊಟ್ಟರು ಇನ್ನೇನು ಕೊಡುವಾರು
ಬೇಗದಲಿ ಪೇಳೆಂದರು ನಿಜಮೂರ್ತಿ

ಮಂಗಳ ಜಯಮಂಗಳ ರಾಮಸುಬ ಮಂಗಳಾ

ಅಂದಮಾತೀಗೆ ಗೌರಿ ಒಂದು ಮಾತಾಡಿದಳು
ತಾಯಿ ತಂದೆಗಳೆಲ್ಲ ಸುಖದಲಿರುವರು
ನಮ್ಮಪ್ಪ ಗಿರಿರಾಜ ಬಾಳ ಬಡವನು ಮುದುಕ
ನಮ್ಮೋರು ಬಡವರು ಇನ್ನೇನು ಕೊಡುವರು

ಮಂಗಳ ಜಯಮಂಗಳ ರಾಮಸುಬ ಮಂಗಳಾ

ಕಡೆದಕ್ಕಿ ಕೇಪಸುಮ ಕಸ್ತೂರಿ ಕುಂಕುಮ
ಕೂಡುವ ಮಾಡುವ ಕುಪ್ಪಸ ನಾವಲ್ಲ ನಡವಕಿಳಿಯ
ಕಡನ ಮುತ್ತೈದಿರಿಗೆ ಒಡುಲಕ್ಕಿನಿಟ್ಟಾರು
ನಮ್ಮೇರು ಬಡವಾರಿನ್ನೇನು ಕೊಡುವಾರು

ಮಂಗಳ ಜಯಮಂಗಳ ರಾಮಸುಬ ಮಂಗಳಾ

ಅಲ್ಪಸ್ವಲ್ಪದಲಿ ಕೊಪ್ಪರಿಗೆ ದ್ರವಿಯಿತ್ತು
ಇಪ್ಪತ್ತೇಳು ಆನೆ ಕುದುರೆ ಇಟ್ಟಾರು
ಒಪ್ಪದಿಂದ ಮುತ್ತೈದೇರು ಕಳಸವನಿಟ್ಟಾರು
ನಮ್ಮೋರು ಬಡವರಿನ್ನೇನು ಕೊಡುವರು

ಮಂಗಳ ಜಯಮಂಗಳ ರಾಮಸುಬ ಮಂಗಳಾ

ಆರುವೂವಿನ ಸೀರೆ ಆರುಪಟ್ಟೇದ ಸೀರೆ
ಆರೋನೆ ಸಕಲಾತಿ ಮತ್ತೈದು ಸ್ಯಾಲು
ಆರುರತ್ನಗಂಬಳಿ ಅಚ್ಚಡವನಿಟ್ಟಾರು
ನಮ್ಮೋರು ಬಡವರಿನ್ನೇನು ಕೊಡುವಾರು

ಮಂಗಳ ಜಯಮಂಗಳ ರಾಮಸುಬ ಮಂಗಳಾ

ಆರೇರು ಸಣ್ಣಕ್ಕಿ ಆರೇರು ದೊಡ್ಡಕ್ಕಿ
ಆರೇರು ಅರಿಸಿನ ಮತ್ತೇರುಬೆಲ್ಲ
ಆರುಕೊಳಗದ ಮೆಣಸು ನೂರುಕಾಯಿ ಇಟ್ಟಾರು
ನಮ್ಮೋರು ಬಡವರು ಇನ್ನೇನು ಕೊಡುವಾರು

ಮಂಗಳ ಜಯಮಂಗಳ ರಾಮಸುಬ ಮಂಗಳಾ

ಕರೆವ ಅಸು ಅದಿನೆಂಟು ಕಾಲಾಳು ನೂರುಜನ
ಕರೆವ ಎಮ್ಮೆಗಳೆಂಟು ಕರುವೆಂಟು
ಕಡೆದು ಕಾಸಿಕೊಡುವ ದಾದೇರನಿಟ್ಟಾರು
ನಮ್ಮೋರು ಬಡವಾರಿನ್ನೇನು ಕೊಡುವಾರು

ಮಂಗಳ ಜಯಮಂಗಳ ರಾಮಸುಬ ಮಂಗಳಾ

ಎಚ್ಚೀನ ಮಗಳಂದು ಇಷ್ಟ ನಿಮಗೆ ಕೊಟ್ಟಾರು
ಇಷ್ಟಾದರೂ ನಿಮಗಾಗಿ ಕೊಡಲಿಲ್ಲವೆ
ಅಷ್ಟು ನಿಮಗೆ ಕೊಟ್ಟು ನನ್ನ ನಿಮಗೆ ಕೊಟ್ಟು
ಸೃಷ್ಟಿಗೊಡೆಯ ನೀವೆ ಪೇಳಿ ಎಂದಾಳು

ಮಂಗಳ ಜಯಮಂಗಳ ರಾಮಸುಬ ಮಂಗಳಾ

ಜಯತು ಪಾರ್ವತಿಗೆ ಜಯತು ಕಲ್ಯಾಣಿಗೆ
ಜಯಜಯತು ಮೂಲೋಕ ಸಂಪನ್ನಾಗೆ
ಜಯಜಯತು ಸರ್ವರುಗೆ ಬೇಡಿತಂಗೆ
ವರಗಳ ಕೊಡುವನೆ ಜಯಜಯತು
ಪಾರುವತಿ ಪರಮೇಸ್ವರಗೆ

ಆಕಾಸಮಂಟಪನಾಗಿ
ಇಂದುಕಾಂತಿಯರೆಲ್ಲ ಬಂದುನಿಂದು
ಮೇಲಕ್ಕಿಸಯ್ತ ಬೇಕಾದಪಲ ಇಸ್ಟಕಲ್ಪವೃಕ್ಸದಕಂಬ
ಲೋಕಾಲೋಕವೆನಿಬ್ಬಣವಾಗಿ ಬರಲಿ
ಮುತ್ತೈದೆ ಲಕ್ಸ್ಮಿಯರು ಪಾರ್ವತಿಸತಿಯರು
ಮುತ್ತೈದೆರೆಲ್ಲ ಬಂದು ನಿಂದು
ಚಿತ್ತದೆಲ್ಲಪ್ಪನಂದೇಸಗಾರಾಗೆ
ಮುತ್ತೈದೇರೆಲ್ಲ ಮಂತ್ರಾಕ್ಸಿ ಸೂಡೀರಿ

ಆರಿಯೋರು ವೀರಾರು ದೀರಾರು
ದೀರಬಲ್ಲಿದರು ನರರು ಕಿನ್ನರರು
ಕಿಂಪುರುಸರು ಮುನಿಗಳು ಹರುಸದಿಂದ
ಮಂತ್ರಾಕ್ಸಿ ಸೂಡೀರಿ

ಕಲ್ಯಾಣಂ ಸಿವ ಕಲ್ಯಾಣಂ
ಕಲ್ಯಾಣಂ ಗಿರಿಜೆ ಕಲ್ಯಾಣಂ