ಜನಪದ ಗೀತೆಗಳಲ್ಲಿ ಶಿವ ಪ್ರಾರ್ಥನೆ ದೈವವಗಿ ಬಂದರೆ ಜನಪದ ಕಥೆಗಳಲ್ಲಿ ಶಿವ ಪಾತ್ರವಾಗಿಯೇ ಬರುತ್ತಾನೆ.

ಕರ್ನಾಟಕದಾದ್ಯಂತ ಶಿವನನ್ನು ಕರಿತು ಪ್ರಚಲಿತವಿರುವ ಕಥನ ಗೀತೆಗಳು ಎರಡು. ಒಂದು ಶಿವನ ಮದುವೆಯದು. ಎರಡನೆಯದು ಶಿವನ ಎರಡನೆಯ ಪ್ರೇಮ ವಿವಾಹದ್ದು. ಗಿರಿಜಾ ಕಲ್ಯಾಣ ಶಿವನ ವಿವಾಹ ಕಥೆಯಾದರೆ ಗಂಗೆ ಗೌರಿ ಕಥೆಯಲ್ಲಿ ಶಿವನ ಪ್ರೇಮ ವಿವಾಹದ ವಿವರವಿರುತ್ತದೆ. ಎರಡು ಕಥೆಗಳು ಈಗಾಗಲೇ ಪ್ರಸ್ತಾವನೆಯಲ್ಲಿ ಹೇಳಿರುವಂತೆ ಶಿಷ್ಟ ಪರಂಪರೆಯ ಕಥಾನಕಗಳಿಗೆ ವಿರುದ್ಧ ದಿಕ್ಕಿನಲ್ಲಿ ಕಟ್ಟಿರುವ ಕಥೆಗಳೇ! ಸಿರಿಯಜ್ಜಿ ಹಾಡಿರುವ ಕಥನ ಗೀತೆಯಲ್ಲಿ ಶಿವ ಕೈಲಾಸದಿಂದ ಬಂದು ಇಹಲೋಕದ ಎಲ್ಲರನ್ನೂ ಕೂಡಿಕೊಳ್ಳುತ್ತಾನೆ. ಹೀಗಾಗಿ ಕಥನಗೀತೆಯಲ್ಲಿ ಸಂಗನ ಬಸವಣ್ಣ, ಮಡಿವಾಳ ಮಾಚಯ್ಯ, ಬಸವಣ್ಣನವರ ಹೆಸರೆಲ್ಲ ಪ್ರಸ್ತಾಪವಾಗಿ ಶಿವ ಮತ್ತು ಗಿರಿರಾಜನ ಮಗಳು ಗಿರಿಜೆಯ ವಿವಾಹದಲ್ಲಿ ಇವರೆಲ್ಲ ಭಾಗವಹಿಸುತ್ತಾರಂತೆ. ಇನ್ನೊಂದು ಪ್ರಸಿದ್ಧ ಜನಪದ ಕಥನ ಗೀತೆ ಗಂಗೆಗೌರಿಯಲ್ಲಿ ಶಿವನು ಇಬ್ಬರು ಹೆಂಗಸರ ಮುನಿಸಿಗೆ ಸಿಲುಕೊಳ್ಳುತ್ತಾನೆ. ಕೊನಗೆ ಗಂಗೆ ಗೌರಿಯರೇ ತಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳುತಾರೆ. ಶುದ್ಧ ತ್ರಿಪದಿಗಳಲ್ಲಿ ಸೂಕ್ಷ್ಮ ಭಾವನೆಗಳನ್ನು ಪ್ರಕಟಿಸುವ ಗಿರಿಜಾ ಕಲ್ಯಾಣ ಕಥನ ಗೀತೆ ಒಂದು ಕೌಟುಂಬಿಕ ತತ್ವವನ್ನೂ ಹೇಳುತ್ತದೆ.

ಭಿಕ್ಷುಕನ ವೇಷದಲ್ಲಿ ಶಿವ ಗಿರಿಜೆಯನ್ನು ನೋಡಲು ಬರುವುದು, ಆಕೆಯ ಸಂಕೋಚ, ಗಿರಿಜೆಯ ತಂದೆ-ತಾಯಿ ಸೋದರ ಮಾವಂದಿರು ತಿರುಪೆ ಬೇಡಲು ಬಂದವನಿಗೆ ಗಿರಿಜೆಯನ್ನು ಹೇಗೆ ಲಗ್ನ ಮಾಡುವುದೆಂದು ಚರ್ಚಿಸುವುದು, ಕೊನೆಗೆ ವಿವಾಹ ಜರುಗಿ ಮೂರು ಸಾವಿರ ಮುನಿಗಳು, ಕಲ್ಯಾಣದ ಶರಣರೆಲ್ಲ ಭಾಗವಹಿಸಿದ್ದುದರವರೆಗೆ ಜನಪದ ಗೀತೆ ಮುಂದುವರಿಯುತ್ತದೆ. ಈ ಕಥನ ಗೀತೆಯಲ್ಲಿಯೇ ಗಂಗೆ ಗೌರಿ ಗೀತೆಯ ಜಗಳದ ಬೀಜವಾಕ್ಯವೂ ಅಡಿದೆ. ಶಿವ ಗಿರಿಜೆಯ ಹೆಸರನ್ನು ಹೇಳುವಾಗಲೇ ‘ಪಟ್ಟಾದ ಅರಸಿ ಪಾರ್ವತಿದೇವಿ, ಮೆಚ್ಚಿ ಬಂದೋಳು ಸಿರಿಗಂಗಿಯಲ್ಲವೇ’ ಎನ್ನುತಾನೆ ಕರ್ನಾಟಕದ ಜನಪದರ ನಡುವೆ ವ್ಯಾಪಕ ಪ್ರಚಾರದಲ್ಲಿರುವ ಶಿವನ ಕುರಿತಾದ ಈ ಜನಪದ ಗೀತೆಗಳನ್ನು ಬೇರೆ ಬೇರೆ ಗಾಯಕರು ಹಾಡುವಂತೆ ಸಿರಿಯಜ್ಜಿಯೂ ಕಲಿತು ಹಾಡಿರುತ್ತಾಳೆ.

ಗಿರಿಜಾ ಕಲ್ಯಾಣ ಗೀತೆ

ಮಗಿ ಮಾವಿನಣ್ಣ ಅರಗಿಳಿ ಕಚ್ಚಿದಂಗೆ
ಮಳೆಗಾಲಕ ಮ್ವಾಡಕವುದಂಗೆ
ಮಳೆಗಾಲಕ ಮ್ವಾಡಕವುದಂಗೆ
ಗೌರಿಕತೆಯ
ಗ್ಯಾನವಿಟ್ಟು ಕೇಳೀರಿ ಇರಿಯೋರು

ಅಚ್ಚ ಮಾವಿನಣ್ಣು ಅರಗಿಳಿ ಕಚ್ಚಿದಂಗೆ
ಚಿತ್ತೆಮಳಿಗೆ ಮ್ವಾಡಕವುದಂಗೆ
ಚಿತ್ತೆ ಮಳಿಗೆ ಮ್ವಾಡಕವುದಂಗೆ
ಚಿತ್ತೆ ಮಳಿಗೆ ಮ್ವಾಡಕವುದಂಗೆ
ಗೌರಿಕತೆಯ
ಚಿತ್ತವಿಟ್ಟು ಕೇಳೀರಿ ಇರಿಯೋರು

ರನ್ನಾದಂತೋಳು ಚಿನ್ನಾದ ಕೊಡನೊತ್ತು
ವೊಳೆಯಲ್ಲಗ್ಗಣೆಯಮಗಿವೋಳು
ವೊಳೆಯಲ್ಲಗ್ಗಣಿಯ ಮಗಿಯೋಳು ಬಾಲೆಯ ಕಂಡು
ಸಿವ ತನ್ನ ಜಪವ ಮರೆತಾರು

ವೊಳೆಯಲ್ಲಗ್ಗಣಿಯ ಮಗಿವೂಬಾಲೆಯ ಕಂಡು
ಸಿವ ತನ್ನ ಜಪವ ಮರೆತಾರು
ಸಿವ ತನ್ನ ಜಪವ ಮರೆತಾರು ಏನಂದಾರೆ
ಸಿವಸರಣೆ ನಿನ್ನ ಎಸರೇಳೆ

ನನ್ನೆಸರು ಗೌರಮ್ಮ ನನ್ನೆಸರು  ಪಾರ್ವಾತಿ
ಗಿರಿರಾಜರಮಗಳು ಗಿರಿಜಮ್ಮ
ಗಿರಿರಾಜರ ಮಗಳು ಗಿರಿಜಮ್ಮ ಸರಣಾರು
ನೀವು ನಮ್ಮ ಮಟಕೆ ದಯಮಾಡಿ

ನಿಮ್ಮ ಮಟವಂಬೋದು ನಾವೇನು ಬಲ್ಲೇವೆ
ನೀನು ನಿನ್ನಾ ಮಟದ ನೆಲೆಯಾನೇಳೆ

ಅವಳಾದಡ್ಡಗೋಡೆ ಮುತ್ತೀನ ಮುಂಬಾಗಲು
ಬುಟ್ಟ ರುದ್ರಾಕ್ಸಿ ಪಟ್ಟಸಾಲೆ

ಬುಟ್ಟ ರುದ್ರಾಕ್ಸಿ ಪಟ್ಟಸಾಲೆ ಸರಣಾರು
ನೀವು ನಮ್ಮ ಮಟಕೆ ದಯಮಾಡಿ

ಮುತ್ತೀನ ಸವಿಕಂತೆ ರತ್ನಾದ ಒಕ್ಕಾಲ
ನೆತ್ತೀಲಿಕೆಂಜೆಡೆಯ ಒಲವೂತ
ನೆತ್ತೀಲಿಕೆಂಜೆಡೆಯ ಒಲವೂತ ಸಿವತಾನು
ಮತ್ತೆಮರಿತೇಕು ಇಳುದಾರು

ಚಿನ್ನಾದ ಸಿವಕಂತೆ ರನ್ನಾದ ಒಕ್ಕಾಳ
ಬೆನ್ನೀಲಿಕೆಂಜೆಡೆಯ ಒಲವೂತ
ಬೆನ್ನೀಲಿಕೆಂಜೆಡೆಯ ಒಲವೂತ ಸಿವತಾನು
ಇನ್ನ ಇಳಿದಾರೆ ಮರಿತೇಕು

ಅಸುರು ಆವಿಗೆ ಮೆಟ್ಟಿ ಕುಸುಲು ಬೆತ್ತವ ಪಿಡಿದು
ಕುಸುಲದ ಕೆಂಜೆಡೆಯ ಒಲವೂತ
ಕುಸುಲದ ಕೆಂಜೆಡೆಯ ಒಲವೂತ ಸಿವತಾನು
ವೋದಾರ ಗಿರಿರಾಜರ ಅರಮನೆಗೆ

ಸಣ್ಣ ಆವೀಗೆ ಮೆಟ್ಟಿ ಚಿನ್ನ ಬೆತ್ತವ ಪಿಡಿದು
ಚಿನ್ನದ ಕೆಂಜೆಡೆಯ ಒಲವೂತ
ಚಿನ್ನದ ಕೆಂಜೆಡೆಯ ಒಲವೂತ ಸಿವತಾನು
ವೋದಾರು ಗಿರಿರಾಜರ ಅರಮನೆಗೆ

ವೊಕ್ಕಲಿಗರ ಕೇರಿಗೆ ವೋದಾರು ಸಿವತಾನು
ವೊಕ್ಕಲಿಗರ ಕೇರಿವಳಗೆಲ್ಲ
ವೊಕ್ಕಲಿಗರ ಕೇರಿವಳಗೆಲ್ಲ ಬಿಕ್ಸವ
ಮಾಡಿಬಂದಾರು ಗಿರಿರಾಜರರಮನೆಗೆ

ಬಂದರು ಗಿರಿರಾಜರ ಅರಮನೆ ಬಾಗುಲು ಮುಂದೆ
ಬಿಕ್ಸದೇವಿಯಂದು ನಿಲುತಾರೆ

ಆರೋರ ಕೇರೀಗೆ ವೋದಾರು ಸಿವತಾನು
ಆರೋರ ಕೇರಿವಳಗೆಲ್ಲ
ಆರೋರ ಕೇರಿವಳಗೆಲ್ಲ ಬಿಕ್ಸವ ಮಾಡಿ
ಬಂದರು ಗಿರಿರಾಜರ ಅರುಮನಿಗೆ

 ಬಂದರು ಗಿರಿಜಾನರಮನೆ ಬಾಗಲು ಮುಮದೆ
ದಾನ್ಯದೇವಿಯಂದು ನಿಲುತಾರೆ

ಪಟ್ಟೀದ ಸೀರೆ ವುಟ್ಟುಕಳ್ಳೆ ಗೌರಮ್ಮ
ಪಚ್ಚೇದ ಕಂಬಾದ ಎಡನಡುವೆ
ಪಚ್ಚೇದ ಕಂಬಾದ ಎಡನಡುವೆ ಗೌರಮ್ಮ
ಬಿಕ್ಸವ ನೀಡೆಯನ್ನು ಸರಣರಿಗೆ

ಸಾಲ್ಯದ ಸೀರೆ ಸುಡಿಕಳ್ಳೆ ಗೌರಮ್ಮ
ಗಾಜಿನ ಕಂಬಾವ ಎಡನಡುವೆ
ಗಾಜಿನ ಕಂಬಾವ ಎಡನಡುವೆ ಗೌರಮ್ಮ
ದಾನ್ಯ ನೀಡಮ್ಮ ಸರಣರಿಗೆ

ಪಟ್ಟೇದ ಸೀರೆ ಉಟ್ಟುಕಂಡಳು ಗೌರಮ್ಮ
ಪಚ್ಚೇದ ಕಂಬಾದ ಎಡನಡುವೆ
ಪಚ್ಚೇದ ಕಂಬಾದ ಎಡನಡುವೆ ಗೌರಮ್ಮ
ಬಿಕ್ಸವ ತಂದವಳೆ ಸರಣರಿಗೆ

ಬಿಕ್ಸವ ತಂದವಳೆ ಸರಣರಿಗೆ ಆಸಿವ
ದುಸ್ಟೀಸಿ ನೋಡವರೆ ರವೆವೊಯ್ಯೆ

ಸಾಲ್ಯೇದಸೀರೆ ಸೂಡಿಕಂಡಳು ಗೌರಮ್ಮ
ಗಾಜೀನ ಕಂಬಾದ ಎಡೆನಡುವೆ
ಗಾಜೀನ ಕಂಬಾದ ಎಡೆನಡುವೆ ಗೌರಮ್ಮ
ದಾನ್ಯ ತಂದಳೆ ಸರಣರಿಗೆ

ದಾನ್ಯ ತಂದವಳೆ ಸರಣರಿಗೆ ಆಸಿವ
ಗ್ರೇನಿಸಿನೋಡವರೆ ರವೆವೊಯ್ಯೆ

ಕನ್ನೆ ತಾನು ವೋಗಿ ಚಿನ್ನಾದ ತಟ್ಟೇವಳಗ
ಸಣ್ಣಕ್ಕಿ ಬೋನ ತಿಳಿತುಪ್ಪ
ಸಣ್ಣಕ್ಕಿ ಬೋನ ತಿಳಿತುಪ್ಪ ತಂದೈದೀನಿ
ಕಣ್ಣಬಿಡರೀಗ ಸರಣಾರು

ಅಸ್ತಕಡಗದ ನಾರಿ ಕಡಿಪತ್ರ ಬಳೆಯೋಳೆ
ಸೋತಾರೆ ಸೋಲ ಮುಡಿಯೋಳೆ
ಸೋತಾರೆ ಸೋಲ ಮುಡಿಯೋಳೆ ಎಲೆಎಣ್ಣೆ
ನಿಮ ತಾಯಿತಂದೆಗಳ ಎಸರೇಳೆ

ತಂದೆಸರು ಗಿರಿರಾಜ ತಾಯೆಸರು ಯಮದೇವಿ
ತಂದ ಪುರುಸಾರು ವರನಯ್ಯ
ತಂದ ಪುರುಸಾರು ವರನಯ್ಯ ಕೈಲಾಸದ
ನಂದೀಸ್ವರರೆ ಬಿಕ್ಸವ ಕೈಗೊಳ್ಳಿ

ಪಟ್ಟೀ ಸಾಲ್ಯಾಗ ನಮ್ಮಪ್ಪ ಕುಂತೈದಾನೆ
ಕಂಡಾರೆ ನಮ್ಮ ಬೈದಾರು
ಕಂಡಾರೆ ನಮ್ಮ ಬೈದಾರು ಸರಣಾರೆ
ತಂದಾಬಿಕ್ಸವ ಕೈಕೊಳ್ಳಿ

ಸಾಮಾಸಾಲ್ಯಾಗ ನಮತಾಯಿ ಕುಂತವಳೆ
ನೋಡಿದರೆ ನಮ್ಮ ಬೈದಾಳು
ನೋಡಿದರೆ ನಮ್ಮ ಬೈದಾಳು ಸರಣಾರು
ನೀಡೀದಿ ಬಿಕ್ಸವ ಕವುಕಳ್ಳಿ

ನೀಡಿದ ಬಿಕ್ಸವ ಪಾತ್ರಿಗಿ ನೀಡಿಸಿಕಂಡು
ವೋದಾರು ಬಸವಯ್ಯ ಬಳಿಗಾಗ

ಎಲ್ಲೋದಿರಯ್ಯ ಎಲ್ಲಿ ಬಂದಿರಯ್ಯ
ಎಲ್ಲೆಲ್ಲಿಗಯ್ಯ ನಿಮ್ಮ ಮನ ಚಿರ

ಎಲ್ಲೋದರೇನು ಎಲ್ಲಿ ಬಂದರೇನು
ಎಲ್ಲೋದರು ನಮಗೆ ವನವಾಸ

ಎಲ್ಲೋದರು ನಮಗೆ ಬಸವಯ್ಯ
ನಲ್ಲೆಂಬಗ್ರೇನಿ ನಮಗಿಲ್ಲ

ಎತ್ತ ವೋದಿರಯ್ಯ ಎತ್ತ ಬಂದಿರಯ್ಯ
ಎತ್ತೆತ್ತ ನಿಮ್ಮ ಮನ ಚಿತ್ತ

ಎತ್ತೋದರೇನು ಎತ್ತ ಬಂದರೇನು
ಎತ್ತೆತ್ತ ನಿಮ್ಮ ಮನಚಿತ್ತ

ಎತ್ತೋದರೇನು ಎತ್ತ ಬಂದರೇನು
ಎತ್ತೋದರು ನಮಗೆ ವನವಾಸ

ಎತ್ತೋದರು ನಮಗೆ ವನವಾಸ ಬಸವಯ್ಯ
ನಿಸ್ತ್ರೆಂಬ ಗ್ರೇನಿ ನಮಗಿಲ್ಲ

ಅಕ್ಕಿ ಬಿಕ್ಸಕೋಗಿ ಚಿಕ್ಕೆಣ್ಣು ನಾಕಂಡೆ
ಚಿಕ್ಕೆಣ್ಣು ನಮಗೆ ತರಬೇಕು
ಚಿಕ್ಕೆಣ್ಣು ನಮಗೆ ತರಬೇಕು ಮ್ಯಾಗಳು
ಸೃಷ್ಟೀಗೀಸ್ವರರು ನುಡಿದಾರು

ರಾಗಿ ಬಿಕ್ಸಕೋಗಿ ಎಣ್ಣು ನಾ ಕಂಡೆ
ಎಣ್ಣು ನಮಗೆ ತರಬೇಕು
ಆ ಎಣ್ಣು ನಮಗೆ ತರಬೇಕು ಮ್ಯಾಗಾಳ
ರೂಡಿಗೀಸ್ವರರು ನುಡಿದಾರೆ

ಸಣ್ಣ ಸಣ್ಣ ಪಾದಾದ ಸಣ್ಣೋಳೆ ಸಿರಿಗೌರಿ
ಬಟ್ಟಾವನುಟ್ಟು ನಡೆದಾರೆ
ಬಣ್ಣಾವನ್ನುಟ್ಟು ನಡೆದಾರೆ ಕುಂದಾಳಾದ
ಸಿಸುವಂಬುತ್ತಿದ್ದೆ ಬಸವಯ್ಯ

ಚಿಕ್ಕ ಚಿಕ್ಕಾ ಪಾದದ ಚಿಕ್ಕೋಳೆ ಸಿರಿಗೌರಿ
ಪಟ್ಟಿವಳಿಯನುಟ್ಟು ನಡೆದಾರೆ
ಪಟ್ಟಿವಳಿಯನುಟ್ಟು ನಡೆದಾರೆ ಕುಂದಾಳಾದ
ಚಿನ್ನಾದ ಗಟ್ಟ್ಯಂಬುತಿದ್ದೆ ಬಸವಯ್ಯ

ಕಂಬಳಿಕಂತ್ಯೋರು ನಿಂಬೇಕಾಯಿ ಜಡೆಯೋರು
ಮುಂದಲ ಮಂಟಪದ ಸರಣಾರು
ಮುಂದಲ ಮಂಟಪದ ಸರಣಾರು ವೋಗನುಬನ್ನಿ
ರೆಂಬೇ ಗೌರಮ್ನ ಕನ್ಯೆ ನೋಡಲು

ಕಾವಿ ಕಂತ್ಯೋರು ಬಾಳೆಕಾಯಿ ಜಡೆಯೋರು
ಮ್ಯಾಗಳ ಮಂಟಪದ ಸರಣಾರು
ಮ್ಯಾಗಳ ಮಂಟಪದ ಸರಣಾರು ವೋಗನುಬನ್ನಿ
ಗೌರಿ ಪಾರ್ವತಿಯ ವರನೋಡ

ಗಂಜಿ ಸೀರ್ಯೋರು ಗಂದದ ಬಟ್ಟಿನೋರು
ನಿಂಬ್ಯೆಕ್ಕನೆಂಬ ಸರಣ್ಯೋರು
ನಿಂಬ್ಯೆಕ್ಕನೆಂಬ ಸರಣ್ಯೋರು ವೋಗನುಬನ್ನಿ
ನಾರಿ ಗೌರೀಯ ವರ ನೋಡ

ಪಟ್ಟೀದ ಸೀರ್ಯೋರು ಮುತ್ತಿನಬಟ್ಟಿನೋರು
ಸತ್ಯೆಕ್ಕನೆಂಬ ಸರಣಾರು
ಸತ್ಯೆಕ್ಕನೆಂಬ ಸರಣಾರುವೋಗನುಬನ್ನಿ
ನಿಸ್ತ್ರೆ ಪಾರ್ವತಿಯ ಕನ್ನೆನೋಡ

ಸಾಲ್ಯದ ಸೀರ್ಯೋರು ಸಾದಿನಬಟ್ಟಿನೋರು
ಸಾಲಕ್ಕನೆಂಬ ಸರಣೇರು
ಸಾಲಕ್ಕನೆಂಬ ಸರಣೇರು ವೋಗನುಬನ್ನಿ
ದೇವಿ ಪಾರ್ವತಿಯ ವರನೋಡ

ಕಡಲೆಕಾಳಂಗೆ ಕಡೆದ ಕಟ್ಟೆಮ್ಯಾಲೆ
ಪಗಡೀಯ ಆಡಸರಣಾರು
ಪಗಡೀಯ ಆಡಸರಣಾರು ವೋಗನುಬನ್ನಿ
ಅರುದೆಪಾರ್ವತಿಯ ಕನ್ನೆನೋಡ

ವುದ್ದಿನಕಾಳಂಗೆ ತಿದ್ದಿದ ಕಟ್ಟೆಮ್ಯಾಲೆ
ವುದ್ಯೋಗ ಮಾಡ ಸರಣಾರು
ವುದ್ಯೋಗ ಮಾಡ ಸರಣಾರು ವೋಗನುಬನ್ನಿ
ಬದ್ರೆ ಪಾರ್ವತಿ ಕನ್ನೆ ನೋಡ

ಮಡಿವಾಳ ಮಾಚಯ್ಯ ಒಡನೆ ಸಂಗನಬಸವ
ಪೊಡವಿಗೀಸ್ವರರು ಸ್ರಯವಾಗಿ
ಪೊಡವಿಗೀಸ್ವರರು ಸ್ರಯವಾಗಿ ವೋಗನುಬನ್ನಿ
ಅರುದೆಗಂಗನ ವರನೋಡ

ಕುಂಬರಗುಂಡಯ್ಯ ಅಂಬಿಗರ ಚೌಡಯ್ಯ
ಸಂಗನಬಸವಣ್ಣ ಸ್ರಯವಾಗಿ
ಸಂಗನಬಸವಣ್ಣ ಸ್ರಯವಾಗಿ ವೋಗನುಬನ್ನಿ
ರೆಂಬೆ
ಪಾರ್ವತಿ ವರ ನೋಡ

ನಾಕಿಡಿವುಟ್ಟವಳೆ ನಾಕಿಡಿ ಮುಸುಗಿಟ್ಟವಳೆ
ನಂದಿಬಾವಾನ ಎಗಲೇರಿ
ನಂದಿಬಾವಾನ ಎಗಲೇರಿ ರೆಂಬೆವ್ವ
ಬಂದಾಳೆ ಸಿವಗ ವರನೋಡ

ಕೋಡುಗಲ್ಲು ಮರಡಿಯಾಗ ಕಟ್ಟುಂಡರು ಪರಿಬೋನ
ತ್ಯಾಗ ತೇಗದ ಎಲೆಯಾಸಿ
ತ್ಯಾಗ ತೇಗದ ಎಲೆಯಾಸಿ ಮುನಿಗಾಳು
ವೋದಾರು ಸಿವಗೆ ವರನೋಡ

ಮೂಡಲಿಂದ ಬಂದಾರೆ ಮೂರು ಸಾವಿರ ಮುನಿಗಳು
ಮೂಗಿನ ಮ್ಯಾಲೆ ಗರಿಗಾಳು
ಮೂಗಿನ ಮ್ಯಾಲೆ ಗರಿಗಾಳು ಸೂಡಿಕಂಡು
ಮೂಡಲಗಿರಿ ಪರ್ವತವ ಇಳುದಾರೆ

ಮೂಡಲಗಿರಿ ಪರ್ವತದ ಮ್ಯಾಲೆ ಮ್ವಾಡಾವಿಳಿದಂತೆ
ಮೂಡಲಿಂದ ಬಂದೋರು ವೋದಾರು ಗಿರಿರಾಜನರಮನಿಗೆ

ಎಲ್ಲೆಂದ ಬಂದಾರು ಅತ್ತು ಸಾವಿರ ಮುನಿಗಾಳು
ನೆತ್ತೀಯ ಮ್ಯಾಲೆ ಗಿರಿಗಾಳು
ನೆತ್ತೀಯ ಮ್ಯಾಲೆ ಗಿರಿಗಾಳು ಸೂಡಿಕಂಡು
ಬಂದರು ಗಿರಿರಾಜನರಮನೆಗೆ

ನೆತ್ತೀಯ ಮ್ಯಾಲೆ ಗರಿಗಳ ಸೂಡಿಕಂಡು
ಮುಂದಲಗಿರಿಯಪರ್ವತವ ಇಳಿದಾರೆ
ಮಂದಲಗಿರಿಪರ್ವತವ ಇಳುದು ಬಂದರಂತೆ
ಬಂದಾರು ಗಿರಿರಾಜರಮನೆಗೆ

ಎಣ್ಣೆನ ಮನೆಮುಂದೆ ಅಣ್ಯಾರೆ ಚಪ್ಪಾದ
ಅನ್ನೆರಡು ಸೇಜಿ ಬಿಗುದಾವು
ಅನ್ನೆರಡು ಸೇಜಿ ಬಿಗುದಾವು ಸುಂಗರವಾಗಿ
ಬಂದಾರೆ ಸಿವಗ ವರನೋಡ

ಬಂದಾರೆ ಸಿವಗ ವರನೋಡ ಈಯೆಣ್ಣು
ನಂದಗೀಸ್ವರಗೆ ಸಲುವೋದು
ನಂದಗೀಸ್ವರಗೆ ಸಲುವೋದು

ಕೂಸೀನ ಮನೆ ಮುಂದೆ ಆಸ್ಯಾರೆ ಅಂದಾಲ
ಏಸೊಂದು ಸೇಜಿ ಬಿಗುದಾವು

ಏಸೊಂದು ಸೇಜಿ ಬಿಗುದಾವು ಸುಂಗರವಾಗಿ
ವೋದಾರೆ ಸಿವನ ವರನೋಡ

ವೋದಾರೆ ಸಿವನ ವರನೋಡ ಈ ಹೆಣ್ಣು
ಮ್ಯಾಗಾಳವರೆಗೆ ಸಲುವೋದೆ

ಬಂದಂತ ಮುನಿಗಳಿಗೆ ಸಂಬುಕಾನಾವಾಸಿ
ಕುಂಡ್ರಲಾಕ್ಯಾರೆ ಸೆಳೆಮಂಚ
ಕುಂಡ್ರಲಾಕ್ಯಾರೆ ಸೆಳೆಮಂಚ ಮುನಿಗಳಿಗೆ
ಗಂದಾದೀಳ್ಯಾವ ಅದಮಾಡಿ

ವೋದಂತ ಮುನಿಗಳಿಗೆ ಜ್ಯಾಡಿಗಂಬಳಿಯನಾಸಿ
ಸ್ಯಾದದೀಳ್ಯವ ಅದಮಾಡಿ
ಸ್ಯಾದದೀಳ್ಯವ ಅದಮಾಡಿ ಮುನಿಗಳಿಗೆ
ಕುಂಡ್ರಲಾಕ್ಯಾರೆ ಸೆಳೆಮಂಚ

ಆಕೈಗೆರೆಯ ನೋಡಿ ಈ ಕೈಬಾವನೋಡಿ
ಮೇಲ್ಸೆರೆಗೆ ತಗದುಬೆನ್ನ ನೋಡಿ
ಮೇಲ್ಸೆರೆಗೆ ತಗದುಬೆನ್ನ ನೋಡಿ ಈ ಎಣ್ಣು
ಮ್ಯಾಗಾಳದರೆಗೆ ಸಲುವೋದೆ

ಅಂಗೈಮೆರೆಯ ನೋಡಿ ಮಯಂಗೈಬಾವ ನೋಡಿ
ಮುಂಜೆರಗ ತಗದು ಬೆನ್ನನೋಡಿ
ಮುಂಜೆರಗ ತಗದು ಬೆನ್ನನೋಡಿ ಈ ಎಣ್ಣು
ಮಂದಲಗಿರಿಗೆ ಸಲುವೋದೆ

ಆಳಂಕನೋಡಿ ತೋಳುಬಾವ ನೋಡಿ
ತೋಳಿನಮ್ಯಾಗಳ ಕಿರಿಯ
ತೋಳಿನಮ್ಯಾಗಲ ಕಿರಿಯ ಮಚ್ಚೆನೋಡಿ
ರೇವಣ್ಣೆಸ್ವರಗೆ ಮಗಳ ಕೊಡಿರೆಂದರು

ಕಣ್ಣುಬ್ಬನೋಡಿ ಕೆನ್ನೆಬಾವ ನೋಡಿ
ಬೆನ್ನು ಮ್ಯಾಗಳ ಕರಿಯ
ಬೆನ್ನು ಮ್ಯಾಗಳ ಕರಿಯ ಮಚ್ಚೆ ನೋಡಿ
ಚೆನ್ನನೀಸ್ವರಗೆ ಮಗಳ ಕೊಡಿರಂದರು

ರಾತ್ರೀಯಾಗಾಲಿ ತೋಪುತಲ್ಲಣಿಸಾಲಿ
ರಾತ್ರಿ ನಕ್ಸತ್ರ ಮುಣುಗಾಲಿ
ರಾತ್ರಿ ನಕ್ಸತ್ರ ಮುಣುಗಾಲಿ ಕೈಲಾಸದ
ಮಾತಿನ ಬಸವಯ್ಯ ಬರಲಿಲ್ಲ

ಮಾತಿನ ಬಸವಯ್ಯ ಬರಲಿಲ್ಲ ಬರತಂಕ
ಮಾತಿಲ್ಲದ ಮಗಳ ಕೊಡಲಾರೆ

ಸಂಜೆಯಾಗಲಿ ತೆಂಗುತಲ್ಲಣಿಸಾಲಿ
ಸಂಜೆನಕ್ಸತ್ರ ಮುಣುಗಾಲಿ
ಸಂಜೆನಕ್ಸತ್ರ ಮುಣುಗಾಲಿ ಕೈಲಾಸದ

ತಂದೆ ಬಸವಯ್ಯ ಬರಲಿಲ್ಲ ಬರತಂಕ
ಮಾತಿಲ್ಲದ ಮಗಳ ಕೊಡಲಾರೆ

ತೆಂಗಿನ ಮರಕ ತಂಗಾಳಿ ಬೀಸಿದಂಗ
ಬಂಗಾರಕ ಮುತ್ತು ಸರಿದಂಗೆ
ಬಂಗಾರಕೆ ಮುತ್ತು ಸರಿದಂಗೆ ಬಸವಯ್ನೋರು
ಜಂಗಮರ ನಡುವೆ ಬರುತಾರೆ

ಬಾಳೀಯಮರಕ ಮ್ಯಾಗಾಳಿ ಸೋಕಿದಂಗೆ
ಲ್ಯಾವುಣಕ ಮುತ್ತು ಸರಿದಂಗೆ
ಲ್ಯಾವುಣಕ ಮುತ್ತು ಸರಿದಂಗೆ ಬಸವಯ್ನೋರು
ಆರೋರ ನಡುವೆ ಬರುತಾರೆ