ಗಂಗೇಯ ಸೀರೆಗಳು ತಂದಂತ ನಿಸ್ತ್ರೇರು
ನಿರುಗಿಡುದಾರು ಅಲ್ಲಿದ್ದಂತ ನಿಸ್ತ್ರೇರು
ನಿರುಗಿಡುದಾರು
ಗಂಗೇಯ ಸೀರೆ ರೆಂಬೇಯ ನಿಜಗೆಂಪಿನೊಪ್ಪಿ
ಅಂದಾವಿರಲಿಯೆಂದಾಳು

ಬಣ್ಣಾದಿಕ್ಕುಳಿಗೆ ತಂದಾದಾರೀರು ಕೊನ್ನೆಕೊರಳನ್ನ
ಬಾಚಿ ಸಣ್ಣಾಮಲ್ಲಿಗೆ ವೂವು ಅಳವಳಿಸಿ
ಮುಡಿಸ್ಯಾರೆ ಸೇಲೂಮುಡಿಗೆ

ಮುತ್ತೀನಿಕ್ಕುಳಿಗೆ ತಂದಾದಾದೀಯ ನೆತ್ತಿಯೆನ್ನ
ಬಾಚಿ ಅಚ್ಚಾ ಮಲ್ಲೀಗೆ ವೂವು ಅಳವಡಿಸಿ
ಮುಡಿಸ್ಯಾರೆ ಸೋಲು ಮುಡಿಗೇ

ಗುಡುಗುಡು ಗುಮ್ಮಟಸೀರೆ ದ್ರೋಪದಿಗೆ ಸಿಡಿಲು
ಮಿಂಚಿನಕುಪ್ಪಸ ದ್ರೋಪದಿಗೆ
ನಡೆದೂ ಬಂದು ಗುಟುಕ ಕೊಡುವಂತ
ಮಾಟಕದ ಕಡಗವ ನಿಟ್ಟಾಳು

ಗುಡುಗುಡು ಗುಮ್ಮಟ ಸೀರೆ ದ್ರೋಪದಿಗೆ ಸಿಡಿಲು
ಮಿಂಚಿನಾ ಕುಬುಸಾ ದ್ರೋಪದಿಗೆ
ನಡೆದೂಬಂದು ಗುಟುಕು ಕೊಡುವಂತ
ಮಾಟಕದ ವಾಲೆಯನಿಟ್ಟಾಳು ದ್ರೋಪದಿ

ಗುಡುಗುಡು ಗುಮ್ಮಟಸೀರೆ ದ್ರೋಪದಿಗೆ ಸಿಡಿಲು
ಮಿಂಚಿನ ಕುಬುಸ ದ್ರೋಪದಿಗೆ
ಆರಿಬಂದು ಗುಟುಕು ಕೊಡುವಂತ
ಮಾಟಕದ ಬಂದಿಯನಿಟ್ಟಾಳು ದ್ರೋಪದಿ

ಗುಡುಗುಡು ಗುಮ್ಮಟಸೀರೆ ದ್ರೋಪದಿಗೆ ಸಿಡಿಲು
ಮಿಂಚಿನಾ ಕುಬುಸ ದ್ರೋಪದಿಗೆ
ಏರಿಬಂದು ಗುಟುಕು ಕೊಡುವಂತ
ಮಾಟಕದ ವಡವೆಗಳ ನಿಟ್ಟಾಳು ದ್ರೋಪದಿ

ಮಲ್ಲಕ್ಕನ ಮಗಳೇ ಬಾರೆ ನಿನಗೊಂದು ಮಲ್ಲಿಗೆ
ಸರವಾ ಕೊಡುವೆ ನಿನಗೊಂದು ಮಲ್ಲಿಗೆ ಸರವಾ

ಕೊಡುವೆ ಸೂವರ್ಣದ ಸೀರೆ ಕೊಡುವೇ
ನಲ್ಲೆ ನೀನು ಬಾರೇ

ಕೆಂಚಕ್ಕನ ಮಗಳೇ ಬಾರೆ ನಿನಗೊಂದು ಸಂಪೀಗೆ
ಸರವಾ ಕೊಡುವೆ ಸಂಪೀಗೆ ಸೂವರ್ಣದ ಸೀರೇಯ
ಕೊಟ್ಟೇನು ಕೆಂಚೀಯ ಮಗಳು
ನಲ್ಲೇ ನೀನು ಬಾರೇ

ದಾಯಾದ ಸಾಲುಗಳನೇರಾಲಾರೆನು ತಂಗಿ
ಏರಾಲಾರೆನೆನುತಾಲಿ ಲೆತ್ತಾಸಾರಿಗಳ ನೇರಾ
ಇಪ್ಪೆವೂವುತಂದು ಏಣಿಕಾಲ ಮಾಡಿಟ್ಟಿಡಿದು
ಎಳಕಂಡು ಮ್ಯಾಲೆಮ್ಯಾಲೆಯತ್ತುತ್ತಾರೋ
ಸುಕುಮಾರೀಯ
ರಾಯಾ ನಾವಿಬ್ಬರು ಆಡಂತ ಆಟಕ
ಸೋಲುವು ಗೆಲುವೆಲ್ಲಾದಾರುಂಟೇ

ಜೊತೀಲಿಗೆಣೆಯರುಂಟೆ ಮತ್ತೆ
ಪರದಾನಿರುಂಟೆ ಎನ್ನರಸಿಮತ್ತೆ
ಪರದಾನಿರುಂಟೇ

ನಿಸ್ತ್ರೇ ನಾವಿಬ್ಬರು ಆಡಂತ ಆಟಕ
ಸೋಲುಗೆಲುವುಂಟೇ
ರಾಯ ನಾವಿಬ್ಬರು ಆಡಂತ ಆಟಕ
ಸೋಲು ಗೆಲುವುಂಟೇ
ವಾರಿಲೀ ಗೆಳೆಯರುಂಟೇ ಎನ್ನರಸಿಮ್ಯಾಲೆ
ಪರದಾನಿರುಂಟೇ
ನಾರಿನಾವಿಬ್ಬರೂ ಆಡಂತ ಆಟಕ
ಗೆಲುವೆಲ್ಲರುಂಟೇ

ಜೊಡೀಲಿಗೆಣೆಯರುಂಟೇ ಎನ್ನರಸಿಮ್ಯಾಲೆ
ಪರದಾನಿರುಂಟೆ ನಿಸ್ತ್ರೇ ನಾವಿಬ್ಬರು
ಆಡೂವಂತ ಆಟಕ ಸೋಲು ಗೆಲುವುಂಟೇ
ನಿಸ್ತ್ರೇ ಆಕಿದಲೆತ್ತ ಮೂಡಲು ಪಟಮಿಂಚು
ಮಿಂಚೀದಂಗೇ ಮೂಡಲು ಪಟಮಿಂಚು ಮಿಂಚೀದಂಗೆ
ಚಿಕ್ಕದ ಸಿಳ್ಳುಗರಲಿ ಬೈತಲೆಯ ತಗುದಂಗೆ
ನಿಸ್ತ್ರೇ ಆಕ್ಯಾಳು ಲೆತ್ತಾವಾ

ನಾರೀಯ ಕಿರಿದಾಯ ಮೂಡಾಲು ಎಳೆಮಿಂಚು
ಮಿಂಚೀದಂಗೇ
ಚಿಕ್ಕುದ ಸಿಳ್ಳುಗರಲಿ ಬೆತ್ತಲೆಯಾತಗುದಂಗೆ
ಕೆಂಚೆ ಆಕ್ಯಾಳು ದಾಯಾವ

ಎತ್ತಲಿಂದ ಬಂದೀರಯ್ಯ ನೀವೆರಡು
ಮುತ್ತೀನರುಣಾದ ಗಿಣಿಗಾಳು
ಮುತ್ತಪಲ್ಲಣೀಸಿದಂಗೆ ಗರಿಯಾಪಲ್ಲಣಿಸೂತ
ಬಂದೀರಲ್ಲರಮಾನಿಗೇ
ಗೋವಿಮಲೆನಾಡಲಿಂದ, ನಾವಿರುವೋದು ಯಾಲಕ್ಕಿ
ತೋಪಿಂದ, ಬಾವ ಅರುಜುಣರಾಯ
ಅತಿಚೆಲ್ವರಾ ನಾವು ನೋಡಲು ಬಂದೇವು
ಎಲ್ಲಿಂದಾ ಬಂದಿರಯ್ಯ ನೀವೆರಡು
ಮಲ್ಲಿಗಿಯರುಣಾದ ಗಿಣಿಗಾಳು
ಮಲ್ಲಿಗೆ ಪಲ್ಲಣಿಸಿದಂಗೆಗರಿಪಲ್ಲಣಿಸೂತ
ಬಂದಿರರಮನಿಗೇ
ಗುತ್ತಿಮಲೆನಾಡಾಲಿಂದ, ನಾವಿರುವೋದು
ವುತ್ತಿತ್ತಿತೋಪಿಂದ, ಅಕ್ಕಾದ್ರೋಪದಿ
ಅತಿ ಚೆನ್ವಾರೆಂದಾರು ನೋಡಾಲು ಬಂದೇವು
ದಾಯಾ ಒಬ್ಬರಮ್ಯಾಲೆ ರಾಯರಿಗೆ ಗೀಲು
ಇಬ್ಬರ ಮ್ಯಾಲೆ ಅತ್ತಾಲವರಾಸದನ
ನಿಸ್ತ್ರೇರಿಬ್ಬಾರೈದಾರೆ
ಮುಟ್ಟಾಲಿಲ್ಲ ಅವರಾಮನಿಗೆ ಓಗಾಲಿಲ್ಲ
ನಿನ್ನಂತೆಯರಲ್ಲಾ ಕಾಣೆ
ದಾಯಾವೊಬ್ಬರ ಮ್ಯಾಲೆ ರಾಯರಿಗೆ ಗೀಲು
ಇಬ್ಬರ ಮ್ಯಾಲೆ ರಾಯರಿಗೆ ಗೀಲು
ಇಬ್ಬರ ಮ್ಯಾಲೇ

ಆರೊರುಸಾದವರ ನಾನೋಗಿ ನಾರಿರಿಬ್ಬರ
ತಂದೆನವರಾನಿನ್ನು ಕಾಣಾಲಿಲ್ಲ
ಮುಟ್ಟಲಿಲ್ಲ ಅವರಾಮನಿಗಿನ್ನೂ ವೋಗಿಲ್ಲ
ನಿನ್ನಂತೆಯವರೆಲ್ಲಾ ಕಾಣೇ

ಬೇಲಿಮ್ಯಾಗಳಬುರುಡೆ ಜೋಗಯ್ಯಗೆ ಬೆಟ್ಟದ
ಮ್ಯಾಗಳ ಬಿದಿರು ಸಣ್ಣೆನ ಜಡೆಗಾಳು
ನನ್ನವನೆ ಜೋಗ್ಯಾಗಿ ವೋಗಯ್ಯನೆಂದಾಳು
ಒಂದೊಂದು ಮುತ್ತಿಟ್ಟಾಳೆ ಅದರಂದಾಕೆ
ಒಂದೊಂದು ರವರತ್ನಾದರಳಾನಿಟ್ಟಾಳೆ
ಒಂದೂರ ಜೋಗಿಯೋಗೆಂದಾಳೇ

ಎರಡೆರಡು ಮುತ್ತಿಟ್ಟಾಳೆ ಅದರಂದಾಕೆ
ಎರಡೆರಡು ರವರತ್ನಾದರಳಾನಿಟ್ಟಾಳೆ
ಎರಡೇನ ಮುತ್ತೀನ ನಡುವಾಕೆ ಸೊಂಕಿಟ್ಟು
ಎರಡೂರ  ಜೋಗಿಯೋಗೆಂದಾಳೆ

ಮುರುಮುರು ಮುತ್ತಿಟ್ಟಾಳೆ ಅದರಂದಾಕೆ
ನಾಕು ನಾಕು ರವರತ್ನಾವೆ
ನಾಕೇನೆ ಮುತ್ತೀನ ನಡುವಾಕೆ ಸೊಂಕಿಟ್ಟು
ನಾಕೂರ ಜೋಗಿಯೋಗೆಂದಾಳೆ

ಐದೈದು ಮುತ್ತಿಟ್ಟಾಳೆ ಅದರಂದಾಕೆ
ಐದೈದು ರವರತ್ನಾವೆ
ಐದೇನೆ ಮುತ್ತೀನ ನಡುವಾಕೆ ಸೊಂಕಿಟ್ಟು
ಐದೂರ ಜೋಗಿಯೋಗೆಂದಾಳೇ

ಆರಾರು ಮುತ್ತಿಟ್ಟಾಳೆ ಅದರಂದಾಕೆ
ಆರಾರು ರವರತ್ನಾವೆ
ಆರೇನ ಮುತ್ತೀನ ನಡುವಾಕೆ ಮುತ್ತೀನ ಸೊಂಕಿಟ್ಟು
ಆರೂರ ಜೋಗಿ ಆಡಂದಾಳೆ

ಕಣಕಾಲು ಕುಣಿದಾಡೂತ ಜೋಗಯ್ಯ
ಮಣಿಪದ್ಮನೀಡಾಡೂತ ಅಬ್ರಾದಿಂದಲಿ
ತನ್ನಾ ಅಡದಮ್ಮನೆದುರೀಗೆ ನಾಟ್ಯಾವಾಡೂತ
ಗಾಜೀನ ಉಪ್ಪರಿಗೆಗಳ ಕುಂತ್ಯಮ್ಮ ಯಾರು
ಕಟ್ಟಿಸಿದರೇಳೆ ಕುಂತ್ಯಮ್ಮ ಯಾರು ಕಟ್ಟಿಸಿದರೇಳೆ
ಸೂಳೆಮನೆಯಾಗಿರುವೋ ಅರುಜುಣ ರಾಯರು
ಕಟ್ಟಿಸಿದುಪ್ಪರಿಗೆಯಪ್ಪೊ

ಬಣ್ಣಾದ ಚಾವಡಿಗಳು ಕುಂತ್ಯಮ್ಮ ಯಾರು
ಕಟ್ಟಿಸಿದರೇಳೆ ಕುಂತ್ಯಮ್ಮ ಯಾರು ಕಟ್ಟಿಸಿದರೇಳೆ
ಸೂಳೆಮನೆಯಾಗಿರುವೋ ಅರುಜುಣ ರಾಯರು
ಕಟ್ಟೀಸಿದ ಚಾವುಡಿಯಪ್ಪ

ಕಣ್ಣು ಕಾಮನೋಲಿಕೆ ಜೋಗಯ್ಯ ಬೆನ್ನು
ಬೀಮಾನೋಲೀಕೆ ನಮ್ಮೇನೆ ಅರುಮನಿಗೆ
ಗುರುಜೋಗಿ ಬಂದವನೆ ಅರುಜುಣನ
ಕರೆದು ಬನ್ನಿ
ನಮ್ಮೇನೆ ಅರುಮನಿಗೆ ಗುರುಜೋಗಿ ಬಂದವನೇ
ಅರುಜುಣ ಕರೆದುಬನ್ನಿ
ಬಡಬಡನೆ ವೋದಾರವರು ಎಂಬತ್ತೇಳಗಡೀಯ
ಬಾಗುಲದಾಟಿ, ಎಂಬತ್ತೇಳ ಗಡಿಯ ಬಾಗಲುದಾಟಿ
ಕರಿಯೇನೇ ಕನ್ನೂಡಿಯರುಗೀಲಿತಾವು
ನಿಂತು ಕರೆದರಂತೆ

ಆಲುಬೋನಾವನುಂಡು ಅವರಿನ್ನಲವತ್ತೀಳ್ಯವಮೆದ್ದು
ಅವರಿನ್ನ ನಲವತ್ತೀಳ್ಯವಮೆದ್ದು
ತೂಗೇನ ಮಂಚದಲಿ ಮಲಗಿರುವ ರಾಯನ
ಕೂಗಿ ಎಬ್ಬಿಸಲಾರೇ
ತುಪ್ಪ ಬೋನವನುಂಡು ಅವರಿನ್ನ ಇಪ್ಪತ್ತೀಳ್ಯವ ಮೆದ್ದು
ಅವರಿನ್ನ ಇಪ್ಪತ್ತೀಳ್ಯವಮೆದ್ದು
ಪಟ್ಟೇನ ಮಂಚದಲಿ ಮಲಗಿರುವ ರಾಯನ
ಮುಟ್ಟಿ ಎಬ್ಬಿಸಲಾರೆ

ಬಡಬಡನೆ ಬಂದವರು ಎಂಬತ್ತೇಳಗಡಿಯ
ಬಾಗುಲದಾಟಿ ಎಂಬತ್ತೇಳ ಗಡೀಯ ಬಾಗುಲದಾಟಿ
ಕರಿಯೇನೆ ಕನ್ನೂಡಿಯರುಗೀಲಿ ತಾವು ನಿಂತು
ಅರುಜುಣರು ಬರಲೊಲ್ಲರಂತೆ

ಯಾವೋಳೆ ಏಳಿದವಳು ನಿಮಕುಟ್ಟೆಯಾವಳೇ
ತಿಳಿದವಳು ಯಾವಳೆ ನಿಮಕುಟ್ಟೆ
ಏಳಿ ಪೇಳಿವಳು, ರಕ್ಕಸ ಬೀಮನೆದ್ದಾನೆ
ವುಟ್ಟು ಬಂಡೇಯಮ್ಯಾಲೆ ನಾನಿನ್ನ ಕುಟ್ಟಿ
ಗೋರಿಗಳನೇರಿಸೂವೆ

ರಾಯನಿಟ್ಟುರುವೊಳೆದುರೀಗೆ ಬಂದಾರೆ
ಜುಟ್ಟುನಿಡಿದು ಗಟ್ಟಿಸೂವೆ
ಯಾವಳೇ ಏಳಿದೋಳು ನಿಮಕುಟ್ಟೆಯಾವಳೇ
ಪೇಳಿದವಳು ನಿಮಕುಟ್ಟೆಯಾವಳೇ ಪೇಳಿದವಳು
ರಕ್ಕಸ ಬೀಮನಿದ್ದಾನೆ

ಅವಳೇನೆ ಮಂಡೆಯಾಮ್ಯಾಲೆ ನಾನಿನ್ನು
ನೀರಕೊಡಗಾಳನೊರಿಸೂವೆ
ರಾಯನಾಳಿರುವೊಳ ಏಳೆದುರೀಗೆ ಬಂದಾರೆ
ತೋಳಿಡಿದು ಗಟ್ಟಿಸೂವೆ
ಕಣಕಾಲು ಕುಣಿದಾಡೂತ ಜೋಗಯ್ನ
ವುಬ್ಬೆರಡು ನಲಿದಾಡುತ
ಜೋಗಯ್ಯ ಕಣಕದಿಂದಡದಮ್ಮ ನೆದುರೀಗೆ
ಬಳುಕಿ ನಾಟ್ಯವಾಡೀದ

ಕಣಕಾಲದಿಂದಲಿ ತನ್ನ ಅಡದಮ್ಮನೆದುರೀಗೆ
ಬಳುಕಿ ನಾಟ್ಯವಾಡೀದ
ಕಣಕಾಲು ಕುಣಿದಾಡೂತ ಜೋಗಯ್ಯ
ಮಣಿಪದ್ಮನೀಡಾಡೂತ ಅಬಾದಿಂದಲಿ
ತನ್ನ ಅಡದಮ್ಮನೆದುರೀಗೆ ನಾಟ್ಯವಾಡೀದ

ಲೆತ್ತವಾಡಲು ನಮರಾಯ ಇತ್ತಿತ್ತ
ಬಂದನಮ್ಮ ನಮರಾಯ ಇತ್ತಿತ್ತ
ಬಂದನಮ್ಮ
ಇತ್ತಿತ್ತ ಬರನೇ ಲೋಕವೆತ್ತ ನೋಡನೆ ಕನ್ನೆ
ಬಿಟ್ಟಿಗಲವಲ್ಲನೇ
ದಾಯವಾಡುತಲಿ ನಮರಾಯ ಇಂಗೆನ್ನ
ಬರನಮ್ಮ ನಮರಾಯ ಇಂಗೆನ್ನ
ಬರನಮ್ಮ
ಕಣ್ಣೆತ್ತಿ ನೋಡನೆ ಮತ್ತೆ ಕನ್ನೆ ಬಿಟ್ಟು
ಆಗಲಿಬರವಲ್ಲನೇ
ಗಿಣ್ಣು ಗಾಜುತಾರೆ ಅಕ್ಕ ನಮಗೆ ಸಣ್ಣೆಳೆಯ
ದಾರತಾರೇ ಅಕ್ಕ ನಮಗೆ ಸಣ್ಣೆಳೆಯ
ದಾರತಾರೇ
ಚೆನ್ನಿಗನರುಜುಣರಾಯನ ರೂಪು ಬರವಂತ
ರೂವಾರಿನ ಕರಸೇ
ಬಟ್ಟಲಾ ಗಾಜುತಾರೆ ಅಕ್ಕ ನಮಗ ಬುಟ್ಟೆಳೆಯ
ದಾರತಾರೇ
ದಿಸ್ಟರರಜುಣರಾಯ ಪತಿರೂಪು ಬರುವಂತ
ರೂವಾರಿನ ಕರಸೇ
ವುಪ್ಪರಿಗೆ ಅತ್ತಲೇನೆ ಅಕ್ಕ ನಾನು ಕತ್ತಡಿಯ
ಬೀಳಲೇನೇ ಅಕ್ಕ ನಾನು ಕತ್ತಡಿಯ ಬೀಳಲೇನೆ
ದಿಸ್ಟ ಅರಜುಣರಾಯ್ರು ಬರುವಂತ
ಆದೀಗೆ ವುಂಡಾಲಗಲ್ಲು ಆಯಲೇನೆ

ವುಪ್ಪರಿಗೆ ಅತ್ತ್ಯಲ್ಯಾಕ ತಂಗಿ ನಾನು ಕತ್ತಡಿಯ ಬೀಳಲ್ಯಾಕ
ತಂಗಿ ನೀನು ಕತ್ತಿಡಯ ಬೀಳಲ್ಯಾಕ
ದಿಸ್ಟರರಜುಣರಾಯ್ರು
ಬರುವಂತ ಆದೀಗೆ
ವುಂಡಾಲಗಲ್ಲು ಆಯಲ್ಯಾಕೆ

ವಾವುರಿಗೆ ಅತ್ತಲೇನೆ ಅಕ್ಕ ನಾನು ತೋಳಡಿಯ
ಬೀಳಲೇನೆ ತೋಳಡಿಯ ಬೀಳಲೇನೆ
ಅರ್ಜುನರಾಯ್ರು ಬರುವಂತ ಆದೀಯ
ಜೋಡುಗಲ್ಲಾಯಲೇನೆ
ವುಪ್ಪರಿಗೆ ಅತ್ತಲ್ಯಾಕ ತಂಗಿ ನೀನು ತೋಳಡಿಯ
ಬೀಳಲ್ಯಾಕೆ

ದೀರರರುಜುಣರಾಯ್ರು ಬರುವಂತ ಆದೀಗೆ
ಜೋಡುಗಲ್ಲಾಯಲೇಕೆ

ಕೆನ್ನೆಗಮರೀದ ರಾಮಯ್ನ ಕುಂತು
ಅಲ್ಲೀಯೇನೆ ಸುದ್ದಿ ಇಲ್ಲಿ ಏಳುವರೇನೋ

ಬಟ್ಟ ಬೋರಲಾಗಳುವಾಳು ರಾಮಯ್ಯ
ಅಲ್ಲಿಯೇನೆ ಸುದ್ದಿಯನಿಲ್ಯಾಕೆ ಏಳೀದೆ
ಅತ್ತಕಾಲು ಸುದ್ದೀಯನಿತ್ತಾಲು ಏಳುವರೇನ
ವುಚ್ಚುರಾಮಯ್ಯ ಬಂದು ನೀನು

ಒಳ್ಳೆಯೋರ ಮಗಳೆಂದು ಅನಿಸಿಕೊಂಡರ ಸಾಕು
ಇನ್ನೊಬ್ಬರೊಚ್ಚೀಗೆ ಬರದಂಗ
ಸುಗುಣವಂತಾರ ಮಗಳೆಂದು ನಿನ್ನೀಗೆ
ಮುತ್ತೈದಿತನವೊಂದು ಸಾಕು

ಉತ್ತಮರ ಮಗಳೆಂದು ಅನಿಸಿಕೊಂಡರೆ ಸಾಕು
ಇನ್ನೊಬ್ಬರೊಚ್ಚೀಗೆ ಬರದಂಗ
ಕಣಕಾಲು ಕುಣಿದಾಡೂತ ಜೋಗಯ್ಯ
ಮಣಿಪದ್ಮವನೀಡಾಡೂತ
ಅಬ್ರದಿಂದಲಿ ತನ್ನ ಮಡದೀರೆದುರೀಗೆ
ಬಗ್ಗಿ ನಾಟ್ಯವಾಡೀದ

ಕಣಕಾಲು ಕುಣಿದಾಡೂತ ಜೋಗಯ್ಯ
ವುಬ್ಬೆರಡುವಾಡೂತ
ಅಬ್ರದಿಂದಲಿ ತನ್ನ ಮಡದೀರೆದುರೀಗೆ
ಬಳುಕಿ ನಾಟ್ಯವಾಡೀದ

ತಾಯಿಗಳು ನಿಮಗಿಲ್ಲವೇ ಎಲೆಎಣ್ಣೆ
ತಂದೆಗಳು ನಿಮಗಿಲ್ಲವೇ ಎಲೆಎಣ್ಣೆ
ತಾಯಿತಂದೆಗಳು ನಿಮಗಿಲ್ಲವೇ

ಯಾರ್ಯಾರು ಇಲ್ಲಾದ ಪಾತುರದ ಸೂಳೇರು ಆಗಿ ನೀವು
ತಿರುಗುತ್ತೀರಿ ನೀವಲ್ಲ
ನಮ್ಮೇನೆ ಅರುಮನಿಗೆ ಅಕ್ಕಯ್ಯ ಗುರುಜೋಗಿ
ಬಂದೌನೆ ಅಕ್ಕಯ್ಯ ಗುರುಜೋಗಿ
ಬಂದೌನೆ ಅಕ್ಕಯ್ಯ

ಏನೇನು ಪಡಿಗಳ ನೀಡು ನೀಡಲಿಬಾರೆ ಅಕ್ಕ
ನೀನೆ ಬಂದು ನೀಡುಬಾರೆ
ದೊಡ್ಡೋನೆ ಚಿತರಂಗಿ ದೊಡ್ಡೋನೆ
ದೊಡ್ಡಕ್ಕಿ ಪಡಿಯನೀಡೆ
ಸಣ್ಣೀನೆ ಸ್ವಾರಿಗಳ ಚತರಂಗಿ ಸಣ್ಣೆನ
ಸಣ್ಣಕ್ಕಿ ಸ್ವಾರಿಗಳ ಚತರಂಗಿ ಸಣ್ಣೆನ
ಸಣ್ಣಕ್ಕಿ ಪಡಿಯನೀಡೆ
ದೊಡ್ಡೋನೆ ಮೊರುದಾಗೆ ದೊಡ್ಡಕ್ಕಿಪಡಿ
ಚಿತರಂಗಿ ದೊಡ್ಡಕ್ಕಿಪಡಿಯಾತಂದು
ಕೊಳ್ಳ ಕೊಳ್ಳಣ್ಣ ಜೋಗಿ

ಅಣ್ಣ ಅನ್ನದೀರೆ ಎಲೆ ಎಣ್ಣೆ ನಿಮ್ಮಣ್ಣನ
ಬಾವ ಮೈದುನ ನಾನು ಎಲೆ ಎಣ್ಣೇ
ನಿಮ್ಮಣ್ಣನ ಬಾವ ಮೈದುನನು ನಾನು

ಸಣ್ಣನೆ ಮರುದಾಗೆ ಸಣ್ಣಕ್ಕಿ ಪಡಿತಂದು
ಚಿತರಂಗಿ ಕೊಳ್ಳ ಕೊಳ್ಳಪ್ಪ ಅಯ್ಯ
ಕೊಳ್ಳ ಕೊಳ್ಳು ಅಪ್ಪಜೋಗಿ

ಅಪ್ಪಅಪ್ಪ ಅನ್ನದೀರೆ ಎಲೆ ಎಣ್ಣೆ ನಿಮ್ಮಪ್ನ
ಅಳಿಯ ಕಾಣೆ ನಾನು
ಅವ್ವವ್ವ ನೋಡವ್ವ ಜೋಗಯ್ಯನ ಸೊಕ್ಕ
ತಾನು ಮನಬಂದಂಗೆ ಮಾತಾಡುತಾನೆ
ಅಕ್ಕಕ್ಕ ನೋಡಕ್ಕ ದಾಸಯ್ನ ಸೊಕ್ಕ
ಪಕ್ಕದಲಿ ನಿಂತು ಕೆಟ್ಟಮಾತಾಡುತಾನೆ
ಕುಸುಮಂಗಿ ಬಂದಾಳೋ ಬಂದು ಜೋಗಯ್ನ
ಮಾತ ಕೇಳ್ಯಾಳೋ

ಜೋಗಯ್ನ ಮಾತ ಕೇಳೂತ ಅರುಜುಣ
ದೇವನಾ ಸತಿಗಳು ನಾವು ಪಾತರದ ಸೂಳೆರೆಲ್ಲ
ಕಟ್ಟೀದ ಮಿಕಗಾಳ ಜೋಗಯ್ನಮ್ಯಾಲೆ
ಬಿಡಿಸ್ಯಾರೆ
ದ್ರೋಪಾತಿಯರು ಮನಿಸೇರಿ ಅಕ್ಕ
ನನ್ನ ಚಲುವಗಂಡಾನ ಕಳುಹೆ
ಅಕ್ಕಗಳೆ ನಿಮಗಂಡ ನಿಮ್ಮಲ್ಲೆ ಬಂದಾನೋ
ಜೋಗಯ್ನಾಗಿವೋಗಿ ಕಾಣೀರಮ್ಮ
ಬಂದಂತ ಕುಂತ್ಯಮ್ಮಾಗೆ ಅಕ್ಕ ದ್ರೋಪದಿ
ತಾಯಮ್ಮ ನಿನಮಗ ನಿಮ್ಮಲ್ಲೆ ಬಂದಾನೋ
ಜೋಗಯ್ನಾಗಿ ವೋಗಿ ಕಾಣಿರಮ್ಮ

ಜೋಗಯ್ಯನರುಜುಣರಾಯರಾಗಿ
ಚಿರತಂಗಿ ಕುಸುಮಂಗಿಯೂರಗೆ
ಮತ್ತೆ ತಾಯಿ ಕುಂತ್ಯಮ್ಮಾಗೆ
ಚಂದದಿಂದಲಿ ಕಾಣೀಸಿಕೊಳುತಾರು
ಮತ್ತೆ ಚಂದದಿಂದಲಿ ಕಾಣಿಸಿಕೊಳುತಾರು

ಇಟ್ಟೀನೆ ಗಟ್ಯಂಗ ಮೂಡಿದನು ಸೂರಿದನು
ಸುತ್ತೇಳು ಲೋಕ ಸಮುರಕ್ಸಣಾ ಮಾಡುವೋನು
ಸುತ್ತೇಳು ಲೋಕ ಸಮುರಕ್ಸಣಾ ಮಾಡುವಂತೆ
ಪಾಂಡವರೆಯಿದಾರೆ ಮಂಗಳಾ ಜಯಮಂಗಳಾ
ಬೂಮ್ಯಮ್ಮನಮತಾಯಿ ಆಕಾಸನಮತಂದೆ
ಮ್ಯಾಲೆ ಪಂಚಪಾಂಡವರ ಕರುಣಮಂಗಳ ಜಯಮಂಗಳಾ
ಬೂಮ್ಯಮ್ಮಗ ಕೈಯ್ಯ ಮುಗಿತೇವು ತಂದೇಗ ಮುಗಿತೇವು
ಜನರೆಲ್ಲ ನಿಚ್ಚಸುಕಿಗಾಳು ಮಂಗಳಾ ಸುಬಮಂಗಳಾ