ಜನಪದರ ಕಥನ ಕಲೆ ಆಶ್ಚರ್ಯಗೊಳಿಸುವಂಥದು. ರಾಮಾಯಣ ಮಹಾಭಾರತದಿಂದ ಹಿಡಿದು ಒಂದು ಊರಿನ, ಒಂದು ಗುಡಿಯ ಸಂಬಂಧದ ಕಥೆ ಹೇಳುವಾಗೆಲ್ಲ ಅವರ ವಿಚಿತ್ರ ಕಲ್ಪನಾಶಕ್ತಿ ಎಣೆಯಿಲ್ಲದಂತೆ ಕೆಲಸ ಮಾಡುತ್ತದೆ. ಹೀಗಾಗಿಯೇ ಜನಪದರ ಪರಂಪರೆಯಲ್ಲಿ ಕಲ್ಪನೆಯ ಹಿನ್ನೆಲೆಯ ಐತಿಹ್ಯ, ದಂತಕಥೆ, ಜನಪದ ಕಥೆಗಳು ಅಸಂಖ್ಯಾತವಾಗಿವೆ. ಗಂಜಿಗಟ್ಟೆ ಎಂಬ ಹೆಸರು ಬಂದದ್ದು ಏಕೆಂದರೆ ಇಂಥವನೊಬ್ಬ ರಾಜ ಈ ಸ್ಥಳದಲ್ಲಿ ಒಮ್ಮೆ ಬೀಡುಬಿಟ್ಟು ಅಹಾರ ತಯಾರಿಸುವಲ್ಲಿ ಅಕ್ಕಿ ಪಾತ್ರೆಯಿಂದ ಗಂಜಿ ಉಕ್ಕಿ ಸುರಿದುದರಿಂದ ಗಂಜಿಗಟ್ಟೆ ಎಂಬ ಹೆಸರು ಬಂದಿತೆಂದು ಹೇಳುತ್ತಾರೆ. ಅಷ್ಟೇ ಅಲ್ಲ ಒಂದು ಸತೀಕಲ್ಲು, ಅಲ್ಲೇ ದೂರದಲ್ಲಿ ಇನ್ನೊಂದು ವೀರಗಲ್ಲು, ಪಕ್ಕದಲ್ಲಿ ಕೆರೆ ಮತ್ತು ಬೇವಿನಮರ ಇದಿಷ್ಟನ್ನೂ ಸೇರಿಸಿಕೊಂಡು ಯಾರೂ ನಂಬುವಂಥ ಒಂದು ದಂತ ಕಥೆ ಕಟ್ಟಬಲ್ಲರು. ಗಂಡನನ್ನು ಕೊಂದ ಸತಿಯೊಬ್ಬಳನ್ನು ಆಕೆಯ ಮೈದುನರು ಓಡಿಸಿಕೊಂಡು ಬಂದರು. ಓಡಿಬಂದು ಸುಸ್ತಾದ ಹೆಂಗಸರು ಕೆರೆಗೆ ಬಿದ್ದು ಸಾಯುವ ಮುನ್ನ ಬಿಲ್ಲು ಬಾಣ ಹಿಡಿದು ತನ್ನನ್ನು ಇಲ್ಲಿಯವರೆಗೆ ಓಡಿಸಿಕೊಂಡು ಬಂದ ಮೈದುನರು ಕಲ್ಲಾಗಲಿ ಎಂದು ಶಾಪ ಕೊಟ್ಟು ಕೆರೆಗೆ ಬಿದ್ದು ಸತ್ತು ಇಲ್ಲಿ ಕಲ್ಲಾಗಿ ಒಡಮೂಡಿದಳು ಎನ್ನುತಾರೆ. ಈ ಕಥೆ ಕೇವಲ ಕಲ್ಪನೆಯ ಕಥೆಯಷ್ಟೇ. ವಾಸ್ತವವಾಗಿ ಆಕೆ ಗಂಡ ಯುದ್ಧದಲ್ಲಿ ಮಡಿದದ್ದಕ್ಕೆ ಸತಿಯಾಗಿರುವುದು. ಆದರೆ ಜನಪದರು ಸತಿಯೇ ಗಂಡನನ್ನು ಕೊಂದು ಬಂದನೆಳನ್ನುತ್ತಾರೆ. ಇಂಥದೇ ಮನಸ್ಸು ಮಹಾಭಾರತದಲ್ಲೂ ಕೆಲಸ ಮಾಡಿರುತ್ತದೆ.

ದ್ರೌಪದಿಯ ಮಾನಭಂಗ ಸಂದರ್ಭದಲ್ಲಿ ಆಕೆ ಉಟ್ಟ ಸೀರೆ ಅಕ್ಷಯವಾಯಿತು. ಅದಕ್ಕೆ ಕಾರಣ ಶ್ರೀಕೃಷ್ಣ ಆಕಸ್ಮಿಕವಾಗಿ ಒಮ್ಮೆ ಕೈಬೆರಳು ಕುಯ್ದುಕೊಂಡಾಗ ದ್ರೌಪದಿ ತನ್ನ ಸೀರೆಯ ಸೆರಗು ಹರಿದು ಅವನ ಗಾಯಕ್ಕೆ ಬಟ್ಟೆ ಕಟ್ಟಿದಳು. ದೈವಾಂಶ ಸಂಭೂತನಾದ ಶ್ರೀಕೃಷ್ಣ ಆಗಲೇ ನಿನ್ನ ಸೀರೆಯ ಸೆರಗು ಅಕ್ಷಯವಾಗಲಿ ಎಂದು ವರವನ್ನು ಕೊಟ್ಟನಂತೆ. ಹೀಗೆ ಮಹಾಭಾರತದ ಅನೇಕ ಪ್ರಸಂಗಳನ್ನು ಬೇರೆ ಬೇರೆ ರೀತಿಯ ಉಪಕಥೆಯ ಮೂಲಕ ಸಮರ್ಥಿಸುತ್ತ ಹೋಗುವುದೇ ಜನಪದ ಮಹಾಭಾರತದ ಕಥಾಗುಚ್ಛವಾಗಿ ಬಿಟ್ಟಿದೆ. ಈ ದಿಸೆಯಲ್ಲಿ ಅರ್ಜುನ ದ್ರೌಪದಿ ಕೂಡ ಮಹಾಭಾರತದ ಒಂದು ಭಾಗವೇ. ಈ ಕಥೆಗಾಗಲಿ, ಜನಪದ ಮಹಾಭಾರತಕ್ಕಾಗಲಿ ಒಂದು ನಿರ್ದಿಷ್ಟ ಸ್ವರೂಪವಿರುವುದಿಲ್ಲ. ಶೈಲಿಯಿಂದ ಹಿಡಿದು ಕಥೆಯವರೆಗೆ ಅದು ಕಾಲಕಾಲಕ್ಕೆ ಬೆಳೆದಂತೆ ಇದೆ. ಅರ್ಜುನ ದ್ರೌಪದಿಯಲ್ಲಿ ದ್ವಿಪದಿ, ತ್ರಿಪದಿ, ಚೌಪದಿಗಳೆಲ್ಲ ಬಳಕೆಯಾಗಿವೆ. ಗ್ರಾಮೀಣರ ಅನೇಕ ಸಂಗತಿಗಳು ಮೂಲಮಹಾಭಾರತದ ಕಥೆಯೊಂದಿಗೆ ಸೇರಿಕೊಂಡಿವೆ. ಕೆಲವು ಕಡೆ ಅವು ಕಲಾತ್ಮಕವಾಗಿದ್ದರೆ ಮತ್ತೆ ಕೆಲವು ಕಡೆ ಗಾಯಕನೇ ತನಗೆ ಗೊತ್ತಿರುವ ಭಾರತ ಕಥೆಯನ್ನು ಗದ್ಯದಲ್ಲಿ ಹೇಳುವಂತೆ ತೋರುತ್ತದೆ. ಹೀಗಾಗಿ ಮಹಾಭಾರತದ ಕಥಾ ಗುಚ್ಛದ ಒಂದು ಮಾದರಿಯಾಗಿ ಅರ್ಜುನ ದ್ರೌಪದಿಯ ಕಥೆ ಇದೆ. ಇದರಿಂದ ಗ್ರಾಮಭಾರತವನ್ನೇ ಪ್ರತ್ಯೇಕವಾಗಿ ಅಧ್ಯಯನ ಮಾಡಬೇಕಾದ ಅಗತ್ಯವಿದೆ. ಅರ್ಜುನ ದ್ರೌಪದಿಯ ಹಾಡುಗಾರಿಕೆಯಲ್ಲಿ ಸೊಲ್ಲಿನ ಬದಲಾವಣೆ ಇರುವುದಿಲ್ಲ.

ಅರ್ಜುನ ದ್ರೋಪದಿಯ ಗೀತೆ

ಅಟ್ಟಿ ಗಣನಾತ ಜಯಿತ ಜಯಿತ
ಪಟ್ಟಣ ಗಣನಾತ ಜಯಿತ ಜಯಿತ
ಅಟ್ಟಿ ಬ್ರಮ್ಮನ ಮಡದಿ ನಿನ್ನನಾಗ್ನಾನಿಸಿದೆ

ಆದಿ ಗಣನಾತ ಜಯಿತ ಜಯಿತ
ಬೀದಿ ಗಣನಾತ ಜಯಿತ ಜಯಿತ
ಆದಿ ಬ್ರಮ್ಮದ ಮಡದಿ ನಿನ್ನ ನಾ ತ್ರಪಿಸೀದೆ
ಓದಿಸಮ್ಮ ಪಂಚಕತೀಯ

ಅಕ್ಕಗಳಿರಮ್ಮ ಜಯಿತ ಜಯಿತ
ಮುಕ್ಕಣ್ಣ ಸಿವನೆ ಜಯಿತ ಜಯಿತ
ಅಕ್ಕೇನೆ ತಂಗೀರು ಮುಕ್ಕಣ್ಣನ ಸಿರಿಪಾದಕ್ಕೆ
ಒಪ್ಪಾದಿಂದರಳಾ ಒತ್ತೀರೆ

ತಾಯಿಗಳಿರಮ್ಮ ಜಯಿತ ಜಯಿತ
ರೇವಣ್ಣ ಸಿವನೆ ಜಯಿತ ಜಯಿತ
ತಾಯೀನೆ ಮಕ್ಕಳಿರಾ ಬ್ರಮ್ಮನ ಸಿರಿಪಾದಕ್ಕೆ
ಮೊವಾದಿಂದರಳಾ ಒತ್ತೀರೆ

ಅಡೆವನ್ನೆರಡು ವರುಸಾಕೆ ಆರಾದಿ ದ್ರೋಪಾದಿ ಸೂಸುಕವಾದಾಳೇ
ಅಡದುವಾನಿಮನಿಗೆ ಕೇಡು ಬಡಿದಾವು
ತೊರಿದು ಬನ್ನೀರರಣ್ಯಕ್ಕೆ
ವುಟ್ಟೀದರನ್ನೆರಡೂ ವರುಸಾಕೆ ಆರುವಾರ ನಿಸ್ತ್ರೇ ಸೂಸುಕವಾದಾಳೇ

ವುಟ್ಟಿದ್ದೇನೆ ಮನೆಗೆ ಕೇಡು ಬಡಿದಾವು
ಬಿಟ್ಟೂ ಬನ್ನೀರರಣ್ಯಕ್ಕ

ವಾರಾ ಮಂಗಳವಾರ ರೆಂಬೆ ಸೂಸುಕವಾದಾಳೇ
ಹೆಣ್ಣು ಪಟ್ಟಣದೊಳಗೆ ಇರಬಾರದಂತ
ಅಣ್ಣಯ್ಯ ಸಾರೂತಾನೇ

ವಾರ ಸುಕ್ಕರವಾರ ಆರುವಾರ
ನಿಸ್ತ್ರೇ ಸೂಸುಕವಾದಾಳೇ

ಬುಕ್ಕಾಪಟ್ಟಣದೊಳಗೆ ಇರಬಾರಾದಂತೇಳಿ
ಅಪ್ಪಯ್ಯ ಸಾರೂತಾನೇ

ತಾಯಿಗಳು ಯಾರಿದ್ದೀರಿ ಪುರದೊಳಗ
ತಂದೆಗಳು ಯಾರಿದ್ದೀರಿ ಪುರದೊಳಗ
ಮಗಳೇ ದ್ರೌಪದಿದೇವಿ ವನದೇಸಕ್ಕೊಗುತಾಳೆ

ಅಕ್ಕಗಳು ನಮಗಿಲ್ಲ ತಾಯಿಗಳು ನಮಗಿಲ್ಲ
ಆರುವಾರ ತಂದೆಗಳು ನಮಗಿಲ್ಲವೇ
ಆರೊನ್ನ ಅಡವ್ಯಾಗ ಸಾಲೂ ಬೇವಿನಮರ
ಅವುಗಾಳಮ್ಮ ತಾಯೀತಂದೇ

ಅಣ್ಣಾಯಾರಿದ್ದೀರಿ ಪುರದೊಳಗ ತಮ್ಮಗಳು
ಯಾರಿದ್ದೀರಿ ಪುರದೊಳಗಿರುವೋರು ಬನ್ನೀರಿ
ದ್ರೌಪತಿ ವನದೇಸಕ್ಕೋಗುತಾಳೇ

ಅಣ್ಣಗಳು ನಮಗ್ಯಾತಕೆ ಸಿವಸಿವನೆ ತಮ್ಮಗಳು
ನಮಗ್ಯಾತಕೊ
ಆರೊನ್ನ ಅಡವ್ಯಾಗ ಸಾಲು ಅಳ್ಳಿಯ ಮರ
ನಮ್ಮೂ ಅಣ್ಣಾತಮ್ಮ

ಅಕ್ಕಗಳು ಯಾರಿದ್ದೀರಿ ಪುರದೊಳಗೆ ತಂಗೀರು
ಯಾರಿದ್ದೀರಿ ತಂಗಿ ದ್ರೌಪತಿ ವನದೇಸಕ್ಕೊಗುತಾಳೆ
ಅಕ್ಕತಂಗೀರು ನೋಡಬನ್ನಿ

ಅಕ್ಕಗಳು ನಮಗ್ಯಾತಕ್ಕೊತಂಗೀರು ನಮಗ್ಯಾತಕೋ
ಸಿವಸಿವನೆ ತಂಗೀರು ನಮಗ್ಯಾತಕೋ
ಅಟ್ಟುಂಬೋ ಅಡವ್ಯಾಗ ಸಾಲೂ ಅತ್ತಿಯ ಮರ
ನಮ್ಮ ಅಕ್ಕಾತಂಗೀ

ಸಾಲ್ಯಾದ ಸೀರಿ ಕೊಡಿರಿ ದ್ರೌಪದಿಗೆ ಆದ ಬಂಗಾರ ನೀಡಿರಿ
ಮ್ಯಾಲೊಂದು ಸೀರೆ ಮುಸುಗಿಟ್ಟು ದ್ರೋಪದಿಯ
ತೊರಿದೂ ಬನ್ನೀರರಣ್ಯಕ
ಪಟ್ಟೇದ ಸೀರೆ ಕೊಡಿರಿ ದ್ರೋಪದಿಗೆ ಎಚ್ಚು
ಬಂಗಾರ ನೀಡೀರಿ
ಮತ್ತೆ ಒಂದು ಸೀರೆ ಮುಸುಗಿಟ್ಟು ದ್ರೋಪದಿಯ
ಬುಟ್ಟು ಬನ್ನೀರರಣ್ಯಕ
ಆಲುಬೋನಾವುಂಡು ನಲವತ್ತೀಳ್ಯಾವ ಮೆದ್ದು
ನಲವತ್ತೀಳ್ಯಾವ ಮೆದ್ದುಸಾದಿನಚ್ಚಡ ಮುಸುಗಿಟ್ಟು
ಇಬ್ಬಾರೋದಾರರಣ್ಯಕಾ

ಸಾದೀನ ಸೀರೆ ಕೊಡಿರಿ ದ್ರೋಪದಿಗೆ ಆದ ಬಂಗಾರ
ನೀಡೀ ದ್ರೋಪದಿಗೆ
ಮ್ಯಾಲೆ ಒಮದು ಸೀರೆ ಮುಸುಗಿಟ್ಟು ದ್ರೋಪದಿನ
ರಣ್ಯಕ್ಕ ತೊರಿತಾರೋ

ತುಪ್ಪಾ ಬಾನಾವುಂಡು ಇಬ್ಬಾರು ಇಪ್ಪತ್ತೀಳ್ಯಾವ
ಮೆದ್ದು ಪಟ್ಟೇದಚ್ಚಡದ ಮುಸುಗಿಟ್ಟು
ವೋದಾರರಣ್ಯಕಾ
ಆರನ್ನ ಅಡವ್ಯಾಗ ನನ್ನಣ್ಣ ಸೂಡಿದ್ದ ಕಣ್ಣಬಿಚ್ಚೋ
ಅಟ್ಟುಂಬ ಅಡವ್ಯಾಗ ನನ್ನಣ್ಣ ಕಟ್ಟೀದ ಕಣ್ಣಬಿಚ್ಚೊ
ಅಟ್ಟುಂಬ ಅಡವ್ಯಾಗೇ ಪಂಡವರೀಗಾಗೋ ದ್ರೋಪದಿ
ಉತ್ತುತ್ತಿ ವವನಾ ಸೇರ್ಯಾಳೆ

ಆರನ್ನ ಅಡವ್ಯಲ್ಲೋ ನನ್ನಣ್ಣ ಸೂಡಿದ್ದ ಕಣ್ಣಬಿಚ್ಚೋ
ಆರನ್ನ ಅಡವ್ಯಾಗ ಯ್ಯಾಗಿರಲಿ ದೊರೆಮಗನೆ ಎನ್ನುತ
ಬಾಳೇಯ ವನವಾ ಸೇರ್ಯಾಳೇ

ತಾಯಿ ಕುಂತ್ಯಮ್ಮನಂತೇ ಆಕೀಗೆ ಬಾಲಾರು
ಒಂದೈವಾರಂತೇ
ವೊನ್ನೀನ ಬಿಲ್ಲುಗಳು ಎಗಲೇರಿದರುಜುಣರಾಯ
ಅಣ್ಣಾ ಬ್ಯಾಟೀಗೇ ವೊರಟಾನೇ
ತುಪ್ಪಾ ಬೋನವನುಂಡು ಅರುಜುಣ ಇಪ್ಪತ್ತೀಳ್ಯವ ಮೆದ್ದು
ಮುತ್ತೀನ ಕಣಿಗಳನೇರಿ ಅಪ್ಪ ಅರುಜುಣರಾಯ
ಬ್ಯಾಟೇಗೊರಟಾನೇ
ಆಲೂ ಬೋನವನುಂಡು ಅಣ್ಣ ನಲವತ್ತೀಳ್ಯಾಮೆದ್ದು
ಅಣ್ಣಾ ನಲವತ್ತೀಳ್ಯವ ಮೆದ್ದುರನ್ನಾದ ಕುಡುಗೋಲಿಡಿದು
ಅರುಜುಣರಾಯ ಬ್ಯಾಟಿಗೊರಟಾನೇ

ದ್ಯಾವಾದಾರು ಗುಡ್ಡದೊಳಗ ಅರುಜುಣವೋಗಿ ಬ್ಯಾಟಿಯಾಡಾನು
ಅರುಜುಣವೊಕ್ಕು ಬ್ಯಾಟಿಯಾಡಾನು
ಚಂದ್ರುರ ಕಾಂತಿಯಂಗೆ ವೊಳೆವಂತನಾರೀಯ
ಬ್ಯಾಗಾನೆ ಕಂಡಾನಂತೆ

ತಪ್ಪಿನಾನೊಡಿಯಾತಿದ್ದೆ ಎಣ್ಣೆ ತಪ್ಪದಲೆ
ವಡಿಯಾತಿದ್ದೆ
ಚಂದ್ರುರ ಕಾಂತಿಯಂಗಿರುವೋ ವೊಕವಾ
ಬಾವಕ ನೋಡಿ ಎತ್ತೀದ ಬಿಲ್ಲಿಳುವೀದ
ದ್ಯಾವಾದಾರು ಗುಡ್ಡಾದೊಳಗ ಅರುಜುಣವೋಗಿ
ಬ್ಯಾಟೀಯ ನಾಡಾನಂತೇ

ಸೂರಿಯದ ಕಾಂತಿಯಂಗೆ ಇರುವೋ ಮುಕವಾ
ಬಾವಕ ನೋಡಿ ಏರೀದ ಬಿಲ್ಲಿಳುವೀದ
ಬಾಗುದದಲೆ ವಡಿಯೂತಿದ್ದೆ ಎಲೆ ಎಣ್ಣೆ
ಬಾಗಿನಾನೊಡಿಯೂತಿದ್ದೆ ಎಲೆ ಎಣ್ಣೆ

ಸೂರಿಯದ ಕಾಂತಿಯಂತ ಮೊಕಬಾವಾವಕ ನೋಡಿ
ಏರೀದ ಬಿಲ್ಲನಿಳುಗೀಸೀದ
ಅಟ್ಟುಂಬ ಅಡವ್ಯಲ್ಲೇ ಎಲೆ ಎಣ್ಣೆ
ಬೆಟ್ಟುಂಬ ಬಿಸುಲಲ್ಲೇ ಎಲೆ ಎಣ್ಣೇ
ಬೆಟ್ಟುಂಬ ಬಿಸುಲಲ್ಲೇ

ಮುತ್ತೇನ ವೋಯ್ದಂಗೆ ಮೊಕವೆಲ್ಲ ಬೆವುತಾನೆ
ಅಚ್ಚಡದ ಸೆರಗಾಕೊಳ್ಳೆ

ಅಟ್ಟುಂಬ ಅಡವ್ಯಾದರೇನೋ ದೊರೆನಂಗೆ
ಬೆಟ್ಟುಂಬ ಬಿಸಿಲಾದರೇನೋ ದೊರೆನಂಗೆ
ಅಚ್ಚಡದ ಸೆರಗ್ಯಾಕೋ
ಆರಂಬ ಅಡವ್ಯಲ್ಲೇ ಎಲೆಎಣ್ಣೆ
ಬೋರೆಂಬ ಬಿಸುಲಲ್ಲೇ
ವೊನ್ನೇನೆ ವೊಯ್ದಂಗೆ ಮೊಕವೆಲ್ಲ ಬೆವುತಾವು
ವಲ್ಲೀಯ ಸೆರಗಾ ಕೊಳ್ಳೇ
ಆರೊನ್ನ ಅಡವ್ಯಾದರೇನೋ ದೊರಿನನಗ
ಬೋರೆಂಬ ಬಿಸುಲಾದಾರೇನೋ ದೊರಿನನಗ
ವಲ್ಲೀಯ ಸೆರಗ್ಯಾತಕೋ
ತಾಯಿಗಳು ನಿಮಗಿಲ್ಲವೇ ಎಲೆಎಣ್ಣೆ ತಂದೆಗಳು
ನಿಮಗಿಲ್ಲವೇ
ತಾಯಿಗಳು ನಮಗ್ಯಾತಕೋ ತಂದೆಗಳು
ನಮಗ್ಯಾತಕೋ ದೊರೆ ನನಗೆ ತಂದೆಗಳು
ನನಗ್ಯಾತಕೋ
ಆರೊನ್ನ ಅಡವ್ಯಾಗ ಸಾಲೂ ಬೇವಿನಮರ
ನಮ್ಮಾ ತಾಯೀ ತಂದೆ
ಅಣ್ಣಗಳು ನಿನಗಿಲ್ಲವೇ ಎಲೆ ಎಣ್ಣೆ ತಮ್ಮಗಳು
ನಿನಗಿಲ್ಲವೇ
ಅಣ್ಣಗಳು ನನಗ್ಯಾಕೆ ಸಿವಸಿವನೆ
ತಮ್ಮಗಳು ನನಗ್ಯಾತಕೆ
ಆರೊನ್ನ ಅಡವ್ಯಾಗ ಸಾಲೂ ಅಳ್ಳಿಯ ಮರ
ನಮ್ಮ ಅಣ್ಣ ತಮ್ಮ
ಅಕ್ಕಗಳು ನಿನಗಿಲ್ಲವೇ ಎಲೆ ಎಣ್ಣೆ ತಂಗೀರು
ನಿನಗಿಲ್ಲವೇ
ಅಕ್ಕಗಳು ನನಗ್ಯಾತಕೋ ಸಿವಸಿವನೆ
ತಂಗೀರು ನನಗ್ಯಾತಕೆ
ಅಟ್ಟುಂಬ ಅಡವ್ಯಾಗ ಜೊತ್ತು ಅತ್ತಿಮರ
ನನ್ನಾ ಅಕ್ಕ ತಂಗೀ

ಕುಲವು ಯಾವುದೇಳೇ ಎಲೆ ಎಣ್ಣೆ ಕೂಡಾ
ಉಂಬಾನೇ ಬಾರೇ

ಆರೋರ ಮಗಳಯ್ಯ ನಾ ನಿನ್ನದರುಮಾರ
ಸೊಸಿಮಯ್ಯ

ನಾರಾಯಣ ಸಿವ ನಮ್ಮ ಅಣೆಯಲ್ಲಿ
ಬರೆದಿತ್ತು ಸೇರೀದೆ ಅರಣ್ಯಕಾ
ಬೆಡಗು ಯಾವುದು ಏಳೆ ಎಲೆ ಎಣ್ಣೆ ಕೂಡಾ
ಉಂಬಾನೇ ಬಾರೇ

ವುತ್ತಮರ ಮಗಳಯ್ಯ ನಾ ನಿನ್ನ ಸೆಟ್ಟೂರ
ಸೊಸಿಮಯ್ಯ
ವುತ್ತಮರ ಸೊಸೆಮಯ್ಯ ನಮ್ಮ ಅಣೆಯಲ್ಲಿ
ಬರೆದಿತ್ತು ಅತ್ತೀದೆಯರಣ್ಯಕಾ
ಯಾರ್ಯಾರೂ ಇಲ್ಲಾದ ಪರದೇಸಿ ಜಲ್ಮಾವು
ನಾವಿಬ್ಬಾರೂ ಇರುವಾನೆ ಬಾರೇ

ತಾಯುಳ್ಳವನೇ ನೀನು ಮಾರಾಯ
ತಂದೆಯುಳ್ಳವನೇ ನೀನು ಮಾರಾಯ
ತಾಯಿಂತದ್ಯಳ್ಳವನೇ ನೀನು

ನಿಮ್ಮಾ ತಾಯಿಂತದೆಗಳಾಗ್ಣೇಯೊಳಗ
ನಾನಿರಲಾರೇನೆಂದು ಮಾರೀಯ ತಿರುವಾಳೇ
ತಾಯಿಗಳು ನಮಗಿಲ್ಲವೇ ಎಲೆ ಎಣ್ಣೆ
ತಂದೆಗಳೂ ನಮಗಿಲ್ಲವೇ
ತಾಯಿತಂದೆಂಬೋರು ಮನಿವಳಗಿದ್ದರ
ತಾಯಿ ಕುಂತ್ಯಮ್ಮ ನಾಣೇ

ಅಣ್ಣುಗಳುಳ್ಳವನೇ ಮಾರಾಯ ನೀನು
ತಮ್ಮಗಳ್ಳುವನೇ ಮಾರಾಯ ನೀನು
ಅಣ್ಣಾ ತಮ್ಮಗಳುಳ್ಳವನೇ ನೀನು

ನಿಮ್ಮಣ್ಣ ತಮ್ಮಗಳಾಗ್ಣೇ ವಳಗ
ನಾನಿರಲಾರೆನೆಂದು ಮುಂಗೈತಿರುವಾಳೇ

ಅಣ್ಣಗಳು ನಮಗಿಲ್ಲವೇ ಎಲೆಎಣ್ಣೆ
ಅಣ್ಣಾತಮ್ಮಗಳೂ ನಮಗಿಲ್ಲವೇ

ಅಣ್ಣಾ ತಮ್ಮಂಬೋರು ಮನಿವಳಗಿದ್ದರ
ಮಾತಾಯಿ ಕುಂತ್ಯಮ್ಮ ನಾಣೇ

ಎಂಡಾರುಳ್ಳವನೇ ನೀನು ಮಾರಾಯ
ಮಕ್ಕಳುಳ್ಳವನೇ ನೀನು ಮಾರಾಯ
ಎಂಡೀರು ಮಕ್ಕಳುಳ್ಳವನು ನೀನು
ಎಂಡೀರು ನನಗಿಲ್ಲವೇ ಎಲೆ ಎಣ್ಣೆ
ಮಕ್ಕಾಳು ನನಗಿಲ್ಲವೇ ಎಲೆ ಎಣ್ಣೆ

ಎಂಡಾರು ಮಕ್ಕಳು ಮನಿಯೊಳಗಿದ್ದರೆ
ಎತ್ತ ಕುಂತ್ಯಮ್ಮನಾಣೆ
ಆರುವಾಲದ ಮರ ಇವ ಮೂರೂ ಜೋಡು ಬೇವಿನಮರ
ಇವ ಮೂರೂ ಜೋಡು ಬೇವಿನಮರವಾರೀಲಿ
ಇರುವೋದು ಜೋಡು ಸುರವೊನ್ನೆಯ ಮರದಡಿಯ
ಬಾಚಿಗಳೂ ಮಾಡಲೇನಾ
ಅತ್ತೂವಾಲದ ಮರ ಇವಮೂರು ಜೊತ್ತೂ ಬೇವಿನಮರ
ಇವಮೂರು ಜೊತ್ತು ಬೇವಿನಮರ
ಅತ್ತಲೆ ಇರುವುದು ಸುರವೊನ್ನೇಮರಡಿಯ ಸತ್ತೇವು ಮಾಡಲೇನ

ತಗ್ಗುಗಳಿದಾರೆರ ಅವರಿಬ್ಬರು ದಿಬ್ಬಗಳನು ಏರ್ಯಾರೆ
ಅವರಿಬ್ಬರು ದಿಬ್ಬಗಳನೂ ಏರ್ಯಾರೇ
ಆಗಾಳುವಾ ಪಟ್ಟಣಕೆ ಕಾಣಾಬರುತಾವೊಂದು
ಬದ್ರೀಗೇಯ ತೋರೂತಾನೇ

ದಿಬ್ಬಗಳನತ್ತೂತಾರೆ ಅವರಿಬ್ಬರು ತಗ್ಗುಳನಿಳಿದಾರೆ
ಅವರಿಬ್ಬರು ತಗ್ಗುಗಳ ನಿಳಿದಾರೆ
ಆಗಾಳುವಾ ಪಟ್ಟಣದಲಿ ಕಾಣಾಬರುವಾ
ಬದ್ರಿಗಳಾ ತೋರುತಾನೇ

ಅತ್ತೀಯ ಮರಗಳ ಅರುಜುಣ ಕಿತ್ತು
ಗಿಣಿಗಳ ಮಾಡ್ಯಾನ ಅರಜುಣ ಕಿತ್ತು
ಗಿಣಿಗಳ ಮಾಡ್ಯಾನೇ

ಆಲಾದ ಮರಗಳನು ಅರುಜೂಣ ಸೀಳಿ
ಗಿಣಿಗಳ ಮಾಡ್ಯಾನೇ

ಮ್ಯಾಲೇ ನಮಪಟ್ಟಣ ನೋಡಿ ಬಾರೆನುತ
ಮೋವಾದ ಗಿಣಿಗಾಳ ಕಳುವ್ಯಾನೇ
ಆಲಗಿರಿ ಮೇಲಗಿರಿಯೋ ಇವು ಮೂರು
ಲೋಲಗಿರಿ ಪರುವೂತದರುಗೀಲಿ ಇರುವೂದು
ತಾಯಮ್ಮನರುಮಾನೇ
ಅಂಪಗಿರಿ ಪಂಪಗಿರಿಯೇ ಇರುವೂದು
ತಾಯಮ್ಮನರುಮಾನೇ
ಪಂಪಗಿರಿ ಪರೂವತದರುಗೀಲ ಇರುವೋದು
ಕುಂತ್ಯಮ್ಮನರುಮಾನೇ
ಎಣ್ಣುತಂದೀನಿ ಎಣ್ಣು ತಂದೀನಿ ತಾಯಮ್ಮ
ಎಣ್ಣನೊಳಿಯಾಕ ಕರಿಯೇ ತಾಯಮ್ಮ

ಎಣ್ಣನೊಳಿಯಾಕ ಕರಿಯೇ
ನೀಯೆಣ್ಣ ತಂದರೇನಾಯ್ತ ನನಮಗನೆ
ಪಂಚೈವರಂಚುಣ್ಣಿರೋ

ಮುತ್ತು ತಂದೀನಿ ಮುತ್ತು ತಂದೀನಿ ತಾಯಮ್ಮ
ಮುತ್ತಾನೊಳಕಾಕ ಕರಿಯೇ ತಾಯಮ್ಮ
ಮುತ್ತ ನೊಳಕ ಕರಿಯೆ

ನೀ ಮುತ್ತು ತಂದರೇನಾಯ್ತು ನನಮಗನೆ
ಪಂಚೈವರಂಚುಣ್ಣೀರೋ

ಗವಡಿ ತಂದೀನಿ ಗವಡಿ ತಂದೀನಿ ಕಿವುಡಮ್ಮ
ತಾಯಿ ಗೌಡೀಯನೊಳಾಕ ಕರಿಯೇ ತಾಯಮ್ಮ
ಗೌಡೀಯನೊಳಾಕ ಕರಿಯೇ
ಗವಡೀತಿ ಬಂದಾರೆ ನನಗೇನಾಯ್ತೋ ಮಗನೆ
ಪಂಚೈವರಂಚಾಳೀರೋ

ಕೆಟ್ಟಮೋರಿಯ ಎಣ್ಣು ನಾನೋಗಿ ಮುಟ್ಟಿ
ತಂದದ್ದಾಗಲಿಲ್ಲ ನಾನೋಗಿ ಮುಟ್ಟಿ
ತಂದದ್ದಾಗಲಿಲ್ಲ

ಆರನ್ನಡದವ್ಯಾಗ ಕಾಗ್ಯಡ್ಡವಾಗಿರದೆ
ಆಗನ್ನ ಬಿಟ್ಟು ಬರುತ್ತಿದ್ದೆ
ಅಳುಮೋರೀಯ ಎಣ್ಣು ನಾನೋಡಿ
ತಂದದ್ದಾಗಲಿಲ್ಲ

ಆರನ್ನ ಅಡವ್ಯಾಗ ಬೆಕ್ಕಡ್ಡವಾಗಿರದೆ
ಅತ್ತೆನ್ನೆ ಬುಟ್ಟು ಬರುತಿದ್ದೆ
ಗೋಳು ಮಾರಿಯ ಎಣ್ಣು ನಾನೋಡಿ
ತಂದದ್ದಾಗಲಿಲ್ಲ
ಅಂಗಳದಾಗೊಂದು ಮಂಗಡ್ಡವಾಗಿದರೆ
ಅಂಗೆನ್ನ ಬಿಟ್ಟು ಬರುತ್ತಿದ್ದೆ
ಉಪ್ಪರಿಗೆ ಅತ್ತಲೇನೆ ತಾಯಿ ನಾನು ಕತ್ತಡಿಯ
ಬೀಳಲೇನೆ ತಾಯಿ ನಾನು ಕತ್ತಡಿಯ ಬೀಳಲೇನೆ
ನಿಸ್ಟಾಪಂಡವರಿಗೆ ಸತಿಯೊಬ್ಬಾಳೆಂದು
ನಿಸ್ಟುರನಾನೊತ್ತೇನೆ
ಉಪ್ಪುರಿಗೆ ಅತ್ತಲ್ಯಾಕೋ ನನಮಗನೇ
ಕತ್ತಡಿಯ ಬೀಳಲ್ಯಾತಕೋ ಮಗನೇ
ಕತ್ತಡಿಯ ಬೀಳಲ್ಯಾಕೋ

ನಿಸ್ಪಾಂಡವರಿಗೆ ಸತಿಯೊಬ್ಬಾಳೆಂದು
ನಿಸ್ಟುರವಾಗಲೇಳೋ
ವಾವುರಿಗೆ ಅತ್ತಲೇನೆ ತಾಯಿ ನಾನು ತೋಳಡಿಯ
ಬೀಳಾಲೇನೆ ತಾಯಿ ನಾನು ತೋಳಡಿಯ
ಬೀಳಾಲೇನೆ

ದೀರಾ ಪಾಂಡವರಿಗೆ ಸತಿಯೊಬ್ಬಾಳೆಂದು
ದೂರೂ ನಾನೊತ್ತೆನಲ್ಲೇ
ವಾವುರಿಗೆ ಅತ್ತಲ್ಯಾಕೋ ನನಮಗನೇ
ತೋಳಡಿಯ ಬೀಳಲ್ಯಾಕೋ ಮಗನೇ
ತೋಳಡಿಯ ಬೀಳಲ್ಯಾಕೋ

ದೀರಾ ಪಾಂಡವರಿಗೆ ಸತಿಯೊಬ್ಬಾಳೆಂದು
ದೂರಾಗಾಲೇಳೋ
ಅಕ್ಕ ಕುಂತ್ಯಮ್ಮನಂತೆ ಆಕೀಗೆ ಮಕ್ಕಾಳೈವರಂತೆ
ಅಕೀಗೆ ಮಕ್ಕಾಳೈವರಂತೆ
ನಿಸ್ತ್ರೇಕುಂತ್ಯಮ್ಮ ಮಕ್ಕಾಳೈವರಿಗೆ
ತಾನೊಬ್ಬಳು ತಾಯಂತೇ
ಅಣ್ಣು ಪಾಲಾರವಂತೆ ದರುಮರಿಗೆ
ಕನ್ನೆ ಕುಂತ್ಯಮ್ಮನ ಬಾಲಾರು ಐವರಿಗೆ
ಕನ್ನೆ ತಾನೊಬ್ಬಾಳಂತೇ
ಬಿಸಿನೀರು ನೇಮಾವಂತೆದರುಮರಿಗೆ ಅಣ್ಣು
ಪಾಲಾರವಂತೆ ದರುಮರಿಗೆ ಅಣ್ಣು
ಪಾಲಾರವಂತೆ
ಪುತ್ರೋರು ಐವರಿಗೆ ಕುಂತ್ಯಮ್ಮ ನಿಸ್ತ್ರೇ
ತಾನೊಬ್ಬಾಳಂತೇ

ಲೆತ್ತಾಕೋಗನಿಬಾರಿ ಲೆತ್ತಾದಲಿಗೆಯತಾರೆ
ಗಕ್ಕಾನೆ ನೀನೇ ಬಾರೇ
ದಾಯಾಕೋಗನಿಬಾರಿ ದಾಯಾದಲಿಗೆಯತಾರೆ
ಬೇಗಾನೆ ನೀನೇ ಬಾರೇ
ಮನಿಯಾಗೆ ಯಾರಿದ್ದೀರಿ ದಾದೀ ಮನಿಯಾಗ
ಮನಿಮಕ್ಕಳು ಯಾರಿದ್ದೀರಿ ಗಕ್ಕಾನೆ
ಬಿಸಿನೀರಾ ನೆರೆಯೀರಿ
ಗಕ್ಕಾನೆ ನೀವು ಬಂದು ಬಿಸಿನೀರಾನೆರೆಯೀರಿ
ರಾಯಾ ಬಂದು ಲೆತ್ತಾಕೆ ಕರೆದೋದಾನು
ಪಟ್ಟಾದ ಸೀರೆಗಳ ತಂದಂತ ನಿಸ್ತ್ರೇರು
ನಿರುಗಿಡುದಾರೆ ಅಲ್ಲಿದ್ದಂತೆ ನಿಸ್ತ್ರೇರು
ನಿರುಗಿಡುದಾರೆ

ಪಟ್ಟಾದ ಸೀರೆ ನಿಸ್ತ್ರೇಯ ನಿಜಗೆಂಪೀಗೆ
ಒಪ್ಪಾಲಿಲ್ಲ ತಂಗಿಯೆಂದಾಳು
ಸಾದೀನ ಸೀರೆಗಳು ತಂದಂತ ನಿಸ್ತ್ರೇರು
ನಿರುಗಿಡುದಾರೆ ಅಲ್ಲಿದ್ದಂತೆ ನಿಸ್ತ್ರೇರು
ನಿರುಗಿಡುದಾರೆ
ಸಾದೀನ ಸೀರೆ ನಿಸ್ತ್ರೇಯ ನಿಜಗೆಂಪೀಗೆ
ಆಯವಿಲ್ಲತಂಗಿಯೆಂದಾಳು