ಆಸೆಗಲ್ಲಿನ ಮ್ಯಾಲೆ ಲೇಸಾಗಿ ಕುಂತವಳೆ
ದೇಸಾಕ ಮಾರಿತಿರುವ್ಯವಳೆ
ದೇಸಾಕ ಮಾರಿತಿರುವ್ಯವಳೆ ನಲ್ಲರಳ್ಳಿ
ಬಳೆಕಯ್ಯ ಮುಗುದಾರೆ

ಒಡ್ಡುಗಲ್ಲಿನ ಮ್ಯಾಲೆ ಗುಡ್ಡಾಗಿ ಕುಂತವಳೆ
ಗುಡ್ಡಾಕ ಮಾರಿ ತಿರುವ್ಯಾಳೆ
ಗುಡ್ಡಾಕ ಮಾರಿ ತಿರುವ್ಯಾಳೆ ಚಿಕ್ಕೇನಳ್ಳಿ
ದೊಡ್ಡೋರು ಕಯ್ಯೆತ್ತಿ ಮುಗುದಾರೆ

ಚಿಕ್ಕೇನಳ್ಳಿ ಒತ್ತೀಲಿ ನೆಲೆಗೊಂಡವಳು
ಬಟ್ಟದುರುಬೀನ ಕರಿಮಾರಿ
ಬಟ್ಟದುರುಬೀನ ಕರಿಮಾರಿ ಕಂಡಾರೆ
ಬಿಟ್ಟಾರೆ ಸಳಿಜರವು

ರಾಯ ಚಿಕ್ಕೆನಳ್ಳಿವಾರೀಲಿ ನೆಲೆಗೊಂಡೋಳು
ವಾಲೆದುರುಬೀನ ಕರಿಯಮ್ಮ
ವಾಲೆದುರುಬೀನ ಕರಿಯಮ್ಮ ಕಂಡಾರೆ
ಬ್ಯಾಗಾನೆ ಬಿಟ್ಟೋವು ಸಳಿಜರ

ಸುಕ್ರವಾರದ ದಿನ ಚುಕ್ಕೆ ವುಟ್ಟೊತ್ತಿಗೆ
ಚಿಪ್ಪುಗೊಡಲಿಯ ಸಾಣೆ ಇಡಿಸ್ಯಾರೆ
ಚಿಪ್ಪುಗೊಡಲಿಯ ಸಾಣೆ ಇಡಿಸ್ಯಾರೆ ಗೌಡಾನ
ಪಟ್ಟದ ಕ್ವಾಣಕ ಬಾಯ ಬಿಡುತಾವೆ

ಮಂಗಳವಾರದ ದಿನ ಮಾರ ಮದನದಾಗ
ಗಂಡುಗೊಡಲಿಗೆ ಸಾಣೆ ಇಡಿಸ್ಯಾರೆ
ಗಂಡುಗೊಡಲಿಗೆ ಸಾಣೆ ಇಡಿಸ್ಯಾರೆ ಗೋಸ್ಯಣ್ಣಾನ
ಕಂಬಿನ ಕುರಿಬಾಯ ಬಿಡುತಾನೆ

ಸುಕ್ಕವಾರದ ದಿನ ಚುಕ್ಕೆ ವುಟ್ಟೊತ್ತಿಗೆ
ದಟ್ಟಬಿದ್ದಾವೆ ಮುಗುಲುದ್ದ
ದಟ್ಟಬಿದ್ದಾವೆ ಮುಗುಲುದ್ದ ನಲ್ಲರಳ್ಳಿ
ಕಿಚ್ಚುಗಣ್ಣಿನ ದೈತೆ ದಯವಾಗೆ

ಮಂಗಳವಾರದ ದಿನ ಮಾರಮದ್ಯನದಾಗ
ಮುಂಡಬಿದ್ದಾವೆ ಮುಗುಲುದ್ದ
ಮುಂಡಬಿದ್ದಾವೆಡ ಮುಗುಲುದ್ದ ನಲ್ಲರಳ್ಳಿ
ಕಿಚ್ಚಿಗಣ್ಣಿನ ದೈತೆ ದಯವಾಗೆ

ಅತ್ತುವರುಸತುಪ್ಪುಂಡ ಕ್ವಾಣಾನ
ಜೊತ್ತು ಮಿಣಿಯಾಕಿ ಇಡಿಸ್ಯಾರೆ
ಜೊತ್ತು ಮಿಣಿಯಾಕಿ ಇಡಿಸ್ಯಾರೆ ಇಡಿಸೀದ
ಕ್ವಾಣಾನ ಸತ್ಯವ್ವನ ಮುಂದೆ ಕಡಿಸ್ಯಾರೆ

ಸತ್ತ್ಯವ್ವನಮುಂದೆ ಕಡಿಸ್ಯಾರೆ ಕ್ವಾಣನ
ನೆತ್ತೀನ ನೆಣವ ತಗುದಾರೆ
ನೆತ್ತೀನ ನೆಣವ ತಗುದಾರೆ ನಲ್ಲರಳ್ಳಿ
ಸತ್ತಿಗಚ್ಯಾರೆ ಜಗಜೋತಿ

ಆರುವರುಸ ಆಲುಂಡ ಕ್ವಾಣಾನ
ಜೋಡಿಮಿಣಿಯಾಕಿ ಇಡಿಸ್ಯಾರೆ
ಜೋಡಿಮಿಣಿಯಾಕಿ ಇಡಿಸ್ಯಾರೆ ಕ್ವಾಣಾನ
ತಾಯವ್ನ ಮುಂದೆ ಕಡಿಸ್ಯಾರೆ

ತಾಯವ್ನ ಮುಂದೆ ಕಡಿಸೀದ ಕ್ವಾಣಾನ
ನಾಲಿಗಿಯ ನೆಣವ ತಗುದಾರೆ
ನಾಲಿಗಿಯ ನೆಣವ ತಗುದಾರೆ ನಲ್ಲರಳ್ಳಿ
ತಾಯವ್ವಗಚ್ಚ್ಯಾರೆ ಜಗಜ್ಯೋತಿ

ಸೊಪ್ಪಿನುಡುಗೆ ಉಟ್ಟು ಇಪ್ಪುತ್ತು ಗಾವುದ ಬಂದೆ
ಸೊಪ್ಪೆಲ್ಲ ಉದುರಿ ನೆಲಪಾಲು
ಸೊಪ್ಪೆಲ್ಲ ಉದುರಿ ನೆಲಪಾಲು ನಲ್ಲರಳ್ಳಿ
ಸತ್ತಿಗೆ ನಮಮ್ಯಾಲೆ ದಯವಿರಲಿ

ಬೇವಿನುಡುಗೆ ಉಟ್ಟು ನಲವತ್ತುಗಾವುದ ಬಂದು
ಬೇವೆಲ್ಲ ಉದುರಿ ನೆಲಪಾಲು
ಬೇವೆಲ್ಲ ಉದುರಿ ನೆಲಪಾಲು ನಲ್ಲರಳ್ಳಿ
ತಾಯಿ ನಮಮ್ಯಾಲೆ ದಯವಿರಲಿ

ಮೀರಿಮೀರಿದೋರಿಗೆ ಬೇವಿನುಡುಗೆವುಡಿಸಿ
ಯಾರು ಗ್ಯಾಗಟ್ಟಾರೆ ಒಣಮರಕ
ಯಾರು ಗ್ಯಾಗಟ್ಟಾರೆ ಒಣಮರಕ ನಲ್ಲರಳ್ಳಿ
ತಾಯಿಗೀ ಬಿರುದಿಗೆ ಸಲುವೋದು

ಸೊಕ್ಕಿ ಸೊಕ್ಕಿದೋರಿಗೆ ಸೊಪ್ಪಿನುಡುಗೆ ವುಡಿಸಿ
ಅತ್ತಕ್ಕಟ್ಟ್ಯಾಳೆ ಒಣಮರಕೆ
ಅತ್ತಕ್ಕಟ್ಟ್ಯಾಳೆ ಒಣಮರಕ ನಲ್ಲರಳ್ಳಿ
ಸತ್ತಿಗೀ ಬಿರುದಿ ಸಲುವೋದು

ಬಾಯಿ ಬೀಗದೋರು ಬೇವಿನುಡುಗೆಯೋರು
ಮ್ಯಾಲಂತರ ಸಿಡಿಯೋರು
ಮ್ಯಾಲಂತರ ಸಿಡಿಯೋರು ಬಂದೈದೀವಿ
ತಾಯಿ ನಮಮ್ಯಾಲೆ ದಯವಿರಲಿ

ಸೊಪ್ಪಿನ ಉಡುಗ್ಯೋರು ಸುತ್ತಬೀಗದೋರು
ಮತ್ತೆ ಅಂತರದ ನುಡಿಯೋರು
ಮತ್ತೆ ಅಂತರದ ನುಡಿಯೋರು ಬಂದೈದೀವಿ
ಸತ್ತಿನಮಮ್ಯಾಲೆ ದಯವಿರಲಿ

ಅಕ್ಕಮಾರಕ್ಕ ಮುತ್ತು ಮಡಲು ಕಟ್ಟಿ
ಮಕ್ಕಳ ಮ್ಯಾಲೆ ತೊಳೆದಾಳೆ
ಮಕ್ಕಳ ಮ್ಯಾಲೆ ತೊಳೆದಾಳೆ ಬೇವಿನ ಸೊಪ್ಪಿಲಿ
ಇಳಿಯಾನು ತಗುದಾಳೇ

ತಾಯಿ ಮಾರಕ್ಕ ವೂವು ಮಡಲಕಟ್ಟಿ
ಬಾಲಾರ ಮೈಯ್ಯಿ ತೊಳುದಾಳೆ
ಬಾಲಾರ ಮೈಯ್ಯಿ ತೊಳುದಾಳೆ ಬೇವಿನ

ಕಾಯೀಲಿ ಇಳಿಯಾ ತಗುದಾಳೆ
ಕಾಯೀಲಿ ಇಳಿಯಾ ತಗುದಾಳೆ ನಲ್ಲರಳ್ಳಿ
ತಾಯಿಗೀ ಬಿರುದು ಸಲುವಾದೆ

ಸತ್ತಿ ನಿನಪಾದ ತುಪ್ಪಗಿನ್ನ ತಿಳುವಮ್ಮ
ಮತ್ತೆಲ್ಲಿ ತುಳಿದೆ ಕೊನೆ ಮುಳ್ಳು
ಮತ್ತೆಲ್ಲಿ ತುಳಿದೆ ಕೊನೆ ಮುಳ್ಳು ನಲ್ಲರಳ್ಳಿ
ಕಟ್ಟೀಯ ಇಳಿದು ಬರುವಾಗ

ತಾಯಿ ನಿನಪಾದ ಆಲಿಗಿನ್ನ ತಿಳುವಮ್ಮ
ಮ್ಯಾಲೆಲ್ಲಿ ತುಳಿದೆ ಕೊನೆಮುಳ್ಳು
ಮ್ಯಾಲೆಲ್ಲಿ ತುಳಿದೆ ಕೊನೆ ಮುಳ್ಳು ನಲ್ಲರಳ್ಳಿ
ಏರೀಯ ಇಳಿದು ಬರುವಾಗ

ಸುಕ್ಕರವಾರದ ದಿನ ವಸ್ತುಲವ ಸಾರುಸಿ
ಬಟ್ಟೀನ ಬರಣಿ ವರಗಿಟ್ಟು
ಬಟ್ಟೀನ ಬರಣಿ ವರಗಿಟ್ಟು ನಲ್ಲರಳ್ಳಿ
ಸತ್ತಿ ಜೋಗಾಡಿ ವೊರಟಾಳೆ

ತಾಯಿ ಜೋಗಾಡಿದರೆ ದ್ಯಾನದಪಡಿ ನೀಡೇನು
ಸಾಲುವಳಿ ಕೊಡುವೆನು ಚವುಡೀಗೆ
ಸಾಲುವಳಿ ಕೊಡುವೆನು ಚವುಡೀಗೆ ನಲ್ಲರಳ್ಳಿ
ತಾಯಿ ಜೋಗಾಡಿ ವೊರಟಾಳೆ

ಮುತ್ತೀನ ಕೊರವಂಜಿ ನೆತ್ತಿಮ್ಯಾಲಿಟಕಂಡು
ಸುತ್ತಲಗೇರ್ಯಾಗೆ ದೊರೆ ಜೋಗ
ಸುತ್ತಲಗೇರ್ಯಾಗೆ ದೊರೆ ಜೋಗ ಆಡೋಳು
ಸತ್ತಿಮಾರವ್ನ ದನಿಯು ಚೆಂದ

ಚಿನ್ನಾದ ಕೊರವಂಜಿ ಕನ್ನೆಮ್ಯಾಲಿಟುಕಂಡು
ನನ್ನಾಕೇರ್ಯಾಗ ದೊರೆ ಜೋಗ
ನನ್ನಾಕೇರ್ಯಾಗ ದೊರೆ ಜೋಗ ಆಡೋಳು
ಕನ್ನೆ ಮಾರವ್ನ ಚೆಂದ

ಮಟ್ಟಮದ್ಯನದಾಗ ಸತ್ತೈತ್ಲಗೆ ವೊರಟಾಳೋ
ಮುತ್ತಿನ ಕೊರವಂಜಿ ಬಾಗುಲಾಗ
ಮುತ್ತಿನ ಕೊರವಂಜಿ ಬಾಗುಲಾಗ ನಲ್ಲರಳ್ಳಿ
ಸತ್ತಿ ಜೋಗಾಡಿ ವೊರಟಾಳೆ

ಮಾರ ಮದ್ಯಾನದಾಗ ತಾಯೆತ್ತ ವೊರಟಾಳೆ
ಅವಳದ ಕೊರವಂಜಿ ಬಾಗುಲಾಗ
ಅವಳದ ಕೊರವಂಜಿ ಬಾಗುಲಾಗ ಇಟಕಂಡು
ತಾಯಿ ಜೋಗಾಡಿ ವೊರಟಾಳೆ

ಅಳ್ಳಗಲ್ಲು ಗುಡಿಸಿ ನಿಲ್ಲೆಂದಳು ಗುಡಿಗಾಳ
ಅಲ್ಲಿ ನಲ್ಲರಳ್ಳಿ ಬಯಲಾಗ
ಅಲ್ಲಿ ನಲ್ಲರಳ್ಳಿ ಬಯಲಾಗ ಮಾರಕ್ಕ
ನಿಲ್ಲಂದಳು ಗಾರೆ ಗುಡಿಗಾಳ

ಸೆಕ್ಕೆಗಲ್ಲು ಗುಡಿಸಿ ಕಟ್ಟೆಂದಳು ಗುಡಿಗಾಳ
ಚಿಕ್ಕ ನಲ್ಲರಳ್ಳಿ ಬಯಲಾಗ
ಅಲ್ಲಿ ನಲ್ಲರಳ್ಳಿ ಬಯಲಾಗ ಮಾರಕ್ಕ
ಕಟ್ಟೆಂದಾಳು ಗಾರೆ ಗುಡಿಗಾಳ

ಒಂದೇ ಉಳಿಯ ಒಂದು ಒಂದೇ ಬಳಸುಬಂದು
ಒಂದೂರ ಬಡಗಿ ಅರಿಬಂದು
ಒಂದೂರ ಬಡಗಿ ಅರಿಬಂದು ಮಾರಕ್ಕಾನ
ಗುಡಿಯ ಒಂದು ದಿನಕ ಕಡುದಾರೆ

ಎರಡು ಉಳಿಯ ಬಂದು ಎರಡು ಬಳಸು ಬಂದ
ಎರಡೂರ ಬಡಗಿ ಆರಿಬಂದು
ಎರಡೂರ ಬಡಗಿ ಆರಿಬಂದು ಮಾರಕ್ಕಾನ
ಎರಡೆರಡು ದಿನಕ ಕಡೆದಾರೆ

ಪಟ್ಟಿಮಂಚ ಕಡುದ ಉತ್ತುರಾಸ ಕಡುದ
ಅಕ್ಕಮಾರವ್ವನ ಬಿಡುಗಡೆದ
ಅಕ್ಕಮಾರವ್ವನ ಬಿಡುಗಡೆದ ಬಡಗೀಗೆ
ಮತ್ತೇನ ಕೊಡುವೆ ಇರಿಯಣ್ಣ

ತೂಗುಮಂಚ ಕಡೆದದಾರಿವಂದ್ಲ ಕಡೆದ
ತಾಯಿ ಮಾರವ್ವ ಬಿಡುಗಡೆದ
ತಾಯಿ ಮಾರವ್ವ ಬಿಡುಗಡೆದ ನೀನೇನು
ಕೊಡುವೆ ಇರಿಯಣ್ಣ

ಬಾಗುಲಕಡೆದಣ್ಣಾಗೆ ಬಾಳೆಯಣ್ಣ ಕೊಡುವೆ
ಜೋಳಿಗೆವೊನ್ನು ಅಣಕೊಡುವೆ
ಜೋಳಿಗೆವೊನ್ನು ಅಣಕೊಡುವೆ ಮಾರವ್ವಾನ
ಬಾಗುಲಕಡೆಗೆ ಬಡಗೀಗೆ

ಉತ್ರಾಸ ಕಡೆದಣ್ಣಾಗ ಉತ್ತುತ್ತಿ ಅಣ್ಣಕೊಡುವೆ
ಬಟ್ಟಾಲವೊನ್ನು ಅಣಕೊಡುವೆ
ಬಟ್ಟಾಲವೊನ್ನು ಅಣಕೊಡುವೆ ಮಾರಕ್ಕಾನ
ಉತ್ರಾಸ ಕಡದಂತ ಬಡಗೀಗೆ

ಸಂದಿಸಂದಿ ಮುತ್ತು ನಂದಾದೀವಿಗೆ ಬೆಳಕು
ಗಂದದ ಕೊರಡೀಲಿ ನೆಲಗಾರೆ
ಗಂದದ ಕೊರಡೀಲಿ ನೆಲಗಾರೆ ಕೊಟ್ಟೈತೆ
ರೆಂಬೆ ಮಾರವ್ನ ಗುಡಿಯಾಗೆ

ಮೂಲೆಮೂಲೆಗೆ ಮುತ್ತು ಪ್ರಾಣಾದೇವಿಗೆ ಬೆಳಕು
ಗಾಜೀನ ಕೊರಡೀಲಿ ನೆಲಗಾರೆ
ಗಾಜೀನ ಕೊರಡೀಲಿ ನೆಲಗಾರೆ ಕೊಟ್ಟೈದೆ
ತಾಯಿ ಮಾರವ್ನ ಗುಡಿಯಾಗೆ

ಅಕ್ಕ ಮಾರೀಯ ಗುಡಿಯ ವೊಕ್ಕು ನೋಡನು ಬನ್ನಿ
ವುಕ್ಕೀನ ಕಂಬ ನಗುತಾವೆ
ವುಕ್ಕೀನ ಕಂಬ ನಗುತಾವೆ ಬಡಗೇರಣ್ಣ
ಕೆತ್ತುತಲಿ ಮುತ್ತು ಸುರಿದಾವೆ

ತಾಯಿ ಮಾರಿಗುಡಿಯ ವೋಗಿ ನೋಡನು ಬನ್ನಿ
ಗಾಜೀನ ಕಂಬ ನಗುತಾವೆ
ಗಾಜೀನ ಕಂಬ ನಗುತಾವೆ ಬಡಗೇರಣ್ಣ
ಮೂಡುತಲಿ ಮುತ್ತು ತಗುದಾನೆ

ವಾಲೀಯ ಮುರಿಯಂಗ ಆಯವಾದುವುಕಲ್ಲು
ತಾಯಿ ಮಾರವ್ನ ಸಿಕರಾದ
ತಾಯಿ ಮಾರವ್ನ ಸಿಕರಾದ ಬಾಗಲುಕಲ್ಲು
ವಾಲೀಯ ಮರಿಯ ತಿರುವಾವೆ

ಬಂದೀಯ ಮುರಿಯಂಗೆ ಅಂದವಾದವುಕಲ್ಲು
ರೆಂಬೆ ಮಾರವ್ನ ಸಿಕರಾವೆ
ತಾಯಿ ಮಾರವ್ನ ಸಿಕರಾದ ಬಾಗುಲಕಲ್ಲು
ಬಂದೀಯ ಮರಿಯ ತಿರುವ್ಯಾರೆ

ಬಂಡಿಬಂದಾವೆ ಅಂದವುಳ್ಳಮ್ಮಾಗ
ನಂದಿಗೀಸ್ವರನ ಮಗಳೀಗೆ
ನಂದಿಗೀಸ್ವರನ ಮಗಳೀಗೆ ಮಾರಕ್ಕಾಗೆ
ವಾಲೆ ಬಂದಾವೆ ಸಿವನಿಂದ

ಕಟ್ಟಿಯಿಂದಾಕ ವೋದಾಳೆ ಮಾರಕ್ಕ
ನೆಟ್ಟನ್ನ ಬಿದರ ಕಡಿಸ್ಯಾಳೆ
ನೆಟ್ಟನ್ನ ಬಿದರ ಕಡಿಸ್ಯಾಳೆ ಅಡಲಿಗಣಿಸಿ
ಸೆಟ್ಟರೆಂಡರಿಗೆ ವೊರಿಸ್ಯಾರೆ

ಏರಿಯಿಂದಾಕೆ ವೋದಾಳೆ ಮಾರಕ್ಕ
ನ್ಯಾರನ್ನ ಬಿದರು ಕಡಿಸ್ಯಾಳೆ
ನ್ಯಾರನ್ನ ಬಿದರು ಕಡಿಸ್ಯಾಳೆ ಅಡಲಿಗಣಿಸಿ
ರಾಯರೆಂಡರಿಗೆ ವೊರಿಸ್ಯಾರೆ

ಗಾಡಿವೂಡೀರಿ ಮ್ಯಾಲೆತ್ತು ಕಟ್ಟೀರಿ
ಕಾಲೀಗೆ ಗಂದ ಇಡಿರಣ್ಣ
ಕಾಲೀಗೆ ಗಂದ ಇಡಿರಣ್ಣ ಆರಕ್ಕಾನ
ಗಾಡೋದವು ಬಾಳೆ ವನದಾಗೆ

ಬಂಡಿವೂಡೀರೆ ಮುಂದೆತ್ತು ಕಟ್ಟೀರೆ
ಬಂಡೀಗೆ ಬಟ್ಟು ಇಡಿರಣ್ಣ
ಬಂಡೀಗೆ ಬಟ್ಟು ಇಡಿರಣ್ಣ ಮಾರಕ್ಕಾನ
ಬಂಡೋದವು ಬಾಳೆ ವನಗಳಿವೆ

ಮಟ್ಟಮದ್ಯನದಾಗ ಸತ್ತ್ಯೇನು ಬ್ರಮಿಸ್ಯಾಳೆ
ತುಪ್ಪಸಕ್ಕರಿ ಎಡಿಯಾಗಿ
ತುಪ್ಪಸಕ್ಕರಿ ಎಡಿಯಾಗಿ ಸತ್ತೀಗೆ
ಸುತ್ತಲು ಮಾತಂಗಿರೊದಗ್ಯಾರೆ

ಮಾರ ಮದ್ಯನದಾಗ ತಾಯೇನು ಬ್ರಮಿಸ್ಯಾಳು
ಆಲುಸಕ್ಕರಿ ಎಡಿಯಾಗಿ
ಆಲುಸಕ್ಕರಿ ಎಡಿಯಾಗೋವೊತ್ತೀಗೆ
ದೂರದ ಮಾತಂಗಿರೊದಗ್ಯಾರೆ

ಆಕಾಸಾದುದ್ದಾಕು ಆಕ್ಯಾಕೆ ನಿಂತಾಳು
ಬಾಪುರಿ ತೋಳ ತಿರುವೂತ
ಬಾಪುರಿ ತೋಳ ತಿರುವೂತ ಚಿಕ್ಕೇನಳ್ಳಿ
ಕಾತೇರಿಗೊರವ ಕೊಡುತಾಳೆ

ಅಂಬಾರದುದ್ದಾಕ ರಂಬ್ಯಾಕ ನಿಂತವಳೆ
ಬಂದೀಯ ತೋಳ ತಿರುವೂತ
ಬಂದೀಯ ತೋಳ ತಿರುವೂತ ಚಿಕ್ಕೇನಳ್ಳಿ
ಕಾತೇರಿಗೊರವ ಕೊಡುತಾಳೆ

ಅಂಬಾರದುದ್ದಾಕ ರಂಬ್ಯಾಕ ನಿಂತವಳೆ
ಬಂದೀಯ ತೋಳ ತಿರುವೂತ
ಬಂದೀಯ ತೋಳ ತಿರುವೂತ ಚಿಕ್ಕೇನಳ್ಳಿ
ರೆಂಬೇರಿಗೊರವ ಕೊಡುತಾಳೆ

ಕೇರಿವೊಕ್ಕಾಳೆ ಈರಾನ ಕರೆದಾಳೆ
ಜೋಡಂಗಿಬಿಲ್ಲ ಇಡುದವಳೆ
ಜೋಡಂಗಿಬಿಲ್ಲ ಇಡುದವಳೆ ದುರತೇರ್ನ
ಸೂರು ಸೂರಾಳ ವಡೆದಾಳೆ

ಸಂದಿವೊಕ್ಕಾಳೆ ರಂಗಾನಮ ಕರೆದಾಳೆ
ಸಿಂಗಾರಿಬಿಲ್ಲ ಇಡುದಾಳೆ
ಸಿಂಗಾರಿಬಿಲ್ಲ ಇಡುದಾಳೆ ದುರುತೇರ್ನ
ತುಂಡಲ ತುಂಡಾಗ ವಡೆದಾಳೆ

ಕ್ವಾಟೆಕ್ವಾಟೆಗೆ ದೆವ್ವ ಆತುಕೊಂಡೈದಾವೆ
ಕ್ವಾಟಿಗ್ಗಾವುತಿಯ ಕೊಡಿರಣ್ಣ
ಕ್ವಾಟಿಗ್ಗಾವುತಿಯ ಕೊಡಿರಣ್ಣ ಚಿಕ್ಕೇನಳ್ಳಿ
ಆತುಕೊಂಡಿರುವ ಗರತೀಗೆ

ಸಂದಿಸಂದಿಗೆ ದೆವ್ವವೊಂದಿಕೊಂಡೈದಾವೆ
ಸಂದಿಗಾವುತಿಯ ಕೊಡಿರಣ್ಣ
ಸಂದಿಗಾವುತಿಯ ಕೊಡಿರಣ್ಣ ಚಿಕ್ಕೇನಳ್ಳಿ
ವೊಂದಿಕೊಂಡಿರುವ ಗರತೀಗೆ