ಸಾಮಾನ್ಯವಾಗಿ ಗೊಲ್ಲರ ಬುಡಕಟ್ಟು ಹಟ್ಟಿಗಳಲ್ಲಿ ಮಾರಿಗುಡಿಗಳಿರುವುದಿಲ್ಲ. ಮಾರಮ್ಮ ಗ್ರಾಮ ಸಂಸ್ಕೃತಿಯವಳು. ಆದುದರಿಂದಲೇ ಆಕೆಗೆ ಅನೇಕ ಸ್ವರೂಪಗಳಿವೆ. ರೋಗಗಳ ಮಾರಿಯಿಂದ ಹಿಡಿದು ಬಿಸಿಲು, ಗಾಳಿ, ನೀರು, ಬೆಂಕಿ ಹೀಗೆಲ್ಲ ಮಾರಿ ದೇವತೆಗಳಿವೆ. ಗ್ರಾಮ ಸಂಸ್ಕೃತಿಯ ಮಾರಿಯ ಗೀತೆಯನ್ನು ಕಲಿತು ಸಿರಿಯಜ್ಜಿ ಹಾಡಿರುವ ಈ ಕಟ್ಟೆ ಮಾರವ್ವ ಕಥನಗೀತೆಯಲ್ಲಿ ಕೋಣನ ಬಲಿ, ಬೇವಿನಸೊಪ್ಪು ಸುತ್ತಿಕೊಂಡ ಬೆತ್ತಲೆ ಸೇವೆ, ಬಾಯಿ ಬೀಗ, ಸಿಡಿಯ ಸೇವೆ ಇದೆಲ್ಲ ಆಚರಣೆಗಳ ಪ್ರಸ್ತಾಪವಿದೆ. ಇದೆಲ್ಲವೂ ಬುಡಕಟ್ಟು ಸಂಸ್ಕೃತಿಯಲ್ಲಿರುವುದಿಲ್ಲ. ಆದರೆ ಗ್ರಾಮ ನಾಗರೀಕತೆಗೆ ಸಿಲುಕಿರುವ ಬುಡಕಟ್ಟು ಸಮೂಹ ಮಾರಿ ಜಾತ್ರೆಗಳಲ್ಲಿ ಬೇವಿನುಡುಗೆ, ಬಾಯಿ ಬೀಗ, ಸಿಡಿ ಮತ್ತು ಬಲಿ ಆಚರಣೆಗಳಲ್ಲಿ ಭಾಗವಹಿಸುವುದುಂಟು. ಮಾರಿ ಸಂಬಂಧದ ಎಲ್ಲ ಆಚರಣೆ ಮತ್ತು ಜಾತಿ ಸಂಘರ್ಷದ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿರುವ ಕಥೆ ಇವೆಲ್ಲವೂ ಹಿಂಸೆಯ ಹಿನ್ನೆಲೆಯಲ್ಲೇ ಹುಟ್ಟಿಕೊಂಡಿರುವ ಕಥೆ ಇವೆಲ್ಲವೂ ಹಿಂಸೆಯ ಹಿನ್ನೆಲೆಯಲ್ಲೇ ಇದ್ದು, ಬಹುಶಃ ಯುದ್ಧಾನಂತರ ಗ್ರಾಮ ವಾತಾವರಣದಲ್ಲಿ ಜನ ಹಿಂಸೆಗೆ ಹೆದರದಂತೆ, ಅದರ ಗುಂಗಿನಲ್ಲೇ ಇರುವಂತೆ ಅಧಿಕಾರಶಾಹಿ ಇದನ್ನು ಬಳಕೆಗೆ ತಂದು ಕಾಯ್ದುಕೊಂಡು ಬಂದಂತೆ ಕಾಣಿಸುತ್ತದೆ. ಆದುದರಿಂದಲೇ ಮಾರಿದೇವತೆಯ ಕೊಂಡದ ಆಚರಣೆಗಳು, ಪ್ರಾಣಿ ಬಲಿ ಇವು ರಾಜ ಮಹಾರಾಜರ ಯಜ್ಞದ ವಿಧಿವಿಧಾನಗಳಂತೆ ಕಾಣಿಸುತ್ತದೆ. ಮಾರಿಗೆ ಕೊಡುವ ಕೋಣನ ಕುರಿಯ ಬಲಿಯೇ ಗುಡ್ಡದಂತೆ ಬಿದ್ದಿತ್ತು ಎಂಬ ಪದ್ಯ ಈ ಮಾರವ್ವ ಗೀತೆಯಲ್ಲಿದೆ.

ಮಂಗಳವಾರದ ದಿನ ಮದ್ಯನದಾಗ
ಮುಂಡ ಬಿದ್ದಾವೆ ಮುಗುಲುದ್ದ ನಲ್ಲರಳ್ಳಿ
ಕೆಂಡಗಣ್ಣಿನ ದೈತೆ ದಯವಾಗೇ

ಇಷ್ಟೇ ಅಲ್ಲದೇ ಕೊಂದ ಕೋಣನ ಮೈಯ ಮಾಂಸದ ನೆಣದಲ್ಲಿ ದೀಪ ಹಚ್ಚಿ ಅದನ್ನು ಕೋಣನ ರುಂಡದ ಮೇಲಿಡಬೇಕು. ಜತೆಗೆ ಕೋಣನ ಮುಂಗಾಲು ಕತ್ತರಿಸಿ ಅದನ್ನು ರುಂಡದ ಬಾಯಿಗೆ ಸಕ್ಕಿಸಿಡುವ ಅಮಾನುಷ ವಿವರಗಳು ಬರುವ ಈ ಕಥನಗೀತೆಯ ಸೊಲ್ಲುಗಳು ಏಳು

: ಅಕ್ಕಕ್ಕ ಮಾತನಾಡೆ ಚಿಕ್ಕನಲ್ಲರಳ್ಳಿ ಎಚ್ಚೀನ
ಮಾನ್ಯದ ಗರತಿ ಮತ್ತೊಂದು ಮಾತನಾಡೆ

. ಯಾವೂರ ಗೌಡರಮ್ಮ ಚಿಕ್ಕ ಚಿಕ್ಕೇನಳ್ಳಿ
ಮುತ್ತೀನ ಊರು ಬಾಗುಲಿಗೆ ಎಚ್ಚೀನ ಗೌಡರಮ್ಮ

. ಮಾರೀಯ ಮಾಡುವಾರೆ ಇರಿಯಟ್ಟಿ ಗೌಡಾರು
ಬಾಳೆಯ ಕದಲೆಕಟ್ಟಿ ಮಾರಕ್ಕಾನ ಮಾಡುವಾರೆ

. ಮಾರ ಮದ್ಯನದಾಗ ತಾಯೆತ್ತಲೋದಾಳೆ
ಊರ ಬೆದಕೀದೆ ಬೇವಿನ ಜೋಲಿನಗವಳೆ ಕಿಡಿಗಣ್ಣೆ

. ಬಂಡಾರಕು ಬಾಗುತಾಳೆ
ಮಾರವ್ವ ಚಿನ್ನದಲಿ ಸೂಗುತಾಳೆ

. ಮಲ್ಲಿಗೆ ಮಾಲೆ ಕಾಣೆ ಮಾರವ್ವ ಚೆಲ್ಲಾದು ದವನ ಕಾಣೆ

. ಗದ್ದೀಗೆ ಮ್ಯಾಗೆ ಇರುವೋಳೆ ಮುದ್ದು ಮುವತ್ತಳ್ಳಿ
ಗೆದ್ದು ಬಂದಿರುವೋಳ ನೋಡಬನ್ನಿ

 

ಕಟ್ಟೆ ಮಾರವ್ವ ಗೀತೆ

ಮಟ್ಟಮದ್ಯನದಾಗ ವುಟ್ಟಿತು ಬೇವಿನಮರ
ವುಟ್ಟುತಲೆ ಕಾಯಿ ಜಗುವೂತ
ವುಟ್ಟುತಲೆ ಕಾಯಿ ಜಗುವೂತ ಮಾರಕ್ಕ
ವುಟ್ಟಾಳು ಬೇವಿನ ಮರದಾಗ

ಮಾರ ಮದ್ಯನದಾಗ ಮೂಡೀತು ಬೇವಿನಮರ
ಮೂಡುತಲೆ ಕಾಯಿ ಜಗುವೂತ
ಮೂಡುತಲೆ ಲಾಯಿ ಜಗುವೂತ ಮಾರಕ್ಕ
ಮೂಡ್ಯಾಳು ಬೇವಿನ ಮರದಾಗೆ

ವುತ್ತಾದ ಕೋಮ್ಯಾಗ ವುಟ್ಯಾಳೆಕ್ಕಮಾರಿ
ನೆತ್ತೀಯ ಮ್ಯಾಲೆ ಗೆದಲುಂಡು

ನೆತ್ತೀಯ ಮ್ಯಾಲೆ ಗೆದಲುಂಡು ಮಾರಕ್ಕಾನ
ಒತ್ತಿಲಾಡ್ಯಾವೆ ಗಡಿಸರುಪ

ಆವೀನ ಕೋಮ್ಯಾಗ ಮೂಡ್ಯಾಳಕ್ಕಮಾರಿ
ಮಾರೀಯ ಮ್ಯಾಲೆ ಗೆದುಲುಂಡು
ಮಾರೀಯ ಮ್ಯಾಲೆ ಗೆದುಲುಂಡು ಉತ್ತನಿಟ್ಟು
ವೋಮಾಕಾಡ್ಯಾವೆ ಗಡಿಸರುಪ

ಉತ್ತಾದ ಕೋಮ್ಯಾಗ ವುಟ್ಯಾಳಕ್ಕಮಾರಿ
ವಟ್ಟಿದೇಳು ದಿನಕ ಸಿವಪೂಜೆ
ವುಟ್ಟಿದೇಳು ದಿನಕ ಸಿವಪೂಜೆ ನನ್ನಣ್ಣಗಳು
ಬೆಳೆದಾರೆ ಬಿಳಿಯಾ ಕನಗಾಲೂವ

ಆವೀನ ಕೋಮ್ಯಾಗ ಮೂಡ್ಯಾಳಕ್ಕಮಾರಿ
ಮೂಡಿದೇಳು ದಿನಕ ಸಿವಪೂಜೆ
ಮೂಡಿದೇಳು ದಿನಕ ಸಿವಪೂಜೆ ನನ್ನಣ್ಣಗಳು
ಬೆಳೆದಾರೆ ಬಿಳಿಯಾ ಕನಗಾಲೂವ

ಎಲ್ಲೀಗೆ ವೋದ್ಯಮ್ಮ ಮಲ್ಲೀಗೆ ಮುಡಿಮಾರಮ್ಮ
ಬಿನ್ನಾಣೆ ಕಡೆದ ನೆಡುವೀನ
ಬಿನ್ನಾಣೆ ಕಡೆದ ನೆಡುವೀನ ಅಕ್ಕಮಾರಿ
ಎಲ್ಲಿಗೋದ್ಯಮ್ಮ ಪದಬರವು

ಎತ್ತಾಲೋದ್ಯಮ್ಮ ಮುತ್ತೀನ ಮುಡಿಮಾರಕ್ಕ
ಚಿತ್ತಾರ ಕಡೆದ ನೆಡುವೀನ
ಚಿತ್ತಾರ ಕಡೆದ ನೆಡುವೀನ ಅಕ್ಕಮಾರಿ
ಎತ್ತಾಲೋದ್ಯಮ್ಮ ಪದಬರವು

 ಸತ್ತಿ ನಿನ್ನ ನೆನೆದು ಚಿತ್ತಪಲ್ಲುಟವಾದೆ
ಚಿಕ್ಕಾನಲ್ಲರಳ್ಳಿ ಮಳಿಗ್ಯಾಗೆ
ಚಿಕ್ಕಾನಲ್ಲರಳ್ಳಿ ಮಳಿಗ್ಯಾಗೆ ಓದಿಕಂಬ
ವತ್ತಿಗೆ ತತ್ತಾರೆ ಮದನಾರಿ

ವತ್ತೀಗೆ ಕೊಟ್ಟೈದಾಳೆ ಅತ್ತಿರ ನಿಂತೈದಾಳೆ
ತಪ್ಪುದ ನಾನ್ಯಾಂಗ ಬರೆಯಾಲಿ

ತಪ್ಪುದ ನಾನ್ಯಾಂಗ ಬರೆಯಾಲಿ ಮಾರವ್ವಾನ
ಜೊತ್ತಗನ್ನುಡವೇ ತಿಳಿಯಾವು

ತಾಯಿ ನಿನ್ನ ನೆನೆದು ಗ್ಯಾನಪಲ್ಲಟವಾಗಿ
ರಾಯನಲ್ಲರಳ್ಳಿ ಮಳಿಗ್ಯಾಗೆ
ರಾಯನಲ್ಲರಳ್ಳಿ ಮಳಿಗ್ಯಾಗೆ ಓದಿಕಂಬ
ವಾಲೆ ತತ್ತಾರೆ ಮದುನಾರಿ

ವಾಲೆ ಕೊಟ್ಟೈದಾಳೆ ವಾರಿಲಿ ನಿಂತೈದಾಳೆ
ಬರುದ ನಾನ್ಯಾಂಗ ಬರೆಯಾಲಿ
ಬರುದ ನಾನ್ಯಾಂಗ ಬರೆಯಾಲಿ ಮಾರವ್ವಾನ
ಜೋಡುಗನ್ನಡವೇ ತಿಳಿಯಾವು

ಎಲ್ಲಾರ ವಚನಾಕ ನಿಲ್ಲೋಳೆ ಮಾರವ್ವ
ನೆಲ್ಲು ತೆನೆಯಂಗ ಬಳುಕೂತ
ನೆಲ್ಲು ತೆಗೆಯಂಗ ಬಳುಕೂತ ಬಾಗೂತ
ನಿಲ್ಲಮ್ಮ ನಮ್ಮ ವಚನಾಕ

ಚಿಕ್ಕನಲ್ಲರಳ್ಳಿ ಸೊಪ್ಪೀನ ಕೊನೆಯ ಮ್ಯಾಲೆ
ಅತ್ತಿಕರೆದಾಳೆ ಗೌಡಾನ
ಅತ್ತಿಕರೆದಾಳೆ ಗೌಡಾನ ಈರಣ್ಣಾನ
ಅಕ್ಕಿವಂಬಾಳೆ ಬರಲೆಂದೇ

ರಾಯನಲ್ಲರಳ್ಳಿ ಬೇವೀನ ಕೊನೆಯಮ್ಯಾಲೆ
ಏರಿ ಕರೆದಾಳೆ ಗೌಡಾನ
ಏರಿ ಕರೆದಾಳೆ ಗೌಡಾನ ಈರಣ್ಣಾನ
ಕಾಯಿ ವಂಬಾಳೆ ಬರಲಂದು

ಅಲ್ಲಿ ಸಾರಂದರೆ ಇಲ್ಯಾಕ ಸಾರ್ಯಾನೆ
ಇಲ್ಲಿ ಸಾರಿದನೆ ತಳವಾರ
ಇಲ್ಲಿ ಸಾರಿದನೆ ತಳವಾರ ಗೌಡರಮನೆಯ
ಬೆಲ್ಲದಾರುತಿಯೇ ಬರಲೆಂದು

ಅತ್ತ ಸಾರಂದರೆ ಇತ್ತ್ಯಾಕ ಸಾರ್ಯಾನೆ
ಎತ್ತ ಸಾರಿದನೆ ತಳವಾರ
ಎತ್ತ ಸಾರಿದನೆ ತಳವಾರ ಗೌಡರಮನೆಯ
ಇಟ್ಟನಾರುತಿಯೇ ಬರಲೆಂದು

ಪಡುವಾಲ ಕೇರ್ಯಾಗ ಸಡಗರವೇನಮ್ಮ
ಆರುದಿಗೌಡಾನ ಮನೆಯಾಗ
ಆರುದಿಗೌಡಾನ ಮನೆಯಾಗ ಅಕ್ಕಮಾರಿ
ಪಡುಲಕ್ಕಿಸೂಡಿ ಬರುತಾಳೆ

ಮುಂದಾಲ ಕೇರ್ಯಾಗ ಜಂಬಾರವೇನಮ್ಮ
ಸಂಬುಗೌಡರ ಮನೆಯಾಗ
ಸಂಬುಗೌಡರ ಮನೆಯಾಗ ಅಕ್ಕಮಾರಿ
ಅಂಗಾರಸೂಡಿ ಬರುತಾಳೆ

ಅಟ್ಟಿಗೌಡಾನ ಏನು ಬೇಡ್ಯಾಳು ಮಾರಕ್ಕ
ಬೆಟ್ಟಿಗುಂಗುರ ಕೈಗೆ ಬಳೆ
ಬೆಟ್ಟಿಗುಂಗುರ ಕೈಗೆ ಬಳೆ ಬಾಲಂದಿ
ಅಟ್ಟಿಗೌಡಾರ ಮಗತಂದ

ನಾಡ ಗೌಡ ಏನ ಬೇಡ್ಯಾಳು ಮಾರಕ್ಕ
ಕಾಲಿಗುಂಗುರ ಕೈಗೆ ಬಳೆ
ಕಾಲಿಗುಂಗುರ ಕೈಗೆ ಬಳೆ ಬಾ ಬಂದಿಗೌಡ
ನಾಡು ಗೌಡಾರ ಮಗತಂದ

ತಾಯಿ ಮಾರವ್ವ ಕಟ್ಯಾಳೆ ದೇವರಲ್ಲಿ ಕನಾರುತಿ
ಸ್ವಾಮಿ ನಿಂಗಣ್ಣ ವಳಗಂದ
ಸ್ವಾಮಿ ನಿಂಗಣ್ಣ ವಳಗಂದ ಕೇಳ್ಯಾನೆ
ತಾಯಿ ನೀನ್ಯಾರ ಮಗಳೆಂದ

ಕೇಳಿದರೆ ರೂಡಿಗೀಸ್ವರನಮಗಳೆಂದು
ಅಕ್ಕಮಾರಿ ಕಟ್ಯಾಳೆ ಸಿಕ್ಕ ಮಲಿಕಾನಾರುತಿ
ಅಪ್ಪ ಈರಣ್ಣ ವಳಗಿಂದ
ಅಪ್ಪ ಈರಣ್ಣ ವಳಗಿಂದ ಕೇಳ್ಯಾನೆ
ಸತ್ತಿ ನೀನ್ಯಾರ ಮಗಳೆಂದ

ಕೇಳಿದರೆ ಸೃಷ್ಟಿಗೀಸ್ವರನ ಮಗಳೆಂದು
ಮಾರಮದ್ಯನದಾಗ ತಾಯೆತ್ತವೋದಾಳು
ಊರೂಲಾಲೂಸಿ ಬೆದಕೀದೆ
ಊರೂಲಾಲೂಸಿ ಬೆದಕೀದೆ ಬೇವೀನ
ಜೋಲಿನಾಗವಳೆ ಕಿಡಿಗಣ್ಣೆ

ಮಟ್ಟಮದ್ಯನದಾಗ ಸತ್ಯತ್ಲಗೋದಾಳು
ಅಟ್ಟಿಲಾಲೂಸಿ ಬೆದಕೀದೆ
ಅಟ್ಟಿಲಾಲೂಸಿ ಬೆದಕೀದೆ ಬೇವೀನ
ತೊಟ್ಟಿನಾಗವಳೆ ಕಿಡಿಗಣ್ಣೆ

ಅಲುವೊತ್ತುಕಂಡು ಬಾಲಾನೆತ್ತಿಕಂಡು
ತಾಯಿಗತಿಯೆಂದು ನಡೆದಾನೆ
ತಾಯಿಗತಿಯೆಂದು ನಡೆದಾನೆ ತಾಯವ್ವ
ನಮಮ್ಯಾಲೇದಯವಿರಲಿ

ತುಪ್ಪವೊತ್ತುಕೊಂಡು ಪುತ್ರನೆತ್ತಿಕಂಡು
ಚಿಕ್ಕವಲ್ಲರಳ್ಳಿ ಕೆರೆಯಾಗ
ಚಿಕ್ಕವಲ್ಲರಳ್ಳಿ ಕೆರೆಯಾಗ ನನ್ನಣ್ಣಗಳು
ಸತ್ತಿಗತಿಯೆಂದು ನಡೆದಾರೆ

ವಾವುರಿಗ್ಯಾಗಳ ನೀರು ಕಾಯೂತ ಮರಳೂತ
ತಾಯಿ ಮಾರವ್ವ ಎರಕಳ್ಳಿ
ತಾಯಿ ಮಾರವ್ವ ಎರಕಳ್ಳಿ ಚಿಕ್ಕಣ್ಣ
ಸೀರೆ ತಂದವನೆ ಉಡುಬಾರೆ

ಬಿಟ್ಟಿ ಸಣ್ಣದೆಂದು ತಾಯವ್ವ ಮುನುದಾಳೆ
ನಾಡಾಗೌಡಾರ ಮನಗೇನಿ
ನಾಡಾಗೌಡರ ಮನಗೇನಿ ಸಿರಿಯಣ್ಣ
ಸೀರೆ ತಂದಾನೆ ಉಡುಬಾರೆ

ಗಂಜೀಯ ಸೀರೆ ಅಂದವಾಗಿ ಉಡಸಣ್ಣ
ಮುಂದ್ಲೋಟು ಸೆರಗ ಇಳಿಬಿಡೆ
ಮುಂದ್ಲೋಟು ಸೆರಗ ಇಳಿಬಿಡೆ ಮಾರಕ್ಕಾನ
ಬಂದೀಯ ತೋಳ ಕಡೆಗಿರಿಸೋ

ಪಟ್ಟಾದ ಸೀರೆ ಒಪ್ಪಾಕ ಉಡುಸಮ್ಮ
ಸೀರೆ ಸಣ್ಣಾದೆಂದು ತಾಯಿ ಮುನುದಾಳೆ
ನಾಡಾಗೌಡರ ಮನಗೇನಿ
ನಾಡಾಗೌಡರ ಮನಗೇನಿ ಸಿರಿಯಣ್ಣ
ಅತ್ತುಕೊಟ್ಟು ಸೀರೆ ತರಿಸ್ಯಾನೆ

ದಟ್ಟಿ ಸಣ್ಣಾದೆಂದು ಸತ್ತೈವ್ವ ಮುನುದಾಳೆ
ಅಟ್ಟಿಗೌಡರ ಮನಗೇನಿ
ಅಟ್ಟಿಗೌಡರ ಮನಗೇನಿ ಗೋಸ್ಯಣ್ಣ
ಅತ್ತುಕೊಟ್ಟು ಸೀರೇಯ ತರಿಸ್ಯಾನೆ

ಬಾನಗುರಿಮುಂದೆ ಬೊಬ್ಬೊರ ಅರಿ ಇಂದೆ
ಉಗ್ರಾಣದ ಗೌಡ ಗೋಸಣ್ಣ
ಉಗ್ರಾಣದ ಗೌಡ ಗೋಸಣ್ಣ ಬರುವಾಗ
ಮೊಗ್ಗರಳಿ ಮಾರಿ ವುಸಿನಕ್ಕು

ನಿಂಬೇಯ ಅಣ್ಣು ಮುಂದೆ ಕಂಬೀನ ಕುರಿಯಿಂದೆ
ನಾಡಗೌಡ ಚಿಕ್ಕಣ್ಣ ಬರುವಾಗ
ನಾಡಗೌಡ ಚಿಕ್ಕಣ್ಣ ಬರುವಾಗ ಮೊಗ್ಗೆಲ್ಲ
ವೂವಾಗರಳಿ ಮಾರಮ್ಮ ವುಸಿನಕ್ಕು

ಗಡಿಗೀಲಿ ತುಪ್ಪ ಎಡಗೀಲಿ ಬಾಳೆಯಣ್ಣು
ನಡೆನಡೆದು ಬರುವ ತಗರೀನ
ನಡೆನಡೆದು ಬರುವ ತಗರೀನ ಐಬೋಗಾಕೆ
ಗುಡುಗುನಾಡೂವಾಳೆಗುಡಿಯಾಗೆ

ಗಿಂಡೀಲಿ ಜೇನುತುಪ್ಪ ತೊಂಬೆ ಬಾಳೆಯಣ್ಣು
ಮುಂದೆ
ಮುಂದೆ ಬರುವ ತಗರೀಗೆ
ಮುಂದೆ ಮುಂದೆ ಬರುವ ತಗರೀಗೆ ಐಬೋಗಾಕೆ
ಸೆಂಡನಾಡುತಾಳೆ ಗುಡಿಯಾಗೆ

ಅಸುಮಕ್ಕಳಾಗ ದೆಸೆವಂತೆ ಮಾರಕ್ಕ
ದಸಲಿ ತಂದೈದಾನೆ ಉಡುಬಾರೆ
ದಸಲಿ ತಂದೈದಾನೆ ಉಡುಬಾರೆ ಏಳಾವೀನ
ಮೊಸರು ತಂದಿವಿನಿ ಸಲಿಸೇಳೆ

ಸಣ್ಣ ಮಕ್ಕಳಂಗೆ ಪುಣ್ಯವಂತೆ ಮಾರಕ್ಕ
ಬಣ್ಣ ತಂದಿವನಿ ಉಡುಬಾರೆ
ಬಣ್ಣ ತಂದಿವನಿ ಉಡುಬಾರೆ ಏಳಾವೀನ
ಗಿಣ್ಣ ತಂದಿವನಿ ಸಲಿಸೇಳೇ

ಅತ್ತು ಸಿಬ್ಬಲು ಕತ್ತರಿಸಿ ಮುಡುದವಳೆ
ಕಪ್ಪೇ ಇಟ್ಟವಳೆ ರವರವೇ
ಕಪ್ಪೇ ಇಟ್ಟವಳೆ ರವರವೇ ಚಿಕ್ಕಣ್ಣಾನ
ರಟ್ಟೊಳಗೆ ಮಾರಿ ಅಡಗೈವಳೆ

ಆರು ಸಿಬ್ಬಲೂವು ಆರಾರಿಸಿ ಮುಡುದವಳೆ
ಬಾಲೆಯಿಟ್ಟವಳೆ ರವರವೆ
ವಾಲೆಯಿಟ್ಟವಳೆ ರವರವೆ ಚಿಕ್ಕಾಣ್ಣಾನ
ತೋಳೊಳಗೆ ಮಾರಿ ಅಡಗ್ಯವಳೆ

ಅಕ್ಕಮಾರವ್ವ ಒಕ್ಕು ನೋಡನು ಬನ್ನಿ
ಕಪ್ಪೇ ಇಟ್ಟವಳೇ ರವರವೆ
ಕಪ್ಪೇ ಇಟ್ಟವಳೇ ರವರವೆ ಚಂದ್ರಗಾವಿ
ಕುಪ್ಪುಸ ತೊಟ್ಟವಳೇ ಭುಜತುಂಬ

ತಾಯಿ ಮಾರವ್ವನ ವೋಗಿ ನೋಡನು ಬನ್ನಿ
ವಾಲೆಯಿಟ್ಟವಳೆ ರವರವೆ
ವಾಲೆಯಿಟ್ಟವಳೆ
ರವರವೆ ಚಂದ್ರಗಾವಿ
ಸೀರೆಯುಟ್ಟವಳೆ ನಡುತುಂಬ

ಕೆಂಪಂಚಿನ ಸೀರೆ ಗುಂಪೊಡೆದ ಕೇದೀಗೆ
ಕೆಂಚೆ ನಿನಪೂಜೆ ಅಸನಾಗಿ
ಕೆಂಚೆ ನಿನಪೂಜೆ ಅಸನಾಗಿ ಚಿಕ್ಕಣ್ಣ
ಸಂಪಣ್ಣ ಕಯ್ಯ ಮುಗುದಾನೆ

ಕರಿಯಂಚಿನ ಸೀರೆ ಗರಿವಡೆದ ಕೇದೀಗೆ
ಆರಿದಿನಿನ ಪೂಜೆ ಅಸನಾಗಿ
ಅಂದಿನಿನ ಪೂಜೆ ಅಸನಾಗಿ ಗೋಸಣ್ಣ
ದೊರೆಯೆದ್ದು ಕೈಯ್ಯ ಮುಗುದಾವೆ

ಅಪ್ಪಗೋಸಣ್ಣನ ಅಟ್ಟೀಯವುದಿಯಾಗ
ಲೆತ್ತನಾಡ್ಯಾಳೆ ಐದೊರಸ
ಲೆತ್ತನಾಡ್ಯಾಳೆ ಐದೊರಸ ಗೋಸಣ್ಣಾನ
ಅತ್ತೊರಸದ ಮರಿಯೆ ನನಗೆಂದು

ಕುರಿಯೆದ್ದು ಬರುವಾಗ ಕೆರೆಯೆತ್ತಿನೋಡ್ಯಾಳೆ
ಕರಿಬೇವಿನ ಮರೆಯಾಗಿ
ಕರಿಯ ಬೇವಿನ ಮರೆಯಾಗಿ ಗೋಸಣ್ಣಾನ
ಕುರಿಯಿಂಡೀಗಡ್ಡ ಬರುತಾಳೆ

ಇಂಡೆದ್ದು ಬರುವಾಗ ಗುಂಡೈತ್ತಿನೋಡ್ಯಾಳೆ
ಕೊಂಬೆಬೇವಿನ ಮರದಾಗ
ಕೊಂಬೆಬೇವಿನ ಮರದಾಗ ಸಿರಿಯಣ್ಣಾನ
ಇಂಡಿಗೊಂದಾಳ ಕಳುವ್ಯಾಳೆ