ಮಾರ್ಚ್ ತಿಂಗಳಲ್ಲಿ ಜೋಕುಮಾರನು ಊರಾಡುವ ಸಂಪ್ರದಾಯ ಬರುತ್ತದೆ. ಯಥಾವಿಧಿಯಾಗಿ ಜೋಕುಮಾರನ ಮೇಲಿರುವ ದಂತಕಥೆಗಳು ಜನಪದ ಗೀತೆಗಳಲ್ಲಿ ಬರುವುದಿಲ್ಲ. ಹುಟ್ಟಿದ ಏಳು ದಿನಕ್ಕೇ ಈತ ಸಾವನ್ನಪ್ಪಿದ. ಆದರೂ ಈತ ಸ್ತ್ರೀಮೋಹಿಯಾಗಿದ್ದ. ಈತ ದುಷ್ಟನಾದರೂ, ಕಾಮುಕನಾದರೂ ಸ್ತ್ರೀಯರಿಗೆ ಪ್ರಿಯನಾಗಿದ್ದ. ಸಿರಿಯಜ್ಜಿ ಹಾಡಿರುವ ಗೀತೆಯಲ್ಲಿ

ಜೋಳದನ್ನವಲಕ ವೋದಾನೆ ಕುಮಾರ
ಜೋಡ ಚತ್ತರಿಕೆ ನೆರಳಾಗಿ | ಕುಂತುಕಂಡು
ದೂರಾಲ ಮಳೆಯ ಕರೆದಾನೆ ||

ಎಂದಿದೆ. ಹೀಗೆಯೆ ಹತ್ತಿಯ ಹೊಲಕ್ಕೂ ಹೋಗಿ ಮಳೆ ಕರೆಯುತ್ತಾನೆ. ಯುಗಾದಿಯ ಹಿಂಚುಮುಂಚು ಮಳೆ ಬೀಳುವ ಸಂದರ್ಭಕ್ಕೆ ಕಳೆದ ಶತಮಾನಗಳಲ್ಲಿ ದಕ್ಷಿಣ ಭಾರತದಾದ್ಯಂತ ಒಂದು ಸಂಪ್ರದಾಯವಿದ್ದಂತೆ ತಿಳಿದುಬರುತ್ತದೆ. ಅದು ಹೊಲಗದ್ದೆಗಳಲ್ಲಿ ಸಮೃದ್ಧ ಮಳೆ ಮತ್ತು ಬೆಳೆಗಾಗಿ ಬಯಲು ಸಂಭೋಗ ನಡೆಸುವುದು. ಇದಕ್ಕೆ ಸಂಬಂಧಿಸಿದ ಆಚರಣೆಗಳ ಪಳೆಯುಳಿಕೆಗಳೂ ಕಾಣಸಿಗುತ್ತದೆ. ಊರಿಂದಾಚೆ ಅರೆ ಅರಣ್ಯ ಪ್ರದೇಶಗಳಲ್ಲಿರಬಹುದಾದ ದೇವಾಲಯದ ಸುತ್ತ ಬೆಳದಿಂಗಳ ಸಂದರ್ಭ ಈ ಆಚರಣೆಯ ನಡೆಯುತ್ತಿತ್ತು. ಆ ವೇಳೆ ಗಂಡನನ್ನು ಕಳೆದುಕೊಂಡ ಹೆಣ್ಣು ಮಕ್ಕಳೂ ನಿಗದಿತ ಪುರುಷನೊಡನೆ ಕೂಡಿ ಮಕ್ಕಳ ಸಂತಾನ ಪಡೆಯಬಹುದಾಗಿದ್ದಿತು. ಮರುವರ್ಷ ಅದೇ ದೇವಾಲಯದಲ್ಲಿ ಹುಟ್ಟಿರುತ್ತಿದ್ದ ಮಗುವಿಗೆ ಅಧಿಕೃತವಾಗಿ ಕುಲ ಕೊಡಲಾಗುತ್ತಿತ್ತು. ಇಂಥ ಸಮೃದ್ಧಿಯ ಆಚರಣೆಯ ಹಿನ್ನೆಲೆಯಲ್ಲಿ ಈ ಜೋಕುಮಾರನ ಹಾಡು ಹುಟ್ಟಿಕೊಂಡದ್ದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆ ನಡೆಯುವ ಸಿರಿ ಜಾತ್ರೆಗಳಲ್ಲಿ ಭಾಗವಹಿಸುವ ಸ್ತ್ರೀಯರನ್ನು ಸಿರಿ ಎಂತಲೂ ಪುರುಷರನ್ನು ಕುಮಾರರೆಂತಲೂ ಸಂಬೋಧಿಸುವುದನ್ನು ಇಲ್ಲಿ ಗಮನಿಸಬಹುದು. ಜನಪದ ಕಥೆಗಳಲ್ಲಿ ಮಕ್ಕಳನ್ನು ಸಂತಾನಸಿರಿ ಅಥವಾ ಸಿರಿಸಂತಾನ ಎಂದು ಕರೆಯುವುದನ್ನೂ ಗಮನಿಸಬೇಕು. ತಮಿಳುನಾಡಿನ ಗ್ರಾಮಗಳ ಹೊಲಗದ್ದೆಗಳಲ್ಲಿಯೂ ಹೆಣ್ಣುಗಂಡು ಗೊಂಬೆಯನ್ನು ಮಾಡಿ ಮಲಗಿಸುವುದರ ಪಳೆಯುಳಿಕೆ ಆಚರಣೆ ಇರುವುದಾಗಿ ತಿಳಿದುಬರುತ್ತದೆ. ಪ್ರಪಂಚದಾದ್ಯಂತ ಈ ಸಂಪ್ರದಾಯವಿದ್ದಿತೆಂದು ಫ್ರೇಜರನ ‘ಗೋಲ್ಡನ್ ಬೋ’ ಕೃತಿಯಿಂದಲು ತಿಳಿದುಬರುತ್ತದೆ. ಮಳೆ, ಬೆಳೆ, ಹೆಣ್ಣು ಗಂಡಿನ ಸಂಬಂಧ, ಸಂತಾನದ ಹಿನ್ನೆಲೆಯಲ್ಲಿ ಜೋಕುಮಾರನ ಗೀತೆ ಮತ್ತು ಆಚರಣೆಯಿದೆ.

ಜೋಕುಮಾರನ ಗೀತೆ

ಕಂದನ ತಾಯಿ ಬಂದು ನಿಂತಳವ್ವ ಸಿರಿಬಾಗುಲಾಗ
ಕಂದಗ ಬೆಣ್ಣೆ ಕೊಡಿರವ್ವ
ಕಂದಗ ಬೆಣ್ಣೆ ಕೊಡಿರವ್ವ ಬಾಲನ ತಾಯಿಬಂದು
ನಿಂತಳವ್ವ ತಲೆಬಾಗುಲಾಗ

ಎಣ್ಣೆ ವೊಯ್ಯಿರಿ ಕನ್ನೆವುಳ್ಳ ಕೊಮಾರಾಗೆ
ವೊನ್ನೆಮಾಳೀಗೆ ಮನೆಯೋಳೆ
ವೊನ್ನೆಮಾಳೀಗೆ ಮನೆಯೋಳೆ ತಾಯಿ ನೀನು
ಎಣ್ಣೆ ವೊಯ್ರಿ ನನ್ನ ಕೊಮರಾಗೆ

ಉಪ್ಪ ನೀಡೆ ನನ್ನ ವಪ್ಪವುಳ್ಳ ಕೊಮರಾಗೆ
ಚಿಕ್ಕಮಾಳೀಗೆ ಮನೆಯೋಳೆ
ಚಿಕ್ಕಮಾಳೀಗೆ ಮನೆಯೋಳೆ ತಾಯಿ ನೀನು
ಉಪ್ಪು ನೀರು ನನ್ನ ಕೊಮರಾಗೆ

ಅಂಜಿ ನೀಡೆ ನನ್ನ ಕೊಮರಾಗೆ
ವೊನ್ನ ಮಾಳೀಗೆ ಮನೆಯೋಳೆ
ವೊನ್ನ ಮಾಳೀಗೆ ಮನೆಯೋಳೆ ತಾಯಿ ನೀನು
ಅಂಜಿ ನೀಡೆ ನನ್ನ ಕೊಮರಾಗೆ

ವುಟ್ಟಿದೇಳು ದಿನಕೆ ಪಟ್ನ ತಿರುಗ್ಯಾನೆ
ದ್ರುಷ್ಟಕಾಣೆ ದೇವಿ ನನ್ನಮಗ
ದ್ರುಷ್ಟಕಾಣೆ ದೇವಿ ನನ್ನಮಗ ಆರುವಯ್ಯ
ಕಲ್ಯಾಣವನೀಗೆ ಏಳುದಿನಗಾಳ

ಇಂದೇಳುದಿನದಲ್ಲಿ ಮುಂದೇಳು ದಿನದಲ್ಲಿ
ಗಂಬೀರವಾಗಿ ತಿರುಗ್ಯಾನೆ
ಇಂದೇಳು ದಿನದಲ್ಲಿ ಮುಂದೇಳು ದಿನದಲ್ಲಿ
ತಳವರನಾಗಿ ತಿರುಗ್ಯಾನೆ

ಕಾಯೀನ ಕತ್ತರಿಸಿ ತೂಗಿ ತೂಗಿ ಮಾರ್ಯಾನೆ
ದ್ರುಷ್ಟಕಾಣೆ ದೇವಿ ನಿನಮಗ
ದ್ರುಷ್ಟಕಾಣೆ ದೇವಿ ನಿನಮಗ ಆರುವಯ್ಯ
ಕಟ್ಯಾರೆ ಏಳುದಿನಗಾಳ

ಮುತ್ತೈದು ಕೊಳ್ಳಾಗಳ ಅತ್ತೊನ್ನಿನ ತಾಳೀಸರ
ಮುಟ್ಟಿದರೆ ಗಮ್ಮಗಣಿಎಂದೆ
ಮುಟ್ಟಿದರೆ ಗಮ್ಮಗಣಿ ಎಂದೇ ನಮದೇವಿ
ಬಟ್ಟಬದ್ರನ ಪಡೆದಾಳೆ

ಬಾಣಾತಿ ಕೊಳ್ಳಾಗಳ ಆರುವೊನ್ನಿನ ತಾಳಿಸರ
ಮುಟ್ಟಿದರೆ ಗಮ್ಮಗಣಲಂದೆ
ಮುಟ್ಟಿದರೆ ಗಮ್ಮಗಣಲಂದೆ ನಮದೇವಿ
ಬಾಲಬದ್ರನ ಪಡೆದಾಳೆ

ಅಡೆದಾಳೆ ಅಡೆದಾಳೆ ಕುಡುದಾಳೆ ಕಾಣವ
ಕಡೆಬಿದ್ದೇನಂದು ಕುಡುಗೋಲು
ಕಡೆಬಿದ್ದೇನೆಂದು ಕುಡುಗೋಲು ಬೇವು ಇಡಿದಾಳೆ
ಸೂರಿದಗೆ ಕಡೆ ಬಿದ್ದನಂದು ಕೈಮುಗುದಾಳೆ

ಜ್ವೋಳದನ್ನವಲಕ ವೋದಾನೆ ಕೊಮಾರ
ಜೋಡ ಸೆತ್ತರಿಕೆ ನೆರಳಾಗಿ
ಜೋಡ ಸೆತ್ತರಿಕೆ ನೆರಳಾಗಿ ಕುಂತುಕಂಡು
ದೂರಾಲ ಮಳೆಯ ಕರೆದಾನೆ

ಅತ್ತಿಯನ್ನವಲಕ ವೋದಾನೆ ನನಕೊಮಾರ
ಅತ್ತು ಚತ್ರಿಕೆ ನೆರಳಾಗಿ
ಅತ್ತು ಚತ್ರಿಕೆ ನೆರಳಾಗಿ ಕುಂತುಕಂಡು
ಸುತ್ತಾಲ ಮಳೆಯ ಕರೆದಾನೆ

ಆದಿವಾಸಿ ಕಡಿಗೆ ಆದಾವೆ ಮಳಿಮ್ವಾಡ
ಜೋಡಾದವೆರಡ ಸಿಡಿಮಿಂಚ
ಜೋಡದವರೆಡ ಸಿಡೊಮಿಂಚ ಕಂದ ನಿನಗೆ
ಮುತ್ತಿನಂದಲವೆ ನ್ಯನದೇವೆ

ಗುತ್ತಿಯನ್ನ ಕಡೆಗೆ ಅತ್ತಿದಾವೆ ಮಳಿಮ್ವಾಡ
ಜೊತ್ತಾದವೆರಡೆ ಸಿಡಿಲಮಿಂಚು
ಜೊತ್ತಾದವರೆರಡೆ ಸಿಡಿಲಮಿಂಚು ಕಂಡ ನಿನಗೆ
ರಾಯರಂದಲವೆ ನ್ಯನದೇವೆ