ಭಾಗ

ಬೂಮಿಯಾಸೆ ಪದ್ಯಗಳು

ಬಾಗಲಿಗೆದುರಾಗಿ ಬರೆಯಮ್ಮ ಸ್ರವಿಕಾವ
ಬಾಗಲಮ್ಯಾಲೆರಡು ಅರಗಿಳಿ
ಬಾಗಲಮ್ಯಾಲೆರಡು ಅರಗಿಳಿ ಪುನುಗಿನಬೆಕ್ಕು
ಸೋಬಾನದನುಡಿಯನುಡುದಾವೆ

ಬಾಗಲಮ್ಯಾಲೆರಡು ಅರಗಿಳಿ ಪುನುಗಿನ ಬೆಕ್ಕು
ಸೋಬಾನದ ನುಡಿಯ ನುಡುದಾವೆ
ಸೋಬಾನದ ನುಡಿಯ ನುಡುದಾವೆ ಏನಂದು ನುಡುದಾವೆ
ತಂಗಿ ಬಾವಾಗೆ ವರನಂದಾವೆ

ತಂಗಿ ಬಾವಾಗೆ ವರನಂದು ಆಗಿಳಿಕೊಂಬೆ
ವೊಯ್ ವೊಯ್ದು ನಗುತಾವೆ

ಕಂಬಕೆದುರಾಗಿ ತುಂಬಮ್ಮ ಸ್ರವಿಕಾವ
ಕಂಬದಮ್ಯಾಲೆರಡು ಅರಗಳಿ
ಕಂಬದಮ್ಯಾಲೆರಡು ಅರಗಳಿ ಪುನುಗಿನ ಬೆಕ್ಕು
ಸಂಬ್ರಮದನುಡಿಯ ನುಡುದಾವೆ

ಸಂಬ್ರಮದನುಡಿಯ ಏನಂದು ನುಡುದಾವೆ
ಅಕ್ಕಬಾವಾಗೆ ವರನಂದು ರೆಕ್ಕೆವೊಯ್ದು ನಗುತಾವೆ
ಕೂಸೀಗೋಗುತಿರಲೆ ಆಕಳುಕರಿಯತಿರಲೆ
ಕೂಸಾಲು ಬೋನ ಉಣುತಿರಲಿ
ಕೂಸಾಲು ಬೋನ ಉಣುತಿರಲಿ ಈಸಕುನ

ಲೇಸಾದೋ ನಮ್ಮ ಮಗನೀಗೆ
ಎಣ್ಣೇಗೋಗುತಿರಲಿ ಎಮ್ಮೆ ಕರೆಯುತಿರಲಿ
ಎಣ್ಣಾಲು ಬೋನಲುಣುತಿರಲಿ
ಎಣ್ಣಾಲು ಬೋನ ಉಣುತಿರಲಿ ಈಸಕುನ
ಚೆಂದವಾದವು ನಮ್ಮ ಮಗನೀಗೆ

ಕೂಸಿಗೋಗಲುವಾಗ ಆಸ್ಯಾರೆ ಅಂದಾಲ
ಏಸೊಂದು ಸೇಜಿ ಬಿಗುದಾವು
ಏಸೊಂದು ಸೇಜಿ ಬಿಗುದಾವು ಸುಂಗರವಾಗಿ
ಬಾಸಿಂಗದರನ ವರವ ಬೇಡಿ
ಬಾಸಿಂಗದರನ ವರವಬೇಡಿ ವೊರಟು
ಕೂಸಿದ್ದರ ಮನೆಗೆ ನಡೆದಾನೆ

ಎಣ್ಣೆಗೋಗಲುವಾಗ ಅಣ್ಯಾರೆ ಅಂದಾಲ
ಅನ್ನೆರಡು ಸೇಜಿ ಬಿಗುದಾವೆ
ಅನ್ನೆರಡು ಸೇಜಿ ಬಿಗುದಾವೆ ಸುಂಗರವಾಗಿ
ಪನ್ನಂಗದರನ ವರವಬೇಡಿ

ಪನ್ನಂಗದರನವರವಬೇಡಿ ವೊರವೊರಟು
ಎಣ್ಣಿದ್ದರ ಮನೆಗೆ ನಡೆದಾನೆ

ಅಸೆಯಚ್ಚದಮನೆಯಾಗಿ ಕಸವಿಲ್ಲ ಕಡ್ಡಿಲ್ಲ
ಅಸಿಯಡಕೆ ಸಿಪ್ಪೆಎಲೆದವನ ತಪ್ಪಸಿ
ಅಸಿಯಡಕೆ ಸಿಪ್ಪೆ ಎಲೆದವನ ಕುಲಸಮ
ಮಾರಾಯನರಮನೆ ವಳಗಾಳ ಸೊಸೆಯರಿನ್ನೆಂತ
ಚೆಲುವೇರು ಅವರಿಟ್ಟಿರುವ ಅಸ್ತಕಡಗ
ಇನ್ನೆಂತ ಕುಸುಲಾವೆ ಅವು ಮಾಡೀದ
ಅಕ್ಸಲಿನ್ನೆಂತ ದನಿಕಾನೆ
ಮಣಿಯಾಕೀದ ಮಣ್ಣಿಲ್ಲ ಕಸವಿಲ್ಲ
ಅಣ್ಣಡಿಕೆ ಸಿಪ್ಪೆ ಎಲೆದವನ
ಅಣ್ಣಡಿಕೆ ಸಿಪ್ಪೆ ಎಲೆದವನ ತಪ್ಪಿಸಿ
ಮಣ್ಣಿಲ್ಲ ಮಾರಾಯರರಮನೆಯಾಗೆ

ಪಟ್ಟೀದ ಸೀರೇನುಟ್ಟು ಅವರಕ್ಕಯ್ಯನಿಂತೈದಾಳೆ
ರೊಕ್ಕ ಸಂಪನ್ನೆ ಗುಣರನ್ನೆ
ರೊಕ್ಕ ಸಂಪನ್ನೆ ಗುಣರನ್ನೆ ಆಗಲಂದು
ಅವರಕ್ಕಯ್ಯ ಸೇಸೆಯನಿಡುತಾಳೆ

ಸಾಲ್ಯೇದಸೀರೆನುಟ್ಟು ತಾಯಿ ನಿಂತೈದಾಳೆ
ಬಾಗ್ಯೇದಸಂಪನ್ನೆ ಗುಣರನ್ನೆ
ಬಾಗ್ಯೇದಸಂಪನ್ನೆ ಗುಣರನ್ನೆ ಆಗಲಂದು
ತಾಯಮ್ಮ ಸೇಸೆಯನಿಡುತಾಳೆ

ರಾಯರರಮನೆ ವೂವೀನ ತಲೆಬಾಗಿಲು
ಸೂರಿದವತಿ ರಾಯರರಮನೆಗೆ
ಸೂರಿದವತಿ ರಾಯರರಮನೆಗೆ ಬಾಗಲುಮುಂದೆ
ವೂವಿನ ತಳಿ ನಮಗೆ ಇಡಿಸ್ಯಾರೆ

ಸೆಟ್ಟರರಮನೆಗೆ ಮುತ್ತಿನ ತಲೆಬಾಗಿಲು
ಚಕ್ರವತಿ ರಾಯರರಮನೆ
ಚಕ್ರವತಿ ರಾಯರರಮನೆ ಬಾಗಲಮುಂದೆ
ಮುತ್ತಿನ ತಳಿ ನಮಗೆ ಇರಿಸ್ಯಾರೆ

ತಳಿಯಡಿಬರುವೋರು ತಳುಕಿನ ಮುತ್ತೈದೇರು
ಮಲ್ಲುಕಿನ ಗುಜ್ಜಾರಿ ನೆರಗ್ಯೋರು
ಮಲ್ಲುಕಿನ ಗುಜ್ಜಾರಿ ನೆರಗ್ಯೋರು ಮುತ್ತೈದೇರು
ನೆಡುದಾರೆ ತಳಿಯನಿಡುವಾಕೆ

ಅಂದಲದಡಿ ಬರುವೋರು ಅಂದವುಳ್ಳ ಮುತ್ತೈದೇರು
ತುಂಬಗುಜ್ಜಾರಿ ಮುಸುಕೀನ
ತುಂಬಗುಜ್ಜಾರಿ ಮುಸುಕೀನ ಮುತ್ತೈದೇರು
ಬಂದಾರೆ ತಳಿಯಾನಿಡುವಾಕೆ

ಈಚೆಗಾಕಿದರೆ ಆಚೆಗೆ ತಲೆದೂಗಾವು
ರಾಚಯ್ಯನಂಗಡಿಯಾಗೆ ಇರುವೋನು
ರಾಚಯ್ಯನಂಗಡಿಯಾಗೆ ಇರುವೋನು ಕಡೆಚಂದ್ರಿಕೆ
ತೋಪುತಳಿವು ನಮಗಿಡಿದಾರೆ

ಇಲ್ಲಿಗಾಕಿದರೆ ಅಲ್ಲಿಗೆ ತಲೆದೂಗಾವು
ಮಲ್ಲಯ್ಯನಂಗಡಿಯಾಗೆ ಇರುವಾವು
ಮಲ್ಲಯ್ಯನಂಗಡಿಯಾಗೆ ಇರುವಾವು ಕಡಿಚಂದ್ರಿಕೆ
ವಲ್ಲಿ ತಳಿನಮಗೆ ಇಡಿಸ್ಯಾರೆ

ಮುತ್ತೀನ ರಾಟಿ ರತ್ನಾದ ವೊಸಕದರು
ಸತ್ಯಕ್ಕನೂತ ವೊಸನೂಲು
ಸತ್ಯಕ್ಕನೂತ ವೊಸನೂಲು ಕುಕ್ಕುಡಿಸಿ
ಮಗನ ಸುರಗೀಗೆ ತಗುತನ್ನಿ

ರನ್ನಾದರಾಟಿ ಚೆನ್ನಾದ ವೊಸಕದರು
ಚಿನ್ನಕ್ಕನೂತ ವೊಸನೂಲು
ಚಿನ್ನಕ್ಕನೂತ ವೊಸನೂಲು ಕುಕ್ಕುಡಿಸಿ
ಸಣಮಗನ ಸುರಗೀಗೆ ತಗತನ್ನಿ

ಮೊಬ್ಬುಗಂಬಳಿ ಉದ್ದಾಕೊದ್ದುಕಂಡ
ದೊಡ್ಡಕ್ಕನ ಬೆರಳ ಇಡುಕಂಡು
ದೊಡ್ಡಕ್ಕನ ಬೆರಳ ಇಡುಕಂಡು ರಾಜಣ್ಣ
ಮುದ್ದುಮಗನಿಡಿದಾನೆ ಸುರಗೀಯ

ಅಕ್ಕತಂಗೇರು ವಪ್ಪಕ ಮುತ್ತೈದೇರು
ವೊಕ್ಕಾರೆ ಸುರಗಿನೆಡುವಾಕೆ
ವೊಕ್ಕಾರೆ ಸುರಗಿನೆಡುವಾಕೆ ಸುರಗಿನೀರು
ಎತ್ತಿರಿ ಕಂದಾನ ಎಡಬಲಕೆ

ತಾಯಿಮಕ್ಕಳ ಮೋವಕ ಮುತ್ತೈದೇರು
ವೋದಾರೆ ಸುರಗಿ ನೆಡುವಾಕೆ
ವೋದಾರೆ ಸುರಗಿ ನೆಡುವಾಕೆ ಸುರಗಿನೀರು
ತೋರ್ಯಾರು ಕಂದಾನ ಎಡಬಲಕೆ

ಕಂಡುಗ ಇಡಿವ ಗಿಂಡಿ ಅರಿವಾಣಾವ
ಕಂದನ ಬೆನ್ನಿಗೆ ಮರೆಮಾಡಿ
ಕಂದನ ಬೆನ್ನಿಗೆ ಮರೆಮಾಡಿ ಅವರಮ್ಮ
ಕಂದಗ ಮೀಸವಳೆ ಮಡಿನೀರು

ನಾಗಾಳ ಇಡಿವ ಗಾಲಿ ಅರಿವಾಣಾವ
ಬಾಲಾನ ಬೆನ್ನಿಗೆ ಮರೆಮಾಡಿ
ಬಾಲಾನ ಬೆನ್ನಿಗೆ ಮರೆಮಾಡಿ ಅವರಮ್ಮ
ಬಾಲಾಗ ಮೀಸವಳೆ ಮಡಿನೀರು

ಮಿಂದುಬಂದ ಮಗನೀಗೆ ತಂದುಕೊಡಿರಿ ಜವಳೀಯ
ಪೆಂಡ್ಯಾಳಗೊಂದು ಮಿದುವೀನ
ಪೆಂಡ್ಯಾಳಗೊಂದು ಮಿದುವೀನ ಸುಬಸಾಲ್ಯಾವ
ತಂದುಕೊಡಿರಮ್ಮ ಮಿಂದ ಮಗನೀಗೆ

ಎರಕಂಡ ಮಗನೀಗೆ ತಗುತನ್ನೀರಿ ಜವಳಿಯ
ವೊದಿಕೇಯೊಳಗೊಂದು ಮಿದುವೀನ
ವೊದಿಕೇಯೊಳಗೊಂದು ಮಿದುವೀನ ಸುಖನಾಣ್ಯವ
ತಂದುಕೊಡಿರಿ ಮಿಂದ ಮಗನೀಗೆ

ಕಂದನೀರು ಮಿಂದು ಅಂದವಾಗೈದಾನೆ
ಕಂಡೋರ ದೃಷ್ಟಿಕರಸೋಕಿ
ಕಂಡೋರ ದೇಷ್ಟಿಕರಸೋಕಿ ಸಾಕಮ್ಮ ನಿನ್ನ
ಕಂದನೊಳಿಯಾಕ ಕರಕಳ್ಳೆ

ಬಾಲನೀರು ಮಿಂದು ಆಯವಾಗೈದಾನೆ
ನೋಡೋರ ದೃಷ್ಟಿಕರಸೋಕಿ
ನೋಡೋರ ದೃಷ್ಟಿಕರಸೋಕಿ ಸಾಕಮ್ಮ ನಿನ್ನ
ಕಂದ ನೊಳಿಯಾಕ ಕರಕಳ್ಳೆ

ಬಾಲನೀರು ಮಿಂದು ಆಯವಾಗೈದಾನೆ
ನೋಡೋರ ದೃಷ್ಟಿಕರ ಸೋಕಿ
ನೋಡೋರ ದೃಷ್ಟಿಕರ ಸೋಕಿ ಸಾಕಮ್ಮ ನಿನ್ನ
ಬಾಲಮ್ಮ ನೊಳಿಯಾಕ ಕರಕಳ್ಳೆ

ಬಾಗಲಾಗನಿಂತ್ಕಂಡು ಬಾಲಾನಕರಕಳ್ಳೆ
ಸೇರುಗೋಲಾಲಿ ಸಕಲಾತಿ
ಸೇರುಗೋಲಾಲಿ ಸಕಲಾತಿ ಸುವರ್ಣಾದ
ಬಾ ನನ್ನ ಬಾಲ ಮದಗದಾನೆ

ಎಂಬುರುಂಬಾಲಿನಂದಿ ಸೃಂಗರಿಸಾಲಿ
ಚಂದ್ರವತಿರಾಯ ವೊರಡಾಲಿ
ಚಂದ್ರವತಿರಾಯ ವೊರಡಾಲಿ ವೊರಟನಂದು
ಎಂಬತ್ತುಬೀದಿಲಿ ಬಿರುಸುಬಾಣ

ವೋಗೋರೋಗಾಲಿ ಆನೆಸುಂಗರಿಸಾಲಿ
ಸೂರಿದನತಿರಾಯ ವೊರಡಾಲಿ
ಸೂರಿದನತಿರಾಯ ವೊರಡಾಲಿ ವೊರಟನಂದು
ನಲವತ್ತು ಬೀದೀಲಿ ಬಿರುಸುಬಾಣ

ಉಪ್ಪರಿಗೆ ಅರಮನೆ ವೊಕ್ಕು ಸಾರಿರಣ್ಣ
ಕಪ್ಪೆ ಬಂಗಾರ ಸಲುಗೀಯ
ಕಪ್ಪೆ ಬಂಗಾರ ಸಲುಗೀಯ ಕೊಡುತೀನಿ
ಅಕ್ಕಗಳೇಳಿ ಮದುವೀಗೆ

ವಾವುರಿಗೆ ಅರಮನೆಗೆ ವೋಗಿ ಸಾರಿರಣ್ಣ
ವಾಲೆಬಂಗಾರ ಚೆಲುಗೀಯ
ವಾಲೆಬಂಗಾರ ಚೆಲುಗೀಯ ಕೊಡುತೀವಿ
ತಾಯಿಗಳೇಳಿ ಮದುವೀಗೆ

ಕಂಬಾದ ಮರೆಯೇರಿ ಬಂದಿ ತಿರುವಿಡುವೋಳೆ
ಕಂದಗರಳೆಲೆಯ ಮುಡಿಸೋಳೆ
ಕಂದಗರಳೆಲೆಯ ಮುಡಿಸೋಳೆ ಸೋಬಾನದ
ಚಂದ್ರಮುಕಿಯೇರೆ ಕುದುರೀಯ

ಬಾಗಲಮರೆ ಮಾಡಿ ವಾಲೆತಿರುವಿಡುವೋಳೆ
ಬಾಲಾಗರಳೆಲೆಯ ಮುಡಿಸೋಳೆ
ಬಾಲಾಗರಳೆಲೆಯ ಮುಡಿಸೋಳೆ ಸೋಬಾನದ
ಸುರಿದಮುಕಿಯೇರೆ ಕುದುರೀಯ

ಉಪ್ಪರಿಗೆ ಅರಮನೆಗೆ ಸುತ್ತ ಬೀಗವಾಕಿ
ಅಕ್ಕ ತಂಗೇರ್ನ ವಡಗೊಂಡು
ಅಕ್ಕ ತಂಗೇರ್ನ ವಡಗೊಂಡು ಮೇಗಣ್ಣ
ಸೆಟ್ಟಿ ನಿಬ್ಬುಣವ ವೊರುಡೀಸೋ

ವಾವುರಿಗೆ ಅರಮನೆಗೆ ಸಾಲುಬೀಗನಾಕಿ
ತಾಯಿಮಕ್ಕಳನ ವಡಗೊಂಡು
ತಾಯಿಮಕ್ಕಳನ ವೊಡಗೊಂಡು ಮೇಗಣ್ಣ
ಗೇನಿ ನಿಬ್ಬಣವ ತೆರಳೀಸೋ

ಅಸಿಗಾಯಿ ಬಿಸಿಗಾಯಿ ದೆಸೆಗೆ ಚಕ್ರರಲೇಳೊ
ದೆಸೆದೆಸೆಗೆ ಬಣ್ಣ ಬಿರುದೀನ
ದೆಸೆದೆಸೆಗೆ ಬಣ್ಣ ಬಿರುದೀನ ರಾಗವುಟ್ಟು
ಸೊಸೆಯರೇಳೀರೆ ಮದುವೀಗೆ

ಎಣಗಾಯಿ ಗುಣಿಗಾಯಿ ಎಳೆಯ ಸೆಕ್ಕರಿಲೇಳೊ
ಬೆಳುದಿಂಗಳಾಗ ಅಳದೀಯ
ಬೆಳುದಿಂಗಳಾಗ ಅಳದೀಯ ಅಚ್ಚಡವೊದ್ದು
ಅಳಿಯರೇಳೀರೆ ಮದುವೀಗೆ

ಆನೆ ಸುಂಗರಾವಗಿ ಲಾಯದಾಗೈದಾವೆ
ದೀರ ತಾನ್ಯಾಕ ವೊರಡಾನು
ದೀರ ತಾನ್ಯಾಕ ವೊರಡಾನು ವೊರಟಾನಂದು
ಕಹಳೇ ಬೋರ್ಯಾಡಿ ಇಡಿಸ್ಯಾರೆ

ವೊಂಟೆ ಸುಂಗರವಾಗಿ ಮಂಟಪದಾಗೈದಾವೆ
ಬಂಟತಾನ್ಯಾಕ ವೊರಡಾನು
ಬಂಟತಾನ್ಯಾಕ ವೊರಡಾನು ಅಂದು
ಸಂಕು ಬೋರ್ಯಾಡಿ ಇಡಿಸ್ಯಾರೆ

ದೊರೆಗಾಳ ಮದುವೀಗೆ ಕುದುರೆಸಾವುರವುಂಟು
ಚೆದುರಂಗನಾಡೋ ಗೆಳೆಯಾರು
ಚೆದುರಂಗನಾಡೋ ಗೆಳೆಯಾರು ಅಂದಾಲ
ಸ್ರೊಬಗೇಲಿ ವೊರಟಾನೆ ಐನೂರು

ಸೆಟ್ಟೋರುಮದುವೀಗೆ ಎತ್ತು ಸಾವಿರವೊರಟು
ಲೆತ್ತವನಾಡೋ ಗೆಳೆಯಾರು
ಲೆತ್ತವನಾಡೋ ಗೆಳೆಯಾರು ಅಂದಾಲ
ಜೊತ್ತೀಲಿ ವೊರಟಾವೆ ಐನೂರು

ಮನ್ನೇರುಮದುವೀಗೆ ಎಣ್ಣು ಸಾವಿರ ವೊರಟು
ಪನ್ನಂಗನಾಡೋ ಗೆಳೆಯಾರು
ಪನ್ನಂಗನಾಡೋ ಗೆಳೆಯಾರು ಅಂದಾಲ
ಸೊನ್ನೇಲೊರಟಾವೆ ಐನೂರು

ಎಲ್ಲಿ ಮದುವ್ಯಮ್ಮ ದಿಳ್ಳೀಗೆ ದಿಗುಲಂದಾವೆ
ಅಳ್ಳಕ ಡೇರ್ಯಾವೆ ನಡೆದಾವೆ
ಅಳ್ಳಕ ಡೇರ್ಯಾವೆ ನಡೆದಾವೆ ಸ್ವಾಮಿನೋರ
ದಿಳ್ಳಿಸಂಪನ್ನೋರ ಮಗನ ಮದುವೆ

ಎತ್ತಾಲ ಮದುವ್ಯಮ್ಮ ದಿಕ್ಕೀಗೆ ದಿಗುಲಂದಾವೆ
ಬೆಟ್ಟಕ ಡೇರ್ಯಾವು ವಡೆದಾವೆ
ಬೆಟ್ಟಕ ಡೇರ್ಯಾವು ವಡೆದಾವೆ ಸ್ವಾಮಿನೋರ
ದಿಕ್ಕಿಗೆ ಸಂಪನ್ನೋರ ಮಗನ ಮದುವೆ

ಎಲ್ಲಿ ಮದುವ್ಯಮ್ಮ ವಲ್ಲಪುರಾಯರ ದಂಡು
ಎಲ್ಲ ಮಕ್ಕಳಿಗೆ ಎಡನಿಲ್ಲ
ಎಲ್ಲ ಮಕ್ಕಳಿಗೆ ಎಡನಿಲ್ಲ ನಿಮ್ಮನಿಬ್ಬಣ
ಮಲ್ಲಿಗೆ ವನ ಅನುಸರಿಸಿ ಬರುತಾವೇ

ಎತ್ತಲಮದುವ್ಯಮ್ಮ ಚಿಕ್ಕಪ್ರಾಯರ ದಂಡು
ಚಿಕ್ಕಮಕ್ಕಳಿಗೆ ಎಡನಿಲ್ಲ
ಚಿಕ್ಕಮಕ್ಕಳಿಗೆ ಎಡನಿಲ್ಲ ನಿಮ್ಮ ನಿಬ್ಬಣ
ಕಿತ್ತಲಿವನ ಅನುಸರಿಸಿ ಬರುತಾವೆ

ಉಪ್ಪರಿಗಾಕ್ಯಾರೆ ಅತ್ತುಕಾಲೇಣೀಯ
ಅತ್ತಿನೋಡ್ಯಾರೆ ಮದುವೀಯ
ಅತ್ತಿನೋಡ್ಯಾರೆ ಮದುವೀಯ ಎತ್ತೊಂದುಸಾವುರ
ಬಾಳೆವನವ ಅನುಸರಿಸಿ ಬರುತಾವೆ

ಅಟ್ಟಕಾಕ್ಯಾರೆ ಅತ್ತು ಕಾಲೇಣೀಯ
ಪಕ್ಸಿನೂರು ಗಿಣಿನೂರು
ಪಕ್ಸಿನೂರು ಗಿಣಿನೂರು ಬರುತವಂದು
ವೊಕ್ಕೇಳೀರಿ ಮದುವೆಮನೆತಂಕ

ವಾವುರಿಗಾಕ್ಯಾರೆ ಆರುಕಾಲೇಣೀಯ
ವೋಗಿ ನೋಡ್ಯಾರೆ ಮದುವೀಯ
ವೋಗಿ ನೋಡ್ಯಾರೆ ಮದುವೀಯ ಏರಿ ನೋಡಿದರೆ
ವೋರಿಯೊಂದು ಸಾವುರ ಬಂದಾವು

ವೋರಿಯೊಂದು ಸಾವುರ ಬರಾತವಂದು
ಪಾರಿವಾಳನೂರು ಗಿಳಿಮುನ್ನೂರು
ಪಾರಿವಾಳನೂರು ಗಿಳಿಮುನ್ನೂರು ಬರುತಾವಂದು
ವೋಗೇಳಿರಿಮದುವೆಮನೆತಂಕ

ಅತ್ತುಗಾವುದು ನಡುದು ಬೆಟ್ಟುಗಳು ನಂದಾವು
ಬೆಟ್ಟಿಗೊಳ್ಳೆಣ್ಣೆ ಬಿಸಿನೀರು
ಬೆಟ್ಟಿಗೊಳ್ಳೆಣ್ಣೆ ಬಿಸಿನೀರು ತಕ್ಕಂಡು
ಸೆಟ್ಟಿಬೀಗರನೆ ಬರಏಳಿ

ಆರುಗಾವುದ ನಡೆದು ಕಾಲುಗಳು ನಂದಾವು
ಕಾಲಿಗೊಳ್ಳೆಣ್ಣೇ ಬಿಸಿನೀರು
ಕಾಲಿಗೊಳ್ಳೆಣ್ಣೇ ಬಿಸಿನೀರು ತಕ್ಕಂಡು
ಜ್ಯಾಣಬೀಗರನ ಬರಏಳಿ

ಮದುವೆ ಬರುತೈತೆಂದು ಸಡಗರವಿಲ್ಲೂರಾಗೆ
ಅಲ್ಲಿರುವ ಪಂಚಾಳರ ಸುಳಿವಿಲ್ಲ
ಅಲ್ಲಿರುವ ಪಂಚಾಳರ ಸುಲಳಿವಿಲ್ಲ ನಮಬೀಗರು
ಇರುವಸ್ಟೆ ದಳವ ಬರಏಳಿ

ನಿಬ್ಬುಣಬಂತೆಂಬ ಅಬ್ಬರವಿಲ್ಲೂರಾಗೆ
ಇದ್ದ ಪಂಚಾಳರ ಸುಳುವಿಲ್ಲ
ಇದ್ದ ಪಂಚಾಳರ ಸುಳುವಿಲ್ಲ ನಮಬೀಗರನ
ಇದ್ದಸ್ಟೆದಳವ ಬರ ಏಳಿ

ಮದುವೆ ದಿಬ್ಬಣಬಂದು ಮಾವಿನಮರದಡಿಲೈದಾವೆ
ಮರಿಯಾನೆ ಬಿಟ್ಟವರೆ ನೆಡುಗೇರಿಗೆ
ಮರಿಯಾನೆ ಬಿಟ್ಟವರೆ ನೆಡುಗೇರಿಗೆ ನಮಬೀಗಾರು
ಎದೆನಡುಗ ಕಾಳೆ ಇಡಿಸ್ಯಾರೆ

ಈವೊರಾಮುಂದೊಂದು ಆಲಾದ ಮರನಿಲ್ಲ
ಆನೆ ಕಟ್ಟಾಕ ನೆರಳಿಲ್ಲ
ಆನೆ ಕಟ್ಟಾಕ ನೆರಳಿಲ್ಲ ವೂರಾಮುಂದೆ
ಆನೆಮದುಮಗ ಇಳುದಾನೆ

ಅಂದವುಳ್ಳ ವೂರಮುಂದೆ ಚೆಂದವುಳ್ಳ ಬೇವಿನಮರ
ಅಂದಚಂದದ ವುಲಿಮಕ
ಅಂದಚಂದದ ವುಲಿಮಕವೂರಮುಂದೆ
ನಂದಿಮದುಮಗ ಇಳುದಾನೆ

ಆಯವುಳ್ಳ ಊರಮುಂದೆ ಸ್ರಯವುಳ್ಳ ಬೇವಿನಮರ
ಆಯಸ್ರಯದ ವುಲಿಮಕ
ಆಯಸ್ರಯದ ವುಲಿಮಕ ವೂರಮುಂದೆ
ಆನೆ ಮದುಮಗ ಇಳುದಾನೆ

ನೆಲ್ಲುಗದ್ದ್ಯಾಗ ಮಲ್ಲಯ್ನಗುಡಿಯಾಗ
ನಲ್ಲೆಬೀಗರನ ಇರು ಏಳೇ
ನಲ್ಲೆಬೀಗರನ ಇರು ಏಳೇ ನಾವೀಗ
ನೆಲ್ಲಕ್ಕಿ ಉಲುಪೆ ಕಳುವೇವು

ಕೆಸರುಗದ್ಯಾಗ ಬಸವಣ್ಣನ ಗುಡಿಯಾಗ
ದೆಸೆವುಳ್ಳ ಬೀಗರನ ಇರ ಏಳೆ
ದೆಸೆವುಳ್ಳ ಬೀಗರನ ಇರ ಏಳೆ
ಮೊಸರನ್ನದುಲಿಪೆ ಕಳುವೇವು

ನೆಂಟರುನೆಂಟಾರು ಇವರೆಂತ ನೆಂಟಾರು
ಸಂಪತ್ತಿಲಿವರು ಬರಲಿಲ್ಲ
ಸಂಪತ್ತಿಲಿವರು ಬರಲಿಲ್ಲ ಇವರು ನಮ್ಮ
ಒಂಟೀಯ ನೋಡಿ ಎದುರ್ಯಾರೆ

ಬೀಗರು ಬೀಗಾರು ಇವರೆಂತ ಬೀಗಾರು
ಎದುರೀಗೆ ಇವರು ಬರಲಿಲ್ಲ
ಎದುರೀಗೆ ಇವರು ಬರಲಿಲ್ಲ ಇವರು ನಮ್ಮ
ಕುದುರೀಯ ನೋಡಿ ಎದುರ್ಯಾರೆ

ಇತ್ತಲೀಗಾ ಬತ್ತಿದ ಬದನೇಕಾಯಿ
ಅಚ್ಚುತಲೆ ನಮಗೆ ತಡವಾಗಿ
ಅಚ್ಚುತಲೆ ನಮಗೆ ತಡವಾಗಿ ನಮಬೀಗಾರು
ತಟ್ಟಿರಸದೀರೆ ಬರುತೀವಿ

ಮಾಲಿಗೆ ಮ್ಯಾಗಾಳ ಬಾಡಿದ ಬದನೇಕಾಯಿ
ಮಾಡತಲಿ ನಮಗೆ ತಡವಾಗಿ
ಮಾಡತಲಿ ನಮಗೆ ತಡವಾಗಿ ನಮಬೀಗಾರು
ತೂಗಡಿಸದೀರೆ ತರುತೀವಿ

ಎತ್ತೀಗೆ ನುಚ್ಚು ಸೆಟ್ಟೋರಿಗೆ ಈಳ್ಯೇವು
ಸೆಟ್ಟರೆಂಡಿರಿಗೆ ಅನಲೇಪು
ಸೆಟ್ಟರೆಂಡಿರಿಗೆ ಅನಲೇಪು ತಂದೈದೀವಿ
ಮುಚ್ಚೀದ ಕಣ್ಣ ತಗಿಯರೇ

ವೋರೀಗೆ ನುಚ್ಚು ರಾಯರಿಗೆ ಈಳ್ಯಾವು
ರಾಯರೆಂಡಿರಿಗೆ ಅನಲೇಪು
ರಾಯರೆಂಡಿರಿಗೆ ಅನಲೇಪು ತಂದೈದೀವಿ
ನೋಡಾರೆ ಕಣ್ಣತಗಿಯಾರೆ

ಅಸಿಯಡಕೆಬಂಡಿ ಎಸಳಡಕೆ ಕೇದಿಕೆಪಿಂಡಿ
ಬಿಸಿನೀರಿನ ಗಿಂಡಿ ಎಲೆಯಪಿಂಡಿ
ಬಿಸಿನೀರಿನ ಗಿಂಡಿ ಎಲೆಯಪಿಂಡಿ ಕಳುವೇವು
ದೆಸೆವುಳ್ಳ ಬೀಗರಿಗೆ ಉಲುಪೀಯ

ಅಣ್ಣಡಗೆ ಬಂಡಿ ಸಣ್ಣ ಕೇದಕೆಪಿಂಡಿ
ತನ್ನೀರಿನ ಗಿಂಡಿ ಎಲೆಯಪಿಂಡಿ
ತನ್ನೀರಿನ ಗಿಂಡಿ ಎಲೆಯಪಿಂಡಿ ಕಳಿವೇವು
ಚೆನ್ನಾಗ ಬೀಗರಿಗೆ ಉಲುಪೇಯ

ಚಾಪೆ ತರುತಾರಂದು ಅಸೆಬ್ಯಾಡಬೀಗರಿಗೆ
ಚಾಪೆ ನಮ್ಮಲ್ಲಿ ಲೊಟಪಿಟಿ
ಚಾಪೆ ನಮ್ಮಲ್ಲಿ ಲೊಟಪಿಟಿ ನಿಮ್ಮಡಿಯಾಗೆ
ಆಪೀನ ಉಲ್ಲ ಎಳಕಳ್ರಿ

ಕಂಬಳಿ ತರುವಾರಂದು ನೆಂಬಿಕಂಡಿರದೀರಿ
ಕಂಬಳಿನಮ್ಮಲ್ಲಿ ಲೊಟಪಿಟಿ
ಕಂಬಳಿನಮ್ಮಲ್ಲಿ ಲೊಟಪಿಟಿ ನಿಮ್ಮಡಿಯಾಕ
ನೆಲ್ಲಲ್ಲು ಸರವೀಯ ಎಳಕಳ್ರಿ

ಕೆರೆಯಾಗವುಟ್ಟೋವು ಕೆರೆಯಾಗ ಬೆಳೆಯಾವು
ಉಗುರೀಲಿ ಸೀಳಿ ಎಣೆನೋವು
ಉಗುರೀಲಿ ಸೀಳಿ ಎಣೆನೋವು ಈಚಲಚಾಪೆ
ಇಲ್ಲವೇ ಬೀಗಾರ ಮನೆಯಾಗೆ

ಕಟ್ಟೀಲಿವುಟ್ಟೋವು ಕಟ್ಟೀಲಿ ಬೆಳೆನೋವು
ಬೆಟ್ಟೀಲಿ ಸೀಳಿ ಎಣೆನೋವು
ಬೆಟ್ಟೀಲಿ ಸೀಳಿ ಎಣೆನೋವು ಈಚಲಚಾಪೆ
ವುಟ್ಟವೇಬೀಗಾರ ಮನಿಯಾಗೆ

ಆಕು ಆಕುಬಾಣ ಆಕು ಅಗಲಬಾಣ
ಆಕಾಸದಬಾಣ ಅಗಲಬತ್ತಿ
ಆಕಾಸದಬಾಣ ಅಗಲಬತ್ತಿ ಬಿಡತೇವಿ
ಲೋಕಬೀಗರನ ಅಲ್ಲಿರಿಯೇಳಿ

ಅಂಬು ಅಂಬು ಬಾಣ ಅಂಬು ಅಗಲ ಬಾಣ
ಅಂಬಾರದಬಾಣ ಅಗಲಬತ್ತಿ
ಅಂಬಾರದಬಾಣ ಅಗಲಬತ್ತಿ ಬಿಡತೀವಿ
ಚೆಂಬೇ ಬೀಗರನ ಬರ ಏಳಿ

ರಂಜನೀರೆ ಉಡಿಗೆ ಗಂದದ ಬುಟ್ಟಿನುಡಿಗೆ
ದುಂಡನ್ನ ವುಡುಗಿ ಜತನಾವೆ
ದುಂಡನ್ನ ವುಡುಗಿ ಜತನಾವೆ ಸ್ವಾಮನೋರು
ಅಂಬೆ ಬಾಣಗಳ ಬಿಡುತೀವಿ

ಸಾಲ್ಯಾದ ಸೀರೆವುಡುಗಿ ಸಾಳ್ಯಾದ ಬಟ್ಟಿನುಡುಗಿ
ನ್ಯಾರನ್ನವುಡುಗಿ ಜತನಾವೆ
ನ್ಯಾರನ್ನವುಡುಗಿ ಜತನಾವೆ ಸ್ವಾಮನೋರು
ಜೋಡು ಬಾಣಗಳ ಬಿಡತೀವಿ

ಅಟ್ಟಿಲ್ಲ ಕೆಂದೊಳು ಪಟ್ನವೆಲ್ಲಿ ಪುಟ್ಟಂಪುಲ್ಲೆ
ಸೆಟ್ಟರಿಗೇ ಬಿಡದಿ ತರವಲ್ಲದ
ಸೆಟ್ಟರಿಗೇ ಬಿಡದಿ ತರವಲ್ಲದ ಬಿಡದೀಯ
ಕೊಟ್ಟೋರಿನ್ಯಾರು ಬರಏಳಿ

ಕೊಟ್ಟೋರಿನ್ಯಾರು ಬರ ಏಳಿರವನೀಗೆ
ಜ್ಯಾಲೀಯ ಬರಲು ಸವರೀಸೀರಿ
ಜ್ಯಾಲೀಯ ಬರಲು ಸವರೀಸೀರಿ ಮದುಲಗಿತ್ಯೋರ
ಮಾವಯ್ಯನಂತೆ ಬಿಡಿಬಿಡಿರಿ

ನೋಡೀರಿ ಅಗರಣವ ನೋಡೀರಿ ಸೋಜಿಗದ
ನೋಡೀರಿಬಂದ ಗರತೀಯ
ನೋಡೀರಿಬಂದ ಗರತೀಯ ಕುಂಡಿಮ್ಯಾಲೆ
ಜ್ವಾಳಬಿತ್ತಿಜ್ವಾಳ ಬೆಳಿಬೌದು

ಕಂಡೀರಿ ಅಗರಣವ ಕಂಡೀರಿ ಸೋಜಿಗವ
ಕಂಡೀರಿ ಬಂದ ಗರತೀಯ
ಕಂಡೀರಿ ಬಂದ ಗರತೀಯ ಕುಂಡಿಮ್ಯಾಲೆ
ಪುಂಡೀಯ ಬೀಜ ಬೆಳಿಬೌದು

ಅತ್ತಿ ಅಣ್ಣಿನಂಗೆ ಅತ್ತಾಳುಬಂದೈದಾರೆ
ಅತ್ತಾಳುಬರಿ ಮುದುಕಾರು
ಅತ್ತಾಳುಬರಿ ಮುದುಕಾರು ನಮ್ಮಚಾವುಡಿಯ
ಅತ್ತಲಾರದೆ ಕೆಳಗವರೆ

ಆಲಾದಣ್ಣಿನಂಗೆ ಆರಾಳುಬಂದವರೆ
ಅತ್ತಾಳುಬರಿ ಮುದುಕಾರು ನಮ್ಮ ಚಾವುಡಿಯ
ಅತ್ತಲಾರದೆ ಕೆಳಗವರೆ

ಆಲಾದಣ್ಣಿನಂಗೆ ಆರಾಳು ಬಂದವರೆ
ಅರಾಳು ಬನ್ನಿರಿ ಮುದುಕಾರು
ಅರಾಳು ಬನ್ನಿರಿ ಮುದುಕಾರು ನಮ್ಮ ಚಾವುಡಿಯ
ಏರಲಾರದಲೆ ಕೆಳಗವರೇ

ಅತ್ತಿಯಣ್ಣಿನಂಗೆ ಅತ್ತಾಳು ಬಂದೈದೀವಿ
ಅತ್ತಾಳು ಬನ್ನಿರಿ ವುಡುಗಾರು
ಅತ್ತಾಳು ಬನ್ನಿರಿ ವುಡುಗಾರು ನಿಮ್ಮ ಚಾವುಡಿಯ
ನುಚ್ಚುನುಚ್ಚಾಗ ತುಳುದೇವು

ಆಲದಣ್ಣಿನಂಗೆ ಆರಾಳುಬಂದೈದೀವಿ
ಆರಾಳು ಬನ್ನಿವುಡುಗಾರು
ಆರಾಳು ಬನ್ನಿವುಡುಗಾರು ನಿಮ್ಮ ಚಾವುಡಿಯ
ಚೂರು ಚೂರಾಗಿ ತುಳುದೇವು

ಅಂದಾವಾದೋರು ಬಂದಿಲ್ಲ ಚಂದವಾದೋರು ಬಂದಿಲ್ಲ
ಬಂದಿತೋಳೋರು ಮೊದಲಿಲ್ಲ
ಬಂದಿತೋಳೋರು ಮೊದಲಿಲ್ಲ ದಿಬ್ಬಣದಾಗ
ಕೋಡಗನಂತೋರು ಕುಳಿತವರೆ

ಅಂದವಾದೋರು ಬಂದೈದೀವಿ ಚೆಂದದೋರು ಬಂದೈದೀವಿ
ಬಂದಿತೋಳೋರು ಬಂದೈದೀವಿ
ಬಂದಿತೋಳೋರು ಬಂದೈದೀವಿ ನಿಮ್ಮನು
ದೆಂಗಲು ಬಂದೈದೀವಿ ಮದುವೀಗೆ

ಆಯವಾದೋರು ಬಂದೈದೀವಿ ಸಯವಾದೋರು ವಂದೈದೀವಿ
ವಾಲೆಕಿವಿಯೋರು ಐದಾಳು
ವಾಲೆಕಿವಿಯೋರು ಐದಾಳು ಬಂದೈದೀವಿ
ದೊಡ್ಡೋರು ಬಂದೈದೀವಿ ಮದುವೀಗೆ

ಸುತ್ತಮುತ್ತ ಬರುವೋರುಅವರೆತ್ತತಾಯಿ ಬಳಗ
ಎತ್ತೀನಮುಂದೆ ಕಳಸಾವೆ
ಎತ್ತೀನಮುಂದೆ ಕಳಸಾವೆ ಇಡಿದಿರುವೋಳು
ಸೆಟ್ಟಿಮದಲಿಂಗನಿರಿಯಕ್ಕ

ಎಡಬಲಕ ಬರುವೋರು ಅವರೆಡದ ತಾಯಿಬಳಗ
ಕುದುರೀಯ ಮುಂದೆ ಕಳಸಾವೆ
ಕುದುರೀಯ ಮುಂದೆ ಕಳಸಾವೆ ಇಡಿದಿರಿವೋಳು
ದೂರಿಯೇ ಮದಲಿಂಗನಕ್ಕ

ಪಟ್ಟೀದ ಸೀರ್ಯೋರು ಮುತ್ತೀನ ಬಟ್ಟಿನೋರು
ನಿಸ್ತ್ರೇ ರತ್ನಮ್ಮ ಪುರುಸನ
ನಿಸ್ತ್ರೇ ರತ್ನಮ್ಮ ಪುರುಸನ ನೋಡೆವಂದು
ಅತ್ತವರೆ ಕೋಟಿ ತೆನೆ ತೆನೆಗೆ

ಸಾಲ್ಯೇದ ಸೀರ್ಯೋರು ಸಾದಿನಬಟ್ಟಿನೋರು

ನಾರಿರತ್ನಮ್ಮನ ಪುರುಸನ
ನಾರಿರತ್ನಮ್ಮನ ಪುರುಸನ ನೋಡೆವಂದು
ಏರವರೆ ಕೋಟೆ ತೆನೆ ತೆನೆಗೆ

ಮದುವೆ ಬರುತಾವೆ ಮದುಗದೇರಿಮ್ಯಾಲೆ
ಐದೆ ಪಲ್ಲಕ್ಕಿ ಎರಡಾನೆ
ಐದೆ ಪಲ್ಲಕ್ಕಿ ಎರಡಾನೆ ಇಂದೆಬರುವ
ಮರಿಸೇಜಿಮ್ಯಾಲೆ ಗುರುಸ್ವಾಮಿ

ಮರಿಸೇಜಿ ಮ್ಯಾಲೆ ಗುರುಸ್ವಾಮಿ ಇಂದೆ ಬರುವೋರು
ಮುತ್ತಿನ ಬೈತಲೆಯ ಮುದುಕೇರು
ಮುತ್ತಿನ ಬೈತಲೆಯ ಮುದುಕೇರು ಇಂದೆ ಬರುವೋದು
ಗಂಜಿ ಅಚ್ಚಡದ ಗೌಡಾರು

ಗಂಜಿ ಅಚ್ಚಡದ ಗೌಡಾರು ಇಂದೆ ಬರುವೋಳು
ಒಂದೇ ಪ್ರಾಯದ ವುಡುಗಾರು
ಒಂದೇ ಪ್ರಾಯದ ವುಡುಗಾರು ಇಂದೆ ಬರುವೋರು
ಒಂದೊಂದೆ ಅಡೆದ ಬಣತೇರು

ಒಂದೊಂದೆ ಅಡೆದ ಬಣತೇರು ಇಂದೆ ಬರುವೋರು
ಚಿಕ್ಕ ಪ್ರಾಯದ ವುಡುಗಾರು
ಚಿಕ್ಕ ಪ್ರಾಯದ ವುಡುಗಾರು ಇಂದೆ ಬರುವೋರು
ಚೀಟಿ ಚೆಲ್ಲಣದ ವುಡುಗಾರು

ಚೀಟಿ ಚೆಲ್ಲಣದ ವುಡುಗಾರು ಇಂದೆ ಬರುವೋರು
ಚಿಕ್ಕ ಪ್ರಾಯದ ಚದುರೇನು
ಚಿಕ್ಕ ಪ್ರಾಯದ ಚದುರೇನು ಇಂದೆ ಬರುವೋರು
ಮುತ್ತಿನ ಕೋಲ ತಳವಾರರು

ಮುತ್ತಿನ ಕೋಲ ತಳವಾರರು ಇಮದೆ ಬರುವೋರು
ಇಪ್ಪತ್ತು ಪಂಜಿನ ಮಡಿವಾಳ

ಅಗಸೀಯ ಸೊಗಸುಳ್ಳ ತಳವಾರ
ಬಗಸೇಲಿ ಅಡಕೆ ಬಿಳಿಯಲೆ
ಬಗಸೇಲಿ ಅಡಕೆ ಬಿಳಿಯಲೆ ಕೊಡತೀವಿ
ಅಗಸೆ ಬಾಗುಲ ತಗುಸಯ್ಯ

ದಿಡ್ಡೀಯ ತಗಿಯೋ ಬುದ್ದಿಯುಳ್ಳ ತಳವಾರ
ಸಿಬ್ಬಲಿ ಅಡಕೆ ಬಿಳಿಯಲೆ
ಸಿಬ್ಬಲಿ ಅಡಕೆ ಬಿಳಿಯಲೆ ಕೊಡತೀವಿ
ದಿಡ್ಡಿ ಬಾಗುಲ ತಗಸಯ್ಯ

ಅವಳಾದ ಕೋಲುಕಾರ ಅವಳಾದ ಕೀಲುಕಾರ
ಅವಳಾದುಂಗುರದ ತಳವಾರ
ಅವಳಾದುಂಗುರದ ತಳವಾರ ನಮ್ಮ ನಾಡೀನ
ಆನೆ ಬಂದಾವು ಜತನಾವೆ

ಮುತ್ತೀನ ಕೋಲುಕಾರ ಮುತ್ತೀನ ಕೀಲುಕಾರ
ಮುತ್ತೀನುಂಗುರದ ತಳವಾರ
ಮುತ್ತೀನುಂಗುರದ ತಳವಾರ ನಮ್ಮ ನಾಡೀನ
ಎತ್ತು ಬಂದಾವು ಜತನಾವೆ

ಸೆಟ್ಟಿಮದಲಿಂಗನ ಎತ್ತಮ್ಮ ಇನ್ನೆಂತೋಳು
ಅಕ್ಕಿದಡಿಯ ಸೀರೆ ಸೆರಗೀನ
ಅಕ್ಕಿದಡಿಯ ಸೀರೆ ಸೆರಗೀನ ಚಿನ್ನದಗರಿಯ
ವೊತ್ತೆ ಕುಂತವಳೆ ಅಡೆದಮ್ಮ

ದೊರೆಯೆಮದಲಿಂಗಾನ ಅಡೆದಮ್ಮ ಇನ್ನೆಂತೋಳು
ಕರಿದಡಿಯ ಸೀರೆಸೆರಗೀನ
ಕರಿದಡಿಯ ಸೀರೆಸೆರಗೀನ ಚಿನ್ನದಗರಿಯ
ಮುಡಿದೆ ಕುಂತವಳೆ ಅವನಡೆದಮ್ಮ