ಮದುವೆ ಹೆಣ್ಣನ್ನು ಹಸೆಗೆ ಕೂರಿಸುವುದು

ಮಣೆಯಾಕೀದ ಮನೆಯಾಗೆ ಅಣ್ಣಿಲ್ಲಕಸವಿಲ್ಲ
ಅಣ್ಣಡಕೆ ಸಿಪ್ಪೆ ಎಲೆದವನ
ಅಣ್ಣಡಕೆ ಸಿಪ್ಪೆ ಎಲೆದವನ ತಪ್ಪಿಸಿ
ಮಣ್ಣೆಲ್ಲ ಮಾರಾಯರ ಮನೆಯಾಗೆ

ವಳಗಾಳ ಎಣುಮಕ್ಕಳಿನ್ನೆಂತ ಚೆಲುವೇರು
ಅವರಿಟ್ಟಿರುವ ವೊನ್ನೋಲೆ ಇನ್ನೆಂತ ಕುಸುಲಾವು
ವೊನ್ನೆಲೆ ಇನ್ನೆಂತಾಕುಸುಲಾವು ಅವು ಮಾಡಿದ
ಅಕ್ಕಸಾಳಿಗನಿನ್ನೆಂತ ದನಿಕಾನು

ಅಸೆಯೆತ್ತಿದಮನೆಯಲಿ ಕಸವಿಲ್ಲ ಕಡ್ಡಿಲ್ಲ
ಅಸಿಯಡಕೆಸಿಪ್ಪಿ ಎಲೆದವನ
ಅಸಿಯಡಕೆಸಿಪ್ಪಿ ಎಲೆದವನ ವಳಗಾಳ
ಸೊಸೇರಿನ್ನೆಂತ ಚೆಲುವೇರು

ಸೊಸೇರಿನ್ನೆಂತ ಚೆಲುವೇರು ಅವರಿಟ್ಟಿರುವ
ಅತ್ತಕಡಗವಿನ್ನೆಂತ ಕುಸುಲಾವು
ಅತ್ತಕಡಗವಿನ್ನೆಂತ ಕುಸುಲಾವು ಅವು ಮಾಡಿದ
ಅಕ್ಕಸಾಲಿಯಿನ್ನೆಂತ ದನಿಕಾನು

ಅಸೆಗೆದ್ದು ಬರುವಾಗ ಬಸವಣ್ಣನ ಸರಣೆನ್ನು
ದೆಸೆ ಮೂರುತಿ ನಿಮ್ಮ ಗುರುವೀಗೆ
ದೆಸೆ ಮೂರುತಿ ನಿಮ್ಮ ಗುರುವೀಗೆ ಸರಣು ಮಾಡಿ
ಅಸೆಗೆ ಬಾ ಜ್ಯಾಣೆ ಸಂಬ್ರಮದಿಂದ

ಮಣೆಗೆದ್ದು ಬರುವಾಗ ಬೆನವಣ್ಣಗ ಸರಣೆನ್ನಿ
ಗನಮೂರುತಿ ನಿಮ್ಮ ಗುರುವೀಗೆ
ಗನಮೂರುತಿ ನಿಮ್ಮ ಗುರುವೀಗೆ ಸರಣು ಮಾಡಿ
ಮಣೆಗೆದ್ದು ಬಾರೆ ಸ್ರುಬದಿಂದ

ವಳಗಲಿಂದ ಕರತನ್ನಿ ವಳೆವವಂಬಾಳಿಯ ಸುಳವಲ್ಲು
ಜೋಲು ಮುಡಿಯೊಳು
ಜೋಲು ಮುಡಿಯೊಳು ರತ್ನಮ್ಮಾನ
ಸಾಲುವೈದೇರಸೆಗೆ ಕರತನ್ನಿ

ಅಲ್ಲಿಂದ ಕರೆತನ್ನಿ ಅಕ್ಕಿವಂಬಾಳೆ ವತ್ತೋಳ
ಅತ್ತುಮೂರು ಜಡಿಯೋಳ
ಅತ್ತುಮೂರು ಜಡಿಯೋಳ ರತ್ನಮ್ಮಾನ
ಮುತ್ತೈದೇರಸೆಗೆ ಕರೆತನ್ನಿ

ಮಣೆಗೆದ್ದು ಬರುವಾಗ ತಾಯಿ ತಂದೆಗೆ ಸರಣು
ಬೂಮಿ ತೂಕಾದ ಬಸುವಾಗೆ
ಬೂಮಿ ತೂಕಾದ ಬಸುವಾಗೆ ಸರಣು ಮಾಡಿ
ಆಸೆಗೆ ಬಾ ಜಾಣೆ ಸ್ರುಬದಿಂದ

ಅಸೆಗೆದ್ದು ಬರುವಾಗ ಅತ್ತೆ ಮಾವನ ಸರಣು
ಮತ್ತೆ ತೂಕಾದ ಬಸುವಾಗೆ
ಮತ್ತೆ ತೂಕಾದ ಬಸುವಾಗೆ ಸರಣುಮಾಡಿ
ಅಸೆಗೆ ಬಾಜಾಣೆ ಸ್ರುಬದಿಂದ

ಪಟ್ಟೀದ ಸೀರೇನುಟ್ಟು ಅವರಕ್ಕನಿಂತೈದಾಳೆ
ರೊಕ್ಕದ ಸಂಪನ್ನ ಗುಣರನ್ನೆ
ರೊಕ್ಕದ ಸಂಪನ್ನ ಗುಣರನ್ನೆ ಗುಣರನ್ನೆ ಆಗಾಲಂದು
ಅವರಕ್ಕಸೇಸೇವ ಇಡುತಾಳೇ

ಸಾಲ್ಯಾದಚ್ಚಡವೊದ್ದು ಮಾವನಿಂತೈದಾನೆ
ಬಾಗ್ಯಾದಸಂಪನ್ನ ಗುಣರನ್ನೆ
ಬಾಗ್ಯಾದಸಂಪನ್ನ ಗುಣರನ್ನೆ ಆಗಲಂದು
ಮಾವನಸೇಸೇವ ಇಡುತಾನೆ

ಅಣ್ಣರಿಸಿಣಕಂಬು ಎಸಳುಬಗ್ಗಿಸಿದಂಗೆ
ಅಸುಮಗಳವೆರಡು ಕುಡಿವುಬ್ಬು
ಅಸುಮಗಳವೆರಡು ಕುಡಿವುಬ್ಬು ನೆಡುವಾಕ
ಅಸವಾಗಿ ಇಡುಜಾಣೆ ಸಿಲುಕಾವ

ಅಣ್ಣರಿಸಿಣಕಂಬು ಗೆಣ್ಣು ಬಗ್ಗಿಸಿದಂಗೆ
ಸಣ್ಣಮಗಳವೆರಡು ಕುಡಿವುಬ್ಬು
ಸಣ್ಣಮಗಳವೆರಡು ಕುಡಿವುಬ್ಬುನೆಡುವಾಕ
ಚೆಂದವಾಗಿಡು ಜ್ಯಾಣೆ ಸಿಲುಕಾವ

ಅಚ್ಚಕರಿಯ ಸಾದ ತುಪ್ಪದಲಿ ಅದಮಾಡಿ
ಚಿಕ್ಕಮಕ್ಕಳವೆರಡು ಕುಡಿವುಬ್ಬು
ಚಿಕ್ಕಮಕ್ಕಳವೆರಡು ಕುಡಿವುಬ್ಬು ನೆಡುವಾಕ
ವಪ್ಪವಾಗಿಡು ಜಾಣೆ ಸಿಲುಕಾವ

ಸಾದಕರಿಯ ಸಾದು ಆಲಲಿ ಅದಮಾಡಿ
ಸಣಮಗಳವೆರಡು ಕುಡಿವುಬ್ಬು
ಸಣಮಗಳವೆರಡು ಕುಡಿವುಬ್ಬು ನೆಡುವಾಕ
ಚಂದವಾಗಿಡು ಜಾಣೆ ಸಿಲುಕಾವ

ಎಂಗಸರೈವರು ಬನ್ನಿ ಗಂಡಸರೈವರು ಬನ್ನಿ
ದುಂಡುಮುತ್ತುಗಳ ಇಡಕಂಡು
ದುಂಡುಮುತ್ತುಗಳ ಇಡಕಂಡು ಗೌರಮ್ಮ ನಿನ್ನ
ಕಂದಗಿಟ್ಟ್ಯಾರು ಸ್ತಿರ ಸ್ಯೇಸೆ

ಆಚೆಕೈವರು ಬನ್ನಿ ಈಚೆಕೈವರು ಬನ್ನಿ
ಜ್ಯಾತಿಮುತ್ತುಗಳ ಇಡಕಂಡು
ಜ್ಯಾತಿಮುತ್ತುಗಳ ಇಡಕಂಡು ಗೌರಮ್ಮ
ನಿನ್ನ ಕೊನೆಗಟ್ಟ್ಯಾರಲ್ಲೆ ಸ್ತಿರಸ್ಯೇಸೆ

ಬಟ್ಟ ಮುತ್ತೆ ನಿನ್ನ ಅತ್ತೆ ಕರೆದಾಳಲ್ಲೆ
ಪಟ್ಟಸಾಲ್ಯಾಗ ದನಿತೋರೆ
ಪಟ್ಟಸಾಲ್ಯಾಗ ದನಿತೋರೆ ಸಮುದ್ರದಂತ
ಅತ್ತೆ ಪಡೆದೆಯಲ್ಲೆ ಸಿವದಲ್ಲೆ

ಮನ ಮುತ್ತೆ ನಿನ್ನ ಮಾವನಿನ್ನ ಕರೆದಾನಲ್ಲೆ
ಸಾಮುಸಾಲ್ಯಾಗ ದನಿತೋರೆ

ಸಾಮುಸಾಲ್ಯಾಗ ದನಿತೋರೆ ಸಮುದ್ರದಂತ
ಮಾವನ ಪಡದಲ್ಲೆ ಸಿವಗಲ್ಲೆ

ದುಂಡುಮುತ್ತಿ ನಿನ್ನ ಗಂಡಕರೆದಾನಲ್ಲೆ
ಗಂಡಸಾಲ್ಯಾಗ ದನಿತೋರೆ
ಗಂಡಸಾಲ್ಯಾಗ ದನಿತೋರೆ ಸಮುದ್ರದಂತ
ಗಂಡ್ನ ಪಡೆದ್ಯಲ್ಲೆ ಸಿವಗಲ್ಲೆ

ನಾವು ನಿಮ್ಮ ಮನೆಗೆ ಬೀಗರಾದೇವಂದು ಬಂದೇವು
ನಿಮ್ಮ ಮನೆ ತಂಕ…………
………………………………
………………………………

ಮನೆಯ ನೋಡಿರಿ ಮನೆಯ ಮಂಟಪಸಾಲೆ
ಗಲಗಲನೆರುಗೂವ ಗಿಳಿಯಿಂಡು
ಗಲಗಲನೆರುಗೂವ ಗಿಳಿಯಿಂಡು ಪಾತರಬೋನ
ಅವನೋಡಿ ಎಣ್ಣಕೂಡಿರಂದು

ಆವನ್ನ ನೋಡಿದರ ಆವೇನು ಕೊಡುವೋವು
ಮನೆಯಾಗಿರುವತ್ತೆ ಗುಣರನ್ನೆ
ಮನೆಯಾಗಿರುವತ್ತೆ ಗುಣರನ್ನೆ ಆದಾರೆ
ವರ ನೋಡಿಮಗಳ ಕೊಡತೀವಿ

ವರನೇನು ನೋಡಿರಿ ವರನಂತೆ ನಿಮ್ಮಳಿಯ
ಕಡೆದ ಬೆಚ್ಚರಿಣೆ ಕಡತಾವ
ಕಡೆದ ಬೆಚ್ಚರಿಣೆ ಕಡತಾವ ಓದಿಕಂಬ
ಪ್ರಬುರಾಯ ನಿಮ್ಮ ಅಳಿಯಾನೆ

ಬೀಗರ ಮನೆಮುಂದೆ ಜಜ್ಜುಗಲ್ಲು ಜಾರುಗಲ್ಲು
ಬಿದ್ದೀರ ಕೈಯ್ಯ ಇಡಕಳ್ಳಿ
ಬಿದ್ದೀರ ಕೈಯ್ಯ ಇಡಕಳ್ಳಿ ನಾವಿಟ್ಟಿರುವ
ವಾಲೆಬಂಗಾರ ಜತನಾವೆ

ಅಣ್ಣೇ ವೂವೀನ ಅನ್ನೊಂದೆಸಳೀನ
ಚಿನ್ನದಗೊಂಡೇದ ಸೆರಗೀನ
ಚಿನ್ನದಗೊಂಡೇದ ಸೆರಗೀನ ತಳಿನಮ್ಮ
ಬಣ್ಣಕ ಬಿಸಿಲಂದು ಇಡಿಸ್ಯಾರೆ

ಇಪ್ಪೆವೂವೀನ ಇಪ್ಪತ್ತೊಂದೆಸಳೀನ
ಮುತ್ತೀನಗೊಂಡೇದ ಸೆರಗಿನಮ್ಮ
ಮುತ್ತೀನಗೊಂಡೇದ ಸೆರಗಿನಮ್ಮ ಕಪ್ಪೀಗೆ
ಬಿಸಿಲಂದು ಇಡಿಸ್ಯಾರೆ

ಮೆಲ್ಲಕ ಬನ್ನೀರಿ ಪಿಲ್ಲೀಯ ಕಾಲಿನೋರು
ಕಲ್ಲು ಕೋಟೆ ಅವರ ಅರಮನೆ
ಕಲ್ಲು ಕೋಟೆ ಅವರ ಅರಮನೆ ಅಡ್ಡಗೋಡೆ
ಬೆಲ್ಲದಚ್ಚೀಲಿ ಮುಗುದಾವೆ

ಸರಸರನೆ ಬನ್ನೀರಿ ಸರಪಣಿಕಾಲೋರು
ಅರಿಸಿಣ ಕ್ವಾಟೆಯವರ ಅರಮನೆ
ಅರಿಸಿಣ ಕ್ವಾಟೆಯವರ ಅರಮನೆ ಅಡ್ಡಗೋಡೆ
ಮೆಣಸಿನ ಕಾಳೀಲಿ ಮುಗುದಾವೆ

ಕಾಯವರೆ ಬಳ್ಳಿ ದೂರ ಎಬ್ಬಿಲಿ ತೋಪು
ಮಾಗೀಯ ಬಿಸಿಲು ಮಳೆಮೋಡ
ಮಾಗೀಯ ಬಿಸಿಲು ಮಳೆಮೋಡ ನಮ್ಮ ಬೀಗಾರು
ವಾವುರಿಗೆವಲಗು ತಿಳಿಯಾವು

ಚಿಟ್ಟವರೆಬಳ್ಳಿ ಸುತ್ತಲೆದ್ದು ತೋಪು
ಚಿತ್ತೀಯ ಬಿಸಿಲು ಮಳೆಮ್ವಾಡ
ಚಿತ್ತೀಯ ಬಿಸಿಲು ಮಳೆಮ್ವಾಡ ನಮ್ಮ ಬೀಗಾರ
ಉಪ್ಪರಿಗೆ ವಲಬು ತಿಳಿಯಾವು

ಮನ್ನೇರು ಮುಯ್ಯಿ ಇನ್ನೇನು ಕಳುವ್ಯಾರೆ
ಚಿನ್ನದೊಡ್ಯಾಣ ನಡುವೀಗೆ
ಚಿನ್ನದೊಡ್ಯಾಣ ನಡುವೀಗೆ ಸಣ್ಣ ಸಣ್ಣ
ಸುನ್ನಾರದಗೆಜ್ಜೆ ಒಂದೈನೂರು

ಸೆಟ್ಟ್ಯೋರು ಮುಯ್ಯಿಮತ್ತೇನು ಕಳುವ್ಯಾರೆ
ಮುತ್ತಿನೊಡ್ಯಾಣ ನಡುವೀಗೆ
ಮುತ್ತಿನೊಡ್ಯಾಣ ನಡುವೀಗೆ ಚಿಕ್ಕಚಿಕ್ಕ
ಚಿತ್ತಾರದ ಗೆಜ್ಜೆ ಒಂದೈನೂರು

ತಾವಿಲ್ಲದ ಅರಮನೆ ತಾವಿಲ್ಲದ ಅರಮನೆ
ತಾವಿಲ್ಲ ಬೀಗಾರ ಅರಮನೆಯಾಗೆ
ತಾವಿಲ್ಲ ಬೀಗಾರ ಅರಮನೆಯಾಗೆ ನಾವು ತಂದ
ವಾಲೀಯ ಬರಣಿ ಇಡುವಾಕೆ

ಇಂಬಿಲ್ಲದ ಅರಮನೆ ಇಂಬಿಲ್ಲದ ನಡುಮನೆ
ಇಂಬಿಲ್ಲದ ಬೀಗಾರ ಅರಮನೆ
ಇಂಬಿಲ್ಲದ ಬೀಗಾರ ಅರಮನೆ ನಾವು ತಂದ
ಬಂದೀಯ ಬರಣಿ ಇಡುವಾಕೆ

ಮೆಣಸಿನೆಲೆಯಾಗ ಎಣೆಸಿಬಂದಾವು ಚಿನ್ನ
ಮಣಿಸರದ ಕಪ್ಪು ಅರಳೋಲೆ
ಮಣಿಸರದ ಕಪ್ಪು ಅರಳೋಲೆ ಅಸ್ತಕಡಗ
ಎಣಿಸಿಡಿರಿ ನಿಮ್ಮ ಮಗಳೀಗೆ

ಉದ್ದಿನೆಲೆಯಾಗ ಬಗ್ಗಿಬಂದವು ಚಿನ್ನ
ರುದ್ರಾಕ್ಸಿಕಪ್ಪ ಅರಳೋಲೆ
ರುದ್ರಾಕ್ಸಿಕಪ್ಪ ಅರಳೋಲೆ ಅಸ್ತಕಡಗ
ಬಗ್ಗಿಡಿರಿ ನಿಮ್ಮ ಮಗಳೀಗೆ

ಬಾಳೆಲೆಯಾಗೆ ಬಾಗಿ ಬಂದವು ಚಿನ್ನ
ದಾಳಿಂಬದಕೊಪ್ಪ ಅರಳೋಲೆ
ದಾಳಿಂಬದಕೊಪ್ಪ ಅರಳೋಲೆ ಅಸ್ತಕಡಗ
ನೋಡಿದಿರಿ ನಮ್ಮ ಮಗಳೀಗೆ

ಕಾಲುಂಗ್ರವೆಲ್ಲೆ ಕಾಲಸ್ತದಪಿಲ್ಲೆಲ್ಲೆ
ಮ್ಯಾಲೆ ಲ್ಯಾವುಣದ ಸರವೆಲ್ಲೆ
ಮ್ಯಾಲೆ ಲ್ಯಾವುಣದ ಸರವೆಲ್ಲೆ ಮುತ್ತು ಬಿಗಿಸಿದ
ವಾಲೇವೀಗ ನಿಮ್ಮ ಮಗಳೀಗೆ

ಕವಳೆವೂವಿನ ಕಡಗ ತಂದೈದೀವಿ
ಅರುಗೀಲಿದ್ದವರು ಬರಬೌದು
ಅರುಗೀಲಿದ್ದವರು ಬರಬೌದು ಕಡಗನ
ತಂದೈದೀವಿನಿಮ್ಮ ಮಗಳೀಗೆ

ಇಪ್ಪೆವೂವಿನ ಕಪ್ಪೆ ತಂದೈದೀವಿ
ಅತ್ತುರಲಿದ್ದವರು ಔದೌದು
ಅತ್ತುರಲಿದ್ದವರು ಔದೌದು ಅಂಬುವಂತ
ಕಪ್ಪ ತಂದೈದೀರಿ ನಿಮ್ಮಗಳೀಗೆ

ಬೈತಲೆಗೆ ತಂದೈದೀವಿ ಬಗಸೆ ತುಂಬ ಮುತ್ತು
ಬೈತಲೆ ತುಂಬಿ ಭುಜತುಂಬಿ
ಬೈತಲೆ ತುಂಬಿ ಭುಜತುಂಬಿ ಮಿಕ್ಕಮುತ್ತು
ಎಣಿಸಾಕೀರಿ ನಮ್ಮ ಬರವಣೀಗೆ

ಮುಂದಲೆಗೆ ತಂದೈದೀವಿ ಮೂರುಬಗಸೆ ಮುತ್ತು
ಮುಂದಲೆಯ ತುಂಬಿ ಬುಜತುಂಬಿ
ಮುಂದಲೆಯ ತುಂಬಿ ಬುಜತುಂಬಿ ಮಿಕ್ಕಮುತ್ತು
ತಂದಾಕೀರಿ ನಮ್ಮ ಬರಣೀಗೆ

ಕಂದ ನಿನ್ನ ಮಡದಿ ಕಂಡು ಬಂದೆವು ಕಾಣೊ
ಕಂಡುಗ ವೂವಾಗಿಡುದವಳೆ
ಕಂಡುಗ ವೂವಾಗಿಡುದವಳೆ ಕುಂತವಳೆ
ಚಂದಿರನ ರವೆಯ ಜರೆಯೂತ

ಕಂಡುಗವೂಮುಡುದು ಕುಂತವಳೇ
ಚಂದಿರನ ರವೆಯ ಜರೆವೂತ
ಚಂದಿರನ ರವೆಯ ಜರೆವೂತ ರತ್ನಮ್ಮ
ದುಂಡುಮಲ್ಲಿಗೆಯಂಗವಳೇ

ಬಾಲನಿನ್ನ ಮಡದಿನ ನೋಡಿ ಬಂದೇವು ಕಾಣೋ
ನಾಗಳ ವೂವು ಮುಡುದವಳೇ
ನಾಗಳ ವೂವು ಮುಡುದವಳೇ ಕುಂತವಳೇ
ಸೂರಿದನ ರವೆಯ ಜರೆವೂತ

ಸೂರಿದನ ರವೆಯ ಜರೆವೂತ ಕುಂತ ರತ್ನಮ್ಮ
ಜಾಜಿ ಮಲ್ಲಿಗೆಯಂಗಳವೇ