ಹೆಣ್ಣಿಗೆ ಸುರಗಿ ನೀರೊಯ್ಯುವುದು

ಇಂಬೇ ಅಣ್ಣಿನಂಗೆ ಸಿಂಬಿಸುತ್ತವರೆ
ವೊಂಬಾಳು ಗೊನೆ ಮುಡುದವರೆ
ವೊಂಬಾಳು ಗೊನೆ ಮುಡುದವರೆ ಮಾರನೋರ
ಕಂದಗಳೇ ತಳಿಯ ಇಡುದಾರೆ

ಬಳೆಯಣ್ಣಿನಂಗೆ ಪಾಗು ಸುತ್ತೈದಾರೆ
ಯಾಲಕ್ಕಿಗೊನೆಯ ಮುಡುದಾರೆ
ಯಾಲಕ್ಕಿಗೊನೆಯ ಮುಡುದಾರೆ ಮಾರನೋರು
ಬಾಲಗಳು ತಳಿಯ ಇಡುದಾರೆ

ತಳಿಯಿಲ್ಲದ ನಾವು ತಲೆಬಾಗಲೊರಡೇವೆ
ತಳಿಮುಂದೆ ನಾಗಸರಮುಂದೆ
ತಳಿಮುಂದೆ ನಾಗಸರಮುಂದೆ ಮಾರನೋರ
ಬಿರುದಿನ ಪಾತರವೆ ನಡಿಮುಂದೆ

ಅಂದಲವಿಲ್ಲದ ನಾವು ಅಂಗಳವ ವೊರಡೇವು
ಅಂದಲಮುಂದೆ ನಾಗಸರಮುಂದೆ
ಅಂದಲಮುಂದೆ ನಾಗಸರಮುಂದೆ ಮಾರನೋರ
ಸೆಂಬಪಾತ್ರವೆ ನಡಿಮುಂದೆ

ಚಿನ್ನದ ಕಂಡೀಗೆ ಅವರಣ್ಣ ಇಡಕಂಡು
ಚೆಂದವಾಗಿ ಎಳೆಯತಗುದಾನೆ
ಚೆಂದವಾಗಿ ಎಳೆಯತಗುದಾನೆ ಸುರಿಗೆ ಸುತ್ತಿ
ಚನ್ನಣ್ಣ ಅರನೇ ವುಸಿನಕ್ಕ

ಅತ್ತು ಕಲ್ಲು ಅತ್ತುತ ಸುತ್ತುಕಲ್ಲು ಸುತ್ತುತ
ಪಚ್ಚೆಕಲ್ಲು ತುಳುವುತ
ಪಚ್ಚೆಕಲ್ಲು ತುಳುವುತ ನಾಬಂದೇನು
ಎತ್ತಾಲೆಗುಂಡಯ್ನ ಅರಮನೆ

ಪಚ್ಚೇದಕಲ್ಲು ತುಳುವೂತನಾಬಂದೆ
ಎತ್ತಾಲೆ ಗುಂಡಯ್ಯನ ಅರಮನೆ
ಎತ್ತಾಲೆ ಗುಂಡಯ್ನ ಅರಮನೆ…..
………………..

ಆರುಗಲ್ಲು ಆರೂತ ಜಾರುಗಲ್ಲು ಜಾರುತ
ಲಾವುಣದಕಲ್ಲ ತುಳುವುತ
ಲಾವುಣದಕಲ್ಲ ತುಳುವುತ ನಾ ಬಂದೆ
ಯಾವುದೆ ಗುಂಡಯ್ನ ಅರಮನೆ

ಯಾವುದೆ ಗುಂಡಯ್ನ ಅರಮನೆ ತೋರಿದರೆ
ವಾಲಿಗೊಜ್ಜುರವ ಬಿಗಿಸೇನು
ಓಣೀಯ ಕಸವ ಗುಡಿಸೋಬಾಲೆ
ಯಾವುದೆ ಗುಂಡಯ್ನ ಅರಮನೆ
ಯಾವುದೆ ಗುಂಡಯ್ನ ಅರಮನೆ ತೋರಿದರೆ
ವಾಲಿಗೊಜ್ಜುರವ ಬಿಗಿಸೇನು

ಅಬ್ಬೀಯ ಕಸವ ಅತ್ತ ಗುಡಿಸೋ ಬಾಲೆ
ಯಾವುದೆ ಗುಂಡಯ್ನ ಅರಮನೆ
ಯಾವುದೆ ಗುಂಡಯ್ನ ಅರಮನೆ ತೋರಿದರೆ
ಕೊಪ್ಪಿಗೊಜ್ಜುರವ ಬಿಗಿಸೇನು

ಗುಂಡಯ್ನ ಅರಮನೆ ಮುಂದೆ ತಿರುಗಣಸ್ಯಾಲೆ
ಗಂದದುಪ್ಪರಿಗೆ ಗರಡೀಯ
ಗಂದದುಪ್ಪರಿಗೆ ಗರಡೀಯ ನಾಟಕಸ್ಯಾಲೆ
ಅದು ಕಾಣೋ ಗುಂಡಯ್ನ ಅರಮನೆ

ಸೆಟ್ಟಿಗುಂಡಯ್ನ ನಿಸ್ತ್ರೆ ಎತ್ತಾಲೋದಾಳು
ವಸ್ತಾಲೊಳಗಿಲ್ಲ ವಳಗೂವಿಲ್ಲ
ವಸ್ತಾಲೊಳಗಿಲ್ಲ ವಳಗೂವಿಲ್ಲ ಇತ್ಲಾಗಳ
ಕಿತ್ತಲಿಗರಿ ನೀರ ಬಿಡುತಾಳೆ

ಜ್ಯಾಣಗುಂಡಯ್ನ ನಾರಿಯೆತ್ತಲೋದಾಳೆ
ಬಾಗುಲಾಗಿಲ್ಲ ವಳಗಿಲ್ಲ
ಬಾಗುಲಾಗಿಲ್ಲ ವಳಗಿಲ್ಲ ಇತ್ಲಾಗಳ
ಬಾಳೆಗರಿನೀರ ಬಿಡುತಾಳೆ

ಸೆಟ್ಟಿ ಗುಂಡಯ್ನ ವಸ್ತುಲಕಾವ ಬಾಲ
ಎತ್ತೆತ್ತಲಕ ದಾರಿಬಿಡನಲ್ಲ
ಎತ್ತೆತ್ತಲಕ ದಾರಿಬಿಡನಲ್ಲ ಗುಂಡಯ್ನ
ನಿಸ್ತ್ರೇಯ ಕರಿಯೋ ಗಿಳಿರಾಯ

ಅಚ್ಚನ್ನ ಸೀರೆಲ್ಲೆ ಕೊಚ್ಚೀದ ಗಾಜೆಲ್ಲೆ
ನಿಸ್ತ್ರೆ ನೀ ಬರೆದ ಬರವಲ್ಲೆ
ನಿಸ್ತ್ರೆ ನೀ ಬರೆದ ಬರವಲ್ಲೆ ಅರಣಿಮ್ಯಾಲೆ
ಸೃಸ್ಟಿಗೀಸ್ವರನ ಪದವಲ್ಲೆ

ಅಗಲಸುರೆಲ್ಲ ಕೇರೀದ ಗಾಜೆಲ್ಲಿ
ನಾರಿನೀ ಬರೆದ ಬರವೆಲ್ಲೆ
ನಾರಿನೀ ಬರೆದ ಬರವೆಲ್ಲೆ ಅರಣಿಮ್ಯಾಲೆ
ರೂಡಿಗೀಸ್ವರನ ಪಟವೆಲ್ಲೆ

ಅಗಲಸುರೀಗ ಕೇರಿದೀ ಗಾಜೀಗ
ನಾರಿ ನಾ ಬರೆದ ಬರವೀಗ
ನಾರಿ ನಾ ಬರೆದ ಬರವೀಗ ಅರಣಿಮ್ಯಾಲೆ
ರೂಡಿಗೀಸ್ವರನ ಪಟವೀಗ

ಅಚ್ಚನ್ನಸುರೀಗ ಕೊಚ್ಚೀದ ಗಾಜೀಗ
ನಿಸ್ತ್ರೆ ನಾ ಬರೆದ ಬರವೀಗ
ನಿಸ್ತ್ರೆ ನಾ ಬರೆದ ಬರವೀಗ ಅರಣಿಮ್ಯಾಲೆ
ಸೃಷ್ಟಿಗೀಸ್ವರನ ಪಟವೀಗ

ಏರೀಯ ಇಂದೆ ವೂಬಿಡಿಸೋ ಸಿವನೇ
ವೂಜೆ ನಾನೆಂಗೆ ಬರಿಯಾಲೋ
ವೂಜೆ ನಾನೆಂಗೆ ಬರಿಯಾಲೋ ಗುಂಡಯ್ಯಾನ
ನಾರಿಯೋಗಿ ಸಿವನ ಮರೆಬಿದ್ದು

ಕಟ್ಟೆಯಿಂದೆ ಪುಷ್ಪವ ಬಿಡಿಸೋ ಸಿವನೆ
ಮುಚ್ಲ ನಾನೆಂಗೆ ಬರಿಯಾಲೋ
ಮುಚ್ಲ ನಾನೆಂಗೆ ಬರಿಯಾಲೋ ಗುಂಡಯ್ನ
ನಿಸ್ತ್ರೇ ವೋಗಿಸಿವನ ಮರೆಬಿದ್ದು

ಸಣ್ಣ ಮರುಳಾಗೆ ಅಣ್ಣ್ಯಾರೆ ಆವೀಗೆ ಮಡಕ
ಸಣ್ಣ ಸಣ್ಣೋಜಿ ಕಿರುಮಡಿಕೆ
ಸಣ್ಣ ಸಣ್ಣೋಜಿ ಕಿರುಮಡಿಕೆ ದಾರಿ ಕುಡಿಕೆ
ಮಾನ್ನೈಯರಿದ್ದಲ್ಲಿಗೆ ಬರಬೇಕು

ಚಿಕ್ಕಮರುಳಾಗೆ ಇಕ್ಯಾರೆ ಆವೀಗೆ
ಚಿಕ್ಕ ಚಿಕ್ಕವೂಜಿ ಕಿರುವುಡಕೆ
ಚಿಕ್ಕ ಚಿಕ್ಕವೂಜಿ ಕಿರುವುಡಕೆ ದಾರಿಕುಡಿಕೆ
ಸೆಟ್ಟಿರಿದ್ದಲ್ಲಿ ಬರಬೇಕು

ಆಲುಬೋನವುಂಡು ನಲವತ್ತೀಳ್ಯಮೆದ್ದು
ಜ್ಯಾಡಿಸಿ ಮಣ್ಣು ತುಳಿವೋನೆ
ಜ್ಯಾಡಿಸಿ ಮಣ್ಣು ತುಳಿವೋನೆ ಗುಂಡಯ್ಯಾನ
ಕಾಲೊತ್ತಟ್ಟೀಗೆ ಅರುಗಾಗಿ

ತುಪ್ಪಬೋನವುಂಡು ಇಪ್ಪತ್ತೀಳ್ಯಮೆದ್ದು
ಗಟ್ಟಿಸಿಮಣ್ಣು ತುಳಿವೋನೆ
ಗಟ್ಟಿಸಿಮಣ್ಣು ತುಳಿವೋನೆ ಗುಂಡಯ್ಯನ
ಕತ್ತು ಒತ್ತಟ್ಟಿಗೇ ಅರುಳಾಗಿ

ಬೆಲ್ಲ ಕಿರುದಂದು ಬೆಳ್ಳುಳ್ಳಿ ಕಿರದಂದು
ಬೆಲ್ಲದಚ್ಚುಗಳು ಕಿರಿದಂದು
ಬೆಲ್ಲದಚ್ಚುಗಳು ಕಿರಿದಂದು ಗುಂಡಯ್ಯನ
ನಲ್ಲೆ ನಮಗರಣಿ ಕೊಡಲಿಲ್ಲ

ಅಚ್ಚು ಕಿರಿದಂದು ಅಚ್ಚುಗಳು ಕಿರಿದಂದು
ಮತ್ತೆ ಸ್ಯಾಜುಗಳು ಕಿರಿದಂದು
ಮತ್ತೆ ಸ್ಯಾಜುಗಳು ಕಿರಿದಂದು ಗುಂಡಯ್ನ ನಿಸ್ತ್ರೆ
ನಮಗರಣೀನ ಕೊಡಲಿಲ್ಲ

ಅಚ್ಚು ಕಿರಿದಲ್ಲ ಅಚ್ಚುಗಳು ಕಿರಿದಲ್ಲ
ಮತ್ತೆ ಸ್ಯಾಜಿಗಳು ಕಿರಿದಲ್ಲ
ಮತ್ತೆ ಸ್ಯಾಜಿಗಳು ಕಿರಿದಲ್ಲ ಗುಂಡಯ್ನ
ನಿಸ್ತ್ರೆ ನಮಗರಣೆ ಕೊಡಲಾರೆ

ಬೆಲ್ಲ ಕಿರಿದಲ್ಲ ಬೆಳ್ಳುಳ್ಳಿ ಕಿರಿದಲ್ಲ
ಬೆಲ್ಲದಚ್ಚುಗಳು ಕಿರಿದಲ್ಲ
ಬೆಲ್ಲದಚ್ಚುಗಳು ಕಿರಿದಲ್ಲ ಗುಂಡಯ್ನ
ನಲ್ಲೆ ನಮಗೆಲ್ಲ ಕೊಡಬಾರೆ

ವುಗ್ಗಿಗೆ ಸ್ವಾರೆಬೇಕು ಮಜ್ಜಿಗೆ ಪಡಗಬೇಕು
ನುಗ್ಗೆಕಾಯಿಗೆ ಕಿರುಸ್ಯಾರೆ
ನುಗ್ಗೆಕಾಯಿಗೆ ಕಿರುಸ್ಯಾರೆ ಮದ್ದಿನ ಸಾಲೆ
ಜಗ್ಗನರಮನೆಗೆ ಬರಬೇಕು

ಆವಿಗೆ ಸ್ವಾರೆ ಬೇಕು ನೀರಿಗೆ ಪಡಗಬೇಕು
ಆಗಲಕಾಯಿಗೆ ಕಿರುಸ್ಯಾರೆ
ಆಗಲಕಾಯಿಗೆ ಕಿರುಸ್ಯಾರೆ ಮದ್ದಿನಸಾಲೆ
ಬೇಗಾನರಮನೆಗೆ ಬರಬೇಕು

ಗಾಲಿಮುಚ್ಚಳಕೆ ಕೀಲೂನೆ ಅರಿವಾಣ
ದೇವರ ಮುಂದಿಡುವ ಅಣತೀಯ
ದೇವರ ಮುಂದಿಡುವ ಅಣತೀಯ ದೂಪಾದಾರುತಿಯ
ಬೇಗಾನಾರುತಿ ಬರಬೇಕು

ಗಿಂಡಿ ಅರಿವಾಣಕ ಕೊಂಡೀಯ ಮುಚ್ಚಳ
ಲಿಂಗನ ಮುಂದಿಡುವ ಅಣತೀಯ
ಲಿಂಗನ ಮುಂದಿಡುವ ಅಣತೀಯ ದೂಪಾರತಿಯ
ಬೇಗಾನರುಮನಿಗೆ ಬರಬೇಕು

ಯಾರಪ್ಪ ಇರಿಯೋರು ಯಾರಪ್ಪ ಕಿರಿಯೋರು
ಯಾರಪ್ಪ ಬಲ್ಲಂತ ಇರಿಯೋರು
ಯಾರಪ್ಪ ಬಲ್ಲಂತ ಇರಿಯೋರು ಈವರೆಗೆ
ಯಾವ ಮೂಲೆಗೆ ನಿಲಬೇಕು

ಎಂತಪ್ಪ ಇರಿಯೋರು ಎಂತಪ್ಪ ಕಿರಿಯೋರು
ಎಂತಪ್ಪ ಬಲ್ಲಂತ ಇರಿಯೋರು
ಎಂತಪ್ಪ ಬಲ್ಲಂತ ಇರಿಯೋರು ಈವರೆಗೆ
ಎಂತ ಮೂಲೆಗೆ ನಿಲಲುಬೇಕು

ಎಂತಮೂಲೆಗೆ ನಿಲಲುಬೇಕು ಅಂದಾರೆ
ಪಂಚಮೂಲಿಗೆ ನಿಲಲುಬೇಕು

ಅಂಬಾರದಿಂದ ಕಂಬ ಕುಂಬ ಬಂದು
ಕಂದಾನ ತಾಯಿ ವಳಗೀರೆ
ಕಂದಾನ ತಾಯಿ ವಳಗೀರೆ ಅರುಣಿರಾವು
ಸೋಕ್ಯಾವೆ ಸೀರೆ ಸೆರಗೀಗೆ

ಆಕಾಸದಿಂದ ಅರುಣೆ ಕುಂಬಬಂದು
ಕೂಸೀನತಾಯಿ ವಳಗೀರೆ
ಕೂಸೀನತಾಯಿ ವಳಗೀರೆ ಅರುಣಿದಾವು
ಸೋಕ್ಯಾವೆ ಸೀರೆ ಸೆರಗೀಗೆ

ಕುಂಬರಣಿ ಬಂದಾವು ಅಂಗಳದಾಗೈದಾವೆ
ಚಂದುರನ ಮನೆಯ ಇರಿಸೊಸೆ
ಚಂದುರನ ಮನೆಯ ಇರಿಸೊಸೆ ತಿಪ್ಪಮ್ಮ
ಕುಂಬರಣೆ ಬಂದಾವೆ ಎದುರುಗೊಳ್ಳೆ

ಕೀಲರಣಿ ಬಂದು ಬಾಗುಲಾಗೈದಾವೆ
ಸೂರಿದನ ಮನೆಯ ಇರಿಸೊಸೆ
ಸೂರಿದನ ಮನೆಯ ಇರಿಸೊಸೆ ಮುದ್ದಮ್ಮ
ಕೀಲರಣೆ ಬಂದಾವೆ ಇದಿರುಗೊಳ್ಳೆ

ಮಬ್ಬುಗಂಬಳಿ ಉದ್ದಾಕೊದ್ದುಕಂಡು
ದೊಡ್ಡಕ್ಕಾನ ಬೆರಳ ಇಡಕಂಡು
ದೊಡ್ಡಕ್ಕಾನ ಬೆರಳ ಇಡಕಂಡು ರತ್ನಮ್ಮ
ಮುದ್ದು ಮಗಳೊಕ್ಕವಳೆ ಸುರಗೀಯ

ಕರಿಯ ಕಂಬಳಿ ಇಳಿಯಾಲೊದ್ದುಕಂಡು
ಇರಿಯಕ್ನ ಬೆರಳ ಇಡಕಂಡು
ಇರಿಯಕ್ನ ಬೆರಳ ಇಡಕಂಡು ರತ್ನಮ್ಮ
ದೊರೆಮಗಳೊಕ್ಕವಳೆ ಸುರಗೀಯ

ಅಜ್ಜುಡಕೆ ಬಂದು ಗುಜ್ಜಾರಿ ಬಣ್ಣಬಂದು
ಅಜ್ಜಿಗಳುಳ್ಳೋರು ಉಡುಬನ್ನಿ
ಅಜ್ಜಿಗಳುಳ್ಳೋರು ಉಡುಬನ್ನಿ ರತ್ನಮ್ಮಾನ
ಮುದ್ದೀನ ಮಗಳ ಕರೆಸೀರೆ

ತಾಯುಡಿಕೆ ಬಂದು ದೇವುಗಿರಿ ಬಣ್ಣಬಂದು
ತಾಯಿಗಳ್ಯಾರು ಉಡಬನ್ನೀರಿ
ತಾಯಿಗಳ್ಯಾರು ಉಡಬನ್ನೀರಿ ರತ್ನಮ್ಮಾನ
ವೋವಾದ ಮಗಳ ಕರೆಸೀರೆ

ಪಟ್ಟೇದಸೀರೆ ಉಟ್ಟಾಳೆ ಅವರಮ್ಮ
ಗಟ್ಟಿಗಂಗಳವ ಇಡಕಂಡು
ಗಟ್ಟಿಗಂಗಳವ ಇಡಕಂಡು ಅವರಮ್ಮ
ಪುತ್ರಮ್ಮ ಮಿಂದವಳೆ ಮಡಿನೀರು

ಸಾಲ್ಯೇದ ಸೀರೆ ಸೂಡ್ಯಾಳೆ ಅವರಮ್ಮ
ಗಾಲಿಗಂಗಳವ ಇಡಕಂಡು
ಗಾಲಿಗಂಗಳವ ಇಡಕಂಡು ಅವರಮ್ಮ
ಬಾಲೆ ಮಿಂದವಳೆ ಮಡಿನೀರು

ಆಕಾಸದಗ್ಗಣಿ ತೋಪೀನ ಸೀಗೆಕಾಯಿ
ಆಕೆ ರತ್ನಮ್ಮಗ ಮಡಿನೀರು
ಆಕೆ ರತ್ನಮ್ಮಗ ಮಡಿನೀರು ಮಿಂದೈದಾಳೆ
ದೋತ್ರ ತಂದುಡಿಸೀರೆ ಜವಳೀಯ

ಅಂಬಾರದಗ್ಗಣಿ ಕೊಂಬೆ ಸೀಗೆಕಾಯಿ
ಗೋತ್ರದ ರೆಂಬೆಗೆ ಮಡಿನೀರು
ಗೋತ್ರದ ರೆಂಬೆಗೆ ಮಡಿನೀರು ಮಿಂದೈದಾಳೆ
ಬಂದಕ ತಂದುಡಿಸೀರೆ ಜವುಳೀಯ

ಮೂಲುಮೂಲೆಗೆ ಮುತ್ತು ಪ್ರಾಣದೀವಿಗೆ ಬೆಳಕು
ಮೂಲೆದೂರ ಅವರ ಮನೆದೂರ
ಮೂಲೆದೂರ ಅವರ ಮನೆದೂರ ಮಾರನೋರ
ಬಾಲಗತ್ತಿ ಮಣೆಯ ಕೊಡಿರಣ್ಣ

ಸಂದಿಸಂದಿಗೆ ಮುತ್ತು ನಂದಾದೀವಿಗೆ ಬೆಳಕು
ಸಂದಿದೂರ ಮನೆದೂರ
ಸಂದಿದೂರ ಮನೆದೂರ ಮಾರನೋರ
ಕಂದಗತ್ತಿ ಮಣೆಯ ಕೊಡಿರಣ್ಣ

ಚಪ್ಪರದಡಿಯಾಕ ವೊಕ್ಕುನಾವೆಸ್ಟೊತ್ತು
ಬೆಟ್ಟಿಗೆ ತಂಗಾಳಿ ತನಬಾಳ
ಬೆಟ್ಟಿಗೆ ತಂಗಾಳಿ ತನಬಾಳ ಮಾರನೋರ
ಪುತ್ರಗತ್ತಿ ಮಣೆಯ ಕೊಡಿರಣ್ಣ

ಅಂದರದಡಿಯಾಕ ಬಮದು ನಾವೆಸ್ಟೊತ್ತು
ಕಾಲಿಗೆ ತಂಗಾಳಿ ತನುಬಾಳ
ಕಾಲಿಗೆ ತಂಗಾಳಿ ತನುಬಾಳ ಮಾರನೋರ
ಬಾಲಗತ್ತಿ ಕೊಡಿರಣ್ಣ

ಮಿಂದುಬಂದ ಮಗಳೀಗೆ ತಂದುಕೊಡಿರಿ
ಜವಳೀಯ ಪಿಂಡಿಯೊಳಗೊಂದು
ಜವಳೀಯ ಪಿಂಡಿಯೊಳಗೊಂದು ಅರಿವೇಯ
ಸುಬನಾಣ್ಯವಕೊಟ್ಟು ತಂದೆವು ಮಗಳೀಗೆ

ಎರಕಂಡು ಬಂದ ಮಗಳಿಗೆ ತಗತನ್ನಿ
ಜವಳೀಯ ವಳಗೊಂದು ಮಿದುವೀನ
ಜವಳೀಯ ವಳಗೊಂದು ಮಿದುವೀನ
ಮಗು ತನ್ನೀರಿ ಮಿಂದ ಮಗಳಿಗೆ

ಚಪ್ಪರದಡಿಯಲಿ ವೊಕ್ಕು ಬೀಸೋಗಾಳಿ
ಮತ್ತೊಂದು ಜ್ಯಾವ ನಿಲುಗಾಳಿ
ಮತ್ತೊಂದು ಜ್ಯಾವ ನಿಲುಗಾಳಿ ನಮ್ಮನಿಯ
ಪುತ್ರ ಬಣ್ಣವ ಉಡುತಂಕ

ಅಂದರದಡಿಯಲಿ ಬಂದು ಬೀಸೋಗಾಳಿ
ಇನ್ನೊಂದು ಜ್ಯಾವನಿಲುಗಾಳಿ
ಇನ್ನೊಂದು ಜ್ಯಾವನಿಲುಗಾಳಿ ನಮ್ಮನಿಯ
ಕಂದ ಬಣ್ಣಾವ ಉಡುತಂಕ

ಕಂದ ನೀರು ಮಿಂದು ಅಂದನಾಗ್ಯೆದಾಳೇ
ಗಂದ ತಂದಿಡಿರಿ ನೋಸಲೀಗೆ
ಗಂದ ತಂದಿಡಿರಿ ನೋಸಲೀಗೆ ಸುವರ್ನದ
ತೆಂಗು ಈಡಾಡಿರೆಡಬಲಕೆ

ಬಾಲೆ ನೀರು ಮಿಂದು ಆಯವಾಗೈದಾಳೇ
ಸಾದ ತಂದಿಡಿರಿ ನೊಸಲೀಗೆ
ಸಾದ ತಂದಿಡಿರಿ ನೊಸಲೀಗೆ ಸುವರ್ನಾದ
ಕಾಯಿ ಈಡಾಡಿರೆಡಬಲಕೆ

ಕಂದ ನೀರುಮಿಂದು ಅಂದವಾಗೈದಾಳೆ
ಕಂಡೋರ ದೃಷ್ಟಿಕರಸೋಕಿ
ಕಂಡೋರ ದೃಷ್ಟಿಕರಸೋಕಿ ಗೌರಮ್ಮ
ನಿನ್ನ ಕಂದನೊಳಿಯಾಕ ಕರಕಳ್ಳೆ

ಬಾಲೆನೀರುಮಿಂದು ಆಯವಾಗೈದಾಳೆ
ನೋಡೋರ ದೃಷ್ಟಿ ಕರಸೋಕಿ
ನೋಡೋರ ದೃಷ್ಟಿ ಕರಸೋಕಿ ರತ್ನಮ್ಮ
ಬಾಲೆಯನೊಳಿಕೆ ಕರಕಳ್ಳೆ

ಅತ್ಲಿಂದಬಂದಾವೆ ಮುತ್ತಿನೆರಡಾರೂತಿ
ಸಪ್ಪರಕೆ ದಗನ ತೊಡಕವು
ಸಪ್ಪರಕೆ ದಗನ ತೊಡಕವು ಎರಡಾರುತಿ
ಅರವತ್ತಮ್ಮತಂದು ಬೆಳುಗ್ಯಾಳೇ

ಬೆಳುಗಲೆಂದು ಬಂದಾವೆ ವಳೆವ ಎರಡಾರುತಿ
ನಡುಮನೆಗೆ ದಗನ ತೊಡಕ್ಯಾವೆ
ನಡುಮನೆಗೆ ದಗನ ತೊಡಕ್ಯಾವೆ ಎರಡಾರುತಿ
ಅಡೆದಮ್ಮ ತಂದು ಬೆಳಗ್ಯಾಳೆ

ಗಿನ್ನಲಾಗಳ ಸಣ್ಣನೆಲ್ಲು ಓಗರವ
ಇನ್ನುಣ್ಣೆಮಗಳೇ ತಡವಾಯ್ತು
ಇನ್ನುಣ್ಣೆಮಗಳೇ ತಡವಾಯ್ತು ಸಾಮನೋರ
ಬಣ್ಣ ಬಂಗಾರ ವೊದಗ್ಯಾವು

ಬಟ್ಟಲಾಗಾಳ ಬುಟ್ಟನೆಲ್ಲೋಗರವ
ಮತ್ತುಣ್ಣು ಮಗಳೆ ತಡವಾಯ್ತು
ಮತ್ತುಣ್ಣು ಮಗಳೆ ತಡವಾಯ್ತು ಸ್ವಾಮನೋರ
ಕಪ್ಪೆಬಂಗಾರ ವೋದಗ್ಯಾವು

ಬಣ್ಣವುಟ್ಟುಕಂಡು ಬಾಗಿಲಾಗಿರುವೊಳೆ
ಬಣ್ಣತಂದೋರುಬಿಡರಲ್ಲೆ
ಬಣ್ಣತಂದೋರುಬಿಡರಲ್ಲೆ ರತ್ನಮ್ಮ ನಿನ್ನ
ಅಪ್ಪಯ್ಯಗೆ ದಾಳಿ ನಡಿಮುಂದೆ

ಸಂದೂಕಾದಾಗಳ ಕೊಠಡಿ ಚಿಂತಾಕಾವ
ತಂದನ್ನ ಕೊಡಿರಿ ಮಗಳೀಗೆ
ತಂದನ್ನ ಕೊಡಿರಿ ಮಗಳೀಗೆ ಮನಮುತ್ತು
ತಂಗ್ಯಮ್ಮ ವೋಯ್ಸೆಮಡುಲಕ್ಕಿ

ಅರಿವಾಣಾದಾಗಳ ಚೆಲುವೆ ಚಿಂತಾಕಾವ
ತಗುದನ್ನ ಕೊಡಿರಿ ಮಗಳಿಗೆ
ತಗುದನ್ನ ಕೊಡಿರಿ ಮಗಳಿಗೆ ಮನಮುತ್ತ
ಅಡೆದಮ್ಮ ವೊಯ್ಯೆ ಮಡುಲಕ್ಕಿ

ಪಟ್ಟೇದಸೀರೆ ಅಕ್ಕಿಮಡುಲಕ್ಕಿ
ಜೋತೀಲಿತಾಯಮ್ಮ ಬರಬೇಕು
ಜೋತೀಲಿತಾಯಮ್ಮ ಬರಬೇಕು ನಾನೀಗ
ಜೊತಿಯಗಲಿ ಅರಗಳನ್ನಿರಲಾರೆ