ಸಾಲ್ಯೇದಸೀರೆ ಗೋದೀಯ ಮಡುಲಕ್ಕಿ
ಜೋಡೀಲಿ ತಾಯಮ್ಮ ಬರಬೇಕು
ಜೋಡೀಲಿ ತಾಯಮ್ಮ ಬರಬೇಕು ನಾನೀಗ
ಜೋಡಿಯಗಲಿ ಅರಗಳಗಿನ್ನಿರಲಾರೆ

ಇಬ್ಬಾಳ ಮುತ್ತು ಬದ್ರೆ ಮಡುಲಕಟ್ಟಿ
ಜಗ್ಗತಜಗುಲಿ ಇಳುವಳೆ
ಜಗ್ಗತಜಗುಲಿ ಇಳುವಳೆ ತೌರಮನೆ
ಎಬ್ಬಾಗಲ ಬಿಟ್ಟು ವೊರಡಾಳೇ

ನಾಗಾಳ ಮುತ್ತು ನಾರಿಗೆ ಮಡುಲಕಟ್ಟಿ
ಜಾರೂತಜಗಲಿ ಇಳುದಾಳೆ
ಜಾರೂತಜಗಲಿ ಇಳುದಾಳೆ ತೌರುಮನೆ
ತಲೆಬಾಗುಲ ಬಿಟ್ಟು ವೊರಡಾಳೇ

ಪಟ್ಟೇದ ಸೀರ್ಯಾಗ ವಪ್ಪವಾದ ಮಡುಲಕ್ಕಿ
ಮತ್ತೆ ಜಾನಕ್ಕಿ ತೆರೆಗಟ್ಟಿ
ಮತ್ತೆ ಜಾನಕ್ಕಿ ತೆರೆಗಟ್ಟಿ ನಿಸ್ತ್ರೆ ಬಂದವಳೇ
ಮೇಲು ಮುಸುಕೀಲಿ

ಸಾಲ್ಯೇದ ಸೀರ್ಯಾಗ ಆಯುವಾದ ಮಡಲಕ್ಕಿ
ಮ್ಯಾಲೆಜಾನಕ್ಕಿ ತೆರೆಗಟ್ಟಿ
ಮ್ಯಾಲೆಜಾನಕ್ಕಿ ತೆರೆಗಟ್ಟಿ ತೊಂಡಲುಸೂಡಿ
ನಾರಿಬಂದಾಳು ಮೇಲು ಮುಸುಕಿನಲಿ

ಗಂಜಿಸೀರೆ ಅಂದವಾದ ಮಡುಲಕ್ಕಿ
ಮುಂದೆ ಜನಕ್ಕೆ ತೆರೆಗಟ್ಟಿ
ಮುಂದೆ ಜನಕ್ಕೆ ತೆರೆಗಟ್ಟಿ ತಂಡುಲನೂಡಿ
ರೆಂಬೆ ಬಂದಳು ಮೇಲುಮುಸುಕಿನಲಿ

ಕಷ್ಟ ಇಡುವಾಗ ನಿತ್ಯದೀವಿಗೆ ಜತನ
ಕಟ್ಟುವಾಗ ಜತನ ಮಡುಲಕ್ಕಿ
ಕಟ್ಟುವಾಗ ಜತನ ಮಡುಲಕ್ಕಿ ಮುಡಸೀರೆ
ವಸ್ತುರಜತನ ದಾರೆ ಎರೆವತಂಕ

ವಾಲೆ ಇಡುವಾಗ ಪ್ರಾಣದೀವಿಗೆ ಜತನ
ಉಡುವಾಗ ಜತನ ಮಡುಲಕ್ಕಿ
ಉಡುವಾಗ ಜತನ ಮಡುಲಕ್ಕಿ ಮಂಡೆಮ್ಯಾಲೆ
ವೂವು ಜತನ ದಾರೆ ಎರೆವತಂಕ

ಚಪ್ಪರದ ಮುಂದಾಕ ನಿಸ್ತ್ರೆ ಕರೆಸ್ಯಾರೆ
ಅಚ್ಚಮಲ್ಲಿಗೆ ಮುಡಿಸೀರೆ
ಅಚ್ಚಮಲ್ಲಿಗೆ ಮುಡಿಸೀರೆ ನಾವುತಂದ
ಪುಪ್ಪಳಿ ಸೀರೆ ಉಡುಸೀರೆ

ಅಂದಾಲದ ಮುಂದಾಕ ರೆಂಬೇಯ ಕರೆಸೀರೆ
ದುಂಡುಮಲ್ಲಿಗೆ ಮುಡಿಸೀರೆ
ದುಂಡುಮಲ್ಲಿಗೆ ಮುಡಿಸೀರೆ ನಾವು ತಂದ
ಗಂಜೀಯ ಸೀರೆ ಉಡಿಸೀರೆ

ಚಿಕ್ಕಪ್ಪ ತನ್ನ ಮಗಳ ರಟ್ಟಿಮ್ಯಾಲೆ ಕುಂಡಿರಿಸಿ
ಬೆಟ್ಟೀಲೆವುದಕ ವರೆಸೂತ
ಬೆಟ್ಟೀಲೆವುದಕ ವರೆಸೂತ ಎಣುಮಕ್ಕಳು
ವುಟ್ಟಬಾರದೇಳು ಜಲುಮಾಕಂದ

ಇರಿಯಪ್ಪತನಮಗಳ ತೊಡೆ ಮ್ಯಾಲೆ ಕುಂಡಿರಿಸಿ
ಬೆರಳೇಲಿ ವುದಕ ವರೆಸೂತ
ಬೆರಳೇಲಿ ವುದಕ ವರೆಸೂತ ಎಣುಮಕ್ಕಳು
ಇರಬಾರದೇಳು ಜಲುಮಾಕ

ಬಾವಿದಡದಲ್ಲಿ ಬಾಸಿಂಗ ಸೂಡೋನೆ
ದೇಸಪತಿ ನಮ್ಮ ಗುರವೀನ
ದೇಸಪತಿ ನಮ್ಮ ಗುರವೀನ ಮಗನ ಕೂಟೆ
ಬಾಸಿಂಗ ಕೊಂಡೆ ದರಣಾಕೆ

ಗಂಗೆದಡದಲ್ಲಿ ತುಂಡುಲವ ಸೂಡೋನೆ
ಚಂದ್ರಪತಿ ನಮ್ಮ ಗುರುವೀನ
ಚಂದ್ರಪತಿ ನಮ್ಮ ಗುರುವೀನ ಮಗನ ಕೂಟೆ
ತುಂಡುವಿನ ಕೊಂಡೆ ದರಹಾಕೆ

ಅರಿಯನೀರಾಗ ಬಿದ್ದುವೋಗಬೆಂಡು
ಎಬ್ಬುಲಿವೋಗಿ ಎಳೆತಂದ
ಎಬ್ಬುಲಿವೋಗಿ ಎಳೆತಂದ ಬೆಂಡು
ತಿದ್ದಿದನೋನ್ಯಾವ ಸುಕಜ್ಯಾಣ

ಅರಿಯನೀರಾಗ ಅರಿದುವೋಗೋಬೆಂಡು
ತಿರುಮೂಳಿ ವೋಗಿ ಎಳೆತಂದ
ತಿರುಮೂಳಿ ವೋಗಿ ಎಳೆತಂದ
ತಿರುವಿದನ್ಯಾವ ಸುಕಿ ಜಾಣ

ಕಂದನ ಬಾಸಿಂಗ ಮಂಜುಗವುದಾವಂದು
ಚಂದ್ರಗಿರಿದುರುಗ ಮರೆಮಾಡಿ
ಚಂದ್ರಗಿರಿದುರುಗ ಮರೆಮಾಡಿ ಅವರಣ್ಣ
ಕಂದನ ಬಾಸಿಂಗ ಕಳುವ್ಯಾನೆ

ಬಾಲನ ಬಾಸಿಂಗ ಕಾವಳುಗೌದಾವಂದು
ಸೂರಿದನಗಿರಿದುರುಗ ಮರೆಮಾಡಿ
ಸೂರಿದನಗಿರಿದುರುಗ ಮರೆಮಾಡಿ ಅವರಣ್ಣ
ಬಾಲಿಗ ಬಾಸಿಂಗ ಕಳಿವ್ಯಾನೆ

ಬಾಸಿಂಗ ಸೂಡಣ್ಣಾಗಿ ಏಸೂರು ಮಾನ್ಯೇವು
ಕ್ಯಾಸಪ್ಪನಳ್ಳಿ ಅಗಳೀಯ
ಕ್ಯಾಸಪ್ಪನಳ್ಳಿ ಅಗಳೀಯ ಕೇರಿಯಿಂದಾಲ
ಕ್ಯಾಸಕ್ಕಿಗೆಡ್ಡೆ ಕೂಡಿರಣ್ಣ

ತುಂಡುಲವಸೂಡಣ್ಣಾಗೆ ಒಂದೂರು ಮಾನ್ಯೇವು
ಗುಂಡಪ್ಪನಳ್ಳಿ ಅಗಳ ಕೆರೆಯಿಂದಾಲ ಕೆಂಬಕ್ಕಿ
ಗದ್ದೇಯ ಮಾನ್ಯೆ ಕೊಡಿರಣ್ಣ

ಮುತ್ತಿನಬಾಸಿಂಗ ಅವರಪ್ಪಸೂಡಲು ಬಲ್ಲ
ಅವರಪ್ಪಯ್ಯ ಸೂಡಿ ಮಕ ನೋಡಿ
ಮತ್ತೇಳು ರಾಜ್ಯವ ತಿರುನಾಳೋ

ಚಿನ್ನದ ಬಾಸಿಂಗ ಅವರಣ್ಣಯ್ಯ ಸೂಡಲುಬಲ್ಲ
ಅವರಣ್ಣಯ್ಯ ಸೂಡಿ ಮಕನೋಡಿ
ಇನ್ನೇಳುರಾಜ್ಯವ ತಿರುನಾಳೋ

ಅತ್ತಸರಣೆನ್ನು ಇತ್ತಸರಣೆನ್ನು
ಸುತ್ತಲದೇವರಿಗೆ ಸರಣೆಯನ್ನು ನಿನಬಾಗಾದ
ಮುಕ್ಕಣ್ಣಗೊಂಬೆ ಸರಣೆನ್ನು

ಅಲ್ಲಿ ಸರಣೆನ್ನು ಇಲ್ಲಿ ಸರಣೆನ್ನು
ಎಲ್ಲ ದೇವರಿಗೆ ಸರಣೆನ್ನು
ಎಲ್ಲ ದೇವರಿಗೆ ಸರಣೆನ್ನು ನಿನಬಾಗಾದ
ಮಲ್ಲಯ್ಯಗೊಂದೆ ಸರಣೆನ್ನು

ದ್ಯೇವುರ ಕಂಡಲ್ಲಿ ಬಾಯಡಿಕೆ ಉಗುಳಣ್ಣ
ಮ್ಯಾಗಾಲ ಪದುಮೆಸಡುಲೀಸೊ
ಮ್ಯಾಗಾಲ ಪದುಮೆಸಡುಲೀಸೊ ನಿನಬಾಗಾದ
ರೇವಣ್ಣಗೊಂದು ಸರಣೆನ್ನು

ಲಿಂಗಾನಕಂಡಲ್ಲಿ ತುಂಬುಲವ ಉಗುಳಣ್ಣ
ಮುಂಗಾಲ ಪದುಮೆಸಡುಲಿಸೋ
ಮುಂಗಾಲ ಪದುಮೆಸಡುಲಿಸೋ ನಿನಬಾಗಾದ
ನಿಂಗಣ್ಣಗೊಂದೆ ಸರಣೆನ್ನೋ

ಒಂಟೀಯ ಏರಿ ಕೆಂಚನಗುಡಿಗೆ ಬಂದ
ಒಂಟಿಯಿಳಿದು ಬಂದು ಸರಣಂದು
ಒಂಟಿಯಿಳಿದು ಬಂದು ಸರಣಂದು ಬೇಡಿಕಂಡು
ಕೆಂಚಿಗೆ ಮುತ್ತೈದೆ ತನಗಾಳ

ಆನೇಯ ಏರಿ ದೇವಾರ ಗುಡಿಗೆಬಂದ
ಆನೇಯ ಇಳಿದು ಸರಣೆಂದ
ಆನೇಯ ಇಳಿದು ಸರಣೆಂದು ಬೇಡಿಕೊಂಡು
ನಾರೀಗೆ ಮುತ್ತೈದೆ ತನಗಾಳ

ಆನೆಗಾಕ್ಯಾರೆ ಆರುಸಾವಿರ ಜಲ್ಲಿ
ಆನೆಯ ಮ್ಯಾಲೆ ಮದುಮಗ
ಆನೆಯ ಮ್ಯಾಲೆ ಮದುಮಗ ವೊದ್ದಿರುವೋದು
ಕಾವೀಯ ಬೆಳಕು ಜಗಕೆಲ್ಲ

ಒಂಟಿಗಾಕ್ಯಾರೆ ಎಂಟು ಸಾವಿರ ಜಲ್ಲಿ
ವಂಟೀಯ ಮ್ಯಾಲೆ ಮದುಮಗ
ವಂಟೀಯ ಮ್ಯಾಲೆ ಮದುಮಗ ಇಟ್ಟಿರುವೋದು
ಕಂಟೀಯ ಬೆಳಕುಜನಕೆಲ್ಲ

ಬಾಳೆಯಣ್ಣಿನಂಗೆ ಆಯವಾದವು ಕೋಡು
ದೇವರ ಬಸವಯ್ಯ ನಿನಕೋಡು
ದೇವರ ಬಸವಯ್ಯ ನಿನಕೋಡು ನಿಮ್ಯಾಲೆ
ಬಾಲಮ್ಮನೈದಾನೆ ಜತನಾವೆ

ನಿಂಬೇಯಣ್ಣಿನಂಗೆ ಅಂದವಾದವು ಕೋಡು
ತಂದೆ ಬಸವಣ್ಣ ನಿನ ಮ್ಯಾಲೆ
ತಂದೆ ಬಸವಣ್ಣ ನಿನ ಮ್ಯಾಲೆ ಕಂದಮ್ಮ
ಐದಾಳೆ ಜತನಾವ

ರಾತ್ರೀಯಾಗಾಲಿ ತೋಪು ತಲ್ಲಣಿಸಾಲಿ
ರಾತ್ರಿನಕ್ಸತ್ರ ಮುಣುಗಾಲಿ
ರಾತ್ರಿನಕ್ಸತ್ರ ಮುಣುಗಾಲಿ ಕೈಲಾಸದ
ಮಾತಿನ ಬಸವಯ್ಯ ಬರಲಿಲ್ಲ

ಮಾತಿನ ಬಸವಯ್ಯ ಬರುವನಕ
ಮಾತಿಲ್ಲದ ಮಗಳ ಕೊಡಲಾರೆ

ಸಂಜೆಯಾಗಾಲಿ ತೆಂಗು ತಲ್ಲಣಿಸಾಲಿ
ಸಂಜೆ ನಕ್ಸತ್ರಮುಣುಗಾಲಿ
ಸಂಜೆ ನಕ್ಸತ್ರಮುಣುಗಾಲಿ ಕೈಲಾಸದ
ತಂದೆ ಬಸವಯ್ಯ ಬರಲಿಲ್ಲ

ತಂದೆ ಬಸವಯ್ಯ ಬರುತಂಕ
ಮಾತಿಲ್ಲದ ಮಗಳ ಕೊಡಲಾರೆ

ಬಾಳೇಯ ಮರಕ ಮ್ಯಾಗಾಳಿ ಬೀಸಿದಂಗೆ
ಲಾವಣ್ಯಕ ಮುತ್ತು ಸುರಿದಂಗೆ
ಲಾವಣ್ಯಕ ಮುತ್ತು ಸುರಿದಂಗೆ ಬಸವಯ್ನೋರು
ಆರೋರ ನಡುವೆ ಬರುತಾರೆ

ಬಂದರು ಬಸವಯ್ನೋರು ನಿಂದರು ದರಣಿಮ್ಯಾಲೆ
ಕೆಂಗಣ್ಣನೋಟ ಮುಗಲನೋಟ
ಕೆಂಗಣ್ಣನೋಟ ಮುಗಲನೋಟ ಕೈಲಾಸದ
ಲಿಂಗಕ ನಿಮ್ಮಗಳ ಕೊಡಬೇಕು

ತೆಂಗೀನ ಮರಕ ತಂಗಾಳಿ ಬೀಸಿದಂಗ
ಬಂಗಾರಕ ಮುತ್ತು ಸರಿದಂಗ
ಬಂಗಾರಕ ಮುತ್ತು ಸರಿದಂಗ ಬಸವಯ್ನೋರು
ಜಂಗಮರ ನಡುವೆ ಬರುತಾರೆ

ಬಂದರು ಬಸವಯ್ನೋರು ನಿಂದುರುದರಣಿಮ್ಯಾಲೆ
ಕೆಂಗಣ್ಣ ನೋಟ ಮುಗುಲನೋಟ
ಕೆಂಗಣ್ಣ ನೋಟ ಮುಗುಲನೋಟ ಕೈಲಾಸದ
ಯೋಗಿಗೆ ನಮ್ಮಗಳ ಕೊಡಬೇಕು

ಕೊಟ್ಟಾನೆಂದಳವರಮ್ಮ ಕೊಡನೆಂದನವರಪ್ಪ
ಈಡುಪಾಡಂದ ಯಮನಕಾನ
ಈಡುಪಾಡಂದ ಯಮನಕಾನ ಉರಿಗಣ್ಣ
ಬಿಟ್ಟರು ಸಿವ ತಾನು

ಆಕೈಗೆರೆಯ ನೋಡಿ ಕೈಬಾವ ನೋಡಿ
ಮೇಲ್ಸರಗ ತಗದು ಬೆನ್ನನೋಡಿ
ಮೇಲ್ಸರಗ ತಗದು ಬೆನ್ನನೋಡಿ ಎಣ್ಣು
ಮ್ಯಾಗಾಳ ಅರಗೆ ಸಲುವೋದು

ಅಂಗೈಗೆರೆಯ ಮುಂಗೈಬಾವ ನೋಡಿ
ಮುಂಜೆರಗತಗದು ಬೆನ್ನ ನೋಡಿ
ಮುಂಜೆರಗತಗದು ಬೆನ್ನ ನೋಡಿ ಎಣ್ಣು
ಮಂದಾಲದರಗೆ ಸಲುವೋದು

ಕಣ್ಣುಬ್ಬು ನೋಡಿ ಕೆನ್ನೆಬಾವ ನೋಡಿ
ಬೆನ್ನ ಮ್ಯಾಗಾಳ ಕರಿಯಮಚ್ಚೆ
ಬೆನ್ನ ಮ್ಯಾಗಾಳ ಕರಿಯಮಚ್ಚೆ ನೋಡಿಚೆನ್ನಣ್ಣ
ಮಗಳ ಕೊಡಬೇಕಂದಾನು

ಆಳಂಕ ನೋಡಿ ತೋಳುಬಾವ ನೋಡಿ
ತೋಳೀನಮ್ಯಾಗಾಳ ಕರಿಯಮಚ್ಚೆ
ತೋಳೀನಮ್ಯಾಗಾಳ ಕರಿಯಮಚ್ಚೆ ನೋಡಿ
ರೇವಣ್ಣೆಸ್ವರಗೆ ಕೊಡಿನಂದ

ಎಮ್ಮೆಯಾಲು ತನ್ನಿ ಕಮ್ಮನ ತುಪ್ಪತನ್ನಿ
ಕನ್ನೆಯೆಡಗಡೆಗೆ ತನ್ನಿ
ಕನ್ನೆಯೆಡಗಡೆಗೆ ತನ್ನಿ ನಮ್ಮ ಮನೆಯ
ಚನ್ನಣ್ಣ ದಾರೆಯೆರೆವೋನು

ಅಸಿಯಾಲು ತನ್ನಿ ಬಿಸಿಯ ತುಪ್ಪ ತನ್ನಿ
ಅಸೆಯ ಎಡಗಡೆಗೆ ಕರೆತನ್ನಿ
ಅಸೆಯ ಎಡಗಡೆಗೆ ಕರೆತನ್ನಿ ನಮ್ಮನೆಯ
ಬಸವಣ್ಣಗ ದಾರೆಯೆರೆವೋನು

ದಾರೆಯೆರೆವೊತ್ತಿಗೆ ಯಾರ್ಯಾರು ಬರಬೇಕು
ದಾರಾದಕೊರಳ ಕಿರಿಯಯ್ಯ
ದಾರಾದಕೊರಳ ಕಿರಿಯಯ್ಯ ಸ್ವಾದರಮಾವ
ದಾರೆವೊತ್ತಿಗೆ ಬರಬೇಕು

ವುಡುಕೋ ವತ್ತೀಗೆಯ್ಯಾರ್ಯಾರು ಬರಬೇಕು
ಪದಕಾದಕೊರಳ ಸ್ವಾದರಮಾವ
ಪದಕಾದಕೊರಳ ಸ್ವಾದರಮಾವ ವುಡುಕೋ
ವತ್ತೀಗೆ ಬರಬೇಕು

ಮುಟ್ಟೀರಿ ಮುಟ್ಟೀರಾಲ ಕುಡಿಕೆ
ಮುಕ್ಕಣ್ಣ ಮುಟ್ಟಿ ಸಿವಮುಟ್ಟಿ
ಮುಕ್ಕಣ್ಣ ಮುಟ್ಟಿ ಸಿವಮುಟ್ಟಿ ಪರಮೇಸ್ವರನ
ನಿಸ್ತ್ರೆ ಮುಟ್ಟಿದಾರೆಯೆರುದಾಳೆ

ತೋರಿರಿ ತೋರಿರಾಲ ಕುಡಿಕೆ
ಮುಕ್ಕಣ್ಣ ಮುಟ್ಟಿ ಸಿವಮುಟ್ಟಿ
ಮುಕ್ಕಣ್ಣ ಮುಟ್ಟಿ ಸಿವಮುಟ್ಟಿ ಪರಮೇಸ್ವರನ
ನಿಸ್ತ್ರೆ ಮುಟ್ಟಿದಾರೆಯೆರುದಾಳೆ

ತೋರಿರಿ ತೋರಿರಾಲ ಕುಡಿಕೆ
ರೇವಣ್ಣ ಮುಟ್ಟಿ ಸಿವಮುಟ್ಟಿ
ರೇವಣ್ಣ ಮುಟ್ಟಿ ಸಿವಮುಟ್ಟಿ ಪರಮೇಸ್ವರನ
ನಾರಿಮುಟ್ಟಿದಾರೆಯನೆರದಾಳೆ

ಕಾಲುಂಗ್ರ ಕಡಿಸೂಸ್ತ್ರ ಏಳೋನ್ನಿನ ತಾಳಿ
ದೀರಲರ್ಜುಣರ ಮಗಳು
ದೀರಲರ್ಜುಣರ ಮಗಳು ರತ್ನಮ್ಮಾಗೆ
ದಾರೆಯನೆರಿಯಾಕೆ ಸಿವಬಂದ

ಕಂಕಳ ಕಡಿಸೂಸ್ತ್ರ ಎಂಟೊನ್ನಿನ ತಾಳಿ
ತೆಂಕಲರ್ಜುಣರ ಮಗಳೀಗೆ
ತೆಂಕಲರ್ಜುಣರ ಮಗಳೀಗೆ ರತ್ನಮ್ಮಾಗೆ
ಕಂಕಳ ಸೂಡ ಸಿವಬಂದು

ಆನೀಯ ಮ್ಯಾಲೆ ಜ್ಯಾಣಜಂಗಮ ಬಂದ
ವಾಲೀಕೆಳಗ ಸಿವಬಂದ
ವಾಲೀಕೆಳಗ ಸಿವಬಂದ ಅವರಿಬ್ಬರಿಗೆ
ಜ್ಯಾವೊತ್ತಿಲಿ ದಾರೆಯೆರುದಾರೆ

ಒಂಟೀಯ ಮ್ಯಾಲೆ ಕೆಂಚ ಜಂಗಮಬಂದ
ಮಂಟಪದೊಳಗೆ ಸಿವಬಂದ
ಮಂಟಪದೊಳಗೆ ಸಿವಬಂದ ಅವರಿಬ್ಬರಿಗೆ
ಸಂಪತ್ತೀಲಿ ದಾರೆಯೆರುದಾರೆ

ಆಚೆ ಕಂಬಾಕ ಸಾಕ್ಸಾತೀಸ್ವರ ಕುಂತ
ಈಚೆಕಂಬಾಕ ಸಿವನಂತ
ಈಚೆಕಂಬಾಕ ಸಿವನಂತ ಅವರಿಬ್ಬರಿಗೆ
ಬಾಸೇಯ ಮಾಡಿ ಅರುಗಾದ

ಇಂದುಲಕಂಬಾಕ ನಂದಿಗೀಸ್ವರ ನಿಂತ
ಮುಂದಲಕಂಬಾಕ ಸಿವನಂತ
ಮುಂದಲಕಂಬಾಕ ಸಿವನಂತ ಅವರಿಬ್ಬರಿಗೆ
ನೆಂಬುಗೆ ಮಾಡಿಸಿ ಅರುಗಾದ

ಕೈಯ್ಯಾಗಳಾಲು ಕೈಗೆ ವೊಯ್ವಾಗ
ಸೂರಿದನೆ ಬಾಸೆ ಕೊಡುವಾಗ
ಸೂರಿದನೆ ಬಾಸೆ ಕೊಡುವಾಗ ತಾಯಿತಂದೆ
ಬಾಡ್ಯಾರೆ ಬಾಳೆಸುಳಿಯಂಗ

ಅಂಗೈಯಾಗಳಾಲು ಮುಂಗೈಗೆ ವೊಯ್ವಾಗ
ಚಂದ್ರನಿಗೆ ಬಾಸೆ ಕೊಡುವಾಗ
ಚಂದ್ರನಿಗೆ ಬಾಸೆ ಕೊಡುವಾಗ ತಾಯಿತಂದೆ
ಕಂದ್ಯಾರೆ ಬಾಳೆಸುಳಿಯಂಗೆ

ಅಣ್ಣ ಆರುವರಣ್ಣ ಕೆನ್ನೆಮ್ಯಾಗಳ ಜುಟ್ಟು
ಅನ್ನೊಂದೆಳಿಯ ಜನಿವಾರ
ಅನ್ನೊಂದೆಳಿಯ ಜನಿವಾರ ಆರೋರಣ್ಣ
ಚೆಂದವಾಗಿ ಆಕೋ ಬ್ರಮ್ಮಗಂಟ

ಅಪ್ಪ ಆರೋರಣ್ಣ ನೆತ್ತಿಮ್ಯಾಗಳ ಜುಟ್ಟು
ಇಪ್ಪತ್ತೊಂದೆಳಿಯ ಜನಿವಾರ
ಇಪ್ಪತ್ತೊಂದೆಳಿಯ ಜನಿವಾರ ಆರೋರಣ್ಣ
ವಪ್ಪವಾಗಿ ಆಕೊ ಬ್ರಮ್ಮಗಂಟು

ವಜ್ಜರದಗಿಂಡಿ ತಿದ್ದುತಲಿ ಅಸನಾದಾವೆ
ಮುದ್ದು ಮೋವನ್ನರು ನೆರೆತಾರೆ
ಮುದ್ದು ಮೋವನ್ನರು ನೆರೆತಾರೆ ಗಂಡಿನೋರು
ಗೆದ್ದೆವೆಂದು ದಾರೆಯೆರುದಾರೆ

ಮಾಣಿಕದ ಗಿಂಡಿ ನೋಡುತಲಿ ಅಸನಾದಾವೆ
ಜಾಣೆ ಮೋವನ್ನರು ನೆರೆತಾರೆ
ಜಾಣೆ ಮೋವನ್ನರು ನೆರೆತಾರೆ ಎಣ್ಣಿನೋರು
ಸೋತೆವಂದು ದಾರೆಯೆರುದಾರೆ

ಅಟ್ಟೀಯಸಕುನ ಇಸ್ಟದೇವರು ಕೇಳಿ
ದಕ್ಕೀತೆ ಎಣ್ಣುದರುಮರಿಗೆ
ದಕ್ಕೀತೆ ಎಣ್ಣುದರುಮರಿಗೆ ಸೀರ್ಯಾದ
ಮುತ್ತಿನ ತ್ವಾರಣದ ಅರುಮನಿಗೆ

ಆದೀಯ ಸಕುನ ನಾಮದೇವರು ಕೇಳಿ
ಆಯಿತೀಎಣ್ಣು ದರುಮರಿಗೆ
ಆಯಿತೀಎಣ್ಣು ದರುಮರಿಗೆ ಸೀರ್ಯಾದ
ವೂವಿನ ತ್ವಾರಣದ ದೊರಿಗಳಿಗೆ

ಮುತ್ತಿನ ಗದ್ದಿಗೆ ಮ್ಯಾಲೆ ಮುಕ್ಕಣ್ಣ ಮೂರ್ತವಾದ
ಮುಕ್ಕಣ್ಣ ಸಿವನೆ ಸಿರಿಗೌರಿ
ಮುಕ್ಕಣ್ಣ ಸಿವನೆ ಸಿರಿಗೌರಿ ವರ್ಣಾಕೆ
ಮುತ್ತೈದೆರಕ್ಕಿ ತೊಳೆದಾರೆ

ಇಂದೇ ನಮ್ಮಳಿಯ ನಂದಿಮ್ಯಾಲೆ ಬಂದ
ಕಂಬಳಿ ಆಸಿ ಕರಿಮೋಡ
ಕಂಬಳಿ ಆಸಿ ಕರಿಮೋಡ ಗದ್ದಿಗೆ ಮ್ಯಾಲೆ
ಇಂಬಾಗಿ ರಾಯ ಕುಂತವನೆ

ಚಪ್ಪರದ ಸುತ್ತ ಬಟ್ಟಮುತ್ತು ಚೆಲ್ಲಿದಂತೆ
ಸೆಟ್ಟಿಯನೆಡಗಡಿಗೆ ಸ್ರತಿಯವಳು
ಸೆಟ್ಟಿಯನೆಡಗಡಿಗೆ ಸ್ರತಿಯವಳು ಕುಂತೈದಾಳೆ
ಬಟ್ಟಮುತ್ತಿನ ರಾಸಿ ವೊಯ್ದಂಗೆ

ಅಂದಲದ ಸುತ್ತಮುತ್ತದುಂಡುಮುತ್ತು ಚೆಲ್ಲಿದಂಗೆ
ಗಂಡನೆಡಗಡೆಗೆ ಸ್ರತಿಯವಳು
ಗಂಡನೆಡಗಡೆಗೆ ಸ್ರತಿಯವಳು ಕುಂತೈದಾಳೆ
ದುಂಡುಮುತ್ತು ರಾಸಿವೊಯ್ದಂಗೆ