ಚಪ್ಪರದ ವೀಳ್ಯ ಇಡುವುದು

ಆಚೆಗಾಕಿದರೆ ಈಚೆಗೆ ತಲೆದೂಗಾವು
ರಾಚಯ್ಯನ ಅಂಗಡಿಯಾಗ ಇರುವೋವು
ರಾಚಯ್ಯನ ಅಂಗಡಿಯಾಗ ಇರುವೋವು ಕಡಚಂದ್ರಿಕೆ
ತೋಪು ತಳಿನಮಗೆ ಇಡಿಸ್ಯಾರೆ

ಅಲ್ಲಿಗಾಕಿದರೆ ಇಲ್ಲಿಗೆ ತಲೆದೂಗಾವು
ಮಲ್ಲಯ್ನಂಗಡಿಯಾಗ ಇರುವೋವು
ಮಲ್ಲಯ್ನಂಗಡಿಯಾಗ ಇರುವೋವು ಕಡಿಚಂದ್ರಿಕೆ
ವಲ್ಲಿ ತಳಿನಮಗೆ ಇಡಿಸ್ಯಾರೆ

ಇಪ್ಪೆವೂವೀನ ಇಪ್ಪತ್ತೊಂದೆಸಳೀನ
ಮುತ್ತಿನ ಗೊಂಡೇದ ಸೇರಗೀನ
ಮುತ್ತಿನ ಗೊಂಡೇದ ಸೇರಗೀನ ತಳಿನಮ್ಮ
ಕಪ್ಪೀಗೆ ಬಿಸಿಲಂದು ಇಡಿಸ್ಯಾರೆ

ಅನ್ನೆವೂವೀನ ಅನ್ನೊಂದು ಎಸಳೀನ
ಚಿನ್ನದ ಗೊಂಡೇದ ಸೆರಗೀನ
ಚಿನ್ನದ ಗೊಂಡೇದ ಸೆರಗೀನ ತಳಿನಮ್ಮ
ಬಣ್ಣಕ ಬಿಸಿಲಂದು ಇಡಿಸ್ಯಾರೆ

ತಳಿಯಾಡಿ ಬರುವೋರು ತಳಿಕೀನ ಮುತ್ತೈದೇರು
ಮಲುಕೀನ ಗುಜ್ಜಾರಿ ಮುಸುಕೀನ
ಮಲುಕೀನ ಗುಜ್ಜಾರಿ ಮುಸುಕೀನ ಮುತ್ತೈದೇರು
ಗಿಳಿಯ ಲೋಲುಸ್ತ ನಡೆದಾರೆ

ಅಂದಲದಡಿ ಬರುವೋರು ಅಂದವುಳ್ಳ ಮುತ್ತೈದೇರು
ತುಂಬುಗುಜ್ಜಾರಿ ನೆರಿಗ್ಯೋರು
ತುಂಬುಗುಜ್ಜಾರಿ ನೆರಿಗ್ಯೋರು ಮುತ್ತೈದೇರು
ಬಂದಾರೆ ತಳಿಯನಿಡುವಾಕೆ

ಒಂದರಿವಾಣಾದಾಗ ಒಂದಚ್ಚು ಬೆಲ್ಲನಿಟ್ಟು
ಒಂದಂಚಿನ ಸೀರೆ ನೆಡುವಿಟ್ಟು
ಒಂದಂಚಿನ ಸೀರೆ ನೆಡುವಿಟ್ಟು ಸ್ವಾಮನೋರು
ಒಂದು ಬೀದಿಲಿಡಿಕು ನಡಸ್ಯಾರೆ

ಎರಡರಿವಾಣಾದಾಗ ಎರಡಚ್ಚು ಬೆಲ್ಲನಿಟ್ಟು
ಎರಡಂಚಿನಸೀರೆ ನಡುವಿಟ್ಟು
ಎರಡಂಚಿನಸೀರೆ ನಡುವಿಟ್ಟು ಸ್ವಾಮನೋರು
ಎರಡು ಬೀದಿಲುಡುಕಿ ನೆಡೆಸ್ಯಾರು

ಎರಡರಿವಾಣಾದಾಗ ಎರಡಚ್ಚು ಬೆಲ್ಲನಿಟ್ಟು
ಎರಡಂಚಿನಸೀರೆ ನೆಡುವಿಟ್ಟು
ಎರಡಂಚಿನಸೀರೆ ನೆಡುವಿಟ್ಟು ಸ್ವಾಮನೋರು
ಎರಡು ಬೀದಿಲುಡುಕಿ ನೆಡೆಸ್ಯಾರು

ವುಡುಕಿ ಬರುವಾಗ ಊರು ತಲ್ಲಣಿಸ್ಯಾವೆ
ಅಡಕೇಯಮರ ನೆಡುಗ್ಯಾವೆ
ಅಡಕೇಯಮರ ನೆಡುಗ್ಯಾವೆ ಸ್ವಾಮನೋರು
ವುಡುಕಂಡು ಊರ ವೊಗುವಾಗ

 

ವೀಳ್ಯ ನೀಡುವುದು

ಬಣ್ಣ ಬರುವಾಗ ಬಾಗಲು ತಲ್ಲಣಿಸ್ಯಾವೆ
ಬಾಳೇಯ ಮರನೆನೆಡುಗ್ಯಾವೆ
ಬಾಳೇಯ ಮರನೆನೆಡುಗ್ಯಾವೆ ಸ್ವಾಮನೋರ
ಬಣ್ಣ ಮುಂದೆ ಊರ ವೊಗುವಾಗ

ಮತ್ತೆನ್ಯೆನದೇವ ಅಟ್ಟಿದೈಮಾರವ್ವನ
ಪಟ್ಟೀಯದಟ್ಟಿ ಚೆಲುವಾನ
ಪಟ್ಟೀಯದಟ್ಟಿ ಚೆಲುವಾನ ಆಗಲೂಡಿಯ
ಎತ್ತಿನ ಜೋಗಿಯ ನ್ಯನದೇನ

ನಾನು ನ್ಯನದೇನ ದೇವ್ರು ದೈಮಾರಾನ
ಸಾಲ್ಯದಟ್ಟಿ ಚೆಲುವಾನ
ಸಾಲ್ಯದಟ್ಟಿ ಚೆಲುವಾನ ಆಗಲೂಡಿಯ
ಆವೀನಜೋಗೀಯ ನ್ಯನದೇನ

ವೊತ್ತುವುಟ್ಟುವ ಮುನ್ನ ಅಪ್ಪಯ್ನ ನ್ಯನದೇನ
ಲಕ್ಕಸದಾವೀನ ಮೈಗಾದ
ಲಕ್ಕಸದಾವೀನ ಮೈಗಾದ ಎತ್ತಯ್ನ
ವೊತ್ತು ವುಟ್ಟದ ಮುನ್ನನ್ಯನದೇನ

ಸೂರಿದನುಟ್ಯದ ಮುನ್ನ ಸ್ವಾಮಯ್ನನದೇವ
ಸಾವಿರದಾವೀನ ಮೈಗಾದ
ಸಾವಿರದಾವೀನ ಮೈಗಾದ ಎತ್ತಯ್ಯಾನ
ಸೂರಿದನುಟ್ಟದ ಮುನ್ನ ನ್ಯನದೇವ

ಅತ್ತು ತಿಂಗಳುನೂತ ಮತ್ತೆ ತಿಂಗಳುನೆಯ್ದು
ಅತ್ತಿ ಬರಣ್ಯಾಗ ಮಡುಗ್ಯಾರು
ಅತ್ತಿ ಬರಣ್ಯಾಗ ಮಡುಗ್ಯಾರು ಮಡಗಿದ ಜ್ಯಾಡಿ
ಸೆಟ್ಟ್ಯೊರಿದ್ದಲ್ಲಿ ಬರಲುಬೇಕು

ಆರು ತಿಂಗಳು ನೂತು ಮೂರುತಿಂಗಳು ನೇಯ್ದು
ಆಲಾದ ಬರಣ್ಯಾಗ ಮಡುಗ್ಯಾರು
ಆಲಾದ ಬರಣ್ಯಾಗ ಮಡುಗ್ಯಾರು ಕರಿಯಜ್ಯಾಡಿ
ರಾಯರಿದ್ದಲ್ಲಿ ನಡೆದಾವೆ

ಅತ್ತು ಕರಿಯ ಜ್ಯಾಡಿ ಅತ್ತು ಬಿಳಿಯ ಜ್ಯಾಡಿ
ಮತ್ತೊಂದು ಜ್ಯಾಡಿರತುನಾವೆ
ಮತ್ತೊಂದು ಜ್ಯಾಡಿರತುನಾವೆ ಕರಿಯಜ್ಯಾಡಿ
ಸೆಟ್ಟರಿದ್ದಲ್ಲಿ ಬರಬೇಕು

ಆರು ಕರಿಯ ಜ್ಯಾಡಿ ಆರು ಬಿಳಿಯ ಜ್ಯಾಡಿ
ಮ್ಯಾಲೊಂದು ಜ್ಯಾತಿರತುನಾವೆ
ಮ್ಯಾಲೊಂದು ಜ್ಯಾತಿರತುನಾವೆ ಕರಿಯ ಜ್ಯಾಡಿ
ರಾಯರಿದ್ದಲ್ಲಿ ಬರಬೇಕು

ಅತ್ತು ಸಾವಿರ ಜ್ಯಾಡಿ ಎತ್ತಗೇರಿಕಂಡು
ವೊತ್ತಿಲಿ ಸಂದಗಾನಿ ಕರಕಂಡು
ವೊತ್ತಿಲಿ ಸಂದಗಾನಿ ಕರಕಂಡು ಬುಳ್ಳಪ್ಪ
ಅಟ್ಟಿಗಾಸ್ಯಾನೆ ಕರಿಯ ಜ್ಯಾಡಿ

ಆರುಸಾವಿರ ಜ್ಯಾಡಿ ವೋರಿಗೇರಿಕಂಡು
ವಾರಿಲಿ ಸಂದಗಾನಿ ಕರಕಂಡು
ವಾರಿಲಿ ಸಂದಗಾನಿ ಕರಕಂಡು ಬುಳ್ಳಪ್ಪ
ವೋಣ್ಯಾಗಾಸ್ಯಾನೆ ಕರಿಯಜ್ಯಾಡಿ

ಕೋಲು ಇಡಿದೈದಾನೆ ಸ್ಯಾಲುವೊದೈದಾನೆ
ಬಾಮೈದ್ನ ಬೆರಳ ಇಡಕಂಡು
ಬಾಮೈದ್ನ ಬೆರಳ ಇಡಕಂಡು ಸಂದಾಗನಿ
ಬಾಲಮದ್ದುಗೆಗೆ ನಡೆದಾನೆ

ಒಂಟಿಯಿಟ್ಟೈದಾನೆ ಕಂಠಿಸರವಾಕೈದಾನೆ
ನೆಂಟಾನ ಬೆರಳ ಇಡಕಂಡು
ನೆಂಟಾನ ಬೆರಳ ಇಡಕಂಡು ಮಾರಗಾನಿ
ಬಂಟಗದ್ದಿಗ್ಗೆ ನಡೆದಾನೆ

ಜ್ಯಾಡಿ ಪೂಜ್ಯಾದಾವು ಜ್ಯಾಣಾನ ಬರಏಳಿ
ನೀಲದುಂಗುರದ ಗೌಡಾನ
ನೀಲದುಂಗುರದ ಗೌಡಾನ ಗೆಲಿಸಣ್ಣನ
ಜ್ಯಾಡಿಪೂಜ್ಯಾದಾವು ಬರಏಳೆ

ಗದ್ದಿಗೆ ಪೂಜ್ಯಾದಾವು ಗೌಡಾನ ಬರಏಳಿ
ಮುದ್ದಿನುಂಗುರದ ಚೆಲುವಾನ
ಮುದ್ದಿನುಂಗುರದ ಚೆಲುವಾನ ಕ್ಯಾತಣ್ಣನ
ಗದ್ದಿಗೆ ಪುಜ್ಯಾದಾವು ಗೌಡನ ಬರಏಳಿ

ಎಣ್ಣಿಗೆ ತಕ್ಕಂತ ಬಣ್ಣ ತಂದೈದೀವಿ
ಎಣ್ಣಿನೋರಣ್ಣ ಇವನೋಡ
ಎಣ್ಣಿನೋರಣ್ಣ ಇವನೋಡ ಅಂದಾರು
ಅಮ್ಮಣ್ಣೀಗೆ ಬಣ್ಣ ತರವಲ್ಲ

ತರವಲ್ಲದ ಬಣ್ಣತರುವೋರು ನಾವಲ್ಲ
ದರಣಿ ಪಟ್ಟಣದ ಜನಗಾಳು
ದರಣಿ ಪಟ್ಟಣದ ಜನಗಾಳು ದೊರೆಗಳು ಜ್ಯಾಣ
ನೇಯ್ದು ಸೆರಗೇನಾಗೈತೆ ಜಗಬಿರುದು

ಕೊನೆಗೆ ತಕ್ಕಂತ ರೇಸಿಮೆ ತಂದೈದೀವಿ
ಕೂಸಿನೋರಣ್ಣ ಇವನೋಡ
ಕೂಸಿನೋರಣ್ಣ ಇವನೋಡ ಅಂದಾರೆ
ಕೂಸಿಗೀರೇಸಿಮೆ ತರವಲ್ಲ

ತರವಲ್ಲದ ಬಣ್ಣ ತರುವೋರು ನಾವಲ್ಲ
ದರಣಿಪಟ್ಟಣದ ದೊರೆಗಾಳು
ದರಣಿಪಟ್ಟಣದ ದೊರೆಗಾಳು ಜ್ಯಾಣನೇಯ್ದ
ಸೆರಗೀನಾಗೈತೆ ಜಗಬಿರುದು

ಮಣಕಾಲುಮುರುವೀನಾಗ ದನಿಕರಂಗಡ್ಯಾಗ
ಗೆಣೆಕಾರರು ಕುರಿತು ಬೆಲೆಮಾಡಿ
ಗೆಣೆಕಾರರು ಕುರಿತು ಬೆಲೆಮಾಡಿ ತಂದಂತ
ರವಿಕೆ ಸೀರೇನೀವೆಸ್ಟು ಜರೆದೀರಿ

ರಾಯದುರ್ಗದ ರಾಯರಂಗಡಿಯಾಗ
ರಾಯರುಕುಂತು ಬೆಲೆಮಾಡಿ
ರಾಯರುಕುಂತು ಬೆಲೆಮಾಡಿ ಕೊಂಡಂತ
ಸೀರೆ ನೀವೆಂತು ಜರೆದೀರಿ

ಅಪ್ಪ ಇಳಿದೆಬಾರೋ ಅಪ್ಪ ಇಳಿದೆ ಬಾರೋ
ಅಪ್ಪ ಮೈಗದ ಗೌಡ
ಅಪ್ಪ ಮೈಗದ ಗೌಡ ಇಳಿದೆಬಾರೋ
ಅಪ್ಪಗಳ ಪಟ್ಟದರಿಜ್ಯಾಡಿ ನೆಡುವಾಕ

ಅಪ್ಪ ಇಳಿದೆ ಬಾರೋ ಅಣ್ಣ ಇಳಿದೆಬಾರೋ
ಅಣ್ಣ ಈರಣ್ಣ ಇಳಿದೆಬಾರೋ
ಅಣ್ಣ ಈರಣ್ಣ ಇಳಿದೆಬಾರೋ ಅಣ್ಣಗಳ
ಬಣ್ಣದರಿಜ್ಯಾಡಿ ನೆಡುವಾಕ

ಅಟ್ಟೀಯ ಗೌಡಪಟ್ಟದ ಪೂಜಾರಿ
ವೊಕ್ಕಾರೆ ಜ್ಯಾಡಿನೆಡುವಾಕ
ವೊಕ್ಕಾರೆ ಜ್ಯಾಡಿನೆಡುವಾಕ ಗುಡ್ದದೆತ್ತಯ್ನ
ಈಳ್ಯಾವ ತಗುದಾರೆ

ನಾಡಾನೆಗೌಡ ದ್ಯಾವಾರ ಪೂಜಾರಿ
ವೋದಾರೆ ಜ್ಯಾಡಿ ನೆಡುವಾಕೆ
ವೋದಾರೆ ಜ್ಯಾಡಿ ನೆಡುವಾಕೆ ಗುಡ್ಡಾದ
ಮಾಲಿಮಗ ನೀಳ್ಯಾವ ತಗುತಾರೆ

ಅಸುರುಚಿತ್ರಿಕೆ ದೆಸೆವಂತಿರಿಗಿಡಿಸ್ಯಾರೆ
ಅಸುರು ಪರತೋಪಿನ ಜಗಬಿರುದಿನ
ಅಸುರು ಪರತೋಪಿನ ಜಗಬಿರುದಿನ ಚತ್ರಿಕೆ
ದೆಸೆವಂತಗೌಡನಿಗಿಡಿಸ್ಯಾರೆ

ಬಿಳಿಯ ಚತ್ರಿಕೆ ದೊರೆಮಕ್ಕಳಿಗಿಡಿಸ್ಯಾರೆ
ಬಿಳಿಯ ಪರತೋಪಿನ ಜಗಬಿರುದು
ಬಿಳಿಯ ಪರತೋಪಿನ ಜಗಬಿರುದು ಚತ್ರಿಕೆ
ದೊರೆಯ ಗೌಡರಿಗಿಡಿಸ್ಯಾರೆ

ಕೆಂಪು ಚತ್ರಿಕೆ ಸಂಪನ್ನಾಗಿಡಿಸ್ಯಾರೆ
ಕೆಂಪು ಪರತೋಪಿನ ಜಗಬಿರುದು
ಕೆಂಪು ಪರತೋಪಿನ ಜಗಬಿರುದು ಚತ್ರಿಕೆ
ಸಂಪನ್ನ ಗೌಡರಿಗಿಡಿಸ್ಯಾರೆ

ಒಂದಲ್ಲಿನ ಗೌಡ ಸಂದಲ್ಲಿನ ಪೂಜಾರಿ
ಗುಂಗುರುಗಣ್ಣೋನೇ ದಳವಾಯಿ
ಗುಂಗುರುಗಣ್ಣೋನೇ ದಳವಾಯಿ ಮೂವಾರು
ಬಂದನದೀಳ್ಯಾವ ಇಡಿದಾರೆ

ಕೇಸಲ್ಲಿನ ಗೌಡ ಪಾಸಲ್ಲಿನ ಪೂಜಾರಿ
ಗೂಸರುಗಣ್ಣಿನ ದಳವಾಯಿ
ಗೂಸರುಗಣ್ಣಿನ ದಳವಾಯಿ ಮೂವಾರು
ಗೋಪ್ರದೀಳ್ಯವ ಇಡಿದಾರೆ

ರಾಯ ಓಬೇನಳ್ಳಿ ಗಾರೆಚಾವುಡ್ಯಾಗೆ
ನೀವ್ಯಾರಿದ್ದೀರಿ ತೌರವರು
ನೀವ್ಯಾರಿದ್ದೀರಿ ತೌರವರು ನನ್ನಣ್ಣಗಳು
ಕಾಯೊಪ್ಪಗಳೆ ನಮಗೆ ಬರಲಿಲ್ಲ

ಚಿಕ್ಕೋಬೆನಳ್ಳಿ ಗಾರೆ ಗಚ್ಚಿನಾಗ
ಮತ್ಯಾರಿದ್ದೀರಿ ತೌರವರು
ಮತ್ಯಾರಿದ್ದೀರಿ ತೌರವರು ನನ್ನಣ್ಣಗಳು
ಉತ್ತುತ್ತಿ ನಮಗೆ ಬರಲಿಲ್ಲ

 

ಬಾಗಿನ ಕೊಡುವುದು

ಮುತ್ತಿನ ಗದ್ದಿಗೆಮ್ಯಾಲೆ ಮುಕ್ಕಣ್ಣ ಮೂರುತವಾದ
ಮುಕ್ಕಣ್ಣನೆ ಸಿವನೆ ಸಿರಿಗೌರಿ
ಮುಕ್ಕಣ್ಣನೆ ಸಿವನೆ ಸಿರಿಗೌರಿ ವರ್ಣಾಕ
ಮುತ್ತೈರೇರಕ್ಕಿ ತೊಳೆದಾರೆ

ವೂವೀನಗದ್ದುಗೆ ಮ್ಯಾಲೆ ರೇವಣ್ಣ ಮೂರುತವಾದ
ರೇವಣ್ಣ ಸಿವನೆ ಸಿರಿಗೌರಿ
ರೇವಣ್ಣ ಸಿವನೆ ಸಿರಿಗೌರಿ ವರ್ಣಾಕ
ನಾರೇರಕ್ಕಿ ತೊಳೆದಾರೆ

ಚಪ್ಪರದ ಸುತ್ತಮುತ್ತ ಬಟ್ಟ ಮುತ್ತು ಚೆಲ್ಲಿದಂಗೆ
ಸೆಟ್ಟರೆಡಗಡಿಗೆ ಸತಿಯೋಳು
ಸೆಟ್ಟರೆಡಗಡಿಗೆ ಸತಿಯೋಳು ಕುಂತೈದಾಳೆ
ಬಟ್ಟಮುತ್ತಿನ ರಾಸಿವೊಯ್ದಂಗೆ

ಅಂದರದ ಸುತ್ತಮುತ್ತ ದುಂಡು ಮುತ್ತು ಚೆಲ್ಲಿದಂಗೆ
ಗಂಡನೆಡಗಡೆಗೆ ಸತಿಯೋಳು
ಗಂಡನೆಡಗಡೆಗೆ ಸತಿಯೋಳು ಕುಂತೈದಾಳೆ
ದುಂಡುಮುತ್ತಿನ ರಾಸಿವೊಯ್ದಂಗೆ

ಅಸ್ತ ಕಡದನಾರಿ ಅತ್ಯಾಳಸೆಯ ಜಗುಲಿ
ಕಸ್ತೂರಿರಾಜುಣಕ ತಲೆಬಾಗಿ
ಕಸ್ತೂರಿರಾಜುಣಕ ತಲೆಬಾಗಿ ಗಂಟನಂಬ
ವಪ್ಪಕಿಟ್ಟವಳೆ ಕೊನೆ ಮಸುಗು

ಅತ್ತೆ ಮಗಳಲ್ಲೆ ಅತ್ತರಲ್ಲೆ ತಾವಲ್ಲೆ
ವೊಕ್ಕಳೂವು ಮುಡಿದಲ್ಲೆ
ವೊಕ್ಕಳೂವು ಮುಡಿದಲ್ಲೆ ಅತ್ತೆಮಗಳೆ
ಅತ್ತತ್ತವೋಗೆ ಸೆಕೆಬಾಳ

ಮಾವಾನ ಮಗಳಲ್ಲೆ ಸ್ವಾದರಿಕೆ ತಾವಲ್ಲೆ
ನಾಗಳೂವ ಮುಡಿದಲ್ಲೆ ಮಾವನ
ನಾಗಳೂವ ಮುಡಿದಲ್ಲೆ ಮಾವನ ಮಗಳೆ
ದೂರೆತ್ತಿವೋಗೆ ಸೆಕೆಬಾಳ

ಸಕ್ಕರೆ ಮಾವಿನಹಣ್ಣು ಸಿಕ್ಕಿ ತನುವುಗೊಂಡು
ಅತ್ತರಲಿದ್ದೋರಿಗೆ ಅಪರೂಪ
ಅತ್ತರಲಿದ್ದೋರಿಗೆ ಅಪರೂಪ ಅತ್ತೆಮಗಳು
ಸಿಕ್ಕಿದಳು ಸಿವನ ಕೃಪೆಯಿಂದ

ಜೀರೀಗೆ ಮಾವೀನಣ್ಣು ಸೆರೀತು ನಮಗಂದು
ದೂರಲಿದ್ದವರಿಗೆ ಅಪರೂಪ
ದೂರಲಿದ್ದವರಿಗೆ ಅಪರೂಪ ಮಾವನ ಮಗಳು
ಸಿಕ್ಕಿದಳು ಸಿವನ ಕೃಪೆಯಿಂದ

ಅತ್ತೆ ಮನಿಯಾಗೆ ಅತ್ತೊನ್ನಿನವುಮ್ಯಾಲೆ
ಅತ್ತಿ ಆಡೋಳು ಯಾರ ಮಗಳಯ್ಯ
ಅತ್ತಿ ಆಡೋಳು ಯಾರ ಮಗಳಯ್ಯ ರಾಜಣ್ಣ
ಅತ್ತರಲಿದ್ದೋರ್ನ ಬೆಸಗೊಂಡ

ಅತ್ತರಲಿದ್ದೋರ್ನ ಬೆಸಗೊಂಡು ಕೇಳ್ಯಾನೆ
ಅತ್ತೆಮಗಳಲ್ಲದೆ ಪರವಿಲ್ಲ

ಮಾವನ ಮನಿಯಾಗೆ ಆರೊನ್ನಿನವು ಮ್ಯಾಲೆ
ಏರಿ ಆಡ್ಯಾಳ್ಯಾರ ಮಗಳಯ್ಯ
ಏರಿ ಆಡ್ಯಾಳ್ಯಾರ ಮಗಳಯ್ಯ ರಾಜಣ್ಣ
ವಾರಿಲಿದ್ದೋರ್ನ ಬೆಸಗೊಂಡ

ಊರಿಲಿದ್ದೋರ್ನ ಬೆಸಗೊಂಡು ಕೇಳ್ಯಾನೆ
ಮಾವನ ಮಗಳಲ್ಲದೆ ಪರವಿಲ್ಲ

ಅತ್ಲಿಂದ ಇತ್ಲಿಂದ ಲಚ್ಯಾಣದರಪುರದಿಂದ
ಅತ್ತಜೀ ಎಂಬವನದಿಂದ
ಅತ್ತಜೀ ಎಂಬವನದಿಂದ ನಾಬಂದೆ
ಅತ್ತೀಯ ಮಗಳೇ ಮಕತೋರೆ

ಅತ್ತೀಯ ಮಗಳೇ ಮಕತೋರೆ ನಾನಿನ್ನ
ಬೆಟ್ಟುಗುರುಕಂಡೆ ಮೊಕಕಾಣೇ

ಅಲ್ಲಿಂದ ಇಲ್ಲಿಂದ ಕಲ್ಯಾಣಪುರದಿಂದ
ಅಲ್ಲಜೀವನದಿಂದ ನಾಬಂದೆ
ಅಲ್ಲಜೀವನದಿಂದ ನಾಬಂದೆ ಮಾವನಮಗಳೆ
ಬೆಟ್ಟುಗುರು ಕಂಡೆ ಮುಕತೋರೆ

ಬೆಟ್ಟಗುರು ಕಂಡು ಮುಕತೋರಂದ ರಾಜಣ್ಣ
ಕಾಲುಗುರ ಕಂಡು ಮೊಕ ಕಾಣಾ

ಕುಂಬದಾಗ ಕೈಯ್ಯಿಟ್ಟು ರೆಂಬೇನು ತಗುದಾಳೆ
ಎಂಬತ್ತೊರುಸಾದ ಪುರುಸಾರ
ಎಂಬತ್ತೊರುಸಾದ ಪುರುಸಾರ ಆಯುಸ್ಸುಬೇಡಿ
ರೆಂಬೆ ಬಾಗುಣವ ಕೊಡುತಾಳೇ

ಕೀಲಿನಾಕೆ ಕೈಯ್ಯಿಟ್ಟು ನಾರೇನು ತಗುದಾಳೆ
ನಲವತ್ತು ವರುಸಾದ ಪುರುಸಾರ
ನಲವತ್ತು ವರುಸಾದ ಪುರುಸಾರ ಆಯುಸ್ಸುಬೇಡಿ
ನಾರಿ ಬಾಗುಣದ ಕೊಡುತಾಳೆ

ಮಿಂಚಿನ ಕಾಲ ಸಂಪತ್ತಿಡುವೂತ
ಸಂಪಿಗೆ ತೊಡರಬಿಡಿಸೂತ
ಸಂಪಿಗೆ ತೊಡರಬಿಡಿಸೂತ ರಾಜಣ್ಣಾನ
ಕೆಂಚೆ ಬಾಗುಣವ ಕೊಡುತಾಳೆ

ಕಂಬದಾಗ ಕೈಯಿಟ್ಟು ರೆಂಬೇನು ತಗುದಾಳೆ
ಎಂಬತ್ತೊರುಸಾದ ಪುರುಸಾರ
ಎಂಬತ್ತೊರುಸಾದ ಪುರುಸಾರ ಆಯಸ್ಸಬೇಡಿ
ರೆಂಬೆ ಬಾಗುಣವ ಕೊಡುತಾಳೇ

ನಿಂಬೇ ಅಣ್ಣುಗಳು ನಿಂಬೀಯ ಕಾಯಿಗಳು
ನಿಂಬೆವನದಾಗಳ ಗಿಳಿಗಾಳು
ನಿಂಬೆವನದಾಗಳ ಗಿಳಿಗಾಳು ವೋಗನುಬನ್ನಿ
ರೆಂಬೆ ಬಾಗುಣವ ಕೊಡುತಾಳೆ

ಬಾಳೇಯಅಣ್ಣುಗಳು ಬಾಳಿಯ ಕಾಯಿಗಳು
ಬಾಳೇಯವನದಾಗಳ ಗಿಳಿಗಾಳು
ಬಾಳೇಯವನದಾಗಳ ಗಿಳಿಗಾಳು ವೋಗನುಬನ್ನಿ
ನಾರಿಬಾಗುಣವ ಕೊಡುತಾಳೆ

ವಲ್ಲೀಯ ಕಾಲ ಮೆಲ್ಲಾಕ ಇಡುವೂತ
ಮಲ್ಲಿಗೆ ತೊಡರಬಿಡಿಸೂತ
ಮಲ್ಲಿಗೆ ತೊಡರಬಿಡಿಸೂತ ರಾಜಣ್ಣಾನ
ನಲ್ಲೆಬಾಗುಣವ ಕೊಡುತಾಳೆ

ಕುಂಬದಾಗ ಕೈಯಿಟ್ಟು ಗಂಡನ ನೋಡ ಎಣ್ಣೆ
ಮುಂದಲ ಚಿತ್ತಾರ ಇವನೋಡೆ
ಮುಂದಲ ಚಿತ್ತಾರ ಇವನೋಡೆ ವೊನ್ನಬಂಡೆ
ಲಿಂಗನ ಗುಡಿಗಾಳ ಕಮಲಾವ

ಕೀಲ್ಯಾಕ ಕೈಯಿಟ್ಟು ರಾಯರ ನೋಡೆ ಎಣ್ಣೆ
ಮುಖಗಳ ಚಿತ್ತಾರ ಇವನೋಡೆ
ಮುಖಗಳ ಚಿತ್ತಾರ ಇವನೋಡೆ ಬಂಜೆಗೆರೆಯ
ಈರಾನ ಗುಡಿಯ ಕಮಲಾವ