ಅಂಗಿಕಸೆ ಒಡಿನೋವು

ಸೆಟ್ಟೋರ ಮಗ ತೊಟ್ಟಿರುವೋವು
ಇಪ್ಪತ್ರಾಸಿನಂಗಿ ಸೆಟ್ಟೋರ ಮಗಳೆ
ಇಪ್ಪತ್ರಾಸಿನಂಗಿ ಸೆಟ್ಟೋರ ಮಗಳೆ ಇವಬಿಚ್ಚೆ
ಬಿಚ್ಚದಿದ್ದಾರೆ ನಮ್ಮಕ್ಕಂತಗೀರ್ನ ಬೆಸಗೊಳ್ಳೆ

ರಾಯರಮಗ ತೊಟ್ಟಿರುವೋದು ನಲವತ್ರಾಸಿನಂಗಿ
ಜಾಣಾರಮಗಳೆ ಇವಬಿಚ್ಚೆ
ಜಾಣಾರಮಗಳೆ ಇವಬಿಚ್ಚೆ ಬಿಚ್ಚದಿದ್ದಾರೆ
ನಿಮ್ಮ ತಾಯಿ ತಂಗೇರ್ನ ಬೆಸಗೊಳ್ಳೆ

ಮನ್ನೇರ ಮಗ ತೊಟ್ಟಿರುವೋದು ಅನ್ನೆರಡು ತಾಸಿನಂಗಿ
ಮನ್ನೇರ ಮಗಳೇ ಇವ ಬಿಚ್ಚಿ
ಮನ್ನೇರ ಮಗಳೇ ಇವ ಬಿಚ್ಚಿ ಬಿಚ್ಚದಿದ್ದಾರೆ
ನಿಮ್ಮಣ್ಣ ತಮ್ಮಗಳ ಬೆಸಗೊಳ್ಳೆ

ರೆಂಬೆ ರತ್ನಮ್ಮ ಗಂಡನ ತೋಟಿಯ ಮ್ಯಾಲೆ
ದುಂಡಂಗಿ ಕಸೆಯ ಒಡಸೂತ
ದುಂಡಂಗಿ ಕಸೆಯ ಒಡಸೂತ ಕಂಡಾಳೆ
ಗಂಡನ ಕಡೆಯಾಗಳ ಬಳಗಾವ

ನಾರಿರತ್ನಮ್ಮ ರಾಯರ ತೊಡಿಯಾ ಮ್ಯಾಲೆ
ಜ್ಯೋಡಾಗಿ ಕಸೆಯಾ ವಡಸೂತ
ಜ್ಯೋಡಾಗಿ ಕಸೆಯಾ ವಡಸೂತ ಕಂಡಾಳೇ
ರಾಯರ ಕಡೆಯಾ ಬಳಗಾವ

 

ಪಾದಪೂಜೆ ಮಾಡುವುದು

ನಾರಿರತ್ನಮ್ಮ ಪಾದ ಪೂಜೆ ಮಾಡಿ
ಮ್ಯಾಲೊಂದೈನಾಕೆ ಎಣಿಗ್ಯಾಳೇ
ಮ್ಯಾಲೊಂದೈನಾಕೆ ಎಣಿಗ್ಯಾಳೇ ರಾಯರುನೀವು
ತಾಯಮ್ನ ಮ್ಯಾಲೆ ಬೈಬ್ಯಾಡ

ನಿಮ್ಮ ತಾಯಮ್ನ ನಾವ್ಯಾಕೆ ಬೈಯ್ಯಾನೆ
ನಮ್ಮಮ್ಮಗಂಜಿ ನಮಗಂಜಿ
ನಮ್ಮಮ್ಮಗಂಜಿ ನಮಗಂಜಿ ನಡೆದಾರೆ
ನಾವಾಳೋರಾಜ್ಯ ನಿಮದಂದ

ನಿಸ್ತ್ರೆ ರತ್ನಮ್ಮ ಬೆಟ್ಟುಪೂಜೆ ಮಾಡಿ
ಮತ್ತೊಂದೈನಾಕೆ ಎಣಿಗ್ಯಾಳೇ
ಮತ್ತೊಂದೈನಾಕೆ ಎಣಿಗ್ಯಾಳೇ ರಾಯರುನೇವು
ನೀವು ಎತ್ತಮ್ನ ಮಾತ್ರ ಬೈಬ್ಯಾಡ

ನಿಮ್ಮ ಎತ್ತಮ್ನ ನಾವ್ಯಾಕೆ ಬೈಯ್ಯಾನೆ
ನಿಮ್ಮಪ್ಪಗಂಜಿ ನಮ್ಮಪ್ಪಗಂಜಿ
ನಿಮ್ಮಪ್ಪಗಂಜಿ ನಮ್ಮಪ್ಪಗಂಜಿ ನಡೆದಾರೆ
ನಾವತ್ತುವಂದಲ ನಿಮದಂದ

ರೆಂಬೆರತ್ನಮ್ಮ ಗಂಡನಪೂಜೆ ಮಾಡಿ
ಗಂದಾವ ತನ್ನಿ ಸುಬದಿಂದ
ಗಂದಾವ ತನ್ನಿ ಸುಬದಿಂದ ಪಾದದಪೂಜೆ
ರೆಂಬೆ ರತ್ನಮ್ಮ ಗೈದಾಳೆ

ನಿಸ್ತ್ರೆ ರತ್ನಮ್ಮ ಪೂಜೆ ಮಾಡಿ
ಅಕ್ಕಸ್ತೆ ತನ್ನಿರಿ ಸುಬದಿಂದ
ಅಕ್ಕಸ್ತೆ ತನ್ನಿರಿ ಸುಬದಿಂದ ಪಾದದಪೂಜೆ
ನಿಸ್ತ್ರೆ ರತ್ನಮ್ಮ ಗೈದಾಳೆ

 

ಮೂರನೇ ಆಸೆ

ವಳಗಾಳ ಮನೆಯಾಗ ಇರುವೋಳ ಕರೆತಾರೋ
ವಡವೆಬಂಗಾರದ ಚೆಲುವೀಯ
ವಡವೆಬಂಗಾರದ ಚೆಲುವೀಯ ಮಾವನ ಮಗಳ
ಎಡಗೈಯ್ಯ ಇಡಿದೇ ಕರೆತಾರೋ

ಎಡಗೈಯ್ಯ ಇಡಿದಾರೆ ಗಡಗಡನೆ ನೆಡುಗ್ಯಾಳೆ
ಕೊಡದ ನೀರಾಗಿ ಬೆವತಾಳೆ
ಕೊಡದ ನೀರಾಗಿ ಬೆವತಾಳೆ ನಾನಿನ್ನ
ಅಡೆದಂತೆ ತೌರಮರಸೇನು

ಮುಂದಾಲ ಮನೆಯಾಗ ರೆಂಬೆಯವಳ ಕರೆತನ್ನಿರಿ
ಬೆಳ್ಳಿಬಂಗಾರದ ಚೆಲುವೀಯ
ಬೆಳ್ಳಿಬಂಗಾರದ ಚೆಲುವೀಯ ಬಂದಿಬಂಗಾರದ
ಚೆಲುವೀಯ ಮುಂಗೈ ಇಡಿದು ಕರತನ್ನಿ

ಮುಂಗೈ ಇಡಿದಾರೆ ಅಂಜ್ಯಾಳು ಅಳುಕ್ಯಾಳು
ಬಿಂದೀಗೆ ನೀರಾಗಿ ಬೆವತಾಳು
ಬಿಂದೀಗೆ ನೀರಾಗಿ ಬೆವತಾಳು ಮಂಚಾದ
ಇಂಬೋ ಪೇರುಸೋ ದನುರಾಯ

ಇಂಬುಸೇರಿಸಿ ಮುಂಗೈಮ್ಯಾಲೆ ಕುಂಡರಿಸಿ
ಅಂಜದಿರುನನ್ನ ಸತಿಯೋಳೆ
ಅಂಜದಿರುನನ್ನ ಸತಿಯೋಳೆ ನಾನಿನ್ನ
ಇಂಗಿದಂತ ತೌರ ಮರಸೇನು

ಸೆಟ್ಟಿರಾಜಣ್ಣನ ಅತ್ತಿರ ಕುಂತಿರುವೋಳೆ
ಕಪ್ಪಿನ ಮುರಿಯಾಗ ವಳಮಾತು
ಕಪ್ಪಿನ ಮುರಿಯಾಗ ವಳಮಾತು ವಜ್ರದೇವ
ಕಪ್ಪ ನೀನೆರವ ತರಬೌದೆ

ಎರವಲ್ಲ ಕಾಣೆ ಗುರುವಿನ ಪಾದದಾಣೆ
ಇರಿಯರ ಕಾಲದ ಅಳೆಚಿನ್ನ
ಇರಿಯರ ಕಾಲದ ಅಳೆಚಿನ್ನ ಬಿಳಿಚಿನ್ನ
ಮುರಿಯಲೊತ್ತಿಸಿದೆ ನಿನಗಾಗಿ

ಜ್ಯಾಣ ರಾಜಣ್ಣಾನ ವಾರೀಲಿ ಕುಂತಿರುವೋಳೆ
ವಾಲೆ ಮುರಿಯಾಗ ವಳಮಾತು
ವಾಲೆ ಮುರಿಯಾಗ ವಳಮಾತು ವಜ್ರದೇವ
ವಾಲೇಯನೀ ನೆರವ ತರಬೌದೆ

ಎರವಲ್ಲ ಕಾಣೆ ಗುರುವಿನ ಪಾದದಾಣೆ
ಇರಿಯಕಾಲದ ಅಳೆಚಿನ್ನ
ಇರಿಯಕಾಲದ ಅಳೆಚಿನ್ನ ಬಿಳಿಚಿನ್ನ
ಮುರಿಯಲೊತ್ತಿಸಿದೆ ನಿನಗಾಗಿ

ಚಿತ್ತಾರದ ಜಗುಲಿ ಅತ್ತೂತ ಇಳಿವೂತ
ಚಿತ್ರದಲುಪ್ಪಿನ ಕಡೆಕಣ್ಣು
ಚಿತ್ರದಲುಪ್ಪಿನ ಕಡೆಕಣ್ಣು ಕಡೆಗಣ್ಣೋಟಾಕ
ತಪ್ಪದಾಕ್ಯಾಳೆ ಪಗಡೀಯ

ತಪ್ಪದಾಕ್ಯಾಳೆ ಪಗಡೀಯ ರಾಯರದೇವ
ತಪ್ಪು ನಿಮದಲ್ಲ ನಮದಲ್ಲ
ರೂವಾರದ ಜಗುಲಿ ಇಳಿವೂತ ಏರೂತ
ಪ್ರಾಣದಲ್ಲುಕನ ಕಡೆಗಣ್ಣು

ಪ್ರಾಣದಲ್ಲುಕನ ಕಡೆಗಣ್ಣು ನೋಟಾಕ
ಜ್ಯಾರಲಾಕ್ಯಾಳೆ ಪಗಡೀಯ

ಸುಣ್ಣಕ ನೆವವಾಗಿ ಕನ್ನೇಯ ಕರೆಸೀದ
ಸಣ್ಣಮುತ್ತಲ್ಲೆ ನಿಲಲಂದ
ಸಣ್ಣಮುತ್ತಲ್ಲೆ ನಿಲಲಂದ ರಾಜಣ್ಣ
ಕನ್ನೇಗೆ ನಮಗೆ ವರನೆಂದ

ಮಾತೀಗೇ ನೆವವಾಗಿ ಕಾತೇಯಕರೆಸೀದ
ಜ್ಯಾತಿಮುತ್ತಲ್ಲೆ ನಿಲಲಂದ
ಜ್ಯಾತಿಮುತ್ತಲ್ಲೆ ನಿಲಲಂದ ರಾಜಣ್ಣ
ಕಾತೇಗೆ ನಮಗೆ ವರನಂದ

ನೀರೀಗೆ ನ್ಯವನಾಗಿ ನಾರೀಯ ಕರೆಸೀದ
ಮನೆಮುತ್ತಲ್ಲಿ ನಿಲಲಂದ
ಮನೆಮುತ್ತಲ್ಲಿ ನಿಲಲಂದ ರಾಜಣ್ಣ
ನಾರೀಗೆ ನನಗೆ ವರನಂದ

ವೊನ್ನೂರಿಗೋಗಿ ಸಣ್ಣ ಸರವತಂದು
ಗಮ್ಮನಾಕ್ಯಾರೆ ಕೊರಳೀಗೆ
ಗಮ್ಮನಾಕ್ಯಾರೆ ಕೊರಳೀಗೆ ಅವರಿಬ್ಬರಿಗೆ
ಗಮ್ಮನೆ ಕೂಡ್ಯಾವೆ ಎಳಿಪ್ರಾಯ

 

ತೊಟ್ಟಿಲು ತೂಗುವ ಪದ

ಬ್ಯಾನೀಗಳೆದ್ದು ಕ್ವಾಣೀಗಳುವೂತ
ಜ್ಯಾಣೆಜ್ಯಾಣೆಯರೆಲ್ಲ ಕೈಯ್ವೊಯ್ದುನಗುತ
ಮುತ್ತಿನಿಂತ ಕೂಸು ಮುಂದಕ್ಕ ಬಿದ್ದು

ಜೇನುತುಪ್ಪದಲಿ ಜ್ಯೋತಿ ತಂದಿಟ್ಟು
ಉಕ್ಕೀನಕುಡುಗೋಲಲಿ ಉರಿಗಳಾಕೊಯ್ದು
ಚಿನ್ನಾದ ಕಿವಿಗೇ ಸುಟಿಗೀಯನಾಕಿ
ತಲೆಗೇ ಒಪ್ಪುವ ತಲೆಮಟ್ಟಿಕಟ್ಟಿ

ನಡುವೀಗೆ ಒಪ್ಪಂತ ನಡುಕಟ್ಟಿ ಹಾಕಿ
ಕಿವಿಗೇನೆ ತಕ್ಕಂತ ಬೆಳ್ಳುಳ್ಳಿ ಇಟು
ಕಣ್ಣಿಗೆ ತಕ್ಕಂತ ಕಾಡೀಗೆ ಇಟ್ಟು
ಬಾಯೀಗೆ ಒಪ್ಪವಂತ ಬಿಳಿಯೆಲೆಮೆದ್ದು

ಕಾಲೀಗೆ ತಕ್ಕಂತ ಆವೀಗೆ ಮೆಟ್ಟಿ
ಬಿದುರಿನ ಮರದಲ್ಲಿ ಮಲುಗೀಸಿ
ಬಡಿಗೇರರಮನೆಗೆ ನಡೆದಾಳೆಗೋಪಿ

ಎಂದು ಬರದ ಗೋಪಮ್ಮ ಇಂದ್ಯಾಕೆ ಬಂದೆ
ಕುಂಡಾರಗೊಳ್ಳಿರಿಮಣೆಮ್ಯಾಲೆ

ಇಂದು ನಿಮ್ಮ ಮನೆಗೆ ಕುಂಡ್ರಾಕೆ ಬರಲಿಲ್ಲ
ಕಂದಮ್ಮ ಮಲಗೂವ ಅಲಗೆ ತೊಟ್ಟಿಲ
ಮಾಡಿಕೊಡು ಬಾಯಿತುಂಬ ವೊನ್ನುವೊಯ್ದೇನು

ಆಲು ಅನ್ನಾವ ಉಂಡಾನೆ ಬಡಗಿ ಗೀರುಗಂದ ಇಟ್ಟಾನೆ ಬಡಗಿ
ಸ್ವಾಮಿ ಸೆಂಕರನೆಂಬೋಉಳಿಬಳಸಿ ಪಿಡಿದು
ಜೀಯೆಂಬ ಮೆಳಗೆ ವೊಕ್ಕಾನೆ ಬಡಗಿ

ಕಲ್ಲುಮುಟ್ಟದ ಮರವ ಕಡಿದಾನೆ ಬಡಗಿ
ಆವಾರಾವರ ಅನ್ನೆರಡಲಗೆ
ಅದಕೇನೆ ಕಟ್ಟೂವ ಕೀಲುಗಳ ಬಡಿದು
ಅದಕೇನೆ ಮುತ್ತೀನ ಗುಲುಗಂಜಿ ಸೆಂಡು

ತುಪ್ಪಾ ಬೋನಾವ ಉಂಡಾನೆ ಬಡಗಿ
ಬೊಟ್ಟು ಗಂದಾವ ಇಟ್ಟಾನೆ ಬಡಗಿ
ಸೆಂಬುಸೆಂಕರನೆಂಬ ಉಳಿ ಬಳಸಿಪಿಡಿದು
ಜೀಯೆಂಬ ಮೆಳೆಗೆ ವೊಕ್ಕಾನೆಬಡಗಿ

ಕಲ್ಲುಮುಟ್ಟುದ ಮರವ ಕಡಿದಾನೆ ಬಡಗಿ
ಆವಾರಾವರ ಅನ್ನೆರಡಲಗೆ
ಗಮ್ಮುಸಿಗರಳಿಸಿ ಕೀಲುಗಳ ಜಡಿದು
ಗೋಪಿಯರ ಮನೆಗೆ ವೊತ್ತಾನೆ ಬಡಗಿ

ತೊಟ್ಟಾಲು ತಂದಣ್ಣಾಗೆ ಮತ್ತೇನು ಕೊಡಿರೆ
ಅಚ್ಚೊಂದು ಈಳ್ಯಾವ ಎಚ್ಚಾಗಿ ಕೊಡಿರೆ
ಕಟ್ಟಿದ್ದ ಕರುವೆಮ್ಮ ಕೈಯಲ್ಲಿಡಕೊಡಿರೆ
ಒಪ್ಪೀಯ ಒಪ್ಪೋವಳಸುತಾರೆ

ಒಪ್ಪಾದಿದ್ದಾರೆ ಪಟ್ಟದಾನೆಯ ಕೊಡುವೆ
ಒಪ್ಪೋವತ್ತೀಗೆ ಬೆಳಗಾಯಿತೇನಮ್ಮ

ಅಟ್ಟಾದಮ್ಯಾಗಳ ತೊಟ್ಟಿಲತಗುದು
ತೊಟ್ಟಿಲತೊಡರ ಒಂದೊಂದ ಬಿಡಿಸಿ
ಬೆಚ್ಚನ್ನ ಬಿಸಿನೀರ ತೊಟ್ಟಿಲಿಗಾಕಿ
ಪಟ್ಟಪಟ್ಟಾವಳಿ ತೊಟ್ಟಿಲಿಗಾಸಿ

ಅಚ್ಚಮಲ್ಲಿಗೂವು ಪಕ್ಕೆವಳಗಿಟ್ಟು
ದುಂಡುಮಲ್ಲಿಗೂವು ಮಂಡೆಯೊಳಗಿಟ್ಟು
ತನ್ನ ಕಂದಯ್ಯನ ತೂಗಿ ಜೋ ಜೋ ಎಂದಾಳೂ ಗೋಪೀ

ಮಾಳೀಗೆಯಾಗಳ ಕಾಗುಡಿ ತಗುದು
ಕಾಗುಡಿತೊಡರ ಒಂದೊಂದೆ ಬಿಡಿಸಿ
ಅಚ್ಚಬೆಚ್ಚ ಬೀಸಿನೀರು ಆಕಿ
ಪಟ್ಟ ಪಟ್ಟಾವಳಿ ತೊಟ್ಟುಲಿಗಾಸಿ

ಅಚ್ಚಮಲ್ಲಿಗೆ ವೂವು ಪಕ್ಕವಳಗಿಟ್ಟು
ದುಂಡುಮಲ್ಲಿಗೂವು ವಳಗಿಟ್ಟು
ತನ್ನ ಕಂದಾನ ತೂಗ್ಯಾಳೆ ಜೋ ಜೋ ಎಂದು ಗೋಪಿ

ವೊಕ್ಕು ಬನ್ನೀರೆ ನಮ್ಮ ವೊಕ್ಕಲಿನ ಕೇರಿ
ಕರೆದು ಬನ್ನೀರೆ ನಮ್ಮ ಬಾಗಿನದೋರ
ಅರಳುಮಲ್ಲಿಗೆ ಗೊನೆಮುಡಿದೋರ
ಅರನ ತೊಟ್ಟಿಲ ತೂಗಬಲ್ಲೋರ

ಬಂದಾರವ್ವ ನಮ್ಮ ಬಾಗಿನದೋರು
ನಿಂದಾರವ್ವ ನಮ್ಮ ತಲಿಬಾಗಲಾಗ
ಕಂದಾಗ ತಗುಲ್ಯಾವು ಕಾಲದೂಳುಗಳು
ಚೆಂಬೀಲಿ ವೊಕುಳಿ ತುಂಬೆನಮ್ಮವ್ವ

ಮಲ್ಲಯ್ಯನೆನ್ನೀರಿ ಮಲ್ಲಿಕಾರ್ಜುನನೆನ್ನೀರಿ
ನಲ್ಲೇರ ಬಕ್ತಿಗೊಲಿದೋನೆನ್ನೀರಿ
ಪರ್ವತಮಲ್ಲಯ್ಯನೆಂದು ಕರೆಯಿರಿ ಸಿಸುವ
ಜೋ ಜೋ ಕಂದಯ್ಯ ಜೋ ಜೋ

ಸಿದ್ದಯ್ಯನನ್ನೇ ಸಿದ್ದಕಾದಿನನನ್ನಿ
ಬದ್ರೇರಬಕ್ತಿಗೊಲಿದವನನ್ನಿ
ಉದ್ದಿನ ಸಿದ್ದಯ್ಯನಂದು ಕರಿಯೀರಿಸಿಸುವ

ಈರಯ್ಯನನ್ನಿ ವೀರಕಾಜಿನನನ್ನಿ
ನಾರೇರಭಕ್ತಿ ಗೊಲಿದೋನೆನ್ನಿ
ಮಾರಾಜಿನೀರಣ್ಣನೆಂದು ಕರೆಯಿರಿಸಿಸುವ
ಜೋ ಜೋ ಜೋಕಂದಯ್ಯ ಜೋ ಜೋ

ಅತ್ತುಬೆರಳೀಗೆ ಕೆತ್ತಿಸಿದೊನ್ನುಂಗುರ
ಬೆಟ್ಟು ಸೀಪಿಸೀಪಿ ಅಳುವೋನೆ

ಬೆಟ್ಟು ಸೀಪಿ ಸೀಪಿ ಅಳುವೋನೆ ಕಂದಯ್ಯ
ಅಚ್ಚ ಮುತ್ತೈದೇರು ತೂಗೀರೆ

ಆರು ಬೆರಳೀಗೆ ಆರುಮಾಡಿಸಿದೊನ್ನುಂಗುರ
ತೋಳು ಸೀಪಿ ಸೀಪಿ ಅಳುವೋನೆ
ತೋಳು ಸೀಪಿ ಸೀಪಿ ಅಳುವೋನೆ ಕಂದಯ್ಯನ
ಸೀಲಾವಂತಾರೆದ್ದು ತೂಗೀರೆ

ಅರನಂದು ತೂಗೀರೆ ಸಿವನಂದು ತೂಗೀರೆ
ಅರ ಅರಮೂರ್ತಿಯ ತೂಗೀರೆ
ಅರ ಅರಮೂರ್ತಿಯ ತೂಗೀರೆ ಅಂಪೆ ಇರುಪಾಕ್ಸನ
ಲಿಂಗಾವಂತಾರೆದ್ದು ತೂಗೀರೆ

ನನ್ನಣ್ಣನ ತೂಗೀರೆ ಚೆನ್ನಣ್ಣನ ತೂಗೀರೆ
ಸಣ್ಣ ಬೆನಕಪ್ಪನ ತೂಗೀರೆ
ಸಣ್ಣ ಬೆನಕಪ್ಪನ ತೂಗೀರೆ ಸೆಕ್ಕರೆ ಸೆರಳೀಗೆ
ಪಂಚಕಜ್ಜಾಯ ತಂದಿಕ್ಕಿತೂಗೀರೆ

ಆರನಂದು ತೂಗೀರೆ ಸಿವನಂದು ಪಾಡೀರೆ
ಅರ ಅರಮೂರ್ತಿಯ ತೂಗೀರೆ
ಅರ ಅರಮೂರ್ತಿಯ ತೂಗೀರೆ ವಿರೂಪಾಕ್ಸನ
ಲಿಂಗಾವಂತಾರೆದ್ದು ತೂಗೀರೆ
ಲಿಂಗಾವಂತಾರೆದ್ದು ತೂಗೀರೆ