ಭಾಗ ೨
ಹಾಲಸ್ತದ ನಂತರ ಎರಡನೆಯ ಹಂತ ಒರಳಕ್ಕಿ ಹೊಯ್ಯುವುದು.
ಒರಳಕ್ಕಿ ಹೊಯ್ಯುವ ಸಂದರ್ಭಕ್ಕೆ ಪದ್ಯಗಳು ಹೀಗೆ ಬರುತ್ತವೆ.
ಗುತ್ತೀಯ ಸುಣ್ಣ ಗರುಗಂಜಿ ಕೆಮ್ಮಣ್ಣು
ಎತ್ತಮ್ಮ ಮುಂದಾಗಿ ಬರೆದಾರೆ
ಎತ್ತಮ್ಮ ಮುಂದಾಗಿ ಬರೆದಾರೆ ವೂವಿನತರಳ
ಎತ್ತಮ್ಮ ಮುಂದಾಗಿ ಬರೆದಾಳೆ
ಗ್ವಾವೇಯ ಸುಣ್ಣ ಗುರುಗಂಜಿ ಕೆಮ್ಮಣ್ಣು
ಯಾವ ಮುಂದಾಗಿ ಬರೆದಾಳೆ
ಯಾವ ಮುಂದಾಗಿ ಬರೆದಾಳೆ ವೂವಿನತರಳ
ತಾಯಮ್ಮ ಮುಂದಾಗಿ ಬರೆದಾಳೆ
ಸುಣ್ಣಾವ ತಂದವರೆ ಗ್ವಾಡ್ಯಾಗ ಬಳುದವರೆ
ವೊನ್ನೀನ ಕೀಲ್ಯಾಕ ವೊರಗವೆ
ವೊನ್ನೀನ ಕೀಲ್ಯಾಕ ವೊರಗವೆ ನಮ್ಮನಿಯ
ಕನ್ನೆ ಗೋಮಾರ ಮದುಮಗ
ಗಾಜ್ಯಾಕ ತಂದವರೆ ಗ್ವಾಡ್ಯಾಕ ಬಳುದವರೆ
ದೇವುರ ಕೀಲ್ಯಾಕ ವೊರಗದೆ
ದೇವುರ ಕೀಲ್ಯಾಕ ವೊರಗದೆ ನಮ್ಮನಿಯ
ಬಾಲಗೋಮಾರ ಮದುಮಗ
ಬೂಮಿವುಟ್ಟುಕ ಮುನ್ನ ಬೂಲೋಕ ವುಟ್ಟುಕಮುನ್ನ
ತಾನುಟ್ಟಿದ ಚೆನ್ನಬಸವಯ್ಯ
ತಾನುಟ್ಟಿದ ಚೆನ್ನಬಸವಯ್ಯ ನರಲೋಕಕ
ತಾನೇಳು ದಿನಕ ಇರಿಯೋನು
ಕಲ್ಲುವುಟ್ಟಾಕಮುನ್ನ ಕಲ್ಯಾಣವುಟ್ಟುವ ಮುನ್ನ
ಅಲ್ಲುಟ್ಟಿದ ಚನ್ನಬಸವಯ್ಯ
ಅಲ್ಲುಟ್ಟಿದ ಚನ್ನಬಸವಯ್ಯ ನರಲೋಕಕ
ಅಲ್ಲೇಳು ದಿನಕ ಇರಿಯೋನು
ಅಟ್ಟಕ್ಕೇಣಿಯಾಕಿ ಅಕ್ಕೇನು ತಗುದಾಳೆ
ಅಕ್ಕಿವೊಂಬಾಳೆಗೊನೆಬಾಳೆ
ಅಕ್ಕಿವೊಂಬಾಳೆಗೊನೆಬಾಳೆ ತುಂಬಿಟನುಂಡೆ
ಅಕ್ಕವೊರಳೀಗೆ ತಗುತನ್ನಿ
ವಾವರಿಗೇಣೀನಾಕಿ ತಾಯೇನು ತಗುದಾಳು
ಕಾಯಿವೊಂಬಾಳೆ ಗೊನೆಬಾಳೆ
ಕಾಯಿವೊಂಬಾಳೆ ಗೊನೆಬಾಳೆ ತುಂಬಿಟನುಂಡೆ
ತಾಯಮ್ಮ ವೊರಗೆ ತಗುದಾಳೆ
ಅಣ್ಣ ತಮ್ಮಗಳಿಬ್ಬಾರು ಎಣ್ಣೆವೋಗರುಂಡು
ಚಿನ್ನಾದ ಆರೆ ಎಗಲಾಲಿಟ್ಟು
ಚಿನ್ನಾದ ಆರೆ ಎಗಲಾಲಿಟ್ಟು ತಗುಸ್ಯಾರೆ
ಸಣ್ಣ ರಾಜುಣವುಳ್ಳಿ ಕಣಜಾವ
ಅಪ್ಪಮಕ್ಕಾಳಿಬ್ಬರು ತುಪ್ಪವೋಗರುಂಡು
ಮುತ್ತಿನಾರೆ ಎಗಲಿಟ್ಟು
ಮುತ್ತಿನಾರೆ ಎಗಲಿಟ್ಟು ತಗುಸ್ಯಾರೆ
ಬುಟ್ಟಿ ರಾಜುಣವೆಂದ ಕಣಜಾವ
ಎಂತೋರಿಗ್ವಾಲೆ ಸಂಪತ್ತೀಲಿ ಬರೆದಾರೆ
ಮಿಂಚೀನ ಕಾಲ ಮಗಳೀಗೆ
ಮಿಂಚೀನ ಕಾಲ ಮಗಳೀಗೆ ಅಳಿಯಾಗೆ
ಒಂಟಿಸುಂಗರಿಸಿ ಕಳಿವ್ಯಾರೆ
ಎಲ್ಲರಿಗ್ವಾಲೆ ಮೆಲ್ಲಕ ಬರೆದಾರೆ
ಪಿಲ್ಲೀಯ ಕಾಲ ಮಗಳೀಗೆ
ಪಿಲ್ಲೀಯ ಕಾಲ ಮಗಳೀಗೆ ಅಳಿಯಾಗೆ
ಆನೆಸುಂಗರಿಸಿ ಕಳಿವ್ಯಾರೆ
ಕಂಬಳಿಯಾ ಸೀರೆ ರೆಂಬೇರನ ಕರೆಸೀರೆ
ದುಂಡುಮಲ್ಲಿಗೆ ಅರಡೀರಿ
ದುಂಡುಮಲ್ಲಿಗೆ ಅರಡೀರಿ ನಮ್ಮನಿಯ
ಕಂದಗೋಮಾರ ಮದುಮಗ
ಜಾಡೀಯ ಆಸೀರಿ ಜ್ಯಾಣೇರ ಕರೆಸೀರಿ
ಜ್ಯಾಜಿಮಲ್ಲಿಗೆ ಅರಡೀರಿ
ಜ್ಯಾಜಿಮಲ್ಲಿಗೆ ಅರಡೀರಿ ಅರಡೀರಿ
ನಮ್ಮನಿಯ ಬಾಲಗೋಮಾರನ ಮದುಮಗ
ಕುಂದಿಲಿಕೇನಿಟ್ಟು ತುಂಬ ಬತ್ತವನೊಯ್ದು
ಕೆಂಜೆಡೆಯಪ್ಪಾನ ನ್ಯನೆದಾರೆ
ಕೆಂಜೆಡೆಯಪ್ಪಾನ ನ್ಯನೆದಾರೆ ಆಬತ್ತ
ವೊಂಬಣ್ಣವನೇರಿ ಬರುತಾವೆ
ಅಟ್ಟಿ ಕಲ್ಲಳ್ಳೀಗೆ ಬಟ್ಟು ಗಂದವನಿಟ್ಟು
ವೊಕ್ಕುಳದ ದೂಪ ನಿದಿವೊಯ್ದು
ವೊಕ್ಕುಳದ ದೂಪ ನಿದಿವೊಯ್ದು ಆಚೆಕೇರಿ
ಅಚ್ಚ ಮುತ್ತೈದೇರನ ಕರೆಸಣ್ಣ
ಅಚ್ಚ ಮುತ್ತೈದೇರನ ಬಾಲೇರನ
ಅವರಕ್ಕ ತಂಗೇರನ ಕರೆಸಣ್ಣ
ಓಣಿ ಕಲ್ಲೊಳ್ಳಿಗೆ ಸಾದುಗಂದವನಿಟ್ಟು
ನಾಗಳದದೂಪ ನಿದಿವೊಯ್ದು
ನಾಗಳದದೂಪ ನಿದಿವೊಯ್ದು ಆಚೆಕೇರಿ
ಆದಿ ಮುತ್ತೈದೇರನ ಕರೆಸಣ್ಣ
ಆದಿ ಮುತ್ತೈದೇರನ ಬಳಗಾದ ಬಾಲೇರ
ತಾಯಿ ಮುತ್ತೈದೇರನ ಕರೆಸಣ್ಣ
ಬಗ್ಗೀರಿ ಒರಳೀಗೆ ಬಗ್ಗೀರಿ ಒನಕೀಗೆ
ಬಗ್ಗೀರಿ ಬಾಗುಲಾಗಳ ಬಸುವಾಗೆ
ಬಗ್ಗೀರಿ ಬಾಗುಲಾಗಳ ಬಸುವಾಗೆ ಸರಣುಮಾಡಿ
ಬಗ್ಗಿ ಬೀರೀರೆ ಜಂತದ ವನಕೀಯ
ಬಾಗೀರೆ ಒರಳೀಗೆ ಬಾಗೀರೆ ವನಕೀಗೆ
ಬಾಗೀರೆ ಬಾಗುಲಾಗಳ ಬಸುವಾಗೆ
ಬಾಗೀರೆ ಬಾಗುಲಾಗಲ ಬಸುವಾಗೆ ಸರಣಮಾಡಿ
ತೂಗಿಬಿಟ್ಟಾರು ಜಂತದವನಕೀಯ
ಅಲ್ಲಿ ಬೆಟ್ಟದ ಮ್ಯಾಲೆ ಮಲ್ಲಿಗೆ ಒರಳೂಡಿ
ಮಲ್ಲಯ್ನವೆಂಬ ಐದೊನಿಕಿ
ಮಲ್ಲಯ್ನವೆಂಬ ಐದೊನಿಕೆ ಇಡಕಂಡು
ನಲ್ಲೇರು ಅಕ್ಕಿ ತ್ರುಳಿಸ್ಯಾರೆ
ಅತ್ತಬೆಟ್ಟದಮ್ಯಾಲೆ ಮುತ್ತಿನ ಒರಳೂಡಿ
ಮುಕ್ಕಣ್ಣನೆಂಬೋ ಐದೊನಿಕೆ
ಮುಕ್ಕಣ್ಣನೆಂಬೋ ಐದೊನಿಕೆ ಇಡಕಂಡು
ನಿಸ್ತ್ರೇರು ಅಕ್ಕಿ ತ್ರುಳಿಸ್ಯಾರೆ
ಮದಗದ ಬೆಟ್ಟದ ಮ್ಯಾಲೆ ಚೆದುರುಗದ ಒರಳೂಡಿ
ಮದಗಾರನೆಂಬೋ ಐದೊನಿಕೆ
ಮದಗಾರನೆಂಬೋ ಐದೊನಿಕೆ ಇಡಕಂಡು
ಚದುರೇರು ಅಕ್ಕಿತ್ರುಳಿಸ್ಯಾರೆ
ಧಾಟಿ ಬದಲಾಗುತ್ತದೆ
ಗಂದಾದ ಉಪ್ಪರಿಗೆ ವಳಗೆಲ್ಲ ಹೊಸ
ಕುಂದಾ ಮಾಣಿಕದಾ ಅರಳೂಡಿ
ಮುಂದಾಲ ಮನೆಯಾಗ
ಬಂದು ಸ್ರುಂಗಾರವಾಗಿ
ಶ್ರೀಮುಕುಂದಾನೆಂದು ಪಾಡೂತ ಒರಳೊಕ್ಕಿನೊಯ್ಯಿರಿ |ಸುವ್ವಲಾಲಿ|
ಗಾಜೀನುಪ್ಪರಿಗೇ ವಳಗೆಲ್ಲ
ವೊಸನೀಲಿ ಮಾಣಿಕದರಳೂಡಿ
ಸ್ಯಾವಂತಿರೆಲ್ಲ ನೆರೆದು ಸ್ರುಂಗಾರವಾಗಿ
ಸ್ರೀ ದೇವರನ ಪಾಡೂತ
ಒರಳಕ್ಕಿನೊಯ್ಯೀರಿ |ಸುವ್ವಲಾಲಿ|
ನಾರೇರು ವೋಗಿ ತಗುತನ್ನಿ
ಕಿಸ್ಣಯ್ಯನ ಸೋಬಾನದಕ್ಕಿ ತ್ರೊಳುಸಾನ
ಬೆಡ್ಡದಮ್ಯಾಗಳ ಮುತ್ತೀನ ಕುಂದಲಿಕೇಯ
ನಿಸ್ತ್ರೇರ ವೋಗಿ ತಗುತನ್ನಿ
ನಿಸ್ತ್ರೇರ ವೋಗಿ ತಗುತನ್ನಿ
ನಿಸ್ತ್ರೇರ ವೋಗಿ ತಗುತನ್ನಿ ಕಿಸ್ಣಯ್ಯನ
ಉತ್ಸಯದಕ್ಕಿ ತೊಳಸಾನ
ಆಲೋಕಕೀಲೋಕಕರುವೋಳೆ
ಆಕೆ ದೇವಾಲೋಕದಿಂದ ಬರುವೋಳೆ
ಆರಣ್ಯದಾಗೆ ಸ್ತಾನವ ಮಾಡುವೋಳೆ
ದೇವಗನ್ನಿಕೆ ಬಾರೆ ವೊರಳಕ್ಕವೊಯ್ಯೆ
ಮುಕ್ಕಣ್ಣ ಚಿಪ್ಪಗನಾಗಿ ಆತ
ಕಸ್ತೂರಿ ಸೂಜೀಯ ಪಿಡಿದಾರೆ
ಕಸ್ತೂರಿ ಸೂಜೀಯ ಪಿಡಿದಾರೆ ಅಕ್ಕಗೌರಮ್ಮ
ಬಾರೆ ಒರಳಕ್ಕಿವೊಯ್ಯೆ
ಸೂರಿದನ ಆಲುಸುರಿದಾರೆ ಆಕೆ ಬಾಲೆಯೆನಿಸಿಕಂಬೋಳು
ಕೊಟ್ಟೂರುಕೊಡನೂರ ವಾರಾದಿ
ಕೊಟ್ಟೂರುಕೊಡನೂರ ವಾರಾದಿ ಚೆನ್ನಮ್ಮ
ವೊನ್ನಕ್ಕಬಾರೇ ಸರಣೆ ಬಾರೆ
ವೂವುಕಂಡಲ್ಲಿ ಮುಡುವೋಳು ಆಕೆ ದೇವಂಗಕಂಡಲ್ಲಿ ಪಿಡಿವೋಳು
ಯಾವಾಗಲು ಕರ್ಪೂರಾದೀಳ್ಯವ ಮೆಲುವೋಳು
ಯಾವಾಗಲು ಕರ್ಪೂರಾದೀಳ್ಯವ ಮೆಲುವೋಳು ಆಕೇಯ
ಕರೆದುಬನ್ನೀರೆ ನಮ್ಮ ಗುರುವೀನ ಮಡದೀಯ
ವೊಳೆನಾಗರದಂತೆ ವೊಳೆವೋಳು ಆಕೆ ಸುಳುನಾಗರದಂತೆ ಸುಳಿವೋಳು
ನಡುವೀನ ಬಾವಾಕೆ ದಣಿಗಾಳ ಕೊಡುವಂತ
ನಡುವೀನ ಬಾವಾಕೆ ದಣಿಗಾಳ ಕೊಡುವಂತೆ ಆಕೇಯ
ಕರೆದುಬನ್ನಿರೆ ನಮ್ಮ ಗುರುವೀನ ಮಡದೀಯ
ವಜ್ಜರದ ವೊಸಕೊಪ್ಪವಳೆವೂತ
ಗುಬ್ಬಿಕಣ್ಣೀನ ಸೀರೇಯನುಟ್ಟು
ಎಜ್ಜೆಎಜ್ಜೆಗೆ ಕೆಮ್ಮುತ ಮುಲುಕೂತ
ಅಜ್ಜಿ ಮುತ್ತೈದೆ ಬಾ ನನ್ನ ಇರಿಯುತ್ತೈದೆ
ರಾಜ್ಯದ ಮ್ಯಾಲೆ ತೊಂಬತ್ತು ಸಾವಿರ
ಆಕಿ ಬಿಕ್ಸಾ ಬೋಜುನವ ಮಾಡೋಳು
ರಾಕ್ಸಾಸಿವಡೆವೋಳು ಬಸವನ ಸ್ರತಿಯೋಳು
ಮುಕ್ತಿ ನೀಲಮ್ಮ ಬಾರೆ ವೊರಳಕ್ಕಿ ವೊಯ್ಯೆ
ಕಕ್ಕಯ್ಯ ಮಿಕ್ಕಿದ್ದು ಉಂಬೋಳೆ
ಆಕೆ ಚಿಕ್ಕಬಸವನ ಪೂಜೆ ಮಾಡೋಳು
ಬಿಜ್ಜುಳನ ಓಲುಗದ ಪವಾಡ ಗೆದ್ದಂತ
ಅಕ್ಕ ನಾಗಮ್ಮ ಬಾರೆ ಒರಳಕ್ಕೆ ವೊಯ್ಯೆ
Leave A Comment