ಭಾಗ

ಎಂಟೆಲೆಬಾಳೇಯ ದಂಟೀನಾಗಿರುವೋಳೆ
ಗಂಟೆನಾದಾಕೆ ಬರುವೋಳೆ
ಗಂಟೆನಾದಾಕೆ ಬರುವೋಳೆ ಸರಸೋತಿ
ಗಂಟಾಲ ತೊಡದ ಬಿಡಿಸಮ್ಮ

ಆರೆಲೆ ಬಾಳೇಯ ತೋಳಿನಾಗಿರುವೋಳೆ
ತಾಳಾದ ಸ್ರುತಿಗೆ ಬರುವೋಳೆ
ತಾಳಾದ ಸ್ರುತಿಗೆ ಬರುವೋಳೆ ಸರಸೋತಿ
ನಾಲಿಗೆ ತೊಡರ ಬಿಡಿಸಮ್ಮ

ಗದ್ದೀಗೆ ಮ್ಯಾಲಿಂದ ಎದ್ದುಬಾರೆ ಸರಸೋತಿ
ಇಲ್ಲಿದ್ದಾರೆ ನಮಗೆ ಅರನಾಣೆ
ಇಲ್ಲಿದ್ದಾರೆ ನಮಗೆ ಅರನಾಣೆ ಗುರುವಿನಾಣೇ
ಎದ್ದು ಬಾರೆ ಕಲ್ಯಾಣದ ಪದಬರವು

ಸೋಬಾನಕ ಸರಸೋತಿಯೆ ಲೋಲುಕಚಿಂತಮಣಿಯೆ
ಎನ್ನೆ ಪಣಿಯೇ ವಾಣೀಯೆ
ಎನ್ನೆ ಪಣಿಯೇ ವಾಣೀಯೆ ಮುದ್ದುಮುಕದವಳೆ
ಮೋವನದಣಿಯೆ ಕೊಡುಬಾರೆ

ಸರಸೋತಿ ಸಣ್ಣೋಳು ನಗುಮುಕದಸುನ್ನಾರಿ
ಕಾಲುಕಂಟಿಗೆಯರಸಿ ಗಿರಿಜಮ್ಮ
ಕಾಲುಕಂಟಿಗೆಯರಸಿ ಗಿರಿಜಮ್ಮ ಪಾರ್ವತಿದೇವಿ
ಕಲಿಸೆ ಕಲ್ಯಾಣದ ಪದಬರವು

ವೊತ್ತಿಗೆ ಸಿವನ ಮ್ಯಾಲೆ ಚಿತ್ತ ಸಿವನಮ್ಯಾಲೆ
ಮತ್ತೊಂದು ಪದವ ಮೊದಲರಿಯೆ
ಮತ್ತೊಂದು ಪದವ ಮೊದಲರಿಯೆ ಗೌರಮ್ಮಾನ
ಚೊಚ್ಚಲ ಮಗ ಬೆನವ ಕೊಡುಮತಿಯ

ವಾಲೆ ತೊಡಿಯಮ್ಯಾಲೆ ಗ್ಯಾನ ಸಿವನ ಮ್ಯಾಲೆ
ನಾನೊಂದು ಪದನ ಮೊದಲರಿಯೆ
ನಾನೊಂದು ಪದನ ಮೊದಲರಿಯೆ ಗೌರಮ್ಮಾನ
ಮೋವದಮಗನೆ ಕೊಡುಮತಿಯ

ಅತ್ತುಮಾರುದ್ಧ ವತ್ತೀಗೆತಕ್ಕಂಡು
ಎತ್ತಿ ಓದಿದರೆ ಮೊದಲಿಂದ
ಎತ್ತಿ ಓದಿದರೆ ಮೊದಲಿಂದ ಸರಸೋತಿ
ತಪ್ಪಿಲ್ಲದ ಪದನ ಬರಕೊಡೆ

ತಪ್ಪೀದ ಪದವಮ್ಮ ವತ್ತೀಗೆ ಮ್ಯಾಲೈದಾವೆ
ವತ್ತೀಗೆ ತತ್ತಾರೋ ಬೆನವಣ್ಣ
ವತ್ತೀಗೆ ತತ್ತಾರೋ ಬೆನವಣ್ಣ ಗ್ಯಾನವುಳ್ಳ
ಅಕ್ಕಾಗೆ ಪದವ ಬರಕೊಡುವೆ

ಆರುಮಾರುದ್ದ ವಾಲೀಯ ತಕ್ಕಂಡು
ಏಳುವೆ ಇದರ ಮೊದಲಿಂದ
ಏಳುವೆ ಇದರ ಮೊದಲಿಂದ ಸರಸತಿಯೆ
ಬರದಪದನವಗೆ ಬರಕೊಡೆ

ಬರದ ಪದನಮ್ಮ ವಾಲೆಮ್ಯಾಲೈದಾವೆ
ವಾಲೆ ತತ್ತಾರೊ ಬೆನವಣ್ಣ
ವಾಲೆ ತತ್ತಾರೊ ಬೆನವಣ್ಣ ಗ್ಯಾನವುಳ್ಳ
ತಾಯಿಗೀ ಪದನ ಬರಕೊಡುವೆ

ಇಂದೆ ನಮ್ಮನಿಯ ಕಂದನ ಸೋಬಾನಕ
ಬಂದಿಯೋ ಬರೆಯೋ ಬಸವಯ್ಯ
ಬಂದಿಯೋ ಬರೆಯೋ ಬಸವಯ್ಯ ನಮ್ಮನಿಯ
ಕಂದಗ ದೂಳುತವ ದರುಸಯ್ಯ

ನಾಳೆ ನಮ್ಮನಿಯ ಬಾಲನ ಸೋಬಾನಕ
ವೋದಿಯೆ ವೋಗೋ ಬಸವಯ್ಯ
ವೋದಿಯೆ ವೋಗೋ ಬಸವಯ್ಯ ನಮ್ಮನಿಯ
ಬಾಲಗ ದೂಳುತವ ದರುಸಯ್ಯ

ನಂದೀಗೀಸ್ವರ ನಿನ್ನ ರಂಬೆರನ ಕಳುವಯ್ಯ
ಸಂಬ್ರಮ ನಮ್ಮ ಮನಿಯಾಗ
ಸಂಬ್ರಮ ನಮ್ಮ ಮನಿಯಾಗ ಜಗಮೊಕದಯ್ಯ
ರೆಂಬೇರಿಬ್ಬರನ ಕಳುವಯ್ಯ

ರೂಡಿಗೀಸ್ವರ ನಿನ್ನ ನಾರೇರನ ಕಳುವಯ್ಯ
ಸೋಬಾನ ನಮ್ಮ ಮನಿಯಾಗೆ
ಸೋಬಾನ ನಮ್ಮ ಮನಿಯಾಗೆ ಜಗುಮುಕದಯ್ಯ
ನಾರೇರಿಬ್ಬರನ ಕಳುವಯ್ಯ

ಇಂದೀಗೀಸ್ವರಬರಲಿ ನಂದಿಗೀಸ್ವರ ಬರಲಿ
ಸಂಗನ ಬಸವಣ್ಣ ಸ್ರಯವಾಗಿ
ಸಂಗನ ಬಸವಣ್ಣ ಸ್ರಯವಾಗಿ ಮರಿತೇಕು
ಲಿಂಗವಂತಾರು ನೆರೆದಾರೆ

ನಾಳೆ ಸೋಯೆನಲೆ ರೂಡಿಗೀಸ್ವರಬರಲಿ
ದೇವರೆ ಬಸವಣ್ಣ ಸ್ರಯವಾಗಿ
ದೇವರೆ ಬಸವಣ್ಣ ಸ್ರಯವಾಗಿ ಮರಿತೇಕು
ಸೀಲವಂತರು ನೆರೆತಾರು

ಸೋಬಾನದ ಮನಿಗೆ ನಾವು ವೋಗುಬನ್ನಿ
ನಾರಿಗಂಗಮ್ಮ ಗೌರಮ್ಮ
ನಾರಿಗಂಗಮ್ಮ ಗವರಮ್ಮ ಸಿವನಮಡದಿ
ಮನಮುತ್ತಿಲಸೆಯ ರಚಿಸ್ಯಾರೆ

ಕಲ್ಯಾಣದ ಮನೆಗೆಲ್ಲ ವೋಗನು ಬನ್ನಿ
ನಲ್ಲೆ ಗಂಗಮ್ಮ ಗೌರಮ್ಮ
ನಲ್ಲೆ ಗಂಗಮ್ಮ ಗೌರಮ್ಮ ಸಿವನಮಡದಿ
ನೆಲ್ಲಕ್ಕಿಲಿ ಅಸೆಯರಚಿಸ್ಯಾರೆ

ಸೋಬಾನವೆಂಬೋದು ಯಾವೆಲ್ಲಿದ್ದಾವಮ್ಮ
ಬಾಗ್ಯಾವುಳ್ಳೋರ ಮನಿಯಾಗೆ
ಬಾಗ್ಯಾವುಳ್ಳೋರ ಮನಿಯಾಗೆ ಸುಬಸೋಬಾನ
ಅಗುಟ್ಟಿ ಈಗ ಬೆಳೆದಾವೆ

ಕಲ್ಯಾಣವೆಂಬೋದು ಇನ್ನೆಲ್ಲಿ ಆದಾವಮ್ಮ
ಪುಣ್ಯವುಳ್ಳೋರ ಮನೆಯಾಗೆ
ಪುಣ್ಯವುಳ್ಳೋರ ಮನೆಯಾಗೆ ಸುಬಕಲ್ಯಾಣ
ಆಗುಟ್ಟಿ ಈಗ ಬೆಳೆದಾವೆ

ಕಲ್ಲುವುಟ್ಟದ ಮುನ್ನ ಕಲ್ಯಾಣವುಟ್ಟದ ಮುನ್ನ
ಅಲ್ಲುಟ್ಟಿದ ಚನ್ನಬಸವಯ್ಯ
ಅಲ್ಲುಟ್ಟಿದ ಚೆನ್ನಬಸವಯ್ಯ ಮಾಡ್ಯಾನೆ
ನಲ್ಲೆ ಪಾರ್ವತೀಯ ಮದವೀಯ

ಬೂಮಿವುಟ್ಟದ ಮುನ್ನ ಬೂಲೋಕ ವುಟ್ಟದಕಿನ್ನ
ತಾನುಟ್ಟಿದ ಚನ್ನಬಸವಯ್ಯ
ತಾನುಟ್ಟಿದ ಚನ್ನಬಸವಯ್ಯ ಮಾಡ್ಯಾನೆ
ದೇವಿ ಪಾರ್ವತೀಯ ಮಧುವೀಯ

ಅಸೆಯಚ್ಚಿರಿ ಪಾರ್ವತಿದೇವಿಯ ರುಸಿಗಳು ಬಂದವರೆ
ಅಸೆಯಚ್ಚಿ ಮುತ್ತ ಡೌಲೊಡಸೆ
ಅಸೆಯಚ್ಚಿ ಮುತ್ತ ಡೌಲೊಡಸೆ ನಾಕುದಿಕ್ಕಿನ
ರುಸಿಗಳು ಬಂದು ವೊರಗವರೆ

ಮಣೆಯಾಕು, ಪಾರ್ವತಿದೇವಿ ಮುನಿಗಳು ಬಂದೈದಾರೆ
ಮಣಿಯಾಕಿ ಮುತ್ತ ಡೌಲೊಡಸೆ
ಮಣಿಯಾಕಿ ಮುತ್ತ ಡೌಲೊಡಸೆ ನಾಕುದಿಕ್ಕಿನ
ಮುನಿಗಳು ಬಂದು ವೊರಗವರೆ

ಮಣಿಯಾಕೀದೆ ಮಣ್ಣಿಸಿರೆ ಬೂಮೀಯ
ಸಣಮುತ್ತಿನ ಸೆಳೆಯ ಕೊಡಿರಮ್ಮ
ಸಣಮುತ್ತಿನ ಸೆಳೆಯ ಕೊಡಿರಮ್ಮ ನಾಕುದಿಕ್ಕಿನ
ಮುನಿಗಳು ಬಂದು ವೊರಗವರೆ

ಮಣಿಯಾಕೀರೆ ಮಣ್ಣಿಸಿರೆ ಬೂಮೀಯ
ಸಣಮುತ್ತಿನ ಸೆಳೆಯ ಕೊಡಿರಮ್ಮ
ಸಣಮುತ್ತಿನ ಸೆಳೆಯ ಕೊಡಿರಮ್ಮ ನಮ್ಮನಿಯ
ಚೆನ್ನೆ ಕುಂಡುರುವ ಜಗುಲೀಗೆ

ಆಸೆಯ ಅಚ್ಚೀರೆ ಕುಸುಲಿಸಿರೆ ಬೂಮೀಯ
ವೊಸಮುತ್ತಿನ ಸೆಳೆಯ ಕೊಡಿರಮ್ಮ
ವೊಸಮುತ್ತಿನ ಸೆಳೆಯ ಕೊಡಿರಮ್ಮ ನಮ್ಮನೀಯ
ಸಿಸುವೆ ಕುಂಡುರುವ ಜಗುಲೀಗೆ

ಅಕ್ಸಾಲಿಮಾಡಿದ ಎಚ್ಚಿನ ಗಿದ್ದನದಾಗ
ಎತ್ತಮ್ಮ ಅಕ್ಕಿ ತಗುತಾರೆ
ಎತ್ತಮ್ಮ ಅಕ್ಕಿ ತಗುತಾರೆ ನಮ್ಮನಿಯ
ಪುತ್ರಮ್ಮಗಸೆಯ ಬರುವಾನು

ಬಡಗೇರು ಮಾಡೀದ ಬೆಡಗೀನ ಗಿದ್ದನದಾಗ
ಅಡೆದಮ್ಮ ಅಕ್ಕಿ ತಗುತಾರೆ
ಅಡೆದಮ್ಮ ಅಕ್ಕಿ ತಗುತಾರೆ ನಮ್ಮನಿಯ
ಬಾಲಮ್ಮಗಸೆಯ ಬರುವಾನು

ಎತ್ತಮ್ಮ ಆಸೆಯ ಎತ್ತೆತ್ತ ಬರೆಯಾಲಿ
ಗುತ್ತೀಯ ಸೀಮೆ ವುಳಿಯಾರು
ಗುತ್ತೀಯ ಸೀಮೆ ವುಳಿಯಾರು ತ್ವಾಟಾದ
ಅಕ್ಕಿ ವೊಂಬಾಳೇಲಿ ಆಸೆ ತುಂಬಿ

ತಾಯಮ್ಮ ಆಸೆಯ ಯಾವಲ್ಲಿ ಬರೆಯಾಲಿ
ಗ್ವಾವೀಯ ಸೀಮೆ ವುಳಿಯಾರ
ಗ್ವಾವೀಯ ಸೀಮೆ ವುಳಿಯಾರ ತ್ವಾಟಾದ
ಕಾಯಿ ವೊಂಬಾಳೇಲಿ ಆಸೆ ತುಂಬೆ

ಅರಿನೀರಾಗಿರುವೋಳೆ ಅರಳೀದ ಬೈತಲೆಯೋಳೆ
ವನದಿಂದವನಕ ಬರುವೋಳೆ
ವನದಿಂದವನಕ ಬರುವೋಳೆ ನಗುವಳ್ಳೀಯ
ಅರಿದೇರು ತಂದಿಡಿರೇ ಕಳಸಾಕ

ನಿಂತ ನೀರಾಗಿರುವೋಳೆ ಕೊಂಕೀದ ಬೈತಲೆಯೋಳೆ
ಸಂಪಂಗಿ ವನಕ ವನವೋಳೆ
ಸಂಪಂಗಿ ವನಕ ವನವೋಳೆ ನಗುವಳ್ಳಿ
ಕೆಂಚೇರು ತಂದಿಡಿರೆ ಕಳಸಾಕ

ಆಕಾಸಾದಾಗ ಆತುಕಂಡಿರುವೋದು
ಸೋಕಿದರೆ ಮುಸುಕು ತಗಿವೋದು
ಸೋಕಿದರೆ ಮುಸುಕು ತಗಿವೋದು ವೊಂಬಾಳೇಯ
ಕಾತೇರುತಂದಿಡಿರೆ ಕಳಸಾಕ

ಅಂಬಾರದಾಗ ನೆಂಬಿಕಂಡಿರುವೋದು
ಅಂಗೆಂದಾರೆ ಗುಮ್ಮಾನಿಳುವೋದು
ಅಂಗೆಂದಾರೆ ಗುಮ್ಮಾನಿಳುವೋದು ವೊಂಬಾಳೇಯ
ರೆಂಬೇರು ತಂದಿಡಿರೆ ಕಳಸಾಕ

ಅಂಗೈಲಿ ವುಟ್ಟೋವು ಅಂಗೈಲಿ ಬೆಳೆವೋವು
ಅಂಗೈಲಿ ಬಟುವ ತಿರುವೋವು
ಅಂಗೈಲಿ ಬಟುವ ತಿರುವೋವು ಈಬೂತೀಯ
ರೆಂಬೇರು ತಂದಿಡಿರೆ ಕಳಸಾಕ

ಕೆಸರಾಗುಟ್ಟೋವು ಕೆಸರಾಗೆ ಬೆಳೆವೋವು
ಕೆಸರಾಗೆ ತಮ್ಮೆಸರಾ ಪಡೆವೋವು
ಕೆಸರಾಗೆ ತಮ್ಮೆಸರಾ ಪಡೆವೋವು ತೆಂಗಿನಕಾಯಿ
ಅಸಲೇ ತಂದಿಡಿರೆ ಕಳಸಾಕ

ನೀರಾಗುಟ್ಟೋವು ನೀರಾಗ ಬೆಳೆವೋವು
ನೀರಾಗ ತಮ್ಮೆಸರ ಪಡೆವೋವು
ನೀರಾಗ ತಮ್ಮೆಸರ ಪಡೆವೋವು ತೆಂಗಿನಕಾಯಿ
ನಾರೇರು ತಂದಿಡಿರೆ ಕಳಸಾಕ

ನಾಗಾಳ ಇಡುವ ಗಾಲಿಯರುವಾಣಕ
ಕೀಲುಸರಪಣಿ ಮಕರಂಬ
ಕೀಲುಸರಪಣಿ ಮಕರಂಬ ವೊನ್ನ ಕಳಸಾವ
ತೋರಿಡಿರೆ ಬಂದ ಜನ ನೋಡ

ಕಂಡುಗ ಇಡಿವ ಗಿಂಡಿ ಅರಿವಾಣಕ
ಕೊಂಡಿಸರಪಣಿ ಮಕರಂಬ
ಕೊಂಡಿಸರಪಣಿ ಮಕರಂಬ ವೊನ್ನ ಕಳಸಾವ
ತೋರಿಡಿರೆ ಬಂದ ಜನನೋಡ

ಕಂಡುಗ ಇಡಿವ ಗಿಂಡಿ ಅರಿವಾಣಕ
ಕೊಂಡಿಸರಪಣಿ ಮಕರಂಬ
ಕೊಂಡಿಸರಪಣಿ ಮಕರಂಬ ವೊನ್ನ ಕಳಸ
ತಂದಿಡಿರೆ ಬಂದ ಜನನೋಡ

ಅತ್ತು ವರುಸ ತುಪ್ಪುಂಡ ಮಣಿಗಳ
ಅಪ್ಪ ನಿಂಗಣ್ಣ ಕಳುವ್ಯಾನು
ಅಪ್ಪ ನಿಂಗಣ್ಣ ಕಳುವ್ಯಾನು ಸಿರಿಯಣ್ಣಾನ
ಮುತ್ತೀನ ಆಸೆಯನಿಡುವಾಕೆ

ಆರುವರುಸ ಆಲುಂಡ ಮಣಿಗಾಳು
ಸ್ವಾಮಿ ಈರಣ್ಣ ಕಳುವ್ಯಾನು
ಸ್ವಾಮಿ ಈರಣ್ಣ ಕಳುವ್ಯಾನು ಸಿರಿಯಣ್ಣಾನ
ವೂವೀನ ಅಸೆಯನಿಡುವಾಕೆ

ಅತ್ತಂಕಳದರುಮನೆ ವೊಪ್ಪವಿಲ್ಲವಂದು
ಪುತ್ರನಸೆಯಿಲ್ಲಿಗೆ ನಿಲಲಂದು
ಪುತ್ರನಸೆಯಿಲ್ಲಿಗೆ ನಿಲಲಂದು ಸಾಣೆಕೆರೆಯ
ಅಪ್ಪಯ್ಯ ಬಂದ ಮನೆ ನೋಡ

ಆರಂಕಳದರಮನೆ ಆಯವಿಲ್ಲವಂದು
ಬಾಲನಸೆಯಿಲ್ಲೀಗೆ ನಿಲಲಂದು
ಬಾಲನಸೆಯಿಲ್ಲೀಗೆ ನಿಲಲಂದು ಕ್ವಾಟೆಕೇರಿಯ
ಈರಣ್ಣಬಂದ ಮನೆ ನೋಡ

ಎತ್ತುಗಳ ಕೊಟ್ಟು ಗುತ್ತೀಗೆ ಕಳುವ್ಯಾನೆ
ಗುತ್ತಿಂದಳೇನು ತೊಲೆಬಂದು
ಗುತ್ತಿಂದಲೇಳು ತೊಲೆಬಂದು ಬೋದಿಗೆ ಬಂದು
ಕಪ್ಪೀನ ಮಾಟುಗದಲೆಮನೆ ನಿಂತು

ಆರು ವರಆವ ಕೊಟ್ಟು ಸ್ವಾಮೀಜಿಗೆ ಕಳಿಸ್ಯಾನೆ
ಗ್ವಾವಿಂದಲೇಳು ತೊಲೆಬಂದು
ಗ್ವಾವಿಂದಲೇಳು ತೊಲೆಬಂದು ಬೋದಿಗೆ ಬಂದು
ವಾಲೆ ಮಾಟುಗದಲಿ ಮನೆನಿಂತು

ವಾಲೆ ಮಾಟುಗದಲಿ ಮನೆನಿಂತು ಮಾಳಿಗ್ಯಾನೆ
ಮಾಡಮ್ಮ ನೆಲ್ಲಕ್ಕಿ ಸ್ರವಿಕಾವ
ನಿಲ್ಲಯ್ಯ ನಿಲ್ಲಯ್ಯ ಅರ್ಜುನರಾಯ

ನಿಲ್ಲಯ್ಯ ಬಾಣದಲಿ ಸಮರಂತ
ನಿಲ್ಲಯ್ಯ ಬಾಣದಲಿ ಸಮರಂತ ನೀನಿಡಿದಿರುವ
ಬಿಲ್ಲು ಬಾಣದೊಲೊಡ್ಡವರೆ ಆಸೆಗಾಳ

ತಾಳಯ್ಯ ತಾಳಯ್ಯ ಅರ್ಜುಣರಾಯ
ತಾಳಯ್ಯ ಬಾಣದಲಿ ಸಮರಂತ
ತಾಳಯ್ಯ ಬಾಣದಲಿ ಸಮರಂತ ನೀನಿಡಿದಿರುವ
ಬಿಲ್ಲುಬಾಣದಲಿ ಆಸೆಯ ಬರೆದಾರೆ

ಒಂದು ಬರಿ ಎಂದಾರೆ ಒಂಬತ್ತು ಬರೆದಾರೆ
ಒಂಬತ್ತರ ನಡುವೆ ಕ್ವಾಣಲೂಡಿ
ಒಂಬತ್ತರ ನಡುವೆ ಕ್ವಾಣಲೂಡಿ ಪಾಂಡವರ
ಸೀರೀಯ ಸೆರಗ ಬರೆದಾರೆ

ಅದರಂದಾಕ ಬಾಳೀಯವನವ ನಿಲಿಸ್ಯಾರೆ
ಅದರಂದಾಕ ವೋಗಿಸವಿಯಾರೆ
ಅದರಂದಾಕ ವೋಗಿಸವಿಯಾದರೆ ಗಿಳಿವಿಂಡು
ಅಸುರುಬಳ್ಳಿ ಬರೆದಾರೆ

ನಾಕುಬರಿಯೆಂದಾರೆ ನಲವತ್ತು ಬರೆದಾರೆ
ನಲುವತ್ತರನಡುವೆ ಕ್ವಾಣಲೂಡಿ
ನಲುವತ್ತರನಡುವೆ ಕ್ವಾಣಲೂಡಿ ಪಾಂಡವರ

ಸಿಂಬೀಯ ಸೆರಗ ಬರೆದಾರೆ
ಸಿಂಬೀಯ ಸೆರಗ ಬರೆದಾರೆ ಅದರಂದಾಕ
ಸಿಂಬೀಯ ವನವಾ ನಿಲಿಸ್ಯಾರೆ

ಅಂದಾವಾದವು ಅಸೆ ಮುಂದಕ ಬಿದ್ದಾವು ತೆನೆ
ಕೊಂಬೆನೂರದರ ಗೊನೆನೂರು
ಕೊಂಬೆನೂರದರ ಗೊನೆನೂರು ಬಿದ್ದಾಗ
ಚಂದ್ರಕುಲದೋನು ಅಸೆಮ್ಯಾಲೆ

ಆಯವಾದವು ಅಸೆ ಮ್ಯಾಲಕೆಬಿದ್ದಾವು ತೆನೆ
ಕಾಯಿನೂರದರ ಗೊನೆನೂರು
ಕಾಯಿನೂರದರ ಗೊನೆನೂರು ಬಿದ್ದಾವು
ಸೂರಿದನ ಕುಲದೋನು ಅಸೆಮ್ಯಾಲೆ

ಕಾಲುಮಿಂಚು ಇಲ್ಲಾದ ಬಾಲ ಅಸೆಗೇಳೇನು
ನೀಲಾದವೇಳು ಸಿವದಾರ
ನೀಲಾದವೇಳು ಸಿವದಾರ ಇಲ್ಲವಂದು
ತಾಯಮ್ಮನ ಮ್ಯಾಲೆ ಮುನದಾನೆ

ಆದಸ್ಟು ಆದಸ್ಟು ಆದಸ್ಟು ಬಂಗಾರ
ಗ್ಯಾನವಿಲ್ಲದ ಮಗನೆ ಬಡವಾರು
ಗ್ಯಾನವಿಲ್ಲದ ಮಗನೆ ಬಡವಾರು ಅಂದವರಮ್ಮ
ಜೋಡೆರಡುಕರವ ಮುಗುದಾಳೆ

ಬೆಟ್ಟುಮಿಂಚಿಲ್ಲಾದ ಪುತ್ರ ಆಸೆಗೆ ಬಂದಾನು
ಮುತ್ತೀನಾವೇಳು ಸಿವದಾರ
ಮುತ್ತೀನಾವೇಳು ಸಿವದಾರ ಇಲ್ಲವೆಂದು
ಎತ್ತಮ್ನ ಮ್ಯಾಲೆ ಮುನುದಾನೆ

ಇದ್ದಸ್ಟು ಇದ್ದಸ್ಟು ಇದ್ದಸ್ಟು ಬಂಗಾರ
ಬುದ್ದಿಲ್ಲ ಮಗನೆ ಬಡವಾರು
ಬುದ್ದಿಲ್ಲ ಮಗನೆ ಬಡವಾರು ಅಂದರವರಮ್ಮ
ಎದ್ದೆರಡು ಕರವ ಮುಗುದಾಳೆ

ದೊಡ್ಡೋರ ಮನೆಗೆ ಬಬುಲಿಕಾವಾಲು
ಎದ್ದರೋ ಎಂಬ ಸೆಳೆಮಂಚ
ಎದ್ರೀ ಎಂಬ ಸೆಳೆಮಂಚದ ಮ್ಯಾಲೆ

ದೊಡ್ಡೋರ ಮಗನ ಸುಕನಿದ್ರೆ
ದೊಡ್ಡೋರ ಮಗನ ಸುಕನಿದ್ರೆ ಮಲ್ಲೀಗೆ
ಮೊಗ್ಗು ಅವನ ಎಚ್ಚರಿಸಿ ಕರುದಾವೆ

ದೊರೆಗಾಳ ಮನಿಗೆ ಉರುಗಾನ ಕಾವಾಲು
ಕರೆದರೋ ಎಂಬ ಸೆಳೆಮಂಚ
ಕರೆದರೋ ಎಂಬ ಸೆಲೆಮಂಚದ ಮ್ಯಾಲೆ

ದೊರೆಗಾಳಮಗನ ಸುಕನಿದ್ದೆ.
ದೊರೆಗಾಳಮಗನ ಸುಕನಿದ್ದೆ. ಆಗಲುವಾಗ
ಮಲ್ಲೀಗೆ ಮರುಗ ಎಚ್ಚರಿಸಿ ಕರುದಾವೆ

ಅರಿಸಿನೆಣ್ಣೆ ಬಂದು ಸರಸಾಡಲು ತಾವೆ
ಮರತೆ ಮನಗುವನೆ ಮದುಮಗ
ಮರತೆ ಮನಗವನೆ ಮದುಮಗ ಎಣ್ಣರಿಸಿನ
ಸರಸಾನಾಡಸೆಗೆ ಕರೆದಾವೆ

ಎಣ್ಣೆ ಅರಿಸಿಣ ಬಂದು ಸರಸ ಮಾಡುತಾವೆ
ಇನ್ನು ಮನಗವನೆ ಮದುಮಗ
ಇನ್ನು ಮನಗವನೆ ಮದುಮಗ ಎಣ್ಣರಿಸಿಣ
ಸನ್ನೆ ಮಾಡಸೆಗೆ ಕರೆದಾವೆ

ಅಸೆಗೇಳು ಅಂದವನೆ ಅಸೆಗೇಳೋ ಚಂದ್ರನೆ
ಅಸೆಗೇಳೊ ಗೊಂಬೆಗರುಡಾನೆ
ಅಸೆಗೇಳೊ ಗೊಂಬೆಗರುಡಾನೆ ಪಾಲುಕನಂದು
ಎಸಗೀಲವರಮ್ಮ ಕರೆದಾಳೆ

ಮಣೆಗೇಳೋ ಅಂದರನೆ ಮಣೆಗೇಳೊ ಚಂದಿರನೆ
ಮಣೆಗೇಳೋ ಗೊಂಬೆ ಗರುಡಾನೆ
ಮಣೆಗೇಳೋ ಗೊಂಬೆ ಗರುಡಾನೆ ಪಾಲುಕನಂದು
ಬೆಡಗೀಲವರಮ್ಮ ಕರೆದಾಳೆ

ಎದ್ದಸೆಗೆ ಬಾರೋ ಮುದ್ದು ರಾಣಿಕಂದ
ಎಜ್ಜೆಗೆ ನೂರೆಲೆಯ ಮೆಲುವುತ
ಎಜ್ಜೆಗೆ ನೂರೆಲೆಯ ಮೆಲುವುತ ನನ್ನಮ್ಮಾನ
ಮುದ್ದೀನ ಮೊಮ್ಮಗನೆ ಅಸೆಗೇಳೋ

ನಡದಸಿಗೆ ಬಾರೋ ಬೆಡಗೀನ ಮಗಕಂದ
ತಡವಿಗೆ ನೂರೆಲೆಯ ಮೆಲುವುತ
ತಡವಿಗೆ ನೂರೆಲೆಯ ಮೆಲುವುತ ನನ್ನಮ್ಮಾನ
ಬೆಡಗೀರೆ ಮೊಮ್ಮೊಗನೆ ಅಸೆಗೇಳೋ

ಅಸೆಗೆದ್ದು ಬರುವಾಗ ಬಸವಣ್ಣಗ ಸರಣೆನ್ನಿ
ದೆಸೆಮೂರುತಿ ನಿಮ್ಮ ಗುರುವೀಗೆ
ದೆಸೆಮೂರುತಿ ನಿಮ್ಮ ಗುರುವೀಗೆ ಸರಣುಮಾಡಿ
ಆಸೆಗೆ ಬಾ ಜಾಣ ಸ್ರುಬದಿಂದ

ಮೇಗೆದ್ದು ಬರುವಾಗ ಬೆನವಗ ಸರಣೆನ್ನು
ಗನ ಮೂರುತಿ ನಿಮ್ಮ ಗುರುವೀಗೆ
ಗನ ಮೂರುತಿ ನಿಮ್ಮ ಗುರುವೀಗೆ ಸರಣು ಮಾಡಿ
ಮಣೆಗೆದ್ದು ಬಾ ಜಾಣ ಸ್ರುಬದಿಂದ

ನಡೆದು ಬರುವೋ ಕಂದಾನ ನಡಿಗೇನಂದವಂದು
ಕಡುಜಾಣೆ ಅವನ ಅಡೆದಮ್ಮ
ಕಡುಜಾಣೆ ಅವನ ಅಡೆದಮ್ಮ ಸಣ್ಣಮ್ಮ
ಮರುಗ ಅರಡ್ಯಾಳೆ ನಡುಮನಿಗೆ

ಎದ್ದು ಬರುವೋ ಕಂದಾನ ಎಜ್ಜೆ ನಂದಾವಂದು
ಬುದ್ದಿವಂತೆ ಅವನ ಅಡೆದಮ್ಮ
ಬುದ್ದಿವಂತೆ ಅವನ ಅಡೆದಮ್ಮ ಸಣ್ಣಮ್ಮ
ಮೊಗ್ಗು ಅರಡ್ಯಾಳೆ ನಡುಮನೆಗೆ

ಸೂರಿದಮ್ಮನ ವೊಳವುಬಾಳೆ ಅಣ್ಣಿನ ತಿಳಿವು
ವೋಗವನೆ ಅಸೆಯ ನೆಡುವಾಕೆ
ವೋಗವನ ಅಸೆಯ ನೆಡುವಾಕೆ ನಿಂಗಣ್ಣ
ಬಾಲಾನ ನೋಡೋ ಕಡೆಗಣ್ಣು

ಚಂದ್ರಮ್ಮನ ವೊಳವು ನಿಂಬೆ ಅಣ್ಣಿನ ತಿಳಿವು
ಬಂದವನೆ ಅಸೆಯ ನೆಡುವಾಕೆ
ಬಂದವನೆ ಅಸೆಯ ನೆಡುವಾಕೆ ಈರಣ್ಣ
ಕಂದಾನ ನೋಡ ಕಡೆಗಣ್ಣು