ಭಾಗ ೪
ಕಡಲೆಕಾಳಂಗೆ ಕಡೆದಕೋಡಿನ ಬಸವ
ನಡದೇಬಂದು ಆಲುಸಲಿಸಯ್ಯ
ನಡದೇಬಂದು ಆಲುಸಲಿಸಯ್ಯ ಸಾಣೆಕೆರೆಯ
ನಡುಕೆರೆಯಾಗಿರುವ ಉದಕಾವ
ವುದ್ದೀನ ಕಾಳಂಗೆತಿದ್ದೀದ ಕೋಡಿನ ಬಸವ
ಎದ್ದುಬಂದಾಲ ಸಲಿಸಯ್ಯ
ಎದ್ದುಬಂದಾಲ ಸಲಿಸಯ್ಯ ಕ್ವಾಟೆಕೇರೀಯ
ಎದ್ದೊರೆಯಾಗಿರುವ ಉದಕಾವ
ಎದ್ದು ಬನ್ನಿರಿ ಎದ್ದು ಬನ್ನಿರಿ ಇರಿಯೋರು
ನೆಗ್ಗಲೂವಿನಂಗೆ ವೊದಕೀಯ
ನೆಗ್ಗಲೂವಿನಂಗೆ ವೊದಕೀಯ ವೊದ್ದುಕಂಡು
ಎದ್ದುಬಂದು ಸೇಸೇವ ಇಡುಬನ್ನಿ
ನಡೆದುಬನ್ನಿ ನಡೆದುಬನ್ನಿರಿ ಇರಿಯೋರು
ಕಡಲೂವಿನಂದಾದ ವೊದುಕೆ ವೊದ್ದುಕಂಡು
ಕಡಲೂವಿನಂದಾದ ವೊದುಕೆ ವೊದ್ದುಕಂಡು ನಡೆದುಬಂದು
ಸೇಸ್ಯೇವ ಇಡಬನ್ನೀರಿ
ಅತ್ತೀಯಮರದ ತೊಟ್ಟು ಬಗ್ಗುಸಿದಂಗೆ
ಚಿತ್ತೀಯ ಬಿಸಿಲ ಮಳೆಮೋಡ
ಚಿತ್ತೀಯ ಬಿಸಿಲ ಮಳೆಮೋಡ ಸಿರಿಯಣ್ಣನಿನ್ನ
ಅಪ್ಪಗಳು ಆಳ್ಯಾರಲ್ಲದುರುಗಾವ
ಕಂಚು ಬೆಳೆವುದು ದೇಸ ಮಿಂಚು ಬೆಳೆವುದು ದೇಸ
ಕೆಂಚರಿರುವೋದೆ ಮಲೆದೇಸ
ಕೆಂಚರಿರುವೋದೆ ಮಲೆದೇಸ ಅಕ್ಕಗಳು
ಮಂತ್ರದಕ್ಕಿಗಳು ತೊಳೆದಾರೆ
ಸೋವನ್ನಿರೇ ಸೋಬಾನವನ್ನೀರೆ
ಕದಿರು ಬೆಳೆವುದು ದೇಸ ಬಿದಿರು ಬೆಳೆವುದು ದೇಸ
ಚದುರೇರು ಇರುವುದು ಮಲೆದೇಸ
ಚದುರೇರು ಇರುವುದು ಮಲೆದೇಸ ಅಕ್ಕಗಳು
ಬೆಡಗಿನಕ್ಕಿಗಳ ತೊಳೆದಾರೆ
ದ್ಯಾವಾರಗುಡಿಮುಂದೆ ವೂವೀನಗುಡಿಬಜಾರ
ಸಾವಿದರನ್ನ ಕಂಬ ಮಂಟಪಗಳು
ಮಾವೀನ ತೋಪುಗಳು ಮೇದಾರನಮಗಳು
ಗಾವುದಲಿ ಇರುವ ಗಿರಿಯ ಮ್ಯಾಲೆ ಗಿರಿಜಮ್ಮ
ಜಯಮಂಗಳಾ ರಾಮ ಸುಬಮಂಗಳಾ
ದೇಸ ದೇಸದೋರು ದಾಸಂಗವಿಡಲಿಕ್ಕಿ
ಸೇಸಗಿರಿ ಬೆಟ್ಟವನ್ನೇರಿ ಬರಲಿ
ದಾಸರನ ಒಡಗೊಂಡು ಮೀಸಲಡಿಗೆ ಮಾಡಿ
ಕ್ಯಾಸಕ್ಕಿ ನರಸಿಮ್ಮ ಮೂರುತವಾದಾನು
ಜಯಮಂಗಳರಾಮ ಸುಬಮಂಗಳಾ
ರಾಜ್ಯರಾಜ್ಯೋದೋರು ನೇಮಾಗೊಂಡಾರೆಂದು
ನಿತ್ಯಾನೇಮಾದಿಂದಾಲುಪವಾಸಾವು
ಸ್ವಾಮಿ ಪಾದವ ನೆನೆದು ಸರ್ವತೇರುತನೋಡಿ
ದೇವಗಿರಿ ಬೆಟ್ಟವನ್ನೇರಿ ಬರಲಿ
ಜಯಮಂಗಲಾ ರಾಮಸುಬ ಮಂಗಳಾ
ಭಾಗ ೫
ಹೆಣ್ಣು ಮಗಳನ್ನು ಕುರಿತ ಹಸೆ ಹಾಡು
ನೆಲ್ಲಕ್ಕಿ ಅಸೆಯ ಬಲ್ಲಮ್ಮ ನೀಬರೆಯೆ
ಬೆಲ್ಲದಚ್ಚುಗಳ ಕೊರೆದಂಗೆ
ಬೆಲ್ಲದಚ್ಚುಗಳ ಕೊರೆದಂಗೆ ಅಸೆಯಮ್ಯಾಲೆ
ಮಲ್ಲಿಗದೂವುಯಾರೆ ಬರೆದೋರು
ಕ್ಯಾಸಕ್ಕಿ ಅಸೆಯ ಲೇಸಮ್ಮ ನೀಬರೆಯೆ
ದಾಸ್ವಾಳದೂವು ಕೊರೆದಂಗೆ
ದಾಸ್ವಾಳದೂವು ಕೊರೆದಂಗೆ ಆಸೆಯಮ್ಯಾಲೆ
ಬಾಸಿಂಗನ್ಯಾರೆ ಬರೆದೋರು
ಕಡಲೆಕಾಳಸೆಯ ಕಡುಜಾಣೆ ನೀಬರಿಯೆ
ಕಡಿಗೊಂದೇ ಕಾಳು ಸಿಡಿಯಾದ
ಕಡಿಗೊಂದೇ ಕಾಳು ಸಿಡಿಯಾದ ಅಸೆಗಾಳ
ಕಡುಜಾಣೆ ಸಿರಿಯಮ್ಮ ಬರೆದಾಳೆ
ಉದ್ದಿನಕಾಳಸೆಯ ಬುದ್ದಿವಂತೆ ನೀಬರೆಯೆ
ಮಗ್ಗುಲಿಗೊಂದು ಕಾಲು ಸಿಡಿಯಾದ
ಮಗ್ಗುಲಿಗೊಂದು ಕಾಳು ಸಿಡಿಯಾದ ಅಸೆಗಳ
ಬುದ್ದಿವಂತೆ ಈರಮ್ಮ ಬರೆದಾಳೆ
ಅಕ್ಕಿಯಸೆಬರೆದು ಪಕ್ಸಿ ಪಾತುರಲಾಡಿ
ಉತ್ತಾದನಾಗಕತೆಯೇಳಿ
ಉತ್ತಾದನಾಗಕತೆಯೇಳಿ ಈವಸೆಯ
ಮತ್ಯಾವಜಾಣೆ ಬರೆದಾಳು
ಜ್ವಾಳಾದಸೆಬರೆದು ಕೋಗುಲಿಪಾತರಲಾಡಿ
ಕಾಳಿಂಗನಾಗ ಕತೆಯೇಳಿ
ಕಾಳಿಂಗನಾಗ ಕತೆಯೇಳಿ ಈವಸೆಯ
ಈಗ್ಯಾವ ಜಾಣೆ ಬರೆದೋಳು
ಅಸ್ತಕಡಗವನಾರಿ ಅತ್ಯಾಳಸೆಯ ಜಗುಲಿ
ಕಸ್ತೂರಿ ರಾಜುಣಕೆ ತಲೆಬಾಗಿ
ಕಸ್ತೂರಿ ರಾಜುಣಕೆ ತಲೆಬಾಗಿ ಗಂಡನಂಬ
ವಪ್ಪಕಿಟ್ಟವಳೆ ಕೊನೆ ಮುಸುಗು
ಕೀಲು ಕಡಗದ ನಾರಿ ಏರ್ಯಾಳಸೆಯ ಜಗುಲಿ
ಜೀರಿಗೆ ರಾಜುಣಕೆ ತಲೆಬಾಗಿ
ಜೀರಿಗೆ ರಾಜುಣಕೆ ತಲೆಬಾಗಿ ಗಂಡನಂಬ
ವೋವಾಕಿಟ್ಟವಳೆ ಕೊನೆಮುಸುಗು
ಕಂಬ ಮರೆಮರೆಯ ಕುಂಬಾವ ಮರೆ ಮರೆಯೆ
ನಂದಾದೀವಿಗೆ ಮರೆಮಾಡಿ
ನಂದಾದೀವಿಗೆ ಮರೆಮಾಡಿ ನಲುದಾಡೋಳ
ನೆಂಬೂಸಿ ಅಸೆಗೆ ಕರತನ್ನಿ
ಬಾಗಿಲು ಮರೆಮರೆಯೆ ಬೋದಿಗೆ ಮರೆಮರೆಯೆ
ಪ್ರಾಣದೀವೀಗೆ ಮರೆಮರೆಯೆ
ಪ್ರಾಣದೀವೀಗೆ ಮರೆಮರೆಯೆ ನಲುದಾಡೋಳ
ಬಾವುಸಿ ಅಸೆಗೆ ಕರತನ್ನಿ
ಅತ್ಲಿಂದ ಕರೆತನ್ನಿ ಅಕ್ಕಿವೊಂಬಾಳೀಯ
ವೊತ್ತೋಳು ಮೂರು ಜಡಿಯೋಳು
ವೊತ್ತೋಳು ಮೂರು ಜಡಿಯೋಳು ಕಂದಯ್ಯಾನ
ಮುತ್ತೈದೇರಸೆಗೆ ಕರತನ್ನಿ
ವಳಗಲಿಂದ ಕರೆತನ್ನಿ ವೊಳೆವ ವೊಂಬಾಳೀಯ
ಸುಳಿಮಲ್ಲೀಗೆ ಮಾಲೆ ಮುಡಿದೋಳ
ಸುಳಿಮಲ್ಲೀಗೆ ಮಾಲೆ ಮುಡಿದೋಳ ಮದುಮಗಳ
ಸಾಲುವೈದೇರಸೆಗೆ ಕರತನ್ನಿ
ಎದ್ದಳು ಮುಡಿಬಾಗೂತ ಎದ್ದಳುಮುಡಿಕೊಂಕೂತ
ಎದ್ದಳು ಮುದ್ದುಮೊಕವ ವರೆಸೂತ
ಎದ್ದಳು ಮುದ್ದುಮೊಕವ ವರೆಸೂತ ಮದುಮಗಳು
ಎದ್ದಳರಗಿಳಿಯ ವಡಗೊಂಡು
ನಡೆದಳು ಮುಡಿಬಾಗೂತ ನಡೆದಳು ಮುಡಿಕೊಂಕೂತ
ನಡೆದಳು ಮುದ್ದುಮೊಕವರೆಸೂತ
ನಡೆದಳು ಮುದ್ದುಮೊಕವರೆಸೂತ ರತ್ನಮ್ಮ
ನಡೆದಾಳು ಅರಗಿಳಿಯಾ ವಡಗೊಂಡು
ನಡೆದೂ ಬರುವಾ ಕಂದಾನ ನಡಿಗೇನಂದಾವಂದು
ಕಡುಜಾಣೆ ಅವರ ಇರಿಯತ್ತೆ
ಕಡುಜಾಣೆ ಅವರ ಇರಿಯತ್ತೆ ಸಿರಿಯಮ್ಮ
ಮರುಗಾವನರಡ್ಯಾಳೆ ನಡುಮನಿಗೆ
ಎದ್ದುಬರುವೋ ಕಂದಾನ ಎಜ್ಜೆ ನಂದಾವೆಂದು
ಬುದ್ದಿವಂತೆ ಅವರ ಇರಿಯತ್ತೆ
ಬುದ್ದಿವಂತೆ ಅವರ ಇರಿಯತ್ತೆ ತಿಪ್ಪಮ್ಮ
ಮೊಗ್ಗು ಅರಡ್ಯಾಳೆ ನೆಡುಮನೆಗೆ
ಸಣ್ಣ ಸಣ್ಣ ಪಾದಾದ ಸಣ್ಣೋಳೆ ರತ್ನಮ್ಮ
ಅವರಣ್ಣನ ತೊಡಿಯಿಂದ ಇಳುದಾಳೆ
ಅವರಣ್ಣನ ತೊಡಿಯಿಂದ ಇಳುದಾಳೆ ಬರುವೋಳು
ಮೋರೆ ಪುಣ್ಣಿಮೆ ಚಂದ್ರುನ ಕಳೆಯಾವೆ
ಚಿಕ್ಕೆಚಂದ್ರಮ ವುಟ್ಟಿಬರುವುದನೋಡೆ
ಅಟ್ಟಿಯಾಕ ಕುಂಕುಮದ ಎಸೆದಂಗೆ
ಅಟ್ಟಿಯಾಕ ಕುಂಕುಮದ ಎಸೆದಂಗೆ ಅಸೆಯಮ್ಯಾಲೇ
ವುಟ್ಟಿದಂಗವಳೆ ಮದುಮಗಳು
ಸೂರಿದ ಚಂದ್ರಮ ಮೂಡಿಬರುವುದ ನೋಡಿ
ವೋಣ್ಯಾಕ ಕುಂಕುಮವೆಸೆದಂಗ
ವೋಣ್ಯಾಕ ಕುಂಕುಮವೆಸೆದಂಗ ಅಸೆಮ್ಯಾಲೆ
ಮೂಡಿಬಂದ ಎಳೆ ಮದುಮಗಳು
ನಿಂಬೆ ವನದಾಗ ಚಂದುರನ ರತಿಯಾಗ
ಚೆಂಡನಾಡುತಲಿ ಬರಲಿಲ್ಲ
ಚೆಂಡನಾಡುತಲಿ ಬರಲಿಲ್ಲ ರತ್ನಮ್ಮಾನ
ತಂಗಿವೋಗಿ ಕರೆತಾರೆ
ಬಾಳೇ ವನದಾಗ ಚಂದುರನ ರತಿಯಾಗ
ಚೆಂಡನಾಡುತಲಿ ಬರಲಿಲ್ಲ
ಚೆಂಡನಾಡುತಲಿ ಬರಲಿಲ್ಲ ರತ್ನಮ್ಮಾನ
ತಂಗಿವೋಗಿ ಕರೆತಾರೆ
ಬಾಳೇ ವನದಾಗೆ ಸೂರಿದನ ರತಿಯಾಗೆ
ದಾಯವಾಡುತಲಿ ಬರಲಲ್ಲೆ
ದಾಯವಾಡುತಲಿ ಬರಲಲ್ಲೆ ರತ್ನಮ್ಮಾನ
ತಾಯೆ ನೀನೋಗಿ ಕರೆತಾರೆ
ಅಕ್ಕಸತಿ ಇಡುವ ಅವರಕ್ಕಯ್ನ ಕೈಬೆರಳು
ಮುಕ್ಕಣ್ಣ ರಾಯರ ಎಲೆದೋಟಾ
ಮುಕ್ಕಣ್ಣ ರಾಯರ ಎಲೆದೋಟಾದೊಳಗಾಳ
ಅಕ್ಕವೊಂಬಾಳೆ ಮದುಮಗಳು
ಅರಸಿನೆಣ್ಣೆ ಆಕ ಅರಸಿ ನಿನಕೈ ಬೆರಳು
ನರಸಿಂಗರಾಯರ ಎಲೆದೋಟ
ನರಸಿಂಗರಾಯರ ಎಲೆದೋಟದೊಳಗಾಳ
ಅಕ್ಕಿವೊಂಬಾಳೆ ಮದುಮಗಳು
ಅರಸಿನೆಣ್ಣೆ ಆಕ ಅರಸಿ ನಿನಕೈ ಬೆರಳು
ನರಸಿಂಗರಾಯರ ಎಲೆದೋಟ
ನರಸಿಂಗರಾಯರ ಎಲೆದೋಟ ಒಳಗಾಳ
ಅಕ್ಕಿವೊಂಬಾಳೆ ಮದುಮಗಳು
ಗಂದಾವ ಇಡುವಂತ ತಂಗ್ಯಮ್ನ ಕೈಬೆರಳು
ನಿಂಗಣ್ಣ ರಾಯರ ಎಲೆದೋಟ
ನಿಂಗಣ್ಣ ರಾಯರ ಎಲೆದೋಟ ವಳಗಾಳ
ತೆಂಗು ವಂಬಾಳೆ ಮದುಮಗಳು
ಭಾಗ ೬
ಅಕ್ಕಕ್ಕಿ ಕರಿಯಕ್ಕಿ ಬಿಳಿಯಕ್ಕಿ
ಅಕ್ಕಿಯನ್ನ ತೊಳೆದ ತಿಳಿನೀರು
ಅಕ್ಕಿಯನ್ನ ತೊಳೆದ ತಿಳಿನೀರು ಕುಡಿಯಲು ಬಂದು
ಪಕ್ಸಿಯೇಳ್ಯಾವೆ ಸಕುನಾವ
ಪಕ್ಸೀಯ ಸಕುನ ಮತ್ತೆ ಇರಿಯರು ಕೇಳಿ
ಪಕ್ಸೀಯ ಸಕುನ ಬಲುಸಕುನ
ಪಕ್ಸೀಯ ಸಕುನ ಬಲುಸಕುನ ರತ್ನಮ್ಮ ನಿನಗೆ
ಮಕ್ಕಳಾಗಲಿ ಮನೆ ತುಂಬ
ಎಳ್ಳೆಳ್ಳು ಕರಿಯೆಳ್ಳು ಎಳ್ಳೆಳ್ಳು ಬಿಳಿಯೆಳ್ಳು
ಎಳ್ಳುನ್ನ ತೊಳೆದ ತಿಳಿನೀರು
ಎಳ್ಳನ್ನು ತೊಳೆದ ತಿಳಿನೀರು ಕುಡಿಯಲು ಬಂದು
ಅಲ್ಲಿಯೇಳ್ಯಾವಲ್ಲ ಸಕುನಾವ
ಅಲ್ಲೀಯ ಸಕುನಬಲ್ಲ ಇರಿಯರು ಕೇಳಿ
ಅಲ್ಲೀಯ ಸಕುನಬಲುಸಕುನ
ಅಲ್ಲೀಯ ಸಕುನಬಲುಸಕುನ ರತ್ನಮ್ಮ
ನಿಂಗೆ ಬಾಲಾರಾಗದೆ ಮನೆತುಂಬ
ಆಲುಕುಡಿಯಾದೆ ಬಾಲತಮ್ಮಾನೆ ಕಂಡು
ಪಾಲೆಬೆಣ್ಣೆಯ ಮಾಡುಪೋರಿ
ಆಲುಗಳಿಲ್ಲದೆ ಅರಳಿತು ಅಸುಮಗ
ಬಾಲೇರ ಸೊಗಸು ಒಲುವ ಕೃಷ್ಣಯ್ಯಗೆ
ಬಾಲೇರ ಸೊಗಸ ಒಲುವ ರಂಗಯ್ಯಗೆ
ನೀಲದಾರುತಿಯ ಬೆಳಗೀರಿ ಸೋಬಾನವೇ
ಮಾತು ಅರಿಯಾದೆ ಬಾಲ ತಮ್ಮಾನೆ ಕಂಡು
ಸೋತು ಕಾಳಗವ ಮಾಡುಪೋರಿ
ಗಾತುಕರಿವರು ನುಡಿಯದೆ ತೊಟ್ಟಿಲ
ಈತರದಿಂದ ಇರುವ ಕೃಷ್ಣಯ್ಯಗೆ
ಮಾತನದಾರುತಿಯ ಬೆಳಗೀರೆ |ಸೋಬಾನವೇ|
ನುಡಿಯಾಲರಿಯಾದೆ ಬಾಲ ತಮ್ಮಾನೆ ಕಂಡು
ತಡೆದು ಕಾಳುಗವ ಮಾಡುಪೋರಿ
ತೊಡರಿದ ಮೊಲಿಗಳು ಉಣ್ಣದೆ ಅಸುಮಗ
ಮಾಡಿದರೆ ಸೊಗಸು ಒಲುವ ಕೃಷ್ಣಯ್ಯಗ
ಬೇಡಗೀನಾರುತಿಯ ಬೆಳುಗೀರೆ |ಸೋಬಾನವೇ|
ಅಂದಾಕೆಂದಾನೆ ಮಾಯಕಾರ
ಮಾಯಕಾರ ನಿಂದು ಬಂದು ಕೇಳುವೋಬಲ್ಲಾರು
ಎಂದೆಂದಿಗೂ ಮಲ ಮಂಜರದೊಳಗೆ
ನಂದನ ಪಿಳ್ಳೆಯೆಂದಿರಿಯ ಕೃಷ್ಣಯ್ಯಗೆ
ಮಂಗಳಾರುತಿಯ ಬೆಳುಗೀರಿ |ಸೋಬಾನವೇ|
ಸುತ್ತಾಕಟ್ಟೀರಿ ಮಾರ್ಗವ ಅತ್ತೀಯ ಮರನಕಿತ್ತು
ಕೇಳೆವಾವೆ ಬಲ್ಲಾರು ಮತ್ತೆ ಕಾಳಿಂಗನ ಪಣಿವಳೆ
ಪಿಡಿದು ಬಕ್ತರ ಮನದೊಳಗಿರುವು
ಕೃಷ್ಣಯ್ಯಗ ಮುತ್ತೀನಾರುತಿ ಬೆಳಗೀರೆ |ಸೋಬಾನವೇ|
Leave A Comment