ಆರತಿ ಬೆಳಗುವ ಪದ್ಯಗಳು

ಭಾಗ
ಚಪ್ಪರದಸೆ ಪದ್ಯಗಳು

ಚಪ್ಪರಕೋಗೋರು ವಪ್ಪಾವುಳ್ಳಾಳುಗಳು
ಚಿಪ್ಪುಗೊಡಲಿ ಎಗಲಮ್ಯಾಲೆ
ಚಿಪ್ಪುಗೊಡಲಿ ಎಗಲಮ್ಯಾಲೆ ಕರಿಯಣ್ಣ
ವಪ್ಪಾವುಳ್ಳಾಳ ಕಳಿವ್ಯಾನೆ

ಅಂದರಕೋಗೋರು ಅಂದವುಳ್ಳಣ್ಣಗಳು
ಗಂಡುಗೊಡಲಿ ಅವರ ಎಗಲಮ್ಯಾಲೆ
ಗಂಡುಗೊಡಲಿ ಅವರ ಎಗಲಮ್ಯಾಲೆ ಕರಿಯಣ್ಣ
ಅಂದಾವುಳ್ಳಾಳ ಕಳಿವ್ಯಾನೆ

ಅಪ್ಪ ಮಕ್ಕಾಳು ವೊಕ್ಕಾರಂಬುದ ಕೇಳಿ
ಅಟ್ಟೀಯಮರವೇ ನಡುಗ್ಯಾವೆ
ಅಟ್ಟೀಯಮರವೇ ನಡುಗ್ಯಾವೆ ಅತ್ತಿಮಣೆ
ಮತ್ತಂಜಿ ಮಳೆಯ ಇಳುದಾವೆ

ರಾಮಲಕ್ಷ್ಮಣವೋದಾರಂಬುದ ಕೇಳಿ
ಆಲಾದ ಮರವೆ ನೆಡುಗ್ಯಾವೆ
ಆಲಾದ ಮರವೆ ನೆಡುಗ್ಯಾವೆ ಆಲದಮಣೆ
ತಾವಂಜಿ ಮಳೆಯ ಇಳುದಾವೆ

ಅಪ್ಪ ಮಕ್ಕಾಳಿಬ್ಬಾರು ತುಪ್ಪ ಬೋನವುಂಡು
ವುಕ್ಕಿನುಳಿಬಳಸಿ ಎಗಲಿಟ್ಟು
ವುಕ್ಕೀನುಳಿಬಳಸಿ ಎಗಲಿಟ್ಟು ಕಾಳಮ್ಮಾನ
ಪುತ್ರ ಅತ್ತಿಮಣೆಗೆ ನಡೆದಾನೆ

ಅಣ್ಣತಮ್ಮಗಳಿಬ್ಬಾರು ಎಣ್ಣೆ ವೋಗಾರುಂಡು
ವೂವೀನುಳಿಬಳಸಿ ಎಗಲಿಟ್ಟು
ವೂವೀನುಳಿಬಳಸಿ ಎಗಲಿಟ್ಟು ಈರಮ್ಮಾನ
ಜಾಲತ್ತಿಮಣೆಗೆ ನಡೆದಾನೆ

ಅತ್ತಿಮಣೆಗೋಗಿ ಅತ್ತೆಂಟು ದಿನಾವಾಯ್ತು
ಕೆತ್ತಾನೆ ಬಡಗಿ ಸವೆಯಾನೆ
ಕೆತ್ತಾನೆ ಬಡಗಿ ಸವೆಯಾನೆ ಬಡಗೇರಣ್ಣ
ಕೆತ್ತು ತಲೆಮುತ್ತ ಸರುದಾನೆ

ಆಲಾದ ಮಣೆಗೋಗಿ ಆರೆಂಟುದಿನವಾಯ್ತು
ಮಾಡಾನೆ ಬಡಗಿ ಸವಿಯಾನೆ
ಮಾಡಾನೆ ಬಡಗಿ ಸವಿಯಾನೆ ಬಡಿಗೇರಣ್ಣ
ಮಾಡುತಲಿಮುತ್ತ ಸರುದಾನೆ

ಆರಣೆಗೋಗೊರನ ಅರಿದರನ ಕರಿಸಣ್ಣ
ಅರಿವಾಣಕಕ್ಕಿ ಅಳೆಸಣ್ಣ
ಅರಿವಾಣಕಕ್ಕಿ ಅಳೆಸಣ್ಣ ಆಚೆಕೇರಿ
ಅರಿದೇರೈವರನ ಕರಿಸಣ್ಣ

ಕುಂಬಕೋಗೋರನ ರಂಬೇರನ ಕರೆಸಣ್ಣ
ಕಂಡುಗದಕ್ಕಿ ಅಳೆಸಣ್ಣ
ಕಂಡುಗದಕ್ಕಿ ಅಳೆಸಣ್ಣ ಆಚೆಕೇರಿ
ರೆಂಬೇರೈವರನ ಕರಿಸಣ್ಣ

ಅಟ್ಟಿಗಿಡಸ್ಯಾರೆ ಬಟ್ಟಮುತ್ತಿನ ತಳಿಯ
ಬಟ್ಟಮುತ್ತಿನಲವರು ಚೆದುರ್ಯಾರು
ಬಟ್ಟಮುತ್ತಿನಲವರು ಚೆದುರ್ಯಾರು ಸ್ವಾಮಿನೋರು
ಬಟ್ಟಮುತ್ತಿನ ತಳಿಯ ಇಡಿಸ್ಯಾರೆ

ಓಣ್ಯಾಗ ಇಡಿಸ್ಯಾರೆ ಮಾನಮುತ್ತಿನ ತಳಿಯ
ಮಾನ ಮುತ್ತಿನಲವರು ಚೆದುರ್ಯಾರು
ಮಾನ ಮುತ್ತಿನಲವರು ಚೆದುರ್ಯಾರು ಸ್ವಾಮಿನೋರು
ಮನಮುತ್ತಿನ ತಳಿಗೆ ಇಡಿಸ್ಯಾರೆ

ಅಂದವಾದ ತಳಿನಮಗೆ ಚಂದವಾದ ತಳಿ ನಮಗೆ
ಅಂದಚೆಂದವಾದಂತ ತಳಿನಮಗೆ
ಅಂದಚೆಂದವಾದಂತ ತಳಿನಮಗೆ ಸ್ವಾಮಿನೋರ
ಚೆಂದುರನ ತಳಿ ಇಡಿಸ್ಯಾರೆ

ಆಯವಾದ ತಳಿ ನಮಗೆ ಸ್ರಯವಾದ ತಳಿನಮಗೆ
ಆಯಸ್ರಯವಾದ ತಳಿನಮಗೆ
ಆಯಸ್ರಯವಾದ ತಳಿನಮಗೆ ಸ್ವಾಮನೋರ
ಸೂರದನ ತಳಿ ಇಡಿಸ್ಯಾರೆ

ಅಸೆಯಚ್ಚೀರಮ್ಮ ಕುಸಿಲಿಸಿರೆಬೂವೀಯ
ವೊಸಮುತ್ತಿನ ಸೆಳೆಯ ಕೊಡಿರಮ್ಮ
ವೊಸಮುತ್ತಿನ ಸೆಳೆಯ ಕೊಡಿರಮ್ಮ ನಮ್ಮನಿಯ
ಚೆಲುವೆ ಕುಂಡುರುವ ಜಗುಲೀಗೆ

ಮಣೆಯಾಕೀರಮ್ಮ ಮಣ್ಣಿಸೆರೆ ಬೂಮೀಯ
ಸಣ್ಣಮುತ್ತಿನ ಸೆಳೆಯ ಕೊಡಿರಮ್ಮ
ಸಣ್ಣಮುತ್ತಿನ ಸೆಳೆಯ ಕೊಡಿರಮ್ಮ ನಮ್ಮನಿಯ
ಚೆಲುವೆ ಕುಂಡುರುವ ಜಗುಲೀಗೆ

ಬೇವಿನವನದಾಗೆ ಚೆಂದುರನತಿಯಾಗ
ಚೆಂಡನಾಡುತಲಿ ಬರುನಲ್ಲೆ
ಚೆಂಡನಾಡುತಲಿ ಬರುನಲ್ಲೆ ರಾಜಣ್ಣಾನ
ತಂಗ್ಯಮ್ಮನೋಗಿ ಕರೆತಾರೆ

ಬಾಳೇವನದಾಗೆ ಸೂರಿದನ ರವೆಯಾಗ
ದಾಯಾವಾಡುತಲಿ ಬರನಲ್ಲೆ
ದಾಯಾವಾಡುತಲಿ ಬರನಲ್ಲೆ ರಾಜಣ್ಣಾನ
ತಾಯಮ್ನ ನೀನೋಗಿ ಕರೆತಾರೆ

ನಡದಸಿಗೆ ಬಾರೋ ಬೆಡಗಿನಾಣಿ ಕಂದ
ಕಡವಿಗೆ ನೊರೆಲೆಯಮೆಲುವುತ
ಬೆಡಗಿನ ಮೊಮ್ಮಗನೆ ಅಸೆಗೇಳೊ

ಎದ್ದಸಿಗೆ ಬಾರೋ ಮುದ್ದು ರಾಣಿಕಂದ
ಎಜ್ಜೆಗೆ ನೂರೆಲೆಯ ಮೆಲುವೂತ
ಎಜ್ಜಿಗೆ ನೂರೆಲೆಯ ಮೆಲುವೂತ ಕಾಡಮ್ಮಾನ
ಮುದ್ದೀನ ಮಗನೆ ಅಸೆಗೇಳೋ

ಸಾದಾವ ಇಡುವ ತಾಯಮ್ಮ ನಂದಾಲ
ಮ್ಯಾಲೆ ಗಾವುದಲಿ ಬರುತಾವೆ
ಮ್ಯಾಲೆ ಗಾವುದಲಿ ಬರುತಾವೆ ರಾಜಣ್ಣಾನ
ಸಾದಾವನಿಡುವ ಬಣತೇರು

ಅಕ್ಕುಸತೆ ಇಡುವೋರು ಅಕ್ಕಯ್ಯನಂದಾಲ
ಮತ್ತೆಗಾವುದಲಿ ಬರುತಾವೆ
ಮತ್ತೆಗಾವುದಲಿ ಬರುತಾವೆ ರಾಜಣ್ಣಾಗೆ
ಅಕ್ಕಸತೆನಿಡುವ ಬಣತೇರು

ಗಂದಾವನಿಡುವ ತಂಗ್ಯಮ್ಮನಂದಾಲ
ಮುಂದೆ ಗಾವುದಲಿ ಬರುತಾವೆ
ಮುಂದೆ ಗಾವುದಲಿ ಬರುತಾವೆ ರಾಜಣ್ಣಾಗೆ
ಗಂದಾವನಿಡುವ ಬಣತೇರು

ಆಚೆಗೆ ತೊಳೆದಕ್ಕಿ ಈಚೆಗೆ ಬಿದ್ದಾವಲ್ಲೋ
ವೇಸವಾಳೋರ ಮಗನೀಗೆ
ವೇಸವಾಳೋರ ಮಗನೀಗೆ ರಾಜಣ್ಣಾಗೆ
ಕೆಸರುಗಟ್ಟ್ಯಾವೆ ತೊಳೆದಕ್ಕೆ

ಇಂದುಕ ತೊಳೆದವಕ್ಕಿ ಮುಂದುಕ ಬಿದ್ದಾವಲ್ಲೋ
ಬೂಮಂಡ್ಲ ಆಳೋರ ಮಹನೀಗೆ
ಬೂಮಂಡ್ಲ ಆಳೋರ ಮಹನೀಗೆ ರಾಜಣ್ಣಾಗೆ
ತೊಂಡಲುಗಟ್ಟ್ಯಾವೆ ತೊಳೆದಕ್ಕಿ