ಮನೆದುಂಬಿಸುವುದು
ಇಪ್ಪತ್ತುವರುಸಾದ ತುಪ್ಪಂಡ ಕಾಲವಳಿ
ಎತ್ತಿಡಲಾರೆ ನಿಲಲಾರೆ
ಎತ್ತಿಡಲಾರೆ ನಿಲಲಾರೆ ಎನ್ನರಸಿ
ಎಸ್ಟೈತೆನಿನ್ನಾ ತವರೂರು
ನನ್ನಾ ತೌರೂರು ಇನ್ನೇನೆಳಲಿರಾಯ
ಬಾಗುಲಿಗೆ ಚಿನ್ನಾ ಬಿಗುದೈತೆ
ಬಾಗುಲಿಗೆ ಚಿನ್ನಾ ಬಿಗುದೈತೆ ದೇವರಕ್ವಾಣೆ
ತೋರೇನು ನಡಿ ಮುಂದೆ
ಆರು ವರುಸಾದ ಆಲುಂಡು ಕಾಲುವಳಿ
ಎರಿ ಇಡಲಾರೆ ನಿಲಲಾರೆ
ಎರಿ ಇಡಲಾರೆ ನಿಲಲಾರೆ ಎನ್ನರಸಿ
ಎಲ್ಲೈತೆನಿನ್ನಾ ತವರೂರು
ನನ್ನಾತವರೂರು ಇನ್ನೇನೇಳಲಿರಾಯ
ಬಾಗಿಲಿಗೆ ಬೆಳ್ಳಿ ಬಿಗಿದೈತೆ
ಬಾಗಿಲಿಗೆ ಬೆಳ್ಳಿ ಬಿಗಿದೈತೆ ದೇವರಕ್ವಾಣೆ
ತೋರೇನು ರಾಯನಡಿಮುಂದೆ
ಅಲ್ಲಲ್ಲಿಗಂದಾಲ ಅಲ್ಲಲ್ಲಿಗೆ ಚೆಪ್ಪಾರ
ಮೆಲ್ಲಕ ನಮ್ಮಳಿಯ ಬರಲಂದು
ಮೆಲ್ಲಕ ನಮ್ಮಳಿಯ ಬರಲಂದು ಚಿನ್ನಾದ
ಪಲ್ಲಕ್ಕಿ ಚತ್ರಿಯನಿಡಿಸ್ಯಾರೆ
ಅಂತಂತರಕಂದರ ಅಂತಂತರಕ ಚಪ್ಪರ
ನಿಂತುತಮ್ಮಳಿಯ ಬರಲಂದು
ನಿಂತುತಮ್ಮಳಿಯ ಬರಲಂದು ಚಿನ್ನಾದ
ಪಂತದ ಚತ್ರಿಕೆ ಇಡಿಸ್ಯಾರೆ
ಕಂದ ನಿಮ್ಮತ್ಯೋರು ಇಂದ್ರ ಕನ್ನಿಕೇರು
ನಿಂಬೀಯ ವನವ ಮರೆಮಾಡಿ
ನಿಂಬೀಯ ವನವ ಮರೆಮಾಡಿ ನೋಡ್ಯಾರೆ
ಅಂದಲದಾಗಬರುವೋ ಅಳಿಯಾನ
ಬಾಲನಿಮ್ಮತ್ಯೋರು ನಾಗಕನ್ನಿಕೆಯೋರು
ಬಾಳೀಯವನವ ಮರೆಮಾಡಿ
ಬಾಳೀಯವನವ ಮರೆಮಾಡಿ ನೋಡ್ಯಾರೆ
ಪಾಳುಕಿಯಾಗ ಬರುವಾ ಅಳಿಯಾನ
ಚಿಕ್ಕತ್ತೆ ನೋಡೆ ಚುಕ್ಕೆ ಚಂದ್ರಾಮನ
ಮುತ್ತೈದೆ ನೋಡೆ ಅಳಿಯಾನ
ಮುತ್ತೈದೆ ನೋಡೆ ಅಳಿಯಾನ ಮೇಲುಪ್ಪರಿಗೆ
ಸುತ್ತರಿಸಿ ಮನೆಗೆ ಬರುವಾಗ
ಇರಿಯತ್ತೆ ನೋಡೆ ಸೂರಿದ ಚಂದ್ರಮನ
ಸಲುವೈದೆ ನೋಡೆ ಅಳಿಯಾನ
ಸಲುವೈದೆ ನೋಡೆ ಅಳಿಯಾನ ಮೇಲುಪ್ಪರಿಗೆ
ಸುತ್ತರಿಸಿ ಮನೆಗೆ ಬರುವಾಗ
ಕಡಲೇಕಾಳಂಗೆ ಕಡೆದಮುತ್ತುಕಟ್ಟಿ
ಕಡುಜ್ಯಾಣೆ ತನ್ನ ಅಳಿಯಾನ
ಕಡುಜ್ಯಾಣೆ ತನ್ನ ಅಳಿಯಾನ ನೋಡೆನಂದು
ನೆಡುವಾಕ ಪಂಜು ಇಡಿಸ್ಯಾನೆ
ಉದ್ದೀನಕಾಳಂಗೆ ದೊಡ್ಡಮುತ್ತುಕಟ್ಟಿ
ಬುದ್ದಿವಂತನನ್ನೆ ಅಳಿಯಾನ
ಬುದ್ದಿವಂತನನ್ನೆ ಅಳಿಯಾನ ನೋಡನಂದು
ಉದ್ದಾಕಪಂಜು ಇಡಿಸ್ಯಾಳೆ
ವಂಟಿಮ್ಯಾಲೆ ಮದುಮಗ ಅಂಚೀಲಿಕೈದೀವಿಗೆ
ನಿಂತುನೋಡ್ಯಾರೆ ಅಳಿಯಾನ
ನಿಂತುನೋಡ್ಯಾರೆ ಅಳಿಯಾನ ಚೆಲುವಿರಿಕೆ
ಏನು ಏಳ್ಯಾನೆ ನೆಗಿಯಣ್ಣಿ
ಆನೆಮ್ಯಾಲೆ ಮದುಮಗ ವಾರೇಲಿ ಕೈ ದೀವಟಿಗೆ
ಅಂತುನೋಡಾನೆ ಅಳಿಯಾನೆ
ಅಂತುನೋಡಾನೆ ಅಳಿಯಾನೆ ಚೆಲುವುರಿಕೆ
ಎಂತು ಏಳಾಲೆ ನೆಗಿಯೆಣ್ಣೆ
ನಿಸ್ತ್ರೆ ನಿನಮನೆಯ ಉತ್ತರಾಸದ ಮ್ಯಾಲೆ
ಮುಕ್ಕಣ್ಣನೆಂಬೋ ಗಿಳಿಕುಂತು
ಮುಕ್ಕಣ್ಣನೆಂಬೋ ಗಿಳಿಕುಂತು ಏಳ್ಯಾವೆ
ಅಕ್ಕಬಾವಾಗೆ ವರನಂದು
ಅಕ್ಕಬಾವಾಗೆ ವರನಂದು ಆ ಗಿಳಿಗೋಳು
ರೆಕ್ಕೆವೊಯ್ ವೊಯ್ದುನಗುತಾವೆ
ನಾರಿ ನಿನಮನೆಯ ದಾರಿವಂದಲದಮ್ಯಾಲೆ
ರೇವಣ್ಣನೆಂಬೋ ಗಿಳಿಕುಂತು
ರೇವಣ್ಣನೆಂಬೋ ಗಿಳಿಕುಂತು ಏಳ್ಯಾವೆ
ವೋಗಿರಿಬಾವ ವಳಿಯಾಕಂದು
ವೋಗಿರಿಬಾವ ವಳಿಯಾಕಂದು ಅಂದಿನ್ನ
ಆ ಗಿಳಿ ತೊಳೆ ವೊಯ್ ವೊಯ್ದು ನಗುತಾವೆ
ಮನ್ನೇರ ಮಗಬರಲಿ ಇನ್ನು ಕ್ವಾಣೆ ವೊಗಲಿ
ವೊನ್ನಂತ ಗೌಳಿನುಡಿಯಾಲಿ
ವೊನ್ನಂತ ಗೌಳಿನುಡಿಯಾಲಿ ಈ ಮನಿಗೆ
ವೊನ್ನು ಎಚ್ಚಾಲಿ ದಿನದಿನಕ
ಸೆಟ್ಟ್ಯೋರ ಮಗ ಬರಲಿ ಮತ್ತೆ ಕ್ವಾಣೆವೊಗಲಿ
ಅಪ್ಪಂತ ಗೌಳಿನುಡಿಯಾಲಿ
ಅಪ್ಪಂತ ಗೌಳಿನುಡಿಯಾಲಿ ಈಮನಿಗೆ
ರೊಕ್ಕ ಎಚ್ಚಾಲಿ ದಿನದಿನಕ
ನಿಂಬೀಯ ಅಣ್ಣ ಎಂಬತ್ತೊಂದು ಪಲವೃಕ್ಸ
ರೆಂಬೆ ತನ್ನೊಡಲ ಜಗವೂತ
ರೆಂಬೆ ತನ್ನೊಡಲ ಜಗವೂತ ದೇವರಗುಡಿಗೆ
ಬಂದವಳೆಮುತ್ತೈದೆ ತನಬೇಡ
ಬಾಳಿಯ ಅಣ್ಣ ನಲವತ್ತೊಂದು ಪಲವೃಕ್ಸ
ನಾರಿತನ್ನೊಡಲ ಜಗವೂತ
ನಾರಿ ತನ್ನೊಡಲ ಜಗವೂತ ದೇವುರಗುಡಿಗೆ
ವೋದಾಳು ಮುತ್ತೈದೆ ತನಬೇಡ
ಉತ್ತುತ್ತಿ ಅಣ್ಣು ಇಪ್ಪತ್ತೊಂದು ಪಲವೃಕ್ಸ
ನಿಸ್ತ್ರೆ ತನ್ನೊಡಲ ಜಗುವೂತ
ನಿಸ್ತ್ರೆ ತನ್ನೊಡಲ ಜಗುವೂತ ದೇವರಗುಡಿಗೆ
ವೊಕ್ಕಾಳು ಮುತ್ತೈದೆ ತನಬೇಡ
ಒಂಟೀಯ ಏರಿ ಕೆಂಚನ ಗುಡಿಗೆ ಬಂದ
ಒಂಟೀಯ ಇಳಿದೇ ಸರಣಂದ
ಒಂಟೀಯ ಇಳಿದೇ ಸರಣಂದು ಬೇಡಿಕಂಡ
ಕೆಂಚೀಗೆ ಮುತ್ತೈದೆತನಗಾಳ
ಆನೀಯ ಏರಿ ದೇವರ ಗುಡಿಗೆ ಬಂದ
ಆಣೀಯ ಇಳಿದು ಸರಣಂದ
ಆಣೀಯ ಇಳಿದು ಸರಣಂದ ಬೇಡಿಕಂಡ
ನಾರೀಗೆ ಮುತ್ತೈದೆ ತನಗಾಳ
ಆ ದೇವರು ಕಂಡಲ್ಲಿ ಬಾಯುಡಿಕೆ ಉಗುಳಣ್ಣ
ಮ್ಯಾಗಾಳ ಪದುವೆ ಸಡುಲೀಸೋ
ಮ್ಯಾಗಾಳ ಪದುವೆ ಸಡುಲೀಸೋ ನಿನಬಾಗಾದ
ರೇವಣ್ಣಗೊಂದು ಸರಣನ್ನು
ಲಿಂಗಣ್ಣ ಕಂಡಲ್ಲಿ ತುಂಬುಲುವ ಉಗುಳಣ್ಣ
ಮುಂಗಾಲು ಪದುಮೆ ಸುಡುಲೀಸೊ
ಮುಂಗಾಲು ಪದುಮೆ ಸುಡುಲೀಸೊ ನಿನಬಾಗಾದ
ರೇವಣ್ಣಗೊಂದು ಸರಣನ್ನು
ಲಿಂಗನ ಕಂಡಲ್ಲಿ ತುಂಬುಲುವ ಉಗುಳಣ್ಣ
ಮುಂಗಾಲು ಪದುಮೆ ಸಡುಲೀಸೊ
ಮುಂಗಾಲು ಪದುಮೆ ಸಡುಲೀಸೊ ನಿನಬಾಗಾದ
ನಿಂಗಣ್ಣಗೊಂದು ಸರಣನ್ನು
ನಿಂಗಣ್ಣಗೊಂದು ಸರಣಂದು ಬೇಡಿಕಂಡ
ರೆಂಬೆಗೆ ಮುತ್ತೈದೆ ತನಗಾಳ
ಗಂಡಿನ ಚಪ್ಪರಕ್ಕೆ ದಿಬ್ಬಣ ಬರುವುದು
ವೊತ್ತು ಆದಾವು ಅತ್ತೆ ನಿಮನಾಡೀಗೆ
ಅತ್ತೆಮ್ಮ ಬೇಡು ಬಳುವಳಿ
ಅತ್ತೆಮ್ಮ ಬೇಡು ಬಳುವಳಿ ರತ್ನಮ್ಮ ನಿನ್ನ
ಜೊತ್ತೀಲಿ ಬೇಡಗೆಳತೇರ
ಜೊತ್ತೀಲಿ ಬೇಡಗೆಳತೇರ ನಿಮ್ಮಪ್ಪಗಳ
ಪಟ್ಟದರಗಿಳಿಯ ವಡಗೊಳ್ಳೆ
ವ್ಯಾಳ್ಯಾವಾದಾವು ಏಳೆನಿಮನಾಡೀಗೆ
ಏಳೆಮ್ಮ ಬೇಡೆ ಬಳುವಳಿ
ಏಳೆಮ್ಮ ಬೇಡೆ ಬಳುವಳಿ ನಿಮ್ಮಪ್ಪಗಳ
ಜೋಡೀಲಿ ಬೇಡಗೆಳತೇರ
ಜೋಡೀಲಿ ಬೇಡಗೆಳತೇರ ರತ್ನಮ್ಮನೀನು
ಮೋವದರಗಿಳಿ ವಡಗೊಳ್ಳೆ
ಮುತ್ತಿವೊರವೊರಡೆ ಮುತ್ತೈದೆ ವೊರವೊರಡೆ
ಮುತ್ತೀನ ಗೌರಿ ವೊರವೊರಡೆ
ಮುತ್ತೀನ ಗೌರಿ ವೊರವೊರಡೆ ನಿಮ್ಮಪ್ಪಗಳ
ಕಟ್ಟೀದ ಕರುವ ವಡಗೊಳ್ಳೆ
ವೊನ್ನೆ ವೊರವೊರಡೆ ಚಿನ್ನಾವೆ ವೊರವೊರಡೆ
ವೊನ್ನೀನ ಗೌರಿವೊರವೊರಡೆ
ವೊನ್ನೀನ ಗೌರಿವೊರವೊರಡೆ ನಿಮಪ್ಪಗಳ
ಕಣ್ಣೀಕರುವ ವೊರವಡಕಳ್ಳೆ
ಅಟ್ಟಿ ಮುಂದಕ ಬಂದು ಅತ್ತೆ ಮಾವಕಸರಣು
ಅತ್ತೆ ಮಾವಾಕ ಇಂದಕ್ಕ ತಿರುಗಂದ
ಅತ್ತೆ ಮಾವಾಕ ಇಂದಕ್ಕ ತಿರುಗಂದ ರಾಜಣ್ಣ
ನಿಸ್ತ್ರೆ ಮುಂದಾಕ ನಡಿಯಂದ
ಊರ ಮುಂದಕ ಬಂದು ತಾಯಿತಂದೆಗೆ ಸರಣು
ತಾಯಮ್ಮ ಇಂದಾಕ ನಡಿಯೆಂದ
ತಾಯಮ್ಮ ಇಂದಾಕ ನಡಿಯೆಂದ ರಾಜಣ್ಣ
ನಾರಿ ನೀ ಮುಂದಕ ನಡಿಯೆಂದ
ನಿಂಬೇಯಣ್ಣಗೆದ್ದ ನಿಂಬೆವೂವುಗೆದ್ದ
ನಿಂಬೆವನದಾಗಳ ಗಿಳಿಗೆದ್ದಾ
ನಿಂಬೆವನದಾಗಳ ಗಿಳಿಗೆದ್ದಾ ರಾಜಣ್ಣ
ರೆಂಬೇಯಗೆದ್ದುವೊಳವೊಕ್ಕ
ಬಾಳೆಯಣ್ಣುಗೆದ್ದ ಬಾಳೇಕಾಯಿಗೆದ್ದ
ಬಾಳೆವನದಾಗಳ ಬಾಲೇಯಗೆದ್ದ
ಬಾಳೆವನದಾಗಳ ಬಾಲೇಯಗೆದ್ದ ರಾಜಣ್ಣ
ನಾರೀಯ ಗೆದ್ದು ವಳವೊಕ್ಕ
ಅತ್ತಿಮರತಂಕ ಅತ್ತಿ ಬನ್ನೀರಿ ಗೆಳತೇರ
ಅತ್ತಿ ಮರದಿಂದಕ ತಿರುಗೀರಿ
ಅತ್ತಿ ಮರದಿಂದಕ ತಿರುಗೀರಿ ಮನೆಗೋಗಿ
ಎತ್ತವ್ನ ನೀವು ಸುಮ್ಮನಿರಿಸೀರೆ
ಆಲದಮರತಂಕ ಆಡಿ ಬನ್ನೀರಿ ಗೆಳತೇರು
ಆಲದ ಮರದಿಂದಕ ತಿರುಗೀರಿ
ಆಲದ ಮರದಿಂದಕ ತಿರುಗೀರಿ ಮನೆಗೋಗಿ
ತಾಯವ್ನ ಸುಮ್ಮನಿರಿಸೀರೆ
ಬಾವಿದಡದಲ್ಲಿ ಬಾಸಿಂಗ ಸೂಡಾನೆ
ದೇಸಪತಿ ನಮ್ಮ ಗುರುವೀನ
ದೇಸಪತಿ ನಮ್ಮ ಗುರುವೀನ ಮಗನಕೂಟೆ
ಬಾಸಿಂಗ ಕೊಂಡೆ ದರಣಾಕೆ
ಗಂಗೆ ದಡದಲ್ಲಿ ತಂಡುಲವ ಸೂಡಾನೆ
ಚಂದ್ರಪತಿ ನಮ್ಮ ಗುರುವೀನ
ಚಂದ್ರಪತಿ ನಮ್ಮ ಗುರುವೀನ ಮಗನಕೂಟೆ
ತಂಡುಲವ ಕೊಂಡೆ ದರಣಾಕೆ
ಅತ್ತು ಮುತ್ತಿಟ್ಟು ಅದಿನಾರು ಭುಜವೊತ್ತಿ
ಅಕ್ಕಿಬಂದೆ ಗುಟುಕು ಕೊಡುವಂತೆ
ಅಕ್ಕಿಬಂದೆ ಗುಟುಕು ಕೊಡುವಂತೆ ಐದಾವೆ
ಪುತ್ರನ ಬಾಸಿಂಗದ ಗೊನೆಯಮ್ಯಾಲೆ
ಆರುಮುತ್ತಿಟ್ಟು ಅದಿನಾರು ಬುಜವೊತ್ತಿ
ಗಿಳಿಬಂದು ಗುಟುಕು ಕೊಡುವಂತೆ
ಗಿಳಿಬಂದು ಗುಟುಕು ಕೊಡುವಂತೆ ಐದಾವೆ
ಬಾಲನ ಬಾಸಿಂಗದ ಗೊನೆಮ್ಯಾಲೆ
ಅತ್ತಸರಣೆನ್ನಿ ಇತ್ತಸರಣೆನ್ನು
ಸುತ್ತಾಲ ದೇವುರಿಗೆ ಸರಣೆನ್ನು
ಸುತ್ತಾಲ ದೇವುರಿಗೆ ಸರಣೆನ್ನು ನಿನಬಾಗಾದ
ಮುಕ್ಕಣ್ಣಗೊಂದು ಸರಣೆನ್ನು
ಅಲ್ಲೀನೆ ಸರಣೆನ್ನೊ ಇಲ್ಲೀನೆ ಸರಣೆನ್ನೊ
ಎಲ್ಲ ದೇವುರಿಗೆ ಸರಣೆನ್ನೊ
ಎಲ್ಲ ದೇವುರಿಗೆ ಸರಣೆನ್ನೊ ನಿನಬಾಗಾದ
ಮಲ್ಲಯ್ಯಗ ಸರಣೆನ್ನೊ
ಮೊಸರು ಕಡೆಯುವುದು
ಅಟ್ಟ್ಯಾಗಿಡಿಸ್ಯಾರು ಬಟ್ಟಮುತ್ತಿನ ತಳಿಯ
ಬಟ್ಟಮುತ್ತಿನವರು ಚೆದುರ್ಯಾರು
ಬಟ್ಟಮುತ್ತಿನವರು ಚೆದುರ್ಯಾರು ಸ್ವಾಮನೋರು
ಬಟ್ಟ ಮುತ್ತಿನ ತಳಿಯ ಇಡಿಸ್ಯಾರು
ವೋಮ್ಯಾಗಿಡಿಸ್ಯಾರು ಮನಮುತ್ತಿನ ಥಳಿಯ
ಮನಮುತ್ತಿನಲವರು ಚೆದುರ್ಯಾರು
ಮನಮುತ್ತಿನಲವರು ಚೆದುರ್ಯಾರು ಸ್ವಾಮನೋರು
ಮನ ಮುತ್ತಿನ ತಳಿಯ ಇಡಿಸ್ಯಾರು
ದೇವಾರೆಗತಿಯೆಂದು ವೋದಾಳುಕಡೆಗೋಲೀಗೆ
ಬಾನಿಗಳೆಲ್ಲ ಬರಿಬೆಣ್ಣೆ
ಬಾನಿಗಳೆಲ್ಲ ಬರಿಬೆಣ್ಣೆ ಬಂಜೆಗೆರೆಯ
ಈರಣ್ಣ ಕೊಟ್ಟ ಸಿವದಾನ
ಲಿಂಗಾವೆ ಗತಿಯೆಂದು ಬಂದಾಳು ಕಡಿಗೋಲಿಗೆ
ಬಂದಲವೆಲ್ಲಿ ಬರಿಬೆಣ್ಣೆ
ಬಂದಲವೆಲ್ಲಿ ಬರಿಬೆಣ್ಣೆ ವೊನ್ನಬಂಡೆ
ಲಿಂಗಣ್ಣಕೊಟ್ಟ ಸಿವದಾನ
ಮಜ್ಜಿಗೆ ಸ್ಪಾರಿಗ್ಗೆ ಬದ್ರೆಯೋಗಿ ಸರಣೆನ್ನೆ
ದುಗ್ಗಾಳದೂಪ ನಿದಿವೊಯ್ಯೆ
ದುಗ್ಗಾಳದೂಪ ನಿದಿವೊಯ್ಯೆ ಮಾರನೋರ
ಮುದ್ದುಮಗಳೆ ಮೊಸರಕಡಿಲಾರೆ
ಆಲು ಸ್ಪಾರಿಗ್ಗೆ ನಾರಿಯೋಗಿ ಸರಣೆನ್ನೆ
ನಾಗಾಳರೂಪ ನಿದಿವೊಯ್ಯೆ
ನಾಗಾಳರೂಪ ನಿದಿವೊಯ್ಯೆ ಮಾರನೋರ
ಮರಿಮಗಳೆ ಮೊಸರ ಕಡಿಬಾರೆ
ಮುತ್ತಿನ ಸ್ಪಾರಿಗೆ ರತ್ನಾದ ಕಡಿಗೋಲು
ಚಿಕ್ಕ ಮೈದುನ ನೇದ ಉದಿನೇಣು
ಚಿಕ್ಕ ಮೈದುನ ನೇದ ಉದಿನೇಣು ತಕ್ಕಂಡು
ಸೆಟ್ಟ್ಯೋರಮಗಳು ಮೊಸರಕಡೆದವಳೆ
ರನ್ನಾದ ಸ್ಪಾರಿಗ್ಗೆ ಚಿನ್ನಾದ ಕಡೆಗೋಲು
ಸಣ್ಣ ಮೈದುನ ನೇದ ಉದಿನೇಣು
ಸಣ್ಣ ಮೈದುನ ನೇದ ಉದಿನೇಣು ತಕ್ಕಂಡು
ಮಾನ್ಯೇರ ಮಗಳು ಮೊಸರ ಕಡೆದಾಳೆ
ಕಡೆಗೋಲುಗುಣ ಕಡೆದ ಮಜ್ಜಿಗೆ ಗುಣ
ಕಡೆವೋಳು ರತ್ನಮ್ಮ ಕೈಗುಣ
ಕಡೆವೋಳು ರತ್ನಮ್ಮ ಕೈಗುಣ ಮಜ್ಜೀಗೆ
ಜಲುಮೆ ನೀರಾಗಿ ವರತಾವೆ
ಆಯಟ್ಟಿಯೋರ ಮೊಮ್ಮೊಗಳೆ ರತ್ನಮ್ಮ
ಎಮ್ಮೀಗಳೆಲ್ಲ ಕರುವೀದು
ಎಮ್ಮೀಗಳೆಲ್ಲ ಕರುವೀದು ಯರಣ್ಣಾನ
ಮರಿಮಗಳು ಮೊಸರು ಕಡೆದಾಳೆ
ಕಡೆಗೋಲುಗುಣ ಕಡೆದ ಮಜ್ಜಿಗೆ ಗುಣ
ಕಡೆವೋಳು ರತ್ನಮ್ಮ ಕೈಗುಣ
ಕಡೆವೋಳು ರತ್ನಮ್ಮ ಕೈಗುಣ ಮಜ್ಜೀಗೆ
ಜಲುಮೆ ನೀರಾಗಿ ವರತಾವೆ
ಆಯಟ್ಟಿಯೋರ ಮೊಮ್ಮೊಗಳೆ ರತ್ನಮ್ಮ
ಎಮ್ಮೀಗಳೆಲ್ಲ ಕರುನೀರು
ಎಮ್ಮೀಗಳೆಲ್ಲ ಕರುನೀರು ಯರಣ್ಣಾನ
ಮರಿಮಗಳು ಮೊಸರು ಕಡೆದಾಳೆ
ಅಕ್ಕಿಲಾಸೆವಂತೆ ರೊಕ್ಕದಲಿ ಗುಣವಂತೆ
ರೊಕ್ಕದ ಸಂಪನ್ನೆ ಗುಣರನ್ನೆ
ರೊಕ್ಕದ ಸಂಪನ್ನೆ ಗುಣರನ್ನೆ ಕೈಯ್ಯಾಗೆ
ಅತ್ತೆಮ್ಮ ಮೊಸರ ಕಡಸೇವೆ
ಆಲಿಲಾಸೆವಂತೆ ಅಣದಲಿ ಗುಣವಂತೆ
ಬಾಗ್ಯಾದ ಸಂಪನ್ನೆ ಗುಣರನ್ನೆ
ಬಾಗ್ಯಾದ ಸಂಪನ್ನೆ ಗುಣರನ್ನೆ ಕೈಯ್ಯಾಗ
ಏಳಮ್ಮ ಮೊಸರ ಕಡಸೇವೆ
ಮಜ್ಜಿಗೆಯರಿವೆ ವೊತ್ತು ಬಿದ್ದಾಳೆಗೊಲ್ಲತಿ
ಗೆಜ್ಜೆ ಮುದ್ದು ಬಾಪುರಿಬಸವಾನ
ಗೆಜ್ಜೆ ಮುದ್ದು ಬಾಪುರಿಬಸವಾನ ನನೆದಾರೆ
ಎದ್ದಾವೆ ಕೊಡವ ದಗನಾಕೆ
ಆಲು ಅರಿವೆ ವೊತ್ತು ಜ್ಯಾರ್ಯಾಳೆ ಗೊಲ್ಲಾತಿ
ತೋಳುಬಾಪುರಿ ಬಸವಾನ
ತೋಳುಬಾಪುರಿ ಬಸವಾನ ನೆನದಾರೆ
ವೋದಂತೆ ಕೊಡನನಿಲುವಾವು
ಆಲು ಅರಿವೆ ವೊತ್ತು ಕೀಲುಕಡನಿಟ್ಟು
ಆಲುಂಡ ಬಾಯಿ ತೊಳಿಯಾದ
ಆಲುಂಡ ಬಾಯಿ ತೊಳಿಯಾದ ಗೊಲ್ಲತೀಗೆ
ಲೋಲ ಸ್ರೀ ಅರಿಯೇ ಒಲುದಾನೆ
ಮೊಸರು ಅರಿವೆ ವೊತ್ತು ಕುಸುರಕಡಗನಿಟ್ಟು
ಮೊಸರುಂಡಬಾಯಿ ತೊಳಿಯಾದೆ
ಮೊಸರುಂಡಬಾಯಿ ತೊಳಿಯಾದೆ ಗೊಲ್ಲತಿಗೆ
ಅಸುಮಗ ಸ್ರೀಅರಿಯೆ ಒಲುದಾನೆ
ಅಡವಿಯಾಗ ಗೋವಿಂದ ಅಡಗಿಕಂಡೈದಾನೆ
ಅಡವಿಗೊಲ್ಲತಿ ಕಡೆಗೋಲು
ಅಡವಿಗೊಲ್ಲತಿ ಕಡೆಗೋಲು ಬೆಣ್ಣೆಗೆ
ಅಡಗಿಕೊಂಡವನೆ ವನದಾಗೆ
ಬೆಂಚ್ಯಾಗ ಗೋವಿಂದ ವಂಚಿಕಂಡೈದಾನೆ
ಕೆಂಚೆಗೊಲ್ಲತಿ ಕಡೆಗೋಲು
ಕೆಂಚೆಗೊಲ್ಲತಿ ಕಡೆಗೋಲು ಬೆಣ್ಣೇಗೆ
ವೊಂಚಿಕಂಡೈದಾನೆ ವನದಾಗೆ
ಕಲ್ಯಾಣ ಪಟ್ಟಣದಾಗ ಮಲ್ಲಮ್ಮ ಗೊಲ್ಲತಿ
ಜಲ್ಲಾನ ಜಾರಿ ಬಸವಾನ
ಜಲ್ಲಾನ ಜಾರಿ ಬಸವಾನ ನೆನೆದಾರೆ
ಎಲ್ಲೆ ಕೊಡನಲ್ಲೆ ನಿಲ್ಲೋವು
ಕಲ್ಯಾಣ ಪಟ್ಟಣವೆಲ್ಲಿ ಗೊಲ್ಲೂತಿಗುಡುಲೆಲ್ಲಿ
ನೀವೆಲ್ಲಿ ನಿಮ್ಮ ಮಟವೆಲ್ಲಿ
ನೀವೆಲ್ಲಿ ನಿಮ್ಮ ಮಟವೆಲ್ಲಿ ಬಜ್ಜುಳನ
ವೋದಸ್ತವೆಲ್ಲಿ ಪಿಡಿದೀರಿ
ಕಲ್ಯಾಣಪಟ್ಟಣವೀಗ ಗೊಲ್ಲುತಿಗುಡುಲೀಗ
ನಾವೀಗ ನಮ್ಮ ಮನವೀಗ
ನಾವೀಗ ನಮ್ಮ ಮನವೀಗ ಬಿಜ್ಜಳನ
ಓದ ಅಸ್ತದಲಿ ಪಿಡಿದೇವು
Leave A Comment