ಮದುವಣಗಿತ್ತಿಯನ್ನು ಬಚ್ಚಿಡುವುದು

ಆಲು ಕಾಸದ ಬಿಟ್ಟು ಬೋನ ಬಸಿಯದ ಬಿಟ್ಟು
ನಾರಿಯೋದಳು ತನ್ನ ತವರೀಗೆ
ನಾರಿಯೋದಳು ತನ್ನ ತವರೀಗೆ ಮನೆಯಾಗ
ಏನಂದಿರಿ ನನ್ನ ಸತಿಯೋಳ

ಅಕ್ಕಿ ಬಸಿಯದ ಬಿಟ್ಟು ತುಪ್ಪಕಾಸದ ಬಿಟ್ಟು
ನಿಸ್ತ್ರೆಯೋದಳು ತನ್ನ ತವರೀಗೆ
ನಿಸ್ತ್ರೆಯೋದಳು ತನ್ನ ತವರೀಗೆ ಮನೆಯಾಗ
ಏನಂದಿರಿ ನನ್ನ ಸತಿಯೋಳ

ನಿಮ್ಮ ಸತಿಯೋಳ ನಾವೇನು ಬಲ್ಲೇವು
ನೀ ಬಲ್ಲೆ ನಿನ್ನ ಸತಿಬಲ್ಲೆ
ನೀ ಬಲ್ಲೆ ನಿನ್ನ ಸತಿಬಲ್ಲೆ ಕೆಂದಾವರೆಯ
ವೂ ಕೊಟ್ಟು ನೀ ಮನಸ ತಿಳಿಯಮ್ಮ

ಚಪ್ಪರದಡಿಯಲ್ಲಿ ಬಟ್ಟಲು ಬೆಳಗಿಟ್ಟಿದ್ದೆ
ಮತ್ಯಾರು ಇಲ್ಲಿ ಬರಲಿಲ್ಲ
ಮತ್ಯಾರು ಇಲ್ಲಿ ಬರಲಿಲ್ಲ ಮದಲಿಂಗನ
ಅವರಪ್ಪಯ್ಯ ಬಂದ ಸಲಗಳ್ಳ

ಅಂದರದಡಿಯಾಗ ಗಿನ್ನಲುಬಚ್ಚಿಟ್ಟಿದ್ದೆ
ಇನ್ಯಾರು ಇಲ್ಲಿ ಬರಲಿಲ್ಲ
ಇನ್ಯಾರು ಇಲ್ಲಿ ಬರಲಿಲ್ಲ ಮದಲಿಂಗನ
ಅವರಣ್ಣಯ್ಯ ಬಂದಿದ್ದ ಸಲಗಳ್ಳ

ರಾಮರಾಯರ ಕೂಡಿ ರಾಯಂಗಡಿಗೋಗಿ
ಸಾಲ್ಯದಚ್ಚಡವ ಬೇಲಿಮಾಡಿ
ಸಾಲ್ಯದಚ್ಚಡವ ಬೇಲಿಮಾಡಿ ಕೊಂಡಾರೆ
ತಾಲಿ ಕದ್ದಳಿಯಾಗುಡುಗ್ವಾರೆ

ಸೆಟ್ಟಿ ಸೆಲ್ಯೋರು ಕೂಡಿ ಸೆಟ್ಟಂಗಡಿಗೋಗಿ
ಪಟ್ಟೇದಚ್ಚಡ ಬೇಲಿಮಾಡಿ
ಪಟ್ಟೇದಚ್ಚಡ ಬೇಲಿಮಾಡಿ ಕೊಂಡಾರೆ
ಬಟ್ಟಲ ಕದ್ದಳಿಯಾಗುಡುಗ್ವಾರೆ

ಸೆಟ್ಟ್ಯೋರ ಮಗನನ್ನಿ ಮುತ್ತಿನ ಗರಿಯೆನ್ನಿ
ಬಟ್ಟಲು ಕದ್ದುದ ವುಸಿಯನ್ನೆ
ಬಟ್ಟಲು ಕದ್ದುದ ವುಸಿಯನ್ನೆ ನಿಮ್ಮನಿಯ
ನಿಸ್ತ್ರೆ ಕದ್ದಿದ್ದ ನಿಜವೆನ್ನಿ

ತಾಯೋರ ಮಗನೆನ್ನೆ ಚಿನ್ನಾದ ಗರಿಯೆನ್ನೆ
ಗಿನ್ನಲು ಕದ್ದದ್ದೆ ವುಸಿಯನ್ನೆ
ಗಿನ್ನಲು ಕದ್ದದ್ದೆ ವುಸಿಯನ್ನೆ ನಿಮ್ಮನಿಯ
ಕನ್ನೆ ಕದ್ದದ್ದೆ ನಿಜವೆನ್ನೆ

ಗಿನ್ನಲು ಕದ್ದದ್ದು ವುಸಿಯನ್ನಿ ನಿಮ್ಮನಿಯ ಕನ್ನೆ ಕದ್ದುದ್ದು ನಿಜವೆನ್ನಿ
ರಾಯರ ಮಗನೆನ್ನಿ ಲಾವುಣ್ಯದ ಗರಿಯೆನ್ನಿ
ರಾಯರ ಮಗನೆನ್ನಿ ಲಾವುಣ್ಯದ ಗರಿಯೆನ್ನಿ ನಿಮ್ಮನಿಯ
ನಾರಿಕದ್ದದ್ದು ನಿಜವೆನ್ನಿ

ವುಲ್ಲಿಗೋದ ಮಡದಿ ವುಲ್ಲಿನೊರೆಯ ತಂದು
ವುಲ್ಲೊರೆಯವಲ್ಲಿ ವಡೆಯಾಕಿ
ವುಲ್ಲೊರೆಯವಲ್ಲಿ ವಡೆಯಾಕಿ ನಮ್ಮನಿಯ
ವುಲ್ಲೊರೆಯನೆಲ್ಲ ಕರುಮೇದು

ವುಲ್ಲೊರೆಯನೆಲ್ಲ ಕರುಮೇದು ರಾಜಣ್ಣಾನ
ನಲ್ಲೋದಳು ತನ್ನಾ ತವರೀಗೆ

ಗುದ್ದಾಡಿ ಬಂದೋಳ್ನ ಬುದ್ದಿವಂತರಿರಿಸಬೋದೆ
ಬುದ್ದಿವಂತ ಏಳಿ ಕಳುವಿದರೆ
ಬುದ್ದಿವಂತ ಏಳಿ ಕಳುವಿದರೆ ನಾಳೆ ನಿಮ್ಮ
ವಜ್ಜುರದ ಚಾವುಡಿಗೆ ಇಡಿಸೇನು

 

ಜೋಗುಳ ಪದ

ಕಕ್ಕಯ್ಯನವರಮನೆಯ ಮಿಕ್ಕ ಪ್ರಸಾದವ
ಬಸವಯ್ಯ ತಂದು ಅಕ್ಕ ನಾಗಮ್ಮಾಗೆ
ಬಸವಯ್ಯ ತಂದು ಅಕ್ಕ ನಾಗಮ್ಮಾಗೆ ಕೊಟ್ಯಾರೆಬಂದು

ಗಕ್ಕಾನಾಗ ಕಾಣೂತ ಸಿವಸಿವನಂದು
ಗಕ್ಕಾನಾಗ ಕಾಣೂತ ಸಿವಸಿವನಂದು
ಮುಕ್ಕಣ್ಣೇಗತಿಯೆಂದು ಸಲಿಸಿದಳಾಗ

ಆದೀಯ ಗುರುಮನೆ ಆದ ಪ್ರಸಾದವ
ಬಸವಯ್ಯತಂದು ದೇವಿನಾಗಮ್ಮಾಗೆ
ಬಸವಯ್ಯತಂದು ದೇವಿನಾಗಮ್ಮಾಗೆ ಕೊಟ್ಯಾರೆಬಂದು
ಬೇಗಾನೆ ಕಾಣೂತ ಸಿವಸಿವನಂದು

ಬೇಗಾನೆ ಕಾಣೂತ ಸಿವಸಿವನಂದು
ರೇವಣ್ಣೇಗತಿಯೆಂದು ಸಲಿಸಿದಳಾಗ ಜೋಜೋ ಎಂದು

 

ಹೆಣ್ಣನ್ನು ಗಂಡಿನಮನೆಗೆ ಕರೆದುಕೊಂಡು ಬರುವುದು :
ಮನೆ ತುಂಬಿಸುವ ಶಾಸ್ತ್ರ

ನಿಲ್ಲೆ ರತ್ನಮ್ಮ ನಿನ್ನ ನಿಲುವು ನೋಡರಂತೆ
ಪಿಲ್ಲಿ ಕಾಲಾಗಳ ಪದುವೆ ನೋಡೋ
ಪಿಲ್ಲಿ ಕಾಲಾಗಳ ಪದುವೆ ನೋಡೋರಂತೆ
ನಿಲ್ಲೆ ಸೂರಿದನೆ ಎದುರಾಗಿ

ನಡಿಯೇ ರತ್ನಮ್ಮ ನಿನ್ನ ನಡಿಗೆ ನೋಡೋರಂತೆ
ಕಡಗಾದ ಕಾಲ ಪದವೀಯ
ಕಡಗಾದ ಕಾಲ ಪದವೀಯ ನೋಡೋರಂತೆ
ನಡಿಯಮ್ಮ ಸೂರಿದಗೆ ಎದುರಾಗಿ

ಸೆಟ್ಟೋರ ಕರಸಿ ಬಟ್ಟಮುತ್ತ
ಮೂಡಲ ಕಟ್ಟಿ ಬಿತ್ತೂತಬಾರೆ
ಮೂಡಲ ಕಟ್ಟಿ ಬಿತ್ತೂತಬಾರೆ ಮನೆತಂಕ
ನಿಮಪ್ಪಗಳು ಮುತ್ತಿನಂತ ಕುಲನ ವೊಗುಳೀಸೆ

ಮಾನ್ಯೇರ ಮಗಳ ಕರಸಿ ಮನಮುತ್ತು ಮಡುಲಕಟ್ಟಿ
ಆಡೂತಬಾರೆ ಮನೆತಂಕ
ಆಡೂತಬಾರೆ ಮನೆತಂಕ ನಿಮ್ಮಪ್ಪಗಳ
ಆಲಿನಂತ ಕುಲವ ವೊಗಳೀಸೆ

ತಿರುಗೀದೆ ತಿರುಗೀದೆ ನಿನಗಾಗಿ ತಿರುಗೀದೆ
ಇರಿಯ ಜಂಬುರವ ಕರಿಯಕಲ್ಲು
ಇರಿಯ ಜಂಬುರವ ಕರಿಯಕಲ್ಲು ಕರುನಾಟಕಕೆಲ್ಲ
ತಿರುಗಿದೆನೆನ್ನರಸಿ ನಿನಗಾಗಿ

ಸುತ್ತೀದ ಸುತ್ತೀದೆ ಸುತ್ತೀದೆ ನಿನಗಾಗಿ
ಚಿಕ್ಕ ಜಂಬರದ ಕರಿಯಕಲ್ಲು
ಚಿಕ್ಕ ಜಂಬರದ ಕರಿಯಕಲ್ಲು ಕರುನಾಟಕವೆಲ್ಲ
ಸುತ್ತೀದೆನರಸಿ ನಿನಗಾಗಿ

ಸೊಂಟಕಣವ ಕಟ್ಟಿ ಬೆಂಚೆ ನೀರು ಕುಡಿದು
ಟೆಂಕಲ ರಾಜ್ಯಾವೆಲ್ಲ ತಿರುಗೇನೆ
ಟೆಂಕಲ ರಾಜ್ಯಾವೆಲ್ಲ ತಿರುಗೇನೆ ತಂದೇನೆ
ನನ ಮಂಚಾಕ ಒಪ್ಪೋ ಮಡದೀಯ

ಮಂಚಾಕ ಒಪ್ಪೋ ಮಡದೀಯ ತಂದೈದೀನಿ
ಸಂತೋಸಗೊಳ್ಳೇ ನನ್ನ ಅಡೆದಮ್ಮ
ಸಂತೋಸಗೊಳ್ಳೇ ನನ್ನ ಅಡೆದಮ್ಮ…..
….

ನಡುವೀಗ ರಾವಕಟ್ಟಿ ಮಡುವಾ ನೀರು ಕುಡಿದು
ಬಡಗಲ ರಾಜ್ಯಾವೆಲ್ಲಾ ತಿರುಗಿ
ಬಡಗಲ ರಾಜ್ಯಾವೆಲ್ಲಾ ತಿರುಗಿ ತಂದೆನಮ್ಮ
ನಡುಮನೆಗೆ ಒಪ್ಪೋ ಮಡದೀಯ

ನಡುಮನೆಗೆ ಒಪ್ಪೋ ಮಡದೀಯ ತಂದಿವನಿ
ಸಡಗರಗೊಳ್ಳೆ ನನ್ನ ಅಡೆದಮ್ಮ

ಅಬ್ಬರಿಸಿ ಮಳೆಬಂದು ಕಬ್ಬು ಆಕಲೊಡೆದಂಗೆ
ಬದ್ರೆನಿನಮನೆಯ ಕರಬೋನ
ಬದ್ರೆನಿನಮನೆಯ ಕರಬೋನ ತಕ್ಕಂತ
ಗಿರಿಜಮ್ಮನೆಂಬ ಸೊಸೆ ಬಂದೆ

ಅಮರೀಸಿ ಮಳೆಬಂದು ಬಾಳೆ ಆಕಲೊಡೆದಂಗೆ
ನಾರಿ ನಿನಮನೆಯ ಕರಬೋನ
ನಾರಿ ನಿನಮನೆಯ ಕರಬೋನ ತಕ್ಕಂತ
ನೀಲಮ್ಮನೆಂಬೋ ಸೊಸೆಬಂದು

ಮಾನ್ಯೇರ ಮಗಳು ಬರಲಿ ಇನ್ನಾ ಕ್ವಾಣೆವೊಗಲಿ
ವೊನ್ನಂತ ಗೌಳಿ ನುಡಿಯಾಲಿ
ವೊನ್ನಂತ ಗೌಳಿ ನುಡಿಯಾಲಿ ಮನೆಗೆ
ವೊನ್ನು ಎಚ್ಚಾಲಿ ದಿನದಿನಕೆ

ಸೆಟ್ಟರು ಬರಲಿ ಮತ್ತೆ ಕ್ವಾಣೇಯ ವೊಗಲಿ
ಅಪ್ಪಂತ ಗೌಳಿನುಡಿಯಾಲಿ
ಅಪ್ಪಂತ ಗೌಳಿನುಡಿಯಾಲಿ ಮನೆಗೆ
ರೊಕ್ಕ ಎಚ್ಚಾಲಿ ದಿನದಿನಕ

 

ಕಾಳು ತೊಳೆಯುವ ಪದ

ರೆಂಬೇಯ ವಡಗೊಂಡು ರಂಗರಾಯಬಂದ
ತಂದೆತಾಯಿಗಳ ಅರಮನೆಗೆ
ತಂದೆತಾಯಿಗಳ ಅರಮನೆಗೆ ಬಾಗಲುಮುಂದೆ
ತಂಗಿಸುಬದ್ರಾನ ಕರೆಸ್ಯಾರೆ

ಬಂದಾಳೆಸುಬದ್ರ ನಿಂದಾಳೆ ತಲೆಬಾಗಲಾಗ
ಏನು ನನ್ನಮ್ಮ ಕರಸೀದಿ
ಏನು ನನ್ನಮ್ಮ ಕರಸೀದಿ ಏನು ಕಾರಣವಿಲ್ಲ
ಎಂತು ಕಾರಣವಿಲ್ಲ ನೀ ನನ್ನ ಪಾದತೊಳಿಯಮ್ಮ

ನನ್ನ ಬೆನ್ನಿಂದೆ ಬಿದ್ದು ನಿನ್ನ ಪಾದವ ತೊಳೆಯ
ಅನ್ನೆಗರ ಮಗಳು ಅತಿರೆಂಬೆ
ಅನ್ನೆಗರ ಮಗಳು ಅತಿರೆಂಬೆ ಪಾದಾವ
ಎಣ್ಣುತೊಳಿದರೆ ಕಾಲ ತೊಳದೇನು

ನಿಸ್ತ್ರೇಯ ಒಡಗೊಂಡು ಕಿಸ್ಣರಾಯಬಂದ
ಅಪ್ಪ ಅವ್ವನ ಅರಮನೆಗೆ
ಅಪ್ಪ ಅವ್ವನ ಅರಮನೆಗೆ ಬಾಗಲಮುಂದೆ
ಅಕ್ಕಸುಬದ್ರಾನ ಕರೆಸ್ಯಾರೆ

ಬಂದಾಳುಸುಬದ್ರ ತಲೆಬಾಗುಲಾಗೆ ನಿಂದಾಳು
ಏನಣ್ಣ ನೀನನ್ನ ಕರೆಸೀದೆ
ಏನು ಕಾರಣವಿಲ್ಲ ಎಂತು ಕಾರಣವಿಲ್ಲ
ನೀನು ನಮ್ಮ ಪಾದ ತೊಳಿಯಮ್ಮ

ಮುತ್ತೀನ ಬಾಗುಲಿಗೆ ರತ್ನಾದದಾರಿವಂದಾಲ
ಚಿತ್ತಾರ ಕಡೆದ ವನಕೀಯ
ಚಿತ್ತಾರ ಕಡೆದ ವನಕೀಯ ಅಡ್ಡಲಾಗಿ
ಅತ್ತಿಗ್ಗೆಬಾಗುಲು ತಡೆದಾಳು

ಚಿನ್ನಾದ ಬಾಗುಲಿಗೆ ರನ್ನಾದ ದಾರಿವಂದಾಲ
ಬಿನ್ನಾಣಿ ಕಡೆದ ವನಕೀಯ
ಬಿನ್ನಾಣಿ ಕಡೆದ ವನಕೀಯ ಅಡ್ಡಲಾಕಿ
ನಾದುನಿಬಾಗುಲಾಕಿ ತಡೆದಾಳು

ಪಟ್ಟೀಯ ಮಂಚದಲಿರುವ ಅತ್ತೆಮ್ಮ ನೀಕೇಳು
ಅತ್ತಿಗೆ ಬಾಗುಲ ತಡೆದವಳೆ
ಅತ್ತಿಗೆ ಬಾಗುಲ ತಡೆದವಳೆ ನಾ ಪಡೆದ
ಚೊಚ್ಚಲು ಮಗಳು ತನಗಂತೆ

ತೂಗೋ ಮಂಚದಲಿರುವ ಮಾವಯ್ಯನೀಕೇಳೋ
ನಾದುನಿ ಬಾಗುಲ ತಡದವಳೆ
ನಾದುನಿ ಬಾಗುಲ ತಡದವಳೆ ನಾವು ಪಡೆದ
ಮೋವಾದ ಮಗಳು ತನಗಂತೆ

ಆದರಾಗಲಮ್ಮ ಆಲುಕುಡಿದಂಗಾಯ್ತು
ಮಾನ್ಯೇದಗದ್ದೆ ಬೆಳಿಯಾಲಿ
ಮಾನ್ಯೇದಗದ್ದೆ ಬೆಳಿಯಾಲಿ ಸೊಸೆಮುದ್ದೆ
ಮಾಡನು ಮೊಮ್ಮೊಕ್ಳುಮದುವೀಯ

ಕಾಲು ತೊಳಿಯನು ಬನ್ನಿರೆ
ಅಣ್ಣಾನ ಪಾದ ತೊಳಿಯನುಬನ್ನಿರೆ