ಗಂಗಾ ದೇವತೆ ಮಾಡುವುದು

ಪಡುವಾಲ ಬಾವಿಲಿಂದಗಿಡುಗೀಲಿಂದ ನೀರುತಂದು
ಕಡಲೀಯ ಕಲಸೆ ಗೌರಮ್ಮ
ಕಡಲೀಯ ಕಲಸೆ ಗೌರಮ್ಮ ನಾವು ನಮ್ಮ
ಕಿರಿದಂಗಿ ಕರೆಯೇ ವೊರಡಾನ

ಮುಂದಾಲ ಬಾವಿಲಿಂದ ತಂಬಿಗೇಲಿ ನೀರುತಂದು
ತಂಬಿಟ್ಟು ಕಲಸೋ ಬೆನವಣ್ಣ
ತಂಬಿಟ್ಟು ಕಲಸೋ ಬೆನವಣ್ಣ ನಾವು ನಮ್ಮ
ತಂಗ್ಯಮ್ನ ಕರಿಯೆವೊರಡಾನ

ಕಾವಿಕಂತ್ಯೋರು ಬಾಳೇಕಾಯಿ ಜಡಿಯೋರು
ಮ್ಯಾಗಾಳ ಮಂಟಪದ ಸರಣಾರು
ಮ್ಯಾಗಾಳ ಮಂಟಪದ ಸರಣಾರು ವೋಗನುಬನ್ನಿ
ನಾರಿಗಂಗಾನ ನೆಲಿನೋಡ

ಕಂಬಳಿ ಕಂತ್ಯೋರು ನಿಂಬೇಕಾಯಿ ಜಡಿಯೋರು
ಮುಂದಾಲ ಮಂಟಪದ ಸರಣಾರು
ಮುಂದಾಲ ಮಂಟಪದ ಸರಣಾರು ವೋಗನುಬನ್ನಿ
ರೆಂಬೇ ಗಂಗಾನ ನೆಲೆನೋಡ

ಗಂಜಿಸೀರ್ಯೋರು ಗಂದಾದ ಬಟ್ಟಿನೋರು
ನಿಂಬೆಕ್ಕನೆಂಬ ಸರಣೋರು
ನಿಂಬೆಕ್ಕನೆಂಬ ಸರಣೋರು ವೋಗನುಬನ್ನಿ
ರೆಂಬೆ ಗಂಗನ ತರುವಾಕ

ಸಾಲ್ಯಾದ ಸೀರ್ಯೋರು ಸಾದಿನ ಬಟ್ಟಿನೋರು
ಸಾಳಕ್ಕನೆಂಬ ಸರಣೇರು
ಸಾಳಕ್ಕನೆಂಬ ಸರಣೇರು ವೋಗನುಬನ್ನಿ
ನಾರಿಗಂಗಾನ ನೆಲೆನೋಡ

ಪಟ್ಟೇದ ಸೀರ್ಯೋರು ಮುತ್ತಿನ ಬಟ್ಟಿನೋರು
ಸತ್ಯಕ್ಕನೆಂಬ ಸರಣೇರು
ಸತ್ಯಕ್ಕನೆಂಬ ಸರಣೇರು ವೋಗನುಬನ್ನಿ
ನಾರಿಗಂಗಾನ ನೆಲೆನೋಡ

ಪಟ್ಟೇದ ಸೀರ್ಯೋರು ಮುತ್ತಿನ ಬಟ್ಟಿನೋರು
ಸತ್ಯಕ್ಕನೆಂಬ ಸರಣೇರು
ಸತ್ಯಕ್ಕನೆಂಬ ಸರಣೇರು ವೋಗನುಬನ್ನಿ
ನಿಸ್ತ್ರೆ ಗಂಗಾನ ಕರುವಾಕೆ

ಕಡಲೇಕಾಳಂಗೆ ಕಡೆದ ಕಟ್ಟಿಮ್ಯಾಲೆ
ಪಗಡೀಯ ಆಡ ಸಿವ ಸರಣಾರು
ಪಗಡೀಯ ಆಡ ಸಿವ ಸರಣಾರು ವೋಗನುಬನ್ನಿ
ಅರುದೆಗಂಗನ ಕರುವಾಕೆ

ವುದ್ದಿನ ಕಾಳಂಗೆ ತಿದ್ದಿದ ಕಟ್ಟಿಮ್ಯಾಲೆ
ವುದ್ಯೋಗ ಮಾಡ ಸಿವ ಸರಣಾರು
ವುದ್ಯೋಗ ಮಾಡ ಸಿವ ಸರಣಾರು ವೋಗನುಬನ್ನಿ
ಬದ್ರೆಗಂಗನ ಕರುವಾಕೆ

ಪಟ್ಟೀದ ಸೀರ್ಯೋರು ಇಪ್ಪತ್ತೊಂದೆಣ್ಣುಗಳು
ಮತ್ತವರ ನಡುವೆ ಗೌರಮ್ಮ
ಮತ್ತವರ ನಡುವೆ ಗೌರಮ್ಮ ವೊರಟವಳೆ
ತಟ್ಟೆ ಬಟ್ಟಲು ಇಡಕಂಡು

ಸಾಲ್ಯಾದ ಸೀರ್ಯೋರು ನಲವತ್ತೊಂದೆಣ್ಣುಗಳು
ಅವರಾನಡುವೆ ಗೌರಮ್ಮ
ಅವರಾನಡುವೆ ಗೌರಮ್ಮ ವೊರಟವಳೆ
ಗಂದದ ಬಟ್ಟಲ ಇಡಕಂಡು

ಆರುಬಂಡಿ ಕರಿಯೆಲೆ ಆರುಬಂಡಿ ಬಿಳಿಯೆಲೆ
ಮ್ಯಾಲೊಂದು ಬಂಡಿ ಎಳಿಗಾಯಿ
ಮ್ಯಾಲೊಂದು ಬಂಡಿ ಎಳಿಗಾಯಿ ಏರಿಕಂಡು
ವೋದಾರುಗಂಗಾನ ಕರುವಾಕೆ

ಅತ್ತುಬಂಡಿ ಬಿಳಿಯೆಲೆ ಅತ್ತುಬಂಡಿಕರಿಯೆಲೆ
ಮತ್ತೊಂದು ಬಂಡಿ ಬಿಳಿಗಾಯಿ
ಮತ್ತೊಂದು ಬಂಡಿ ಬಿಳಿಗಾಯಿ ಏರಿಕಂಡು
ವೊಕ್ಕಾರು ಗಂಗಾನ ಕರುವಾಕೆ

ನೆನೆಯಕ್ಕಿ ನೆನೆಗಡಲೆ ಗೊನೆಬಾಳೆಯಣ್ಣು
ವನವಾಗಿ ಬೆಳೆದ ಬಿಳಿಯಲೆ
ವನವಾಗಿ ಬೆಳೆದ ಬಿಳಿಯಲೆ ಕಬ್ಬಿನಕೋಲು
ಅರುದೆ ಸಾಗ್ರಕ್ಕೆ ನಡೆದವಳೆ

ತಂಬಿಟ್ಟುಸಿಗಳಿ ತೊಂಬೆಬಾಳೆಹಣ್ಣು
ಅಂದವಾಗಿ ಬೆಳೆದ ಬಿಳಿಯಲೆ
ಅಂದವಾಗಿ ಬೆಳೆದ ಬಿಳಿಯಲೆ ಕಬ್ಬಿನಕೋಲು
ರೆಂಬೆ ಇದ್ದ ಸಾಗರಕೆ ನಡೆದಾವೆ

ದುಗ್ಗಳು ದೂಪಾನೊಯ್ದು ಎದ್ದರುಗಿರಿಯ ಮೇಲೆ
ಬೊಬ್ಬಿಡುವೊ ಸೆಂಕು ಕೈತಾಳ
ಬೊಬ್ಬಿಡುವೊ ಸೆಂಕು ಕೈತಾಳ ನಂದಿಕೋಲು
ಎದ್ದರು ಗಂಗಾನ ನೆಲಿನೋಡ

ನಾಗಳು ದೂಪಾನೊಯ್ದು ವೋದರುಗಿರಿಯ ಮ್ಯಾಲೆ
ಬೋರಿಡುವ ಸೆಂಕು ಕೈತಾಳ
ಬೋರಿಡುವ ಸೆಂಕು ಕೈತಾಳ ನಂದಿಕೋಲು
ವೋದರು ಗಂಗಾನ ನೆಲಿನೋಡ

ಕಾಳೇಯಸಬ್ದ ಕೇಳ್ಯಾಳೆ ಗಂಗಮ್ಮ
ವೋದಾರೆ ನಮಗೆ ವುಳುವಿಲ್ಲ
ವೋದಾರೆ ನಮಗೆ ವುಳುವಿಲ್ಲ ಗಂಗಮ್ಮ
ವೋದಾಳು ಪಾತಾಳದೊಳಿಯಾಕೆ

ಬಾವಿ ಗಂಗಮ್ಮಾಗೆ ಕಾಯಿಸಿಗಳಿವುಂಡೆ
ರೇವಣ್ಣಗೇರು ಬಿಳಿಯೆಲೆ
ರೇವಣ್ಣಗೇರು ಬಿಳಿಯೆಲೆ ತಂದೈದೀನಿ
ಬಾಲಿಗಂಗಮ್ಮ ದಯವಾಗೆ

ಅಳ್ಳದ ಗಂಗಮ್ಮಾಗೆ ಎಳ್ಳು ಸಿಗಳಿವುಂಡೆ
ಮಲ್ಲಯ್ಯಗೇರು ಬಿಳಿಯೆಲೆ
ಮಲ್ಲಯ್ಯಗೇರು ಬಿಳಿಯೆಲೆ ತಂದೈದೀನಿ
ಅಳ್ಳದ ಗಂಗಮ್ಮ ದಯವಾಗೆ

ಕಟ್ಟಿ ಗಂಗಮ್ಮಾಗೆ ಇಟ್ಟು ಸಿಗಳಿವುಂಡೆ
ಮುಕ್ಕಣ್ಣಗೇರು ಬಿಳಿಯೆಲೆ
ಮುಕ್ಕಣ್ಣಗೇರು ಬಿಳಿಯೆಲೆ ತಂದೈದೀನಿ
ಕಟ್ಟಿ ಗಂಗಮ್ಮಾ ದಯವಾಗೆ

ಬಾಳೇಯ ವನದಾಗೆ ವೋದಾರು ಮುತ್ತೈದೇರು
ಬಾಳೀಯ ತರಗ ಗುಡಿಸ್ಯಾರು
ಬಾಳೀಯ ತರಗ ಗುಡಿಸ್ಯಾರು ಗುಡಿಸಿ ಗುಡ್ಡೆಮಾಡಿ
ಬಾವುಸಿ ಗಂಗಮ್ಮಾ ಕರೆದಾರು

ನಿಂಬೀಯ ವನದಾಗ ಬಂದಾರು ಮುತ್ತೈದೇರು
ನಿಂಬೀಯ ತರಗ ಗುಡಿಸ್ಯಾರು
ನಿಂಬೀಯ ತರಗ ಗುಡಿಸ್ಯಾರು ಗುಡಿಸಿ ಗುಡ್ಡೆಮಾಡಿ
ನೆಂಬುಸಿ ಗಂಗಮ್ಮಾನ ಕರೆದಾರು

ಒಂದೆಲೆ ಒಂದಡಕೆ ಒಂದೆ ಬೆಟ್ಟಿಲಿಗಂದ
ಬಂದಾವೇನೆ ಗಂಗಮ್ಮ
ಬಂದಾವೇನೆ ಗಂಗಮ್ಮ ನಿನಸ್ಯಾದ
ನಮಗಿಸ್ಟು ತುಂಬಿಕೊಡಮ್ಮ ವುದುಕಾವ

ಎರಡೆಲೆ ಎರಡಡಕೆ ಎಬ್ಬೇಟ್ಟೀಲಿಗಂದ
ಬಂದಾವೇನೆ ಗಂಗಮ್ಮ
ಬಂದಾವೇನೆ ಗಂಗಮ್ಮ ನಿನಸ್ಯಾದ
ನಮಗಿಸ್ಟು ತುಂಬಿಕೊಡಮ್ಮ ವುದುಕಾವ

ಉದ್ದನ್ನ ಅಳ್ಳಕೋಗಿ ಒಬ್ಬೇಲಿವರತೆ ಮಾಡಿ
ಉದ್ದೆ ಬಾ ನನ್ನ ಕಿರಿತಂಗಿ
ಉದ್ದೆ ಬಾ ನನ್ನ ಕಿರಿತಂಗಿ ಗಂಗಮ್ಮ
ನೀನೊಬ್ಬಳಾಳುವಂತೆ ಪುರುಸಾನ

ಅರಿಯ ಅಳ್ಳಕೋಗಿ ಅರಿಯವರ ಇಂದೋಗಿ
ಅರುದೆ ಬಾ ನನ್ನ ಕಿರುತಂಗಿ
ಅರುದೆ ಬಾ ನನ್ನ ಕಿರುತಂಗಿ ಗಂಗಮ್ಮ
ತಿರಿನಾಳಿವಂತೆ ಪುರುಸಾನ

ಕಂಕಳದಕೈ ಕೊಂಕೂತ ಕೊಸರೂತ
ತೆಂಕಾಲದಡವ ಕೊಡವೂತ
ತೆಂಕಾಲದಡವ ಕೊಡವೂತ ಮಲ್ಲಯ್ಯಾನ
ಕೆಂಚೆ ಕುಂಕುಮದೆ ಅರುದಾಳೆ

ಮೆಲ್ಲಕರುದಾಳೆ ಮಲ್ಲಿಗೆ ಮೊಕದಗಂಗೆ
ನೆಲ್ಲಕ್ಕಿಯಂತ ಮರುಳಾಗೆ
ನೆಲ್ಲಕ್ಕಿಯಂತ ಮರುಳಾಗೆ ಮಲ್ಲಯ್ಯನ
ನಲ್ಲೆಕುಂಕುಮದೆ ಅರುದಾಳೆ

ಉದ್ದಕರುದಾಳೆ ಮುದ್ದು ಮೊಕದ ಗಂಗೆ
ರುದ್ರಾಕ್ಸಿಯಂತ ಮರುಳಾಗೆ
ರುದ್ರಾಕ್ಸಿಯಂತ ಮರುಳಾಗೆ ಮಲ್ಲಯ್ಯಾನ
ಬದ್ರೆ ಕುಂಕುಮದೆ ಅರುದಾಳೆ

ವೊಲಗೇರಿಯನ್ನಾದೆ ಸಲಗೇರಿ ಅನ್ನಾದೆ
ಜಲವೇವುಗ್ಗಳಿಸಿ ಅರುವೋರು
ಜಲವೇವುಗ್ಗಳಿಸಿ ಅರುವೋರು ಸಿರಿಗಂಗೀಯ
ಕುಲವೊಳ್ಳೆದಂದು ಸಿವತಂದು

ಕೇರಿಯನ್ನಾದೆ ಕೇರಿಯನ್ನಾದೆ
ಲೋಕವುಗ್ಗಳಿಸಿ ಅರುವೋಳು
ಲೋಕವುಗ್ಗಳಿಸಿ ಅರುವೋಳು ಸಿರಿಗಂಗೀಯ
ಗೋತ್ರ ವೊಳ್ಳೆದಂದು ಸಿವತಂದ

ಅರಅರದಿಂದ ಕೆರೆಯೊಡೆದು ಬರುವಾಗ
ಅರನೆ ಸಿವನೇ ನೆಡುಗ್ಯಾರೆ
ಅರನೆ ಸಿವನೇ ನೆಡುಗ್ಯಾರೆ ಸಿರಿಗಂಗೀಯ
ಮಾಚಿಡದ್ಯಾವ ತೆರನಂದ

ಗುತ್ತಿ ವೊಳೆಯಿಂದ ಕಟ್ಟೊಡೆದೂ ಬರುವಾಗ
ಮುಕ್ಕಣ್ಣ ಅರನೆ ನೆಡುಗ್ಯಾರೆ
ಮುಕ್ಕಣ್ಣ ಅರನೆ ನೆಡುಗ್ಯಾರೆ ಸಿರಿಗಂಗೀಯ
ಬಚ್ಚಿಡದ್ಯಾವ ತೆರನಂದ

ಕಟ್ಟಿಯಿಂದ ಬಂದು ಅಟ್ಟಿ ಮುಂದೈದಾವೆ
ಕಟ್ಟೇಳು ಸಿವನ ಕರೆಯೇಳು
ಕಟ್ಟೇಳು ಸಿವನ ಕರೆಯೇಳು ಇವನಿಮ್ಮ
ಪಟ್ಟದೆಂಡತಿ ಬಳುವೂಲಿ

ಏಡಿಯಿಂಡುಬಂದು ಊರ ಮುಂದೈದಾವೆ
ಕಾಯೇಳು ಸಿವನೆ ಕರೆಯೇಳು
ಕಾಯೇಳು ಸಿವನೆ ಕರೆಯೇಳು ಇವು ನಿಮ್ಮ
ಮೋವಾದೆಂಡತಿ ಬಳುವೂಲಿ

ಆನೆವುಟ್ಟಿತು ಅನ್ನೊಂದು ತರದಿಂದ
ಜೇನುವುಟ್ಟಿತು ಮೆಳಿಯಿಂದ
ಜೇನುವುಟ್ಟಿತು ಮೆಳಿಯಿಂದ ರಾಮಯ್ಯ
ಗೇನಿವುಟ್ಟಿದನೆ ಕುಲಸರಣ

ಒಂಟಿವುಟ್ಟಿತು ಒಂಟ್ಯೊಂದು ತರದಿಂದ
ಮಿಂಚುವುಟ್ಟೀತು ಮುಗಿಲಿಂದ
ಮಿಂಚುವುಟ್ಟೀತು ಮುಗಿಲಿಂದ ರಾಮಯ್ಯ
ಬಂಟವುಟ್ಟಿದನೆ ಕುಲಸರಣ

ಮುತ್ತೀನ ಕೂರೀಗೆ ಅಟ್ಯಾಗಸನಾದಾವೆ
ಎತ್ತತುಪ್ಪದಲಿ ಮೊಕತೊಳೆದು
ಎತ್ತತುಪ್ಪದಲಿ ಮೊಕತೊಳೆದು ರಾಮಯ್ಯ
ಬಿತ್ತೂವ ವಲಕ ನಡೆದಾನೆ

ಅವಳಾದ ಕೂರಿಗೆ ಓಣ್ಯಾಗಸನಾದಾವೆ
ಆಲು ತುಪ್ಪದಲಿ ಮೊಕತೊಳೆದು
ಆಲು ತುಪ್ಪದಲಿ ಮೊಕತೊಳೆದು ರಾಮಯ್ಯ
ಆರಂಬಕದೊಲಕ ನಡೆದಾನೆ

ಮುತ್ತೀನ ಕೂರಿಗ್ಗೆ ರತ್ನಾದ ಬಟ್ಟಾಲ
ಮುಕ್ಕಣ್ಣನಂಬೋವು ಎರಡೆತ್ತು
ಮುಕ್ಕಣ್ಣನಂಬೋವು ಎರಡೆತ್ತು ಕಟ್ಟಿಕಂಡು
ಮುತ್ತಿಬಿತ್ತೀರಿ ವಳಿತಂಕ

ಚಿನ್ನಾದ ಕೂರಿಗ್ಗೆ ರನ್ನಾದ ಬಟ್ಟಾಲ
ಚಿನ್ನಣ್ಣವೆಂಬ ಎರಡೆತ್ತು
ಚಿನ್ನಣ್ಣವೆಂಬ ಎರಡೆತ್ತು ಕಟಿಕಂಡು
ವೊನ್ನು ಬಿತ್ಯವೆರಡು ವೊಳಿತಂಕ

ಅವಳಾದ ಕೂರಿಗ್ಗೆ ವೋಣ್ಯಾಗಸನಾದಾವೆ
ಆಲುತುಪ್ಪದಲಿ ಮೊಕತೊಳೆದು
ಆಲುತುಪ್ಪದಲಿ ಮೊಕತೊಳೆದು ರಾಮಯ್ಯ
ಆರಂಬದೊಲಕ ನಡೆದಾನೆ

ಏನಯ್ಯ ಬಿತ್ತೋವು ಏನಯ್ಯ ಬೆಳಿಯೋವು
ಏನಯ್ಯ ನೀವು ಬಿತ್ತಿ ಬೆಳಿಯೋವು
ಏನಯ್ಯ ನೀವು ಬಿತ್ತಿ ಬೆಳಿಯೋವು ಓಬೇನಳ್ಳಿ
ಬೀಗಾರುಕೊಟ್ಟ ಬಿಳಿಯಬೀಜ

ಎಂತಯ್ಯ ನೀವು ಬಿತ್ತೋವು ಎಂತಯ್ಯ ನೀವು ಬೆಳಿಯೋವು
ಎಂತಯ್ಯ ನೀವು ಬಿತ್ತಿ ಬೆಳಿಯೋವು
ಎಂತಯ್ಯ ನೀವು ಬಿತ್ತಿ ಬೆಳಿಯೋವು ಓಬೇನಳ್ಳಿ
ನೆಂಟಾರುಕೊಟ್ಟ ಬಿಳಿಬೀಜ

ಕಟ್ಟೀಯ ಇಂದೆ ಜೊತ್ತಂಬವೇನಮ್ಮ
ಜೊತ್ತೀಗೆ ಮುನ್ನೂರು ಕುಡುನೂರು
ಜೊತ್ತೀಗೆ ಮುನ್ನೂರು ಕುಡುನೂರು ರಾಮಯ್ಯನ
ಕಟ್ಟುಂಬಾವೆತ್ತು ಐನೂರು

ಏರೀಯ ಇಂದೆ ಬೋರಂಬವೇನಮ್ಮ
ಕೂರಿಗೆ ಮುನ್ನೂರು ಕುಡುನೂರು
ಕೂರಿಗೆ ಮುನ್ನೂರು ಕುಡುನೂರು ರಾಮಯ್ಯನ
ಆರಂಬದೆತ್ತು ಐನೂರು

ಮುತ್ತು ಬಿತ್ತಿದೆತ್ತು ಇಪ್ಪತ್ತು ಬರುವಾಗ
ಗುತ್ತಿಬಾಗುಲು ನಡುಗ್ಯಾವು
ಗುತ್ತಿಬಾಗುಲು ನಡುಗ್ಯಾವು ರಾಮಯ್ಯಾನ
ಮುತ್ತುಬಿತ್ತಿದೆತ್ತು ಬರುವಾಗ

ವೊನ್ನು ಬಿತ್ತಿದೆತ್ತು ಅನ್ನೆರಡು ಬರುವಾಗ
ದಿಡ್ಡಿಬಾಗುಲೆನೆಡುಗ್ಯಾವು
ದಿಡ್ಡಿಬಾಗುಲೆನೆಡುಗ್ಯಾವು ರಾಮಯ್ಯನ
ವೊನ್ನು ಬಿತ್ತಿದೆತ್ತು ಬರುವಾಗ

ಕಂಡುಗ ಗೋದುಗೆ ಬೀಸಿದುಂಡುಗ್ಗಡಿಗೆ ಮಾಡಿ
ಇಂದೆನಿಮ್ಮೊಲವ ಕಾಯಬನ್ನಿ
ಇಂದೆನಿಮ್ಮೊಲವ ಕಾಯಬನ್ನಿ ರಾಮಯ್ಯ
ಸಾರಿಡಂಗುರವ ವಡೆಸ್ಯಾನೆ

ನಾಗುಳಗೋದಿ ಬಿಸಿ ನಾಳಿಗ್ಗಡುಗೆ ಮಾಡಿ
ನಾಳೆನಮ್ಮೊಲವ ಕೊಯ್ಬನ್ನಿ
ನಾಳೆನಮ್ಮೊಲವ ಕೊಯ್ಬನ್ನಿ ಅಂದುರಾಮಯ್ಯ
ಸಾರಿಡಂಗುರವ ವಡೆಸ್ಯಾನೆ

ನಾಗುಳ ಗೋದಿ ಬೀಸಿ ನಾಳಿಗ್ಗಡುಗೆ ಮಾಡಿ
ನಾಳೆನಮ್ಮೊಲವ ಕೊಯ್ಬನ್ನಿ
ನಾಳೆನಮ್ಮೊಲವ ಕೊಯ್ಬನ್ನಿ ಅಂದುರಾಮಯ್ಯ
ಸಾರಿಡಂಗುರವ ವಡೆಸ್ಯಾನೆ

ಸೆಜ್ಜೇಯವಲಕೆ ಉದ್ದನ್ನ ಮಂಚೀಗೆ
ಗುಬ್ಬೆ ಕಾಲೀಗೆ ಕಿರಿಗೆಜ್ಜೆ
ಗುಬ್ಬೆ ಕಾಲೀಗೆ ಕಿರಿಗೆಜ್ಜೆ ರಾಮಯ್ಯಾನ
ಮುದ್ದುಮಗ ಸವಿಸ್ಯಾನೆ ಗಿಳಿವಿಂಡು

ಜ್ವಾಳದವಲಕ ಜೋಡೆರಡು ಮಂಚೀಗೆ
ಕವಣೆಕಾಲೀಗೆ ಕಿರುಗೆಜ್ಜೆ
ಕವಣೆಕಾಲೀಗೆ ಕಿರುಗೆಜ್ಜೆ ರಾಮಯ್ಯನ
ದೊರೆಮಗ ಸ್ರವಿಸ್ಯಾನೆ ಗಿಳಿವಿಂಡು

ಮತ್ತೀನ ಕುಡುಗೋಲೀಗೆ ರತ್ನಾದ ಇಡಿಗಾಳು
ಮುತ್ಯಾರಿವಲನ ಕೊಯ್ಯಿವೋರು
ಮುತ್ಯಾರಿವಲನ ಕೊಯ್ಯಿವೋರು ರಾಮಯ್ಯನ
ಚೊಚ್ಚಲ ಇರಿಯಮಗ ಕೊಯ್ದ

ಚಿನ್ನಾದ ಕುಡಿಕೋಲೀಗೆ ರನ್ನಾದ ಇಡಿಗಾಳು
ಇನ್ಯಾರಿವಲವ ಕೊಯ್ವೋರು
ಇನ್ಯಾರಿವಲವ ಕೊಯ್ವೋರು ರಾಮಯ್ಯಾಗ
ಕನ್ನೇಯ ಇರಿಯಮಗ ಕೊಯ್ದ

ಮತ್ತೆಲ್ಲಿ ಬಿತ್ತ್ಯಾರೆ ಮತ್ತೆಲ್ಲಿ ಬೆಳೆದಾರೆ
ಮುತ್ತು ತಾನೆಲ್ಲಿ ಕೊಯ್ದಾರೆ
ಮುತ್ತು ತಾನೆಲ್ಲಿ ಕೊಯ್ದಾರೆ ಓಬೇನಳ್ಳಿ
ಅತ್ತುರವೈದಾವೆ ಕಣದಾಳು

ವೊನ್ನು ಬಿತ್ಯಾರೆ ವೊನ್ನೆಲ್ಲಿ ಬೆಳೆದಾರೆ
ವೊನ್ನು ತಾವೆಲ್ಲಿ ಬೆಳೆದುವೊಯ್ದರೆ
ವೊನ್ನು ತಾವೆಲ್ಲಿ ಬೆಳೆದುವೊಯ್ದರೆ ಓಬೇನಳ್ಳಿ
ದಿನ್ನೆಲೈದಾವೆ ಕಣಗಾಳು

ವೊನ್ನೆಲ್ಲಿ ಕೊಯ್ದಾರೆ ವೊನ್ನೆಲ್ಲಿ ಒಣಗ್ಯಾವೆ
ವೊನ್ನ ತಾವೆಲ್ಲಿ ತುಳಿಸ್ಯಾರೆ
ವೊನ್ನ ತಾವೆಲ್ಲಿ ತುಳಿಸ್ಯಾರೆ ಓಬೇನಳ್ಳಿ
ದಿನ್ನಿಲಿ ಆದಾವೆ ಕಣಗಾಳು

ಮುತ್ತೆಲ್ಲಿ ಒತ್ತ್ಯಾರೆ ಮುತ್ತೆಲ್ಲಿ ಕೊಯ್ದಾರೆ
ಮುತ್ತು ತಾನೆಲ್ಲಿ ಕೊಯ್ದಾರೆ
ಮುತ್ತು ತಾನೆಲ್ಲಿ ಕೊಯ್ದಾರೆ ಓಬೇನಳ್ಳಿ
ಅತ್ತುರದಲೈದಾವೆ ಕಣಗಾಳು

ಮುತ್ತೆಲ್ಲಿ ಕೊಯ್ದಾರೆ ಮುತ್ತೆಲ್ಲಿ ತುಳಿಸ್ಯಾರೆ
ಮುತ್ತುರಾಸೀಲಿಅಸನಾಗಿ
ಮುತ್ತುರಾಸೀಲಿ ಅಸನಾಗಿ ಓಬೇನಳ್ಳಿ
ಅತ್ತುರದಲಾದಾವೆ ಕಣಗಾಳು

ವೊನ್ನೆಲ್ಲಿ ತುಳಿಸ್ಯಾರೆ ವೊನ್ನೆಲ್ಲಿ ತೂರ್ಯಾರೆ
ವೊನ್ನೀನ ರಾಸೀಲಿ ಅಸನಾಗಿ
ವೊನ್ನೀನ ರಾಸೀಲಿ ಅಸನಾಗಿ ಒಬೇನಳ್ಳಿ
ದಿನ್ನೀಲಿ ಆದಾವೆ ಕಣಗಾಳು

ಮುತ್ತೀನ ಕುಡಿಯಂಗೆ ಅತ್ತೆಬಂದವುರಾಸಿ
ಸುತ್ತಲದೇವರಿಗೆ ಸರಣೆನ್ನಿ
ಸುತ್ತಲದೇವರಿಗೆ ಸರಣೆನ್ನಿ ರಾಮಯ್ಯ
ಉತ್ತುಮ ನೀನಿಡಿಯೋ ಕೊಳಗಾವ

ಅವಳಾದ ಕುಡಿಯಂಗ ತಿರುಗಲರುದವುರಾಸಿ
ಮನೆಯ ದೇವುರಿಗೆ ಸರಣೆನ್ನಿ
ಮನೆಯ ದೇವುರಿಗೆ ಸರಣೆನ್ನಿ ರಾಮಯ್ಯ
ದರುಮ ನೀನಿಡಿಯೋ ಕೊಳಗಾವ

ರಾಸೀಯ ಮಾಡ್ಯಾನೆ ಅಚ್ಚಡವ ಆಸ್ಯಾನೆ
ಆತಬೂವಿಟ್ಟು ತಿರುಗಿ ಎಡೆಮಾಡಿ
ಆತಬೂವಿಟ್ಟು ತಿರುಗಿ ಎಡೆಮಾಡಿ ರಾಮಯ್ಯ
ಬೂಪನೀನಿಡಿಯೋ ಕೊಳಗಾವ

ಅಲ್ಲೀಯ ಕೊಳಗಲ್ಲ ಇಲ್ಲೀಯ ಕೊಳಗಲ್ಲ
ದಿಲ್ಲಿ ರಾಮಯ್ಯನರಮನೆ
ದಿಲ್ಲಿ ರಾಮಯ್ಯನರಮನೆ ವಳಗಾಲ
ಬೆಳ್ಳಿ ಕೊಳಗದಲಿ ಅಳಿಯೆಂದ

ಅತ್ತಲಕೊಳಗಲ್ಲ ಇತ್ತಲಕೊಳಗಲ್ಲ
ದಿಲ್ಲಿರಾಮಯ್ಯನರಮನೆ
ದಿಲ್ಲಿರಾಮಯ್ಯನರಮನೆ ವಳಗಾಲ
ಬೆಳ್ಳಿ ಕೊಳಗದಲಿ ಅಳಿಯೆಂದ
ಅತ್ತಲ ಕೊಳಗಲ್ಲ ಇತ್ತಲ ಕೊಳಗಲ್ಲ
ಗುತ್ತಿರಾಮಯ್ಯನ ಅರಮನೆ
ದಿಲ್ಲಿರಾಮಯ್ಯನ ಅರಮನೆ ವಳಗಾಳ
ಎಚ್ಚೀನ ಕೊಳಗದಲಿ ಅಳೆಯೆಂದ

ವಾಲೆ ತೊಡಿಯ ಮ್ಯಾಲೆ ಗ್ಯಾನ ಸಿವನ ಮ್ಯಾಲೆ
ಆರುಸೇರಿನ ಉಡುದಾರೆ
ಆರುಸೇರಿನ ಉಡುದಾರೆ ವಳಗಾಳ
ಮನ ಮುತ್ತು ಬಿಟ್ಟು ಬರನಲ್ಲೆ

ಮನಮುತ್ತು ತಗದುನಾರಿ ಕೈಗೆಕೊಟ್ಟು
ಬ್ಯಾಗಾನೆ ರಾಮಯ್ನ ಬರ ಏಳಿ
ಬ್ಯಾಗಾನೆ ರಾಮಯ್ನ ಬರ ಏಳಿ ಬೂವದಕ್ಕಿ
ತೀರುಸಕೊಬ್ಬ ದಣಿಬೇಕು

ವೊತ್ತಿಗೆ ತೊಡಿಯಮ್ಯಾಲೆ ಚಿತ್ತ ಸಿವನ ಮ್ಯಾಲೆ
ಅತ್ತುಸೇರಿನ ಉಡುದಾರ
ಅತ್ತುಸೇರಿನ ಉಡುದಾರ ದೊಳಗಾಳ
ಬಟ್ಟಮುತ್ತು ಬಿಟ್ಟುಬರನಲ್ಲೆ

ಬಟ್ಟಮುತ್ತು ತಗದು ನಿಸ್ತ್ರೆ ಕೈಗೆ ಕೊಟ್ಟು
ಗಕ್ಕನೆ ರಾಮಯ್ಯ ಕರೆಸೀರೆ
ಗಕ್ಕನೆ ರಾಮಯ್ಯ ಕರೆಸೀರೆ ಬೂವದಕ್ಕಿ
ಒಪ್ಪಿಸುವಂತ ದಣಿಬೇಕು

ಅಲ್ಲೇನೆ ಕೊಳಗಲ್ಲ ಒಲ್ಲೇನೆ ಕೊಳಗಲ್ಲ
ಅಲ್ಲೋಬೆನಳ್ಳಿ ಕಡಲೀಯ
ಅಲ್ಲೋಬೆನಳ್ಳಿ ಕಡಲೀಯ ಗೋದಿ ಅಳೆದ
ಬೆಳ್ಳಿ ಕೊಳಗದಲಿ ಅಳೆದಾನೆ

ಅತ್ತಾಲಕೊಳಬಲ್ಲ ಇತ್ತಾಲ ಕೊಳಗಲ್ಲ
ಚಿಕ್ಕೋಬೇನಳ್ಳಿಕಡಲೀಯ
ಚಿಕ್ಕೋಬೇನಳ್ಳಿಕಡಲೀಯ ಗೋದಿ ಅಳೆವ
ಎಚ್ಚೀನ ಕೊಳಗದಲಿ ಅಳೆದಾನೆ

ಉಪ್ಪರಿಗ್ಯಾಗ ಅತ್ತು ಕುಮ್ಮಟನಿಟ್ಟು
ಇಟ್ಟು ಸಿರಿಗಂದ ಬೆವರೂತ
ಇಟ್ಟು ಸಿರಿಗಂದ ಬೆವರೂತ ಕಂಚುಗಾರಣ್ಣ
ವಪ್ಪಕ ಮಾಡ್ಯಾನೆ ಎರಡರಿವಾಣ

ವಪ್ಪವಾದವು ಎರಡು ಅರಿವಾಣ
ಅವು ಇನ್ನು ಇಪ್ಪತ್ತೊನ್ನೀಗೆ ಬೆಲೆಯಾಗಿ
ಅವು ಇನ್ನು ಇಪ್ಪತ್ತೊನ್ನೀಗೆ ಬೆಲೆಯಾಗಿ ಅರಿವಾಣದಾಗ
ವಪ್ಪವಾದವು ಎರಡುಗೌಡಮುದ್ದೆ

ವಾವುರಿಗ್ಯಾಗೆ ಆರುಕುಮ್ಮಟನಿಟ್ಟು
ಈರ ಸಿರಿಗಂದ ಬೆವರೂತ
ಈರ ಸಿರಿಗಂದ ಬೆವರೂತ ಕಂಚುಗಾರಣ್ಣ
ಮೋವಕ ಮಾಡ್ಯಾನೆ ಎರಡರಿವಾಣ

ಮೋವಕ ಮಾಡ್ಯಾನೆ ಎರಡರಿವಾಣ ಅವು ಇನ್ನ
ನಲವತ್ತೋನ್ನೀಗೆ ಬೆಲೆಮುಗದು
ನಲವತ್ತೋನ್ನೀಗೆ ಬೆಲೆಮುಗದು ಅರಿವಾಣಾದಾಗ
ಆಯವಾದವು ಎರಡು ಗೌಡಮುದ್ದೆ

ಬಟ್ಟಲದಾಗಳ ಮುದ್ದೆ ಸುತ್ತಾಕಿ ನೋಡ್ಯಾನೆ
ಕಸ್ತಗಾರ ಕಾಣ ಮೆರೆಯರಾಮ
ಕಸ್ತಗಾರ ಕಾಣ ಮೆರೆಯರಾಮ ರಾಮಗೌಡ ಮುದ್ದೆ
ಮುಕ್ಕೋದರು ತಪ್ಪ ತಗುದಾನೆ

ಅರಿವಾಣದಾಗಳ ಮುದ್ದೆ ತಿರುವಾಕಿ ನೋಡ್ಯಾನೆ
ಕಡಿದುಗಾರ ಕಾಣೆ ಮೆರೆಯೆರಾಮ
ಕಡಿದುಗಾರ ಕಾಣೆ ಮೆರೆಯೆರಾಮ ಗೌಡಮುದ್ದೆ
ನೆಲಬಿಟ್ಟಿ ತುಪ್ಪ ತಗುದಾನೆ

ಅರಿವಾಣದಾಗಳ ಮುದ್ದೆತಿರುವಾಕಿ ನೋಡ್ಯಾನೆ
ಕಡಿದುಗಾರ ಕಾಣೆ ಮೆರೆಯೆರಾಮ
ಕಡಿದುಗಾರ ಕಾಣೆ ಮೆರೆಯೆರಾಮ ಗೌಡಮುದ್ದೆ
ನೆಲಬಿಟ್ಟ ತುಪ್ಪತಗುದಾನೆ

ಉಪ್ಪನೀರು ಬಾವ್ಯಾಗ ವೊಕ್ಕು ನೀರು ಕುಡಿಸ್ಯಾನೆ
ಪುತ್ರ ತರುಗಾಳ ವಡೆತಾರೋ
ಪುತ್ರ ತರುಗಾಳ ವಡೆತಾರೋ ಮಾರನೋರ
ಪುತ್ರರುಂಡಾನೆ ವಣಬೂವ

ಸೀನೀರು ವೋಗಿ ನೀರು ಕುಡಿಸ್ಯಾನೆ
ಬಾಲಾನೆವೋಗಿ ವಡೆತಾರೋ
ಬಾಲಾನೆವೋಗಿ ವಡೆತಾರೋ ಮಾರನೋರ
ಬಾಲಾರುಂಡಾರು ವಣಬೂವ

ಕರಿಯ ಕಬ್ಬುವೆಂದು ಕೆರೆಯಾಗಿ ಆಡೋವು
ಕರಿಯೆಮ್ಮ ಆಲ ಕಠತನ್ನಿ
ಕರಿಯೆಮ್ಮ ಆಲ ಕಠತನ್ನಿ ಇವು ನಮ್ಮ
ಅರಿದಿಬೂವಾಕ ಅಳವಳಿಸಿ

ಬಿಳಿಯ ಕಬ್ಬು ತಿಂದು ಬೀದ್ಯಾಗ ಆಡೋವು
ಬಿಳಿಯ ಎಮ್ಮೆ ಆಲಕರತನ್ನಿ
ಬಿಳಿಯ ಎಮ್ಮೆ ಆಲಕರತನ್ನಿ ಇವು ನಮ್ಮ
ಆರಿದಿಬೂವಾಕ ಅಳವಡಿಸಿ

ಸಂದಿಸಂದಿಗುಂಟಬಂದಾನು ರಾಮಯ್ಯ
ಬಂಗಾರದ ಕೋಲ ತಿರುವೂತ
ಬಂಗಾರದ ಕೋಲ ತಿರುವೂತ ಮಾರನೋರ
ಕಂದ ಬಂದವನೆ ಕರೆದುಣ್ಣೆ

ಬೀದಿ ಬೀದಿಗುಂಟ ವೋದಾನೆ ರಾಮಯ್ಯ
ಸಾದೀನ ಕೋಲ ತಿರುವೂತ
ಸಾದೀನ ಕೋಲ ತಿರುವೂತ ರಾಮಯ್ಯ
ಮಾರನೋರ ಬಾಲ ಬಂದವ್ನೆ ಕರೆದುಣ್ಣೆ

ಇಪ್ಪತ್ತು ವರುಸಾದ ತಿಪ್ಪ್ಯಾಗಳ ಮುದೀಯ
ಇಪ್ಪೆವುಳು ಬಿದ್ದು ಗರಿಬೆಳೆದು
ಇಪ್ಪೆವುಳು ಬಿದ್ದು ಗರಿಬೆಳೆದು ಗೌಡಮುದ್ದೆ
ತುಪ್ಪಗಳೊಯ್ದು ಕಲೆಸ್ಯಾರೆ

ತುಪ್ಪಗೊಳೊಯ್ದು ಕಲೆಸ್ಯಾರೆ ಲೇಸೀನಗೌಡಮುದ್ದೆ
ವೊಕ್ಕು ಮೆರಿಯರಾಮ ಸಲಿಸ್ಯಾನೆ

ಆರು ವರುಸಾದ ವೋಣ್ಯಾಗಳ ಮುದ್ದೀಯ
ಬಾಲವುಳಬಿದ್ದು ಗರಿಬೆಳೆದು
ಬಾಲವುಳಬಿದ್ದು ಗರಿಬೆಳೆದು ಗೌಡಮುದ್ದೆ
ಆಲುಗಳೊಯ್ದು ಕಲೆಸ್ಯಾರೆ

ಆಲುಗಳೊಯ್ದು ಕಲೆಸೀದ ಗೌಡಮುದ್ದೆ
ವೊಯ್ದು ಮೆರೆಯೆರಾಮ ಸಲಿಸ್ಯಾನೆ
ವೊಯ್ದು ಮೆರೆಯೆರಾಮ ಸಲಿಸ್ಯಾನೆ ಮೇನತ್ತೀಗೆ
ನೀನೇನು ಕೊಡುವೆ ದೊರೆರಾಯ

ಅತ್ತಕಂದರ ಕೊಡುವೆ ಇಡಿಯಕ ಚತ್ರಿಕೆ ಕೊಡುವೆ
ನಿಸ್ತ್ರೆ ಅಡೆದ ಮಗಳ ಮದುವೀಯ
ನಿಸ್ತ್ರೆ ಅಡೆದ ಮಗಳ ಮದುವೀಯ ಚಪ್ಪರದಡಿಯ
ಮತ್ತೊಂದೆ ವೊನ್ನು ಪಡೆದಾನೆ

ಕರಿಯ ಕಂಬಳಿ ಅರವಾಗಿ ಆಸೆಂದ
ಅರುಗಾಳ ವುಳುವ ಸುರಿವ್ಯಾನೆ
ಅರುಗಾಳ ವುಳುವ ಸುರಿವ್ಯಾನೆ ಮೆರಿಯರಾಮ
ಅರುದೋಗೋ ವುಳುವ ಸಲುಸ್ಯಾನೆ

ಅರುದೋಗೋ ವುಳುವ ಸುರಿಸೀದ ಮೇನಬತ್ತೀಗೆ
ನೀನೇನು ಕೊಡುವೆ ದೊರೆರಾಯ

ಅತ್ತಕಂದ್ಲಕೊಡುವೆ ಇಡಿಯಕೆ ಚತ್ರಿಕೆ ಕೊಡುವೆ
ನಿಸ್ತ್ರೆ ಅಡೆದ ಮಗಳ ಮದುವೀಲಿ
ನಿಸ್ತ್ರೆ ಅಡೆದ ಮಗಳ ಮದುವೀಲಿ ಚಪ್ಪರದಡಿಯ
ಮತ್ತೊಂದು ವೊನ್ನ ಪಡೆದಾನೆ

ಮೊಬ್ಬುಗಂಬಳಿ ಉದ್ದಕಾಸೆಂದ
ಇಬ್ಬಾಳವುಳುವ ಸುರುವಾನೆ
ಇಬ್ಬಾಳವುಳುವ ಸುರುವಾನೆ ಮೆರಿಯರಾಯ
ಉದ್ದಾಗೋವುಳುವ ಸಲಿಸ್ಯಾನೆ

ಉದ್ದಾಗೋವುಳುವ ಸಲಿಸ್ಯಾನೆ ಮೇನತ್ತೀಗೆ
ನೀನೇನು ಕೊಡುವೆ ದೊರೆರಾಯ

ಏರಕಂದ್ಲ ಕೊಡುವೆ ಇಡಿಯಾಕೆ ಚತ್ರಿಕೊಡುವೆ
ನಾರಿಯಡೆದಮಗಳ ಮದುವೀಲಿ
ನಾರಿಯಡೆದಮಗಳ ಮದುವೀಲಿ ಚಪ್ಪರದಡಿಯಲಿ
ಮ್ಯಾಲೊಂದು ವೊನ್ನು ಪಡೆದಾನೆ

ಅಡ್ಡಗ್ವಾಡೆ ಮರೆಯಾಗಿ ವಜ್ರಂಗಿ ತೆರೆಕಟ್ಟಿ
ಬದ್ರೇರುಕುಂಚ ಬೆಳಗ್ಯಾರೆ
ಬದ್ರೇರುಕುಂಚ ಬೆಳಗ್ಯಾರೆ ಬೂವತೋಡಿ
ಎದ್ದಾವೆನಾಡ ಮರಿತೇಕು

ಗ್ವಾಡೀಯವರೆ ಮಾಡಿ ಮಾಣಿಕವತೆರೆಕಟ್ಟಿ
ನಾರೇರು ಕಂಚ ಬೆಳಗ್ಯಾರೆ
ನಾರೇರು ಕಂಚ ಬೆಳಗ್ಯಾರೆ ಬೂವ ತೋಡಿ
ಓಡಾವೆ ನಾಡುಮರಿತೇಕು

ಮಾತು ಜತನಾವೆ ಮಾತುಗಳು ಜತನಾವೆ
ಮಾತು ನಿಮ್ಮಲ್ಲಿ ಜತನಾವೆ
ಮಾತು ನಿಮ್ಮಲ್ಲಿ ಜತನಾವೆ ಬೆಳಗೀಲಿ
ಏಟು ಬಿದ್ದಾವು ಸ್ರವಿಯಾಗ

ಮುದ್ದೆಗಳು ಜತನಾವೆ ಮುದ್ದೆ ಜತನಾವೆ
ಮುದ್ದೆ ನಿಮ್ಮಲ್ಲಿ ಜತನಾವೆ
ಮುದ್ದೆ ನಿಮ್ಮಲ್ಲಿ ಜತನಾವೆ ಬೆಳುಗೀಲಿ
ಗುದ್ದುಬಿದ್ದಾವೆ ಸ್ರವಿಯಾಗೆ

ತುತ್ತುತರುತಾಳಂದು ನೆಚ್ಚಿಕೊಂಡಿರದೀರೆ
ತುತ್ತಲ್ಲಮಗಳೇ ದಳದೂಳಿ
ತುತ್ತಲ್ಲಮಗಳೇ ದಳದೂಳಿ ತಾಯಿತಂದೆ
ಕೊಟ್ಟ ಬುದ್ದ್ಯಾಗೆ ಇರಬೇಕು

ಬೋನ ತರುತಾನಂದು ನೊಡಿಕಂಡಿರೆದೀರೆ
ಬೋನವಲ್ಲಮಗಳೆ ದಳಗೂಳಿ
ಬೋನವಲ್ಲಮಗಳೆ ದಳಗೂಳಿ ತಾಯಿತಂದೆ
ಏಳೀದ ಬುದ್ದ್ಯಾಗ ಇರಬೇಕು

ಅವಳಾದ ಆಜಾರ ಅವಳಾದ ಬಜಾರ
ಅವಳ ಕೆತ್ತಿಸಿದ ಡೌಳಾರ
ಅವಳ ಕೆತ್ತಿಸಿದ ಡೌಳಾರ ಪ್ಯಾಟ್ಯಾಗ
ದೊರೆಯೇ ರಾಮಯ್ನ ಅರುಮನೆ

ದೊರಿಯೇ ರಾಮಯ್ನ ಅರಮನೆ ಮುಂದೆ
ಕೆರುವುಗಳಾ ಬಿಟ್ಟೋರಿಗೆ ಅಪರಾದ

ಮುತ್ತೀನ ಆಜಾರ ಮುತ್ತೀನ ಬಜಾರ
ಮುತ್ತು ಕೆತ್ತಿಸಿದ ಡೌಳಾರ
ಮುತ್ತು ಕೆತ್ತಿಸಿದ ಡೌಳಾರ ಪ್ಯಾಟ್ಯಾಗ
ಸೆಟ್ಟಿ ರಾಮಯ್ನ ಅರಮನೆ

ಸೆಟ್ಟಿ ರಾಮಯ್ನ ಅರಮನೆ ಬಾಗುಲಮುಂದೆ
ಮೆಟ್ಟುಳಾ ಬಿಟ್ಟೋರಿಗೆ ಅಪರಾದ