ದೊಡ್ಡಜ್ಯಾಡಿ ಹಾಸುವುದು

ಒಂದೊಂದು ಚೆಂದಾದ ಲಿಂಗಾನ ನ್ಯನದೇಯ
ಮಂದಲಗಿರಿ ತ್ರೊಳಸಿ ಮಾಲೆಯೆವ್ರ
ಮಂದಲಗಿರಿ ತ್ರೊಳಸಿ ಮಾಲೆಯೆವ್ರ ಮೂಡಿಬರುವ
ಚಂದ್ರುನಪಾದಾನ ನ್ಯೆನದೇನು

ಯಾವ್ಯಾವ ಚೆಂದಾದ ದ್ಯಾವಾರ ನ್ಯನದೇನೆ
ದೇವಗಿರಿ ತ್ರೊಳಸಿ ಮಾಲೆಯವರ
ದೇವಗಿರಿ ತ್ರೊಳಸಿ ಮಾಲೆಯವರ ಮೂಡಿಬರುವ
ಸೂರಿದನ ಪಾದಾನ ನ್ಯನದೇನು

ಪತ್ರಾವಳಿ ಇಡಿದು ಅಪ್ಪ ನಿಮ್ಮ ಪಾದಾನ್ಯನದೇನು
ಚಿಕ್ಕಚಿತ್ರಗಿರಿಯ ರತುನಾವೆ
ಚಿಕ್ಕಚಿತ್ರಗಿರಿಯ ರತುನಾವೆ ಮಂಚಾದ
ಚಿತ್ತಯ್ನ ಮೊದುಲು ನ್ಯನದೇನು

ಸಾಲಾವಳಿ ಇಡಿದು ಸ್ವಾಮಿ ನಿಮ್ಮನ್ಯನದೇನು
ರಾಯಚಿತ್ತರಗಿರಿಯ ರತುನಾವೆ
ರಾಯಚಿತ್ತರಗಿರಿಯ ರತುನಾವೆ ಮಂಚಾದ
ಮಾಲಿಂಗನ ಮದಲು ನ್ಯನದೇನು

ಎಲ್ಲೆಲ್ಲಿ ಮುನ್ನ ಬಲ್ಲಿದೋನ ನ್ಯನದೇನು
ಕಲ್ಲೊತ್ತೀಲಿರುವ ಕದಲೀಯ
ಕಲ್ಲೊತ್ತೀಲಿರುವ ಕದಲೀಯ ಕಾಟಮಲಿಂಗ
ಬಿಲ್ಲಿನ ಗೊಂಡೇವನ್ಯನದೇನ

ಯಾತ್ಯಾತಕ ಮುನ್ನ ಆತಾನನ್ಯನದೇನು
ಕಾತೊತ್ತಿಲಿರುವ ಕದಲೀಯ
ಕಾತೊತ್ತಿಲಿರುವ ಕದಲೀಯ ಜುಂಜಣ್ಣಾನ
ಬಾಕಿನ ಗೊಂಡೇವನ್ಯನದೇನ

ನೆತ್ತೀಲಿ ಜಡೆಯ ವೊತ್ತಿರುವೋನ ನ್ಯನದೇನೆ
ಬೆಚ್ಚನಗ್ಗಣಿಯ ಮಟದೋರು
ಬೆಚ್ಚನಗ್ಗಣಿಯ ಮಟದೋರು ವೊನ್ನಬಂಡೆ
ಅಪ್ಪ ಜಂಗಮ ನ್ಯನದೇನೆ

ಕೆನ್ನೀಲಿ ಜಡೆಯ ಅಣ್ಣಿರುವೋನನ್ಯನದೇನೆ
ತಣ್ಣನ್ನಗ್ಗಣಿಯ ಮಟದೋರು
ತಣ್ಣನ್ನಗ್ಗಣಿಯ ಮಟದೋರು ವೊನ್ನಬಂಡೆ
ಅಣ್ಣ ಜಂಗಮರ ನ್ಯನದೇನೆ

ಮತ್ತೆನ್ಯನದೇನೆ ಅಟ್ಟಿದೈಮಾರಾನ
ಪಟ್ಟೀಯ ದಟ್ಟಿ ಚೆಲುವಾನ
ಪಟ್ಟೀಯ ದಟ್ಟಿ ಚೆಲುವಾನ ಆಗಲವಾಡಿ
ಎತ್ತೀನ ಬೋಗಿಯ ನ್ಯನದೇನೆ

ನಾವು ನ್ಯನದೇವು ದೇವ್ರ ದೈಮಾರಾನ
ಸಾಲೆಯದಟ್ಟಿ ಸೆಲುವ
ಸಾಲೆಯದಟ್ಟಿ ಸೆಲುವ ಆಗಲುವಾಡಿ
ಎತ್ತೀನ ಬೋಗೀಯ ನ್ಯನದೇನೆ

ನಾವು ನ್ಯನದೇವು ದೇವ್ರ ದೈಮಾರಾನ
ಸಾಲೆಯದಟ್ಟಿ ಸೆಲುವ
ಸಾಲೆಯದಟ್ಟಿ ಸೆಲುವ ಆಗಲುವಾಡಿ
ಆವೀನ ಬೋಗೀಯ ನ್ಯನದೇನೆ

ಮತ್ತೆ ಸೋಬಾನ ಎಚ್ಚಾಗಿ ಬರಲಂದು
ಅಪ್ಪಯ್ಯ ನಿಮ್ಮನ್ಯನದೇನೆ
ಅಪ್ಪಯ್ಯ ನಿಮ್ಮನ್ಯನದೇನೆ ಸಾಣೆಕೆರೆಯ
ಚಿತ್ತಾದ ಅಲಗೆ ಕೊಡುಮನೆಯ

ನಮ್ಮ ಸೋಬಾನ ಚೆಂದ್ವಾಗಿ ಬರಲಂದು
ನಮ್ಮಯ್ಯ ನಿಮ್ಮ ನ್ಯನದೇನೆ
ನಮ್ಮಯ್ಯ ನಿಮ್ಮ ನ್ಯನದೇನೆ ಕ್ವಾಟೇಕೇರಿಯ
ಬಣ್ಣಾದ ಅಲಗೆ ಕೊಡುಮತಿಯ

ಏರಿಯಿಂದಾಲ ತಾಳೇದ ಗರಿಗಾಳ
ವೋಗಿರಾವುತರೆ ಕೊಯ್ತನ್ನಿ
ವೋಗಿರಾವುತರೆ ಕೊಯ್ತನ್ನಿ ಓಬೇನಳ್ಳಿ
ರಾಯರಿಗುತ್ತುರುವ ಬರೆದಾಳೆ

ಕಟ್ಟಿಯಿಂದಾಲ ಬಿಚ್ಚೋಲೆಗರಿಗಾಳ
ವೊಕ್ಕುರಾವುತರೆ ಕೊಯ್ತನ್ನಿ
ವೊಕ್ಕುರಾವುತರೆ ಕೊಯ್ತನ್ನಿ ಓಬೇನಳ್ಳಿ
ಸೆಟ್ಟ್ಯೋರಿಗುತ್ತರವ ಬರೆದಾರೆ

ಚಿಕ್ಕೋಬೆನಳ್ಳಿ ಗಚ್ಚೀನ ಚಾವುಡ್ಯಾಗ
ಮತ್ಯಾರಿದ್ದೀರಿ ಇರಿಯೋರು
ಮತ್ಯಾರಿದ್ದೀರಿ ಇರಿಯೋರು ತಾಳವಟ್ಟಿ
ಉತ್ತರವು ಬಂದವು ಚದುರೀಗೆ

ರಾಯೋಬೇನಳ್ಳಿ ಗಾರೆ ಚಾವುಡ್ಯಾಗೆ
ನೀವ್ಯಾರಿದ್ದೀರಿ ಇರಿಯೋರು
ನೀವ್ಯಾರಿದ್ದೀರಿ ಇರಿಯೋರು ತಾಳವಟ್ಟಿ
ವಾಲೆ ಬಂದಾವು ಚೆದುರೀಗೆ

ನೆಂಟ ಬರೆದವಾಲೆ ನಿಮತು ಓದಿಕಂಡ
ನೆಂಟರಗುತ್ತುರುವ ಬರೆದಾನೆ
ನೆಂಟರಗುತ್ತುರುವ ಬರೆದಾನೆ…..
……

ಕಪ್ಪೀನಕಿವಿಯ ನಿಸ್ತ್ರೇರ ಮನೆಯಾಗೆ
ಗಕ್ಕಾನೊಂದಡಿಗೆ ಬಿಸಿಮಾಡೆ
ಗಕ್ಕಾನೊಂದಡಿಗೆ ಬಿಸಿಮಾಡೆ ಓಬೇನಳ್ಳಿ
ತಾಳವಟ್ಟಿ ನಂಟಿರುಗುತ್ತರವ ಬರೆದಾರು

ವಾಲೇಯ ಕಿವಿಯ ನಾರೇರ ಮನಿಯಾಗೆ
ಬೇಗಾನೊಂದಡಿಗೆ ಬಿಸಿಮಾಡೆ
ಬೇಗಾನೊಂದಡಿಗೆ ಬಿಸಿಮಾಡೆ ತಾಳವಟ್ಟಿ
ವಾಲೆ ಬಂದಾವೆ ಚೆದುರೀಗೆ

ಚಿಕ್ಕೋಬೆನಳ್ಳಿ ಚಿತ್ತಾರದ ದೋಣೀಲಿ
ಅತ್ತೀಯ ಮರದ ನೆಳ್ಳೀಲಿ
ಅತ್ತೀಯ ಮರದ ನೆಳ್ಳೀಲಿ ನನ್ನಣ್ಣಗಳು
ಮುಚ್ಚೀದ ಕಡತ ತಗುಸ್ಯಾರೆ

ಮುಚ್ಚೀಡ ಕಡತ ತಗಿಸಿ ಆರೋರ ಕರೆಸಿ
ಮತ್ತೆ ತುಪ್ಪದಲಿ ಮಕತೊಳೆದು
ಮತ್ತೆ ತುಪ್ಪದಲಿ ಮಕತೊಳೆದು ಓದ್ಯಾರೆ
ಬಿಟ್ಟ ಗೌಡೀಕೆ ನಮದಂದು

ರಾಯದೋಬೇನಳ್ಳಿ ರೂವಾರದೋಣೀಲಿ
ಆಲಾದ ಮರವ ನೆರಿಳೀಲಿ
ಆಲಾದ ಮರವ ನೆರಿಳೀಲಿ ನನ್ನಣ್ಣಗಳು
ಮಾಜೀದ ಕಡತ ತಗಿಸ್ಯಾರೆ

ಮಾಜೀದ ಕಡತ ತಗಿಸಿ ಆರೋರ ಕರಿಸಿ
ಆಲುತುಪ್ಪದಲಿ ಮೊಕ ತೊಳೆಸಿ
ಆಲುತುಪ್ಪದಲಿ ಮೊಕ ತೊಳೆಸಿ ಓದ್ಯಾರೆ
ವೋದಾಗೌಡೀಕೆ ನಮದಂದು

ಕಟ್ಟೀಯ ಮ್ಯಾಲಿನ ವುಟ್ಟಿತು ಬೇವಿನ ಮರ
ವುಟ್ಟುತಲೆ ಕಾಯಿಜಗುವೂತ
ವುಟ್ಟುತಲೆ ಕಾಯಿಜಗುವೂತ ಕಟ್ಟಿಮ್ಯಾಲೆ
ಕಟ್ಯಾರು ಗೋಸಣ್ಣನ ಗೌಡೀಕೆ

ಏರೀಯಮ್ಯಾಲೆ ಮೂಡೀತು ಬೇವಿನಮರ
ಮೂಡುತಲೆ ಕಾಯಿ ಜಗವೂತ
ಮೂಡುತಲೆ ಕಾಯಿ ಜಗವೂತ ಕಟ್ಟಿಮ್ಯಾಲೆ
ಆದಾವು ಗೋಸಣ್ಣನ ಗೌಡೀಕೆ

ಚಿಕ್ಕೋಬೆನಹಳ್ಳಿ ಗಚ್ಚೀನ ಚಾವುಡ್ಯಾಗ
ಚಿಕ್ಕರಸರ ಕೂಟಪಗಡೀಯ
ಚಿಕ್ಕರಸರ ಕೂಟಪಗಡೀಯ ಆಡೂವ
ಪರುಮಳದ ತೆನೆಯ ಬರಏಳೇ

ರಾಯೋಬೇನಳ್ಳಿ ಗಾರೆ ಚಾವುಡ್ಯಾಗೆ
ರಾಯರಸರ ಕೂಟಿ ಪಗಡೀಯ
ರಾಯರಸರ ಕೂಟಿ ಪಗಡೀಯ ಆಡೂವ
ಪರುಮಳದ ತೆನೆಯ ಬರ ಏಳಿ

ಎತ್ತತ್ತಿಕಂಡು ಮುತ್ತೀನ ಕೂಡುಡಕಂಡು
ಅಕ್ಕನೋಡೆ ಅವರ ದೌಲತ್ತು
ಅಕ್ಕನೋಡೆ ಅವರ ದೌಲತ್ತು ಓಬೇನಳ್ಳಿ
ಅಚ್ಚಿನ ಗೌಡಾರು ಬರುತಾರೆ

ಓರೆತ್ತಿಕಂಡು ವೂವೀನ ಗೊಡಗಿಡಕಂಡು
ತಾಯಿನೋಡಿ ಅವರ ದೌಲತ್ತು
ತಾಯಿನೋಡಿ ಅವರ ದೌಲತ್ತು ಓಬೇನಳ್ಳಿ
ನಾಡಗೌಡಾರು ಬರುತಾರೆ

ಅತ್ತನಾಡಿನ ಗೌಡ ಇತ್ತನಾಡೀಗೆ ಬರುವಾಗ
ಬತ್ತಲುಗಟ್ಯಾವೆ ಬಿಳಿಯೆಲೆ
ಬತ್ತಲುಗಟ್ಯಾವೆ ಬಿಳಿಯೆಲೆ ಓಬೇನಳ್ಳಿ
ಚಿಕ್ಕಂದಿನ ಗೌಡ್ತಿ ಬರುವಾಗ

ನಾಡಿನ ಗೌಡ ನಾಡಿಗೆ ಬರುವಾಗ
ತ್ವಾರಣಗಟ್ಯಾವೆ ಬಿಳಿಯೆಲೆ
ತ್ವಾರಣಗಟ್ಯಾವೆ ಬಿಳಿಯೆಲೆ ದೊಡ್ಡೇರಿ
ಯಾಗಿನ ಗೌಡ ಬರುವಾಗ

ತಾಯಮ್ಮ ಬಾರೆ ತಾಲೀಲಗ್ಗಣಿ ತಾರೆ
ಮ್ಯಾಗಾಳಮೊಕವ ತೊಳೆದೇನು
ಮ್ಯಾಗಾಳಮೊಕವ ತೊಳೆದೇನು ಮಾರನೋರ
ಬಾಲಗದ್ದಿಗೆ ನಡೆದಾನೆ

ಅಕ್ಕಯ್ಯ ಬಾರೆ ಬೆಟ್ಟಿಲಗ್ಗಣಿತಾರೆ
ಮುಂಬಾಗಲು ಮೊಕವ ತೊಳೆದೇನು
ಮುಂಬಾಗಲು ಮೊಕವ ತೊಳೆದೇನು ಮಾರನೋರ
ಕಂದಗದ್ದಿಗ್ಗೆ ನಡದೇನು

ರಾಯರು ಬರುವಾಗ ಓಣಿದನಬೆದರ್ಯಾವೆ
ಬಾವಿಯ ನೀರು ಕಲಕ್ಯಾವೆ
ಬಾವಿಯ ನೀರು ಕಲಕ್ಯಾವೆ ಮಾರನೋರ
ರಾಯರು ಬಂದೂರ ವೊಗುವಾಗ

ಸೆಟ್ಟ್ಯೋರು ಬರುವಾಗ ಅಟ್ಟಿದನ ಬೆದರ್ಯಾವೆ
ಕಟ್ಟೀಯ ನೀರು ಕಲಕ್ಯಾವೆ
ಕಟ್ಟೀಯ ನೀರು ಕಲಕ್ಯಾವೆ ಮಾರನೋರು
ಸೆಟ್ಟರು ಬಂದಟ್ಟಿ ವೊಗುವಾಗ

ಅತ್ತು ತಿಂಗಳು ನೂತು ಮತ್ತೆ ತಿಂಗಳುನೇದು
ಅತ್ತಿ ಬರಣಿಯಾಗ ಮಡಗೀದ
ಅತ್ತಿ ಬರಣಿಯಾಗ ಮಡಗೀದ ಕರಿಯಜ್ಯಾಡಿ
ಸೆಟ್ಟರಿದ್ದಲ್ಲಿ ಬರಬೇಕು

ಆರು ತಿಂಗಳು ನೂತು ಮೂರುತಿಂಗಳುನೇಯ್ದು
ಆಲಾದ ಬರಣ್ಯಾಗ ಮಡಗ್ಯಾರೆ
ಆಲಾದ ಬರಣ್ಯಾಗ ಮಡಗ್ಯಾರೆ ಕರಿಯಜ್ಯಾಡಿ
ರಾಯರಿದ್ದಲ್ಲಿ ಬರಬೇಕು

ಆರು ಸಾವಿರ ಜ್ಯಾಡಿವೋರಿಗೇರಿಕಂಡು
ವಾರೀಲಿ ಸಂದಗಾನಿ ಕರಕಂಡು
ವಾರೀಲಿ ಸಂದಗಾನಿ ಕರಕಂಡು ಮಾರಗಾನಿ
ವೋಣ್ಯಾಗಾಸ್ಯಾನೆ ಕರಿಯ ಜ್ಯಾಡಿ

ಅತ್ತುಸಾವಿರ ಜ್ಯಾಡಿಯ ಎತ್ತಿಗೇರಿಕಂಡು
ವೊತ್ತೀಲಿ ಸಂದಗಾನಿ ಕರಕಂಡು
ವೊತ್ತೀಲಿ ಸಂದಗಾನಿ ಕರಕಂಡು ಬುಳ್ಳಪ್ಪ
ವೋಣ್ಯಾಗಾಸ್ಯಾನೆ ಕರಿಯಜ್ಯಾಡಿ

ಕುರಿತುಪ್ಪಡಿ ಕುರುಬೂತಿ ನೂತನೂಲು
ಕುರುಬಗೌಡ ನೇತರತುನಾವೆ
ಕುರುಬಗೌಡ ನೇತರತುನಾವೆ ಕರಿಯಜ್ಯಾಡಿ
ರಾಯರಿದ್ದಲ್ಲಿಗೆ ಬರಬೇಕು

ಕೆಂಗುರಿತುಪ್ಪಡ ಎಂಗುಸುನೂತನೂಲು
ಜಂಬುಗೌಡ ನೇದರತುನಾವೆ
ಜಂಬುಗೌಡ ನೇದರತುನಾವೆ ಕರಿಯಜ್ಯಾಡಿ
ರಾಯರಿದ್ದಲ್ಲಿಗೆ ಬರಬೇಕು

ಅತ್ತುಕರಿಯ ಜ್ಯಾಡಿ ಅತ್ತುಬಿಳಿಯ ಜ್ಯಾಡಿ
ಮತ್ತೊಂದು ಜ್ಯಾಡಿ ಬಳಿರತುನಾವೆ
ಮತ್ತೊಂದು ಜ್ಯಾಡಿ ಬಳಿರತುನಾವೆ ಜ್ಯಾಡಿಮ್ಯಾಲೆ
ತುಪ್ಪಕ ಕುಳಿತಾರೆ ಗೌಡಾರು

ಮ್ಯಾಲೊಂದು ಜಾಡಿ ರುತನಾದ ಜ್ಯಾಡಿ
ಮ್ಯಾಲೆಮೋವಾಕ ಕುಳಿತಾರೆ ಗೌಡಾರು

ನಡೆದಾರಲ್ಲೆ ನಿಡುಗಲ್ಲಿನ ದೊರೆಗಾಳು
ನಡೆದಾರೆ ದಗ್ಗಂಬೋವೂದಕೀಯ
ನಡೆದಾರೆ ದಗ್ಗಂಬೋವೂದಕೀಯ ವೊದ್ದುಕಂಡು
ನಡೆದಾರೆ ಜ್ಯಾಡಿ ನೆಡುವಾಕೆ

ಕುಂತಾರಲ್ಲೆ ನನ್ನ ಕುಂದರ್ಪಿ ಗೌಡಾರು
ಕುಂತರಲ್ಲೆ ದಗ್ಗಂಬವೊದಕೀಯ
ಕುಂತರಲ್ಲೆ ದಗ್ಗಂಬೋವೂದಕೀಯ ವೊದ್ದುಕಂಡು
ಕುಂತಾರಜ್ಯಾಡಿನೆಡುವಾಕೆ

ಒಂಟಿ ಇಟ್ಟೈದಾನೆ ಕಂಟಿಸರ ಆಕೈದಾನೆ
ನೆಂಟಾನಬೆರಳ ಇಡಕಂಡು
ನೆಂಟಾನಬೆರಳ ಇಡಕಂಡು ಸಂದಗಾನಿ
ಬಂಟಗದ್ದಿಗ್ಗೆ ನಡೆದಾನೆ

ಕೋಲು ಇಡಿದಾನೆ ಸಾಲ್ಯವೊದ್ದೈದಾನೆ
ಬಾಮೈದಾನ ಬೆರಳ ಇಡಕಂಡು
ಬಾಮೈದಾನ ಬೆರಳ ಇಡಕಂಡು ಮಾರಗಾನಿ
ಜ್ಯಾಣಗದ್ದಿಗೆ ನಡೆದಾನೆ

ಜ್ಯಾಡಿಪೂಜ್ಯಾದಾವು ಜ್ಯಾಣನ ಬರ ಏಳೆ
ನೀಲದುಂಗುರದ ಗೌಡಾನ
ನೀಲದುಂಗುರದ ಗೌಡಾನ ಗೋಸಣ್ಣಾನ
ಜ್ಯಾಡಿಪೂಜೆಗೆ ಬರ ಏಳೆ

ಗದ್ದಿಗೆ ಪೂಜ್ಯಾದಾವು ಗೌಡನ ಬರ ಏಳಿ
ಮುದ್ದಿನುಂಗುರದ ಚೆಲುವಾನ
ಮುದ್ದಿನುಂಗುರದ ಚೆಲುವಾನ ಸಿರಿಯಣ್ಣಾನ
ಗದ್ದಿಗೆ ಪೂಜ್ಯಾದವು ಬರ ಏಳಿ

ರಾಸಿಯಡಕೆ ಬಂದಾವು ರಾಯರ ಬರಏಳಿ
ಸಾಕ್ಸಾಲವೆಂಬ ಗೌಡಾನ
ಸಾಕ್ಸಾಲವೆಂಬ ಗೌಡಾನ ಈರ ಸಿರಿಯಣ್ಣನ
ರಾಸಿಯಡಕೆ ಬಂದಾವು ಬರಏಳಿ

ವೊನ್ನಡಕೆ ಬಂದಾವು ಚೆನ್ನಿಗನ ಬರಏಳಿ
ಇನ್ನ ಸಾಲುವೆಂಬ ಗೌಡಾನ
ಇನ್ನ ಸಾಲುವೆಂಬ ಗೌಡಾನ ಗೌಡಗೋಸಣ್ಣನ
ವೊನ್ನಡಿಕೆ ಬಂದಾವು ಬರ ಏಳೆ

ಅಟ್ಟೀಯ ಗೌಡ ಪಟ್ಟಾದ ಪೂಜಾರಿ
ಒಕ್ಕಾರೆ ರಾಸಿನೆಡುವಾಕೆ
ಒಕ್ಕಾರೆ ರಾಸಿನೆಡುವಾಕೆ ಗುಡ್ಡದೆತ್ತಯ್ನ
ಇಳ್ಯಾವ ತಗಿಬನ್ನಿ

ಇಳ್ಯಾವ ತಗಿಬನ್ನಿ ನಾಚಾನೆ ಗೌಡ
ದ್ಯಾವಾರ ಪೂಜಾರಿ ವೋಗವೆ ರಾಸಿ ನೆಡುವಾಕೆ

ಉಪ್ಪರಿಗಾಕ್ಯಾರೆ ಆರುಕಾಲೇಣೆ
ಮುತ್ತಿನ ಪಂಚಾರತಿಗೆ ಎರಿಯೆಣ್ಣೆ
ಮುತ್ತಿನ ಪಂಚಾರತಿಗೆ ಎರಿಯೆಣ್ಣೆ ಎರಕಂಡು
ವಪ್ಪ ಕುಂತವರೆ ಗೌಡಾರು

ಮುತ್ತೂನೆ ಉದುರುಸ್ತ ಮುತ್ತೂನೆ ಚೆದುರುಸ್ತ
ಮುತ್ತೀನ ರುಮಾಲು ಚೆದುರುಸ್ತ
ಮುತ್ತೀನ ರುಮಾಲು ಚೆದುರುಸ್ತ ಗೋಸಣ್ಣ
ಮತ್ತೆ ಆಗವನೆ ಸ್ರವಿಯಾಗ

ಅವಳಾನೆ ಎದುರುಸ್ತ ಅವಾಳನೆ ಚೆದುರುಸ್ತ
ಅವಳಾದರುಮಾಲು ತಿರುವೂತ
ಅವಳಾದರುಮಾಲು ತಿರುವೂತ ಸಿರಿಯಣ್ಣ
ಅವಳೆ ಆಗ್ಯಾವೆ ಸ್ರವಿಯಾಗ

ವೊನ್ನಾನೆ ಉದುರುಸ್ತ ವೊನ್ನೊನೆ ಚೆದುರುಸ್ತ
ವೊನ್ನೀನ ರುಮಾಲು ತಿರುವೂತ
ವೊನ್ನೀನ ರುಮಾಲು ತಿರುವೂತ ಚಿಕ್ಕಣ್ಣ
ವೊನ್ನೆ ಆಗವನೆ ಸ್ರವಿಯಾಗ

ಗಿನ್ನಲಾಗಾಳ ಸಣ್ಣ ನೇರಿಲಣ್ಣ
ಬಣ್ಣಕ ನೂಲೆಳೆಯ ತಗುದಂಗೆ
ಬಣ್ಣಕ ನೂಲೆಳೆಯ ತಗುದಂಗೆ ಐದಾನೆ
ನಮ್ಮಗೌಡಾರ ಕರುವಲ್ಲು

ಬಟ್ಟಲಾಗಾಳ ಬಟ್ಟ ನೇರಿಲಣ್ಣು
ಜೊತ್ತಿಲಿ ನೂಲೆಳೆಯ ತಗುದಂಗೆ
ಜೊತ್ತಿಲಿ ನೂಲೆಳೆಯ ತಗುದಂಗೆ ಐದಾವೆ
ಸೆಟ್ಟಿ ಗೌಡೀರ ಕರುವಲ್ಲು

ರಾಯರಾಯರಿಗೆ ನ್ಯಾಯ ಬಿದ್ದೈದಾವೆ
ತೋರಿರಡಕೆ ವರಿಯಾಕೆ
ತೋರಿರಡಕೆ ವರಿಯಾಕೆ ಎಂದಾರೆ
ವಾಡೇದ ಬಾಯಿ ತಗುಸ್ಯಾರೆ

ಸೆಟ್ಟಿ ಸೆಟ್ಟರಿಗೆ ಲೆತ್ತಬಿದ್ದೈದಾವೆ
ಕಟ್ಟಿರೊನ್ನಡಕೆ ವರಿಯಾಕೆ
ಕಟ್ಟಿರೊನ್ನಡಕೆ ವರಿಯಾಕೆ ಅಂದಾರೆ
ಪೆಟ್ಟಿಗೆಬಾಯಿ ತಗುಸ್ಯಾರೆ

ಪೆಟ್ಟಿಗೆಬಾಯಿ ತಗುಸ್ಯಾರೆ ತಂದರವ್ವ
ಸೆಟ್ಟರೊಪ್ಪಂತ ಅಡಕೀಯ

ಸೆಟ್ಟಿಬುಳ್ಳಣ್ಣಾನ ಬಾಲಸಮರಂತಾರು
ನಾಗಳದ ಗಂಟಿಯವುಲಿ ಚರ್ಮ
ನಾಗಳದ ಗಂಟಿಯವುಲಿಚರ್ಮ ಬುಳ್ಳಣ್ಣ
ವೋದಲ್ಲಿ ಕೋಳ ಕೊಡನಂದ

ಕರಿಯ ಕಂಬಳಿ ಆರುವಾಗ ಆಸೆಂದ
ಅರಿಯ ಮೇಲೆ ಬಂಡಿ ಆಸೆಂದ
ಅರಿಯ ಮೇಲೆ ಬಂಡಿ ಆಸೆಂದ ಮಾರನೋರ
ದೊರೆ ಮಗನ ಸುಂಕ ಬಿಡೆನೆಂದ

ಮೊಬ್ಬು ಗಂಬಳಿ ಉದ್ದಾಕ ಆಸೆಂದ
ವೊಬ್ಬೇಲಿ ಬಂಡಿ ವೊಡಿಯೆಂದ
ವೊಬ್ಬೇಲಿ ಬಂಡಿ ವೊಡಿಯೆಂದ ಮಾರನೋರ
ಮುದ್ದುಮಗನೆ ಸುಂಕ ಕೊಡೆನೆಂದ