ಯೌವನದ ವೇಳೆ ಹುಟ್ಟಬಹುದಾದ ತೀವ್ರ ತೃಷೆಗಿಂತ ಮನಸ್ಸಿನ ಆರ್ದ್ರತೆ ಮತ್ತು ಪ್ರೀತಿ ವಿವಾಹಕ್ಕೆ ಬಹಳ ಮುಖ್ಯ. ಅದು ಹೆಣ್ಣು ಗಂಡಿನ ನಡುವೆ ಬಹಳ ನಿಧಾನವಾಗಿ ಹುಟ್ಟಿ ಬೆಳೆಯಬೇಕು. ಗಟ್ಟಿಯಾಗಿ ನಿಲ್ಲುವಂತಾಗಬೇಕು ಎಂಬುದು ವಿವಾಹ ವಿಚಾರದಲ್ಲಿ ಅನೇಕ ಕಡೆ ಉಲ್ಲೇಖವಾಗಿರುವ ಸಂಗತಿ. ವಿವಾಹ ಸಂದರ್ಭದ ಕೆಲವು ಶ್ಲೋಕಗಳೂ ಇದನ್ನೆ ಸ್ಪಷ್ಟಪಡಿಸುತ್ತವೆ. ವಾತ್ಸಾಯನನೂ ತನ್ನ ಕಾಮಶಾಸ್ತ್ರ ಕೃತಿಯಲ್ಲಿ ಗಂಡು ಹೆಣ್ಣಿನ ನಡುವಣ ಮಧುರ ಸಂಬಂಧವನ್ನು ವಿವರಿಸುತ್ತ ಪುರುಷ ಬಹುನಿಧಾನ ಸ್ಥಿತಿಯಲ್ಲಿ ಹೆಣ್ಣಿನ ಮನಸ್ಸನ್ನು ಹೇಗೆ ಪ್ರವೇಶಿಸಬೇಕೆಂಬ ಮಾಹಿತಿಯನ್ನು ನೀಡುತ್ತಾನೆ. ವಿವಾಹ ಸಂಸ್ಥೆ ಮತ್ತು ಅದರ ತಿಳಿವಳಿಕೆ ನಮ್ಮಲ್ಲಿ ಶಿಷ್ಟವರ್ಗದಿಂದ ಹಿಡಿದು ಜನಪದರವರೆಗೂ ಬಹುತೇಕ ಒಂದೇ ಇರುತ್ತದೆ. ಮೇಲ್ವರ್ಗದವರು ಪುರೋಹಿತರನ್ನು ಕರೆಸಿ ವಿವಾಹ ನೆರವೇರಿಸಿದರೆ ಜನಪದ ಮತ್ತು ಬುಡಕಟ್ಟು ವರ್ಗಗಳು ಪುರೋಹಿತರಿಲ್ಲದೆ ತಾವೇ ಲಗ್ನ ನೆರವೇರಿಸಿಕೊಳ್ಳುತ್ತಾರೆ. ಹಾಗೆಯೇ ಗ್ರಾಮವಾತಾವರಣದ ಸೋಬಾನೆ ಪದಗಳಲ್ಲಿಯೂ ಹೆಣ್ಣಿನ ಸುಕಮಾರ ಭಾವನೆಗಳು, ಆಕೆಯನ್ನು ಗಂಡು ಸ್ವೀಕರಿಸಬೇಕಾದ ರೀತಿ ಹಾಡಲ್ಪಟ್ಟಿದೆ.

ಜನಪದ ಗೀತೆಗಳಲ್ಲಿ ಕನ್ನಡ ಭಾಷೆ, ಕರ್ನಾಟಕ ನಾಡು ಈ ಪದಗಳು ಸಾಮಾನ್ಯವಾಗಿ ಪ್ರಯೋಗವಾಗುವುದಿಲ್ಲ. ಕನ್ನಡದ ಶಿಷ್ಟ ಕವಿಗಳು ತಂತಮ್ಮ ಕೃತಿಗಳಲ್ಲಿ ತಾವು ಬಳಸಿದ ಭಾಷೆ, ತಮ್ಮ ಪ್ರಾದೇಶಿಕ ವೈಶಿಷ್ಟತೆ, ಕರ್ನಾಟಕದ ವರ್ಣನೆ ಇದನ್ನೆಲ್ಲ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ನಿರೂಪಿಸಿರುತ್ತಾರೆ. ಆದರೆ ಜನಪದರ ಜಗತ್ತು ಸೀಮಿತ. ಅವರ ಭಾಷೆ ಕನ್ನಡ ಮಾತ್ರ. ಅವರ ಪ್ರಪಂಚ ಅವರ ಗ್ರಾಮ ಮಾತ್ರ. ಅದನ್ನು ದಾಟಿದ್ದು ತುಂಬ ಕಡಿಮೆ. ಆದರೆ ಶಿಷ್ಟ ಕವಿಗಳು ಬರೆಯುವುದು ಕನ್ನಡದಲ್ಲಿ. ಅವರ ಪಾಂಡಿತ್ಯ ಸಂಸ್ಕೃತದ್ದು. ಬರೆಯುವ ಕಥೆ ಅಥವಾ ಅವರ ವಾಸಸ್ಥಳ, ಜಂಬೂದ್ವೀಪದ, ಭರತ ಖಂಡದ ಒಂದು ಪಟ್ಟಣದಲ್ಲಿ. ಆದರೆ ಜನಪದ ಕವಿಗಳ ಅನುಭವ ಜಗತ್ತು ಮಾತ್ರ ಯಾವ ಶಿಷ್ಟ ಕವಿಗೂ ಕಡಿಮೆ ಪ್ರಮಾಣದ್ದಲ್ಲ.

ಸಿರಿಯಜ್ಜಿ ಹಾಡಿರುವ ಸೋಬಾನೆ ಪದಗಳಲ್ಲಿ ಮಾತ್ರ ಗಂಡು ಲಗ್ನವಾದ ಹೆಣ್ಣು ಮಗಳನ್ನು ಪಡೆಯಲು ಕರ್ನಾಟಕವನ್ನೆಲ್ಲ ತಿರುಗಿದನಂತೆ!

ಸುತ್ತೀದೆ ಸುತ್ತೀದೆ ಸುತ್ತೀದೆ ನಿನಗಾಗಿ
ಚಿಕ್ಕ ಜಂಬರದ ಕರಿಯ ಕಲ್ಲು ಕರುನಾಟಕವೆಲ್ಲ
ಸುತ್ತೀದೆನರಸಿ ನಿನಗಾಗಿ

ಪ್ರಾಣಿ ಪಕ್ಷಿಗಳ ಜಗತ್ತೂ ಸೋಬಾನೆ ಪದಗಳಲ್ಲಿ ಕೂಡಿಕೊಂಡಿದೆ.

ಆನೀಯ ಏರಿ ದೇವರ ಗುಡಿಗೆ ಬಂದ
ಆನೀಯ ಇಳಿದು ಸರಣೆಂದು ಬೇಡಿಕಂಡ
ನಾರೀಗೆ ಮುತ್ತೈದೆತನಗಾಳ

ಗಂಡ ತಾನು ಮದುವೆಯಾದ ಹೆಣ್ಣುಮಗಳಿಗೆ ಆಯುಷ್ಯ ಬೇಡಿದರೆ, ತನ್ನ ತೌರನ್ನು ಬಿಡುವ ಹೆಣ್ಣುಮಗಳು

ಆಲದ ಮರತಂಕ ಆಡಿ ಬನ್ನೀರಿ ಗೆಳತೇರ
ಆಲದ ಮರದಿಂದಕ ತಿರುಗೀರಿ ಮನೆಗೋಗಿ
ತಾಯನ್ನು ಸುಮ್ಮನಿರಿಸೀರೆ

ಎಂದು ಗೆಳತಿಯರನ್ನು ಕೇಳಿಕೊಳ್ಳುತ್ತಾಳೆ. ಸಿರಿಯಜ್ಜಿಯ ಈ ಸೋಬಾನೆ ಪದಗಳಲ್ಲಿ ಬೇರೆ ಬೇರೆಯ ತ್ರಿಪದಿಗಳೂ ಸೇರಿಕೊಂಡಿವೆ. ಕರ್ನಾಟಕಾದ್ಯಂತ ಸಿಗುವ ಜನಪದ ಹಾಡುಗಳಲ್ಲಿ ಬಸವಣ್ಣನವರ ಸಹೋದರಿ ಅಕ್ಕನಾಗಮ್ಮನ ಹೆಸರು ಹೆಚ್ಚು ಪ್ರಸ್ತಾಪವಾಗುತ್ತದೆ. ಕಲ್ಯಾಣದಲ್ಲಿ ಈಗಲೂ ದೊರಕುವ ಕುರುಹುಗಳಿಂದ ಮತ್ತು ಜನಪದ ಗೀತೆಗಳಿಂದ. ಅಕ್ಕಮಹಾದೇವಿಗಿಂತಲೂ ಅಕ್ಕನಾಗಮ್ಮ ಕಲ್ಯಾಣದ ಶಿವಶರಣರ ನಡುವೆ ಪ್ರಮುಖಳಾಗಿದ್ದಳೆನಿಸುತ್ತದೆ. ಹೀಗಾಗಿ ಇಲ್ಲಿಯ ಸೋಬಾನೆ ಪದಗಳಲ್ಲಿ

ಕಕ್ಕಯ್ಯನೆಮನೆಯ ಮಿಕ್ಕಪ್ರಸಾದವ
ಬಸವ ತಂದು ಅಕ್ಕನಾಗಮ್ಮಗೆ ಕೊಟ್ಟಾರೆ ಬಂದು
ಗಕ್ಕನಾಗಕಾಣೂತ ಸಿವಸಿವನಂದು

ಎಂದಿರುವ ಈ ತ್ರಿಪದಿ ಮದುವೆ ಆಗಿಬಂದ ಹೆಣ್ಣುಮಗಳು ತಾನು ಮುಂದೆ ಪಡೆಯುವ ಮಗುವಿನ ಕನಸು ಕಾಣುತ್ತಾ ಅದನ್ನು ತೂಗುವ ವೇಳೆಯ ಭಾವವಾಗಿ ಇದು ಬರುತ್ತದೆ. ಅತ್ಯಂತ ನವುರಾದ ಭಾವನೆಗಳನ್ನು ಬುಡಕಟ್ಟು ಮದುವೆಯ ಶಾಸ್ತ್ರಗಳನ್ನು ಒಳಗೊಂಡು ಸಿರಿಯಜ್ಜಿ ಹಾಡುವ ಸೋಬಾನೆ ಪದಗಳು ಸಾವಿರ ತ್ರಿಪದಿಗಳವರೆಗೆ ಸಾವಧಾನ ಗತಿಯಲ್ಲಿ ಹರಿಯುತ್ತವೆ.

ಸೋಬಾನೆ ಪದಗಳು

ಒಂದೊಂದು ಚಂದದಲಿ ಲಿಂಗಾ ನನ್ಯನದೇನು
ಮಂದಲಗಿರಿ ತುಳುಸಿ ಮಾಲೆವರ
ಮಂದಲಗಿರಿ ತುಳುಸಿ ಮಾಲೆವರ ಮೂಡಿಬರುವ
ಚಂದ್ರನ ಪಾದಾ ನ್ಯನದೇನು

ಯ್ಯಾವ್ಯಾವ ಚಂದಾದ ಪಾದಾವ ನ್ಯನದೇನು
ದೇವಗಿರಿ ತುಳುಸಿ ಮಾಲೆವರ
ದೇವಗಿರಿ ತುಳುಸಿ ಮಾಲೆವರ ಮೂಡಿಬರುವ
ಸೂರಿದನ ಪಾದ ನ್ಯನದೇನು

ವೊತ್ತು ವೊಟ್ಟೋವತ್ತೀಲಿ ಅಪ್ಪಾನನ್ಯನದೇನು
ಲಕ್ಕಸದಾವೀನ ಮೈಗಾದ
ಲಕ್ಕಸದಾವೀನ ಮೈಗಾದ ಎತ್ತಯ್ಯನ
ವೊತ್ತುಟ್ಟೊ ವತ್ತೀಲಿ ನ್ಯನದೇವ

ಸುರಿದ ವುಟ್ಟೊತ್ತಿಲಿ ಸ್ವಾಮೀಯ ನ್ಯನದೇವ
ಸಾವಿರದಾನೀಯ ಮೈಗಾದ
ಸಾವಿರದಾನೀಯ ಮೈಗಾದ ಎತ್ತಯ್ಯನ
ಸೂರಿದನುಟ್ಟೊತ್ತಿಲಿ ನ್ಯನದೇವ

ಮತ್ತೆ ನ್ಯನದೇವ ಅಟ್ಟಿದೈಮಾರಾನ
ಪಟ್ಟೀಯದಟ್ಟಿ ಚೆಲುವಾನ
ಪಟ್ಟೀಯದಟ್ಟಿ ಚೆಲುವಾನ ಆಗಲವಾಡಿ
ಎತ್ತೀನ ಬೋಗೀಯ ನ್ಯನದೇನ

ನಾವು ನ್ಯನದೇವು ದೇವಾರ ದೈಮಾರಾನ
ಸಾಲ್ಯಾದಟ್ಟಿ ಚೆಲುವಾನ
ಸಾಲ್ಯಾದಟ್ಟಿ ಚೆಲುವಾನ ಆಗಲವಾಡಿ
ಆವೀನ ಬೋಗೀಯ ನ್ಯನದೇನು

ಎಲ್ಲರಿಗಿನ್ನ ಬಲ್ಲಿದನ ನ್ಯನದೇನ
ಕಲ್ಲೊತ್ತಿಲಿರುವ ಕದಲೀಯ
ಕಲ್ಲೊತ್ತಿಲಿರುವ ಕದಲೀಯ ಕಾಟಮಲಿಂಗನ
ಬಿಲ್ಲಿನಗೊಂಡೇವ ನ್ಯನದೇನು

ಯ್ಯಾತ್ಯಾತಕ ಮುನ್ನ ಆತಾನ ನ್ಯನದೇನು
ಕಾತೊತ್ತಿಲಿರುವ ಕರುಣೀಯ
ಕಾತೊತ್ತಿಲಿರುವ ಕರುಣೀಯ ಜುಂಜಣ್ಣನ
ಬಾಕಿನ ಗೊಂಡೇವ ನ್ಯನದೇನು

ದುಡ್ಡಿನದೂಪಾನೊಯ್ದು ದೊಡ್ಡೋನ ನ್ಯನದೇನು
ದೊಡ್ಡೆಬ್ಬಿಯಾಗ ಇರುವೋನ
ದೊಡ್ಡೆಬ್ಬಿಯಾಗ ಇರುವೋನ ಜುಂಬಣ್ಣಾನ
ದೊಡ್ಡೋನ ಮೊದಲು ನ್ಯನದೇನು

ಸಾಂಬ್ರಾಣಿವೊಯ್ದು ಸ್ವಾಮಿ ನಿಮ್ಮನ್ಯನದೇನು
ಸಾಲೆಬ್ಬಿಯಾಗ ಇರುವೋನ
ಸಾಲೆಬ್ಬಿಯಾಗ ಇರುವೋನ ಜುಂಬಣ್ಣಾನ
ಸ್ವಾಮೀಯ ಮೊದಲು ನ್ಯನದೇನ

ಪತ್ರವಳಿನಿಡಿದು ಅಪ್ಪ ನಿಮ್ಮನ್ಯನದೇನ
ಚಿಕ್ಕ ಚಿತ್ತರಗಿರಿಯ ರತುನಾವೆ
ಚಿಕ್ಕ ಚಿತ್ತರಗಿರಿಯ ರತುನಾವೆ ಮಂಚಾದ
ಚಿತ್ತಯ್ನ ಮೊದಲು ನ್ಯನದೇನ

ಸಾಲುವಳಿಯಿಡಿದು ಸ್ವಾಮಿ ನಿಮ್ಮ ನ್ಯನದೇನು
ರಾಯಚಿತ್ತರಗಿರಿಯ ರತುನಾವೆ
ರಾಯಚಿತ್ತರಗಿರಿಯ ರತುನಾವೆ ಮಂಚಾದ
ಮಾಲಿಂಗನ ಮೊದಲು ನ್ಯನದೇನು

ಲಿಂಗಾವೆ ನಿಮ್ಮ ನೆನೆದಾರೆ ಬಂದಾವೈದಕ್ಸರ
ಚಂದದಿಂದೋದಿ ಬರಿಯುವೆ
ಚಂದದಿಂದೋದಿ ಬರಿಯುವೆ ಗುರುವೆ
ನಿಮ್ಮ ಕಂದನಾಗಿ ನಾನಡುದೇನು

ಗುರುವೆ ನಿಮ್ಮ ನೆನೆದಾರೆ ಬರುವಾವೈದಕ್ಸರ
ಕರುನದಿಂದೋದಿ ಬರೆಯೂವೆ
ಕರುಣದಿಂದೋದಿ ಬರೆಯೂವೆ ಗುರುವೆ
ನಿಮ್ಮ ಮಗಳಾಗಿ ಪದವಾ ಏಳೇನು

ಗುರುವ ನೆನೆಮನವೆ ಇರಿಯಾರ ನೆನೆಮನವೆ
ಗುರುವೀನ ಗುರುವ ನೆನೆಮನವೆ
ಗುರುವೀನ ಗುರುವ ನೆನೆಮನವೆ ಗೋಸಿಕೆರೆಯ
ಕರಿಯ ಬಸವಣ್ಣನ ನೆನೆಮನವೆ

ಲಿಂಗನ ನೆನೆಮನವೆ ಜಂಗಮರ ನೆನೆಮನವೆ
ಲಿಂಗಾಜಂಗಮರ ನೆನೆಮನವೆ
ಲಿಂಗಾಜಂಗಮರ ನೆನಮನವೆ ಸಾಣೆಕೆರೆಯ
ಸಂಗನಬಸವಣ್ಣನ ನೆನೆಮನವೆ

ಕಕ್ಕಯ್ನ ಚಿಕ್ಕಯ್ಯಗೊಲಿದೋನ
ಅಕ್ಕ ಗೌರಮ್ಮನ ಅರಸಾರು
ಅಕ್ಕ ಗೌರಮ್ಮನ ಅರಸಾರು ನರಲೋಕಕ್ಕೆ
ಮಕ್ಕಳ ಕೊಟ್ಟಯ್ನ ನ್ಯನದೇನು

ಚನ್ನಯ್ಯ ನ್ಯನದೇನು ನನ್ನಯ್ಯಗೊಲಿದೋನ
ಕನ್ನೆ ಗೌರಮ್ನ ಅರಸಾರು
ಕನ್ನೆ ಗೌರಮ್ನ ಅರಸಾರು ನರಲೋಕಕೆ
ಕಣ್ಣುಕೊಟ್ಟಯ್ನ ನ್ಯನದೇನು

ದೇವಾರೆ ನಿಮ್ಮಸಿನ ಕಾವೇರಿ ಕಾಲ್ಯೇವು
ಬಾವೀಯ ಮರುಳು ಸರಿದಂಗೆ
ಬಾವೀಯ ಮರುಳು ಸರಿದಂಗೆ ಸೋಬಾನವ
ಪಾಲುರಿಸೋ ಪಂಚ ಮೊಕದಯ್ಯ

ಲಿಂಗಾವೆ ನಿಮ್ಮಸಿನ ತುಂಬೇರಿ ಕಾಲ್ಯೇವು
ಗಂಗೇಯ ಮರುಳು ಸರುದಂಗೆ
ಗಂಗೇಯ ಮರುಳು ಸರುದಂಗೆ ಸೋಬಾನವ
ವೊಂದುಸೋ ಪಂಚಮೊಕದಯ್ಯ

ತುರುವೆ ಗಿಡದಡಿಯ ಗುರುವೀನ ಸಬುದಕೇಳಿ
ಕರುವೆರಡ ಮುಗುದು ತಲೆಬಾಗಿ
ಕರುವೆರಡ ಮುಗುದು ತಲೆಬಾಗಿ ಜಂಗಮಲಿಂಗ
ಕರುಣಿ ನಮ್ಮದನಿಗೆ ಸ್ರಯವಾಗೋ

ಇಪ್ಪೆ ಗಿಡಿದಡಿಲಿ ಅಪ್ಪಾನಸಬುದ ಕೇಳಿ
ಅಸ್ತಾವೆರಡು ಮುಗುದು ತಲೆಬಾಗಿ
ಅಸ್ತಾವೆರಡು ಮುಗುದು ತಲೆಬಾಗಿ ಜಂಗಮಲಿಂಗ
ವಸ್ತುವೆ ನಮ್ಮದನಿಗೆ ಸ್ರಯವಾಗೋ

ನಮ್ಮ ಸೋಬಾನ ಚಂದವಾಗಿ ಬರಲಂದು
ಅಪ್ಪಯ್ಯ ನಿಮ್ಮ ನ್ಯನದೇನೆ
ಅಪ್ಪಯ್ಯ ನಿಮ್ಮ ನ್ಯನದೇನೆ ಕ್ವಾಟೆಕೇರಿಯ
ಚಿತ್ತಾದ ಅಲಗೆ ಕೊಡುಮತಿಯ

ಕಂದಾನ ಕರಕಂಡು ಬಂದರು ದೇವರಮನಿಗೆ
ಕುಂಬದಲಿ ಅಡಿಕೆ ಬಿಳಿಯೆಲೆ
ಕುಂಬದಲಿ ಅಡಕೆ ಬಿಳಿಯೆಲೆ ತಕ್ಕಂಡು
ನಿಂಗಣ್ಣನ ಗುಡಿಗೆ ನಡೆದಾರೆ

ಬಾಲನ ಕರಕಂಡು ವೋದಾರು ದೇವರಗುಡಿಗೆ
ವೂಜೇಲಿ ಅಡಿಕೆ ಬಿಳಿಯೆಲೆ
ವೂಜೇಲಿ ಅಡಿಕೆ ಬಿಳಿಯೆಲೆ ತಕ್ಕಂಡು
ಈರಣ್ಣನ ಗುಡಿಗೆ ನಡೆದಾರೆ

ದೇವಾರಗುಡಿಮುಂದೆ ದೇವಾರೂಳಿಗಲೇಸು
ಮ್ಯಾಲೆಮಂದಾಸ ಕೈಲಾಸ
ಮ್ಯಾಲೆಮಂದಾಸ ಕೈಲಾಸ ಸಿವಪುರದ
ದೇವರ ಗಣುಗಳ ನ್ಯನದೇನು

ಲಿಂಗನ ಗುಡಿಮುಂದೆ ಲಿಂಗದೂಳಿಗಲೇಸು
ಮುಂದೆ ನನದ್ಯಾಸ ಕೈಲಾಸ
ಮುಂದೆ ನನದ್ಯಾಸ ಕೈಲಾಸ ಸಿವಪುರದ
ಲಿಂಗವೆ ಗಣುಗಳ ನ್ಯನದೇನು

ಕುಟ್ಟೀದಕ್ಕಿಬಂದು ಎತ್ತತುಪ್ಪ ಬಂದು
ಅಪ್ಪನ ಬಾಗುಲಿಗೆ ಕರಿಯಜ್ಯಾಡಿ
ಅಪ್ಪನ ಬಾಗುಲಿಗೆ ಕರಿಯಜ್ಯಾಡಿ ಬಂದು
ತುಪ್ಪ ವೊತ್ತೋರನ ಕರಿಸ್ಯಾರೆ

ತುಪ್ಪ ವೊರುವಾಕೆ ಅಪ್ಪ ನಿಮ್ಮ ಕರಿಸ್ಯಾರೆ
ಪಚ್ಚೇದುಂಗುರದ ಸಿವಸಿವ
ಪಚ್ಚೇದುಂಗುರದ ಸಿವಸಿವ ದೊಡ್ಡಣ್ಣನ
ನಿನ್ನ ತುಪ್ಪ ವೊತ್ತಾಕೆ ಕರೆಸ್ಯಾರೆ

ಅಲುವೊರುವಾಕ ಜ್ಯಾಣ ನಿನ್ನ ಕರೆಸ್ಯಾರೆ

ನೀಲದುಂಗುರದ ಸಿವಸಿವ
ನೀಲದುಂಗುರದ ಸಿವಸಿವ ಸಿರಿಯಣ್ಣ
ಆಲುವೊರುವಾಕೆ ಕರೆಸ್ಯಾರೆ

ಆರುತಂಬಿ ಆಲುತೂಗಿ ಅರಿವಾಣಕೊಯ್ದು
ವಾರೀಲಿ ಗುರುವೀನ ಮಗನಿಲ್ಲ
ವಾರೀಲಿ ಗುರುವೀನ ಮಗನಿಲ್ಲ ದೊಡ್ಡಣ್ಣಾನ
ಸಾವಿರೊಕ್ಕಲೋಗಿ ಕರತನ್ನಿ

ಸವಿರೊಕ್ಕಲುವೋಗಿ ಕರೆದಾರೆ ಬರೊದೊರೆಯಲ್ಲ
ಸ್ವಾಮಿಬಾಯಾಗಳನುಡಿಗಾಳು
ಸ್ವಾಮಿಬಾಯಾಗಳನುಡಿಗಾಳು ತಕ್ಕಂಡು
ಬಾಲಾನಾಲಸ್ತಕ್ಕೆ ನಡೆದಾನೆ

ಅತ್ತುತಂಬಿಗಾಲುಎತ್ತಿ ಅರಿವಾಣಕೊಯ್ದು
ವತ್ತೀಲಿಗುರುವೀನ ಮಹನಿಲ್ಲ
ವತ್ತೀಲಿಗುರುವೀನ ಮಗನಿಲ್ಲ ಸಿರಿಯಣ್ಣನ
ಸುತ್ತಲೊಕ್ಕಲೋಗಿ ಕರತನ್ನಿ

ಸುತ್ತಲೊಕ್ಕಲೋಗಿ ಕರೆದಾರೆ ಬರುವ ದೊರೆಯಲ್ಲ
ಅಪ್ಪನ ಬಾಯಾಗಳ ನುಡಗಾಳು
ಅಪ್ಪನ ಬಾಯಾಗಳ ನುಡಗಾಳು ತಕ್ಕಂಡು
ಪುತ್ರಾನಾಲಸ್ತಕ್ಕೆ ನಡುದಾನೆ

ಆಲುತುಪ್ಪಗಳ ನಾರೇರು ಇಡಿದಾರೆ
ನಾರೇರು ಇಡಿದು ನಡೆದಾರೆ
ನಾರೇರು ಇಡಿದು ನಡೆದಾರೆ ನಿಂಗಣ್ಣನ
ವೂವಿನ ತ್ವಾರಣವು ಎದುರೀಗೆ

ಎತ್ತ ತುಪ್ಪಗಳ ನಿಸ್ತ್ರೇರು ಇಡಿದಾರೆ
ನಿಸ್ತ್ರೇರು ಇಡಿದು ನಡೆದಾರು
ನಿಸ್ತ್ರೇರು ಇಡಿದು ನಡೆದಾರು ಈರಣ್ಣಾನ
ಮುತ್ತೀನ ತ್ವಾರಣವು ಎದುರೀಗೆ

ಗಿಂಡಿ ಅರಿವಾಣಾದಾಗ ಬಂದಾವಾಲು ತುಪ್ಪ
ಚೆಂದುರನ ರವೆಯ ಗವುದಾವೆ
ಚೆಂದುರನ ರವೆಯ ಗವುದಾವೆ ಕಂದ ನಿನ್ನ
ತಂದೆಗಳಾಲಸ್ತ ವುದುವಾಗಿ

ಗಾಲಿಯರುವಾಣಾದಾಗ ವೋದಾವಾಲು ತುಪ್ಪ
ಸೂರಿದನ ರವೆಯೆ ಗವುದಾವೆ
ಸೂರಿದನ ರವೆಯ ಗವುದಾವೆ ಕಂದನಿನ್ನ
ಪೂಜಾರಿ ನಿನ್ನ ಆಲಸ್ತ ವುದುವಾಗಿ

ಆಲಾನೊತ್ತಣ್ಣ ಬಾಗ್ಯಾನೆ ಬಳುಕ್ಯಾನೆ
ನೀವೇನು ಕೊಡಿರೆ ಸಿಸ್ಯಾರು
ನೀವೇನು ಕೊಡಿರೆ ಸಿಸ್ಯಾರು. ದೊಡ್ಡಣ್ಣಾಗ
ಏರು ಅಂದಲವ ಕೊಡಿರಣ್ಣ

ತುಪ್ಪ ವೊತ್ತಣ್ಣ ಸಿಕ್ಯಾನೆ ಬೆರಳ್ಯಾನೆ
ಮತ್ತೇನುಕೊಡಿರೆ ಸಿಸ್ಯಾರು
ಮತ್ತೇನುಕೊಡಿರೆ ಸಿಸ್ಯಾರು ಸಿರಿಯಣ್ಣಾಗೆ
ಅತ್ತೋ ಅಂದಲವ ಕೊಡಿರಣ್ಣ

ಆಲೊತ್ತಿದ ಕೈಮ್ಯಾಲೆಲ್ಲಿ ತೊಳೆದಾರೆ
ಸ್ವಾಮಿಚಿತ್ರಯ್ಯನ ಗುಡಿಮುಂದೆ
ಸ್ವಾಮಿಚಿತ್ರಯ್ಯನ ಗುಡಿಮುಂದೆ ಕಳ್ಯಾಗ
ಆಲೋತ್ತಿಗ ಕೈಯ್ಯ ತೊಳೆದಾರೆ

ತುಪ್ಪೊತ್ತಿದ ಕೈಯ್ಯಿ ಮತ್ತೆಲ್ಲಿ ತೊಳೆದಾರೆ
ಅಪ್ಪ ಈರಣ್ಣನ ಪೌಳಿಯಾಗ
ಅಪ್ಪ ಈರಣ್ಣನ ಪೌಳಿಯಾಗ ಕಳ್ಯಾಗ
ತುಪ್ಪೊತ್ತಿದ ಕೈಯ್ಯ ತೊಳೆದಾರೆ

ಅರಿಆರಾದಿಂದ ಅರಿದು ಬಂದಳು ಗಂಗೆ
ದೊರೆಗಾಳ ಮಗನ ಮದುವೀಗೆ
ದೊರೆಗಾಳ ಮಗನ ಮದುವೀಗೆ ಆಗ್ಣೆಕೊಟ್ಟು
ಅರಿಆರಾದ ಗಂಗೆ ತೆರಳ್ಯಾಳೆ

ಕೊಟ್ಟೂರಿಲಿಂದ ಬಿಟ್ಟುಬಂದಳು ಗಂಗೆ
ಸೆಟ್ಟ್ಯೋರ ಮಗನ ಮದುವೀಗೆ
ಸೆಟ್ಟ್ಯೋರ ಮಗನ ಮದುವೀಗೆ ಆಗ್ಣೆ ಕೊಟ್ಟು
ಕೊಟ್ಟೊರಿಗೆ ಗಂಗೆ ತೆರಳ್ಯಾಳೆ

ದೇವರೆ ಬಸವಾನ ಕೋಡಿನ ಮ್ಯಾಲೆಬರುವೋಳು
ದೇವೇಳು ಲೋಕಕೆ ಸಲುವೋಳು
ದೇವೇಳು ಲೋಕಕೆ ಸಲುವೋಳು ಸಿರಿಗಂಗೀಯ
ಬಾವಾನೇ ನೋಡಿ ಸಿವತಂದ

ಸಂಗನಬಸವಾನ ಕೊಂಬಿನ ಮ್ಯಾಲೆ ಬರುವೋಳೆ
ರೆಂಬೇಳು ಲೋಕಕೆ ಸಲುವೋಳು
ರೆಂಬೇಳು ಲೋಕಕೆ ಸಲುವೊಳು ಸಿರಿಗಂಗೀಯ
ಅಂದಾವ ನೋಡಿ ಸಿವತಂದ

ಅರಿಆರದಿಂದ ಕೆರೆ ವಡೆದು ಬರುವಾಗ
ಅರಿಅರನೆ ಸಿವನೆ ನೆಡುಗ್ಯಾರೆ
ಅರಿಅರನೆ ಸಿವನೆ ನೆಡುಗ್ಯಾರೆ ಸಿರಿಗಂಗೀಯ
ಮಾಜಿ ಇಡದ್ಯಾವ ತೆರನಂದ

ಕೊಟ್ಟೂರಿಲಿಂದ ಕಟ್ಟ್ಯೊಡೆದು ಬರುವಾಗ
ಮುಕ್ಕಣ್ಣ ಅರನೆ ನೆಡುಗ್ಯಾರು
ಮುಕ್ಕಣ್ಣ ಅರನೆ ನೆಡುಗ್ಯಾರು ಸಿರಿಗಂಗೀಯ
ಬಚ್ಚಿಡದು ಯಾವ ತೆರನಂದ

ಮೆಲ್ಲಕರುದಾಳು ಮುಳ್ಳುಮೊಕದ ಗಂಗೆ
ನೆಲ್ಲಕ್ಕಿಯಂತ ಮರಳಾಗೆ
ನೆಲ್ಲಕ್ಕಿಯಂತ ಮರಳಾಗೆ ಮಲ್ಲಯ್ಯನ
ನಲ್ಲೆ ಕುಂಕುಮಲೆ ಅರುದಾಳೆ

ಉದ್ದಕರುದಾಳೆ ಮುದ್ದು ಮೊಕದ ಗಂಗೆ
ರುದ್ರಾಕ್ಸಿಯಂತ ಮರುಳಾಗೆ
ರುದ್ರಾಕ್ಸಿಯಂತ ಮರುಳಾಗೆ ಮಲ್ಲಯ್ಯನ
ಬದ್ರೆ ಕುಂಕುಮದಯಿತೆ ಅರುದಾಳೆ

ಆಕೇರಿಯನ್ನಾದೆ ಕೇರಿಯನ್ನಾದೆ
ಲೋಕವುಗ್ಗಳಿಸಿ ಅರುವೋಳು
ಲೋಕವುಗ್ಗಳಿಸಿ ಅರುವೋಳು ಸಿರಿಗಂಗೀಯ
ಗೋತ್ರವೊಳ್ಳೆದೆಂದು ಸಿವತಂದ

ವೊಲಗೇರಿಯನ್ನಾದೆ ಸಲಗೇರಿಯನ್ನಾದೆ
ಜಲವೇ ವುಗ್ಗುಳಿಸಿ ಅರುವೋಳೆ
ಜಲವೇ ವುಗ್ಗುಳಿಸಿ ಅರುವೋಳೆ ಸಿರಿಗಂಗೀಯ
ಕುಲವೊಳ್ಳೆದೆಂದು ಸಿವತಂದ

ಮಾನ್ಯರ ಮನೆಮುಂದೆ ಚಿನ್ನಾದ ಸೇದೋಬಾವಿ
ಸಣ್ಣಮಲ್ಲಿಗೆಯ ಇಡಿಯಗ್ಗ
ಸಣ್ಣಮಲ್ಲಿಗೆಯ ಇಡಿಯಗ್ಗ ನೀರುಸೇದ
ಚೆನ್ನಿಗ ನಿಮ್ಮ ಕೈಲಿರೊ ಕೊಡಜತನ

ಸೆಟ್ಟ್ಯೋರ ಮನಿಮುಂದೆ ಮುತ್ತಿನ ಸೇದೋಬಾವಿ
ಅಚ್ಚಮಲ್ಲಿಗೆ ಇಡಿಯಗ್ಗ
ಅಚ್ಚಮಲ್ಲಿಗೆ ಇಡಿಯಗ್ಗ ನೀರಸೇದ
ಸೆಟ್ಟಿ ನಿಮ ಕೈಲಿರೊ ಕೊಡಜತನ

ಅಸನಾದ ಅರಮನೆ ಕುಸುಲಾದ ನಿಡುಮನೆ
ಬಸುವಣ್ಣ ರಾಯರ ಅರುಮನೆ
ಬಸುವಣ್ಣ ರಾಯರ ಅರುಮನೆ ವಳಗಾಳ
ಸೀನೀರಿಗಾಗಿ ಕೊಡನ ಇಡುದಾರೆ

ಅಂದವಾದ ಅರುಮನೆ ಚೆಂದವಾದನಡುಮನೆ
ಚನ್ನಣ್ಣರಾಯರ ಅರಮನೆ
ಚನ್ನಣ್ಣರಾಯರ ಅರಮನೆ ವಳಗಾಳ
ತಣ್ಣೀರಿನ ಕೊಡಗಾಳ ಇಡುದಾರೆ

ಅಗ್ಗವಣಿಮೀಬಾರೋ ದೊಟ್ಟೋರ ಮೊಮ್ಮೊಗನೆ
ಮೊಗ್ಗಲುಚಿನ್ನಾದ ಕಟ್ಟಿಗನಿಟ್ಟು
ಮೊಗ್ಗಲುಚಿನ್ನಾದ ಕಟ್ಟಿಗನಿಟ್ಟು ಮುತ್ತಿನಚೆಂಡು
ದಬ್ಯಾಡುತ ಬಾರೋ ಜಲುಪಾಕೆ

ನೀರು ಮೀಬಾರೊ ದೊರೆಗಾಳ ಮೊಮ್ಮಗನೆ
ದುರುವರ ಚಿನ್ನಾದ ಕಟ್ಟಿಗನಿಟ್ಟು
ದುರುವರ ಚಿನ್ನಾದ ಕಟ್ಟಿಗನಿಟ್ಟು ಮುತ್ತಿನಚೆಂಡು
ದಬ್ಯಾಡುತ ಬಾರೋ ಜಲುಪಾಕೆ

ಅವಳಾದ ಅರಿನೀರು ಅವಳಾದ ಪರಿನೀರು
ದೊರೆಗಾಳಿರುವೋದೆ ದೊಡ್ಡೇರಿ
ದೊರೆಗಾಳಿರುವೋದೆ ದೊಡ್ಡೇರಿ ಪನ್ನೀರು
ಮರಿಯಾನೆ ಮ್ಯಾಲೆ ತರಿಸ್ಕಾರೆ

ಮುತ್ತೀನರಿನೀರು ಮುತ್ತೀನ ಪರಿನೀರು
ಸೆಟ್ಟರಿರುವೋದೆ ದೊಡ್ಡೇರಿ
ಸೆಟ್ಟರಿರುವೋದೆ ದೊಡ್ಡೇರಿ ಪನ್ನೀರ
ಪಟ್ಟದಾನೆಮ್ಯಾಲೆ ತರಿಸ್ಯಾರೆ

ನೀರಿಲ್ಲದ ತಾವ ನೀರ್ಯಾಕೆ ನಿಂತಾವೆ
ನಾಡಿಗೆ ದೊಡ್ಡೋರ ಮಗಮಿಂದ
ನಾಡಿಗೆ ದೊಡ್ಡೋರ ಮಗಮಿಂದ ಸಿರಿಯಣ್ಣಗೆ
ನೀಲಿಚತ್ರಿಕೆ ನೆರಳಾಗಿ

ಕೆಸರಿಲ್ಲದ ತಾವು ಕೆಸರ್ಯಾಕೆ ಆದಾವು
ಎಸರಿಗೆ ದೊಡ್ಡೋರ ಮಗಮಿಂದ
ಎಸರಿಗೆ ದೊಡ್ಡೋರ ಮಗಮಿಂದ ಸಿರಿಯಣ್ಣಗೆ
ಕುಸುಲದ ಚತ್ರಿಕೆ ನೆರಳಾಗಿ

ಏರಿಯಿಂದಲ ಬಾಲರಾಜುಣದ ಗದ್ದೆಗೆ
ಆರಿಗರಿವೊಯ್ದು ಬೆಳೆದಾವೆ
ಆರಿಗರಿವೊಯ್ದು ಬೆಳೆದಾವೆ ಬೋನದಿಂದ
ಬಾಲಮ್ಮಗಿಳಿಯ ತಗುದಾರೆ

ಕಟ್ಟಿಯಿಂದಾಲಬುಟ್ಟರಾಜುಣದ ಗದ್ದೆ
ಅತ್ತಿ ಗರಿಬಿಟ್ಟು ಬೆಳೆದಾವೆ
ಅತ್ತಿ ಗರಿಬಿಟ್ಟು ಬೆಳೆದಾವೆ ಬೋನದಿಂದ
ಪುತ್ರಮ್ಮಗಿಳಿಯತಗುದಾರೆ