ನೆಲ್ಲಕ್ಕಿಗೊಂದುತನಿಗೆಂಡ

ದಾಸವಾಳ ವೂವಿನಂಗೆ ಕ್ಯಾಸಕ್ಕಿ ಮಡಿಲಾಗೊಯ್ದು
ಕ್ಯಾಸಕ್ಕಿಗೊಂದು ತನಿಗೆಂಡ
ಕ್ಯಾಸಕ್ಕಿಗೊಂದು ತನಿಗೆಂಡ ಮುತ್ತಣ್ಣಾನ
ಜೋತ್ರಾದ ಸೆರಗೀಗೆ ಸುರುವ್ಯಾಳೆ

ಮಲ್ಲಿಗೂವಿನಂಗೆ ನೆಲ್ಲಕ್ಕಿ ಮಡಿಲಾಗೊಯ್ದು
ನೆಲ್ಲಕ್ಕಿಗೊಂದು ತನಿಗೆಂಡ
ನೆಲ್ಲಕ್ಕಿಗೊಂದು ತನಿಗೆಂಡ ಮುತ್ತಣ್ಣಾನ
ವಲ್ಲಿಸೆರಗೀಗೆ ಸುರಿವ್ಯಾಳೆ

ಬಿತ್ತೀದೊಲದಾಗ ಸತ್ತಿವಂತೆ ಬರುತಾಳೆ
ಮುತ್ತೆತ್ತಿದ್ವಾಲೆ ಕಿವಿಯಾಗೆ
ಮುತ್ತೆತ್ತಿದ್ವಾಲೆ ಕಿವಿಯಾಗೆ ಕಾಟಮ್ಮ
ಮುತ್ತೈದೇಳಾಗಿ ಬರುತಾಳೆ

ಅರುಗೀದವಲದಾಗ ಸಿರಿವಂತೆ ಬರುತಾಳೆ
ಅರಳೊತ್ತಿದ್ವಾಲೆ ಕಿವಿಯಾಗೆ
ಅರಳೊತ್ತಿದ್ವಾಲೆ ಕಿವಿಯಾಗೆ ಕಾಟಮ್ಮ
ಮೊದಲಿಗಿತ್ಯಾಗಿ ಬರುತಾಳೆ

ಅಕ್ಕವುಟ್ಟ ಸೀರೆ ಸುಪ್ಪಂಗದ ನಾತಾವೆ
ಮತ್ತೆಲ್ಲಿ ವಗೆದ ಮಡಿವಾಳ
ಮತ್ತೆಲ್ಲಿ ವಗೆದ ಮಡಿವಾಳ ವುಲಿಕುಂಟೆ
ಕಟ್ಟಿಂದೈದಾವೆ ಕೆರೆ ಬಾವಿ

ಕೆರೆ ಬಾವಿಯುಂಟು ಕೆಳಗೆ ತ್ವಾಟವುಂಟು
ಅಣ್ಣುಂಟು ಅಲಸಿನ ಮರವುಂಟು
ಅಣ್ಣುಂಟು ಅಲಸಿನ ಮರವುಂಟು ಕಾಟಮ್ಮಾನ
ಸೆರಗೀನಾಗುಂಟು ಗಜನಿಂಬೆ

ತಾಯಿ ವುಟ್ಟಾಸೀರೆ ದೇವಂಗದ ನಾತಾವೆ
ಮ್ಯಾಲೆಲ್ಲಿ ವಗೆದ್ಯೊ ಮಡಿವಾಳ
ಮ್ಯಾಲೆಲ್ಲಿ ವಗೆದ್ಯೊ ಮಡಿವಾಳ ವುಲಿಕುಂಟೆ
ಕೇರಿಯಿಂದೈದಾವೆ ಕೆರೆಬಾವಿ

ಕೆರೆ ಬಾವಿಯುಂಟು ಕೆಳಗೆ ತ್ವಾಟವುಂಟು
ಅಣ್ಣುಂಟು ಅಲಸಿನ ಮರವುಂಟು
ಅಣ್ಣುಂಟು ಅಲಸಿನ ಮರವುಂಟು ಕಾಟಮ್ಮಾನ
ತುರುಬಿನಾಗುಂಟು ಮಲ್ಲಿಗೆಯೂವು

ತಾಯಿ ಮನೆಗೋಗಾಲಿಲ್ಲ ಮೂರು ತುತ್ತುಣಲಿಲ್ಲ
ತಾಯಲ್ಲ ತೌರುಮನೆಯಲ್ಲ
ತಾಯಲ್ಲ ತೌರುಮನೆಯಲ್ಲ ಸಂದನೋರ
ಬಾಳೇ ವನವಿಂದು ಉರಿಯಾಲಿ

ತಂದೆ ಮನೆಗೋಗಾಲಿಲ್ಲ ಒಂದು ತುತ್ತುಣಲಿಲ್ಲ
ತಂದ್ಯಲ್ಲ ತೌರಮನೆಯಲ್ಲ
ತಂದ್ಯಲ್ಲ ತೌರಮನೆಯಲ್ಲ ಸಂದನೋರ
ನಿಂಬೀಯ ವನವಿಂದು ಉರಿಯಾಲಿ

ಅಪ್ಪಗಳಾವಲದಾಗ ಉತ್ರಾಣೆ ಬೆಳೆಯಾಲಿ
ಚಿಕ್ಕಮಾವುಗಳ ಸ್ರೊಬಗೀನ
ಚಿಕ್ಕಮಾವುಗಳ ಸ್ರೊಬಗೀನ ವಲದಾಗ
ಬುಟ್ಟರಾಜುಣವೇ ಬೆಳಿಯಾಲಿ

ಅಣ್ಣಗಳಾ ವಲದಾಗ ಅಣ್ಣೇಯು ಬೆಳಿಯಾಲಿ
ಸಣ್ಣಮಾವುಗಳ ಸ್ರೊಬಗೀನ
ಸಣ್ಣಮಾವುಗಳ ಸ್ರೊಬಗೀನ ವಲದಾಗ
ಸಾಲು ರಾಜುಣವೇ ಬೆಳೆಯಾಲಿ

ಕುಣಿ ಕುಣಿ ಅಂದಾರೆ ನಾವೇನು ಕುಣಿದೇವು
ಕುಣಿ ಕಡ್ಡಿಯೈದಾವೆ ಕಣದಾಗೆ
ಕುಣಿಕಡ್ಡಿಯೈದಾವೆ ಕಣದಾಗೆ ಕಾಟಮ್ಮಾನ
ಕುಣಿಸೋರು ಬಂದಾರೆ ದೊರೆಗಾಳು

ಮೆರೆಯೀರಿ ಅಂದಾರೆ ನಾವೇನು ಮೆರುದೇವು
ಮೆರಗಡ್ಡಿಯೈದಾವೆ ಕಣದಾಗೆ
ಮೆರಗಡ್ಡಿಯೈದಾವೆ ಕಣದಾಗೆ ಕಾಟಮ್ಮಾನ
ಮೆರಿಸೋರು ಬಂದಾರೆದೊರಿಗಾಳು

ಗುಗ್ಗುರಿ ಸ್ವಾರೇಗೆ ಇಬ್ಬಾರು ಕಾವಾಲು
ಬುದ್ದಿವಂತೆ ಕೇಳು ಕರಿಯಮ್ಮ
ಬುದ್ದಿವಂತೆ ಕೇಳು ಕರಿಯಮ್ಮ ನಿಮ್ಮಬ್ಬಾರ
ಗುದ್ದಾಟವಿಲ್ಲೀಗೆ ಅರುದಾವೆ

ಅಲುಸ್ವಾರಿಗ್ಗೆ ನಾಲ್ವಾರು ಕಾವಾಲು
ನಾದುನಿ ಕೇಳೇ ಸಿರಿಯಮ್ಮ
ನಾದುನಿ ಕೇಳೇ ಸಿರಿಯಮ್ಮ ನಮ್ಮಿಬ್ಬಾರ
ಕಾದಾಟವಿಲ್ಲೀಗೆ ಅರುದಾವೆ

ಆದಿಮನಿಯೋಳು ಕೇಳೆ ಬೀದಿಮನಿಯೋಳು ಕೇಳೆ
ನಾದುನಿ ಕೇಳಿ ಸಿರಿಯಮ್ಮ
ನಾದುನಿ ಕೇಳಿ ಸಿರಿಯಮ್ಮ ನಮ್ಮಿಬ್ಬರ
ಕಾದಾಟವಿಲ್ಲೀಗೆ ಅರುದಾವೆ

ಸಂದಿಮನೆಯೋಳು ಕೇಳೆ ಗೊಂದಿಮನೆಯೋಳು ಕೇಳೆ
ಸಂಗಾತಿ ಕೇಳೆ ಕರಿಯಮ್ಮ
ಸಂಗಾತಿ ಕೇಳೆ ಕರಿಯಮ್ಮ ನಿಮ್ಮಬ್ಬಾರ
ಗುಂಜಾಟವಿಲ್ಲೀಗೆ ಅರುದಾವೆ

ಉಪ್ಪಾಕೀದ ಸೊಪ್ಪು ಮತ್ತೀಟು ಆಕ್ಯಾರು
ಉಪ್ಪರಿಗೆ ಮುಂದೆ ಮೆರಿವಾಗ
ಉಪ್ಪರಿಗೆ ಮುಂದೆ ಮೆರಿವಾಗ ವಾರಗಿತ್ಯೇರು
ತುಪ್ಪಾವೋಗರಕೆ ಕರೆದಾರು

ಅಲೊಯ್ದು ಸೊಪ್ಪು ಮ್ಯಾಲೀಟು ಆಕೋರು
ವಾವುರಿಗೆ ಮುಂದೆ ಮೆರಿವಾಗ
ವಾವುರಿಗೆ ಮುಂದೆ ಮೆರಿವಾಗ ವಾರಗಿತ್ಯೋರು
ಆಲುವೋಗರಕೆಂದು ಕರೆದಾರು

 

ಬಾಲಸಿರಿಯಣ್ಣಅಳದೀರೋ

ಬಾಳೇಯ ಮರಕ ಬಾಲನತೊಟ್ಟಲು ಕಟ್ಟಿ
ಬಾಲಸಿರಿಯಣ್ಣ ಅಳದೀರೋ
ಬಾಲಸಿರಿಯಣ್ಣ ಅಳದೀರೋ ನಿಮ್ಮಮ್ಮ
ಬಾಯಾರಿದರೆ ಬರವಲ್ಲಳೋ

ನಿಂಬೀಯ ಮರಕ ಕಂದನತೊಟ್ಟಲುಕಟ್ಟಿ
ಕಂದಸಿರಿಯಣ್ಣ ಅಳದೀರೋ
ಕಂದಸಿರಿಯಣ್ಣ ಅಳದೀರೋ ನಿಮ್ಮಮ್ಮ
ಅಂಗುಳಾರಿದರೆ ಬರವಲ್ಲಳೋ

ಕಂದ ಅಳದೀರೋ ಕಂದಯ್ಯ ಅಳದೀರೋ
ಕಂದ ಸಿರಿಯಣ್ಣ ಅಳದೀರೋ
ಕಂದ ಸಿರಿಯಣ್ಣ ಅಳದೀರೋ ನಿಮ್ಮಮ್ಮ
ಕಂದನ ಬುಟ್ಟು ಕಾಡವೋಗುತಾಳೋ

ಬಾಲ ಅಳದೀರೋ ಬಾಲಯ್ಯ ಅಳದೀರೋ
ಬಾಲ ಸಿರಿಯಣ್ಣ ಅಳದೀರೋ
ಬಾಲ ಸಿರಿಯಣ್ಣ ಅಳದೀರೋ ನಿಮ್ಮಮ್ಮ
ಬಾಲನ ಬುಟ್ಟು ಕಾಡವೊಗುತಾಳೋ

ಸಂದಿವೊಕ್ಕಾಳೆ ಕಂದಾನ ಮುದ್ದಾಡ್ಯಾಳೆ
ಇಂದೇ ನನಕಂದ ಅಗಲೀದೆ
ಇಂದೇ ನನಕಂದ ಅಗಲೀದೆ ವುಲಿಕುಂಟೆ
ಮೂರಾದೀಗೆ ಕೈಯ್ಯೆ ಮುಗುದಾಳೆ

ಕೇರಿವೊಕ್ಕಾಳೆ ಬಾಲನಮುದ್ದಾಡ್ಯಾಳೆ
ಬಾಲಸಿರಿಯಣ್ಣ ಅಳದೀರೋ
ಬಾಲಸಿರಿಯಣ್ಣ ಅಳದೀರೋ ವುಲಿಕುಂಟೆ
ರಾಣ್ಯಾಕ ಕೈಯ್ಯ ಮುಗುದಾಳೆ

ಕೇರಿವೊಕ್ಕಾಳೆ ಬಾಲನ ಮುದ್ದಾಡ್ಯಾಳೆ
ನಾಳೀಕೆ ನನ್ನ ಬಾಲ ಅಗಲೀದೆ
ನಾಳೀಕೆ ನನ್ನ ಬಾಲ ಅಗಲೀದೆ ವುಲಿಕುಂಟೆ
ರಾಣ್ಯಾಕ ಕೈಯ್ಯ ಮುಗುದಾಳೆ

 

ನಿಲುತಂಗಿ

ಅರುಗೀದ ವಲದಾಗ ಸುರವೊನ್ನೆಮೆಳೆಯಾಗ
ಅರುದೇ ಬರುತಾನೆ ಅವರಣ್ಣ
ಅರುದೇ ಬರುತಾನೆ ಅವರಣ್ಣ ಕಾಟಣ್ಣ
ಅರವತ್ತು ಕೊಟ್ಟೇನು ನಿಲುತಂಗಿ

ಅರುವತ್ತು ಕೊಟ್ಟಾರೆ ತುರುಬೀನ ಬೆಲೆಯಲ್ಲ
ದುರುಗಾವಾಳೋರ ಮಗದೂರ
ದುರುಗಾವಾಳೋರ ಮಗದೂರ ವೋಗಲುವಾಳು
ತಡೆಯಾದೆ ಕಿಚ್ಚಿಕೊಡಿರಣ್ಣ

ಕಿಚ್ಚು ಕೊಡುವಾಕ ವೊಟ್ಟಪ್ಪನಾಯಕನಾಣೆ
ಪಚ್ಚೆಕಲ್ಯಾಣೆ ಪ್ರಜೆಯಾಣೆ
ಪಚ್ಚೆಕಲ್ಯಾಣೆ ಪ್ರಜೆಯಾಣೆ ಮುಮ್ಮಡಿಬೂಪ್ನ
ವೊಟ್ಟೆಮ್ಯಾಲಾಡೋ ಮಗನಾಣೆ

ಬಿತ್ತೀದ ವಲದಾಗ ಉತ್ರಾಣೆ ಮೆಳೆಯಾಗ
ಅತ್ತಿಬರುತಾನೆ ಅವರಣ್ಣ
ಅತ್ತಿಬರುತಾನೆ ಅವರಣ್ಣ ಕಾಟಣ್ಣ
ಲಕ್ಸಕೊಟ್ಟೇನು ನಿಲುತಂಗಿ

ಲಕ್ಸ ಕೊಟ್ಟೇನಂದರೆ ಅದು ಕೊಪ್ಪೀನ ಬೆಲಿಯಲ್ಲ
ಪಟ್ನ ಆಳೋರ ಮಗದೂರ
ಪಟ್ನ ಆಳೋರ ಮಗದೂರ ವೋಗಲುವಾಕೆ
ಗಕ್ಕಾನೆ ಕಿಚ್ಚ ಕೊಡಿರಣ್ಣ

ಕಿಚ್ಚು ಕೊಡುವಾಕ ಹೊಟ್ಯಪ್ಪನಾಯಕನಾಣೆ
ಪಚ್ಚೆಕಲ್ಲಾಣೆ ಪ್ರಜೆಯಾಣೆ
ಪಚ್ಚೆಕಲ್ಲಾಣೆ ಪ್ರಜೆಯಾಣೆ ಮುಮ್ಮುಡಿಬೂಪ್ನ
ವಟ್ಟೆಮ್ಯಾಲಾಡೋ ಮಗನಾಣೆ

ಅತ್ತಿಕೊರಡು ಬಂದ ಬಿದ್ದೈದಾವೆ
ಅಪ್ಪ ನಿಮ್ಮೊಡಲು ಉರಿಯಾಲೋ
ಅಪ್ಪ ನಿಮ್ಮೊಡಲು ಉರಿಯಾಲೋ ನೀ ಪಡೆದೋಳು
ಚಿತ್ತಾರದ ಕಾಡವೊಗತೀನಿ

ಆಲಾದ ಕೊರಡು ಬಂದು ಮುಂದೈದಾವೆ
ತಾಯಿ ನಿಮ್ಮ ಒಡಲು ಉರಿಯಾಲಿ
ತಾಯಿ ನಿಮ್ಮ ಒಡಲು ಉರಿಯಾಲಿ ನೀಪಡದ
ರೂವಾರದ ಕಾಡವೊಗತೀನಿ

ಆಲಾದ ಮರವಾ ಸೋವಿಟ್ಟು ಮೆರವೋಳು
ತಾಯೀಯು ಬಂದವಳೆ ಮೊಕತೋರೆ

ತಾಯಿ ಬಂದಾರೆ ಬರಲಿ ವಾಲೆ ತಂದಾರೆ ತರಲಿ
ರಾಯ ವುಲಿಕುಂಟೆ ಮೂಡಾಲ
ರಾಯ ವುಲಿಕುಂಟೆ ಮೂಡಾಲ ದಿನ್ನ್ಯಾಗ
ಗಾಜೀನ ಕೊಂಡವು ನಮಗವೆ

ಅತ್ತೀಯ ಮರ ಸುತ್ತಿಟ್ಟು ಮೆರವೋಳೆ
ಅಪ್ಪಬಂದವನೆ ಮೊಕತೋರೆ
ಅಪ್ಪಬಂದವನೆ ಮೊಕತೋರೆ ಕಾಟಮ್ಮ
ಕೊಂಡಾಕೋಗದು ನೀ ತಡೆಯೇ

ಅಪ್ಪ ಬಂದರೆ ಬರಲಿ ಕಪ್ಪ ತಂದರೆತರಲಿ
ಚಿಕ್ಕುಲಿಕುಂಟೆ ಮೂಡಾಲ
ಚಿಕ್ಕುಲಿಕುಂಟೆ ಮೂಡಾಲ ದಿನ್ನ್ಯಾಗ
ಕಿಚ್ಚೀನ ಕೊಂಡ ನಮಗವೆ

 

ಕೊಂಡಾಕನಡೆದಾಳೆ

ನಿಂಬೀಯ ಅಣ್ಣ ಅಂಬಾರಕೀಡಾಡುತ
ಬಂದೀಯ ತೋಳ ತಿರುವೂತ
ಬಂದೀಯ ತೋಳ ತಿರುವೂತ ಮುತ್ತಣ್ಣಾನ
ರೆಂಬೆ ಕೊಂಡಾಕ ನಡೆದಾಳೆ

ಕಾಕೀಯ ಅಣ್ಣ ಆಕಾಸಕೀಡಾಡುತ
ಬಾಪುರಿ ತೋಳ ತಿರುವೂತ
ಬಾಪುರಿ ತೋಳ ತಿರುವೂತ ಮುತ್ತಣ್ಣಾನ
ಕಾತೆ ಕೊಂಡಾಕ ನಡೆದಾಳೆ

ಗಂಡಾಸಿಲ್ಲದ ಗಂಬೀರೆಯ ನೋಡೀರಿ
ಗಂದಾದ ಬಾವಿಯವಳ ಮನಿಮುಂದೆ
ಗಂದಾದ ಬಾವಿಯವಳ ಮನಿಮುಂದೆ ಕಾಟಮ್ಮ
ಗಂಡನಿದ್ದರಿನ್ನೆಸ್ಟು ಮೆರದೀಯೆ

ಪುರುಸಾ ಇಲ್ಲದೋಳ ಸರಸಾವನೋಡೀರೆ
ಅರಸಿಣದ ಬಾವಿಯವಳ ಮನಿಮುಂದೆ
ಅರಸಿಣದ ಬಾವಿಯವಳ ಮನಿಮುಂದೆ ಕಾಟಮ್ಮ
ಪುರಸಾನಿದ್ದರೆಸ್ಟು ಮೆರದೀಯೆ

ದೂಳುಗವುದಾವೆ ದುಕ್ಕಾದ ಮ್ವಾಡವೆದ್ದಾವೆ
ಏಳು ಮಾರುದ್ದದ ಜಡೆಯೆಳೆದು
ಏಳು ಮಾರುದ್ದದ ಜಡೆಯೆಳೆದು ಕಾಟಮ್ಮ
ದೂಳಲ್ಲಿ ನಲಿವುತ ನಡೆದಾಳು

ಕೊಂಡಾದ ಸುತ್ತಮುತ್ತ ಇಂಗ್ಯಾಕೆ ನಿಂತೈದಾರೆ
ತುರುಬಿಗಾಯುದವನಾಕಿ
ತುರುಬಿಗಾಯುದವನಾಕಿ ಕಾಟಮ್ಮಾನ
ತೆರವೀಗಣ್ಣಗಳು ತಡೆದಾರೆ

ತೆರವೀಗೆಡೆಯಾಕೆ ಬಡವಾರೇನು ಮಾವುಗಳು
ಸೆರಗೊಡ್ಡಿ ಬೇಡೋ ಇರಿಯಣ್ಣ
ಸೆರಗೊಡ್ಡಿ ಬೇಡೋ ಇರಿಯಣ್ಣ ನಮ್ಮಾವುಗಳು
ಪಡಿವೊನ್ನು ಸೂರೆ ಬಿಡುತಾರೆ

ಕಣ್ಣಾಗ ಸೆದೆಬಿದ್ದು ಎಣ್ಯಾಕ ನೊಣಬಿದ್ದು
ಸಣ್ಣ ಸೀರ್ಕ ಕಿಡಿಬಿದ್ದು
ಸಣ್ಣ ಸೀರ್ಕ ಕಿಡಿಬಿದ್ದು ಕಾಟಮ್ಮಾನ
ಎಣೆಗಂಟಿಂದೇ ಉರುದಾವು

ತುಪ್ಪದಾಗ ನೊಣಬಿದ್ದು ಕಣ್ಣಾಗಸೆದೆಬಿದ್ದು
ಪಟ್ಟೇದ ಸೀರ್ಕ ಕಿಡಿಬಿದ್ದು
ಪಟ್ಟೇದ ಸೀರ್ಕ ಕಿಡಿಬಿದ್ದು ಕಾಟಮ್ಮಾನ
ವುಟ್ಚಾ ಸೀರೆಯಿಂದೆ ಉರುದಾವೆ

ಅಸಿಯಾತುಗ್ಗುಲಿಮರ ಎಸಳೊಡೆದು ಬೇವಾಗ
ಅಸುಮಗಳು ಕಾಟಮ್ಮ ಮೆರಿವಾಗ
ಅಸುಮಗಳು ಕಾಟಮ್ಮ ಮೆರಿವಾಗ ಅಗ್ಗುಣಿದೇವಿ
ಅಸನಾದ ನಗುವ ನಗುತಾಳೆ

ಸಣ್ಣಾ ತುಗ್ಗಲಿಮರ ಗಿಣ್ಣೊಡೆದು ಬೇವಾಗ
ಸಣ್ಣಾಮಗಳು ಕಾಟಮ್ಮ ಮೆರಿವಾಗ
ಸಣ್ಣಾಮಗಳು ಕಾಟಮ್ಮ ಮೆರಿವಾಗ ಅಗ್ಗುಣಿದೇವಿ
ಸಣ್ಣಾಗೆ ನಗುವಾ ನಗುತಾಳೆ

ಅಗಲನ್ನ ಕೊಂಡಾಕ ಜಗುಲಿಮುಚ್ಚಲಗಲ್ಲು
ರೇವಣ್ಣನೆಂಬೋಕುದುರೀಯ
ರೇವಣ್ಣನೆಂಬೋಕುದುರೀಯ ಏರಿಕಂಡು
ವೋದಾಳೆ ಕಾಟವ್ವ ಸಿವನರುಮನಿಗೆ

ಅಕ್ಕಾಕಾಟಮ್ಮಾನ ಕೊಪ್ಪೀನ ಕೆಳಗಾಳ
ಒಪ್ಪಾವೈದು ಮುತ್ತು ತಗುದು
ಒಪ್ಪಾವೈದು ಮುತ್ತು ತಗುದು ಸಂತೋಸಾಕ
ಎಚ್ಚೀಗೆ ಕೊಡು ನಮ್ಮ ಕಂದಯ್ಯಾಗೆ

 

ರಾಮಸುಬಮಂಗಳಾ

ತಾಯಿ ಕಾಟಮ್ಮಾನ ವಾಲೀಯ ಕೆಳೆಗಾಳ
ಮುತ್ತುಗಳಾ ತಗುದು ಆಲಾದ ಅರುವೀಲಿ
ಬಾಲಾನ ಸಂತೋಸಾಕ ಏಳೀಗೆ ಕೊಡುವಮ್ಮ
ನಮ್ಮ ಕಂದಯ್ಯಗಳಿಗೆ ಜಯಮಂಗಳ ರಾಮಾ ಸುಬಮಂಗಳ

ರೆಂಬೆ ಕಾಟಮ್ಮಾನ ಬಂದೀಯ ಕೆಳಗಾಳ
ಅಂದಾವೈದು ಮುತ್ತಾತಗುದು
ಅಂದಾವೈದು ಮುತ್ತಾತಗುದು ಗಂದಾದರುವೀಲಿ
ಕಂದನ ಸಂತೋಸಾಕೆಂದು ತಾಯಿಕಾಟಮ್ಮ
ನೆಂಬೀಗೆ ಕೊಡು ಅಟ್ಟೀಮಕ್ಕಳಿಗೆ
ಜಯಮಂಗಳಾ ರಾಮಾ ಸುಬಮಂಗಳಾ