ಸುಮಾರು ನೂರು ತ್ರಿಪದಿಗಳ ಕೊಂಡದ ಕಾಟವ್ವ ಗೀತೆಯ ಆರಂಭಕ್ಕೆ ಸರಸ್ವತಿಯನ್ನು ಆವಾಹಿಸುವ ಸೊಗಸಾದ ಪ್ರಾರ್ಥನೆಯಿದ್ದು ಅನಂತರ ಕಾಟವ್ವನನ್ನು ಸ್ಮರಿಸುವ ಪದ್ಯಗಳು ಬರುತ್ತವೆ. ಆಕೆ ಮದುಮಗಳಂತೆ ಶೃಂಗರಿಸಿಕೊಂಡು ಕೊಂಡದ ಪಾಲಾಗಲು ಹೋಗುವ ವಿವರಗಳೇ ಗೀತೆಯಲ್ಲಿ ಹೆಚ್ಚಾಗಿ ಬರುತ್ತದೆ :

ಅಸುಮಗಳು ಕಾಟಮ್ಮ ಬಸವಾನೇರಿಕಂಡು
ಎಸಳುಮಲ್ಲಿಗೆಯಾ ಮುಡುಕಂಡು | ವುಲಿಕುಂಟೆ
ಸೊಸಿಬೇವಿನಾಗ ಮೆರುದಾಳೆ ||

ಪದ್ಯದ ಈ ಸಾಲುಗಳು ಹುಲಿಕುಂಟೆಯಲ್ಲಿನ ಕೊಂಡದ ಸ್ಥಾನವನ್ನು ಹೇಳುತ್ತದೆ. ಕಾಟವ್ವನ ಗಂಡನಮನೆ ಹುಲಿಕುಂಟೆ ಗ್ರಾಮದಿಂದ ಎರಡು ಮೈಲಿ ದೂರಕ್ಕೆ ಆಕೆ ಸತಿ ಹೋಗಿ ಕೊಂಡಕ್ಕೆ ಬಿದ್ದ ಸ್ಥಳ ಈಗಲೂ ಇದೆ. ಅಲ್ಲಿ ಶಾಸನವಾಗಲಿ ಮಾಸ್ತಿಕಲ್ಲಾಗಲಿ ಇಲ್ಲ. ಅಥವಾ ಇದ್ದಿರಬಹುದಾದ ಕಲ್ಲು ಹಾಳಾಗಿರಬೇಕು. ಆದರೂ ಆ ಸ್ಥಳದಲ್ಲಿ ಪೂಜೆ, ಹರಕೆಗಳು ಸಲ್ಲುತ್ತವೆ. ಹುಲಿಕುಂಟೆ ಗ್ರಾಮ ಹಿಂದಿನ ಕಾಲಕ್ಕೆ ನಿಡುಗಲ್ಲು ಪಾಳೆಯ ಪಟ್ಟಿಗೆ ಸೇರಿತ್ತು. ತುಮಕೂರು ಜಿಲ್ಲೆಯ ಪಾವಗಡ ೪೬ರ ಶಾಸನದಲ್ಲಿ ವೆಂಕಟಪತಿರಾಯನು ಹೊಯ್ಸಳ ನಾಯಕನಿಗೆ ದೊಡ್ಡೇರಿ, ಸಿರಾ, ತುರುವೇಕೆರೆ, ಹಿರಿಯೂರು, ಐಮಂಗಲ ಈ ಪ್ರದೇಶಗಳನ್ನು ದಾನವಾಗಿ ಕೊಟ್ಟನೆಂದು ತಿಳಿದುಬರುತ್ತದೆ. ಈ ಪ್ರದೇಶಗಳೊಡನೆ ಹುಲಿಕುಂಟೆ, ಹರ್ತಿಕೋಟೆ ಗ್ರಾಮಗಳೂ ಸೇರಿಕೊಳ್ಳುತ್ತವೆ. ಕಾಟವ್ವ ಕೊಂಡಕ್ಕೆ ಹೋಗುವ ಸಂದರ್ಭದಲ್ಲಿ ನಿಡುಗಲ್ಲು ಪಾಳೆಯಗಾರನ ಅಪ್ಪಣೆಯನ್ನು ಪದ್ಧತಿಯ ಪ್ರಕಾರ ಪಡೆಯುತ್ತಾರೆ. ಈ ಸಂಗತಿ ಗೀತೆಯಲ್ಲಿ ಬರುತ್ತದೆ. ಮುಮ್ಮಡಿ ಹೊಟ್ಯಾಳನಾಯಕನ ಪ್ರಸ್ತಾಪ ಕೆಲವು ಪದ್ಯಗಳಲ್ಲಿ ಬರುವುದರಿಂದ ಈ ಘಟನೆ ಸುಮಾರು ಇನ್ನೂರ ಐವತ್ತು ವರ್ಷಗಳ ಹಿಂದೆ ಜರುಗಿದ್ದೆಂದು ತಿಳಿಯಬಹುದು. ಇಡೀ ಗೀತೆಯಲ್ಲಿ ಕಾಟವ್ವನ ವೃತ್ತಾಂತವೇ ಮುಖ್ಯ. ಈಕೆಗೆ ಲಗ್ನವಾದದ್ದಾಗಲಿ ಪತಿ ಮುತ್ತಣ್ಣ ತೀರಿಕೊಂಡುದಕ್ಕೆ ಕಾರಣವಾಗಲಿ ತಿಳಿದುಬರುವುದಿಲ್ಲ. ಆಕೆಯ ಸಂಬಂಧಿಗಳ ಹೆಸರು ತಂದೆ ಕರಿಯಣ್ಣ, ತಮ್ಮ ಕಾಟಣ್ಣ, ಮೈದುನ ಸಿರಿಗೊಂಡ ಗೌಡ, ಜೊತೆಗೆ ಅತ್ತೆ ನಾದಿನಿಯರ ಪ್ರಸ್ತಾಪವೂ ಇದೆ. ಬಂಧುಬಳಗದವರೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಕಾಟವ್ವನನ್ನು ಕೊಂಡಕ್ಕೆ ಹೋಗುವುದು ಬೇಡವೆಂದು ತಡೆಯುತ್ತಾರೆ. ಸತಿಯರು ಕೊಂಡಕ್ಕೆ ಸರ್ವಾಲಂಕಾರ ಭೂಷಿತೆಯರಾಗಿ ಹೋಗುತ್ತಿದ್ದುದರ ಚಿತ್ರವನ್ನು ಈ ಗೀತೆ ಸಂಪೂರ್ಣ ವಿವರಿಸುತ್ತದೆ. ಕೊಂಡದ ಕಾಟವ್ವ ಗೀತೆಗೆ ಬಳಸುವ ಸೊಲ್ಲುಗಳ ಸಂಖ್ಯೆ ಐದು. ಅವು ಕ್ರಮವಾಗಿ :

. ಬಾಳೇಯ ಹಣ್ಣ ನೋಡೆ ಅವಳಾಕಿರುವ
ಬಲದಾ ಕಾಸೀಯ ನೋಡೆ

. ಹಸುರು ಸುವ್ವಾರಿ ಬಾರೆ ಕಾಟಮ್ಮ
ಮೊಸರೀಲೋಕುಳಿಯ ನಾಡೆ

. ಧೂಳುಗವುದಾವೆ ಧೂಳುಗವುದಾವೆ
ದುಕ್ಕದ ಮ್ವಾಡಗಳೆದ್ದಾವೆ

. ಮಾನ ಮುತ್ತಿನರುಳೇ ಕಾಟಮ್ಮ
ನಾರಿ ಕೊಂಡಾಕ ನಡಿಯೇ

. ಗಂದಾಸೋಬಂದಿ ಬಾರೆ ಕಾಟಮ್ಮ
ರೆಂಬೇ ಕಿಡಿಗಣ್ಣೆ ಕಾಣೆ

ಮೊದಲ ಎರಡು ಸೊಲ್ಲನ್ನು ಆರಂಭಕ್ಕೂ ಮುಂದಿನ ಎರಡು ಸೊಲ್ಲನ್ನು, ಕಾಟವ್ವ ಕೊಂಡಕ್ಕೆ ನಡೆಯುವ ಸಂದರ್ಭಕ್ಕೂ, ಕಡೆಯದನ್ನು ಕೊಂಡಕ್ಕೆ ಬೀಳುವಾಗ ಮತ್ತು ಬಿದ್ದ ನಂತರ ಹಾಡುತ್ತಾರೆ.

ಕೊಂಡದಕಾಟವ್ವಗೀತೆ

ಎಲ್ಲಾರ ವಚನಾಕು ನಿಲ್ಲೋಳು:

ಎಲ್ಲಾರ ವಚನಾಕು ನಿಲ್ಲೋಳೆ ಸರಸೋತಿ
ನೆಲ್ಲು ತೆನೆಯಾಂಗ ಬಳುಕೂತ
ನೆಲ್ಲು ತೆನೆಯಾಂಗ ಬಳುಕೂತ ಬಾಗೂತ
ನಿಲ್ಲಮ್ಮ ನಮ್ಮ ವಚನಾಕ

ಯಾರ ವಚನಾಕು ಬರುವೋಳೆ ಸರಸೋತಿ
ಬಾಳೆಲೆಯಾಂಗ ಬಳುಕೂತ
ಬಾಳೆಲೆಯಾಂಗ ಬಳುಕೂತ ಬಾಗೂತ
ಬಾರಮ್ಮ ನಮ್ಮ ವಚನಾಕ

ನೀರಿಟ್ಟು ನ್ಯನದೇವ ನಾರಿಕಾಟಮ್ಮನ
ನೀರೀಗೆ ಬತ್ಯೇವ ನಡೆಸೋಳು
ನೀರೀಗೆ ಬತ್ಯೇವ ನಡೆಸೋಳು ಕಾಟಮ್ಮಾನ
ನೀರೀಟ್ಟು ನಾವು ನ್ಯನದೇವು

ಎಸರಿಟ್ಟು ನ್ಯನದೇವು ದೆಸೆವಂತ ಕಾಟಮ್ನ
ಎಸರೀಗೆ ಬತ್ತ್ಯೇವ ನಡೆಸೋಳು
ಎಸರೀಗೆ ಬತ್ತ್ಯೇವ ನಡೆಸೋಳು ಕಾಟಮ್ನ
ಎಸರಿಟ್ಟು ನಾವು ನ್ಯನದೇವು

ಅಕ್ಕಬಾರೆ ಅರಸಿಬಾರೆ ಚಿಕ್ಕನಾಗುತಿಬಾರೆ
ಸೆಟ್ಟಿ ಸಂದನೋರ ಮಗಳೆಬಾರೆ
ಸೆಟ್ಟಿ ಸಂದನೋರ ಮಗಳೆಬಾರೆ ಕಾಟಮ್ಮ
ದೇವಿ ಬಾರೆ ನಮ್ಮ ವಚನಾಕ

ಗದ್ದಿಗೆಯಾಗ ಎದ್ದು ಮೂಡಿರುವೋಳೆ
ನೆಗ್ಗುಲಿ ವೂವಿನ ಸೀರೆ ನೆರಿಗೆಯೋಳೆ
ನೆಗ್ಗುಲಿ ವೂವಿನ ಸೀರೆ ನೆರಿಗೆಯೋಳೆ ಅಕ್ಕ ಕಾಟಮ್ಮ
ಮುದ್ದೆ ಬಾ ನಮ್ಮ ವಚನಾಕ

ಕಡದಾಕಂಬದಲಿ ವಡದು ಮೂಡಿರುವೋಳೆ
ಕಡಲೂವಿನ ಸೀರೆ ನೆರಿಗೆಯೋಳೆ
ಕಡಲೂವಿನ ಸೀರೆ ನೆರಿಗೆಯೋಳೆ ಕಾಟವ್ವ
ದರಣಿ ಬಾರ ನಮ್ಮ ವಚನಾಕ

ಮುಂಚೆ ನ್ಯನದೇನ ಕೆಂಚಿ ಕಾಟಮ್ಮಾನ
ಅಂಚೀನ ಸೀರೇಯ ಗರತೀಯ
ಅಂಚೀನ ಸೀರೇಯ ಗರತೀಯ ಕಾಟಮ್ಮ
ಮುಂಚ್ಯೇಳು ಸೊಲ್ಲೀಲಿ ನ್ಯನದೇನ

ಮೊದಲೇ ನ್ಯನದೇನ ಮದನಾರಿ ಅಮ್ಮಾನ
ಮದಗಾದಿಂದಾಚೆ ಮನೆಯೋಳ
ಮದಗಾದಿಂದಾಚೆ ಮನೆಯೋಳ ಅಕ್ಕಾ ಕಾಟಮ್ಮ
ಮುದ್ದೆ ಬಾರೆ ನಮ್ಮ ವಚನಾಕ

ನಾನು ನ್ಯನದೇನು ದೇವಿ ಕಾಟಮ್ಮಾನ
ತೋಳೀಲಿ ಮೊಸರಾ ಕಡೆವೋಳ
ತೋಳೀಲಿ ಮೊಸರಾ ಕಡೆವೋಳ ಕಾಟಮ್ನ
ನಾರೀಯ ಮೊದಲು ನೆನದೇನ

ಅಕ್ಕಾ ಕಾಟಮ್ಮ ನ್ಯಟ್ಟನ್ನ ಎಂಗೂಸು
ಕಟ್ಟಿಗ್ಗೋದವ್ಳು ಬರಲಿಲ್ಲ
ಕಟ್ಟಿಗ್ಗೋದವ್ಳು ಬರಲಿಲ್ಲ ವುಲಿಕುಂಟೆ
ವುಟ್ಟು ಬೇವಿನಾಗ ಮೆರೆದಾಳೆ

 

ರಾಡಬಾಗಲತಗುಸಯ್ಯ

ನೀರೀಗೋದೋಳೆ ಬರಲಿಲ್ಲ
ನಾರೀ ಕಾಟಮ್ಮ ನ್ಯಾರನ್ನ
ನಾರೀ ಕಾಟಮ್ಮ ನ್ಯಾರನ್ನ ಎಂಗೂಸು
ಸಾಲು ಬೇವಿನ್ಯಾಗ ಮೆರೆದಾಳೆ

ಅಕ್ಕಾ ಕಾಟಮ್ಮ ಅತ್ತಿಗ್ಗಂಜೋಳಲ್ಲ
ಅಟ್ಯಾಗ ಕೊಡನಾ ಇಳುವ್ಯಾಳೆ
ಅಟ್ಯಾಗ ಕೊಡನಾ ಇಳುವ್ಯಾಳೆ ವುಲಿಕುಂಟೆ
ತೊಟ್ಟಾಲ ಕೂಸಾ ಮೆರುದಾಳೆ

ನಾರಿಕಾಟಮ್ಮ ಮಾವಗಂಜೋಳಲ್ಲ
ವೋಣ್ಯಾಗ ಕೊಡನಾ ಇಳುವ್ಯಾಳೆ
ವೋಣ್ಯಾಗ ಕೊಡನಾ ಇಳುವ್ಯಾಳೆ ವುಲಿಕುಂಟೆ
ತೊಟ್ಟೀಲ ಕೂಸಾ ಮೆರುದಾಳೆ

ಅಸು ಮಗಳು ಕಾಟಮ್ಮ ಬಸುವಾನೇರಿಕಂಡು
ಎಸಳೂಮಲ್ಲಿಗೆ ಮುಡಕಂಡು
ಎಸಳೂಮಲ್ಲಿಗೆ ಮುಡಕಂಡು ವುಲಿಕುಂಟೆ
ಸೊಸಿ ಬೇವಿನ್ಯಾಗ ಮೆರುದಾಳೆ

ಸಣ್ಣೋಳು ಕಾಟಮ್ಮ ಬಲ್ಲಾನೇರಿಕೊಂಡು
ಬಳ್ಳಿ ಮಲ್ಲಿಗೆಯಾ ಮುಡುಕಂಡು
ಬಳ್ಳಿ ಮಲ್ಲಿಗೆಯಾ ಮುಡುಕಂಡು ವುಲಿಕುಂಟೆ
ಅಳ್ಳಿ ಕ್ವಾಟೀಲಿ ಮೆರುದಾಳೆ

ಅರಿಬೆಯಾಲೀನ ಸಿರಿವಂತೆ ಕಾಟಮ್ಮ
ಬೈಗಾದರೆಲ್ಲಿ ವುಳುದೀಯೆ
ಬೈಗಾದರೆಲ್ಲಿ ವುಳುದೀಯೆ ವುಲಿಕುಂಟೆ
ಎಳೆಯಾ ವಂಬಾಳೆ ವನದಾಗೆ

ಕಂಬಿಯಾಲೀನ ಲಿಂಗವಂತೆ ಕಾಟಮ್ಮ
ಸಂಜೆಯಾದರೆಲ್ಲಿ ಉಳುದೀಯೆ
ಸಂಜೆಯಾದರೆಲ್ಲಿ ಉಳುದೀಯೆ ವುಲಿಕುಂಟೆ
ತೆಂಗು ಬಾಳೆಯ ವನದಾಗೆ

ವೋಡಿವೋದಾಳೆಂದು ರಾಡುಗಳ ಆಕುಸ್ತ
ವೋಡಿವೋಗೋರ ಮಗಳಲ್ಲ
ವೋಡಿವೋಗೋರ ಮಗಳಲ್ಲ ಸಿರಿಗೊಂಡಗೌಡ
ರಾಡ ಬಾಗಲ ತಗುಸಯ್ಯಾ

ಕಾಡುಕುಳ್ಳು ಕನ್ನಡಿ ಯಾಲಕ್ಕಿ ಗಜನಿಂಬೆ
ಆಡುಂಬ ಮಗಳೆ ಕಾಟಮ್ಮ
ಆಡುಂಬ ಮಗಳೆ ಕಾಟಮ್ಮ ವುಲಿಕುಂಟೆ
ರಾಡಾಗ ಕೋಸಿ ಮೆರೆದಾಳೆ

ಕಿಚ್ಚಿಗಂಜ್ಯಾಳೆಂದು ಅಚ್ಚಡವತೆರೆಕಟ್ಟಿಸ್ತ
ಕಿಚ್ಚಿಗಂಜೋರ ಮಗಳಲ್ಲಿ
ಕಿಚ್ಚಿಗಂಜೋರ ಮಗಳಲ್ಲಿ ಸಿರಿಗೊಂಡಗೌಡ
ಅಚ್ಚಡದ ತೆರೆಯ ತಗುಸಯ್ಯ

ಕೊಂಡಕಂಜ್ಯಾಳೆಂದು ಕಂಬ್ಳಿ ತೆರೆಯ ಕಟ್ಟಿಸ್ತ
ಕೊಂಡಕಂಜೋರ ಮಗಳಲ್ಲ
ಕೊಂಡಕಂಜೋರ ಮಗಳಲ್ಲ ಸಿರಿಗೊಂಡಗೌಡ
ಕಂಬಳಿ ತೆರೆಯಾ ತಗುಸಯ್ಯ

 

ದುಕ್ಕಗಳಗನವಾಗಿ

ಚಾಪೆವೊದ್ದುಕಂಡು ಪಾಪಿಯಾಗೈದಾನೆ
ಲೋಕಪತಿ ಕಾಣೆ ಮೈದುನ
ಲೋಕಪತಿ ಕಾಣೆ ಮೈದುನ ಸಿರಿಗೊಂಡಗೌಡ
ದುರುಗಾದಪ್ಪಣೆಯಾ ತರಲೋದ

ಅರುವಿ ವೊದ್ದುಕಂಡು ಅರಿಯದನಾಗವನೆ
ದೊರೆಮಗನು ಕಾಣೆ ಮೈದುನ
ದೊರೆಮಗನು ಕಾಣೆ ಮೈದುನ ಸಿರಿಗೊಂಡಗೌಡ
ದುರುಗಾದಪ್ಪಣೆಯ ತರಲೋದ

ಕೊಂಡ ಅತ್ಯಾಳೆ ಇಂದಾಕ ನೋಡ್ಯಾಳೆ
ಕೊಂಡದೀ ಕೆಂಡ ಸುಡದೆಂದು
ಕೊಂಡದೀ ಕೆಂಡ ಸುಡದೆಂದು ಮತ್ತೊಂದು
ಜೊತ್ತಾಲದ ಮರನಾ ಕಡಿಸ್ಯಾಳೆ

ಅಣ್ಣಾ ಕಾಟಣ್ಣ ಬಣ್ಣಾವತತ್ತಾರೋ
ಇಂದು ಬಂದೆಯೂರ ವೊಗಲಿಲ್ಲ
ಇಂದು ಬಂದೆಯೂರ ವೊಗಲಿಲ್ಲ ಅರ್ತಿಕ್ವಾಟೆ
ಎಣ್ಣು ಮಕ್ಕಳಾಗ ಇರಲಿಲ್ಲ

ಅಪ್ಪ ಕರಿಯಣ್ಣ ಕುಪ್ಪಸತತ್ತಾರೋ
ಇಂದು ಬಂದೆಯೂರ ವೊಗಲಿಲ್ಲ
ಇಂದು ಬಂದೆಯೂರ ವೊಗಲಿಲ್ಲ ಅರ್ತಿಕ್ವಾಟೆ
ಚಿಕ್ಕಮಕ್ಕಳಾಗ ಇರಲಿಲ್ಲ

ಆಲಾದಮರದ ಜೋಲು ಬೊಗ್ಗಿಸಿದಂಗ
ಆಯ ನೋಡಿ ತವರೂರರ್ತಿ ಮುಂದೆ
ಆಯ ನೋಡಿ ತವರೂರರ್ತಿ ಮುಂದೆ ಯಾರೂ
ಆಡ ಮಕ್ಕಳ ಸುಳಿವಿಲ್ಲ

ಅತ್ತೀಯ ಮರದ ತೊಟ್ಟು ಬಗ್ಗುಸುದಂಗ
ಅತ್ತಿ ನೋಡ್ಯಾಳೆ ತವರೂರ
ಅತ್ತಿ ನೋಡ್ಯಾಳೆ ತವರೂರ ಅರ್ತಿಮುಂದೆ
ಚಿಕ್ಕಮಕ್ಕಾಳೆ ಸುಳಿವಿಲ್ಲ

ಸಾವೀಗೋಗೋಳಿಗೆ ಸಾಲ್ಯಾದಸೀರ್ಕೆ
ಸಾವಿಗೊಪ್ಯಾವೆ ಗುಲಗಂಜಿ
ಸಾವಿಗೊಪ್ಯಾವೆ ಗುಲಗಂಜಿ ಬಣ್ಣಾದಸೀರೆ
ಬ್ಯಾಗಾನೆ ಕಾಟಣ್ಣನ ಬರೆಏಳೋ

ಕಿಚ್ಚಿಗೋಗೋಳಿಗೆ ಪಟ್ಟೆದ ಸೀರ್ಕೊ
ಕಿಚ್ಚಿಗೊಪ್ಯಾವೆ ಗುಲಗಂಜಿ
ಕಿಚ್ಚಿಗೊಪ್ಯಾವೆ ಗುಲಗಂಜಿ ಬಣ್ಣದಸೀರೆ
ಗಕ್ಕನವರಪ್ನ ಬರ ಏಳೋ

ನೋಡಾಲು ಕಾಟವ್ನ
ಬರ ಏಳೆಂದವರಣ್ಣ
ಬ್ಯಾಗಾನೊಂದಾಳ ಕಳುವ್ಯಾನೆ

ಪೆಟ್ಟಿಗ್ಯಾಗಳ ಪಟ್ಟೇದ ಸೀರೀಯ
ವುಟ್ಟೋಗಲಿ ಕಾಟವ್ನ ಬರ ಏಳೋ
ವುಟ್ಟೋಗಲಿ ಕಾಟವ್ನ ಬರ ಏಳೋ ಅವರಪ್ಪ
ಗಕ್ಕಾನೊಂದಾಳ ಕಳುವ್ಯಾನೆ

ಮುತ್ತೀನ ಜಕ್ಕುಣೆಕೆ ಅವರಕ್ಕಯ್ಯ ಇಡಕಂಡು
ನೆತ್ತೀಯ ಕೊರಳ ಬಾಗಿಚಾಚಿ
ನೆತ್ತೀಯ ಕೊರಳ ಬಾಗಿಚಾಚಿ ಆಕ್ಯಾಳೆ
ಮುಕ್ಕಣ್ಣನೆಂಬೋ ಚವುಲೀಯ

ಮುಕ್ಕಣ್ಣನೆಂಬೋ ಚವುಲೀಯ ಆಕಲುವಾಗ
ಅವರಕ್ಕಯ್ಗೆ ದುಕ್ಕಗಳು ಗನವಾಗಿ
ಅವರಕ್ಕಯ್ಗೆ ದುಕ್ಕಗಳು ಗನವಾಗಿ ಚಿನ್ನಾದ
ಜಕ್ಕುಣೆಗೆಯ ನೀಡ್ಯಾಳೋ

ಚಿನ್ನಾದ ಜಕ್ಕುಣೆಕೆ ಅವರಮ್ಮಯ್ಯ ಇಡಕಂಡು
ಕೆನ್ನಿಂದ ಕೊರಳಾ ಬಿಗಿಬಾಚಿ
ಕೆನ್ನಿಂದ ಕೊರಳಾ ಬಿಗಿಬಾಚಿ ಅಕ್ಯಾಳೆ
ಚೆನ್ನಣ್ಣನೆಂಬೋ ಚವುಲೀಯ

ಚನ್ನಣ್ಣನೆಂಬೋ ಚವುಲೀಯ ಅಕಲುವಾಗ
ಅವರಮ್ಮಯ್ಗೆ ದುಕ್ಕಗಳು ಗನವಾಗಿ
ಅವರಮ್ಮಯ್ಗೆ ದುಕ್ಕಗಳು ಗನವಾಗಿ ಚಿನ್ನಾದ
ಜಕ್ಕುಣೆಕೆಯನೀಡಾಡ್ಯಾಳೋ

ತನ್ನೀರಿ ಬಾಚಣೆಗೇಯ ತನ್ನೀರಿ ಜಕ್ಕುಣೆಕೇಯ
ತನ್ನೀರಿ ಬಂಗಾರುದ ಬರಣೇಯ
ತನ್ನೀರಿ ಬಂಗಾರುದ ಬರಣೇಯ ಮುತ್ತಣ್ಣಾನ
ಕನ್ನೆಗೆ ವೂವಾ ಮುಡಿಸ್ಯಾನೆ

ತೋರೀರಿ ಬಾಚಣೆಗೀಯ ತೋರೀರಿ ಜಕ್ಕಣೆಕೀಯ
ತೋರೀರಿ ಬಂಗಾರುದ ಬರಣೇಯ
ತೋರೀರಿ ಬಂಗಾರುದ ಬರಣೇಯ ಮುತ್ತಣ್ಣಾನ
ನಾರೀಗೆ ವೂವ ಮುಡಿಸ್ಯಾನೆ

 

ಸಲುವೈದೆತನಕಅಳಿಗಾಲ

ಅಣ್ಣಗಳೆವಲದಾಗ ಸಣ್ಣ ಮಲ್ಲಿಗೆ ಸಾವುರ
ಇನ್ಯಾರೆ ತಂಗಿ ಮುಡಿವೋರು
ಇನ್ಯಾರೆ ತಂಗಿ ಮುಡಿವೋರು ಅಂದಂದು
ಅವರಣ್ಣಯ್ಯ ಆಡಾಡಿ ಅಳುತಾನೆ

ಅಪ್ಪಗಳಾ ವಲದಾಗ ಬಿಟ್ಟ ಮಲ್ಲಿಗೆ ಸಾವುರ
ಮತ್ಯಾರೆ ತಂಗಿ ಮುಡಿವೋರು
ಮತ್ಯಾರೆ ತಂಗಿ ಮುಡಿವೋರು ಅಂದಿನ್ನ
ಅವರಪ್ಪಯ್ಯ ಆಡ್ಯಾಡಿ ಅಳುತಾನೆ

ಗುಲಗಂಜಿ ಬಣ್ಣದ ಸೀರೆ ನಿಲಿಸುಡೆ ಕಾಟಮ್ಮ
ಮುಂಜೆರಗಿನಾಗ ಗುಲಗಂಜಿ
ಮುಂಜೆರಗಿನಾಗ ಗುಲಗಂಜಿ ಬಣ್ಣದಸೀರೆ
ತಂದೆ ಕರಿಯಣ್ಣ ತರಿಸ್ಯಾನೆ

ಅರಸಿಣಗಂಬಿ ಸೀರೆ ನಿಲಿಸುಡೆ ಕಾಟಮ್ಮ
ನಡುಸುತ್ತಿನಾಗ ಗುಲಗಂಜಿ
ನಡುಸುತ್ತಿನಾಗ ಗುಲಗಂಜಿ ಬಣ್ಣದ ಸೀರೆಯ
ಅಣ್ಣಾ ಕಾಟಣ್ಣ ತರಿಸ್ಯಾನೆ

ಅತ್ತೋರವಾ ಕೊಟ್ಟು ಪಟ್ಟೇವ ತರಿಸ್ಯಾನೆ
ಅಕ್ಕಾ ಕಾಟಮ್ಗೆ ಉಡುಗ್ವಾರೆ
ಅಕ್ಕಾ ಕಾಟಮ್ಗೆ ಉಡುಗ್ವಾರೆ ವುಲಿಕುಂಟೆ
ಮುತ್ತೈದೇಳಾಗಿ ವೊರಡಮ್ಮ

ಆರೊರವಾ ಕೊಟ್ಟು ಸಾಲ್ಯಾವತರಿಸ್ಯಾನೆ
ನಾರಿ ಕಾಟಮ್ಮ ಉಡುಬಾರೆ
ನಾರಿ ಕಾಟಮ್ಮ ಉಡುಬಾರೆ ವುಲಿಕುಂಟೆ
ಮೊದಲಿಗಿತ್ಯಾಗಿ ವೊರಡಮ್ಮ

ಬಳಿಯಾ ತೊಡುವಾಗ ಬಲಗಡೆಯೇ ಸೀತಾರು
ಬಳಿಗಾರರಣ್ಣ ಬದುಕಯ್ಯ
ಬಳಿಗಾರರಣ್ಣ ಬದುಕಯ್ಯ ಕಾಟಮ್ಮಾನ
ಸುಲುವೈದೆ ತನಕ ಅಳಿಗಾಲ

ಕುಪ್ಪಸವಾ ತೊಡುವಾಗ ಬೆಕ್ಕಡ್ಡಲಾದವು
ಸಿಪ್ಪಿಗರಣ್ಣ ಬಿಡುಕೈಯ್ಯ
ಸಿಪ್ಪಿಗರಣ್ಣ ಬಿಡುಕೈಯ್ಯ ಕಾಟಮ್ಮಾನ
ಮುತ್ತೈದೆ ತನಕ ಅಳಿಗಾಲ

ಪಟ್ಟೇದ ಸೀರೇಯನುಡಿಸ್ಯಾರೆ
ಮುತ್ತೀನ ಬೊಟ್ಟಿಟ್ಟಾರೆ
ಮುತ್ತೀನ ಬೊಟ್ಟಿಟ್ಟಾರೆ ಅಕ್ಕಗಳು
ವೊಯ್ದಾರೆ ಮಡುಲಕ್ಕೀನ

ಮಡುಲಿಕ್ಕಿವೊಯ್ದಾರೆ ಕಾಟಮ್ಮನ
ಅತ್ತೀಯ ಮನೆಗೆ ಕಳುವ್ಯಾರೇ

ಸಾಲ್ಯಾದ ಸೀರೇಯ ನುಡಿಸಿ ಸಾದೀನ ಬಟ್ಟಿಟ್ಟಾರೆ
ತಾಯೋರು ವೊಯ್ದಾರೆ ಮಡುಲಕ್ಕಿ
ತಾಯೋರು ವೋಯ್ದಾರೆ ಮಡುಲಕ್ಕಿ ಕಾಟಮ್ಮನ
ಮಾವಾನ ಮನಿಗೇ ಕಳಿವ್ಯಾರೆ

ಗಂಜೀಯ ಸೀರುಡಿಸ್ಯಾರೆ ಗಂದಾದ ಬಟ್ಟಿಟ್ಟಾರೆ
ತಂಗ್ಯೊರೊಯ್ದಾರೆ ಮಡುಲಕ್ಕಿ
ತಂಗ್ಯೊರೊಯ್ದಾರೆ ಮಡುಲಕ್ಕಿ ಕಾಟಮ್ಮಾನ
ಗಂಡನ ಮನಿಗೇ ಕಳುವ್ಯಾರೆ

ಚಿಕ್ಕರ್ತಿ ಕ್ವಾಟೆ ಮುತ್ತಿನೇರಿಮ್ಯಾಲೆ
ಪಟ್ಟೇದ ಸೀರೋರು ಸರಿಬೆರಕೆ
ಪಟ್ಟೇದ ಸೀರೋರು ಸರಿಬೆರಕೆ ಕಾಟಮ್ಮಾನ
ಅಕ್ಕಗಳು ಸಾಗಿ ಕಳಿವ್ಯಾರೆ

ರಾಯ ಅರ್ತಿಕ್ವಾಟೆ ವೂವಿನೇರಿಮ್ಯಾಲೆ
ಸಾಲ್ಯಾದ ಸೀರೆಯೋರು ಸರಿಬೆರಕೆ
ಸಾಲ್ಯಾದ ಸೀರೆಯೋರು ಸರಿಬೆರಕೆ ಕಾಟಮ್ಮಾನ
ತಂಗೀರು ಸಾಗಾ ಕಳಿವ್ಯಾರೆ