ಪಟ್ಟೇದಸೀರೆ ಬಂದು ಮುತ್ತಿನ ಸೂಸುಕ ಬಂದು
ಎತ್ತಿನ ಮೇಲೆ ಮಡುಲಕ್ಕಿ ಬಂದು
ಎತ್ತಿನ ಮೇಲೆ ಮಡುಲಕ್ಕಿ ಬಂದು ಮಾರನೋರ
ದಿಟ್ಟಿಲರ್ಜುಣರ ಮಗಳೀಗೆ

ಸಾಲ್ಯೇದ ಸೀರೆ ಬಂದು ವೂವಿನಸೂಸುಕ ಬಂದು
ವೋರಿಮ್ಯಾಲೆ ಬಂದಾವು ಮಡುಲಕ್ಕಿ
ವೋರಿಮ್ಯಾಲೆ ಬಂದಾವು ಮಡುಲಕ್ಕಿ ಮಾರನೋರ
ದೋರಲರ್ಜುಣರ ಮಗಳೀಗೆ

ಗಂಗಾಳದಾಗ ದುಂಡುಮಲ್ಲಿಗೆ ಬಂದು
ತಂಬಿಟ್ಟುಬಂದು ಮಡಲೀಗೆ
ತಂಬಿಟ್ಟುಬಂದು ಮಡಲೀಗೆ ತಿಪ್ಪಮ್ಮ
ಸಂಬ್ರಮದ ಗೊಂಬೆ ಮಡಲೊಡ್ಡೆ

ಅರಿವಾಣಾದಾಗ ಅರಳು ಮಲ್ಲಿಗೆ ಬಂದು
ನೆನೆಗಡಲೆಬಂದು ಮಡಲೀಗೆ
ನೆನೆಗಡಲೆಬಂದು ಮಡಲೀಗೆ ಸಣ್ಣಮ್ಮ
ಸಡಗರದ ಗೊಂಬೆ ಮಡಲೊಡ್ಡೆ……..

ಗುತ್ತಿ ಗುಡ್ಡಕೋಗಿ ಕುಟ್ಟಿಡಂಗುರ ವಡೆಸಿ
ಮುಟ್ಟುದಲೆ ವೂವುಕೊಯ್ದಾನೆ
ಮುಟ್ಟುದಲೆ ವೂವುಕೊಯ್ದಾನೆ
ಮುಟ್ಟುದಲೆ ವೂವುಕೊಯ್ದಾನೆ ಸಿರಿಯಣ್ಣ
ಅತ್ತೇಯಮಗಳ ತುರುಬೀಗೆ

ಗ್ವಾವೀಯ ಗುಡ್ಡಕೋಗಿ ಸಾರಿಡಂಗುರವ ವಡೆಸಿ
ನೋಡದಲೆ ವೂವಕೊಯ್ದಾನೆ
ನೋಡದಲೆ ವೂವಕೊಯ್ದಾನೆ ಈರಣ್ಣ
ಮಾವಾನ ಮಗಳ ತುರುಬೀಗೆ

ಪಡುವಲೋದಾನೆ ಕಡಲೆಬೆಲೆ ಮಾಡ್ಯಾನೆ
ತಡದುಕೇಳ್ಯಾನೆ ವೊಸಮಾತು
ತಡದುಕೇಳ್ಯಾನೆ ವೊಸಮಾತು ಸಿರಿಯಣ್ಣ
ಮಡದಿಮೈನೆರೆತ ದಿನಗಾಳ

ತೆಂಕಾಲೋದಾನೆ ಸುಂಟಿಬೇಲಿ ಮಾಡ್ಯಾನೆ
ನಿಂತುಕೇಳ್ಯಾನೆ ವೊಸಮಾತು
ನಿಂತುಕೇಳ್ಯಾನೆ ವೊಸಮಾತು ಜಡಿಯಣ್ಣ
ಕೆಂಚೆ ಮೈನೆರೆತ ದಿನಗಾಳ

ಏರಿ ರನ್ನದೇರಿ ಏರಿ ಚಿನ್ನದೇರಿ
ಏರಿಂದ ಕೆಳಗೆ ಎಲೆದೋಟ
ಏರಿಂದ ಕೆಳಗೆ ಎಲೆದೋಟ ವಳಗಾಳ
ಮಾವ ಕೇಳ್ಯಾನೆ ವೊಸಮಾತು

ವೊಸಮಾತು ಕೇಳ್ಯಾನೆ ವುಸಿನಗುನಕ್ಯಾನೆ
ಎಸಳುಮಲ್ಲಿಗೆ ಕೊಯ್ದಾನೆ
ಎಸಳುಮಲ್ಲಿಗೆ ಕೊಯ್ದಾನೆ ಜಡಿಯಣ್ಣ
ಸೊಸೆಯಿದ್ದರ ಮನೆಗೆ ಕಳುವ್ಯಾನೆ

ಕಟ್ಟಿ ರನ್ನಾದ ಕಟ್ಟಿ ಕಟ್ಟಿ ಚಿನ್ನಾದ ಕಟ್ಟಿ
ಕಟ್ಟಿಯಿಂದಲ ಕಟ್ಟೆ ಎಲೆದೋಟ
ಕಟ್ಟಿಯಿಂದಲ ಕಟ್ಟೆ ಎಲೆದೋಟ ವಳಗಾಳ
ಅವರಪ್ಪ ಕೇಳ್ಯಾನೆ ವೊಸಮಾತು

ವೊಸಮಾತು ಕೇಳ್ಯಾನೆ ವುಸಿನಗುನಕ್ಕಾನೆ
ಎಸಳುಮಲ್ಲಿಗೆ ಕೊಯ್ಸಾನೆ
ಎಸಳುಮಲ್ಲಿಗೆ ಕೊಯ್ಸಾನೆ ದ್ಯಾವರಣ್ಣ
ಸಿಸುವಿದ್ದರ ಮನೆಗೆ ಕಳಿವ್ಯಾನೆ

ಕಂಡುಗ ನೆಲಗಡಲೆ ಬಂಡಿಮ್ಯಾಲೆ ಸಿಗಳಿ
ತಂದಿರುವರ್ಯಾರೆ ವಸಗೀಯ
ತಂದಿರುವರ್ಯಾರೆ ವಸಗೀಯ ಸೀರ್ಯಾದ
ಬಿಂದಿಗೊನ್ನೀನ ಗೌಡಾರು

ನಾಗುಳ ನೆಲಗಡಲೆ ವೋರಿ ಮ್ಯಾಲೆ ಸಿಗಳಿ
ಮಾಡಿರುವರ್ಯಾರೆ ವಸಗೀಯ
ಮಾಡಿರುವರ್ಯಾರೆ ವಸಗೀಯ ಸೀರ್ಯಾದ
ಜೋಳಿಗೊನ್ನೀನ ಗೌಡಾರು

ಆನೆಮ್ಯಾಲೊಸಗೆ ಬಾಲಾನಕೈಯ್ಯಾಗೂವು
ರಾಯಸೀರ್ಯಾದ ಗೌಡಾರು
ರಾಯಸೀರ್ಯಾದ ಗೌಡಾರು ಮನೆವಸಗೆ
ಆನೆಯಮ್ಯಾಲೆ ಬರುತಾವೆ

ಎತ್ತಿನ ಮ್ಯಾಲೊಸಗೆ ಮಕ್ಕಳಕೈಯ್ಯಾಗೂವು
ಚಿಕ್ಕಾಸೀರ್ಯಾದ ದೊರೆಗಾಳ
ಚಿಕ್ಕಾಸೀರ್ಯಾದ ದೊರೆಗಾಳ ಮನೆವಸಗೆ
ಎತ್ತಿನಮ್ಯಾಲೆ ಬರುತಾವೆ

ಒಂದೊಂದನಿಯಾಗ ಸಂಜೆಗತ್ತಲಾಗೆ
ತಂದಿರುವರ್ಯಾರೆ ವಸಗೀಯ
ತಂದಿರುವರ್ಯಾರೆ ವಸಗೀಯ ತಿಪ್ಪಮ್ಮ ನಿನ್ನ
ತಂದೆ ಕಡಿಯಾಗಳ ಬಳಗಾವೆ

ಆಡ ಆನಿಯಾಗ ಮೂಡ ಕತ್ತಲಾಗ
ಮಾಡಿರುವಾರ್ಯಾರೆ ವಸಗೀಯ
ಮಾಡಿರುವಾರ್ಯಾರೆ ವಸಗೀಯ ಸಣ್ಣಮ್ಮ ನಿನ್ನ
ತಾಯಿ ಕಡೆಯ ಬಳಗಾವೆ

ಅರಿಸಿಣ ಅರಿಯೆಂದ ಬಟ್ಟಲಿಗೆ ತುಂಬೆಂದ
ಆರತಿಗೆ ನಾಲುವರನ ಕರಿಯೆಂದ
ಆರತಿಗೆ ನಾಲುವರನ ಕರಿಯೆಂದ ಈರಣ್ಣ
ರೆಂಬೆಗೆ ಮಾಡೆಂದ ವಸಗೀಯ

ಗಂದ ಅರಿಯೆಂದ ಗಂದಾದ ಬಟ್ಟಲಿಗೆ ತುಂಬೆಂದ
ಅಂದಾಕನಾಲ್ವರನ ಕರಿಯೆಂದ
ಅಂದಾಕನಾಲ್ವರನ ಕರಿಯೆಂದ ಈರಣ್ಣ
ರೆಂಬೆಗೆ ಮಾಡೆಂದ ವಸಗೀಯ

ಕುಟ್ಟೀದ ಎಳ್ಳು ಪುಟ್ಟೀಗೆ ತುಂಬಿಕೊಂಡು
ಅತ್ತಿಗೇರ ಮಕ್ಕಳ್ನ ವಡಗೊಂಡು
ಅತ್ತಿಗೇರ ಮಕ್ಕಳ್ನ ವಡಗೊಂಡು ಈರಣ್ಣಾನ
ನಿಸ್ತ್ರೆ ಮಾಡವಳೆ ವಸಗೀಯ

ಮಾಡೀದ ಎಳ್ಳು ಮರಕ ತುಂಬಿಕಂಡು
ನಾದಿನೇರಮಕ್ಕಳ್ನ ವಡಗೊಂಡು
ನಾದಿನೇರಮಕ್ಕಳ್ನ ವಡಗೊಂಡು ಈರಣ್ಣಾನ
ನಾರಿಮಾಡ್ಯಾಳೆ ವಸಗೀಯ

ಎಣ್ಣಿಕಳುವೆಂದಾರೆ ಕಮ್ಮೆಣ್ಣೆ ಕಳುವ್ಯಾರೆ
ವುಮ್ಮಳಗಾತಿ ಅವರತ್ತೆ
ವುಮ್ಮಳಗಾತಿ ಅವರತ್ತೆ ಇರಿಯತ್ತೆ
ಕಮ್ಮೆಣ್ಣೆ ಕಸ್ತೂರಿ ಕಳುವ್ಯಾಳೆ

ತುಪ್ಪ ಕಳುವೆಂದಾರೆ ಬಟ್ಟಿಣ್ಣೆ ಕಳುವ್ಯಾರೆ
ಎಚ್ಚಳಗಾತಿ ಅವರತ್ತೆ
ಎಚ್ಚಳಗಾತಿ ಅವರತ್ತೆ ಸಿರಿಯಮ್ಮ
ಬಟ್ಟಿಣ್ಣೆ ಕುಂಕುಮ ಕಳುವ್ಯಾಳೆ

ಗಂದ ಕಳುವೆಂದಾರೆ ಗಂದದೆಣ್ಣೆ ಕಳುವ್ಯಾರೆ
ಅಂದಗಾತಿ ಅವರ ಇರಿಯತ್ತೆ
ಅಂದಗಾತಿ ಅವರ ಇರಿಯತ್ತೆ ಸಿರಿಯಮ್ಮ
ಗಂದದೆಣ್ಣೆ ಕಸ್ತೂರಿ ಕಳುವ್ಯಾರೆ

ಅತ್ತು ನಾಡಿನಾಗ ಅವರಪ್ಪನ ಬಳಗಾವೈತೆ
ಅವರತ್ತೆಗೊಂದಾಳ ಕಳುವೀರಿ
ಅವರತ್ತೆಗೊಂದಾಳ ಕಳುವೀರಿ ಸೀರ್ಯಾದ
ಪಟ್ಟಣವ ತೆರಳಿ ಬರುತಾರೆ

ಪಟ್ಟಣವ ತೆರಳಿ ಮತ್ಯಾಕ ಬರುತಾರೆ
ಸೆಟ್ಟ್ಯೋರ ಮಗಳು ಮೈನೆರೆತು
ಸೆಟ್ಟ್ಯೋರ ಮಗಳು ಮೈನೆರೆತು ಅಂಬುದ ಕೇಳಿ
ಪಟ್ಟಣವ ತೆರಳಿ ಬರುತಾರೆ

ನಾಡಿನಾಗ ತಾಯಿ ಬಳಗವೈತೆ
ತಾಯಿಗೊಂದಾಳ ಕಳುವೀರಿ
ತಾಯಿಗೊಂದಾಳ ಕಳುವೀರಿ ಸೀರ್ಯಾದ
ರಾಣ್ಯಾವೇ ತೆರಳಿ ಬರುತಾವೆ?

ರಾಣ್ಯಾವೇ ತೆರಳಿ ತಾವ್ಯಾಕ ಬರುವಾರೆ
ರಾಯಾರ ಮಗಳು ಮೈನೆರೆತು
ರಾಯಾರ ಮಗಳು ಮೈನೆರೆತು ಅಂಬುದ ಕೇಳಿ
ರಾಣ್ಯಾವೆ ತೆರಳಿ ಬರುತಾವೆ?

ಕಟ್ಟೀಯ ಇಂದೆ ಸೆಕ್ಕುರಿಗೋಗೋನೆ
ಸೆಟ್ಟಿ ನಿನಮಗಳು ಮೈನೆರೆತು
ಸೆಟ್ಟಿ ನಿನಮಗಳು ಮೈನೆರೆತು ಸಿರಿಯಣ್ಣ
ಸೆಕ್ಕುರಿಯತಿದ್ದೂ ಪ್ರಜೆಗೆಲ್ಲ

ಏರೀಯ ಇಂದೆ ವೋಳಡಕೆಗೋಗೋನೆ
ಗೇನಿನನತಂಗಿ ಮೈನೆರೆತು
ಗೇನಿನನತಂಗಿ ಮೈನೆರೆತು ಈರಣ್ಣ
ವೋಳಡಕೆ ತಿದ್ದೂ ಪ್ರಜೆಗೆಲ್ಲ

ಅಂಗಡಿಯಾಗಿರುವೋನೆ ತಂಗಿ ಮೈನೆರೆತಾರೆ
ಎಂಬತ್ತು ಸೇರೀನ ಕೊಬರೀಯ
ಎಂಬತ್ತು ಸೇರೀನ ಕೊಬರೀಯ ತೆಂಗಿನಕಾಯಿ
ತಂಗೀಗೀರಣ್ಣ ಕಳುವ್ಯಾನೆ

ಮಾಳಿಗ್ಯಾಗಿರುವೋನೆ ತಂಗಿ ಮೈನೆರೆತಾರೆ
ನಲವತ್ತು ಸೇರೀನ ಕೊಬರೀಯ
ನಲವತ್ತು ಸೇರೀನ ಕೊಬರೀಯ ಅಚ್ಚಿನಬೆಲ್ಲ
ಮಗಳೀಗೆ ಅವರಣ್ಣ ಕಳುವ್ಯಾನೆ

ಒಂದಂಗಡಿ ಮಲ್ಲಿಗೆ ಒಂದಂಗಡಿ ಕೇದೀಗೆ
ಮುಂದೇಳು ಅಂಗಡಿ ಮುಡಿದಂಡೆ
ಮುಂದೇಳು ಅಂಗಡಿ ಮುಡಿದಂಡೆ ಬೆಲೆಮಾಡೋನು
ರೆಂಬೆ ತಿಪ್ಪಯ್ನ ಇರಿಯಣ್ಣ

ಆಯಂಗಡಿ ಮಲ್ಲಿಗೆ ಈಯಂಗಡಿ ಕೇದೀಗೆ
ಮ್ಯಾಲೇಳು ಅಂಗಡಿಮುಡಿದಂಡೆ
ಮ್ಯಾಲೇಳು ಅಂಗಡಿಮುಡಿದಂಡೆ ಬೆಲೆಮಾಡೋನು
ನಾರಿ ಸಣ್ಣಮ್ಮ ಸಿರಿಯಣ್ಣ

ಎಸರಿಗೆ ದೊಡ್ಡೋರು ಸೊಸೆಯಮೈನೆರೆತಾರು
ರಸ್ತಾಳಿ ಕಬ್ಬು ಸಿಗಳೀಯ
ರಸ್ತಾಳಿ ಕಬ್ಬು ಸಿಗಳೀಯ ತಂಬಿಟದುಂಡೆ
ಎಸ್ತಾಡೆ ಪ್ಯಾಟೆ ವಳಗೆಲ್ಲ

ನಾಡೀಗೆ ದೊಡ್ಡೋರ ಮಗಳು ಮೈನೆರೆತಾರೆ
ಬಾಳೀಯ ಅಣ್ಣುಸಿಗಳೀಯ
ಬಾಳೀಯ ಅಣ್ಣುಸಿಗಳೀಯ ತಂಬಿಟದುಂಡೆ
ಈಡಾಡ್ಯಾರೆ ಪ್ಯಾಟಿವಳಗೆಲ್ಲ

ಸಿಬ್ಲಿಲೂವ ತನ್ನಿ ಇದ್ದ ಬಂಗಾರ ತನ್ನಿ
ಎದ್ದೆ ಬನ್ನಿಯವರ ಮನೆತಂಕ
ಎದ್ದೆ ಬನ್ನಿಯವರ ಮನೆತಂಕ ಸಿರಿಯಣ್ಣಾನ
ಬದ್ರೆಗೆ ವೂವ ಮುಡಿಸಾನೆ

ಎಡೆಗೆಲೂವ ತನ್ನಿ ವಡವೆ ಬಂಗಾರತನ್ನಿ
ನಡದೇ ಬನ್ನಿ ಅವರ ಮನೆತಂಕ
ನಡದೇ ಬನ್ನಿ ಅವರ ಮನೆತಂಕ ಸಿರಿಯಣ್ಣಾನ
ಬದ್ರೆಗೆ ವೂವ ಮುಡಿಸಾನೆ

ಎಡೆಗೆಕಲೂವ ತನ್ನಿ ವಡವೆ ಬಂಗಾರತನ್ನಿ
ನಡೆದೇ ಬನ್ನಿ ಅವರ ಮನೆತಂಕ
ನಡೆದೇ ಬನ್ನಿ ಅವರ ಮನೆತಂಕ ಈರಣ್ಣಾನ
ಮಡದೀಗೆ ವೂವು ಮುಡಿಸಾನ

ವಾಲೆ ವಳವೀಗೆ ಸಿರೀಯ ತಿಳಿವೀಗೆ
ಜ್ಯಾಣ ಸಿರಿಯಣ್ಣನ ಡವಲೀಗೆ
ಜ್ಯಾಣ ಸಿರಿಯಣ್ಣನ ಡವಲೀಗೆ ಈರಣ್ಣ
ಆನೆಯಮ್ಯಾಲೊಸಗೆ ಕಳಿವ್ಯಾನೆ

ಕಪ್ಪಿನೊಳಗೆ ಕುಪ್ಪಸದ ತಿಳಿವೀಗೆ
ಸೆಟ್ಟಿದ್ಯಾವರಣ್ಣನ ಡೌಲೀಗೆ
ಸೆಟ್ಟಿದ್ಯಾವರಣ್ಣನ ಡೌಲೀಗೆ ಈರಣ್ಣ
ಎತ್ತೀನ ಮ್ಯಾಲೊಸಗೆ ಕಳಿವ್ಯಾರೆ

ಕವಳಿ ವೂವೀನ ಕಳೆಯಾವ ನೋಡೀರಿ
ಅಗರೀನ ಪಾಗೀನ ಗೌಡಾರು
ಅಗರೀನ ಪಾಗೀನ ಗೌಡಾರು ಸಾಮನೋರು
ಇವನಂದೊಸಗೆ ಕಳಿವ್ಯಾರೆ

ನೆಗ್ಗುಲಿವೂವ ಮೊಗ್ಗುಗಳ ನೋಡೀರಿ
ಉದ್ದನ ಪಾಗೀನ ಗೌಡಾರು
ಉದ್ದನ ಪಾಗೀನ ಗೌಡಾರು ಸಾಮನೊರು
ಉದ್ದಂಡೆದೊಸಗೆ ಕಳಿವ್ಯಾರೆ

ಆಲುಬೋನವನುಂಡಿದ್ದಾಳೆ ರಾತ್ರಿ ಸಾಲ್ಯವನುಟ್ಟಿದ್ದಾಳೆ
ದೇವ ಪಿಟಕನೆಂಬ ಗೊಂಬೆ
ದೇವ ಪಿಟಕನೆಂಬ ಗೊಂಬೆ ಕೈಲಿಡಕಂಡು
ದೇವಿ ತಾ ಕುಳಿತವಳೆ

ಮೊಸರು ಬೋನವನುಂಡಿದ್ದಾಳೆ ರಾತ್ರಿದಸಲೀಯ
ನುಟ್ಟಿದ್ದಾಳೆ ಅಸುರುಪಿಟಕನೆಂಬ
ನುಟ್ಟುದ್ದಾಳೆ ಅಸುರುಪಿಟಕನೆಂಬ ಗೊಂಬೆನಿಡಕಂಡು
ಕುಸಲೆ ತಾ ಕುಳಿತಿದ್ದಾಳು

ಮಂಗಳವಾರದ ದಿನ ನಮಗೆ ಮುಮದೆ ಯ್ಯಾಜ್ಯಾವುಂಟು
ರೆಂಬೆ ಸೂಬದ್ರಮ್ಮ ಮೈನೆರೆತು
ರೆಂಬೆ ಸೂಬದ್ರಮ್ಮ ಮೈನೆರೆತು ಒಸಗೇಲಿ
ಬಂದುಗಳೇ ತೆರಳಬೇಕು

ಸುಕ್ರವಾರದಂದು ಅಪ್ಪನಮಗೆ ಯ್ಯಾಜ್ಯಾವುಂಟು
ನಿಸ್ತ್ರೆ ಸೂಬದ್ರಮ್ಮ ಮೈನೆರೆತು
ನಿಸ್ತ್ರೆ ಸೂಬದ್ರಮ್ಮ ಮೈನೆರೆತು ವಸಗೀಯ
ಪಟ್ಟಣವೇ ತೆರಳಬೇಕು

ಅಳ್ಳೆವುಂಡೆ ಎಳ್ಳುಂಡು ಬಳ್ಳಿಮಲ್ಲಿಗೆ ದಂಡೆ
ನಲ್ಲೆ ಮವಲಕ್ಷ್ಮೀಗೆ ಮಲ್ಲಿಗೆಯ
ನಲ್ಲೆ ಮವಲಕ್ಷ್ಮೀಗೆ ಮಲ್ಲಿಗೆಯ ಮುಡಿಸೀರೆ
ಗಲ್ಲುಮಲ್ಲೆಂಬಿನ ಸೀರೆ ಉಡಿಸೀರೆ

ಅರಿಸೀನ ನಸಿಗರೆದು ಅರಿದೇರೈವರು ನೆರೆತು
ಕೆಂಚೆ ಮವಲಕ್ಷ್ಮೀದೇವೀಗೆ ಸಂಪಿಗೆ ಮುಡಿಸೀರೆ

ಸಂಪೀಗೆ ನಸಿಗರೆದು ಕೆಂಚೇರೈವರು ನೆರೆತು
ಕೆಂಚೆ ಮವಲಕ್ಷ್ಮೀಗೆ ಸಂಪೀಗೆ ಮುಡಿಸೀರೆ

ಗಂದಾನೆ ನಸಿಗರೆದು ದೇವೀಗೆ ಗಂದಾನಚ್ಚೀರೆ
ರೆಂಬೇ ಮವಲಕ್ಷ್ಮೀಗೆ ಗಂದಾನಚ್ಚೀರೆ

ಕುಂಕುಮನಸಿಗರೆದು ಕೆಂಚೇರೈವರು ನೆರೆತು
ಕೆಂಚೆ ಮವಲಕ್ಷ್ಮೀದೇವಿಗೆ ಕುಂಕುಮಬಟ್ಟಿಡಿರೆ