ಈಗಲೂ ಚಿತ್ರದುರ್ಗದ ಒಳಪ್ರವೇಶದ ಕಾಡುಗೊಲ್ಲ ಹಟ್ಟಿಗಳಲ್ಲಿ ಸೂತಕ ಸಂಬಂಧದ ಆಚರಣೆಗಳನ್ನು ಕಟ್ಟುನಿಟ್ಟಾಗಿಯೇ ಆಚರಿಸಿಕೊಂಡು ಬರಲಾಗುತ್ತಿದೆ. ಕನ್ಯಾವಸ್ಥೆಗೆ ಬಂದ ಹೆಣ್ಣುಮಗಳನ್ನು ಹಟ್ಟಿಯಾಚೆ ಹನ್ನೊಂದು ದಿನವರಿಸಿ ಒಳಗೆ ಸೇರಿಸಿಕೊಳ್ಳುವಾಗ ಈ ಗೀತೆ ಹಾಡಲ್ಪಡುತ್ತದೆ. ಬುಡಕಟ್ಟು ಗುಂಪಿನ ಹೆಂಗಸರು ಹಾಡುವ ಈ ಗೀತೆಯಲ್ಲಿ ಜ್ಯೋತಿಷ್ಯವಿಚಾರವೂ ಬರುತ್ತದೆ. ಇಂಥ ಶಾಸ್ತ್ರ ಸಂಗತಿಗಳಿಂದ ಜನಪದ ಅಥವಾ ಬುಡಕಟ್ಟು ಸಮೂಹದವರು ಪ್ರಜ್ಞಾಪೂರ್ವಕವಾಗಿಯೇ ದೂರವಿದ್ದವರು ಎಂದು ಹೇಳಲು ಬರುವುದಿಲ್ಲ. ಪುರಾಣಗಳಲ್ಲಿ ಮತ್ತು ಶಿಷ್ಟ ಜಗತ್ತಿನಲ್ಲಿ ಪಂಚಭೂತಗಳು ಹೇಗೆ ಪ್ರಚಲಿತವೋ ಹಾಗೆ ಜನಪದರಿಗೂ ಬುಡಕಟ್ಟು ವರ್ಗದವರಿಗೂ ಪರಮಪವಿತ್ರವೆನಿಸಿದ್ದವು. ಜಗತ್ತೆಲ್ಲವೂ ಸೂರ್ಯ ಚಂದ್ರರನ್ನು ಆರಾಧಿಸಿದಂತೆ ಬುಡಕಟ್ಟು ಸಮೂಹವೂ ಸೂರ್ಯ ಚಂದ್ರನ್ನೇ ಕುಲದೇವತೆಗಳನ್ನಾಗಿ ಸ್ವೀಕರಿಸಿರುತ್ತಾರೆ. ಹೀಗಾಗಿ ಶಿಷ್ಟವರ್ಗದ ಅನೇಕ ಸಂಗತಿಗಳು ಒಪ್ಪಿತವಾಗಿಯೇ ಜನಪದ ಸಮೂಹವನ್ನು ಪ್ರವೇಶಿಸಿದೆ.

ಸೋಬಾನೆ ಪದಗಳು ಜನಪದರ ಮತ್ತು ಬುಡಕಟ್ಟಿನವರ ನಡುವೆ ಹಾಟಲ್ಪಟ್ಟರೂ, ಅವರ ವಿವಾಹ ಸಂಪ್ರದಾಯದಲ್ಲಿ ಪುರೋಹಿತರ ಆಗಮನವಿಲ್ಲದಿದ್ದರೂ ಗೀತೆಗಳಲ್ಲಿ ಪ್ರಸ್ತಾಪವಿರುತ್ತದೆ. ಅಂತೆಯೇ ಬುಡಕಟ್ಟು ಸಮೂಹದಲ್ಲಿ ಹೆಣ್ಣುಮಗಳು ಮೈನೆರೆದು ಹತ್ತುದಿನ ಹಟ್ಟಿಯ ಹೊರಗೆ ಇದ್ದು ಸೂತಕ ಕಳೆದುಕೊಂಡು ಒಳಗೆ ಬರುವಾಗ ಹಾಡುವ ಗೀತೆಯಲ್ಲಿ ಮೈನೆರೆದ ಘಳಿಗೆಯನ್ನು ಕುರಿತು ಪಂಚಾಂಗ ಕೇಳಬೇಕು ಎಂತಲೂ ಹಾಡುತ್ತಾರೆ. ವಾಸ್ತವವಾಗಿ ಈ ಬಗೆಯ ತಿಳಿವಳಿಕೆ ಬುಡಕಟ್ಟಿನವರಿಗಿರುವುದಿಲ್ಲ. ಊರಿಂದಾಚೆಯೇ ವಾಸಿಸುತ್ತ ಊರೊಳಗೆ ಇರುವವರನ್ನು ಮೈಲಿಗೆಯವರೆಂತಲೇ ಭಾವಿಸುವಾಗ ಬುಡಕಟ್ಟಿನವರು ಪಂಚಾಂಗ ಅನುಸರಿಸಿ ಬದುಕಿರುವುದು ಕಡಿಮೆ. ಆದರೆ ಅನೇಕ ಪುರಾಣ ಸಂಗತಿಗಳು, ಶಿಷ್ಟ ಜಗತ್ತಿನ ಆಚರಣೆಗಳು ಗೀತೆಗಳ ರೂಪದಲ್ಲಿ ಒಮ್ಮೊಮ್ಮೆ ಕ್ರಿಯೆಯಲ್ಲಿಯೂ ಪ್ರವೇಶಿಸಿಬಿಟ್ಟಿರುತ್ತವೆ. ಇದನ್ನೆಲ್ಲ ಜನಪದ ಸಮೂಹ ಯಾವ ವಿರೋಧವೂ ಇಲ್ಲದೆ ಅನುಸರಣೆಗೂ ತಂದುಕೊಂಡಿರುತ್ತಾರೆ. ಅಂತೆಯೇ ಸಿರಿಯಜ್ಜಿಯ ಹಟ್ಟಿಯಲ್ಲಿ ಇರುವ ಬುಡಕಟ್ಟು ದೇವತೆಗಳ ಮುಂದೆ ಪುರಂದರ, ಕನಕರ ಕೀರ್ತನೆಗಳನ್ನೂ ಹಾಡುತ್ತಾರೆ. ಅವರ ಕೋಲಾಟಗಳಲ್ಲಿ ಶೃಂಗಾರ, ಭಕ್ತಿ ಮತ್ತು ಆಧುನಿಕ ವಸ್ತು ವಿಶೇಷದ ಹಾಡುಗಳೂ ಪ್ರವೇಶಿಸಿರುತ್ತವೆ. ಈಚೆಗೆ ಬುಡಕಟ್ಟು ಬದುಕು ತೀವ್ರಗತಿಯಲ್ಲಿ ಬದಲಾಗುತ್ತಿದೆ. ಅವರ ಅನೇಕ ಆಚರಣೆಗಳು ಸಹ ಅಂಧಶ್ರದ್ಧೆಯ ಹಿನ್ನೆಲೆಯಲ್ಲಿ ಹುಟ್ಟಿಕೊಂಡವು ಎಂತಲೇ ಕೈಬಿಡಲಾಗುತ್ತಿದೆ.

 

ಅಣ್ಣೊಡೆದು ಮ್ಯಾಲೆ ಸಿಡಿದಾವೆ

ಸುಕ್ರವಾರದ ದಿನ ಪುತ್ರಮ್ಮ ಮೈನೆರೆತಾರೆ
ಅವರಷ್ಟ ಆರೋರನ ಬೆಸಗಂಡ
ಅವರಷ್ಟ ಆರೋರನ ಬೆಸಗಂಡ ಕೇಳ್ಯಾನೆ
ಪುತ್ರಮ್ಮ ನೆರೆತ ಗಳಿಗೀಯ

ಪುತ್ರಮ್ಮ ನೆರೆತ ಗಳಿಗೀಯ ಕೇಳಿದರೆ
ವುಟ್ಟೀದ ಮನೆಗೆ ಜಯಜಯ

ಮಂಗಳವಾರದಾ ದಿನ ಕಂದ ಮೈ ನೆರೆತಾರೆ
ತಂದೆ ಆರೋರನ ಬೆಸಗಂಡು
ತಂದೆ ಆರೋರನ ಬೆಸಗಂಡು ಕೇಳ್ಯಾನೆ
ಕಂದ ಮೈನೆರೆತ ಗಳಿಗೀಯ

ಕಂದ ಮೈನೆರೆತ ಗಳಿಗೀಯ ಕೇಳಿದರೆ
ತಂದೋರ ಮನೆಗೆ ಜಯಜಯ

ಬಾಳೀಯ ಕಂಬ ಬಾಳೀಯ ಬೋದೀಗೆ
ನಾಗೋಜ ಕಡೆದ ಮಲುಕಿನ
ನಾಗೋಜ ಕಡೆದ ಮಲುಕಿನ ಮಾಳಿಗ್ಯಾಗೆ
ನಾರಿತಿಪ್ಪಯ್ಯಮ್ಮ ಮೈನೆರೆತಾಳು

ನಿಂಬೀಯ ಕಂಬ ನಿಂಬೀಯ ಬೋದೀಗೆ
ಲಿಂಗೋಜಿ ಕಡೆದ ಮಲುಕೀನ
ಲಿಂಗೋಜಿ ಕಡೆದ ಮಲುಕೀನ ಮಾಳಿಗ್ಯಾಗೆ
ರೆಂಬೆ ತಿಪ್ಪಯ್ಯ ಮೈನೆರೆತಾಳು

ಆಲುಕಾಸ್ಯಾಳೆ ಆಲುನೆಲುವಿಗಿಟ್ಟಾಳೆ
ಓದಿಬಂದಣ್ಣಾಗೆ ಉಣಲಿಟ್ಟು
ಓದಿಬಂದಣ್ಣಾಗೆ ಉಣಲಿಟ್ಟು ತಿಪ್ಪಮ್ಮ
ವಾರುಣವಂತ್ಯಾಗಿ ವರಗವಳೆ

ತುಪ್ಪ ಕಾಸ್ಯಾಳೆ ತುಪ್ಪ ನೆಲುವಿಗಿಟ್ಟಾಳೆ
ಬಿತ್ತಿ ಬಂದಣ್ಣಾಗ ಉಣಲಿಟ್ಟು
ಬಿತ್ತಿ ಬಂದಣ್ಣಾಗ ಉಣಲಿಟ್ಟು ತಿಪ್ಪಮ್ಮ
ಸಕ್ಕಡವಂತ್ಯಾಗಿ ವರಗವಳೆ

ಕೈಲಿ ಅಗ್ಗ ಕೈಲಿ ತಂಬೀಗೆ
ಕಾತೆಯೆಮ್ಮೆಗಳ ಕರವೂತ
ಕಾತೆಯೆಮ್ಮೆಗಳ ಕರವೂತ ಕಂಡಾಳೆ
ರೇಸಿಮೆ ಸೀರ್ಯಾಗಳ ನಿದನಾವ

ಅಂಗೈಲಿ ಅಗ್ಗ ಮುಂಗೈಲಿ ತಂಬೀಗೆ
ರೆಂಬೆ ಎಮ್ಮೆಗಳ ಕರವೂತ
ರೆಂಬೆ ಎಮ್ಮೆಗಳ ಕರವೂತ ಕಂಡ್ಯಾಳೆ
ಗಂಜಿ ಸೀರ್ಯಾಗಳ ನಿದನಾವ

ಪಟ್ಟೀದ ಸೀರೆ ಬೆಟ್ಟಾಕಿ ಉಡುವಾಗ
ಅವರೆತ್ತಮ್ಮ ಕಂಡಾಳೆ ನಿದನಾವ
ಅವರೆತ್ತಮ್ಮ ಕಂಡಾಳೆ ನಿದನಾವ ಮಗಳೆ ನೀನು
ಪಟ್ಟಿಸಾಳಿಗಳ ಇಳಿಯಮ್ಮ

ನಿಮ್ಮಾಣೆಯಮ್ಮ ನಿಮ್ಮ ದೇವರಾಣೆ
ಅಣ್ಣು ಇಡಿದಿದ್ದೆ ತನಿಯಣ್ಣು
ಅಣ್ಣು ಇಡಿದಿದ್ದೆ ತನಿಯಣ್ಣು ದಾಳಿಂಬದ
ಅಣ್ಣೊಡೆದೆ ಮ್ಯಾಲೆ ಸಿಡಿದಾವೆ

ಸಾಲ್ಯಾದ ಸೀರೆ ಗೇಣಾಕಿ ಉಡುವಾಗ
ತಾಯಮ್ಮ ಕಂಡಾಳೆ ನಿದುನಾವ
ತಾಯಮ್ಮ ಕಂಡಾಳೆ ನಿದುನಾವ ಮಗಳೆ ನೀ
ಸಾಮಸಾಲೆಯಿಂದ ಕೆಳಗಿಳಿಯೆ

ನಿಮ್ಮಾಣೆಯಮ್ಮ ನಿಮ್ಮ ಗುರುವಿನಾಣೆ
ಅಣ್ಣು ಇಡಿದಿದ್ದೆ ತನಿಯಣ್ಣು
ಅಣ್ಣು ಇಡಿದಿದ್ದೆ ತನಿಯಣ್ಣು ದಾಳಿಂಬದ
ಅಣ್ಣೊಡೆದು ಮ್ಯಾಲೆಸಿಡಿದಾವೆ

ಪಟ್ಟೇದಸೀರೆ ಕೆಟ್ಟೋವಂಬುದಕೇಳಿ
ಸುತ್ತಲಗೆಳತೇರು ಕೈವೊಯ್ದು
ಸುತ್ತಲಗೆಳತೇರು ಕೈವೊಯ್ದು ತಿಪ್ಪಮ್ಮನಿಂಗೆ
ಕುಟ್ಟೋವಂದರು ಎಳ್ಳುಸಿಗಳೀಯ

ಸಾಲ್ಯೇದಸೀರೆ ಆದಾವಂಬುದ ಕೇಳಿ
ದೂರದ ಗೆಳತೇರು ಕೈವೊಯ್ದು
ದೂರದ ಗೆಳತೇರು ಕೈವೊಯ್ದು ತಿಮಪ್ಪನಿಂಗೆ
ಮಾಡೇವಂದರು ಎಳ್ಳು ಸಿಗಳೀಯ

ವಾಲೀಯ ಕಿವಿನಾರಿಯಾದ್ದ ಕೇಳಿ ಆಗಸೋತಿ
ನಾಳಿನಮ್ಮನಿಗೆ ಮಡಿಬೇಕು
ನಾಳಿನಮ್ಮನಿಗೆ ಮಡಿಬೇಕು ನಮ್ಮನಿಯ
ಬಾಲಮ್ಮ ನೆರೆತುವೊರಗವಳೆ

ಕಪ್ಪೀನ ಕಿವಿಯ ನಿಸ್ತ್ರೆಯಾದ್ದ ಕೇಳಿ ಅಗಸೋತಿ
ನಿತ್ಯನಮ್ಮನಿಗೆ ಮಡಿಬೇಕು
ನಿತ್ಯನಮ್ಮನಿಗೆ ಮಡಿಬೇಕು ನಮ್ಮನಿಯ
ಪುತ್ರಮ್ಮ ನೆರೆತುವೊರಗವಳೆ

ಪಟ್ಟೀದ ಸೀರೆ ಕುತ್ತೂವನಿ ಕುಪ್ಪಸ
ಮುಚ್ಚಿಕಂಡೋಗು ಅಗಸೋತಿ
ಮುಚ್ಚಿಕಂಡೋಗು ಅಗಸೋತಿ ನಮ್ಮನಿಯ
ಪುತ್ರಮ್ಮ ನೆರೆತಂತ ಮೈಲೀಗೆ

ಸಾಲ್ಯಾದಸೀರೆ ನೀಲಿಯ ಕುಪ್ಪಸ
ಮಾಜಿ ಕೊಂಡೋಗು ಮಡಿವಾಳ
ಮಾಜಿ ಕೊಂಡೋಗು ಮಡಿವಾಳ ನಮ್ಮನಿಯ
ಬಾಲೆನೆರೆತಂತ ಮೈಲೀಗೆ

ಪುತ್ತಮ್ಮ ನೆರೆತು ಅಟ್ಟಿ ಮುಂದೈದಾಳೆ
ಸುತ್ತಲೊಡ್ಡಿದುವೆ ಮಳಿಮೋಡ
ಸುತ್ತಲೊಡ್ಡಿದುವೆ ಮಳಿಮೋಡ ಅವರಪ್ಪಗಳು
ಮುತ್ತೀನ ಗೂಡಾರ ವೊಯ್ಸಾರೆ

ನಾರಿಮೈನೆರೆತು ವೋಣಿ ಮುಂದೈದಾಳೆ
ದೂರಾಲೊಡ್ಯಾವೆ ಮಳಿಮೋಡ
ದೂರಾಲೊಡ್ಯಾವೆ ಮಳಿಮೋಡ ಅವರಣ್ಣಗಳು
ವೂವೀನ ಗೂಡಾರ ವೊಯ್ಸಾರೆ

ಅಲ್ಲಿ ತಿರುಗಿದರಿಲ್ಲ ಇಲ್ಲಿ ತಿರುಗಿದರಿಲ್ಲ
ಕಲ್ಲಾಗ ಒಂದು ಕರಿಬೇವು
ಕಲ್ಲಾಗ ಒಂದು ಕರಿಬೇವು ಸಸಿವುಟ್ಟಿ
ನಲ್ಲೆ ತಿಪ್ಪಮ್ಮಗ ನೆರಳಾಗಿ

ಅತ್ತ ತಿರುಗಿದರಿಲ್ಲ ಇತ್ತ ತಿರುಗಿದರಿಲ್ಲ
ಕಟ್ಟ್ಯಾಗ ಒಂದು ಕರಿಬೇವು
ಕಟ್ಟ್ಯಾಗ ಒಂದು ಕರಿಬೇವು ಸಸಿವುಟ್ಟಿ
ನಿಸ್ತ್ರೆ ತಿಪ್ಪವ್ವಗ ನೆರಳಾಗಿ

ಅತ್ತುಲಾರದ ಮರವ ಸತ್ತಿದೊನ್ಯಾರಮ್ಮ
ಅವರತ್ತೇಯ ಮಗನು ಯತಿರಾಜ
ಅವರತ್ತೇಯ ಮಗನು ಯತಿರಾಜ ಕ್ಯಾತಣ್ಣ
ಅತ್ತಿ ಕಡಿದಾನೆ ಗೊನೆನೂರು

ಏರಲಾರದ ಮರವ ಏರಿದೋನ್ಯಾರಮ್ಮ
ಮಾವಾನ ಮಗನೆ ಯತಿರಾಜ
ಮಾವಾನ ಮಗನೆ ಯತಿರಾಜ ಇರಣ್ಣ
ಏರಿ ಕಡಿದಾನೆ ಗೊನೆನೂರು

ಅಚ್ಚನಸುರು ಸೊಪ್ಪು ನಿಚ್ಚಬೇವಿನ ಸೊಪ್ಪು
ಅವರತ್ತೇಯ ಮಗನೆ
ಅವರತ್ತೇಯ ಮಗನೆ ಕಡಿತಂದ
ಬೇವಿನ ಸೊಪ್ಪ ಉಪ್ಪರಿಗೆ ಮುಂದೆ ನೆರಳಾಗಿ

ಆಗಲಸುರುಸೊಪ್ಪ ಮ್ಯಾಲೆ ಬೇವಿನ ಸೊಪ್ಪ
ಮಾವಾನೆ ಮಗನೆ ಕಡಿತಂದು
ಮಾವಾನೆ ಮಗನೆ ಕಡಿತಂದು ಬೇವಿನಸೊಪ್ಪು
ಮ್ಯಾಲುಪ್ಪರಿಗೆ ಮುಂದೆ ನೆರಳಾಗಿ

ರೇಂಬೇಯಗುಡುಲೀಗೆ ನಿಂಬೀಯ ತ್ವಾರಣ
ಬಂದು ನೋಡೋರಿಗೆ ದಿಗಿಲಂಬ
ಬಂದು ನೋಡೋರಿಗೆ ದಿಗಿಲಂಬ ಗುಡಿಲೀಗೆ
ರೆಂಬೆಯೋದಳು ಸಾಗಿ ನವುಲಾಗಿ

ನಾರೀಯ ಗುಡಿಗೆ ಬಾಳೀಯ ತ್ವಾರಣ
ವೋಗಿ ನೋಡೋರಿಗೆ ದಿಗಿಲೆಂಬ
ವೋಗಿ ನೋಡೋರಿಗೆ ದಿಗಿಲೆಂಬ ಗುಡಿಲೀಗೆ
ನಾರಿವೋದಳು ಸಾಗಿ ನವುಲಾಗಿ

ಪುತ್ರುಂಬಕಲ್ಲು ಮತ್ಯಾರು ಕಟಿಸ್ಯಾರು
ಅವರಪ್ಪ ಮಲೆನಾಡ ಗದಸೆಟ್ಟಿ
ಅವರಪ್ಪ ಮಲೆನಾಡ ಗದಸೆಟ್ಟಿ ದ್ಯಾವರಣ್ಣ
ಪುತ್ರುಂಬ ಕಲ್ಲು ಕಡಿಸ್ಯಾನೆ

ನಾರಿಯುಂಬ ಕಲ್ಲು ಮ್ಯಾಲ್ಯಾರು ಕಡಿಸ್ಯಾರು
ಮಾವ ಮಲೆನಾಡ ಗದಸೆಟ್ಟಿ
ಮಾವ ಮಲೆನಾಡ ಗದಸೆಟ್ಟಿ ಈರಣ್ಣ
ನಾರಿಯುಂಬ ಕಲ್ಲು ಕಡಿಸ್ಯಾನೆ

ಇತ್ತ ನಾಡರಿಸಿಣವು ವಪ್ಪವಿಲ್ಲವೆಂದು
ಗುತ್ತಿ ಮಲೆನಾಡರಿಸಿಣವು
ಗುತ್ತಿ ಮಲೆನಾಡರಿಸಿಣ ಅವರಪ್ಪ
ಎತ್ತುಗಳ ಕೊಟ್ಟು ತರಿಸ್ಯಾನೆ

ಎತ್ತುಗಳ ಕೊಟ್ಟು ತರಿಸೀದಂತ ಅರಿಸಿಣವ
ಜೊತ್ತಿಗಲ್ಲಿಗಾಕಿ ಅರೆಸ್ಯಾರೆ
ಜೊತ್ತಿಗಲ್ಲಿಗಾಕಿ ಅರೆಸ್ಯಾರೆ ಅರೆದಂತ
ಅರಿಸಿಣವ ನಿಸ್ತ್ರೆ ಮಾಳೀಗೆ ದರಿಸ್ಯಾರೆ

ನಾಡೀನರಿಸಿಣ ಆಯವಿಲ್ಲವಂದು
ಗ್ವಾವೆ ಮಲೆನಾಡಿನರಿಸಿಣ
ಗ್ವಾವೆ ಮಲೆನಾಡಿನರಿಸಿಣ ಅವರಪ್ಪ
ಅವುಗಳ ಕೊಟ್ಟು ತರಿಸ್ಯಾನೆ

ಅವುಗಳ ಕೊಟ್ಟು ತರಿಸಿದಂತ ಅರಿಸಿಣವ
ಜೋಡಿಗಲ್ಲಿಗಾಕಿ ಅರಿಸ್ಯಾರೆ
ಜೋಡಿಗಲ್ಲಿಗಾಕಿ ಅರಿಸ್ಯಾರೆ ಅರೆದಂತ
ಅರಿಸಿಣವ ನಾರಿ ತೋಳಿನಾಕಿ ವರಿಸ್ಯಾರೆ

ಮೈನೆರೆತಮ್ಮಾನ ಮೈಯ್ಯೆಲ್ಲಾ ಅರಿಸಿಣ
ಕೆನ್ನೆಲಾಡ್ಯಾವೆ ಸರಮುತ್ತು
ಕೆನ್ನೆಲಾಡ್ಯಾವೆ ಸರಮುತ್ತು ತಿಪ್ಪಮ್ಮ
ನಿನ್ನಕೈಯ್ಯಾಗ ಬಾಡ್ಯಾವೆ ಬಿಳಿಯೆಲೆ

ದೊಡ್ಡೋಳು ಆದೋಳ ವುಟ್ಟಿಲ್ಲ ಅರಿಸಿಣ
ವುಬ್ಬಿಲಾಡ್ಯಾವೆ ಸರಮುತ್ತು
ವುಬ್ಬಿಲಾಡ್ಯಾವೆ ಸರಮುತ್ತು ತಿಪ್ಪಮ್ಮ ನಿನ್ನ
ಇಡಿಯಾಗ ಬಾಡ್ಯಾವೆ ಬಿಳಿಯೆಲೆ

ಕಲ್ಡೀಯ ಇಂದೆ ಅತ್ತು ಅಸುರು ಗಿಡ
ನಿಸ್ತ್ರೇರುಬಾಗಿ ಬೆದಕ್ಯಾರೆ
ನಿಸ್ತ್ರೇರುಬಾಗಿ ಬೆದಕ್ಯಾರೆ ದ್ಯಾವರಣ್ಣಾನ ಅಪ್ಪ
ಪುತ್ರಮ್ಮಗಿಡಕಸುತ್ತಿ ಬರುತಾಳೆ

ಏರೀಯ ಇಂದೆ ಆರು ಅಸುರು ಗಿಡ
ನಾರೇರು ಬಾಗಿ ಬೆದಕ್ಯಾರೆ
ನಾರೇರು ಬಾಗಿ ಬೆದಕ್ಯಾರೆ ದ್ಯಾವರಣ್ಣಾನ
ಬಾಲೆ ಗಿಡಕಸುತ್ತಿ ಬರುತಾಳೆ

ಅಸುರುಗಿಡಕೋಗಿ ಅಸ್ತಾಳೆ ತಿಪ್ಪಮ್ಮ
ಅರಿಸಿಣ ಎಳಿಯೆ ಐನೂರು
ಅರಿಸಿಣ ಎಳಿಯೆ ಐನೂರು ಇಡಕಂಡು
ಅಸುರುಗಿಡ ಸುತ್ತಿ ಬರುತಾಳೆ

ಸೊಪ್ಪೀನ ಗಿಡಕೋಗಿ ಸಿಕ್ಯಾಳೆ ಸಣ್ಣಮ್ಮ
ಅತ್ತೀಯ ಎಳೆಯೆ ಐನೂರು
ಅತ್ತೀಯ ಎಳೆಯೆ ಐನೂರು ಇಡಕಂಡು
ಅಸುರುಗಿಡ ದಾಟಿ ಬರುತಾಳೆ

ದೊರೆಗಳು ಕಳಿವ್ಯಾರೆ ಕಿರಿಯ ಕಾಗಿನಸೀರೆ
ಅರಿನೀರಾಗಾಕಿದರೆ ನೆನೆಯಾವು
ಅರಿನೀರಾಗಾಕಿದರೆ ನೆನೆಯಾವು ನೆನೆಯದಂತ
ಬಣ್ಣದರಿವೆಗಳು ತನಸೊಸೆಗೆ ಕಳಿವ್ಯಾರೆ

ಸೆಟ್ಯಾರು ಕಳಿವ್ಯಾರೆ ಗಟ್ಟಿಕಾಗಿನ ಸೀರೆ
ಕಟ್ಟಿಯಾಗಾಕಿದರೆ ನೆನಯಾವು
ಕಟ್ಟಿಯಾಗಾಕಿದರೆ ನೆನಯಾವು ನೆನೆಯದಂತ ಬಣ್ಣ
ಸೆಟ್ಟರು ತನಸೊಸೆಗೆ ಕಳಿವ್ಯಾರೆ

ಕರಿಯಂಚಿನ ಸೀರೆ ಸೆರಗೆಲ್ಲ ರೇಸಿಮೆ
ಅರಿ ನೀರಾಗಾಕಿದರೆ ನೆನಯಾವು
ಅರಿ ನೀರಾಗಾಕಿದರೆ ನೆನಯಾವು ನೆನೆಯದಂತಬಣ್ಣ
ದೊರೆಗಳು ತನಸೂಸಿಗೆ ಕಳಿವ್ಯಾರು

ಕೆಂಪಂಚಿನ ಸೀರೆ ಅಂಚೆಲ್ಲ ರೇಸಿಮೆ
ನಿಂತನೀರಿಗಾಕಿದರೆ ನೆನಯಾವು
ನಿಂತನೀರಿಗಾಕಿದರೆ ನೆನಯಾವು ನೆನೆಯದಂತ
ಬಣ್ಣ ಕೆಂಚೆಗವರತ್ತೆ ಕಳಿವ್ಯಾಳು

ಆರುವರವಾಕೊಂದು ಈರೆವೂವಿನ ಸೀರೆ
ನಾರಿತಿಪ್ಪಮ್ಮ ಉಡುಬಾರೆ
ನಾರಿತಿಪ್ಪಮ್ಮ ಉಡುಬಾರೆ ನಿಮ್ಮಮ್ಮ
ನ್ಯಾರಕೊಯ್ದವಳೆ ನಿರಿಗೀಯ

ಅತ್ತುವರವಾಕೊಂದು ಇಪ್ಪೆವೂವಿನ ಸೀರೆ
ನಿಸ್ತ್ರೆಸಣ್ಣಮ್ಮ ವುಡುಬಾರೆ
ನಿಸ್ತ್ರೆಸಣ್ಣಮ್ಮ ವುಡುಬಾರೆ ನಿಮ್ಮಮ್ಮ
ವಪ್ಪಕೊಯ್ದವಳೆ ನಿರಿಗೀಯ

ಬದ್ರೆ ಬೈತಲೆಯ ತಿದ್ಯಾರೆ ಸೆಳ್ಳುಗಿರೀಲಿ
ಜಗ್ಗಲಾಕ್ಯಾರೆ ಚವುಲೀಯ
ಜಗ್ಗಲಾಕ್ಯಾರೆ ಚವುಲೀಯ ಅದರಂದಾಕೆ
ಮಗ್ಗು ಮಲ್ಲೀಗೆ ಮುಡಿಸ್ಯಾರೆ

ನಾರಿ ಬೈತಲೆಯ ಸೀಳ್ಯಾರು ಸೆಳ್ಳುಗುರೀಲಿ
ಜ್ಯಾರಲಾಕ್ಯಾರೆ ಚೆವುಲೀಯ
ಜ್ಯಾರಲಾಕ್ಯಾರೆ ಚೆವುಲೀಯ ಅದರಂದಾಕೆ
ಮಗ್ಗುಮಲ್ಲೀಗೆ ಮುಡಿಸ್ಯಾರೆ

ಅಟ್ಟಿ ವೋಗುಬಾರೆ ಚಕ್ರಬಾವಾದೆಣ್ಣೇ
ಅಟ್ಯಾಗ ನಿನಬಳಗಾವೆ
ಅಟ್ಯಾಗ ನಿನಬಳಗಾವೆ ನಿನಗೊಂದು
ಅಕ್ಕಿದೆಡೆಯ ಸೂರೆ ಉಡುಸ್ಯಾರೆ

ವುದಿಯ ವೊಗುಬಾರೆ ಎರಿಯಾಬಾವದೆಣ್ಣೆ
ವುದಿಯಾಗ ನಿನಬಳಗಾವೆ
ವುದಿಯಾಗ ನಿನಬಳಗಾವೆ ದಿನಕೊಂದು
ಕರಿದೆಡೆಯ ಸೀರೆ ಉಡುಸ್ಯಾರೆ

ವೂವು ಬಂದಾವು ವೂವು ಜ್ಯಾಜಿವೂವು
ವೂವು ಬಂದಾವು ಸೀರ್ಯಾದಿಂದ
ವೂವು ಬಂದಾವು ಸೀರ್ಯಾದಿಂದ ಸಾಗ್ರದಿಂದ
ವೂವು ಬಂದಾವು ಸಾರಿ ತುರುಬೀಗೆ

ಅಣ್ಣು ಬಂದಾವು ಅಣ್ಣು ಬಾಳೇಯಣ್ಣು
ಅಗ್ಗೋಜಿಯಣ್ಣು ಸೀರ್ಯದಿಂದ
ಅಗ್ಗೋಜಿಯಣ್ಣು ಸೀರ್ಯದಿಂದ ಸಾಗ್ರದಿಂದ
ಅಣ್ಣು ಬಂದಾವು ನಾರಿ ಮಡುಲೀಗೆ

ಕಾಯಿಬಂದಾವು ಕಾಯಿತೆಂಗಿನ ಕಾಯಿ
ಕಾಯೋಜಿ ಕಾಯಿ ಸೀರ್ಯಾದ
ಕಾಯೋಜಿ ಕಾಯಿ ಸೀರ್ಯಾದ ತ್ವಾಟದಿಂದ
ಕಾಯಿಬಂದಾವು ನಾರೀಯಮಡುಲೀಗೆ