ಪ್ರಕೃತಿಯ ಅತಿ ಮುಖ್ಯ ವ್ಯಾಪಾರವೆನಿಸುವ ಮಳೆಗೆ ಗಂಡಿನ ಮೂರ್ತ ರೂಪವನ್ನೇ ಕೊಟ್ಟಿರುತ್ತಾರೆ. ‘ರೆಂಬೆ ಬೂಮ್ಯಮ್ಮ ಗಂಡನ ಬ್ರಮಿಸವಳೆ’ ಎಂದೇ ಹೇಳುತ್ತಾರೆ. ಮಳೆ ಪುರುಷ, ಭೂಮಿ ಸ್ತ್ರೀ. ಭೂಮಿಗೆ ಮಳೆಯ ಸಂಪರ್ಕವಿಲ್ಲದಿದ್ದರೆ ಅದು ನಿರ್ಜೀವಗೊಳ್ಳುತ್ತದೆ. ಜಗತ್ತಿನ ಎಲ್ಲ ಜೀವಜಾಲವೂ ಮಳೆಯ ನೀರನ್ನೇ ನಂಬಿ ಬದುಕುವುದು. ಜೀವನಕ್ರಮ ರೂಪುಗೊಂಡದ್ದೇ ನೀರಿನ ಆಶ್ರಮ ತಾಣಗಳಲ್ಲಿ . ಆ ನೀರು ಸಮೃದ್ಧವಾಗಲು ಮಳೆಯ ಅಗತ್ಯ ತುಂಬ ಇರುತ್ತದೆ. ಮಳೆ ಬರುವುದು ತಡವಾದರೆ ಆ ಸಂಬಂಧದಲ್ಲಿ ಅನೇಕ ಆಚರಣೆಗಳು ಜಗತ್ತಿನಾದ್ಯಂತ ರೂಢಿಯಲ್ಲಿರುವುದನ್ನು ಫ್ರೆಜರ್ ತನ್ನ ಗೋಲ್ಡನ್ ಬೋ ಕೃತಿಯಲ್ಲಿ ದಾಖಲಿಸುತ್ತಾನೆ. ಅದೆಲ್ಲವೂ ಅಂಧಶ್ರದ್ಧೆಯ ಮತ್ತು ಕೇವಲ ನಂಬಿಕೆಗಳ ಹಿನ್ನೆಲೆಯಲ್ಲಿ ಹುಟ್ಟಿದ್ದರೂ ಅದರ ಹಿಂದಿರುವ ಮಳೆಯ ಅಗತ್ಯವನ್ನಂತೂ ಅಲ್ಲಗೆಳೆಯಲಾಗದು.

ಭಾರತವಂತೂ ಸಂಪೂರ್ಣ ವ್ಯವಸಾಯವನ್ನೇ ನಂಬಿ ಬದುಕಿದ ದೇಶವಾದುದರಿಂದ ಮಳೆಯನ್ನು ದೇವತೆಯೆಂದೇ ಕರೆದು ವೇದಕಾಲದ ಪ್ರಮುಖ ದೇವತೆಯಾಗಿದ್ದ ಇಂದ್ರನಿಗೂ ಮಳೆಗೂ ಸಂಬಂಧವನ್ನು ಕಲ್ಪಿಸಲಾಗಿದೆ. ಇದರಿಂದ ರೈತರು ಮಳೆಯ ತುರ್ತು ಇದ್ದಾಗಲೆಲ್ಲ ಇಂದ್ರನನ್ನೇ ಪ್ರಾರ್ಥಿಸುತ್ತಾರೆ. ಅಲ್ಲದೆ ರೈತನು ಹೊಲದ ದುಡಿಮೆ ಮುಗಿಸಿ ಊರೊಟ್ಟಿನ ಹಬ್ಬ ಜಾತ್ರೆ ಮಾಡುವಾಗಲೆಲ್ಲ ಆತನ ಗಮನ ಮುಂದಿನ ವರ್ಷದ ಮಳೆಯನ್ನೇ ಕುರಿತದ್ದಾಗಿರುತ್ತದೆ. ಅದರಿಂದ ಯಾವುದೇ ದೇವರನ್ನು ಆರಾಧಿಸಿದರೂ ಮಳೆಯ ಆಗಮನವನ್ನು ಬೇಡಿಯೇ ತೀರುತ್ತಾನೆ. ಜನಪದರ ನಿತ್ಯ ಬದುಕಿನ ಕ್ಷೇಮ ಸಮಾಚಾರವೂ ಕೂಡ ಮಳೆಯನ್ನೇ ಅವಲಂಬಿಸಿರುತ್ತದೆ. ಹೀಗಾಗಿ ಭಾರತದ ರೈತರಿಗೆ ಮಳೆಯೇ ಜಗತ್ತನ್ನು ಆಳುವ ಚಕ್ರವರ್ತಿಯಾಗಿ ಕಾಣಿಸುತ್ತಾನೆ. ಯಾರು ಮುನಿದರೂ ಮಳೆರಾಯ ಮುನಿಯಬಾರದು ಎಂಬುದು ರೈತರ ತಿಳುವಳಿಕೆ. ಹಾಗೆ ಮುನಿದರೆ ನಾನಾಪೂಜೆ, ಆರಾಧನೆ, ಆಚರಣೆ ಆತನಿಗಾಗಿ ಕಾದಿರುತ್ತವೆ. ಆ ಪ್ರಾರ್ಥನೆಯ ಹಿನ್ನೆಲೆಯಲ್ಲೇ ಈ ಜನಪದ ಗೀತೆಯೂ ಇರುತ್ತದೆ. ಮಳೆಯ ಹಾಡಿನ ಸೊಲ್ಲು ಹೀಗೆ ಬರುತ್ತವೆ.

1. ತೇಲಿ ತೆರೆವೊಯ್ಯೆ ತೇಲುದರೆ ತೆರೆವೊಯ್ಯೆ
ಬಾಳೆ ಕುಂಕುಮವೆ ತೆರೆವೊಯ್ಯೆ ಗಂಗಮ್ಮ

2. ಯಾವ ಭೂಚಕ್ರದೋರಮ್ಮ
ಮರತೇ ಮನಿಗ್ಯಾರು

3. ಮೋಡವೊಡ್ಡಿ ಮಳೆಗರೆದು
ಸಾಗರದೊಂದೆ ವಳೆಕಟ್ಟಿ

 

ಮಳೆರಾಯ ಗೀತೆ

ಅಪ್ಪ ಈರೈಜುಂಜ ದಿಟ್ಟವರನಕಾಣೆ
ಕಟ್ಯಾಗನಿಂದು ಮಕತೊಳೆದು ಮಜ್ಜಣಮಾಡಿ
ಮುಕ್ಕಣ್ಣಗ್ವಾಲೆ ಬರೆದಾರೆ

ಮುಕ್ಕಣ್ಣಗ್ವಾಲೆ ಏನಂದು ಬರೆದಾರೆ
ಅಕ್ಕವ್ವನ ಕೆರೆಗೆ ಅದವಿಲ್ಲ ಮುಕ್ಕಣ್ಣ
ವಾಲೆ ಬರೆದಾರೆ………

ಸ್ವಾಮಿ ಈರೈಜುಂಜ ನೀಲವರಣಕಾಣೆ
ನಿರಾಗ ನಿಂದು ಮಕ ತೊಳೆದು ಮಜ್ಜನಮಾಡಿ
ರೇವಣ್ನಗ್ವಾಲೆ ಬರೆದಾರೆ

ರೇವಣ್ಣಗ್ವಾಲೆ ಏನಂದು ಬರೆದಾರೆ
ತಾಯವ್ನ ಕೆರೆಗೆ ಅದವಿಲ್ಲ
ತಾಯವ್ನ ಕೆರೆಗೆ ಅದವಿಲ್ಲ ಅದವಿಲ್ಲವಂದು
ತಾಯ್ವ್ನ ಕೆರೆಗೆ ನಡೆದಾರೆ

ಅಪ್ಪ ಈರೈಜುಂಜ ತುಪ್ಪದೊರ್ಣ ಕಾಣೆ
ತುಪ್ಪದಲಿ ಮೈಯ್ಯ ತೊಳುದಾನೆ ಮಜ್ಜಣಮಾಡಿ

ಮುಕ್ಕಣ್ಣಗ್ವಾಲೆ ಬರೆದಾನೆ
ಮುಕ್ಕಣ್ಣಗ್ವಾಲೆ ಏನಂದು ಬರೆದಾನೆ
ಉತ್ತರೆ ಮಳೆಗಳ ಕಳುವಯ್ಯ

ಸ್ವಾಮಿ ಜುಂಜಯ್ಯ ಆಲಿನೊರುಣ ಕಾಣೆ
ಆಲೀಲಿ ಮೈಯ್ಯ ತೊಳುದಾನೆ ಮಜ್ಜಣಮಾಡಿ

ರೇವಣ್ಣಗ್ವಾಲೆ ಬರೆದಾನೆ
ರೇವಣ್ಣಗ್ವಾಲೆ ಏನಂದು ಬರೆದಾನೆ
ಆದ್ರಿ ಮಳೆಗಾಳ ಕಳುವಯ್ಯ

ಮಟ್ಟ ಮದ್ಯನದಾಗ ಬೆಟ್ಟಿನೋಟು ಮ್ವಾಡ ಆಗಿ
ಅಪ್ಪ ಈರೈ ಜುಂಜ ಮಳೆಗಾಳು ತರಿಸಿಕಂಡು
ಅಕ್ಕವ್ನ ಕೆರೆಗೆ ನಡೆದಾನೆ

ಮಾರ ಮದ್ಯನದಾಗ ವೂವಿನೋಟು ಮ್ವಾಡ ಆಗಿ
ಮಾರಗಾನಿ ಈರ ಮಳೆಗಾಳು ತರಿಸಿಕಂಡು
ತಾಯವ್ನ ಕೆರೆಗೆ ನಡೆದಾರೆ

ಗುಡ್ಡಾವು ಗುಡಿಗಟ್ಟಿ ದೊಡ್ಡಳ್ಳ ಬೋರ್ಯಾಡಿ
ಮದ್ದಗಿರಿ ಮ್ಯಾಲೆ ಮಳೆಮ್ವಾಡ ತರಿಸಿಕಂಡು
ತಾಯವ್ನ ಕೆರೆಗೆ ನಡೆದಾಳೆ

ದುರುಗಾವು ಗುಡಿಗಟ್ಟಿ ಹಿರಿಯಳ್ಳ ಬೋರ್ಯಾಡಿ
ಇರಿಯೂರ ಮ್ಯಾಲೆ ಮಳೆಮ್ವಾಡ ತರಿಸಿಕಂಡು
ತಾಐವ್ನ ಕೆರೆಗೆ ನಡೆದಾರೆ

ಅಕ್ಕವ್ನ ಕೆರೆಯಾಗೆ ಮತ್ತಿನೋಟೇರಿಮ್ಯಾಲೆ
ಅತ್ತಿಂಡಿನಾವು ಮನಿಗ್ಯಾವು ಈರಣ್ಣಾನ
ಬುತ್ತೀಗಾಲ ಕರೆದಾವು

ತಾಯವ್ನ ಕೆರೆಯಾಗ ವೂವಿನೋಟೀರಿ ಮ್ಯಾಲೆ
ಆರಿಂಡಿನಾವು ಮನಿಗ್ಯಾವು ಈರಣ್ಣಾನ
ಬಾನಕ ಆಲ ಕರೆದಾವು

ಆಕಾಸದ ಮಳೆಯ ತೋತುರಿಸಿ ಕರೆದಾರೆ
ತೋಪೆ ಅಚ್ಚಡದ ಸೆರಣಾರು ಈರೆತ್ತಾರು
ತೋತುರಿಸಿ ಮಳೆಯ ಕರೆದಾರು

ಅಂಬಾರದ ಮಳೆಯ ನೆಂಬುಸಿ ಕರೆದಾರು
ಗೊಂಬೆ ಅಚ್ಚಡದ ಸೆಣಾರು ಈರೆತ್ತಾರು
ನೆಂಬುಸಿ ಮಳೆಯ ಕರೆದಾರು

ಎತ್ತಯ್ಯ ಬರುವಾಗ ಬತ್ತೀದ ಕೆರೆತುಂಬಿ
ಸುತ್ತು ಕೋಗುಲಿ ಸೆಲಿವೊಯ್ಯು ವೊತ್ತೀಗೆ
ಎತ್ತಯ್ಯ ಮಜ್ಜಣಕೆ ಇಳಿದಾನೆ

ಈರಣ್ಣ ಬರುವಾಗ ಜೋಡಂಬ ಕೆರೆತುಂಬಿ
ವೋದಕೋಗುಲಿ ನೆಲೆವೊಯ್ವ ವೊತ್ತೀಗೆ
ಈರನ್ಣ ಮಜ್ಜಣಕೆ ಇಳಿದಾನೆ

ಜುಂಬಣ್ಣ ಬರುವಾಗ ಬಂಜೆಂಬ ಕೆರೆತುಂಬಿ
ಸಂಜೆ ಕೋಗುಲಿ ಸೆಲೆವೊಯ್ವ ವೊತ್ತೀಗೆ
ಜುಂಜಣ್ಣ ಮಜ್ಜಣಕೆ ಇಳಿದಾನೆ

ತೇಲಿ ತೆರೆವೊಯ್ಯೆ ತೇಲುದಲೆ ತೆರೆವೊಯ್ಯೆ
ಬಾಳೆ ಕುಂಕುಮವೆ ತೆರೆವೊಯ್ಯೆ ಗಂಗಮ್ಮ
ನಾಳೆ ಈರಣ್ಣ ಬರುತಾನೆ

ತುಂಬಿ ತೆರೆವೊಯ್ಯೆ ತುಂಬದಲೆತೆರೆವೊಯ್ಯೆ
ನಿಂಬೆ ಕುಕುಮದಲೆ ತೆರೆವೊಯ್ಯೆ ಗಂಗಮ್ಮ
ಇಂದೆ ಜುಂಬಣ್ಣ ಬರುತಾನೆ

ಆಸೆ ಕೋಡಿಗಂಗೆ ಈಸೆ ಕೋಡಿಗೆ ಬಾರೆ
ಬಾಸೇಯ ಕೊಡೆಬಲಗೈಯ್ಯ ಗಂಗಮ್ಮ
ಬಾಸೆಗೆ ತಪ್ಪವರ ಮಗನಲ್ಲ

ಇಂದಲದಡದ ಗಂಗೆ ಮುಂದಲದಡಕೆ ಬಾರೆ
ನೆಂಬಿಗೆ ಕೊಡೆ ಬಲಗೈಯ್ಯ ಗಂಗಮ್ಮ
ನೆಂಬಿಕೆ ತಪ್ಪೋರ ಮಗನಲ್ಲ

ತುಂಬಿತೆರಿವೊಯ್ಯೆ ತುಂಬದಲೆ ತೆರೆವೊಯ್ಯೆ
ತಂಬಟ ಮಾವು ಕಿರಿನೆಲ್ಲಿ ಈರೈಜುಂಜ
ತುಂಬಿದ ಪುರುಷವನೆ ಕೆರಿಯಾಗೆ

ತೇಲಿ ತೆರಿವೊಯ್ಯೆ ತುಂಬದಲೆ ತೆರೆವೊಯ್ಯೆ
ಯಾಲಕ್ಕಿ ಮಾವು ಕಿರಿನೆಲ್ಲಿ ಈರೈಜುಂಜ
ತೇಲಿದ ಪುರುಸವನೆ ಕೆರಿಯಾಗೆ

ತುರುಕರು ದಂಡುಬಂದು ತುರುಮುಂದೆಯಾಗೈದಾವೆ
ಕೊಂಡೋಗನು ಬನ್ನಿ ಕೆರೆಯಾಕೆ ಅಕ್ಕನ ಕೆರೆ
ಮರಳೀಗೆ ಈರಾನ ಮಡಗಾನ

ಬ್ಯಾಡಾರ ದಂಡುಬಂದು ಬೇಲಿ ವರಗೈದಾವೆ
ಕೊಂಡೋಗನು ಬನ್ನಿ ಕೆರೆಯಾಕೆ ಅಕ್ಕನ ಕೆರೆ
ಮರಳಾಗೆ ಈರಾನೆ ಮಡಗಾನ

ಕಾದಮಳ್ಳ ತಂದು ಕಣ್ಣಾಗ ವೊಯ್ಬ್ಯಾಡ
ಕಲ್ಲಿಸಿಕ್ದಾಗಾ ಮಡುಗಪ್ಪ ಸಿತ್ತಯ್ಯ
ಅಲ್ಲಿ ಮರಿಯಾಗಿ ಬರುತೀನಿ

ಉಕ್ಕೊ ಮರಳ ತಂದು ನೆತ್ತಿಮ್ಯಾಲೊಯ್ಯಬ್ಯಾಡ
ಒತ್ತಿ ಅರಿವ್ಯಾಗ ಮಡಗಪ್ಪ ಸಿತ್ತಯ್ಯ
ಪಕ್ಸಿ ಮರಿಯಾಗಿ ಬರುತೀನಿ

ಮುಂದಾಲ ಅಳ್ಳಕ ಬನ್ನಿ ಮುನ್ನೂರು ಚಲಿಕೆ ತನ್ನಿ
ಮರಳಾಗೀರಾನ ಮಡಗಾನ
ಮ್ಯಾಗಳಳ್ಳಾಕ ಬನ್ನಿ ನಾನ್ನೂರು ಸೆಲಿಕೆ ತನ್ನಿ
ಮರಳಾಗೀರಾನ ಮಡಗಾನ

ಆಸೆ ಕೋಡಿಗಂಗೆ ಈಸೆ ಕೋಡಿಗೆಬಾರೆ
ಆಕಾಸದಗಂಗೆ ತೆರೆವೊಯ್ಯೆ ಕಲ್ಲರಳ್ಳಿ
ಜ್ಯೋತಿ ಮಜ್ಜಣಕೆ ಇಳುದಾನೆ

ಇಂದಲಕೋಡಿಗಂಗೆ ಮುಂದಲ ಕೋಡಿಗೆ ಬಾರೆ
ಅಂಬಾರದ ಗಂಗೆ ತೆರೆವೊಯ್ಯೆ ಕಲ್ಲರಳ್ಳಿ
ಲಿಂಗ ಮಜ್ಜಣಕೆ ಇಳುದಾನೆ

ಅಕ್ಸಿಪಕ್ಸಿಗಳೆಲ್ಲ ವೊಕ್ಕಳ್ಳಿರೊನಗಾಳ
ಅಪ್ಪ ಈರಣ್ಣ ದಳಲೊಡ್ಡಿ ವೋಗಲುವಾಗ
ಮಕ್ಕಳತಾಯಿ ಮರವೇರೆ

ಕಾಗೆ ಗೂಗೆಗಳೆಲ್ಲ ಸೇರಿಕಳ್ಳಿರಿವನಗಾಳ
ಸ್ವಾಮಿ ಈರಣ್ಣ ದಳಲೊಡ್ಡಿ ವೋಗಲುವಾಗ
ಬಾಲಾನ ತಾಯಿ ಮರವೇರೆ

ವೊಡ್ಡೀನ ನೀರು ವೊಡ್ಡೀಗೆ ಬಿದ್ದಾರೆ
ವೊಡ್ಡಿಗಟ್ಟಿ ಕಾಣೆ ಅಕ್ಕನಕೆರೆ ಗಂಗಮ್ಮ
ದೊಡ್ಡೋನ ಸೆರೆಯ ಇಡಿದಾಳೆ

ಅಳ್ಳಾದ ನೀರು ಅಳ್ಳಾಕ ಬಿದ್ದಾರೆ
ಬಳ್ಳಿಗಟ್ಟಿ ಕಾಣೆ ಅಕ್ಕನ ಕೆರೆ ಗಂಗಮ್ಮ
ಬಲಿದೋನ ಸೆರೆಯ ಇಡಿದಾಳೆ

ಗಂಗಮ್ನ ಮಲಿಯಾಲು ತೆಂಗಿನ ತಿಳಿನೀರು
ಗಂಗಮ್ನ ನಿನ್ನ ಮಲಿಯಾಲು ತನುವೀಗೆ
ತಂದೆ ಈರಣ್ಣ ಮನಜೋತ

ಆಕೇಯ ಮಲಿಯಾಲು ಸೀತಾಳಪಾತಾಳ
ಆಕೆ ಗಂಗಮ್ನ ಮಲಿಯಾಲು ತನವೀಗೆ
ಆತ ಈರಣ್ನ ಮನಜೋತ

ಅಂಬಾರದ ಮಳಿಬಂದು ಮುಂಬಾರದ ಕೆರೆತುಂಬಿ
ದುಂಡರಳಿ ಮುತ್ತು ತೆರೆವೊಯ್ದು ಕಲ್ಲರಳ್ಳಿ
ಲಿಂಗ ಮಜ್ಜಣಕೆ ಇಳಿದಾನೆ

ಆಕಾಸದ ಮಳೆ ಬಂದು ಭೂಪಾಲದ ಕೆರೆತುಂಬಿ
ಜಾತೆರಡೆಮುತ್ತಿ ತೆರೆವೊಯ್ದು ಕಲ್ಲರಳ್ಳಿ
ಜ್ಯೋತಿ ಮಜ್ಜಣಕೆ ಇಳಿದಾನೆ

ಚಿಕ್ಕ ಮಾವುಗಳ ಸಿಟ್ಟೀಲಿ ಕೊಂಡೋನು
ಅಪ್ಪಯ್ಯ ನಮಕೆರಿಯ ವೋಗದೀರೋ ಗಂಗಮ್ನ
ಜೊತ್ತೆರಡು ಕೈಯ್ಯಾ ಮುಗುದಾಳೆ

ಸ್ವಾಮಾರ ಮಾವುಗಳ ಸಿಟ್ಟೀಲಿ ಕೊಂಡೋನು
ಈರಣ್ಣನಮ ಕೆರಿಯ ವೋಗದೀರೋ ಗಂಗಮ್ನ
ಜೋಡೆರಡು ಕೈಯ್ಯಾ ಮುಗುದಾಳೆ

ಎರಿ ಮ್ಯಾಲೋಗೋರು ರಾಯರೆಣುಮಕ್ಕಳು
ಕಾಲಿಟ್ಟೆ ನೀರ ಮೊಗದೀರಾ ಚನ್ನಮ್ಮಾನ
ಬಾಲರೈದಾರೆ ಕೆರೆಯಾಗೆ

ಅಕ್ಕವ್ನ ಕೆರೆಯಾಗ ಪಟ್ಟೆಮಂಚದ ಮ್ಯಾಲೆ
ರೆಟ್ಟೆ ಇತ್ತೆವೆಂದು ಮನಗ್ಯಾರು ಈರೈಜುಂಜ
ಅಕ್ಕ ನಾಗತಿಯ ಕೆರಿಯಾಗೆ

ತಾಯವ್ನ ಕೆರೆಯಾಗ ತೂಗುಂಚದ ಮ್ಯಾಲೆ
ತೋಳೊತ್ತೆವೆಂದು ಮನಗ್ಯಾರು ಈರೈಜುಂಜ
ತಾಯಿ ನಾಗತಿಯ ಕೆರಿಯಾಗೆ

ಅಕ್ಕವ್ನ ಕೆರೆಯಾಗ ಸುತ್ತ ಸಂಪಿಗೆ ಮರ
ನೆಟ್ಟಾಗ ಬೆಳೆದು ಅರಳ್ಯಾವೆ ವೂವಮುಡುದು
ಅಪ್ಪ ಐದಾರೆ ಕೆರೆಯಾಗೆ

ತಾಯವ್ನ ಕೆರೆಯಾಗ ತೇಲಂತೆ ಮುಳುಗಂತೆ
ಬಾಳೆ ಮೀನಂತೆ ಗರಿಯೆ ಈರೈಜುಂಜ
ತಾನಂತೆ ಕೆರೆಯ ಒಳಗೆಲ್ಲ

ಅಕ್ಕವ್ನ ಕೆರೆಯಾಗ ವೊಕ್ಕುಮೂರು ತಿಂಗಾಳು
ಪಟ್ಟೇಯದಟ್ಟಿ ನೆನಯಾವು ಬಂದಮ್ಯಾಗೆ
ಮುತ್ತಿನಾರುತಿ ಬೆಳಗೇವು

ತಾಯವ್ನ ಕೆರೆಯಾಗ ವೋಗಿಮೂರು ತಿಂಗಳು
ಸಾಲೀಯದಟ್ಟಿ ನೆನೆಯಾವು ಬಂದಯ್ಯಾಗೆ
ವೂವೀನಾರುತಿಯ ಬೆಳಗೀರಿ

ಮುಂದಲಳ್ಳಾಕಬನ್ನಿ ಮುನ್ನೂರು ಸೆಲಿಕೆ ತನ್ನಿ
ಮುನ್ನೂರು ಸೆಲಿಕೆ ಕಲಿಯೂರ ಕಲ್ಲಣ್ಣ
ಅಣ್ಣನಳ್ಳಾದ ನೆಲಿಯೇಳೋ

ಮುದುಕದಳ್ಳಾಕಬನ್ನಿ ಮುನ್ನೂರು ಸೆಲಿಕೆ ತನ್ನಿ
ಮುನ್ನೂರು ಸೆಲಿಕೆ ಕಲಿಯೂರ ಕಲ್ಲಣ್ಣ
ಅಪ್ಪನಳ್ಳಾದ ನೆಲಿಯೇಳೋ

ಉತ್ರೆ ಮಳೆಬಂದು ಸುತ್ತ ಕಾವುಸಿ ಬೆಳೆದು
ಎತ್ತಾಲ ವೊಲಬು ತಿಳಿಯಾವು ಕಲ್ಲಣ್ಣ
ಅಪ್ಪನಳ್ಳಾದ ನೆಲಿಯೇಳೋ

ಆದ್ರಿ ಮಳೆಬಂದು ಮ್ಯಾಲೆ ಕಾವುಲಿ ಬೆಳೆದು
ಯಾವಲ್ಲಿ ವೊಲಬು ತಿಳಿಯಾವು ಕಲ್ಲಣ್ಣ
ದೇವರಳ್ಳಾದ ನೆಲೆಯೇಳೋ

ಉತ್ರೆ ಮಳೆಬಂದು ಸುತ್ತ ಕಾವುಸಿ ಬೆಳೆದು
ಎತ್ತಾಲ ವೊಲಬು ತಿಳಿಯಾವು ಕಲ್ಲಣ್ಣ
ಕೊಕ್ಕಸಿ ಬೆಳದ ಬಯಲಾಗೆ

ಆದ್ರಿಮಳೆಬಂದು ದೂರ ಕಾವುಸಿ ಬೆಳೆದು
ಯಾವಲ್ಲಿ ವೊಲಬು ತಿಳಿದಾವು ಅಕಟಕೆರೆ
ಮಾನಂಗಿ ಬೆಳೆವ ಬಯಲಾಗೆ

ಅತ್ತು ಕೂರಿಗಳಲಿ ಸುತ್ತ ಪಾರಿಬೇಲಿ
ಸತ್ಯುಳ್ಳ ಪಾಂಡವರು ವಸಮಾಗಿ ವಲದಾಗ
ಲೆತ್ತ ನಾಡ್ಯಾನೆ ಮಳೆರಾಯ

ಆರು ಕುರಿಗಳಲಿ ಸುತ್ತ ಪಾರಿಬೇಲಿ
ಆಯವುಳ್ಳ ಪಾಂಡವರು ವಸಮಾಗಿ ವಲದಾಗ
ದಾಯನಾಡಾನೆ ಮಳೆರಾಯ

ನಕ್ಕಾರೆ ಬರಾನು ಸಕ್ಕಂದಗಾರಾನೆ
ಅಕ್ಕನೀನೋಗಿ ಕರೆತಾರೆ ಸೂರಿದನ
ಅತ್ತಿರದಲೈದಾನೆ ಮಳೆರಾಯ

ಕರೆದಾರೆ ಬರಾನು ಕೈಸನ್ನೆಗಾರಾನೆ
ತಾಯಿ ನೀನೋಗಿ ಕರೆತಾರೆ ಸೂರಿದನ
ವಾರಿಲೈದಾನೆ ಮಳೆರಾಯ

ಬಿತ್ತಿ ಬಂದಣ್ಣ ವೊತ್ತಿಗ್ಗೆ ವೋದಾನೆ
ಬಿತ್ತಿ ಬಂದೆ ಸಿವನೆ ಮಳೆಯಿಲ್ಲ ರಾಜ್ಯದ ಮ್ಯಾಲೆ
ಮುತ್ತಿನ ಸ್ವಾನೆ ಸುರುದಾವೆ

ಅರುಗಿ ಬಂದಣ್ಣ ವೊತ್ತಿಗ್ಗೆ ವೊದಾನೆ
ಅರುಗಿ ಬಂದೆ ಸಿವನೆ ಮಳೇಯಿಲ್ಲ ರಾಜ್ಯದ ಮ್ಯಾಲೆ
ಅವಳಾದ ಸ್ವಾನೆ ಸುರುದಾವೆ.

ಅತ್ತು ಕೂರಿಗೆ ವಲದೂರ ಪಾರಿಬೇಲಿ
ಆಯವುಳ್ಳ ಪಾಂಡವರು ವೊಸಮಾಗಿ
ವಲದಾಗ ದಾಯನಾಡ್ಯಾನೆ ಮಳೆರಾಯ

ಆನೆಗಡತರ ನೀರು ಆಕರಿಸಿ ಅರುದಾವು
ಬೂಪ ಈರಣ್ಣ ವರಡಾನು ಗಂಗಮ್ಮ
ಮಾತಾಡಿ ಮಗನ ಕಳುವಮ್ಮ

ಕುದುರೆಗಡತರ ನೀರು ಆಕರಿಸಿ ಅರುದಾವು
ಅಪ್ಪಯ್ಯ ಕೆರಿಯವರಡಾನೆ ಗಂಗಮ್ಮ
ಮದನಾರಿ ಮಗನ ಕಳುವಮ್ಮ

ಗುಡ್ಡಾದ ಅರಿಬಂದು ವಬ್ಬೇಲಿ ಐದಾವೆ
ಗುಡ್ಡಾದ ಮಲ್ಲಾನ ಅರಿಬಂದು ಕಲ್ಲರಳ್ಳಿ
ದೊಡ್ಡೋನ ಸಾಗಿ ಬರಏಳಿ

ದುರುಗಾದ ಅರಿಬಂದು ಕೆರೆಯಾಗೆ ಐದಾವೆ
ದುರುಗಾದ ಮಲ್ಲಾನ ಅರಿಬಂದು ಕಲ್ಲರಳ್ಳಿ
ದೊರಿಮಗನೆ ಸಾಗಿ ಬರ ಏಳೆ

ಆಕೆ ಬೂಮ್ಯಮ್ಮ ಆತಾನ ಬ್ರಮಿಸ್ಯಾಳೆ
ಬೂಪಾಲದರನೆ ಕರುಣಿಸೊ ಸೂರಿದಾನ
ಅತ್ತಿರದಲೈದಾನೆ ಮಳೆರಾಯ

ರೆಂಬೆ ಬೂಮ್ಯಮ್ಮ ಗಂಡಾನ ಬ್ರಮಿಸ್ಯಾಳೆ
ಮಂದಾಲದರನೆ ಕರುಣಿಸೋ ಸೂರಿದನ
ಅರುಗಿಲೈದಾನೆ ಮಳೆರಾಯ

ಸತಿ ಕೇಳಿ ಸಂಗಾತಿ ಮಾಡಿದಿರುಳಬ್ಬ
ರತ್ನಗಂಬಳಿ ಮುಸುಕಿಟ್ಟು ಮಳೆರಾಯ
ಕತಿ ಮಾಡಿ ವೋದ ಇರುಳೆಲ್ಲ

ಸತಿ ಕೇಳಿ ಸಂಗಾತಿ ಅಬ್ಬ ಮಾಡಿದಿರುಳೆಲ್ಲ
ಮೊಬ್ಬು ಗಂಬಳಿ ಮುಸುಕಿಟ್ಟು ಮಳೆರಾಯ
ಅಬ್ಬ ಮಾಡಿ ವೋದ ಇರುಳೆಲ್ಲ

ನಾಯಿ ತಿಂಬ ತೌಡು ನಾರೇರು ತಿಂದಾರು
ಮ್ಯಾಗಳರಾಯ ಕರುಣಿಸೋ ರಾಜ್ಯಾದಮ್ಯಾಲೆ
ಬಾಲಾರು ಬಾಯ ಬಿಡುತಾರೆ

ಆದಿ ತಿಂಬ ತೌಡು ರೆಂಬೇರು ತಿಂದಾರು
ಮುಂದಾಲರಾಯ ಕರುಣಿಸೋ ರಾಜ್ಯಾದ ಮ್ಯಾಲೆ
ಕಂದಾರು ಬಾಯ ಬಿಡುತಾರೆ

ಅಣ್ಣ ಕರುಣಿಸೋ ಅಣ್ಣಯ್ಯ ಕರುಣಿಸೋ
ಅಣ್ಣ ಮಳೆರಾಯ ಕರುಣಿಸೋ ರಾಜ್ಯಾದ ಮ್ಯಾಲೆ
ಬಾಲಾರು ಬಾಯ ಬಿಡುತಾರೆ

ಅಪ್ಪ ಕರುಣಿಸೋ ಅಪ್ಪಯ್ಯ ಕರುಣಿಸೋ
ಅಪ್ಪ ಮಳೆರಾಯ ಕರುಣಿಸೋ ರಾಜ್ಯಾದ ಮ್ಯಾಲೆ
ಮಕ್ಕಳು ಬಾಯ ಬಿಡುತಾರೆ

ಅತ್ತಿ ವಲಗಳು ಬಾಡಿಬತ್ತಿ ವೋಗುತಾವೆ
ಅಪ್ಪ ಕರುಣೀಸೋ ಮಳೆರಾಯ ರಾಜ್ಯದಮ್ಯಾಲೆ
ಮಕ್ಕಳು ಬಾಯ ಬಿಡುತಾರೆ

ಜ್ವಾಳದ ವಲಗಳು ಬಾಡಿಬತ್ತಿ ವೊಗುತಾವೆ
ಸ್ವಾಮಿ ಕರುಣೀಸೋ ಮಳೆರಾಯ ರಾಜ್ಯದಮ್ಯಾಲೆ
ಬಾಲಾರು ಬಾಯ ಬಿಡುತಾರೆ

ಹತ್ತು ಗಾವುದದಿಂದ ನಿಸ್ತ್ರೇಗೆ ಮನುವರುದ
ಲೆತ್ತನಾಡೋಳೆ ದೊರೆಮಗಳೆ ನಿನಗಾಗಿ
ಜೊತ್ತಾಗಿ ನಿಂತ ದೊರೆಮಗನೆ

ಆರುಗಾವುದದಿಂದ ನಾರೀಗೆ ಮನೆವರುದ
ದಾಯನಾಡೋಳೆ ದೊರೆಮಗಳೆ ನಿನಗಾಗಿ
ಮೋವಾಗಿ ನಿಂತ ಮಳೆರಾಯ

ಗಂಜಿಯಚ್ಚಡದೋನೆ ಗಂಭೀರ ಮಳೆರಾಯ
ಎಂಡೀರಮನೆಬಿಟ್ಟು ವೊರಡಾನೆ ಲೋಕದಮ್ಯಾಲೆ
ನಿಂಬೇಣ್ಣಿಗೆ ಬಾಯಬಿಡುತಾನೆ

ಸಾಲ್ಯದಚ್ಚಡದೋನೆ ಸಳಿಗಾಳಿಯ ಮಳೆರಾಯ
ಸೂಳೆಮನೆ ಬಿಟ್ಟು ವೊರಡಾನೆ ಲೋಕದಮ್ಯಾಲೆ
ಬಾಳೊಣಗಿ ಬಾಯ ಬಿಡುತಾವೆ

ಉಜ್ಜೀನಿರಾಯ ವುದಿಯ ಮುಟ್ಟದ್ಯಾವ
ರುದ್ದರನೆ ಮಳೆಯ ತರಿಸಯ್ಯ ನರಲೋಕ
ಮಜ್ಜಿಗ್ಗೆ ಬಾಯ ಬಿಡುತಾವೆ

ಪರುಪಂಚಗಾರ ಪಾರುವತಿರಮಣ
ನನ್ನಯ್ಯ ಮಳೆಯ ತರಿಸಯ್ಯ ನರಲೋಕ
ಅನ್ನಾಕೆ ಬಾಯ ಬಿಡುತಾದೆ

ತಾಯಮ್ಮ ನೀ ನೋಡೆ ಮ್ವಾಡದಾಗಳ ಮಂಜ
ಬಾಣತಿಗೆ ಮಸಿಯ ಬಳಿದಂಗೆ ಲೋಕದ ಮ್ಯಾಲೆ
ಲೋಲಿಸುವಾನೆ ಮಳೆರಾಯ

ಅಕ್ಕಯ್ಯ ನೀನೊಡೆ ಬೆಟ್ಟದಾಗಳ ಮಂಜ
ಮಕ್ಕಳ್ಳಿಗೆ ಮಸಿಯಬಳುದಂಗೆ ಲೋಕದಮ್ಯಾಲೆ
ಲೋಲಿಸುವಾನೆ ಮಳೆರಾಯ

ನಾಯಿತಿಂಬ ತೌಡನಾರೇರು ತಿಂದಾರೆ
ಮ್ಯಾಗಳ ದೇವ ಕರುಣಿಸೊ ಲೋಕದಮ್ಯಾಲೆ
ನಾರೇರ ಸೋಕ ಗವುದಾವೆ

ಅಂದಿತುಂಬ ತೌಡುರೆಂಬೇರು ತಿಂದಾರೆ
ಇಂದಾಲ ದೇವ ಕರುಣಿಸೋ ಲೋಕದಮ್ಯಾಲೆ
ರೆಂಬೇರ ಸೋಕ ಸಿವನೀಗೆ

ಸ್ವಾಮಿ ಮಳಿದೇವ ಸಳಾಯದೊಸ್ತ್ರವನೊದ್ದು
ಸಾಮಸಾಲ್ಯಾಗ ಮನಗವನೇ ಮಳಿದೇವ
ಸಾಲ್ಯೇದ ಸ್ವಾಮಿ ಕರುಣಿಸೋ

ಗಂಭೀರಮಳೆರಾಯ ಗೊಂಬೇದೊಸ್ತ್ರವನೊದ್ದು
ಗಂದಸಾಲ್ಯಾಗ ಮನಗವನೆ ಮಳೆದೇವ
ಇಂದಾಲ ಸ್ವಾಮಿ ಕರುಣೀಸೊ

ಒಕ್ಕಲ ಕೇರ್ಯಾಗ ಟೂಕ್ಕಂಬವೇನಮ್ಮ
ಇಪ್ಪತ್ತು ಚಮಟಿಗೆ ಮೊಳೆಗಾಳು ಒಕ್ಕಲುಮಗ
ಪುತ್ರಮ್ಮ ಕೂರಿಗ್ಗೆ ಮೊಳೆಬಡುದ

ಕಮ್ಮಾರ ಕೇರ್ಯಾಗ ಡಮ್ಮಂಬಾವೇನಮ್ಮ
ಎಂಬತ್ತು ಚಮ್ಮಟಿಗೆ ಮೊಳೆಗಾಳು ಒಕ್ಕಲುಮಗ
ಕಂದಮ್ಮ ಕೂರಿಗ್ಗೆ ಮೊಳಿಬಡುದ

ಗುಡುಗೆಲ್ಲ ಗುಡುಗ್ಯಾವೆ ಸಿಡಿಲೆಲ್ಲಿ ಸಿಡಿದಾವೆ
ದುರುಗದ ರಾಯನ ಕದಲೇಯ ಕಂಬದಮ್ಯಾಲೆ
ಪಗಡೆಯನಾಡ್ಯಾನೆ ಮಳೆದೇವ

ಅರುಗಾಕೋದಣ್ಣ ಅಲಗೇಯ ಇಡಿದವನೆ
ಅರುಗಿಬಂದೆ ತಾಯಿ ಮಳೆಯಿಲ್ಲ ಲೋಕದಮ್ಯಾಲೆ
ಮುತ್ತೀನ ಪೋಟೆ ಮಳಿ ಮ್ವಾಡ

ಬಿತ್ತಕೋದಣ್ಣ ವತ್ತಿಗೆಯ ಇಡಿದವನೆ
ಬಿತ್ತಿಬಂದೆ ತಾಯಿ ಮಳೆಯಿಲ್ಲ ಲೋಕದಮ್ಯಾಲೆ
ಮುತ್ತೀನ ವೋಟೆಮಳಿಮ್ವಾಡ

ಮುತ್ತೀನಕೂರಿಗ್ಗೆ ಅಟ್ಯಾಗೆ ಪೂಜ್ಯಾಗಿ
ಎತ್ತ ತುಪ್ಪದಲಿ ಮೊಕತೊಳೆದು ಒಕ್ಕಲುಮಗ
ಪುತ್ರಮ್ಮ ಕೂರಿಗ್ಗೆ ನಡೆದಾನೆ

ಅವಳಾದ ಕೂರಿಗ್ಗೆ ವೋಣ್ಯಾಗ ಪೂಜಾಗಿ
ಆಲುತುಪ್ಪದಲಿ ಮೊಕತೊಳದೆ ಒಕ್ಕಲುಮಗ
ಬಾಲಮ್ಮ ಕೂರಿಗ್ಗೆ ನಡೆದಾನೆ

ಮುತ್ತೀನ ಕೂರಿಗೆ ನೆತ್ತಿ ಮ್ಯಾಲಿಕ್ಕಂಡು
ಉತ್ತಮರ ಮಗಳ ಕರಕಂಡು ಒಕ್ಕಲುಮಗ
ನಿಸ್ತ್ರೆಗೆ ಬಿತ್ತ ಕಲಿಸ್ಯಾರೆ

ಚಿನ್ನಾದ ಕೂರೀಗೆ ಕೆನ್ನೆ ಮ್ಯಾಲಿಕ್ಕಂಡು
ಮಾನ್ಯೇರ ಮಗಳ ಕರಕಂಡು ಒಕ್ಕಲುಮಗ
ಅರುವೇಗೆ ಬಿತ್ತ ಕಲಿಸ್ಯಾನೆ

ಬಿತ್ತ ಕೂರಿಗೆ ಮುಂದೆ ಬೀಜದೆಡಿಗ ಇಂದೆ
ಅಟ್ಟಿ ಮಾದಿಗನ ಮಿಣಿಮುಂದೆ ಒಕ್ಕಲುಮಗ
ಸುತ್ತಲ ಮಾನ್ದೇಕ ನಡೆದಾನೆ

ಅರುವ ಕೂರಿಗೆ ಮುಂದೆ ಅವಳದ ಎಡಿಗೆ ಇಂದೆ
ಬಡವ ಮಾದಿಗನ ಮಿಣಿಮುಂದೆ ಒಕ್ಕಲುಮಗ
ದೂರದ ಮಾನ್ಯಕ ನಡೆದಾನೆ

ಅರಸಿ ಬೊಮ್ಯಮ್ಮ ಪುರುಸನ ಬ್ರಮಿಸವಳೆ
ಅರಿಚ್ಚಂದ್ರರಾಯಕರುಣಿಸೊ ಕೂರಿಗೆಯೆಂಬ
ಪುರುಸನ ಬೊಮ್ಯಮ್ಮಬ್ರಮಿಸವಳೆ

ರೆಂಬೆ ಬೊಮ್ಯಮ್ಮ ಗಂಡನ ಬ್ರಮಿಸವಳೇ
ಇಂದಾಲದೇವ ಕರುಣಿಸೋ ಕೂರಿಗೆಯಂಬ
ಗಂಡನ ಬೂಮ್ಯಮ್ಮ ಬ್ರಮಿಸವಳೆ

ಕೂರಿಗೆನಿನ್ನೆಸರು ಕುಂಬೂಟರಾಯನೆ
ಸಡ್ಡೆನಿನ್ನೆಸರು ಸರಸತಿಯ ಒಕ್ಕಲುಮಗನ
ಎತ್ತೀನ ಎಸರು ರಗುರಾಮ

ಮುತ್ತೀನ ಕೂರೀಗೆ ಯಾಗಲುಮಟ್ಟ ಸಡ್ಡೆ
ಮುಕ್ಕಣ್ಣನಂಬೋವು ಎರಡೆತ್ತು ಕಟ್ಟಿಕಂಡು
ಮುತ್ತು ಬಿತ್ತಾನೆ ವಲಕೆಲ್ಲ

ಅವಳಾದ ಕೂರಿಗ್ಗೆ ದನ ಮಟ್ಟಸೆಡ್ಡೆ
ರಗುರಾಮನೆಂಬೊ ಎರಡೆತ್ತು ಕಟ್ಟಿಕೊಂಡು
ಅವಳಾಬಿತ್ತಾನೆ ವಲಕೆಲ್ಲ

ಆರೆತ್ತು ಆರಾಳು ಆರುಕೂರಿಗದಾಳು
ದೇವಪಾಂಡುವರೆ ಸಮನಾಗಿ ವಲದಾಗ
ವೋಗಿ ಕರುಣಿಸೋಮಳೆದೇವ

ಎಂಟೆತ್ತು ಎಂಟಾಳು ಎಂಟು ಕೂರಿಗದಾಳು
ಕೆಂಚೆಪಾಂಡವರ ವೊಸಮಾಗಿ ವೊಲದಾಗೆ
ನಾಂಟ್ಯವನಾಡಾನೆ ಮಳೆದೇವ

ಆರುಕೂರಿಗೆ ನೆಲದೂರ ಪಾರಿಬೇಲಿ
ದೇವ ಪಾಂಡವರ ವೊಸಮಾಗಿ ವಲದಾಗೆ
ಲೋಲಿಸುವಾನೆ ಮಳೆದೇವ

ಅತ್ತು ಕೂರಿಗೆ ನೆಲ ಸುತ್ತ ಬಾರಿಬೇಲಿ
ಚತ್ರಿ ಪಾಂಡವರ ವೊಸಮಾಗಿ ವಲದಾಗ
ವೊಕ್ಕು ಕರುಣೀಸೊಮಳೇದೇವ

ಮಳಿಬಂದು ತನುಗೆದ್ದು ಗಿಡವೆಲ್ಲ ತನುವಾಗಿ
ಬಡವಾಗುಮ್ಮಾಯಿ ಗನವಾಗಿ ಬಕುತರಳ್ಳಿ
ಕರಿಮೀಗೆ ಚಿಂತೆಗವುದಾವೆ

ಅಣ್ಣ ಬಿತ್ತೀದೊಲ ತಮ್ಮನೋಡಲೋಗಿ
ಗಿಣ್ಣುಂಟೆನಾರಿಗರಿಮುಂದು ಮೂಡಾಲ
ಎಣ್ಣೀನ ಬೈತಲೆಯ ತಗುದಂಗೆ

ಬಿತ್ತೀದೇಳುದಿನಕ ವೊಕ್ಕು ನೋಡನಲ್ಲೆ
ಸೊಕ್ಕಷ್ಟೇ ಇವ್ನ ಮರವೆಸ್ಟೆ ಒಕ್ಕಲುಮಗ
ವೊಕ್ಕಾನು ಭೂಮ್ಯಮ್ನ ವಲದಾಗೆ

ಅಸನಾದಳು ಬೂಮ್ಯಮ್ಮ ಎಸಳು ಪಿಲ್ಲೆನಿಟ್ಟು
ಅಸುರೊಲದಾಗ ಅಡ್ಡಸುಳುದಾಳೆ ಒಕ್ಕಲುಮಗನೆ
ದಸಲೀಯ ಆಸಿ ಸರಣೆನ್ನು

ಒಳ್ಳೋಳು ಬೂಮ್ಯಮ್ಮ ಬೆಳ್ಳಿಪಿಲ್ಲೆನಿಟ್ಟು
ಎಳ್ಳೊಲದಾಗ ಅಡ್ಡ ಸುಳುದಾಳೆ ಒಕ್ಕಲುಮಗನೆ
ವಲ್ಲೀಯ ಆಸಿ ಸರಣೆನ್ನೊ

ಕಾಗೇಯ ಸಲುವೋನೆ ಗೋಗೇಯ ಸಲುವೋನೆ
ಎರುವೆಂಬತ್ತು ಕೋಟಿಸಲುವೋನೆ ಒಕ್ಕಲುಮಗನೆ
ತಿರುಗೊಂದೀಳ್ಯವೇ ಬರಲಣ್ಣ

ಅಕ್ಕೀಯ ಸಲುವೋನು ಪಕ್ಕೀಯಸಲುವೋನು
ಸುತ್ತೇಳು ಲೋಕ ಸಲುವೋನು ಒಕ್ಕಲುಮಗನೆ
ಮತ್ತೊಂದೇ ವೀಳ್ಯ ಬರಲಂದ

ದೇವ ಪಾಂಡವರು ವೋಗವರೆನ್ನಲದೀರೆ
ವೋಗಿಲ್ಲ ಅವರು ಐದಾರೆ ಅವರಂಬುಬಿಲ್ಲು
ಮೂಡವಜಂಬಿಮರದಾಗೆ

ಸತ್ತೇವುಳ್ಳ ಪಾಂಡವರು ಸತ್ತರೆನ್ನಲದೀರೆ
ಸತ್ತಿಲ್ಲ ಅವರು ಐದಾರೆ ಅವರಂಬುಬಿಲ್ಲು
ಇಟ್ಟವರೆಜಂಬಿ ಮರದಾಗೆ

ದೇವರು ಪಾಂಡವರು ವೋದವರನ್ನಲದೀರೆ
ವೋದರೀಬೂಮಿ ಬೆಳೆಯಾವು ಲೋಕದಮ್ಯಾಲೆ
ತೂರಿವೋಗವರೆ ಅಣಬೇಯ

ಸತ್ತೇವುಳ್ಳ ಪಾಂಡವರು ಸತ್ತರನ್ನದೀರೆ
ಸತ್ತರೀಬೂಮಿ ಬೆಳೆಯಾವೆ ಲೋಕದಮ್ಯಾಲೆ
ಬಿತ್ತಿವೋಗ್ಯವರೇ ಅಣಬೇಯ

ಸ್ವಾಮೀಯ ಬಿತ್ತೋ ಸಾದ ಒಕ್ಕಲುಮಗನೆ
ಅಲಸಂದೆ ಬಿತ್ತಿ ಅರಸಾಗೋ ಎಳ್ಳುಬಿತ್ತಿ
ದಿಳ್ಳಿ ದೊರೆಯಾಗೋ

ಬರಗು ಬಿತ್ತೋ ವೀರ ಬರುವೋನೆಂಟರುಬಾಳ
ಇರಿಳೆದ್ದು ಕುಟ್ಟೋಸೊಸೆಯಿಲ್ಲ ಒಕ್ಕಲುಮಗನೆ
ಬಲವಂತನ ಬಿತ್ತೋ ಬಿಳಿಜ್ವಾಳ