ಸಿರಿಯಣ್ಣನನ್ನು ಕುರಿತಾದ ಜನಪದ ಗೀತೆ ಚಳ್ಳಕೆರೆ ತಾಲ್ಲೂಕಿನ ಯಲಕಟ್ಟೆ ಗೊಲ್ಲರಟ್ಟಿಯ ಸುತ್ತಮುತ್ತಲ ಗ್ರಾಮಗಳಲ್ಲಿ ಪ್ರಚಲಿತವಿದೆ. ಸಿರಿಯಣ್ಣನ ತಾಯಿಯ ಹೆಸರು ಸಿಂಪಮ್ಮ, ಸಿರಿಯಣ್ಣನಿಗೆ ವಿಪತ್ತು ಒದಗಿದರೆ ತಾಯಿ ಇದ್ದವಳು ತನ್ನ ಮಗನಿಗೆ ತೊಂದರೆಯಾಗಬಾರದೆಂದು ಮರೆಗೊಳ್ಳಲಿಕ್ಕೆ ಹೇಳಿದರೆ ‘ಮರೆಗೊಳ್ಳಾಕ ತಾಯಿ ಹೇಡಿಯೆಂಬಾರು’ ಎನ್ನುವನು. ದನ ಕಾಯುವ ಕಾಯಕ ಮಾಡಿ ಎತ್ತುಗಳಿಗೆ ಗೂಡು ತಿರುವಿ ಕೊಂಡು ಇದ್ದರೂ ಕಾಳಗವೆಂದರೆ ‘ಎಣ್ಣುಂಡ ಎಣಿಗಂಟು ಮಣ್ಣಾಗ ಎಳವೂತ ಚಿನ್ನಾದ ತೂರಾಯಿ ತಿರುವೂತ ಸಿಂಪಮ್ನ ಮಗ ಕಾಳಗಕ್ಕೆ’ ನಡೆಯುತ್ತಿದ್ದ. ನಿಡಗಲ್ಲು ಸೀಮೆಯ ಯುದ್ಧದಲ್ಲಿ ಭಾಗವಹಿಸಿ ಪರಾಕ್ರಮ ತೋರಿ ವಾಪಸಾದ. ಆವಿನ ಗೂಡಿನಲ್ಲಿರುವಾಗ ಎದುರಾದ ಹಂದಿಯ ಜತೆ ಹೋರಾಡಿ ಮಡಿದುಹೋದ. ಜನ ಆತನನ್ನು ಅಲಗು ರೂಪದಲ್ಲಿ ಪೂಜಿಸುತ್ತಾರೆ. ಸಿರಿಯಜ್ಜಿ ಹಟ್ಟಿಯ ಮುಖ್ಯ ದೇವತೆಯೂ ಸಿರಿಯಣ್ಣನೇ. ಆತನ ಹೆಸರಿನ ಅಲುಗು ಇದ್ದು, ಇಡೀ ಹಟ್ಟಿಯ ಹೆಣ್ಣುಗಂಡು ಮಕ್ಕಳೆಲ್ಲ ಸಿರಿಯಣ್ಣನ ಹೆಸರನ್ನು ತಮ್ಮ ಹೆಸರಾಗಿ ಕರೆದುಕೊಂಡು ಆತನ ನೆನಪಿನಲ್ಲಿರುತ್ತಾರೆ. ಹೀಗಾಗಿ ಹಟ್ಟಿಯಲ್ಲಿರುವವರೆಲ್ಲ ಸಿರಿಯಣ್ಣ, ಸಿರಿಯಪ್ಪ, ಸಿರಯಮ್ಮ, ಚಿಕ್ಕಸಿರಿಯ, ದೊಡ್ಡ ಸಿರಿಯರೇ ಆಗಿರುತ್ತಾರೆ. ಚಿಕ್ಕೇನ ಹಳ್ಳಿ ಗೊಲ್ಲರಟ್ಟಿಯಿಂದ ಸ್ವಲ್ಪ ದೂರಕ್ಕಿರುವ ಒಂದು ಸ್ಥಳವನ್ನು ಸಿರಿಯಣ್ಣ ಮಡಿದ ಜಾಗವೆಂದು ಜನ ತೋರಿಸುವರು. ಆ ಸಮಾಧಿಗೂ ಜನ ಪೂಜೆ ಸಲ್ಲಿಸುವುದುಂಟು.

ಸಿರಿಯಣ್ಣ ಗೀತೆಯಲ್ಲಿ ನಿಡುಗಲ್ಲು ಪಾಳೆಯಪಟ್ಟಿನ ಹೆಸರು ಬರುತ್ತದೆ. ತಿಪ್ಪಣ್ಣ ನಾಯಕನೆಂಬ ವೀರನ ಸಾಹಸ ಮೆಚ್ಚಿ ವಿಜಯನಗರದ ಕೃಷ್ಣದೇವರಾಯ ಚಿತ್ರದುರ್ಗ ಜಿಲ್ಲೆಯ ಪೂರ್ವಭಾಗಕ್ಕೆ ಮಜ್ಜಿ ಸಮುದ್ರ, ಗೋಸೀಕೆರೆ ಮುಂತಾದ ಗ್ರಾಮಗಳನ್ನು ಕೊಟ್ಟ, ಈ ಪ್ರಾಂತ್ಯಗಳಿಗೆ ಒಡೆಯನಾದ ತಿಪ್ಪಣ್ಣನಾಯಕ ಸ್ವಂತ ಸಾಮರ್ಥ್ಯದಿಂದ ಭೂಮಿಯನ್ನು ವಿಸ್ತರಿಸಿಕೊಂಡ ಕಾಲಕ್ರಮದಲ್ಲಿ ಈತನ ಪಾಳೆಯಪಟ್ಟು ಬಿಜಾಪುರ ಸುಲ್ತಾನರ ವಶವಾಯಿತು. ಸೋತ ತಿಪ್ಪಣ್ಣನಾಯಕ ನಿಡುಗಲ್ಲಿಗೆ ಓಡಿಹೋಗಿ ಅಲ್ಲಿ ದುರ್ಗಮವಾದ ಕೋಟೆಯನ್ನು ಕಟ್ಟಿ ತನ್ನ ವಸಾಹತು ಸ್ಥಾಪಿಸಿದ. ನಿಡುಗಲ್ಲು ಪಾಳೆಯಪಟ್ಟಿನ ವಿಚಾರ ಚಳ್ಳಕೆರೆ ಪಾವಗಡ ತಾಲ್ಲೂಕಿನ ಜನಪದ ವೀರಗೀತೆಗಳು ಮತ್ತು ಮಹಾಸತಿ ಗೀತೆಗಳಲ್ಲಿ ಮುಖ್ಯವಾಗಿ ಸಿರಿಯಣ್ಣನ ಗೀತೆಯಲ್ಲಿ ನಿಡುಗಲ್ಲು, ಗೋಸೀಕೆರೆ, ದೊಡ್ಡೇರಿ, ಹೇಮಾವತಿ ಈ ಇತಿಹಾಸ ಪ್ರಸಿದ್ಧ ಸ್ಥಳಗಳು ಒಂದಲ್ಲ ಒಂದು ಕಡೆ ಉಲ್ಲೇಖಗೋಳ್ಳುತ್ತವೆ.

ಸಿರಿಯಣ್ಣ ಗೀತೆಯ ಸೊಲ್ಲುಗಳು ಮೂರು :

. ಗೆಜ್ಜೆ ಗಲ್ಲ ಗಲ್ಲೆನ್ನೂತ
ಈರಾನ ಗದ್ದಲ ಬಹಳಕಾಣೆ

. ಎದ್ದು ಬಾರೊ ಮುದ್ದು ಈರಣ್ಣ
ಪಾದದ ಗೆಜ್ಜೆ ಮಾತಾಡುವಾಂಗ

. ಜಂಗ ನೋಡೆ ಜಂಗೀನ ದನಿಯನೋಡೆ
ಈರಣ್ಣ ಬರುವೊಂದುಲುಪನೋಡೆ

 

ಸಿರಿಯಣ್ಣಗೀತೆ
ಭಾಗ ಒಂದು

ಬೆಳ್ಳಿ ಚತ್ರಿಕೆ ಮೊನೆಗಾರ

ಎದ್ದು ಬಾರೋ ಮುದ್ದು ಈರಣ್ಣ
ಅಲ್ಲಾವಿದ್ದು ಅಂಗಡಿಯಾಗ ಬೆಲ್ಲಾವಿದ್ದು ಸಿರಾದಾಗ
ಮಲ್ಲಿಗಯಿದಾವೋವನದಾಗ

ಈರಣ್ಣಾನ ಸೊಲ್ಲುಗಳಿದ್ದು ಮನದಾಗೆ
ಅಂಕವಿದ್ದು ಅಂಗಡಿಯಾಗೆ ಬಿಂಕವಿದ್ದು ಸಿರಾದಾಗ
ಸಂಪಿಗಯಿದಾವು ವನದಾಗ

ಸ್ಯಾವಂತಿಗಿದ್ದು ವನದಾಗೆ ತುಂಬಿತುಳುಕಿ
ಒಳ್ಳೆಮನವಿದ್ದು ಈರಣ್ಣ ಕೊಟ್ಟ ಸಂಪತ್ತು
ತುಂಬಿತ್ತುಳುಕಾವು ಮನಿಯಾಗೆ

ಕ್ವಾಟೆ ನೋಡೆನೆಂದು ವಾಟೆದಲಿ ತಾಬಂದ
ಗೋಸಿ ಕೆರೆಯ ಪಡುವಾಲ ದಿನ್ಯಾಗ
ಮಂಜು ಮೂಡಿದಂಗ ಮರುಸೇಜಿ

ಕಾಳುಗವಂದಾರೆ ಕಳಿಯಾದಂತೀರಣ್ಣ
ಆಳಕರಕಂಡೊರಟಾನೆ ಈರ ಸಿರಿಯಣ್ಣ
ಅಡಿಕೆ ಸಸಿ ಕಿತ್ತು ನಡೆದಾಂಗ

ಅತ್ತುಬಂಡಿ ಕರಿಯೆಲೆ ಅತ್ತು ಬಂಡಿ ಬಿಳಿಯೆಲೆ
ಮತ್ತೊಂದು ಬಂಡಿ ಎಳಗಾಯಿ ಏರಿಕಂಡು
ಅತ್ತಿಮರಕೀರ ಸಕುನಾವೆ

ಅತ್ತಿ ಮರಕೀರ ಸಕುನಾವಾಗಲುವಾಗೆ
ಸುಕ್ಕೆ ಬಣ್ಣದ ಇರಿಯಕ್ಕಿ ರಾಯರಪೋಜು
ಅಪ್ಪಾಗ ಸಕುನ ನುಡುದಾವೆ

ಆರು ಬಂಡಿ ಕರಿಯಲೆ ಆರುಬಂಡಿ ಬಿಳಿಯೆಲೆ
ಮ್ಯಾಲೊಂದು ಬಂಡಿ ಎಳಿಗಾಯಿ ಏರಿಕಂಡು
ಆಲಾದ ಮರಕೀರ ಸಕುನಾ ಕೇಳಲೋದ

ಆಲಾದ ಮರಕೀರ ಸಕುನಾಕೋಗಲುವಾಗ
ಗ್ವಾವೇ ಬಣ್ಣಾದ ಇರಿಯಕ್ಕಿ ರಾಯರಪೋಜು
ಈರಾಗ ಸಕುನ ನುಡುದಾವೆ

ಬಾಗುಲೊರಡಲುವಾಗ ಈರಣ್ಣನೇನಂದ
ಬಾಲಮ್ಮ ಜತನ ಮನಿಜತನ ಕ್ವಾಟೇಕೇರಿಯ
ದೂಳಾಯವ ಮಾಡಿ ಬರುತೀನಿ

ವೊಸ್ತಲು ವೊರಡೂವಾಗ ಏನಂದ ಈರಣ್ಣ
ಪುತ್ರಮ್ಮ ಜತನ ಮನಿಜತನ ಕ್ವಾಟೇಕೇರಿಯ
ದಿಕ್ಕುವೋಗಿದ್ದು ಬರುತೀನಿ

ಉಪ್ಪುರಿಗ್ಯಾಗೆ ವಪ್ಪಾಕ ಕಾದಂತ ನೀರು
ಈರಣ್ಣಗ ಇಡುದಾಳೆ ಸಿಂಪಮ್ಮನು
ಸಾಲ್ಯಾದ ದಟ್ಟಿ ನಡುವೀಗೆ

ರಾಣ್ಯಾಕ್ಕೋಗಲುವಾಗ ಎತ್ತಮ್ಮ ಕಾಲಿಡುದಾಳೆ
ಕೆಟ್ಟಾ ಸಕುನಾವು ಮಗನೇ ಕ್ವಾಟೇಕೇರಿಯ
ಅತ್ತು ದಿನಗಳು ಮರೆಗೊಳ್ಳೋ

ಅತ್ತೂ ದಿನಗಳು ಮರೆಗೊಳ್ಳಾಕ ತಾಯಿ
ಕಳ್ಳಾನು ನಾನು ಎಂಬೋರು ಕತ್ತಿಕಾಳಗ
ನಡಯಾಲವಗೆ ನಮಗೇ

ಆವಿನಕೋಗಲುವಾಗ ತಾಯಮ್ಮ ಕಾಲಿಡಿದಾಳೆ
ನನ್ನಾ ಮಗನೇ ಜತುನಾವು ಕ್ವಾಟೇಕೇರಿಯ
ದಿನ್ನೆಗಳಾ ನೀನು ಮರೆಗೊಳ್ಳು

ದಿನ್ನೆಗಳಾ ಮರೆಗೊಂಬಾಕೆ ಏಡಿಯೆಂಬರು
ರಾಯ ಕೋಟೆಯ ಕೇರಿಯಾಗ ಅಂಗಳದಾಗ
ರಾಯ ಕಾಳಗವು ಅವಗನಮಗ

ಕೊತ್ತಲಕಾಕ್ಯಾರೆ ಎಚ್ಚುಳ್ಳ ಪಿರ್ಯಂಗಿ
ಇಕ್ಯಾರೆ ರಾಡ ಒಳಿಯಾಕ ಎಚ್ಚಿನ
ಕ್ವಾಟೇಯ ಕವಲಾಜ

ಕ್ವಾಟೇಗಾಕ್ಯಾರೆ ಅಪುಳ್ಳಂತ ಪಿರ್ಯಂಗಿ
ನೂಕ್ಯಾರೆ ರಾಡ ಒಳಿಯಾಕ ಆಕ್ಯಾರೆ
ಬೇಕಂಬ ಕ್ವಾಟೆ ಕವಲಾಜ

ಸಿಕ್ಕದಂಡಿ ಕ್ವಾಟೆವೊಕ್ಕು ಬಂದವರಿಲ್ಲ
ವೊಕ್ಕು ಬಂದವನೆಳಿಮಗ ಕರಿಯಣ್ಣ
ಬೇಕಂಬ ಕ್ವಾಟೆ ತೆನಿತೆನಿಗೆ

ರಾಯದಂಡಿ ಕ್ವಾಟೆವೋಗಿ ಬಂದವರಿಲ್ಲ
ವೋಗಿ ಬಂದವನೆಳಿಮಗ ಕರಿಯಣ್ಣ
ಮುಂದೆ ನಿಲಿಸಾರೆ ವೊರಗೂಡು

ಸಂಜೇಲಿ ವೊಯ್ದಾವೆ ಮುಂಜೀನ ಗೂಡಾರ
ಮುಂದೆ ತಿರಿವಾರೆ ವೊರಗೂಡು ಮಾದನೋರ
ಕಂದ ಕಾಳಗಕ ನಡೆದಾನು

ವೊತ್ತೀಲಿ ವೊತ್ತೀಲಿ ಮುತ್ತಿನ ಗೂಡಾರ
ಮತ್ತೆ ತಿರುವ್ಯಾರೆ ವೊರಗೂಡು ಮಾರನೋರ
ಪುತ್ರ ತಿರುಗ್ಯಾನೆ ಕಾಳಗಕ್ಕ

ಅರುಗೀಲಿ ವೊಯ್ದಾವೆ ಅವಳಾದ ಗೂಡಾರ
ವೊರಗಾತಿರುವ್ಯಾರೆ ವೊರಗೂಡಾರ ಮಾರನೋರ
ಮಗ ಕಾಳಗಕ್ಕ ತಿರುಗ್ಯಾನೆ

ಎಣ್ಣುಂಡ ಎಣಗಂಟು ತಿಪ್ಯಾಗ ಎಳವೂತ
ಮುತ್ತೀನ ತೂರಾಯಿ ಎಳೆವೂತ ಸಿಂಪಮ್ನ
ಪುತ್ರ ಕಾಳಗಕ್ಕೆ ನಡೆದಾನು

ರಾಯದವಾಡೆ ಕ್ವಾಟೇಯ ವಾರೇಲಿ
ದಾರೀಲಾದಾವೆ ಕದುನಾವು ಈರಣ್ಣನ
ಕಾಡಂದಿಮ್ಯಾಲೆ ಕದುನಾವು

ಚಿಕದಂಡಿ ಕ್ವಾಟೇಯ ಒತ್ತಿಲಿ
ನಿಡಗಲ್ಲು ಸೀಮಿಯಲಿ ರಾಯಗ
ಚಿಕ್ಕಂದಿ ಮ್ಯಾಲೆ ಕದನಾವೆ

ಆಯಿತವಾರದ ದಿನ ಆವಿನಗೂಡಿನಾಗೆ
ಸುಕ್ಕರವಾರದ ದಿನ ಎತ್ತಿನ ಗೂಡಿನಾಗೆ
ಆದಾವೆ ನ್ಯಾಯ ದೊರಿಗಳಿಗೆ

ಅಣ್ಣಡಿಕೆ ಅಸೆಮಂಚ ಬಣ್ಣದ ತಲೆಗಿಂಬು
ಸಣಗೇದಿ ಕೇಳಿ ಸಿರಿಯಣ್ಣ ಮನಗೂವ
ಚಿನ್ನದ ಚಾವಡಿ ಸೋಕಗೈದಾವೆ

ಅಸಿಯಡಕೆ ಅಸೆಮಂಚ ಕುಸುಲಾದ ತಲೆಗಿಂಬು
ವೊಸಗೇದಿ ಕೇಳಿ ಸಿರಿಯಣ್ಣ ಮನಗೂವ
ಚಾವುಡಿ ಸೋಕ ಗೈದಾವು

ಆವೆಲ್ಲಿ ಮೇದಾವೆ ಆವೆಲ್ಲಿ ಗೆಲಿದಾವೆ
ರಾಯ ಕ್ವಾಟಕೇರಿ ಸ್ರೊಬಗೀನ ‌‌‌‌‌‌‌‌‌ಕಾವಲು ಮೇದು
ಎತ್ತು ಈರಣ್ಣಗ ಗೆಲಿದಾವೆ

ವುಳ್ಳಿ ವಲದಾಗ ಬಲ್ಲಿದರು ಬರುತಾರೆ
ಬೆಳ್ಳಿ ಚತ್ರಿಕೆ ಮೊನಿಗಾರ ಈರಣ್ಣ
ಬೆಳ್ಳಿ ಗೋವುನ ಮುಂದೆ ಬರುತಾನೆ

ಉದ್ದಿನ ವಲದಾಗ ಬುದ್ಧಿವಂತರು ಬರುತಾರೆ
ಗೆಜ್ಜೆ ಚತ್ರಿಕೆ ಮೊನಿಗಾರ ಈರಣ್ಣ
ಎದ್ದಾವಿನ ಮುಂದೆ ಬರುತಾನೆ

 

ಭಾಗಎರಡು

ದೊಡ್ಡಂದಿ ಮ್ಯಾಲೆ ಕದನಾವೆ

ಎಸರು ವಲದಾಗ ದೆಸೆವಂತ ಬರುತಾನೆ
ಕುಸುರಿ ಚತ್ರಿಕೆ ಮೊನೆಗಾರ ಈರಣ್ಣ
ಬೆಳ್ಳಿಗೋವಿನ ಮುಮದೆ ಬರುತಾನೆ

ತಗ್ಗಿಲಾದ ನ್ಯಾಯ ಕೇಳಲು ಬಂದ
ಎಬ್ಬುಲಿಯಾರ ಮಗನಮ್ಮ ಈರಣ್ಣಗ
ದೊಡ್ಡಂದಿ ಮ್ಯಾಲೆ ಕದನಾವೆ

ಆಳ್ಳದಲಾದ ನ್ಯಾಯ ಕೇಳಲು ಬಂದ
ಬಲ್ಲಿದನ್ಯಾರ ಮಗನಮ್ಮ ಈರಣ್ಣನ
ನಲ್ಲಂದಿ ಮ್ಯಾಲೆ ಕದನಾವೆ

ಕಾಯ್ದಾರಿದ ವುಲ್ಲು ಮೂಗೋರಿ ಮುಟ್ಟಾವೆ
ಏರಿ ಕಲಕಿದ ನೀರ ಕುಡಿಯಾವು ಕ್ವಾಟೆಕೇರಿಯ
ಕಲಿವೀರ ನಿಮ್ಮ ಸಲಗೆತ್ತು

ಅಕ್ಕಿಯಾರಿದ ವುಲ್ಲು ಮಿಕ್ಕೋರಿ ಮುಟ್ಟಾವು
ಕಪ್ಪೆ ಕಲುಕಿದ ನೀರ ಕುಡಿಯಾವು ಕ್ವಾಟೆಕೇರಿಯ
ವುಚ್ಚುವೀರ ನಿಮ್ಮ ಸಲಗೆತ್ತು

ಅತ್ತಾರು ಬ್ಯಾಡರಿಗೆ ದಕ್ಕದೆ ಬಂದಾವಂದಿ
ಇಪ್ಪಲಿ ವನವ ಆಲಿದಾವೆ ಕ್ವಾಟೇಕೇರಿಯ
ಪುತ್ರಾನ ಮಾರ ಮಲೆತಾವೆ

ಆರೂರ ಬ್ಯಾಡರನ ಸೋಲಿಸಿ ಬಂದಾವೆ
ಬಾಳೀಯ ವನವನ ಆಲಿದಾವೆ ಕ್ವಾಟೆಕೇರಿಯ
ಸೂರಿದನ ಮಾರ ಮಲೆತಾವೆ

ಅಲ್ಲವಾಡಿದ ತಾವು ವುಲ್ಲೆ ಎಜ್ಜಿಯ ಕಂಡೆ
ವುಲ್ಲೆಲ್ಲು ಕಾಣಾ ಮಾರಗಾನಿ ಈರಣ್ಣ
ನಲ್ಲಂದಿ ಮ್ಯಾಲೆ ಕದನಾವೆ

ಲೆತ್ತಾವಾಡಿದವಾಗ ಎತ್ತಿನೆಜ್ಜೆಕಂಡೆ
ಎತ್ತೆಲ್ಲಿ ಕಾಣೆ ಮಾರಗಾನಿ ಈರಣ್ಣ
ಚಿಕ್ಕಂದಿ ಮ್ಯಾಲೆ ಕದನಾವೆ

ಅಂದವಾಡಿದ ತಾವು ಅಂದಿಯೆಜ್ಜೆಯ ಕಂಡೆ
ಅಂದ್ಯೆಲ್ಲ ಸೇರ್ಯವು ಮಾರಗಾನಿ ಈರಣ್ಣ
ಚಂದೂಡಿದ ಸಣ್ಣ ಮರುಳಾಗೆ

ಆಗಲೂವೋದ ಒಂದು ಜಗುಲಿಯಾಕಿಸ್ತ
ಆಗಲು ವೋದಾವೆ ಎರಡಂದಿ ಈರಣ್ಣನ
ಅಗಲೆಲ್ಲಗ್ಗೀಗೆ ಕರೆದಾವೆ

ದಾಟಿವೋದ ಕ್ವಾಟಿಗಳು ಕಟ್ಟಸ್ತ
ದಾಟಿವೋದಾವೆ ಎರಡಂಡಿ ಈರಣ್ಣನ
ರಾತ್ರಿ ಲಗ್ಗೆಗೆ ಕರೆದಾವೆ

ಕಟ್ಟಗೆ ನೇಣಿಕ್ಕಿ ಅಪ್ಪಯ್ಯ ಕುಂತಿದ್ದ
ಯಾವಲ್ಲಿ ಬಂದೋ ಚೆಲುವಂದಿ ಕ್ವಾಟೇಕೇರಿಯ
ಈರಾನ ಬಲವ ಮುರಿದ್ಯಲ್ಲ

ಎತ್ತಾಕೇಣಿಯ ನೇಣಿಕ್ಕಿ ಅಪ್ಪಯ್ಯ ಕುಂತಿದ್ದ
ಯಾವಲ್ಲಿ ಬಂದೋ ಚೆಲುವಂದಿ ಕ್ವಾಟೇಕೇರಿಯ
ಅಪ್ಪಾನ ಬಲವ ಮುರಿದೆಲ್ಲ

ಕೆಂದೂಳು ಕೆದರೂತ ಮುಂಬಾಲ ಬೀಸೂತ
ಬಂದಾವೆ ಕಾಡಂದಿ ಎದುರೀಗೆ ಈರಣ್ಣ ಕುಟ್ಟೆ
ಬಂದು ಮಾಡ್ಯಾವೆ ಕದನಾವೆ

ಕಾಲ್ದೂಳು ಕೆದರೂತ ಮುಂಬಾಲ ಬೀಸೂತ
ವೋದಾವೆ ಕಾಡಂದಿ ಎದುರೀಗೆ ಈರಣ್ಣ ಕುಟ್ಟೆ
ವೋಗಿ ಮಾಡ್ಯಾವೆ ಜಗುಳ

ದೊಡ್ಡ ದೊಡ್ಡ ಅಂದಿ ದೊಡ್ಡ ದೊಡ್ಡ ಕ್ವಾರೆಯಂದಿ
ದೊಡ್ಡದಾದಂದಿ ಚೆಲುವಂದಿ ಈರಣ್ಣನ
ದೊಡ್ಡೋನ ಬಲವ ಮುರಿದಾವು

ಸಣ್ಣ ಸಣ್ಣ ಅಂದಿ ಸಣ್ಣಾಕ್ವಾರೆಯಂದಿ
ಸಣ್ಣಾರದಂದಿ ಚೆಲುವಂದಿ ಕ್ವಾಟೇಕೇರಿಯ
ಅಣ್ಣಾನಬಲವ ಮುರಿದಾವು

ಅಂಕದ ಕ್ವೋಟೇಕೇರಿ ಬಿಂಕದೇರಿಮ್ಯಾಲೆ
ಪಂತಕ ನೂರಂದಿ ಮಡಿದು ಬಿದ್ದಾವೆ
ಕಂಚಿನುಂಗುರುದ ಕಿರುಬೆಳ್ಳು

ಅಲ್ಲದಕೇರಿ ಬೆಲ್ಲದೇರಿಮ್ಯಾಲೆ
ಮೆಲ್ಲಕೆ ನೂರಂದಿ ಮಡಿದು ಬಿದ್ದಾವೆ
ಬೆಳ್ಳಿಯುಂಗುರದ ಕಿರುಬೆರಳು

ಆಳೂರ ಮುಂದೆ ಅಂದೀಯ ಕಾಳಗ
ಆಳುಗೋಸಿಕೆರಿಯ ಮುಂದೆ ಈರಣ್ಣ
ಕೋಳು ವೋಗದ ಅರಿಯಾನೆ

ಬೆಂದೂರ ಮುಂದೆ ಅಂದೆ ಅಂದೀಯಾ ಕಾಳಗ
ಬೆಂದಂತಗೋಸಿಕೆರೆ ಊರಾ ಮುಂದೆ
ಈರಣ್ಣನಂದಿವೋಗಾದ ಅರಿಯಾನು

ಅನ್ನೆರಡು ಸಾವಿರ ಅಂದೀಯ ಇಂಡೀಗೆ
ಗುಂಡೂ ಬೀಸಿ ಕೊಂದಾನೆ ಸಿರಿಯಣ್ಣ
ಉತ್ತದಮ್ಯಾಲೆ ಅಂದಿ ತಲೆಯ ವಡೆದಾನೆ

ಇಪ್ಪತ್ತು ಸಾವಿರ ಅಂದೀಯ ಇಂಡೀಗೆ
ಸಿಪ್ಪ ಕಳಿದಾನೆ ಸಿರಿಯಣ್ಣ ಉತ್ತದಮ್ಯಾಲೆ
ಚಿಕ್ಕಂದಿಗಳ ತಲೆಯಾ ವಡೆದಾನು

ಚಿಕ್ಕಾ ಉತ್ತದಮ್ಯಾಲೆ ಇಕ್ಕ್ಯಾವೆ ಕಾಳಗವ
ಅಪ್ಪಾ ಮಕ್ಕಳು ಅರಿಯಾರ ಈರಣ್ಣಾನ
ವುಟ್ಟು ಮಾಡ್ಯಾವೆ ಎರಡಂದಿ

ಸಣ್ಣಾವುತ್ತದ ಮ್ಯಾಲೆ ಆಣ್ಣ್ಯಾರೆ ಕಾಳಗವ
ಅಣ್ಣಾತಮ್ಮಾರು ಅರಿಯಾರು ಈರಣ್ಣನ ಕಾಳಗವ
ಮಣ್ಣ ಮಾಡ್ಯಾವೆ ಎರಡಂದಿ