ಭಾಗಮೂರು

ಲಿಂಗಯಿಕನಾಗವನೆ ಸಿವನಲ್ಲಿ

ಒಣಕೆ ಓಣಕೇಲಿ ಬಂಟ ಮೊಣಕಾಲಲಿ
ಸಮರಂತದನಕ ಸಿಂಪಮ್ಮ ಸಿರಿಯಣ್ಣ ಉತ್ತದಮ್ಯಾಲೆ
ಮೊಣಕಾಲೂರಿ ಮಡಿದಾನೆ

ಬಿಲ್ಲು ಬಿಲ್ಲಲಿ ಬಂಟ ಬಿಲ್ಲು ಸಮರಂತ
ಕ್ಯಾಸರನೀಬತ್ತಿ ಬೆವತಾವೆ ಮಾರನೋರ
ದೇಸಪತಿ ಕಾದಿ ಮಡಿದಾನೆ

ಕಂಡಕಾದಾವೆ ಮುಂಡ ಮುಣ್ಣುಂಡಾವೆ
ಚಂದ್ರನೀಬುತ್ತಿ ಬೆವುತಾವೆ ಮಾರನೋರ
ಚಂದ್ರಾಪತಿ ಕಾದಿ ಮಡಿದಾನೆ

ಆಸೆ ಕೊತ್ತಲದಾಗ ಈಸೆ ಕೊತ್ತಲಬಿದ್ದು
ದಾಟವೋಗಾನೆ ತಲಿ ಬಿದ್ದು ಈರಣ್ಣನ ಬಾಕು
ಬಿದ್ದಾವೂ ರಣದಾಗ

ಮುಂದ್ಲು ಕತ್ತಲದಾಗ ಇಂದ್ಲು ಕೊತ್ತಲಬಿದ್ದು
ಮುಂದೋಗನೆ ತಲಿಬಿದ್ದು ಈರಣ್ಣಾನ
ಮುಂಡಾ ಬಿದ್ದಾವೆ ರಣದಾಗೆ

ಸತ್ತಾ ನಮ್ಮ ಈರ ಸತ್ತಾ ನಮ್ಮ ಸಿರಿಯ
ಸತ್ತ ಮಾರನೋರ ಮಗನೀರ ಸಿರಿಯಣ್ಣ
ಸತ್ತು ಸತ್ತೈವ ಪಡೆದಾನೆ

ಮಡಿದನಲ್ಲೇ ಈರ ಮಡಿದಾನಲ್ಲೇ ಸೂರ
ಮಡಿದ ಮಾರನೋರ ಮಗ ನೀರ ಸಿರಿಯಣ್ಣ
ಮಡುದು ಕೀರುತಿಯಾ ಪಡೆದಾನೆ

ಬಿದ್ದಾನೆ ಈರಣ್ಣ ಬಂಡಿಯಂಬು ಮೇಲಾಗಿ
ವಜ್ಜರದ ಬಾಕು ಅಡಿಯಾಗಿ ಈರಣ್ಣ ಬಿದ್ದ
ಸೂರಿದನಿಗೆ ಎದುರಾಗಿ

ಮಡುದಾನೆ ಈರಣ್ಣ ಇಡಿಯಂಬು ಮೇಲಾಗಿ
ಅವಳಾದ ಬಾಕು ಅಡಿಯಾಗಿ ಈರಣ್ಣ
ಮಡಿದ ಸೂರಿದನಿಗೆ ಎದುರಾಗಿ

ಅಲುಸ್ವಾರೆ ತೊಳೆದು ಬಾಗುಲಿಗೆ ವೊಯ್ದಾಗ
ಈರಾನ ಸುದ್ದಿ ಅರುದಾವೆ ಸಿಂಪಮ್ನ
ಮಗ ಸತ್ತ ಸುದ್ದಿ ಒಣ್ಯಾಗ ಅರುದಾವೆ

ತುಪ್ಪಾದ ಸ್ವಾರೆ ತೊಳೆದು ಬಚ್ಚಲಿಗೆ ಒಯ್ದಾಗ
ಅಪ್ಪಾನ ಸುದ್ದಿ ಅರುದಾವೆ ಸಿಂಪಮ್ಮ
ಅಟ್ಟ ಸಾಲ್ಯಾಗ ಬಿದ್ದಿರುತಾಳೆ

ಸುದ್ದಿ ತಂದಣ್ಣಾಗೆ ಮಜ್ಜುಗೋಗಾರಿಟ್ಟು
ಸುದ್ದೇನೋ ಮಗನೆ ರಣದಾಗ ಸ್ವಾಮಾರಾದ
ಮದ್ಯಾನಕೀರಣ್ಣ ಮಡುದಾನೆ

ಆವಳಿ ತಂದಣ್ಣಾಗ ಅಲುವಾಗರಿಟ್ಟು
ಆವಾಳೇನೋ ಮಗನೇ ರಣದಾಗ ಸ್ವಾಮಾರಾವ
ವ್ಯಾಳ್ಯಾಕೀರಣ್ಣ ಮಡುದಾನೆ

ಅರಿಯಾ ನೀರಾಗ ಅಳದೀಯ ವಗೆವೋಳೆ
ಆವಳಾದುಂಗುರದ ಅಗಸೂತಿ ಕ್ವಾಟೇಕೇರಿಯ
ಆವಳಿಯನೇಳೆ ನಮಗೀಟು

ನಾವೇನು ಏಳೇವು ನಾವೇನು ಕೇಳೇವು
ಗಾಯಾದ ಇಟ್ಟೆ ಬಲು ಬಟ್ಟೆ ಸ್ವಾಮಾರದ
ವ್ಯಾಳಾಕೀರಣ್ಣ ಮಡುದಾನೆ

ನಿಂತಾ ನೀರಾಗಾ ಕೆಂಚೇಗೆ ಬೆಳಗೋಳೆ
ಕಂಚೀನುಂಗುರದ ಅಗಸೋತಿ ಕ್ವಾಟೇಕೇರಿಯ
ರಾಣ್ಯಾವೇನೇಳೇ ನಮಗೀಟು

ನಾವೇನು ಏಳೇವು ನೀವೇನು ಕೇಳೀರಿ
ನೆತ್ತರದಾ ಬಟ್ಟೆ ಬಲುಬಟ್ಟೆ ಸ್ವಾಮಾರದೊತ್ತಿಗೆ
ಈರಣ್ಣನು ಮಡುದಾನೆ

ತಾಯಳದೀರಿ ತಾಯಿ ಸಿಂಪಮ್ಮ ಅಳದೀರಿ
ಅಕ್ಕಯ್ಯ ಸಿಂಪಮ್ಮ ಅಳದೀರಿ ನೀವಮ್ಮ
ದಿಟ್ಟನಾಗ್ಯಾವನೆ ಸಿವನಲ್ಲಿ

ತಂಗಿಯಳದಿರೆ ತಂಗ್ಯಮ್ಮ ಆಳದೀರೆ
ತಂಗಿ ಸಿಂಪಮ್ಮ ಆಳದೀರೆ ನಿಮ್ಮಗುನು
ಲಿಂಗಯಿಕಾನಾಗವನೆ ಸಿವನಲ್ಲಿ

ಕಡುವಾವೊತ್ತಿಗೆ ಇಡಿದಾರೀರಣ್ಣಾನ
ಕಡಿವಂತಾ ಮೊಸರು ಕಡಿಗಟ್ಟು ಎಣ್ಣರಿಸಿಣವಾ
ಬೇಗಾನೆ ತರಲೇಳೀರೋ

ಕುಟ್ಟೂವೊತ್ತೀಗೆ ಕಂಡಾರೀರಣ್ಣಾನ
ಕಟ್ಟೋ ಬತ್ತವ ಕಡಿಗಿಟ್ಟು ಎಣ್ಣಿರಿಸಿಣವ
ನಿಸ್ತ್ರೇರು ಬೇಗಾನೆ ತರಲೋಗಿ

ಪೆಟಗ್ಯಾಗಳ ಪಟ್ಟೇದಚ್ಚಡವ
ಬೆಟ್ಟಿಟ್ಟು ಮೊಳಕೆ ಅರುದಾರೆ ಈರಣ್ಣಾನ
ಅರಿಯು ನೆತ್ತರವಾ ಕಟ್ಟ್ಯಾರು

ಮಾಲ್ಯಾದ ಮ್ಯಾಗಾಳ ಸಾಲ್ಯಾದಚ್ಚಡವ
ಗೇಣಿಟ್ಟು ಮೊಳಕಾ ಅರುದಾರು ಈರಣ್ಣಾನ
ನೆತ್ತರದಾ ಗಾಯಾವ ಕಟ್ಟ್ಯಾರು

ಏರಿಯಿಂದಾಕ ವೊರಡಾವೆರಡಂದಲ
ವೋಗಿದ್ದ ಕಂಡೆ ವೊರಡಾಲಿಲ್ಲ ಈರಣ್ಣನ
ಮ್ಯಾಲಿಟ್ಟರು ಸಣ್ಣಾ ಮರುಳಾಗೆ

ಕಟ್ಟೆ ಮರುಳಾಮ್ಯಾಲೆ ನೆತ್ತರಸವವು ಬಂತು
ಅಪ್ಪ ಸಿರಿಯಣ್ಣಗ ಉಳುವಿಲ್ಲ ಸಿಂಪಮ್ಮ
ಕಪ್ಪುರದ ಬಾಯಿ ಬಿಡುತಾಳೆ

ಏರಿ ಇಂದಕ್ಕಾಗಿ ಬೆಂಕಿ ಉರಿಯಾತಿತ್ತು
ಈರ ಸಿರಿಯಣ್ಣನ ಉಳುವಿಲ್ಲ ಸಿಂಪಮ್ಮ
ಈಳ್ಯಾದ ಬಾಯಿ ಬಿಟ್ಟಳುತಾಳೋ

 

ಭಾಗನಾಲ್ಕು

ರೂವಾರದಲಗು

ಜಂಗ ನೋಡು ಜಂಗೀನ ದನಿಯ ನೋಡೆ
ಈರಣ್ಣನ ಬರುವೊಂದುಲುಪ ನೋಡೆ

ಅಲ್ಲವೈತೆ ಅಂಗಡ್ಯಾಗ ಬೆಲ್ಲವೈತೆ ಸೀರ್ಯಾದಾಗ
ಮಲ್ಲಿಗೈದಾವೆ ವನದಾಗೆ ಈರಣ್ಣಾನ
ಸೊಲ್ಲೈದಾವೆ ನಮ್ಮ ವನದಾಗೆ

ಅಂಕವೈತೆ ಅಂಗಡ್ಯಾಗ ಬಿಂಕವೈತೆ ಸೀರ್ಯಾದಾಗ
ಸಂಪಿಗೈದಾವೆ ವನದಾಗೆ ಈರಣ್ಣಾನ
ಸಂಪತ್ತೆ ನಮ್ಮ ಮನೆಯಾಗೆ

ಆವುಕಾವರ ಕೂಟೆ ಆಡುಮಕ್ಕಳ ಕೂಟೆ
ಸ್ವಾಮಿ ಈರಣ್ಣ ಮೈದುಂಬಿ ನಿಡಗಲ್ಲು
ರೂವಾರದಲಗು ಬರಲಂದು

ಎತ್ತು ಕಾವರಕೂಟೆ ಚಿಕ್ಕಮಕ್ಕಳ ಕೂಟೆ
ಅಪ್ಪ ಈರಣ್ಣ ಮೈದುಂಬಿ ನಿಡುಗಲ್ಲು
ಚಿತ್ತಾರದಲಗು ಬರಲಂದೆ

ಎತ್ತು ಮಾರಿದೊನ್ನು ದಟ್ಟಿ ಪದರಿಗೊಯ್ದು
ವೊಕ್ಕರು ನಿಡಗಲ್ಲು ವೊಳೆತಾಕ ಈರಣ್ಣಾನ
ವುಟ್ಟಿಸುತಾರೆ ಬಿಳಿಯಲಗು

ಅವು ಮಾರಿದೊನ್ನು ಪಾಗಿನ ಪದರಿಗೊಯ್ದು
ವೋದರು ನಿಡುಗಲ್ಲು ವೊಳೆತಾಕೆ ಈರಣ್ಣಾನ
ಮಾಡಿಸುತಾರೆ ಬಿಳಿಯಲಗು

ಚಿಕ್ಕನಿಡಗಲ್ಲು ಚಿತ್ತಾರದೇಣಿಲಿ
ಸೆಟ್ಟಿ ಕಮ್ಮಾರ ಕೋಡಿಮೂಡಿ ತಿರಿವೂಡಿ
ವುಟ್ಟಸುತಾರೆ ಬಿಳಿಯಲಗು

ರಾಯ ನಿಡಗಲ್ಲು ರೂವಾರದೇಣಿಲಿ
ಜಾಣ ಕಮ್ಮಾರ ಕಲಿಮಾಡಿ ತಿದಿವೂಡಿ
ಮಾಡಿಸುತಾರೆ ಬಿಳಿಯಲಗು

ಉಪ್ಪರಿಗ್ಯಾಗ ಅತ್ತು ಕಮ್ಮಟನಿಟ್ಟು
ಇಟ್ಟಸಿರಿಗಂಧ ಬೆವರೂತ ಈರಣ್ಣಾನ
ವುಟ್ಟಸುತಾರೆ ಇರಿಯಲಗು

ವಾವುರಿಗ್ಯಾಗ ಆರು ಗುಮ್ಮಟನಿಟ್ಟು
ಈರಸಿರಿಗಂಧ ಬೆವರೂತ ಈರಣ್ಣಾನ
ಮಾಡಿಸುತ್ತಾರೆ ಬಿಳಿಯಲಗು

ಅಲಗು ತರುವೋರು ಅವರೆಲ್ಲಿ ಮಾಡುಂಡಾರೆ
ಯಾವಾರೆ ಮರದ ನೆರಳಾಗೆ ಮಾಡುಂಡಾರೆ
ಈರಣ್ಣಗಲಗ ತರುವೋರು

ಕತ್ತಿ ತರುವೋರು ಮತ್ತೆಲ್ಲಿ ಮಾಡುಂಡಾರೆ
ವುತ್ತುತ್ತಿ ಮರದ ನೆರಳೀಗೆ ಮಾಡುಂಡಾರೆ
ಅಪ್ಪಯ್ಗೆ ಅಲಗ ತರುವೋರು

ಈರಾನ ಅಲಗೀಗೆ ಏನೇನು ಸುಂಗಾರ
ನ್ಯಾರಾಕ ಬೆಳೆದ ಗಜನಿಂಬೆ ಚಂದ್ರಗಾವಿ
ಆದಾವು ಈರಣ್ಣನ ಅಲಗೀಗೆ

ಅಪ್ಪಾನ ಅಲಗೀಗೆ ಮತ್ತೇನು ಸಿಂಗಾರ
ವಪ್ಪಾಕ ಬೆಳೆದ ಗಜನಿಂಬೆ ಚಂದ್ರಗಾವಿ
ಒಪ್ಪಾದವು ಈರಣ್ಣಾನ ಅಲಗೀಗೆ

ಚಿಕ್ಕಬೆಳಗೆರೆ ಅತ್ತುಸುತ್ತಿನಕ್ವಾಟೆ
ಮತ್ತೆ ಡೊಂಕುಣಿ ವುಲಿಮುಕ ವೂರಮುಂದೆ
ಅಪ್ಪಯ್ಯಗಲಗ ತರುವೋರು

ರಾಯ ಬೆಳಗೆರೆ ಆರು ಸುತ್ತಿನ ಕ್ವಾಟೆ
ಮ್ಯಾಲೆ ಡೊಂಕಣಿ ವುಲಿಮುಕದೂರಮುಂದೆ
ಈರಣ್ಣಗಲಗ ತರುವೋರು

ಈರನಲಗು ಬಂದು ಏರಿಮ್ಯಾಲೈದಾವೆ
ರಾಯ ಬೆಳಗೆರೆಯೋರು ತಡೆದಾರು ಕ್ವಾಟೆಕೆರೆ
ಈರಣ್ಣಂಬೋದೆ ಅರಿಯಾರು

ಅಪ್ಪನಲಗು ಬಂದು ಕಟ್ಟೆಮ್ಯಾಲೈದಾವೆ
ಚಿಕ್ಕ ಬೆಳಗೆರಿಯೋರು ತಡೆದಾರೆ ಕ್ವಾಟೇಕೆರೆಯ
ಅಪ್ಪಯ್ಯಾಂಬೋದೆ ಅರಿಯಾರು

ದುಂಡಲಗು ಬಂದಾವು ಅಂದವಾಗೋ ಈರಣ್ಣ
ತೊಂಡಲು ಬಾಸಿಂಗದರಿವಾಣ ಆರುತಿ
ಬಂದಾವು ಅಂದವಾಗಿ ಈರಣ್ಣನಲಗೀಗೆ

ಅಸಿಯಲಗು ಬಂದಾವು ಅಸನಾಗೋ ಈರಣ್ಣ
ಎಸಲ ಬಾಸಿಂಗ ಅರವಾಣ ಆರುತಿ
ಬಂದಾವು ಅಸವಾಗೋ ಈರಣ್ಣ ಅಲಗೀಗೆ

ಅಲಗಲಗು ಆದಾರೆ ಅವರೈವರೆದ್ದಾರೆ
ಕೆದರೀದ ಮಂಡೆ ಕೊಡವೂತ ಕ್ವಾಟೆಕೆರಿಯ
ಕಲಿವೀರ ಎದ್ದಾನೆ ಅಲಗೀಗೆ

ವೊಂಬೊಂಬು ಅಂದಾರೆ ಗಂಬೀರೆದ್ದಾರೆ
ತುಂಬೀದ ಮಂಡೆ ಕೊಡವೂತ ಕ್ವಾಟೆಕೆರಿಯ
ಗಂಬೀರೆದ್ದಾನೆ ಅಲಗೀಗೆ

ಅಲಗೀಗೆ ಬಾರೋ ಚೆಲುವರಾಯರಗಂಡ
ನಗುವೋರ ಅಲ್ಲ ಮುರಿವೋನೆ ಕ್ವಾಟೆಕೆರಿಯ
ಕರಿವೀರ ಬಾರೋ ಅಲಗೀಗೆ

ವೊಂಬೀಗೆ ಬಾರೋ ಸೆಂಬುರಾಯರ ಗಂಡ
ಅಂಗೆಂಬೋರ ಅಲ್ಲ ಮುರವೋನೆ ಕ್ವಾಟೆಕೆರೆಯ
ಗಂಬೀರ ಬಾರೋ ಅಲಗೀಗೆ

ಈರಾನ ಗುಡಿತಂಕ ನೇರಾಲ ಮರತಂಕ
ಈರ ಸಿರಿಯಣ್ಣ ಗುಡಿತಂಕ ತನಮಕ್ಕಳ
ಓಡ್ಯಾಡುತಾರೆ ಅಲಗೀಗೆ

ಅಪ್ಪಾನ ಗುಡಿತಂಕ ಇಪ್ಪೀಯ ಮರತಂಕ
ಅಪ್ಪ ಸಿರಿಯಣ್ಣನ ಗುಡಿತಂಕ ತನಮಕ್ಕಳ
ಸುತ್ತಾಡುತಾರೆ ಅಲಗೀಗೆ

ನ್ಯಾರನ್ಯಾರನ್ನೋರು ನೀಲಿಪಾವುಡದೋರು
ಬಾಳೆಯಲೆಯಂಗೆ ಬಳುಕೋರು ಬಂದೈದಾರೆ
ಈರಣ್ಣ ನಿಮ್ಮ ಅಲಗೀಗೆ

ಅಣ್ಣಾನ ಅಲಗೀಗೆ ಇನ್ನೇನು ಸುಂಗಾರ
ಅಣ್ಣಗಳು ತಂದ ವಲಮೊಲೆ ಚಂದ್ರಗಾವಿ
ತಂದಾರೀರಣ್ಣ ಅಲಗೀಗೆ

ಅಪ್ಪಾನ ಅಲಗೀಗೆ ಮತ್ತೇನು ಸಿಂಗಾರ
ವೊಕ್ಕಾರು ತಂದ ವಲಮೊಲೆ ಚಂದ್ರಗಾವಿ
ಕಟ್ಯಾರೀರಣ್ಣನ ಅಲಗೀಗೆ

ಅಲಗೀಗೆ ನಿಂಬೇಯಣ್ಣು ಕೊರಳಿಗೆ ತುಂಬೆತಾಳಿ
ಇಂದ್ಯಾವನಾಡ ದೊರಿಮಗನೆ ಈರಣ್ಣ
ವೊನ್ನಲಗಿನಾಗ ಇನುವಂದ

ವೊಂಬಿಗೆ ನಿಂಬಿಯಣ್ಣು ಕೊರಳಿಗೆ ತುಂಬೆತಾಳಿ
ನಿಂದ್ಯಾವನಾಡ ದೊರಿಮಗನೆ ಈರಣ್ಣ
ಇರಿಯಲಗಿನಾಗ ಇನುವಂದ

ಮೂಡಲಗಿನಾಗ ಈರಲಗುಯಾವಾದು
ಮಾರೀಯ ಮ್ಯಾಲೆ ಅರಳೊತ್ತಿ ಈರಲಗು
ಈರ ಸಿರಿಯಣ್ಣನ ಇಡುದಾರೆ

ಅತ್ತಲಗಿನಾಗ ಜೊತ್ತಲಗುಯಾವಾದು
ನೆತ್ತೀಯ ಮ್ಯಾಲೆ ಅರಳೊತ್ತಿ ಈರಲಗು
ಅಪ್ಪ ಸಿರಿಯಣ್ಣನ ಇಡುದಾರೆ

ಅತ್ತೆಂಟು ಅಲಗು ತಿಟ್ಟೀಗತ್ಯಾವಂದು
ಪಟ್ಟೆ ದಟ್ಟಾಗ ಬಿಗುದಾರೆ ಸಿಂಪಮ್ಮನಪುತ್ರ
ಬಳಬಳನೆ ಬಳಿಕ್ಯಾನೆ

ಆರೆಂಟು ಅಲಗು ತೋಳಿಗೊತ್ಯಾವಂದು
ಸಾಲೆದಟ್ಯಾಗ ಬಿಗುದಾರೆ ಸಿಂಪಮ್ಮಾನ
ಬಾಲ ಬಳಬಳನೆ ಬಳಿಕ್ಯಾನೆ

ಮುತ್ತು ಕಟ್ಟೀದಂಗ ಕಟ್ಯಾರೀರನಲಗು
ಚಿಕ್ಕಯಲಗಟ್ಟೆ ಪಡುವಾಲ ದಿನ್ನ್ಯಾಗ
ಕಟ್ಟ್ಯಾರೀರಣ್ಣಾನ ಇರಿಯಲಗು

ವೊನ್ನು ಅಣ್ಣೀದಂಗೇ ಅಣ್ಣಾದೀರನಲಗು
ಸಣ್ಣಯಲಗಟ್ಟೆ ಪಡುವಾಲ ದಿನ್ನ್ಯಾಗ
ಅಣ್ಣಾರೀರಣ್ಣನ ಇರಿಯಲಗು

ಕರಿಯ ಕಾಸಿದಟ್ಟ ಅರುವತ್ತು ವಲುಕು ಅಕಿ
ದೂರಿ ಮಾರನೋರ ಮಗನೀರ ಸಿರಿಯಣ್ಣ
ಹಿರಿಯಲಗಿನಾಗ ಇನುವಂದ

ಕೆಂಪು ಕಾಸಿದಟ್ಟಿ ಎಂಬತ್ತು ಮಲಕನಾಕಿ
ಇಂದಿ ಮಾರನೋರ ಮಗನೀರ ಸಿರಿಯಣ್ಣ
ವೊನ್ನಲಗಿನಾಗ ಇನುವಂದ

ನೆತ್ತಿಮ್ಯಾಗಾಳಲಗು ಕಿತ್ತಾರೆಬರಾವು
ಅಪ್ಪ ಈರಣ್ಣ ದಯವಾಗೊ ತನಮಕ್ಕಳು
ವೊತ್ತೆ ವೊಯ್ವಾಗ ಬೆವತಾರೋ

ಕೆನ್ನೆ ಮ್ಯಾಗಲಗು ಸೊನ್ನೀಗೆ ಬರಾವು
ಅಣ್ಣ ಈರಣ್ಣ ದಯವಾಗೋ ತನಮಕ್ಕಳು
ವೊತ್ತೆ ವೊಯ್ದಂಗೆ ಬೆವುತಾರೆ

ಅಪ್ಪಾನ ಗುಡಿಯಾಗ ಇಟ್ಟುಗಾರೆಮುಳ್ಳು
ಅಣ್ಣ ಈರಣ್ಣ ನಲಗೀನ ಕ್ವಾಮಾರಾರು
ನುಚ್ಚು ನುಚ್ಚಾಳ ತುಳುದಾರೆ

ವೋಣ್ಯಾಗ ಇರುವೋವು ಈರುಗಾರೆಮುಳ್ಳು
ಸ್ವಾಮಿ ಸಿರಿಯಣ್ಣ ಅಲಗೀನ ಕ್ವಾಮಾರಾರು
ಸೂರ ಸೂರಾಳ ತುಳುದಾವೆ

ಅಲಗು ಮೆರೆದಾವೆ ಆದ್ಯೇವು ಮೆರೆದಾವೆ
ಅಳದಿಪಾವುಡವೆ ಮೆರೆದಾವೆ ಸಿಂಪಮ್ಮಾನ
ಬಾಲನ ಕೈಯ್ಯಲಗು ಮೆರೆದಾವೆ

ಚಿಕ್ಕ ಚಿಕ್ಕೇನಳ್ಳಿ ಸೆಟ್ಯಾರ ಎಂಡಾರು
ಮತ್ತಲ್ಲು ಸುಲುದು ಮಡಿಯುಟ್ಟು ಈರಣ್ಣಾನ
ಅದ್ಯೇವಕಾರಳಿಯ ಬೆಳಗ್ಯಾರೆ

ರಾಯ ಚಿಕ್ಕೇನಳ್ಳಿ ರಾಯಾರ ಎಂಡಾರು
ತಾವಲ್ಲು ಸುಲುದು ಮಡಿಯುಟ್ಟ ಈರಣ್ಣಾನ
ಅಲಗೀಗಾರುತಿಯ ಬೆಳಗ್ಯಾರೆ

ಮುತ್ತು ಬಿಚ್ಚಿದಂಗೆ ಬಿಚ್ಯಾರೀರನಲಗು
ಚಿಕ್ಕಯಲಗಟ್ಟೆ ಪಡುವಾಲ ದಿನ್ನ್ಯಾಗ
ಬಿಚ್ಯಾರೀರಾನ ಬಿಳಿಯಲಗು

ವೊನ್ನು ಬಿಚ್ಚಿದಂಗ ಬಿಚ್ಯಾರೀರನಲಗು
ಸಣ್ಣ ಯಲಗಟ್ಟೆ ಪಡುವಾಲ ದಿನ್ನ್ಯಾಗ
ಬಿಚ್ಯಾರೀರಣ್ಣನ ಬಿಳಿಯಲಗು