ಕರಡಿ ಬುಳ್ಳಪ್ಪನನ್ನು ದಿಳ್ಳಿಯ ಕಡೆಯಿಂದಲೇ ಬಂದವನೆಂದು ಗೊಲ್ಲರು ಹೇಳುತ್ತಾರೆ. ಕಥನ ಗೀತೆಯಲ್ಲಿ ಕರಡಿ ಬುಳ್ಳಪ್ಪನನ್ನು ಅಣ್ಣನೆಂದೂ, ತಂದೆಯೆಂದೂ ಕರೆಯಲಾಗಿದೆ. ಕರಡಿ ಬುಳ್ಳಪ್ಪ ಕಾಡುಗೊಲ್ಲರ ನಡುವೆ ಪ್ರಮುಖ ವ್ಯಕ್ತಿಯಾಗಿದ್ದವನು ನಂತರ ತನ್ನ ಸತ್ಕಾರ್ಯದ ಮೂಲಕ ದೇವತಾಸ್ವರೂಪಿಯಾದವನೆಂದು ತಿಳಿದುಬರುತ್ತದೆ. ಆದರೆ ಈ ಕರಡಿ ಬುಳ್ಳಪ್ಪ ಎಲ್ಲ ಗೊಲ್ಲರಹಟ್ಟಿಗಳಲ್ಲಿಯೂ ಆರಾಧ್ಯ ದೈವವಾಗಿ ನೆಲೆಯಾದಂತಿಲ್ಲ. ಈತ ದಿಳ್ಳಿಯಿಂದ ಬಂದದ್ದು ಹೇಗೆಂಬುದು ಕುತೂಹಲದ ವಿಷಯ. ದಕ್ಷಿಣ ಭಾರತದ ಅನೇಕ ವೀರರು ದಿಳ್ಳಿಯಿಂದ ಬಂದವರೇ ಎಂಬ ರೀತಿಯಲ್ಲಿ ದಂತ ಕಥೆಗಳಿವೆ. ಚಿತ್ರದುರ್ಗದ ಮದಕರಿನಾಯಕರ ಪೂರ್ವಜರು ದಿಳ್ಳಿಯಿಂದ ಬಂದವರೇ ಎಂಬಂತೆ ಕಥೆಗಳಿವೆ. ಅವರು ಅಲ್ಲಿಯೇ ಮದಗಜವನ್ನು ಭಂಗಿಸಿ ಮದಕರಿನಾಯಕ ಎಂಬ ಬಿರುದು ಪಡೆದವರು. ಅಷ್ಟೇ ಅಲ್ಲ ದಕ್ಷಿಣ ಭಾರತದ ಅನೇಕ ಗ್ರಾಮಗಳಲ್ಲಿ, ರಾಮ, ಲಕ್ಷ್ಮಣ, ಪಾಂಡವರು ಬೀಡು ಬಿಟ್ಟಿದ್ದರೆಂಬ ದಂತಕಥೆಗಳಿದ್ದು ಅವರ ಹೆಸರಿನಲ್ಲಿಯೇ ಊರು, ಕೇರಿ ಹಳ್ಳ ಕೊಳ್ಳ ಕೆರೆ ಕಟ್ಟೆಗಳಿವೆ. ಹೀಗಾಗಿ ಕರಡಿ ಬುಳ್ಳಪ್ಪನೂ ಸಹ ದಿಳ್ಳಿಯಿಂದಲೇ ಬಂದವನೆಂದು ಕಾಡುಗೊಲ್ಲರು ಹೆಮ್ಮೆಯಿಂದ ಹೇಳಿಕೊಳ್ಳುವುದಿದೆ. ಇದರ ಜತೆಗೆ ದಿಳ್ಳಿಯ ಸುಲ್ತಾನರ ಪ್ರಸ್ತಾಪವೂ ಈ ಗೀತೆಯಲ್ಲಿರುವುದು ಕುತೂಹಲಕರ. ಆದರೆ ಆತ ಯಾವ ಸುಲ್ತಾನ ಎಂಬುದರ ಪ್ರಸ್ತಾಪವಿಲ್ಲ. ಜನಪದ ಗೀತೆಗಳು ಸಾಮಾನ್ಯವಾಗಿ ತಮ್ಮ ನಡುವಣ ವೀರನ ಹೆಸರನ್ನು ಗೌರವಿಸುತ್ತ ಹೋಗಿ ಅವನ ಎದುರುನಿಂತ ನಾಯಕರ ಅಥವಾ ಖಳ ನಾಯಕರ ಹೆಸರನ್ನು ಪ್ರಸ್ತಾಪಿಸುವುದಿಲ್ಲ. ಹೀಗಾಗಿ ದಿಳ್ಳಿಯಿಂದ ಬಂದ ಬಿಲ್ಲಂಬಿನ ದೊರೆಗಳು ಯಾರು ಎಂಬುದು ಅಸ್ಪಷ್ಟ. ಜತೆಗೆ ಇವರ ಹೆಸರಿನಲ್ಲಿ ಕಲ್ಲು, ತಾಮ್ರಪಟ ಶಾಸನಗಳು ನಿರ್ಮಾಣವಾಗಿರುವುದಾಗಿಯೂ ಗೀತೆಯಲ್ಲಿ ಒಂದೆರಡು ಪದ್ಯಗಳಿವೆ. ಅಲ್ಲದೆ ‘ಸೆಟ್ಟಿ ಬುಳ್ಳಣ್ಣಾನ ಮಕ್ಕಳು ಸಮರಂತಾರು’ ಎಂಬ ಮಾತೂ ಇದೆ. ಹೀಗಾಗಿ ಕರಡಿ ಬುಳ್ಳಪ್ಪ ಸ್ಥಳದಿಂದ ಸ್ಥಳಕ್ಕೆ, ತಿರುಗುವ ದನಗಾಹಿ ಇಲ್ಲವೇ ವ್ಯಾಪಾರಸ್ಥನಿರಬಹುದು. ಈತ ಬೆಳಗೆರೆ ನಾರಣಾಪುರದ ವೇದಾವತಿ ನದಿ ದಂಡೆಯಲ್ಲಿ ತನ್ನನ್ನು ತಾನೆ ಬಲಿಕೊಟ್ಟು ಕೊಂಡಿರಬಹುದು. ಆತನ ಹೆಸರಿನದಲ್ಲದ ಆದರೆ ಜಲದಿಬಪ್ಪರಾಯ ಎಂಬ ಹೆಸರಿನಲ್ಲಿ ಸಿಡಿತಲೆಕಲ್ಲು ಮತ್ತು ಒಂದು ಪುಟ್ಟ ದೇವಸ್ಥಾನವಿದೆ. ಅಲ್ಲಿ ಪ್ರಚಲಿತವಿರುವ ದಂತ ಕಥೆಗೂ ಈ ಕಥನಗೀತೆಯ ವಿವರಗಳಿಗೂ ಅಷ್ಟು ಸಂಬಂಧ ಕಂಡುಬರುವುದಿಲ್ಲ. ಈ ಗೀತೆಗೆ ಬೇರೆ ಬೇರೆಯ ದನಿ ಅಥವಾ ಸೊಲ್ಲು ಗಳಿರುವುದಿಲ್ಲ.

 

ಕರಡಿ ಬುಳ್ಳಪ್ಪ ಗೀತೆ

ಅಣ್ಣನ್ನ ನೆನೆದಾರೆ ವೊನ್ನು ಮೂಗಾಳುಂಟು
ಸಣ್ಣ ಸೀರುಂಟು ಉಡುವಾಕ
ಸಣ್ಣ ಸೀರುಂಟು ಉಡುವಾಕ ಡಿಲ್ಲೀಯ
ಬಣ್ಣದ ಕರಡೀಯ ನೆನದಾರೆ

ಅಪ್ಪಾನ ನೆನೆದಾರೆ ಮುತ್ತು ಮೂಗಾಳುಂಟು
ಪಟ್ಟೇದ ಸೀರುಂಟು ಉಡುವಾಕ
ಪಟ್ಟೇದ ಸೀರುಂಟು ಉಡುವಾಕ ಡಿಲ್ಲೀಯ
ಪಟ್ಟದ ಕರಡೀಯ ನೆನೆದಾರೆ

ಅಣ್ಣನ್ನ ನೆನೆದಾರೆ ವೊನ್ನು ಮೂಗಳುಂಟು
ಇನ್ನು ನನ್ನ ಕುಲಕ ರತುನಾವೆ
ಇನ್ನು ನನ್ನ ಕುಲಕ ರತುನಾವೆ ಡಿಲ್ಲೀಯ
ಬಣ್ಣದ ಕರಡೀಯ ನೆನೆದಾರೆ

ಅಪ್ಪನ್ನ ನೆನೆದಾರೆ ಮುತ್ತಿನ ಚತ್ರಿಗಾನ
ಮತ್ತು ನನ್ನ ಕುಲಕೆ ರತುನಾವೆ
ಮತ್ತು ನನ್ನ ಕುಲಕೆ ರತುನಾವೆ ಡಿಲ್ಲೀಯ
ಪಟ್ಟದ ಕರಡೀಯ ನೆನೆದಾರೆ

ಅಣ್ಣನ್ನ ನೆನೆದಾರೆ ಚಿನ್ನ ಚತ್ರಿಗಾನ
ಇನ್ನು ನನ್ನ ಕುಲಕ ರತುನಾವೆ
ಇನ್ನು ನನ್ನ ಕುಲಕ ರತುನಾವೆ ಡಿಲ್ಲೀಯ
ಬಣ್ಣದ ಕರಡೀಯ ನೆನೆದೇನ

ಕಾಗೆ ಗೂಗೆ ಕೋಟೆ ಸಾರಿಸ್ತಮಟಗಳ
ಸಾರೀದ ಮಲಿಯಾ ಚವಡೀಯ
ಸಾರೀದ ಮಲಿಯಾ ಚವಡೀಯ ಸೆರೆತಂದೋರು
ಸಾರವಟದಯ್ನ ಮಟದೋರು

ಅಕ್ಕಿಪಕ್ಷಿಕೂಟೆ ಕಟ್ಟಿಸ್ತಮಟಗಾಳ
ಸೊಕ್ಕಿದ ಮಲಿಯ ಚವಡೀಯ
ಸೊಕ್ಕಿದ ಮಲಿಯ ಚವಡೀಯ ಸೆರೆತಂದೋರು
ವೊಟ್ಟೆ ಇಸರಪ್ನ ಮಟದೋರು

ನೆಲ್ಕಕ್ಕಿ ಇಟ್ಟು ಮೆಲ್ಲಾಕ ಮೆಲುವೋನು
ಬಲಿದ ಸಂಪನ್ನ ಸಂದಗಾನಿ
ಬಲಿದ ಸಂಪನ್ನ ಸಂದಗಾನಿ ನಿನಬಂಡಿ
ನಿಲ್ಲಾವೆ ದಿಳ್ಳಿವಳಿಯಾಗ

ಕಣಕಾದ ಇಟ್ಟ ಅಣಕದಲ್ಲಿ ಮೆಲ್ವಾನೆ
ದನಿಕಸಂಪನ್ನ ಮರಗಾನಿ
ದನಿಕಸಂಪನ್ನ ಮರಗಾನಿ ನಿನಬಂಡಿ
ದುಮುಕಾವೆ ದಿಳ್ಳಿವಳಿಯಾಗ

ಪಚ್ಚೇದಚ್ಚಡದ ಸೆಟ್ಟಿ ಸಂದಗಾನಿ
ಅಕ್ಕಮಾರೀಯ ಎಗಲೇರಿ
ಅಕ್ಕಮಾರೀಯ ಎಗಲೇರಿ ದಿಳ್ಳೀಯ
ಮುತ್ತೀನ ಸೋಪಾನ ಇಳುದಾರೆ

ಸಾಲ್ಯಾದಚ್ಚಡದ ಗೇನಿ ಮಾರಗಾನಿ
ತಾಯಿ ಮಾರೀಯ ಎಗಲೇರಿ
ತಾಯಿ ಮಾರೀಯ ಎಗಲೇರಿ ದಿಳ್ಳೀಯ
ವೂವೀನ ಸೋಪಾನ ಇಳುದಾರೆ

ನಾಗಳಕ್ಕಿ ಬೇಸಿ ಗಾಲೀಗೆ ಸುರುವಾರೆ
ಮ್ಯಾಲೆ ಕುರಿಕ್ವಾಣ ವೊಯ್ಯಾರೆ
ಮ್ಯಾಲೆ ಕುರಿಕ್ವಾಣ ವೊಯ್ಯಾರೆ ಸ್ವಾಮನೋರ
ಬಾವ ನಿನಬಂಡಿ ತೆರಳ್ಯಾವೆ

ಕಂಡುಗಕ್ಕಿ ಬೇಸಿ ಬಂಡೀಗೆ ಸುರುವ್ಯಾರೆ
ಮುಂದೆ ಕುರಿಕ್ವಾಣ ವೊಯ್ಯಾರೆ
ಮುಂದೆ ಕುರಿಕ್ವಾಣ ವೊಯ್ಯಾರೆ ಮಾರನೋರ
ಕಂದ ನಿನಬಂಡಿ ತೆರಳ್ಯಾವೆ

ಅದ್ದು ಗೊದ್ದುಗಳ ಅಬ್ಬರಿಸಿ ತಂದೋನು
ಬುದ್ಯಳ್ಳ ದೊರೆಯ ಸಂದಗಾನಿ
ಬುದ್ಯಳ್ಳ ದೊರೆಯ ಸಂದಗಾನಿ ನಿನಬಂಡಿ
ನುಗ್ಗ್ಯಾವೆ ದಿಳ್ಳಿ ವಳಿಯಾಗೆ

ಕಾಗೆ ಗೂಗೆಗಳ ಆರೂಸಿ ತಂದೋನೆ
ಗ್ಯಾನವುಳ್ಳ ದೊರೆಯ ಮಾರಗಾನಿ
ಗ್ಯಾನವುಳ್ಳ ದೊರೆಯ ಮಾರಗಾನಿ ನಿನಬಂಡಿ
ನಿಲ್ಲಾವೆ ದಿಳ್ಳಿ ವಳಿಯಾಗೆ

ಅಲ್ಲಿ ಇದ್ದಳಲ್ಲ ಇಲ್ಲಿ ಇದ್ದಳಲ್ಲ
ದಿಲ್ಲೀಳಿದ್ದೋಳೆ ಕರಿಯಮ್ಮ
ದಿಲ್ಲೀಳಿದ್ದೋಳೆ ಕರಿಯಮ್ಮ ಬುಳ್ಳಣ್ಣಾನ
ಬಲಿದೋನ ಇಂದೆ ತೆರಳಾಳೆ

ಅತ್ತ ಇದ್ದಳಲ್ಲ ಇತ್ತ ಇದ್ದಳಲ್ಲ
ಗುತ್ತಿಲಿದ್ದೋಳೆ ಕರಿಯಮ್ಮ
ಗುತ್ತಿಲಿದ್ದೋಳೆ ಕರಿಯಮ್ಮ ಬುಳ್ಳಣ್ಣಾನ
ಸೆಟ್ಟ್ಯೋನ ಇಂದೆ ತೆರಳಾಳೆ

ಅಂದಿ ಕರಿಯಮ್ಮ ತುರುಬು ಬಿಚ್ಚಿದ ತಾವ
ಮರುಗ ಮಲ್ಲೀಗೆ ಉದುರಾವೆ
ಮರುಗ ಮಲ್ಲೀಗೆ ಉದುರಾವೆ ಇಂದೆ ಬರುವ
ದೊರೆಮಕ್ಕಳೆತ್ತಿ ಮುಡುದಾರೆ

ರೆಂಬೆ ಕರಿಯಮ್ಮ ಮಂಡೆ ಬಿಚ್ಚಿದ ತಾವ
ದುಂಡುಮಲ್ಲಿಗೆ ಉದುರ್ಯಾವೆ
ದುಂಡುಮಲ್ಲಿಗೆ ಉದುರ್ಯಾವೆ ಇಂದೆ ಬರುವ
ಮಂಡ್ಲೀಕರೆತ್ತಿ ಮುಡುದಾರು

ವೊಟ್ಟೆ ಇಸರಪ್ನೋರು ವೊಟ್ಟೆವೊತ್ತೈದಾರೆ
ಮಟ್ಟೇದ ಬಾರದಲಿ ಕರುಳಂದು
ಮಟ್ಟೇದ ಬಾರದಲಿ ಕರುಳಂದು ಸಿವಸರಣಾರು
ದಿಟ್ಟರೆಂದೇ ಕೈಮುಗಿದಾರು

ಸಾರವಟದೈನೋರು ಕಾಗುಡತ್ರೈದಾರೆ
ಕಾಗುಡೊಂದು ಬಾರದಲಿ ಗರಳಂದು
ಕಾಗುಡೊಂದು ಬಾರದಲಿ ಗರಳಂದು ಸಿವಸರಣಾರು
ದೇವುರಂದೇ ಕೈಮುಗುದಾರು

ಕತ್ತಿರಿಗುರುಬು ಬಂದು ವೊಕ್ಕಾನೆ ಜನದೀಯ
ಮತ್ತೆ ವೊಳಿಗಾಳು ತಡಿದಾವೆ
ಮತ್ತೆ ವೊಳಿಗಾಳು ತಡಿದಾವೆ ಗಂಗಮ್ಮ
ಮತ್ತೆ ಬಾಸೆಗಳ ಕರೆದಾಳೆ

ಆಲಗುರುಬ ವೋದಾನೆ ಜಲದೀಗೆ
ಮ್ಯಾಲೆ ವೊಳೆಗಾಳು ತಡೆದಾವೆ
ಮ್ಯಾಲೆ ವೊಳೆಗಾಳು ತಡೆದಾವೆ ಗಂಗಮ್ಮ
ಮ್ಯಾಲೆ ಬಾಸೆಗಳ ಕರೆದಾಳೆ

ಕೆಟ್ಟ ತುರುಕಾರು ದಂಡೆದ್ದು ಬರುವಾಗ
ಪುತ್ರಮ್ನಲ್ಲಿ ಮರುತಾರೆ
ಪುತ್ರಮ್ನಲ್ಲಿ ಮರುತಾರೆ ತುರುಕಾರು
ಕತ್ತೀಗ ಕದನವ ಕೊಡುತಾರೆ

ಆಳು ತುರುಕರು ದಂಡೆದ್ದು ಬರುವಾಗ
ಬಾಲಮ್ನಲ್ಲಿ ಮರುತಾರೆ
ಬಾಲಮ್ನಲ್ಲಿ ಮರುತಾರೆ ತುರುಕಾರು
ಆದ್ಯೇದ ಕದನಾ ಕೊಡುತಾರೆ

ಗುತ್ತಿವಳಿಯಾಗ ಕತ್ತೀಯ ನಿಲಿಯಾಕಿ
ಪುತ್ರಮ್ಮ ನಮ್ಮ ಸೆರಗೀಗೆ ಬಂದಾರೆ
ಪುತ್ರಮ್ಮ ನಮ್ಮ ಸೆರಗೀಗೆ ಬಂದಾರೆ ಸಿರಿಸದ
ಆರುತಿಯೂ ಬೆಳಗೇವು

ದಿಳ್ಳಿವಳಿಯಾಗ ಆದ್ಯೇವ ನಿಲಿಯಾಕಿ
ಬಾಲಮ್ಮ ನಮ್ಮ ಸೆರಗೀಗೆ ಬಂದಾರೆ
ಬಾಲಮ್ಮ ನಮ್ಮ ಸೆರಗೀಗೆ ಬಂದಾರೆ ಆದ್ಯೇಕ
ಆರುತೀಯಾ ಬೆಳಗೇವು

ದಿಳ್ಳಿವಳಿಯಾಗ ಕೆಂಪುದ್ರೈತ ಸುರುದು
ಅಲ್ಲಿ ಸಂದಗಾನಿ ಜಲದೀಯ
ಅಲ್ಲಿ ಸಂದಗಾನಿ ಜಲದೀಯ ಬಪ್ಪರಾಯ
ಅಣ್ಣ ತಮ್ಮಗಳಾಗಿ ಬರುತಾರೆ

ಗುತ್ತಿವಳಿಯಾಗ ಬೆಟ್ಟದ್ರೈತ ಸುರುದು
ಅಪ್ಪಮಾರಗಾನಿ ಜಲದೀಯ
ಅಪ್ಪಮಾರಗಾನಿ ಜಲದೀಯ ಬಪ್ಪರಾಯ
ಅಪ್ಪಮಕ್ಕಳಾಗಿ ಬರುತಾರೆ

ತಣ್ಣೀರು ಮಿಂದಾನೆ ಬಣ್ಣಾವೆ ವೊದ್ದಾನೆ
ಸಣ ಸಣ್ಣ ಅಲ್ಲ ಸುಲುದಾನೆ
ಸಣ ಸಣ್ಣ ಅಲ್ಲ ಸುಲುದಾನೆ ಮಾರನೋರ
ಸಣಮಗನೇ ಸಿರವ ಅರುದಾನೆ

ಬಿಸಿನೀರು ಮಿಂದಾನೆ ದಸಲೀಯ ವದ್ದಾನೆ
ಅಸನಾದ ಅಣ್ಣ ಸುಲುದಾನೆ
ಅಸನಾದ ಅಣ್ಣ ಸುಲುದಾನೆ ಮಾರನೋರು
ಅಸುಮಗನೇ ಸಿರವ ಅರುದಾನೆ

ಕತ್ತಿಗುರುಬು ಬಂದು ವೊಕ್ಕಾನೆ ಜಲದೀಯ
ಮತ್ತಿ ವಳೆಗಾಳು ತಡೆದಾವು ಗಂಗಮ್ಮ ಮತ್ತಮೆಟ್ಟು
ಮತ್ತಿ ವಳೆಗಾಳು ತಡೆದಾವು ಗಂಗಮ್ಮ ಮತ್ತಮೆಟ್ಲು
ವಳಿಯಾ
ಕೊಡುತಾಳೆ

ಆಲುಗುರಬು ಬಂದು ವೋದಾನೆ ಜಲದೀಯ
ಮ್ಯಾಲೆ ವಳೆಗಾಳು ತಡೆದಾವೆ
ಮ್ಯಾಲೆ ವಳೆಗಾಳು ತಡೆದಾವೆ ಗಂಗಮ್ಮ
ವಳಿಯಾ ಕೊಡುತಾಳೆ

ಸಣ್ಣಕ್ಕಿ ಬಾಗೂರು ಬಣ್ಣಸಿದ ವೊಸಕೆರೆ
ಸಣದೆಂಗುಂಡ್ಯಾರ ಇಜಿಯ
ಸಣದೆಂಗುಂಡ್ಯಾರ ಇಜಿಯನಾಗರ ಮುಂದೆ
ಅಣ್ಣಗಳ ಮಾನ್ಯೇವು ಬರುತಾದೆ

ಕೊಚ್ಚಕ್ಕಿ ಬಾಗೂರು ಕಟ್ಟಿಸ್ತವೊಸಕೆರೆ
ಸಿಕ್ಕಿದ ಗುಂಡ್ಯಾರ ಇಜಿಯಾರ
ಸಿಕ್ಕಿದ ಗುಂಡ್ಯಾರ ಇಜಿಯಾರ ನಗರಾಮುಂದೆ
ಅಪ್ಪಗಳಾ ಮಾನ್ಯೇವು ಬರುತಾರೆ

ಗಿಡ್ಡೋಬೆನಳ್ಳಿ ದೊಡ್ಡದು ಬಾಲೇನಳ್ಳಿ
ಸಾಲ ಬೊಮ್ಮನಳ್ಳಿ ಸಕಲಾವೆ
ಸಾಲ ವೊಮ್ಮನಳ್ಳಿ ಸಕಲಾವದೇರಿಮ್ಯಾಲೆ
ಅಪ್ಪಗಳಾ ಮಾನ್ಯಾವೆ ಬರುತಾವೆ

ಆಸೆ ಕೋಟಿನಳ್ಳಿ ಈಸೆಕೆ ಬಾಲೆನಳ್ಳಿ
ನಾಲು ಬೊಮ್ಮನಳ್ಳಿ ಸಕಲಾವೆ
ನಾಲು ಬೊಮ್ಮನಳ್ಳಿ ಸಕೆಲಾವದೇರಿಮ್ಯಾಲೆ
ಅಣ್ಣಗಳ ಮಾನ್ಯಾವೆ ಬರುತಾದೆ

ದಿಳ್ಳಿನಿಂದ ಬಂದಾರೆ ಬಿಲ್ಲಂಬಿನ ದೊರೆಗಾಳು
ದಿಳ್ಳೀಯ ಬಿಟ್ಟು ಚಿತ್ರಳ್ಳಿ
ದಿಳ್ಳೀಯ ಬಿಟ್ಟು ಚಿತ್ರಳ್ಳಿ ಕಟಿಸ್ಯಾರೆ
ಬಿಲ್ಲಂಬಿನೋರು ಸದುರಾರು

ಗುತ್ತೀಲಿಂದ ಬಂದಾರೆ ಬಿಚ್ಚಂಬಿನ ದೊರೆಗಾಳು
ಗುತ್ತೀಯ ಬಿಟ್ಟು ಚಿತ್ರಳ್ಳಿ
ಗುತ್ತೀಯ ಬಿಟ್ಟು ಚಿತ್ರಳ್ಳಿ ಕಟಿಸ್ಯಾರೆ
ಬಿಚ್ಚಂಬೀಲವರು ಚದರಾರು

ಎಲ್ಲಾರ ಸಾಸಾನ ಕಲ್ಲಾಮ್ಯಾಲೊಯ್ಯಾರೆ
ದಿಳ್ಳೀ ಸುರತಾಳ ಕರಡೀಯ
ದಿಳ್ಳೀ ಸುರತಾಳ ಕರಡೀಯ ಸಾಸಾನ
ಬೆಳ್ಳಿ ವತ್ತಿಗೆಗೆ ವೊಯ್ಯಾರೆ

ಎಂತೋರ ಸಾಸಾನ ಅಂಚಿನ ಮ್ಯಾಲೊಯ್ಯಾರೆ
ಪಂತಕ ಸುರಿವಾಳ ಕರಡೀಯ
ಪಂತಕ ಸುರಿವಾಳ ಕರಡೀಯ ಸಾಸಾನ
ಕಂಚಿನ ವೊತ್ತಿಗ್ಗೆ ವೊಯ್ಯಾರೆ

ಅತ್ಲಿಂದ ಬಂದಾವೆ ಅತ್ತುಸಾವಿರ ಬೀಡೀಕೆ
ಚಿಕ್ಕುಮಾಯಾಸಂದ್ರಾದ ಪಡುವಾಲ
ಚಿಕ್ಕುಮಾಯಾಸಂದ್ರಾದ ಪಡುವಾಲ ಏಣೀಲಿ
ಅಪ್ಪಗಳ ಮಾನ್ಯೇವು ಇಳಿದಾವೆ

ಅಪ್ಪಗಳ ಮಾನ್ಯೇವು ಇಳಿಯಯಾಳ್ಯೇದಾಗ
ಚಿತ್ತಸ್ವಾತೀಯ ಮಳೆಗರೆದು
ಚಿತ್ತಸ್ವಾತೀಯ ಮಳೆಗರೆದು ಅಪ್ಪಗಳ
ಮುತ್ತೀನ ಮಾಲೆ ನೆನದಾವೆ

ಮುತ್ತೀನ ಮಾಲೆ ನೆನದಾಗ ಅಪ್ಪಗಳು
ಮುತ್ತಬಿಚ್ಚಿ ಬಂಡೀಗೆ ಅರುವ್ಯಾರೆ

ಮೂಡಲಿಂದ ಬಂದಾವೆ ಮೂರುಸಾವಿರ ಬೀಡೀಕೆ
ರಾಯ ಮಾಯಾಸಂದ್ರದ ಪಡುವಾಲ
ರಾಯ ಮಾಯಾಸಂದ್ರದ ಪಡುವಾಲ ದಿನ್ನ್ಯಾಗ
ಅವಳದ ಗೂಡಾರ ವೊಯ್ದಾರೆ

ಅವಳದ ಗೂಡಾರ ವೊಯ್ದಾರೆ ಯಾಳ್ಯೇದಾಗ
ಚಿತ್ತಸ್ವಾತೀಯ ಮಳೆಗರೆದು
ಚಿತ್ತಸ್ವಾತೀಯ ಮಳೆಗರೆದು ಅಣ್ಣಗಳು
ವೊನ್ನ ಬಿಚ್ಚಿ ಬಂಡೇಗೆ ಅರುವ್ಯಾರೆ

ಅಕ್ಕಾ ತಂಗ್ಯೇರು ತುಪ್ಪಾಮಾರಲೋಗಿ
ಬಟ್ಟಮುತ್ತ ಕಂಡಾರೆ ಕಡೆಗಣ್ಣಲಿ
ಬಟ್ಟಮುತ್ತ ಕಂಡಾರೆ ಕಡೆಗಣ್ಣಲಿ ಅಕ್ಕ ನಮ್ಮ
ದಿಕ್ಕೆನೊಳಗಿದ್ದರ ದಿವಸಿಲ್ಲ

ಅಕ್ಕ ನಮ್ಮ ಸೆಟ್ಟೋರಿಗೇಳಿ ತರಿಸೋನೆ
ತಾಯಿಮಕ್ಕಳು ಆಲುಮಾರಲೋಗಿ
ಮಾನಮುತ್ತು ಕಂಡಾರೆ ಕಡೆಗಣ್ಣು

ಅಕ್ಕನಮ್ಮ ನಾಡಿನೊಳಗಿದರ ದಿನಸಿಲ್ಲ
ನಾಡಿನೊಳಗಿದರ ದಿನಸಿಲ್ಲ
ನಾಡಿನೊಳಗಿದರ ದಿನಸಿಲ್ಲ ಅಕ್ಕ ನಮ್ಮ
ರಾಯರಿಗೇಳಿ ತರಿಸೋನೆ

ಕೊಟ್ಟೀಗೆ ಮನಿಯಾಗೆ ವತ್ತೀಗೆ ಓದೋರಾಯ
ಸೆಟ್ಟೋರ ಸೆಟ್ಟಿಗನ ಸೆಟ್ಟಿ
ಸೆಟ್ಟೋರ ಸೆಟ್ಟಿಗನ ಸೆಟ್ಟಿ ನೀವು ನಮ್ಮ
ಕಪ್ಪೀಗಿ ಮುತ್ತ ತರಬೇಕು

ಮಾಳೀಗೆ ಮನಿಯಾಗೆ ವಾಲೆ ಓದೋರಯ
ರಾಯರಿಗೆ ರಾಯ ಪತಿರಾಯ
ರಾಯರಿಗೆ ರಾಯ ಪತಿರಾಯ ನೀವು ನಮ್ಮ
ನಮ್ಮ ಮೂಗುತಿಗೆ ಮುತ್ತ ತರಬೇಕು

ಒಂದು ಮುತ್ತಿಗೆ ವೋಗೋನು ನಾನಲ್ಲ
ಮುಂದೆ ಕಟ್ಟಿಸುವೆ ಎಲೆನಾರಿ
ಮುಂದೆ ಕಟ್ಟಿಸುವೆ ಎಲೆನಾರಿ ರಾಯಾರ
ದುಂಡು ಮುತ್ತ ಸೂರೆ ತರುವ್ಯಾನು

ಮೂರು ಮುತ್ತಿಗೆ ವೋಗೋನು ನಾನಲ್ಲ
ಆಳುಕಟ್ಟಿಸು ಎಲೆನಾರಿ
ಆಳುಕಟ್ಟಿಸು ಎಲೆನಾರಿ ರಾಯಾರ
ಮಾನ ಮುತ್ತು ಸುರೆ ತರುವ್ಯಾನು

ಕೊಚ್ಚಕ್ಕಿ ಮುಂಡಾಸನೊಪ್ಪೆಪ್ಪಿಸುತ್ಯಾರೆ
ಸೆಟ್ಟರಿಗೆ ಸೆಟ್ಟಿಗಿನ ಸೆಟ್ಟಿ
ಸೆಟ್ಟರಿಗೆ ಸೆಟ್ಟಿಗಿನ ಸೆಟ್ಟಿ ನೀನು ನಮ್ಮ
ಕಪ್ಪೀಗೆ ಮುತ್ತತರಬೇಕು

ಯಾಲಕ್ಕಿ ಮುಂಡಾಸ ವಾಲಾಲೇಸುತ್ತಾರೆ
ರಾಯರಿಗೆ ರಾಯ ಪತಿರಾಯ
ರಾಯರಿಗೆ ರಾಯ ಪತಿರಾಯ ನೀವು ನಮ್ಮ
ಮೂಗುತಿಗೆ ಮುತ್ತ ತರಬೇಕು

ವೊನ್ನು ತಂದ ಸುದ್ದಿ ಇನ್ನ್ಯಾರು ಅರಿಯಾರು
ಸಣ್ಣ ಮಾಯಾಸಂದ್ರಾಕೆ ನೆಡುವಾಲ
ಸಣ್ಣ ಮಾಯಾಸಂದ್ರಾಕೆ ನೆಡುವಾಲ ಊರಾಆಚೆ
ಬೆಣ್ಣೆ ತಂದಮ್ಮ ಅರುವ್ಯಾಳೆ

ಅಟ್ಟಿಮುಂದಲ ಸತ್ತಿವುಳ್ಳಕ್ಕಮಾರಿ
ಸೆಟ್ಟರ ಬಾಳೆತ್ತು ನಮಗೆ
ಸೆಟ್ಟರ ಬಾಳೆತ್ತು ನಮಗೆ ಸೂರ್ಯಾದಾರೆ
ಸೊಪ್ಪಿನುಡಿಗೇಲಿ ಬರುತೇನಿ

ಊರಮುಂದಲ ಗ್ಯಾನವುಳ್ಳಕ್ಕಮಾರಿ
ರಾಯರ ಬಾಳೆತ್ತೆನಮಗೆ ಸೂರೆ
ರಾಯರ ಬಾಳೆತ್ತೆನಮಗೆ ಸೂರೆ ಆದಾರೆ
ಬೇವಿನುಡಿಗೇಲಿ ಬರುತೀನಿ

ಸೆಟ್ಟಿ ಬುಳ್ಳಣ್ಣಾನ ಮಕ್ಕಳು ಸಮರಂತಾರು
ವೊಕ್ಕುಳದ ಗಂಟೆ ವುಲಿಯ ಸರ್ಮ
ವೊಕ್ಕುಳದ ಗಂಟೆ ವುಲಿಯ ಸರ್ಮ ಬುಳ್ಳಣ್ಣಾನ
ವೊಕ್ಕಲ್ಲಿ ಕೋಳ ಕೊಡನೆಂದ

ರಾಯ ಬುಳ್ಳಣ್ಣಾನ ಬಾಲರು ಸಮರಂತಾರು
ನಾಗಳದ ಗಂಟೆ ವುಲಿಯ ಸರ್ಮ
ನಾಗಳದ ಗಂಟೆ ವುಲಿಯ ಸರ್ಮ ಬುಳ್ಳಣ್ಣ
ವೋದಳ್ಳಿ ಕೋಳು ಕೊಡುನೆಂದ

ಮುದ್ದಣ್ಣಗನಸೆಟ್ಟಿ ಇದ್ದೋನು ಬೀಡಿಕ್ಯಾಗೆ
ಮುದ್ದಿನುಂಗುರದ ಕರಿಚೆಲುವು
ಮುದ್ದಿನುಂಗುರದ ಕರಿಚೆಲುವು ಇನ್ನ್ಯಾವ
ತಿದ್ದ್ಯಾನೆ ಕಾಲಗಳಿಗ್ಯಾಗೇ

ಇಟ್ಟುಂಬ ವತ್ತೀಗೆ ಕೆಟ್ಟ್ಯಾರೆರಡಾರೂತಿ
ನಿಸ್ತ್ರೇರು ವೊತ್ತು ನಡೆದಾರೆ
ನಿಸ್ತ್ರೇರು ವೊತ್ತು ನಡೆದಾರೆ ರತ್ನಗಿರಿಯ
ಉಪ್ಪರಿಗೆ ಮುಂದೆ ನಿಲುತಾರೆ

ಮುತ್ತು ಕೊಡುತೀನಿ ಮಾಣಿಕವ ಕೊಡುತೀನಿ
ಮತ್ತೆ ಬಾಗ್ಯವ ಕೋಡುತೀವಿ
ಮತ್ತೆ ಬಾಗ್ಯಾವ ಕೊಡುತೀವಿ ಅಪ್ಪಗಳು
ಮುತ್ತೈದೆತನದ ಉಳುವೀರೋ

ಆಳುಂಬ ವತ್ತೀಗೆ ಮಾಡ್ಯಾರೆರಡಾರೂವೆ
ನಾರೇರ ವೊತ್ತು ನಡೆದಾರೆ
ನಾರೇರ ವೊತ್ತು ನಡೆದಾರೆ ರತ್ನಗಿರಿಯ
ವಾವುರಿಗೆ ಮುಂದೆ ನಿಲುತಾರೆ

ವೊನ್ನು ಕೊಡುತೀವಿ ಚಿನ್ನಾವ ಕೊಡುತೀವಿ
ಇನ್ನು ಬಾಗ್ಯಾವ ಕೊಡುತೀವಿ
ಇನ್ನು ಬಾಗ್ಯಾವ ಕೊಡುತೀವಿ ಅಣ್ಣಗಳು
ಇನ್ನೈದೆತನವಾ ಉಳುವೀರೋ

ಮುತ್ತು ಆಕಿದರ ಮುತ್ತರಿಯವೀನ್ಯಾಯ
ನಿಸ್ತ್ರೇರ ಕೊರಳ ಮಣಿಪದಕ
ನಿಸ್ತ್ರೇರ ಕೊರಳ ಮಣಿಪದಕ ಆಕಿದರ
ಗಕ್ಕನೀನ್ಯಾಯ ಆರುದ್ಯಾವೆ

ವೊನ್ನು ಅಕಿದರೆ ಇನ್ನರಿಯವೀನ್ಯಾಯ
ಕನ್ನೇರ ಕೊರಳ ಮಣಿಪದಕ
ಕನ್ನೇರ ಕೊರಳ ಮಣಿಪದಕ ಆಕಿದರ
ಬ್ಯಾಗನೀನ್ಯಾಯ ಅರುದಾವೆ

ಮುಂಡದಲೀರಾರು ಗುಂಡುಗಲಿ ಸಮರಂತಾರು
ಮುಂಡದಿಂಡಾದ ಮರನುಟ್ಟಿ
ಮುಂಡದಿಂಡಾದ ಮರನುಟ್ಟಿ ನಾರಣಾಪುರದ
ಇಂಬೊಳ್ಳೆದೆಂದು ನೆಲೆಗೊಂಡ

ಪರಿಸೇಲೀರಾರು ಸಿರಸದಲಿ ಸಮರಂತಾರು
ಸಿರಸ ಅರಿಸಿಣದ ಮರನುಟ್ಟಿ
ಸಿರಸ ಅರಿಸಿಣದ ಮರನುಟ್ಟಿ ನಾರಾಣಾಪುರದ
ಪರಿಸೊಳ್ಳೆದೆಂದು ನೆಲೆಗೊಂಡ