ಆರು ಕಾಲೇಣೆ ವೂವಿನ ತೂರಾಯ
ಏರುಬಾರಾದೆ ಬಸುಮಂಗಿ
ಏರುಬಾರಾದೆ ಬಸುಮಂಗಿ ಗುಡ್ಡದಮ್ಯಾಲೆ
ಸಾಲುದಗಟ್ಟ್ಯೋನ ಅರುಮಾನೆ

ಅರುಮನಿ ಯಾತಕೊ ಅಡವಿ ಗೊಲ್ಲಾಗ
ಆವಿನಿಂಡಿನಾಗ ಸವುಲಾವೆ
ಆವಿನಿಂಡಿನಾಗ ಸವುಲಾವೆ ಆಕಸಿಕಂಬ
ಅಲೆಯೆತ್ತಯ್ನ ಸಲುವೋದು

ಅತ್ತು ಕಾಲೇಣೆ ಮುತ್ತೀನ ತೂರಾಯ
ಅತ್ತು ಬಾರದ ಬಸುಮಂಗಿ
ಅತ್ತುಬಾರಾದ ಬಸುಮಂಗಿ ಗುಡ್ಡದಮ್ಯಾಲೆ
ಪಟ್ಟದಟ್ಟ್ಯೋನ ಅರುಮನೆ

ಅರುಮನಿಯಾತಾಕೊ ಅಡವೀಯ ಗೊಲ್ಲಾಗ
ಎತ್ತಿನಿಂಡಿನಾಗ ಸವುಲಾವೆ
ಎತ್ತಿನಿಂಡಿನಾಗ ಸವುಲಾವೆ ಆಕಸಿಕಂಬ
ಎಚ್ಚುಎತ್ತಯ್ಗೆ ಸಲುವೋದು

ಗ್ವಾವೀಯ ಕಡಿಸಿ ಮ್ಯಾಲೆ ಸಾಸನ ನಡಿಸ್ಯಾನೆ
ದೂರಲು ಬಸುಮಂಗಿ ತಿರುವ್ಯಾನೆ
ದೂರಲು ಬಸುಮಂಗಿ ತಿರುವ್ಯಾನೆ ಎತ್ತಯ್ಯ
ದೂರಲ ರಾಜ್ಯಕ್ಕ ಎಸರಾದ

ಗುತ್ತಿ ಎಂಬ ಗುತ್ತಿಗುತ್ತಿ ಚಂದ್ರಗುತ್ತಿ
ಎತ್ತೀನ ಗವುಡ ಕಟಿಸ್ಯಾನೆ
ಎತ್ತೀನ ಗವುಡ ಕಟಿಸ್ಯಾನೆ ಎತ್ತಯ್ಯ ಕಡಿಸಿ
ಗುತ್ತಿಗೆ ಸಾಸನ ವಡಿಸ್ಯಾನೆ

ಗ್ವಾವಿಯೆಂಬ ಗ್ವಾವಿ ಚಂದ್ರಗ್ವಾವಿ
ಆವೀನ ಗವುಡ ಕಡಿಸ್ಯಾನೆ
ಆವೀನ ಗವುಡ ಕಡಿಸ್ಯಾನೆ ಎತ್ತಯ್ಯಕಡಿಸಿ
ಗ್ವಾವೀಗೆ ಸಾಸನ ಇಡಿಸ್ಯಾನೆ

ಅದ್ದಿನಗರಿಯಂಗವೆದ್ದಾವುಬ್ಯಾಡರದಂಡು
ಉದ್ದಕ್ಕೆ ಕ್ಯಾರೆ ತಳುಕೀನ
ಉದ್ದಕ್ಕೆ ಕ್ಯಾರೆ ತಳುಕೀನ ಏರಿಮ್ಯಾಲೆ
ಉದ್ದವೆತ್ತಯ್ನ ಮರಬಿಲ್ಲು

ಜ್ವಾಳಾದ ಗರಿಯಂಗ ವೋದವು ಬ್ಯಾಡರದಗಂಡು
ನ್ಯಾರಾಕಾಕ್ಯಾರೆ ತಳುಕೀನ
ನ್ಯಾರಾಕಾಕ್ಯಾರೆ ತಳುಕೀನ ಏರಿಮ್ಯಾಲೆ
ವೋದಾವು ಎತ್ತಯ್ನ ಮರಬಿಲ್ಲು

ಚಿಕ್ಕಾಮುತ್ತೋಡಿಗಚ್ಚಿನ ಚಾವುಡಿಯಾಗ
ಕೆತ್ತಿಸಿದ ಮಂಚ ವೊರಗ ಮೂಡಿ
ಕೆತ್ತಿಸಿದ ಮಂಚ ವೊರಗ ಮೂಡಿ ಬಿಟ್ಟು
ಲೆತ್ತಕೆತ್ತಯ್ನ ಕರಿಸ್ಯಾರೆ

ರಾಯ ಮುತ್ತೋಡಿಗಾರೆ ಚಾವುಡಿಯಾಗ
ಮಾಡಿಸಿದ ಮಂಚವೊರಗಮೂಡಿ
ಮಾಡಿಸಿದ ಮಂಚವೊರಗಮೂಡಿ ಬಿಟ್ಟು
ದಾಯಕೆತ್ತಯ್ನ ಕರಿಸ್ಯಾರೆ

ಎತ್ತೆಲ್ಲಿ ಮೇದಾವೆ ಎತ್ತೆಲ್ಲಿಗೆಲಿದಾವೆ
ಸಿಕ್ಕಾ ಮತ್ತೋಡಿ ಸ್ರೋಬಗೀನ
ಸಿಕ್ಕಾ ಮತ್ತೋಡಿ ಸ್ರೋಬಗೀನ ಕಾವಲುಮೇದು
ಉತ್ತು ಎತ್ತಯ್ಗೆ ಗೆಲಿದಾವೆ

ಅಪ್ಪ ಎತ್ತಯ್ಯ ಎತ್ತು ಜೂಜಿಗ ಬುಟ್ಟು
ಚಿಕ್ಕುಲಿಕುಂಟೆ ಕೆರಿಗೋಗಿ
ಚಿಕ್ಕುಲಿಕುಂಟೆ ಕೆರಿಗೋಗಿ ಎತ್ತಯ್ಯ
ಎತ್ತು ಜೂಜಿಗ ಬುಟ್ಟು ನಗುತಾನೆ

ಸ್ವಾಮಿ ಎತ್ತಯ್ಯ ಆವು ಜೂಜಿಗ ಬುಟ್ಟು
ರಾಯ ವುಲಿಕುಂಟೆ ಕೆರಿಯಾಗ
ರಾಯ ವುಲಿಕುಂಟೆ ಕೆರಿಯಾಗ ಅಂಗಳದಾಗ
ಆವು ಜೂಜಿಗ ಬುಟ್ಟು ನಗುತಾನೆ

ಚಿಕ್ಕಮತ್ತೋಡಿ ಗಚ್ಚಿನ ಚಾವುಡಿಯಾಗ
ಅತ್ತಂದಲದೋರು ಪಗಡೀಯ
ಅತ್ತಂದಲದೋರು ಪಗಡೀಯ ಜೂಜಿನಮರಕ
ದಾಯಕೆತ್ತಯ್ನ ಕರೆಸ್ಯಾರೆ

ಎತ್ತೀನ ಜೂಜುಗಳು ಅತ್ತಬೇಕು ಬಾವಯ್ಯ
ಚಿಕ್ಕುಲಿಕುಂಟೆ ಕೆರೆಗೋಗಿ
ಚಿಕ್ಕುಲಿಕುಂಟೆ ಕೆರೆಗೋಗಿ ನನ್ನಾವು ಸೋತಾರೆ
ಇಪ್ಪತ್ತು ಕಡಸ ವಡಕೊಡುವೆ

ಆವೀನ ಜೂಜುಗಳು ಆಡಲುಬೇಕು ಬಾವಯ್ಯ
ರಾಯ ವುಲಿಕುಂಟೆ ಕೆರೆಗೋಗಿ
ರಾಯ ವುಲಿಕುಂಟೆ ಕೆರೆಗೋಗಿ ನನ್ನಾವು ಸೋತಾರೆ
ನಲವತ್ತು ಕಡಸ ವಡಕೊಡುವೆ

ಆವೀನ ಜೂಜುಗಳು ಆಡಬ್ಯಾಡ ಬಾವಯ್ಯ
ರಾಯ ವುಲಿಕುಂಟೆ ಕೆರೆಗೋಗಿ
ರಾಯ ವುಲಿಕುಂಟೆ ಕೆರೆಗೋಗಿ ನಿನ್ನಾವು
ಸೋತಾರೆ ರಾಯದಜ್ಜುಕಾರಿ ಕಳಕಂಬೆ

ದೊರೆಯ ಎತ್ತಯ್ಯ ಕರಿಯ ಕಂಬಳಾಸಿ
ದೊರಿಯೆ ಮೈಗಾದ ಮನಗವನೆ
ದೊರಿಯೆ ಮೈಗಾದ ಮನಗವನೆ ಉತ್ತಯ್ಯ
ಪರುಮಳದ ಸಿಂಬೀಯ ಎಡಿಯಡಿಗೆ

ದೊಡ್ಡೋನೆತ್ತಯ್ಯ ಮಬ್ಬುಗಂಬಳಿಯಾಸಿ
ದೊಡ್ಡ ಮೈಗಾದ ಅರುಗೀಲಿ
ದೊಡ್ಡ ಮೈಗಾದ ಅರುಗೀಲಿ ಎತ್ತಯ್ಯ
ವಜ್ಜರದ ಸಿಂಬೇಯಡಿಗಡಿಗೆ

ಅಪ್ಪ ಎತ್ತಯ್ಯ ಎತ್ತುಜೂಜಿಗೆ ಬುಟ್ಟು
ಚಿಕ್ಕಾರೇವುಂಡೆ ತಿರಳಾಗೆ
ಚಿಕ್ಕಾರೇವುಂಡೆ ತಿರಳಾಗೆ ತಳುಕೀನ
ಎತ್ತು ಜೂಜಿಗೆ ಬಿಟ್ಟು ನಗುತಾನೆ

ದೊರೆಯ ಎತ್ತಯ್ಯ ಆವಿನ ಜೂಜಿಗೆ ಬುಟ್ಟು
ರಾಯರೇವುಂಡೆ ನೆರಳಾಗೆ
ರಾಯರೇವುಂಡೆ ನೆರಳಾಗೆ ಎತ್ತಯ್ಯ
ಆವು ಜೂಜಿಗೆ ಬಿಟ್ಟು ನಗುವಾನೆ

ಎತ್ತೆಲ್ಲಿ ಕಾದ್ಯಣ್ಣ ಮುತ್ತೆಲ್ಲಿ ಮುಡಿದಣ್ಣ
ಎತ್ತಿಗೆ ನೀರೆಲ್ಲಿ ಕುಡಿಸೀದೆ
ಎತ್ತಿಗೆ ನೀರೆಲ್ಲಿ ಕುಡಿಸೀದೆ ತಳುಕೀನ
ಮುತ್ತೀನ ಸಾಗ್ರದ ವಳಿಯಾಗ

ಆವೆಲ್ಲಿ ಕಾದ್ಯಣ್ಣ ವೂವೆಲ್ಲ ಮುಡಿದ್ಯಣ್ಣ
ಆವೀಗೆ ನೀರೆಲ್ಲಿ ಕುಡಿಸೀದೆ
ಆವೀಗೆ ನೀರೆಲ್ಲಿ ಕುಡಿಸೀದೆ ತಳುಕೀನ
ವೂವಿನ ಸಾಗ್ರದ ವಳಿಯಾಗ

ಆವೆಲ್ಲಿ ಕಾದ್ಯಣ್ಣ ಮಾವೆಲ್ಲಿ ಮುಡಿದ್ಯಣ್ಣ
ರೂವಾರದ ಸಣ್ಣ ದನಿಯೋನೆ
ರೂವಾರದ ಸಣ್ಣ ದನಿಯೋನೆ ಎತ್ತಯ್ಯ
ಆವೀಗೆ ನಿನ್ನದನಿ ತೋರೋ

ಎತ್ತೆಲ್ಲಿ ಕಾದ್ಯಣ್ಣ ಮುತ್ತೆಲ್ಲಿ ಮುಡಿದ್ಯಣ್ಣ
ಚಿತ್ತಾರಿ ಸಣ್ಣ ದನಿಯೋನೆ
ಚಿತ್ತಾರಿ ಸಣ್ಣ ದನಿಯೋನೆ ಎತ್ತಯ್ಯ
ಎತ್ತೀಗೆ ನಿನ್ನಾ ದನಿತೋರೋ

ಸಾವಿರದೆತ್ತು ತರುವ ಸರದಾರ ನಿನಬೆನ್ನಾಮ್ಯಾಲೆ
ನಗರೀಯ ಮುಳ್ಳು ಸೆಳದಾವೆ
ನಗರೀಯ ಮುಳ್ಳು ಸೆಳದಾವೆ ವೊರಗೂಡಿನ
ಉಗುರುಳ್ಳ ಜ್ಯಾಣ ತಗುದಾನೆ

ಇಂಡೆತ್ತುತರುವ ಗಂಬೀರ ನಿನಮ್ಯಾಲೆ
ನಿಂಬೀಯ ಮುಳ್ಳು ಸೆಳದಾವೆ
ನಿಂಬೀಯ ಮುಳ್ಳು ಸೆಳದಾವೆ ನಿನಬೆನ್ನಮ್ಯಾಲೆ
ಇಂಬುಳ್ಳ ಜ್ಯಾಣ ತಗುದಾನೆ

ಕರಿಯ ಕಂಬಳಿಯೋನು ಸುರನಾರಿ ಬಿಲ್ಲೋನು
ತುರಿವಿಗಲ್ಲಡ್ಡ ಬರುವೋನು
ತುರಿವಿಗಲ್ಲಡ್ಡ ಬರುವೋನು ಉತ್ತಯ್ಯಾನ
ತುರುವೇಳು ಸುತ್ತು ಅರುದಾವೆ

ಅಂಡಗಂಬಳಿಯೋನು ದುಂದೊಡೆದ ಕೋಲೋನು
ಇಂಡಿಗಲ್ಲಿಗಡ್ಡ ಬರುವೋನು
ಇಂಡಿಗಲ್ಲಿಗಡ್ಡ ಬರುವೋನು ಎತ್ತಯ್ಯಾನ
ಎತ್ತು ಇಂಡೇಳು ಸುತ್ತು ಅರುದಾವೆ

ಎತ್ತು ತರುವಣ್ಣಾನ ವಪ್ಪಾದಿಂದ ತರ ಏಳಿ
ಮುತ್ತೀನರಳೀನವನ ಕಿವಿಯಾಗ
ಮುತ್ತೀನರಳೀನವನ ಕಿವಿಯಾಗ ಮಾರನೋರ
ಪುತ್ರಮ್ಮ ನೆತ್ತತರವಳೇ

ಆವು ತರುವಣ್ಣಾನ ವಾರಣದಿಂದ ತರ ಏಳಿ
ವೂವಿನರಳವನ ಕಿವಿಯಾಗ
ವೂವಿನರಳವನ ಕಿವಿಯಾಗ ಮಾರನೋರ
ಬಾಲಮ್ಮನಾದ ತರವಳೇ

ಆವು ತರುವಣ್ಣಾಗ ಏನೇನು ಉಡುಗೊರೆ
ಬಾಲಮ್ಮ ಓದೂವವದಕೀಯ
ಬಾಲಮ್ಮ ಓದೂವವದಕೀಯ ರುಮಾಲಾವು
ಆವು ತರುವಣ್ಣಾಗ ಉಡುಗೋರೆ

ಬಗ್ಗುತ ಬಂದಾವೆ ಬಗ್ಗುಗಂಬಿನ ಬೆಳ್ಳಿ
ನುಗ್ಗು ಬಂದಾವೆ ಎಳಿವೋರಿ
ನುಗ್ಗು ಬಂದಾವೆ ಎಳಿವೋರಿ ಎತ್ತಯ್ಯಾನ
ಅಬ್ಬಕ ಬಂದಾವೆ ಸಲಗೆತ್ತು

ಬಾಗುತ ಬಂದಾವೆ ಬಾಗುಗಂಬಿನಬೆಳ್ಳಿ
ತೂಗುತ ಬಂದಾವೆ ಎಳಿವೋರಿ
ತೂಗುತ ಬಂದಾವೆ ಎಳಿವೋರಿ ಎತ್ತಯ್ಯಾನ
ನೇಮಿಗೆ ಬಂದಾವೆ ಸಲಗೆತ್ತು

ಅಂಡನೆಂಬ ಎತ್ತು ಚೆಂದನ್ನಾಡುತ ಬಂತು
ಕಂಡಿದೆತ್ತಯ್ನ ಮುನಿಯೆತ್ತು
ಕಂಡಿದೆತ್ತಯ್ನ ಮುನಿಯೆತ್ತು ಮಂದಲದಾರ
ಕಂಬಲದ ರನ್ನ ರವರತ್ನ

ಕಾರನಂಬ ಎತ್ತು ಜೂಜನಾಡುತ ಬಂತು
ನೋಡೀರೆತ್ತಯ್ನ ಮನಿಯೆತ್ತು
ನೋಡೀರೆತ್ತಯ್ನ ಮನಿಯೆತ್ತು ಮಂದಿಲವಾರ
ಕೋಡೆಲ್ಲವು ರವರತ್ನ

ಕಾರ ಬರುವಾಗ ಗೋರಿಕಲ್ಲದುರಾವೆ
ಗೋರಿಕಲ್ಲದುರಿ ಮರಳದಲಿ
ಗೋರಿಕಲ್ಲದುರಿ ಮರಳದಲಿ ಉತ್ತಯ್ನ
ಕಾರ ಬರುವ ದೆಸನಾಗಿ

ಅಂಡ ಬರುವಾಗ ಗುಂಡುಕಲ್ಲದಿರ್ಯಾವೆ
ಗೋರಿ ಕಲ್ಲದುರಿ ಮರಳದಲಿ
ಗೋರಿ ಕಲ್ಲದುರಿ ಮರಳದಲಿ ಎತ್ತಯ್ನ
ಅಂಡ ಬರುವಾರಿ ಅಸನಾಗಿ

ಸೂಜೀಯ ಇಂಬಾರ ಸೂಜೀಯ ಮುಂಬಾರ
ರಾಯ ದೇವರಟ್ಟಿಮನಿಗಾರ
ರಾಯ ದೇವರಟ್ಟಿಮನಿಗಾರ ಗಂಡುಗೊಡಲಿ
ದೀರಾನಿನಗೊಬ್ಬಾರಿದಿರೇನೋ

ಕತ್ತೀಯ ಇಂಬಾರ ಕತ್ತೀಯ ಮುಂಬಾರ
ಸಿಕ್ಕಾದ್ಯಾವರಟ್ಟಿ ಮನಿಗಾರ
ಸಿಕ್ಕಾದ್ಯಾವರಟ್ಟಿ ಮನಿಗಾರ ಗಂಡುಗೊಡಲಿ
ದಿಟ್ಟಾನಿನಗೊಬ್ಬಾರಿದಿರೇನೋ

ಆವಿನಿಂಡಿನಾಗಳ ವೋರೀಯ ವಡತನ್ನಿ
ರಾಮ ಸಿಲುಕನೆಂಬ ಕರಿವುರಗ
ರಾಮ ಸಿಲುಕನೆಂಬ ಕರಿವುರಗ ಕ್ಯಾಸರಿಬಟ್ಟ
ಮಾವು ಮಾರೋವಳ ತುಳುದಾವೆ

ಮಾವು ಮಾರೋವಳ ಯಾಕೆ ತುಳಿದ ಬುಟ್ಟಣ್ಣ
ಗ್ಯಾನವಿಲ್ಲವಳ ಮನದಾಗೆ
ಗ್ಯಾನವಿಲ್ಲವಳ ಮನದಾಗೆ ಸ್ರೀಪಾದಾಕೆ
ವೂವು ಅರಡೋದಾ ಮರೆತಾಳೆ

ಆವಿನಿಂಡಿನಾಗಳ ಬಟ್ಟನ್ನವಡತನ್ನಿ
ಚಿಕ್ಕಾಸಿಲುಕನೆಂಬ ಕರಿವುರುಗ
ಚಿಕ್ಕಾಸಿಲುಕನೆಂಬ ಕರಿವುರುಗ ಕ್ಯಾಸರಿಬಟ್ಟ
ಮುತ್ತುಮಾರೋವಳ ತುಳುದಾನೆ

ಮತ್ತುಮಾರೋವಳ ಯಾಕೆ ತುಳಿದ ಬಟ್ಟಣ್ಣ
ಚಿತ್ತಾವಿಲ್ಲವಳಾ ಮನದಾಗೆ
ಚಿತ್ತಾವಿಲ್ಲವಳಾ ಮನದಾಗೆ ಸ್ರೀಪಾದಾಕೆ
ಮುತ್ತು ಅರಡೋದ ಮರುತಾಳೆ

ಆವಿನ ಮುಂದೆ ಬರುವಗೀರುಗಂದದ ಚೆಲುವ
ದೇವರು ಉತ್ತಯ್ನ ಮಗನೇನೇ
ದೇವರು ಉತ್ತಯ್ನ ಮಗನೇನೇ ಕೊರಳಾಗಳ
ವೂವಿನ ವಲೆಮಾಲೆ ನಿಮದೇನೋ

ಎತ್ತೀನ ಮುಂದೆ ಬರುವ ಚುಕ್ಕೆಬಟ್ಟಿನ ಚೆಲುವ
ಅಪ್ಪ ಎತ್ತಯ್ನ ಮಗನೇನೋ
ಅಪ್ಪ ಎತ್ತಯ್ನ ಮಗನೇನೋ ಕೊರಳಾಗಳ
ಮುತ್ತೀನೊಲ ಮಾಲೆ ನಿಮದೇನೋ

ಎತ್ತುಗಳು ಬಂದಾವೆ ಎತ್ತಯ್ಯ ಬರಲಿಲ್ಲ
ಗುತ್ತೀಯ ಸೀಮೆ ವಳಿಕಟ್ಟಿ
ಗುತ್ತೀಯ ಸೀಮೆ ವಳಿಕಟ್ಟಿ ಸೊಂಡೂರ
ವೆತ್ತಬಿದ್ದ ಗೌಡಾ ಬರಲಿಲ್ಲ

ಆವುಗಳು ಬಂದಾವೆ ದೇವಾರು ಬರಲಿಲ್ಲ
ಗ್ವಾವೀಯ ಸೀಮೆವಳಿಕಟ್ಟಿ
ಗ್ವಾವೀಯ ಸೀಮೆವಳಿಕಟ್ಟಿ ಸೊಂಡೂರ
ನ್ಯಾಯಬಿದ್ದ ಗೌಡಾ ಬರಲಿಲ್ಲ

ಆರು ಕಂಡುಗ ನಸರಿವೋದವು ಕುರಿಯಟ್ಟಿಗೆ
ಕೌವಾಳ ಮೋಡಾ ಕವುದಾವೆ
ಕೌವಾಳ ಮೋಡಾ ಕವುದಾವೆ ಗುಡ್ಡದೀರಣ್ಣಗ
ಕರಿ ನೊರಿಯಾ ಆಲು

ಅತ್ತು ಕಂಡುಗ ಸರಿವೊಕ್ಕವು ಕುರಿಯಟ್ಟಿಗೆ
ಕತ್ತಾಲಮ್ವಾಡ ಕವುದಾವೆ
ಕತ್ತಾಲಮ್ವಾಡ ಕವುದಾವೆ ತಳುಕೀನ
ಎತ್ತಯ್ಗೆ ಕರಿನೊರೆಯಾಲು

ವೊತ್ತಲುಂಟಿ ಎದ್ದುರಟ್ಟೆಮೊಕವ ತೊಳಿದು
ವುಟ್ಟಿ ಬರುವ ಸೂರಿದನ ಸರಣೆಂದು
ವುಟ್ಟಿ ಬರುವ ಸೂರಿದನ ಸರಣೆಂದು ತಳುಕೀನ
ಎತ್ತಯ್ಗೆ ಕರಿನೊರೆಯಾಲು

ಏಳುತಲಿ ಎದ್ದು ಕಾಲು ಮುಕವಾ ತೊಳಿದು
ಮೂಡಿ ಬರುವ ಸೂರಿದನ ಸರಣೆಂದು
ಮೂಡಿ ಬರುವ ಸೂರಿದನ ಸರಣೆಂದು ತಳುಕೀನ
ಈರಣ್ಣ ಕರಿನೊರೆಯಾಲು

ಮೊಬ್ಬು ಗಂಬಳಿ ತಿದ್ದಿಕೊಪ್ಪಳಿಟ್ಟು
ಎಬ್ಬುರಿಸಿ ಆಲ ಕರಿವಾನೆ
ಎಬ್ಬುರಿಸಿ ಆಲ ಕರಿವಾನೆ ದೊಡ್ಡೋನೆತ್ತಯ್ನ
ಕರಿಯೀರಿ ನೊರೆಯಾಲು

ಕರಿಯಾ ಕಂಬಳಿ ತಿರುವೀ ಕೊಪ್ಪಳಿಟ್ಟು
ತಿರುಗೊಡದೆ ಆಲಕರೆದಾನೆ
ತಿರುಗೊಡದೆ ಆಲಕರೆದಾನೆ ತಳುಕೀನ
ದೊರೆಯ ಉತ್ತಯ್ಗೆ ನೊರೆಯಾಲು

ವೊತ್ತಲುಂಟೆ ಎದ್ದು ರಟ್ಟೆಮುಕವ ತೊಳೆದು
ಕೆಚ್ಚಲು ತಟ್ಟಿ ಆಲ ಕರೆವಾನೆ
ಕೆಚ್ಚಲು ತಟ್ಟಿ ಆಲ ಕರೆವಾನೆ ತಳುಕೀನ
ಅಪ್ಪ ಎತ್ತಯ್ಗೆ ನೊರೆವಾಲು

ಏಳುತಲಿ ಎದ್ದು ಕಾಲು ಮುಕವಾ ತೊಳಿದು
ಬೆನ್ನುತಟ್ಟಿ ಆಲ ಕರೆದಾನೆ
ಬೆನ್ನುತಟ್ಟಿ ಆಲ ಕರೆದಾನೆ ತಳುಕೀನ
ಸ್ವಾಮಿ ಎತ್ತಯ್ಗೆ ನೊರೆವಾಲು

ಬುಡ್ಡೀ ಬಾಯಿಗೆ ಕಡ್ಡಿವಸ್ತ್ರವನಾಕಿ
ಎಬ್ಬುರಿಸಿ ಆಲ ಕರೆವಾನೆ
ಎಬ್ಬುರಿಸಿ ಆಲ ಕರೆವಾನೆ ತಳುಕೀನ ದೊರೆಯ
ಎತ್ತಯ್ಗೆ ನೊರೆವಾಲು

ಅತ್ತು ಕಂಬಿಯಾಲು ಉಕ್ಕೂತ ಮರಳೂತ
ಅಟ್ಟಿಗವುಡರ ಮಗತಂದ
ಅಟ್ಟಿಗವುಡರ ಮಗತಂದ ನೊರಿಯಾಲು
ಅಪ್ಪ ಎತ್ತಯ್ಯನ ತಳಿಗೆಯಾಗಿ

ಆರು ಕಂಬಿಯಾಲು ತೂಗುತ ಮರಳೂತ
ನಾಡ ಗವುಡರ ಮಗತಂದ
ನಾಡ ಗವುಡರ ಮಗತಂದ ನೊರಿಯಾಲು
ಸ್ವಾಮಿ ಎತ್ತಯ್ಗೆ ತಳಿಗೆಯಾಗಿ

ಸುತ್ತಬ್ಯೇವಿನ ಮರ ಅತ್ತುವುಣೆಸೆಮರ
ಸುತ್ತಬ್ಯೇವಿನ ಮರವೇ ಕುರಿಯಟ್ಟಿ
ಸುತ್ತಬ್ಯೇವಿನ ಮರವೇ ಕುರಿಯಟ್ಟಿ ವುದಿಯಾಗ
ಸ್ವಾಮಿ ಎತ್ತಯ್ಗೆ ತಳಿಗೆಯಾಗಿ

ಕಡಲೆ ಕಾಳಂಗ ಕಡದ ಕೋಡಿನ ಬಸವ
ಇಡಿದರು ಬಸವಾನ ಬಯಲೀಗೆ
ಇಡಿದರು ಬಸವಾನ ಬಯಲೀಗೆ ತಳುಕೀನ
ದೊರಿಯ ಎತ್ತಯ್ಗೆ ಸಿವಪೂಜೆ

ಉದ್ದೀನ ಕಾಳಂಗ ತಿದ್ದಿದ ಕೋಡಿನ ಬಸವ
ತಿದ್ದ್ಯಾರು ಬಸವಾನು ಬಯಲೀಗೆ
ತಿದ್ದ್ಯಾರು ಬಸವಾನು ಬಯಲೀಗೆ ತಳುಕೀನ
ದೊಡ್ಡೋನೆತ್ತಯ್ಯಗ ಸಿವಪೂಜೆ

ವಡೆಗಾಯಿ ವಡೆದಾರೆ ಇಡುಗಾವಿ ಆದಾವೆ
ಪರುಮಳದ ಕೋಡಿ ಅರುದಾವೆ
ಪರುಮಳದ ಕೋಡಿ ಅರುದಾವೆ ತಳುಕೀನ
ದೊರಿಮಗನ ಪೂಜೆ ಮುಗುದಾವೆ

ಎಗ್ಗಾಯಿ ವಡೆದಾರೆ ಮುಗ್ಗಾಯಿ ಆದಾವೆ
ಮಜ್ಜಣದ ಕೋಡಿ ಅರುದಾವೆ
ಮಜ್ಜಣದ ಕೋಡಿ ಅರುದಾವೆ ತಳುಕೀನ
ದೊಡ್ಡೋನ ಪೂಜೆ ಮುಗುದಾವೆ

ಗಲ್ಲುಮೆಲ್ಲೆಂಬ ವಲ್ಲಿ ಕೊಡವಾಸ್ಯಾನೆ
ಮಲ್ಲೀಗೆವೂವ ಅರಡೇನೆ
ಮಲ್ಲೀಗೆವೂವ ಅರಡೇನೆ ತಳುಕೀನ
ಬಲ್ಲದ ದೊರೆಯ ಪ್ರವುಡೀಸೋ

ಕಂಚು ಮಿಂಚೆಂಬ ಮಂಚಕೊಡುಸೇನೆ
ಸಂಪೀಗೆ ವೂವ ಅರಡೇನೆ
ಸಂಪೀಗೆ ವೂವ ಅರಡೇನೆ ತಳುಕೀನ
ಸಂಪತ್ತಿನ ದೊರೆಯೇ ಪ್ರವಡೀಸೋ

ಅಣ್ಣು ತೆಂಗಿನಕಾಯಿ ಆದಿನಾರು ಈಡಾಡಿ
ತಣ್ಣೀರಿನ ಸೆಳೆಯ ಕೊಡಿರಣ್ಣ
ತಣ್ಣೀರಿನ ಸೆಳೆಯ ಕೊಡಿರಣ್ಣ ತಳುಕೀನ
ಅಣ್ಣಯ್ಯ ವೊರವೋಗುತಾನೆ

ಅಸಿಯ ತೆಂಗಿನಕಾಯಿ ಅದಿನಾರು ಈಡಾಡಿ
ಮಸರೀಲಿ ಸೆಳಿಯ ಕೊಡಿರಣ್ಣ
ಮಸರೀಲಿ ಸೆಳಿಯ ಕೊಡಿರಣ್ಣ ತಳುಕೀನ
ದೆಸೆವಂತ ಊರ ವೊಗುತಾನೆ

ಊರುವೊಗುವಾಗ ಏನಂದ ಎತ್ತಯ್ಯ
ಗೇಣು ಗೇಣುದ್ದ ಗಜನಿಂಬೆ
ಗೇಣು ಗೇಣುದ್ದ ಗಜನಿಂಬೆ ತೆಂಗಿನಕಾಯಿ
ಈಡಾಡಿರಣ್ಣ ಗುಡಿತಂಕ

ಅಟ್ಟಿವೋಗುವಾಗ ಏನಂದ ಎತ್ತಯ್ಯ
ಬೆಟ್ಟುಬೆಟ್ಟಿಗೆ ಗಜನಿಂಬೆ
ಬೆಟ್ಟುಬೆಟ್ಟಿಗೆ ಗಜನಿಂಬೆ ತೆಂಗಿನಕಾಯಿ
ಇಟ್ಟಾಡಿರಣ್ಣಗುಡಿತಂಕ

ಅಪ್ಪ ನಿನ್ನ ಆಡೇವೆ ಅಪ್ಪ ನಿನ್ನ ಪಾಡೇವೆ
ಅಪ್ಪ ನಿನ್ನ ನಿದ್ದೆವಡದೇವೆ
ಅಪ್ಪ ನಿನ್ನ ನಿದ್ದೆವಡದೇವೆ ತಳುಕೀನ
ಪಟ್ಟೆಮಂಚದಲಿ ನೀ ಪ್ರವಡೀಸೋ

ಸ್ವಾಮಿ ನಿನ್ನ ಆಡೇವು ಸ್ವಾಮಿ ನಿನ್ನ ಪಾಡೇವು
ಸ್ವಾಮಿ ನಿನ್ನ ನಿದ್ದೆ ತಡೆದೇವು
ಸ್ವಾಮಿ ನಿನ್ನ ನಿದ್ದೆ ತಡೆದೇವು ತಳುಕಿನ
ತೂಗುಮಂಚದ ದೊರೆಯ ನೀ ಪ್ರವಡೀಸೋ

ಅಲ್ಲವನೆ ಇಲ್ಲವನೆ ಎಲ್ಲವನೇ ಮನಿಸ್ವಾಮೀ
ನರಸಿಮ್ಮ ಪಲ್ಲಕ್ಕಿವಳಗಾ ಸುಕನಿದ್ದೆ
ಮಂಗಳಾ ಜಯಮಂಗಳಾ ರಾಮಾಸುಬಮಂಗಳಾ
ಸ್ರೀ ಚನ್ನಬಸವಾಗೆ ಮಂಗಳ ಜಯಮಂಗಳಾ