ಚಿತ್ರದುರ್ಗ ಸೀಮೆಯ ಕಾಡುಗೊಲ್ಲರ ಆರಾಧ್ಯ ದೇವತೆಗಳಲ್ಲಿ ಎತ್ತಯ್ಯನೂ ಒಬ್ಬ. ಗೊಲ್ಲರು ಪೂಜಿಸುವ ಕೊಂಡಾಡುವ ಮುಖ್ಯದೇವತೆ ಜುಂಜಪ್ಪ. ಆತನ ಮೇಲೆ ಅತಿದೀರ್ಘ ಗದ್ಯ-ಪದ್ಯ ಕಥಾನಕವನ್ನು ಹಾಡುತ್ತ ಉಳಿದಂತೆ ಪಾತಪ್ಪ, ಕ್ಯಾತಪ್ಪ, ಎತ್ತಪ್ಪ ವೀರರೂ ಇದ್ದಾರೆ. ಇವರೆಲ್ಲರೂ ಕಾಡುಗೊಲ್ಲರ ನಡುವೆ ಬದುಕಿದ್ದ ಗೋವಳರೇ. ಗೊಲ್ಲ ಸಮೂಹಕ್ಕೆ ಜುಂಜಪ್ಪನಂತೂ ಶಿವನ ಅಪರಾವತಾರ, ವೀರಭದ್ರ ಸ್ವರೂಪಿ. ಅದರಿಂದ ಈತ ಜುಂಜಯ್ಯಲಿಂಗನೇ ಆಗಿರುತ್ತಾನೆ. ವೀರರು, ಸಂತರು ಈಶ್ವರ ಸ್ವರೂಪರಾದ ಉದಾಹರಣೆ ಕೇವಲ ಬುಡಕಟ್ಟು ಸಮೂಹಗಳಲ್ಲೇ ಅಲ್ಲದೆ ಗ್ರಾಮಪಟ್ಟಣಗಳ ವಾತಾವರಣದಲ್ಲಿ ಜರುಗಿಹೋಗಿದೆ. ಮಲೆಯಮಾದಪ್ಪ ಮಹದೇಶ್ವರ ಆದಂತೆ. ಅಂತೆಯೇ ಎತ್ತಪ್ಪ, ಪಾತಪ್ಪ, ಕ್ಯಾತಪ್ಪ ಇವರೂ ಸಹ ಎತ್ತೈಯ್ಯಲಿಂಗ, ಪಾತರಲಿಂಗ, ಕ್ಯಾತರಲಿಂಗ ಎಂದೇ ಕರೆಯಲ್ಪಡುತ್ತಾರೆ.

ಸಿರಿಯಜ್ಜಿ ಎತ್ತಪ್ಪ ಗೀತೆಯಿಂದ ನಿಚ್ಚಳವಾಗಿ ಎತ್ತಪ್ಪನೆಂಬೊಬ್ಬನು ಕಾಡುಗೊಲ್ಲರ ನಡುವಣ ಪ್ರಮುಖ ದನಗಾಹಿ ಎಂದು ತಿಳಿದುಬರುತ್ತದೆ. ದನಗಾಹಿಗಳು ಎಂದರೆ ತಾವು ವಾಸಿಸಿದ್ದ ಹಟ್ಟಿಯನ್ನು ಬಿಟ್ಟು ಅರಣ್ಯದಲ್ಲಿ ದನಗಳ ಗೂಡು ತಿರುವಿಕೊಂಡು ಇರುವುದು. ಹೀಗೆ ಅರಣ್ಯದಲ್ಲಿ ನೂರು, ಸಾವಿರ ದನಗಳ ಹಿಂಡನ್ನು ಗೂಡಿನಲ್ಲಿ ಕೂಡಿಕೊಂಡು ಹಗಲು ರಾತ್ರಿ ಅರಣ್ಯದಲ್ಲಿ ಮೇಯಿಸುತ್ತ ಕಾಲ ಕಳೆಯುವಾಗ್ಗೆ ತರುಗಳ್ಳರ ಹಾವಳಿ ಇರುತ್ತಿತ್ತು. ಈ ತುರುಗಳ್ಳರು ದನಗಳ ಕಳ್ಳತನ ಮಾಡಲು ಹೆಂಗಸರನ್ನು ಉಪಯೋಗಿಸಿಕೊಳ್ಳುತ್ತಿದ್ದಂತೆ ಈ ಕಥನಗೀತೆಯಿಂದ ತಿಳಿದುಬರುತ್ತದೆ. ಹೀಗೆಯೇ ಪಾಳೆಯಗಾರರನೇಕರನ್ನೂ ವಂಚನೆಯಿಂದ ಕೊಲ್ಲಲು ವೇಶ್ಯೆಯರ ಸಹಾಯ ಪಡೆದಂತೆ ಚಿತ್ರದುರ್ಗ ಪ್ರದೇಶದ ಕೆಲವು ಜನಪದ ಕಥನ ಗೀತೆಗಳಲ್ಲಿ ಕಂಡುಬರುತ್ತದೆ.

ದನಕರುಗಳ ಐಶ್ವರ್ಯದ ಒಂದು ಭಾಗವೇ ಆಗಿದ್ದುದರಿಂದ ಅರಣ್ಯದ ಏಕಾಂತದಲ್ಲಿರುತ್ತಿದ್ದ ದನಗಾಹಿಗಳನ್ನು ಆಕರ್ಷಿಸಲು ಹೆಣ್ಣು ಮಕ್ಕಳ ನೆರವನ್ನು ಪಡೆದುಕೊಂಡಂತೆ ಎತ್ತಪ್ಪ ಗೀತೆಯಲ್ಲಿ ಬರುತ್ತದೆ. ಹಟ್ಟಿಯ ಸಂಸಾರ ಬಿಟ್ಟು ಊರಿಂದ ಊರಿಗೆ ದನಕರುಗಳ ಹಿಂದೆ ತಿರುಗುವ ಗೋವಳ ಸಮೂಹವನ್ನು ಇಂದಿಗೂ ನೋಡಬಹುದಾಗಿರುತ್ತದೆ. ಇಂಥದೊಂದು ವಿವರ ಎತ್ತಪ್ಪನ ಗೀತೆಯಲ್ಲಿದ್ದು ದನಕರುಗಳ ಹಿಂದೆ ಇದ್ದ ಎತ್ತಪ್ಪನನ್ನು ಗುಡ್ಡದ ಬೋರಿಯೆಂಬುವಳು ಪಗಡೆಯಾಟಕ್ಕೆ ಕರೆಯುತ್ತಾಳೆ. ಜನಪದ ಕಥನ ಗೀತೆಯಲ್ಲಿ ಯಾವುದೇ ಆಟ ಕೇಡಿನ ಸೂಚನೆಯಾಗಿಬರುತ್ತದೆ. ಹೀಗೆ ಹುಲಿದುರ್ಗ ಸೀಮೆಯಲ್ಲಿ ಎತ್ತಿನ ಗೂಡು ಹಾಕಿಕೊಂಡಿರಬೇಕಾದರೆ ಎತ್ತಪ್ಪ ಅಲ್ಲಿ ಬೇಡರ ಪಡೆಯಿಂದ ಹತನಾದಂತೆ ತಿಳಿದುಬರುತ್ತದೆ. ಅದರ ಸೂಚನೆ

ತರಿಯದ ಕಳ್ಳಿ ಕಡಿದು ತಿರುವಿ ಗೂಡಾನಾಕಿ
ಎಬ್ಬೆಳ್ಳೀಲಿ ಆಲಕರುವಾನೆ | ಎತ್ತಾಯ್ಯಾನ
ಬುದ್ದಿ ಬ್ಯಾಡರಿಗೇ ತಿಳಿಯಾವು ||

ತಿಳಿಯಾವು ಬಂದು ಕಳ್ಳೇ ಕೀಳಲುವಾಗ
ಕಾಗೂಡಿ ಕವಣೆ ಬೆರಳಾಗ | ಎತ್ತಯ್ಯ
ಬ್ಯಾಡರನೀಡಾಡಿ ವಡೆದಾನೆ ||

ಈ ಪದ್ಯಗಳಲ್ಲಿ ವೀರನೂ, ಮುಗ್ಧನೂ ಆಗಿದ್ದ ಕಾಡುಗೊಲ್ಲರ ಆವಿನ ಎತ್ತಯ್ಯ ಬೇಡರ ಮೋಸಕ್ಕೆ ಬಲಿಯಾದ ವಿವರ ಕಾಣಿಸುತ್ತದೆ. ಗೊಲ್ಲರ ದನಗಾಹಿತ್ವದ ಬದುಕಿನ ಕ್ರಮ ಈ ಗೀತೆಯಿಂದ ತಿಳಿದುಬರುತ್ತದೆ.

 

ಎತ್ತಪ್ಪ ಗೀತೆ

ಇಡ್ಡೂರ ಬಂದಲ್ಲಿ ಈರಾನ ನೆನೆದೇನು
ವಡ್ಡುವಾಲಗದ ವಡಿಯಾನ
ವಡ್ಡುವಾಲಗದ ವಡಿಯಾನ ಎತ್ತಯ್ನ
ಇಡ್ಡುರ ಬಂದಲ್ಲಿ ನೆನದೇನ

ನ್ಯಾಯ ಬಂದಲ್ಲಿ ದ್ಯಾವಾರ ನೆನದೇವ
ಜ್ಯೋಡಿ ವಾಲಗದ ವಡಿಯಾನ
ಜ್ಯೋಡಿ ವಾಲಗದ ವಡಿಯಾನ ಎತ್ತಯ್ನ
ನ್ಯಾಯ ಬಂದಲ್ಲಿ ನೆನದೇನ

ಅಂತರದಲ್ಲಿ ಆದೋವು ಅರಿವಾಣದ ಬಿಂದೀಗೆ
ಚಿಂತಮಣಿ ನನ್ನ ತವರೂರು
ಚಿಂತಮಣಿ ನನ್ನ ತವರೂರು ದ್ಯಾವರ
ಚಿಂತೆ ಬಂದಲ್ಲಿ ನೆನದೇನ

ಆರನ್ನ ಅಡವ್ಯಾಗ ದ್ಯವಾರ ನೆನದೇನ
ಓಯೆನ್ನೋ ನನ್ನ ಮುನಿಸ್ವಾಮಿ
ಓಯೆನ್ನೋ ನನ್ನ ಮುನಿಸ್ವಾಮಿ ಎತ್ತಯ್ಯ
ಆದೊಡಿಯ ಬಂದ ಬವಣೀಯ

ಎತ್ತಯ್ಯವುಟ್ಟವನೆ ಎತ್ತುತುಪ್ಪದಾಗೆ
ಎತ್ತಿನಿಂಡಿನಾಗ ಬ್ಯೆಳದಾನೆ
ಎತ್ತಿನಿಂಡಿನಾಗ ಬ್ಯೆಳದಾನೆ ಬೆಳೆದಾನು
ಮಾರಗಾನಿ ಎತ್ತೀನ ಕೀರುತಿಯ ಪಡೆದಾನು

ಈರಣ್ಣವುಟ್ಟ್ಯಾನೆ ಜೇನುತುಪ್ಪದಾಗ
ಆವಿನಾಡಿನಾಗ ಬೆಳದಾನೆ
ಆವಿನಾಡಿನಾಗ ಬೆಳದಾನೆ ಮಾರಗಾನಿ
ಗೇನಿ ಕೀರುತಿಯ ಪಡೆದಾನು

ಅಕ್ಕೀಯಾರದ ಗುಡ್ಡ ಪಕ್ಸಿತೂರದ ಗುಡ್ಡ
ವೊಕ್ಕುಮಾನ್ಯಾರು ಸುಳಿಯಾರು
ವೊಕ್ಕುಮಾನ್ಯಾರು ಸುಳಿಯಾರು
ಗುಡ್ಡದಮ್ಯಾಲೆ ಪಟ್ಟದಟ್ಟಿಯೋರ ಅರುಮಾನೆ

ಕಾಗೆ ಆರದಗುಡ್ಡ ಗೂಬೇಯು ತೂರದ ಗುಡ್ಡ
ವೋಗಿ ಮಾನವರು ಸುಳಿಯಾರು
ವೋಗಿ ಮಾನವರು ಸುಳಿಯಾರು ಗುಡ್ಡದಮ್ಯಾಲೆ
ಸಾಲ್ಯಾದಟ್ಟಿಯೋರ ಅರುಮನೆ

ವೊತ್ತದೆಲಿಯ ಕೊಯಿದು ಅಕ್ಕಿಬುತ್ತಿಯ ಕಟ್ಟಿ
ಎತ್ತೀನಾತ ಈರಣ್ಣ ಪಯುಣಾವೆ
ಎತ್ತೀನಾತ ಈರಣ್ಣ ಪಯುಣಾವೆ ವೋಗಲುವಾಗ
ಅತ್ತಾಳು ಬನ್ನಿಗೆಳಿಯಾರು

ಅತ್ತಾಳು ಬಂದರೆ ಜೊತ್ತೀಲಿ ಬನ್ನಿರೋ
ಅತ್ತಾಳುಗೊಬ್ಬ ಅಗಲೀರಾ
ಅತ್ತಾಳುಗೊಬ್ಬ ಅಗಲೀರಾ ಗೊಲ್ಲಾರೀರ
ಕಟ್ಟ್ಯವನೆ ಕಾಣೆ ಮರಬಿಲ್ಲು

ಅಗಲೆಲೆಯ ಕೊಯ್ಸಿ ಬ್ಯಾಗನೆ ಬುತ್ತಿಕಟ್ಟಿ
ಆವುನ ಕ್ಯಾತಯ್ಯ ಪಯುಣಾವೆ
ಆವುನ ಕ್ಯಾತಯ್ಯ ಪಯುಣಾವೆ ವೋಗಲುವಾಗ
ಆರಾಳು ಬನ್ನಿರಿ ಗೆಳಿಯಾರು

ಆರಾಳು ಬಂದಾರೆ ಜೋಡ್ಯಾಗಿ ಬನ್ನೀರೋ
ಆರಾಳುಗೊಬ್ಬ ಅಗಲೀರಾ
ಆರಾಳುಗೊಬ್ಬ ಅಗಲೀರಾ ಗೊಲ್ಲಾರೀರ
ವೂಡ್ಯವನೆ ಕವಣೇಯ ಮರಬಿಲ್ಲು

ವೊತ್ತದೆಲೆಯ ಕೊಯಿದು ಅಕ್ಕಿಬುತ್ತಿ ಕಟ್ಟಿ
ನೀಡಮ್ಮ ನಿಂಬೇ ತನಿಯಣ್ಣ
ನೀಡಮ್ಮ ನಿಂಬೇ ತನಿಯಣ್ಣ ಗೌಡಾನ
ಆವೋಗುತಾವೆ ವುಲಿದುರುಗ

ಮಾರಮದ್ದಿನದಾಗ ಏನಡಿಗೆ ಮಲ್ಲಮ್ಮ
ವಾವುರಿಗೆ ಎಲ್ಲವೊಗೆಗರೆದು
ವಾವುರಿಗೆ ಎಲ್ಲವೊಗೆಗರೆದು ಮಾಡ್ಯಾಳೆ
ಆವಿನ ಗೌವುಡಾಗೆ ಅವತಾಣ

ಮಟ್ಟಮದ್ಯನದಾಗ ಏನಡಿಗೆ ಮಲ್ಲಮ್ಮ
ಉಪ್ಪುರಿಗೆ ಎಲ್ಲ ವೊಗೆಗರೆದು
ಉಪ್ಪುರಿಗೆ ಎಲ್ಲ ವೊಗೆಗರೆದು ಮಾಡ್ಯಾಳೆ
ಆವಿನ ಗೌವುಡಾಗೆ ಅವತಾಣ

ತುಪ್ಪಸಕ್ಕರನ್ನ ಮತ್ತೋಟು ಎಳ್ಳೆಣ್ಣೆ
ಮತ್ತ್ಯಾರು ಕೂಟೆ ಕಳುವಾಲಿ
ಮತ್ತ್ಯಾರು ಕೂಟೆ ಕಳುವಾಲಿ ತಳುಕೀನ
ಕಟ್ಟಿಮ್ಯಾಲುಂಬ ಗವುಡಾಗೆ

ಆಲುಸಕ್ಕರಿ ಮ್ಯಾಲೋಟು ಎಳ್ಳೆಣ್ಣೆ
ನಾನ್ಯಾರುಕೂಟೆ ಕಳುವಾಲಿ
ನಾನ್ಯಾರುಕೂಟೆ ಕಳುವಾಲಿ ತಳುಕೀನ
ಏರಿಮ್ಯಾಲುಂಬ ಗವುಡಾಗೆ

ಎತ್ತು ಕಂಬಕಾಕಿ ಅಟ್ಟಿ ಬಿಟ್ಟೋಗುವಾಗ
ಉಪ್ಪರಿಗೆ ಸೂಳೆ ಗೆಲಿದಾಳೆ
ಉಪ್ಪರಿಗೆ ಸೂಳೆ ಗೆಲಿದಾಳೆ ಎತ್ತಯ್ನ
ದಟ್ಟೀಯ ಸೆರಗ ಇಡಿದಾಳೆ

ದಟ್ಟೀಯ ಸೆರಗ ನೀನ್ಯಾಕ ಇಡದೀಯೆ
ಎತ್ತು ಕೊಟ್ಟೇನು ಬುಡುಸೆರಗ
…….
…….

ಎತ್ತುಗಳು ನಮಗವೆ ಎಮ್ಮೆಗಳು ನಮಗವೆ
ಲಕ್ಸಕ್ಕ ಬೆಲಿಯಾದ ರತುನಾವೆ
ಲಕ್ಸಕ್ಕ ಬೆಲಿಯಾದ ರತುನಾವೆ ಮಂಚಕ
ವೊಪ್ಪತ್ತೇ ಗೌಡ ಬರಬೇಕು

ವೋರಿ ಕಂಬಕಾಕಿ ಊರು ಬಿಟ್ಟೋಗುವಾಗ
ವಾವುರಿಗೆ ಸೂಳೆ ಗೆಲಿದಾಳೆ
ವಾವುರಿಗೆ ಸೂಳೆ ಗೆಲಿದಾಳೆ ಎತ್ತಯ್ನ
ಪಾವುಡದ ಸೆರಗಾ ಇಡುದಾಳೆ

ಪಾವುಡದ ಸೆರಗಾ ನೀನ್ಯಾಕ ಇಡಿದೀಯ
ಆವುಕೊಟ್ಟೇನು ಬುಡು ಸೆರಗ
…..
…..

ಆವುಗಳು ನಮಗವೆ ಗೋವುಗಳು ನಮಗವೆ
ಸಾವುರಕ ಬೆಲಿಯಾದ ರತುನಾವೆ
ಸಾವುರಕ ಬೆಲಿಯಾದ ರತುನಾವೆ ಮಂಚಾಕೆ
ಜ್ಯಾವೊತ್ತು ಗವುಡಾ ಬರಬೇಕು

ಗುತ್ತೀಯ ಸೀಮೇಗೆ ಎತ್ತೆದ್ದು ವೋಗುತಾವೆ
ಜೊತ್ತು ಬಾಳೆತಾರೆ ಮಲ್ಲಮ್ಮ
ಜೊತ್ತು ಬಾಳೆತಾರೆ ಮಲ್ಲಮ್ಮ ಈರನೆತ್ತು
ಗುತ್ತಿ ಸಾಗ್ರಾವ ಇಳುದಾವೆ

ಗ್ವಾವೀಯ ಸೀಮೀಗೆ ಆವೆದ್ದು ವೊಗುತಾವೆ
ಜ್ಯೋಡು ಬಾಳೆತಾರೆ ಮಲ್ಲಮ್ಮ
ಜ್ಯೋಡು ಬಾಳೆತಾರೆ ಮಲ್ಲಮ್ಮ ಈರಾನಾವು
ಗ್ವಾವೆ ಸಾಗ್ರಾವ ಇಳುದಾವೆ

ಮಂಗಾರೆ ಬರುಡ್ಯಾಗ ತುಂಬಮ್ಮಪನ್ನೀರು
ರೆಂಬೆಕಣ್ಣೀರು ತೋರಾದೀರೆ
ರೆಂಬೆಕಣ್ಣೀರು ತೋರಾದೀರೆ ಎತ್ತಯ್ನ
ಇಂಡೋಗುತಾವೆ ವುಲಿದುರುಗ

ಕಾರೀಯ ಬುರುಡ್ಯಾಗ ತೋರಮ್ಮ ಪನ್ನೀರು
ನಾರಿ ಕಣ್ಣೀರು ತರದೀರೆ
ನಾರಿ ಕಣ್ಣೀರು ತರದೀರೆ ಎತ್ತಯ್ನ
ಆವೋಗುತಾವೆ ವುಲಿದುರುಗ

ದುರುಗದ ಸೀಮೀಗೆ ದೊರಿಮಗನ ಇಂಡೋಗುವಾಗ
ತಿರುಗಾಲಾಕ್ಯಾಳೆ ಪಗಡೀಯ
ತಿರುಗಾಲಾಕ್ಯಾಳೆ ಪಗಡೀಯ ಗುಡ್ಡದ ಬೋರಿ
ದೊರಿಮಗನ ಇಂಡಾ ತಡುದಾಳೆ

ಆವುಗಳಾ ಇಂಡಾನ್ಯಾಕೆ ತಡದೀಯೆ
ಆವುಕೊಟ್ಟೇನು ನೀಡುದುಣ್ಣೆ

ಎತ್ತುಗಳು ನಮಗವೆ ಎಮ್ಮೆಗಳು ನಮಗವೆ
ಮತ್ತೆ ಬಾಗ್ಯಾವು ನಮಗವೆ
ಮತ್ತೆ ಬಾಗ್ಯಾವು ನಮಗವೆ ಏಗವುಡ
ಗೊಡ್ಡುಗಾಳೀಯ ಕೊಡಬೇಕು

ನಾಕು ಕೊಡುವುದಕ ನಲವತ್ತು ಕೊಟ್ಟೇನು
ವಾವುರೀಗೇ ಮುಂದೆ ಕರದುಣ್ಣೆ
ವಾವುರೀಗೇ ಮುಂದೆ ಕರದುಣ್ಣೆ ನಾಯಕದನಡಿಯ
ಆವುಗಳ ಕಡಿಯ ಕೊಡಲಾರೆ

ಗುಡ್ಡಾದ ಸೀಮೀಗೆ ದೊಡ್ಡೋನಿಂದೊಗುವಾಗ
ಅಡ್ಡಾವಾಕ್ಯಾಳೆ ಪಗಡೀಯ

ಅಡ್ಡಾವಾಕ್ಯಾಳೆ ಪಗಡೀಯ ಗುಡ್ಡದ ಬೋರಿ
ದೊಡ್ಡೋನ ತಡುದಾಳೆ
ದೊಡ್ಡೋನ ತಡುದು ಕೇಳ್ಯಾಳೆ
ಗೊಡ್ಡುಗಾಳೀಯ ಕೊಡುರಾಯ

ಒಂದು ಕೊಡುವುದಕ ಒಂಬತ್ತು ಕೊಟ್ಟೇನು
ಉಪ್ಪರಿಗೆ ಮುಂದೆ ಕರದುಣ್ಣೆ
ಉಪ್ಪರಿಗೆ ಮುಂದೆ ಕರದುಣ್ಣೆ ನಾಯಕದಗಡಿಯ
ಎತ್ತುಗಳ ಕಡಿಯೂ ಕೊಡಲಾರೆ

ಉಗ್ಗಾದ ಗಡಿಗೆ ಬಗ್ಗಿ ಎದಲಿಗಾಕಿ
ರುದ್ರಣ್ಣೊರುಟಾನೆ ವುಲಿದುರುಗ
ರುದ್ರಣ್ಣೊರುಟಾನೆ ವುಲಿದುರುಗ ತಳುಕೀನ
ಏಬ್ಬೀಲಿ ಗೂಡಾ ವಡೆದಾನೆ

ಆವೀನ ಗಡಿಗೆ ತೂಗಿ ಎಗಲೀಗಾಕಿ
ಈರಣ್ಣ ವೊರಟಾನೆ ವುಲಿದುರುಗ
ಈರಣ್ಣ ವೊರಟಾನೆ ವುಲಿದುರುಗ ತುಳುಕೀನ
ವಾರೀಲಿ ವೊಡೆದಾನೆ ವೊರಗೂಡ

ತೆಕ್ಕೀಯ ಗಡಿಗೆ ಎತ್ತಿ ಎಗಲೀಗಾಕಿ
ಎತ್ತ ವೊರಟಾನೆ ವುಲಿದುರುಗ
ಎತ್ತ ವೊರಟಾನೆ ವುಲಿದುರುಗ ತಳುಕೀನ
ವತ್ತೀಲೊಡೆದಾನೆ ವೊರಗೂಡು

ತುರುಕರನಾ ವಡಿಯಾದು ಸ್ರಬಕೀನ ಮರಬಿಲ್ಲು
ದನಿಕ ಎತ್ತಯ್ಯ ವುಲಿದುರುಗ
ದನಿಕ ಎತ್ತಯ್ಯ ವುಲಿದುರುಗ ವೊಂಟಾಸುದ್ದಿ
ತುರುಕನ ನಾಡೀಗೆ ಅರುದಾವೆ

ಕಳ್ಳರನ ವಡಿಯೋದು ಬೆಳ್ಳೀಯ ಮರಬಿಲ್ಲು
ಬಲ್ಲಿದನನೆತ್ತಯ್ಯ ಮರಬಿಲ್ಲು
ಬಲ್ಲಿದನನೆತ್ತಯ್ಯ ಮರಬಿಲ್ಲು ವೊಂಟಾಸುದ್ದಿ
ಕಳ್ಳದನಾಡೀಗೆ ಅರುದಾವೆ

ತರಿಯದ ಕಳ್ಳಿಕಡುದು ತಿರುವಿಗೂಡಾನಾಕಿ
ಎಬ್ಬೆಳ್ಳೀಲಿ ಆಲಕರುವಾನೆ
ಎಬ್ಬೆಳ್ಳೀಲಿ ಆಲಕರುವಾನೆ ಎತ್ತಯ್ಯಾನ
ಬುದ್ದಿಬ್ಯಾಡರಿಗೇ ತಿಳಿಯಾವು

ತಗ್ಗುಲಿ ಕಳ್ಳ ಕಡಿದು ಬಗ್ಗಿಸಿಗೂಡನ್ನಾಕಿ
ಎಬ್ಬೆಳ್ಳೀಲಿ ಆಲ ಕರೆವಾನೆ
ಎಬ್ಬೆಳ್ಳೀಲಿ ಆಲ ಕರೆವಾನೆ ಎತ್ತಯ್ಯಾನ
ಬುದ್ದಿಬ್ಯಾಡರಿಗೆ ತಿಳಿಯಾವು

ಆಸೀದ ಕಳ್ಳೆಕಡುದು ಬೀಸಿಗೂಡನ್ನಾಕಿ
ದೇಸದ ಮ್ಯಾಲೆ ಆಲಕರವೋನೆ
ದೇಸದ ಮ್ಯಾಲೆ ಆಲಕರವೋನೆ ಎತ್ತಯ್ನ
ಮೋಸಾ ಬ್ಯಾಡರಿಗೆ ತಿಳಿಯಾವು

ಕಳ್ಳರು ಬಂದು ಕಳ್ಳೇ ಕೀಳಲುವಾಗ
ಬೆಳ್ಳೀಯ ಕವಣೆ ಬೆರಳಾಗ
ಬೆಳ್ಳೀಯ ಕವಣೆ ಬೆರಳಾಗ ಎತ್ತಯ್ಯ
ಕಳ್ಳರ ನೀಡಾಡಿವಡೆದಾನೆ

ಬ್ಯಾಡರು ಬಂದು ಕಳ್ಳೇಕೀಳಲುವಾಗ
ಕಾಗೂಡಿ ಕವಣೆ ಬೆರಳಾಗ
ಕಾಗೂಡಿ ಕವಣೆ ಬೆರಳಾಗ ಎತ್ತಯ್ಯ
ಬ್ಯಾಡಾರ ನೀಡಾಡಿ ವಡೆದಾನೆ

ಆಲುಕಾಸ್ಯಾಳೆ ಆಲುನೆಲುವಿಗಿಟ್ಟಾಳೆ
ವೋದಾಳೆತ್ತಯ್ನ ಬೆರಗೀಗೆ
ವೋದಾಳೆತ್ತಯ್ನ ಬೆರಗೀಗೆ ವುಲಿಗಾಗಿ
ಆಡೆತ್ತಳಾವಿ ನದಿಯಾಗೆ

ಆಡೆತ್ತಳಾವಿನುದಿಯಾಗ ವುಲಿಗಾನಿ
ತೋಳಿಡಿದುದಬ್ಬುವರಿಯಾಕ
…….
…….

ತುಪ್ಪಾಕಾಸ್ಯಾಳೆ ತುಪ್ಪಾನೆಲುವಿಗಿಟ್ಟಾಳೆ
ವೋದಾಳೆತ್ತಯ್ನ ಬೆರಗೀಗೆ
ವೋದಾಳೆತ್ತಯ್ನ ಬೆರಗೀಗೆ ನಾಯಕದಗಡಿ
ಆಡೆತ್ತಾಳಾವೀನ ವುದಿಯಾಗ

ಗುಡ್ಡ ಅತ್ತ್ಯಾನೆ ಕೆಂಗಣ್ಣು ಬಿಟ್ಟಾನೆ
ದೊಡ್ಡಟ್ಟಿ ಅರುಸು ಎತ್ತಯ್ಯ
ದೊಡ್ಡಟ್ಟಿ ಅರುಸು ಎತ್ತಯ್ಯಗುಡ್ಡ
ಅತ್ತಿ ಆವಾ ಕರೆದಾನೆ

ದುರುಗವ ಅತ್ತ್ಯಾನೆ ಕಿಡಿಗಣ್ಣು ಬಿಟ್ಟ್ಯಾನೆ
ಇರಿಯಟ್ಟಿ ಅರಸ ಎತ್ತಯ್ಯ
ಇರಿಯಟ್ಟಿ ಅರಸ ಎತ್ತಯ್ಯ ತಳುಕೀನ
ದುರುಗ ಅತ್ತಿ ಕರೆದಾನೆ

ಆವೀಗೆ ವೋರಿಗೆ ಮೋವಿಗಾದ ಒಂದು
ತಾವು ಸರಣಾರು ಇಳಿದಾರೆ
ಎತ್ತೀನಾ ಗೂಡಿನಾಗ ಮುತ್ತಿನ ಗದ್ದುಗೆಮಾಡಿ
ಸಕ್ಕಬೂಸುರನ ತೆಲೆಗಿಂಬು

ಆವೀನ ಗೂಡಿನಾಗ ವೂವಿನ ಗದ್ದುಗೆಮಾಡಿ
ನಾಗಬೂಸುರನ ತಲೆಗಿಂಬು
ನಾಗಬೂಸುರನ ತಲೆಗಿಂಬು ಎತ್ತಯ್ಯಾನ
ಈದಾವಿಗೆ ದಾರೆ ಯೆರುದಾರೆ

ಉತ್ತೀಗೆ ಎತ್ತಯ್ಗೆ ವೊಪ್ಪಿಗಾದಾವೆಂದು
ಮತ್ತೆ ಸರಣಾರು ಇಳುದಾರೆ
ಮತ್ತೆ ಸರಣಾರು ಇಳುದಾರೆ ಎತ್ತಯ್ನ
ಎತ್ತಾವಿಗೆ ದಾರೆಯೆರುದಾರೆ

ಆವು ಬಂದಾವೆ ಬಾರೆ ಮರಿಮಲ್ಲಮ್ಮ
ವೂವಿನರಿವಾಣಾದಾಗದವನಾವೆ
ವೂವಿನರಿವಾಣಾದಾಗದವನಾವೆ ಧೂಪನಾಕಿ
ಆವಿಗೆ ಸೇಸವನಿಡುಬಾರೆ

ಎತ್ತು ಬಂದಾವೆ ಬಾರೆ ಮುತ್ತಿನ ಮಣೆಮಲ್ಲಮ್ಮ
ಮುತ್ತಿನರಿವಾಣಾದಾಗ ದವನಾವೆ
ಮುತ್ತಿನರಿವಾಣಾದಾಗ ದವನಾವೆ ಧೂಪನಾಕಿ
ಎತ್ತಿಗೆ ಸೇಸವನಿಡುಬಾರೆ

ಸೇಸವನಿಟ್ಟಾಳೆ ರೂಪವನಾಕ್ಯಾಳೆ
ಕೋಪದಲಿ ಆವಡುದಾಳೆ
ಕೋಪದಲಿ ಆವಡುದಾಳೆ ಬುದ್ದಿವಳಿ
ಅವಸಾರ ಮನಿಗೆ ಕಳುವ್ಯಾಳೆ

ಎತ್ತು ಬಂದಾವು ಬಾರೆ ಮುತ್ತೈದೆ ಮಲ್ಲಮ್ಮ
ವುತ್ತಿತ್ತಿ ಅಣ್ಣು ಮಡಲಾಗೆ
ವುತ್ತಿತ್ತಿ ಅಣ್ಣು ಮಡಲಾಗೆ ಎತ್ತೀಗೆ
ಸೂರೆಯ ಬುಡುಬಾರೆ

ಆವುಬಂದಾವೆ ದೇವೈದೆ ಮಲ್ಲಮ್ಮ
ಬಾಳೀಯ ಅಣ್ಣು ಮಡಿಲಾಗ
ಬಾಳೀಯ ಅಣ್ಣು ಮಡಿಲಾಗ ಎತ್ತಯ್ಯಾನ
ಆವೀಗೆ ಸೂರೇಯ ಬಿಡುಬಾರೆ

ಬೆಳ್ಳೀಕೋಲಿಗೆ ತೆರಳ್ಯಾವು ಅಣ್ಣಾನಾವು
ತೆಳ್ಳುಗರಿಯೆಂದ ದೈಮಾರಿ
ತೆಳ್ಳುಗರಿಯೆಂದ ದೈಮಾರಿ ಎತ್ತಯ್ಯಾನ
ಬೆಳ್ಳಿಮಿಂಚ್ಯಾವು ಮಿಂಚೀಗೆ

ವುಡಿವೆ ಕೋಲೀಗೆ ಅಡಗ್ಯಾವು ಅಣ್ಣನಾವು
ವುಡಿಗೆಗರಿಯೆಂದ ದೈಮಾರಿ
ವುಡಿಗೆಗರಿಯೆಂದ ದೈಮಾರಿ ಎತ್ತಯ್ಯಾನ
ಬೆಡಗು ಮಿಂಚೀನ ಬೆರಗೀಗೆ

ಕಂಚೀನ ಕೋಲಿಗೆ ಮಿಂಚ್ಯಾವು ಅಣ್ಣಾವು
ಸಿಂಚಗರಿಯೆಂದ ದೈಮಾರಿ
ಸಿಂಚಗರಿಯೆಂದ ದೈಮಾರಿ ಎತ್ತಯ್ನ
ಸಂಚುಮಿಂಚ್ಯಾವೆ ಬೆರಗೀಗೆ

ಏರಲಾರದ ಗುಡ್ಡ ಅತ್ತೇವಣ್ಣ ನಾವು
ಸಿಕ್ಕೇ ಬಣ್ಣದ ವುಲಿಬಂದು
ಸಿಕ್ಕೇ ಬಣ್ಣದ ವುಲಿಬಂದು ಎತ್ತಯ್ನ
ಎತ್ತಾವಿಗೆ ಕಯ್ಯ ಮುಗದೇವು

ಎತ್ತಿನಾಗೆ ಎತ್ತಯ್ಯ ಬಟ್ಟಲುದುರುಬಾನಿಟ್ಟು
ಸಿಕ್ಕುತ್ತದ ಮ್ಯಾಲ ಕೊರಳೂಡಿ
ಸಿಕ್ಕುತ್ತದ ಮ್ಯಾಲ ಕೊರಳೂಡಿ ಮೇಸ್ಯಾನೆ
ಉತ್ತರೆ ಮಳೆವೊಯ್ದು ವಡಿವುಲ್ಲು

ಅಪ್ಪ ಎತ್ತಯ್ಯ ಸಿಕ್ಕು ಎಗಲೀಗಾಕಿ
ಸಿಕ್ಕುತ್ತದ ಮ್ಯಾಲೆ ಕೊರಳೂಡಿ
ಸಿಕ್ಕುತ್ತದೆ ಮ್ಯಾಲೆ ಕೊರಳೂಡಿ ಮೇಸ್ಯಾನೆ
ಉತ್ತರೆ ಮಳೆಯೊಯ್ದು ವಡಿವುಲ್ಲು

ದೊರೆಯ ಎತ್ತಯ್ಯ ಕೊಡಲಿ ಎಗಲಿಗಿಟ್ಟು
ವೋರಿಯುತ್ತಮ್ಯಾಲೆ ಕೊರಳೂಡಿ
ವೋರಿಯುತ್ತಮ್ಯಾಲೆ ಕೊರಳೂಡಿ ಮೇಸ್ಯಾನೆ
ಆದ್ರಿಮಳೆವೊಯ್ದು ವಡಿವುಲ್ಲು

ಗುಡ್ಡಾದ ಅರುಗೀಲಿ ಗುಡುಗುಟ್ಟುತೀನಮ್ಮ
ದೊಡ್ಡೋನೆತ್ತಯ್ನ ಮೈಜೋಡು
ದೊಡ್ಡೋನೆತ್ತಯ್ನ ಮೈಜೋಡು ಬೆಳ್ಳಿಗೋವು
ಎದ್ದಾವೆ ಮೂಡಾಮೊಕನಾಗಿ

ತಳುಕೀನ ಕೆರಿಯಾಗ ತಣಕಂಬವೇನಮ್ಮ
ದನಿಕ ಉತ್ತಯ್ನ ಮನಿಜೋಡು
ದನಿಕ ಉತ್ತಯ್ನ ಮನಿಜೋಡು ಪಟ್ಟೇದಟ್ಟಿ
ಒಳವಾರೆ ಕಣ್ಣುಕಮರ್ಯಾವೆ

ಬನ್ನೀಯ ಮರದಡಿಯ ವೊನ್ನು ರಾಸಿವೊಯ್ದು
ವೊನ್ನೀಗೆ ಸೂಳೆಸುಳಿಯಾರು
ವೊನ್ನೀಗೆ ಸೂಳೆಸುಳಿಯಾರು ಎತ್ತಯ್ಯಾನ
ದಟ್ಟೀಗೆ ಸೂಳೆ ಸುಳಿಯಾಳು

ಆಳುವ ನೂರು ಬ್ಯಾಡಾರು ನಮ್ಮಿಗಳಿಮಕ್ಕಳು
ನೀನು ನಮ್ಮಿಗೆ ಕಿರುದಂಗಿ
ನೀನು ನಮ್ಮಿಗೆ ಕಿರುದಂಗಿ ಬೋರಮ್ಮ
ನೀನೋಗೆ ನಿನ್ನರುಮನಿಗೆ

ಕಾಡನೂರು ಬ್ಯಾಡಾರು ನನಗಣ್ಣ ತಮ್ಮಗಳು
ನೀನು ನಮ್ಮೀಗೆ ಕಿರುದಂಗಿ
ನೀನು ನಮ್ಮೀಗೆ ಕಿರುದಂಗಿ ಬೋರಮ್ಮ
ನೀನೋಗೆ ನಿನ್ನರುಮನಿಗೆ

ಕಾಡನೂರು ಬ್ಯಾಡಾರು ನನಗಣ್ಣ ತಮ್ಮಗಳು
ನೀನು ನಮ್ಮೀಗೆ ಕಿರುದಂಗಿ
ನೀನು ನಮ್ಮೀಗೆ ಕಿರುದಂಗಿ ಬೋರಮ್ಮ
ನೀನೋಗೆ ನಿನ್ನರುಮನಿಗೆ

ಕಂಕನಲ್ಲಿ ಸೊಪ್ಪು ಅಂಚಿಕ್ಕಿವುರಿವೆಂಬ
ಕಂಕಬ್ಯಾಡರಿಗೆಲ್ಲ ಕುಲವಯ್ಯ
ಕಂಕಬ್ಯಾಡರಿಗೆಲ್ಲ ಕುಲವಯ್ಯ ಗೊಲ್ಲಗವುಡ
ಕಂಕದ ನೀಡಾಡಿ ವಡೆದಾನೆ

ಕಾಡಿನಲ್ಲಿ ಸೊಪ್ಪು ಕೋಡಿಕ್ಕಿ ಉರಿವೆಂಬ
ಕಾಡಬ್ಯಾಡರಿಗೆಲ್ಲಿ ಕುಲವಯ್ಯ
ಕಾಡಬ್ಯಾಡರಿಗೆಲ್ಲಿ ಕುಲವಯ್ಯ ಗೊಲ್ಲಗವುಡ
ಬ್ಯಾಡರನೀಡಾಡಿ ವಡೆದಾನೆ

ಸುಕ್ಕೆವುಟ್ಟೋವತ್ತಗೆ ವುಟ್ಟ್ಯಾವೆ ಬಸುಮಂಗಿ
ಉತ್ತೀನಗವುಡ ಎತ್ತಯ್ಯ
ಉತ್ತೀನಗವುಡ ಎತ್ತಯ್ಯ ನೆತ್ತಿಮ್ಯಾಲೆ
ಮುತ್ತೀನ ಅರಳು ಉರಿದಾವೆ

ಸುರಿದ ಮೂಡೊತ್ತಿಗೆ ಆದಾವೆ ಬಸಮಂಗಿ
ಆವಿನ ಗೌಡ ಎತ್ತಯ್ಯ
ಆವಿನ ಗೌಡ ಎತ್ತಯ್ಯ ನೆತ್ತಿಮ್ಯಾಲೆ
ವೂವಿನ ಅರಳೆ ಉರಿದಾವೆ