ತಿರುಪತಿ ತಿಮ್ಮಪ್ಪ ಪ್ರಾಚೀನ ಕಾಲಕ್ಕೆ ಶೈವ ಮೂಲದ ದೇವತೆಯಾದರೂ ಹನ್ನೆರಡನೆಯ ಶತಮಾನಕ್ಕೆ ರಾಮಾನುಜಾಚಾರ್ಯರ ಕಾಲದಲ್ಲಿ ವೈಷ್ಣವ ಧರ್ಮದ ಹಿನ್ನೆಲೆಯ ದೇವತೆಯಾದ ನಂತರ ಈ ಗೀತೆ ಪ್ರಚಾರಕ್ಕೆ ಬಂದಿದೆ. ಸ್ಪಷ್ಟವಾಗಿಯೇ ಹದಿನೈದನೇ ಶತಮಾನದ ಭಕ್ತಿಮಾರ್ಗದ ದಾಸಪಂಥದ ಕುರುಹುಗಳು ಈ ಪ್ರಾರ್ಥನಾ ಗೀತೆಯಲ್ಲಿ ನುಸುಳಿವೆ.

ನೆತ್ತಿಮ್ಯಾಲೆ ಮಣಿಮುಕುಟ ಮಸ್ತಕದಿ ಅರಿನಾಮ
ಹಸ್ತದಲಿ ಸಿವ ಚಕ್ರ ಸೆಂಕು | ಚಿನ್ನದಗಿರಿಯ
ಕ್ರಸ್ಣಗೋವಿಂದ್ನ ನ್ಯನದೇನು ||

ಕಷ್ಟಪೂರ್ವಕವಾಗಿ ಕ್ರಿಸ್ಟದೇವರ ನ್ಯನದೇವೆ
ಚಾಮುಂಡಿ ನೀ ಕೊಟ್ಟ ಮತಿಯಿಂದ | ಚಿನ್ನದಗಿರಿಯ
ರಾಮಗೋವಿಂದ್ನ ನ್ಯನದೇವೆ ||

ಈ ಪದ್ಯಗಳಲ್ಲಿ ಎಲ್ಲ ದೇವತೆಗಳ ಪ್ರಸ್ತಾಪವಿರುವುದನ್ನು ಗಮನಿಸಿದರೆ ಭಕ್ತಿಪಂಥದ ಹಿನ್ನೆಲೆಯಲ್ಲೇ ಹುಟ್ಟಿಕೊಂಡ ತ್ರಿಪದಿಗಳೆನಿಸುತ್ತದೆ. ವೀರಶೈವ ಯುಗದ ಕವಿಗಳು ತೋರಿಸದ ಸರ್ವಧರ್ಮ ಸಮನ್ವಯ ಮನೋಧರ್ಮವನ್ನು ತದನಂತರದ ಭಕ್ತಿಯುಗದ ಕವಿಗಳು ಪ್ರದರ್ಶಿಸಿರುತ್ತಾರೆ. ವೀರಶೈವ ಕವಿಗಳು ‘ಎನ್ನ ನಾಲಿಗೆಯೊಳು ಅನ್ಯದೈವಂಗಳ ಸ್ತುತಿಸಿದೆನಾ ದೊಡೆ….’ ಎಂದು ತಾವು ನಂಬಿದ ದೈವವನ್ನು ಕುರಿತು ಉಗ್ರ ಭಕ್ತಿ ಪ್ರದರ್ಶಿಸಿದ್ದಾರೆ. ಭಾಗವತ ಧರ್ಮದ ಕವಿಗಳು ಶಿವ, ವಿಷ್ಣು, ಬ್ರಹ್ಮಾದಿಗಳನ್ನೆಲ್ಲ ಏಕಕಾಲಕ್ಕೆ ಧ್ಯಾನಿಸಿರುತ್ತಾರೆ. ಇದಕ್ಕೆ ವೀರಸೈವ ಧರ್ಮೀಯರಾದ ಹರಿಹರ ರಾಘವಾಂಕರು, ಭಾಗವತ ಪರಂಪರೆಯ ಕುಮಾರವ್ಯಾಸ, ಲಕ್ಷ್ಮೀಶ ಕವಿಗಳೇ ಸಾಕ್ಷಿ. ಸಿರಿಯಜ್ಜಿ ಹಡಿರುವ ತಿರುಪತಿ ತಿಮ್ಮಪ್ಪನ ಹಾಡಿನಲ್ಲಿ ಸಹಜವಾಗಿಯೇ ಶಿವ, ಚಕ್ರ, ಶಂಖು, ಕೃಷ್ಣ, ಚಾಮುಂಡೇಶ್ವರಿ, ರಾಮ, ಗೋವಿಂದ ಈ ಎಲ್ಲ ಹೆಸರುಗಳೂ ಪ್ರಸ್ತಾಪವಾಗಿ ಈ ಗೀತೆ ಭಕ್ತಿಯುಗದ ನಂತರವೇ ಜನಪದರಲ್ಲಿ ಪ್ರಚಾರಕ್ಕೆ ಬಂದ ಗೀತೆಯಾಗಿರುತ್ತದೆ. ಈ ದೃಷ್ಟಿಯಿಂದ ಜನಪದ ಸಮೂಹದ ಅನೇಕಾನೇಕ ಪ್ರಾರ್ಥನಾ ಗೀತೆಗಳು ಆಯಾ ಪ್ರದೇಶದ ಎಲ್ಲ ದೇವತೆಗಳನ್ನೂ ಒಳಗೊಂಡೇ ಸೃಷ್ಟಿಯಾಗುತ್ತ ಅದೆಲ್ಲವನ್ನೂ ಪ್ರಕೃತಿ ಒಳಗೊಳ್ಳುತ್ತವೆಂದೇ ತಿಳಿಯುತ್ತಾರೆ. ತಿರುಪತಿ ತಿಮ್ಮಪ್ಪ ಕರ್ನಾಟಕದ ಎಲ್ಲ ಜಾತಿಮತ ಬುಡಕಟ್ಟು ದೇವತೆಯಾದಂತೆ ಆತನನ್ನು ಕುರಿತ ಪ್ರಾರ್ಥನಾ ಗೀತೆಯೂ ಕೂಡ ಹೆಚ್ಚು ಮತಾತೀತವಾದ ಗೀತೆಯೇ ಆಗಿ ಎಲ್ಲ ಕಡೆ ಪ್ರಚಾದಲ್ಲಿರುತ್ತದೆ. ಈ ಪ್ರಾರ್ಥನಾಗೀತೆಯ ಸೊಲ್ಲು ನಾಲ್ಕು:

. ಆಲಗಿರಿ ಮೇಲಗಿರಿ ತಿಮ್ಮಯ್ಯ
ಮ್ಯಾಲೆ ಚಿನ್ನಾದಗಿರಿಯವನೇ

. ವೂವಿನ ಮುಂಜೆರಗು ನಡೆನುಡಿ
ವೈಕುಂಟದಾ ಸ್ವಾಮಿ ಗೋಕುಲಕೆ ಬರುವಾಗ

. ಅನ್ನೆರಡೆ ವಂಡ ಮುಳುಗೋದೆ ಅಮ್ಮಾಗೆ
ಆಗ ಕಾಣುವಾನೆ ಸಿರಿ ಅರಿಯೆ

. ಬಾಗಿಲಿಗೆ ನಿಂತೋರೆ ಬಿಡಿರಮ್ಮ ವಳಗಿರುವೋ
ನಾಗಬೂಸೂರನೇ ದಯವಾಗೋ

 

ತಿರುಪತಿ ತಿಮ್ಮಪ್ಪ ಗೀತೆ

ಆಲಗಿರಿ ಮೇಲಗಿರಿ ತಿಮ್ಮಯ್ಯ
ಮ್ಯಾಲೆ ಚಿನ್ನಾದಗಿರಿಯವನೇ

ಯಂಗಟಾರಮಣದ ಉಂಗುಟಾ ನೆನದೇವೆ
ಎಂಭತ್ತು ಕೋಟಿ ನವಕೋಟಿ
ಎಂಭತ್ತು ಕೋಟಿ ನವಕೋಟಿ ತೀರುತವ
ನಂಬಿದೋರ ಪಾಪವೇ ಪರಿಯಾರ

ಮೂಡಲಗಿರಿಯಪ್ಪಾನ ಮುಂಗಾಲ ನೆನೆದೇವೆ
ಮೂವತ್ತುಕೋಟಿ ನವಕೋಟಿ
ಮೂವತ್ತುಕೋಟಿ ನವಕೋಟಿ ತೀರುತವ
ಕಂಡೋರ ಪಾಪವೇ ಪರಿಯಾರ

ಕಪ್ಪು ವರ್ಣದೋನು ಬಟ್ಟನ್ನ ಮಕದೋನು
ಪಟ್ಟೆನಾಮಾದ ಚಲುವಾನೆ
ಪಟ್ಟೆನಾಮಾದ ಚಲುವಾನೆ ಚಿನ್ನಾದಗಿರಿಯ
ಕಿಸ್ಣ ಬಂದಿದ್ದ ಸಪುನಾಕೆ

ಸಪುನಾದ ಮಾತಂದು ದಿಕ್ಕಾರ ಮಾಡಿದಿರಿ
ನಿಸ್ತ್ರೆಗೆ ಬಂದಾನ ಬಡತಾನ
ನಿಸ್ತ್ರೆಗೆ ಬಂದಾನ ಬಡತಾನ ಬಂದವಂದು
ಸಪ್ಪನದಲಿ ಸಾರಿ ತಿಳಿಸೀದ

ನೀಲಿ ವರ್ನಾದೋನು ನ್ಯಾರನ್ನಮಕದವನು
ಮೂರು ನಾಮಾದ ಚಲುವಾನೆ
ಮೂರು ನಾಮಾದ ಚಲುವಾನೆ ಚಿನ್ನದಗಿರಿಯ
ಗೋವಿಂದಬಂದಿದ್ದ ಸಪುನಾಕೆ

ಸಪುನದಮಾತಂದು ಈನಾಯ ಮಾಡದಿರಿ
ನಾರೀಗೆ ಬಂದಾನ ಬಡತಾನ
ನಾರೀಗೆ ಬಂದಾನ ಬಡತಾನ ಬಂದಾವಂದು
ಸಪುನದಲಿ ಸಾರಿ ತಿಳಿಸೀದ

ವತ್ತು ವುಟ್ಟೋವಾಗ ಪುಷ್ಟವರಳುವಾಗ
ಸುತ್ತೇಳು ಲೋಕಪಲುಪವರದು
ಸುತ್ತೇಳು ಲೋಕಪಲುಪವರದು ಬರುವಾಗ
ಕಿಸ್ಣ ನಿಮ್ಮ ನಾಮಾವ ನೆನುದೇನು

ಸೂರ್ಯವುಟ್ಟಲುವಾಗ ವೂವರಳುವಾಗ
ಈಗೇಳುಲೋಕ ಪಲಪರುದು
ಈಗೇಳುಲೋಕ ಪಲಪರುದು ಬರುವಾಗ
ರಾಮನಿಮ ನಾಮನ್ಯನದೇವು

ಎಕ್ಕೆ ಚಿಗುರಾಲಿ ಬಿಕ್ಕೆ ಪಲವಾಗಲಿ
ಅಪ್ಪಗಳ ಗುರುವನೆನೆಯಾದೆ
ಅಪ್ಪಗಳ ಗುರುವನೆನೆಯಾದೆ ದರಣಿಮ್ಯಾಲೆ
ಅಕ್ಕನಾವಿದ್ದು ಪಲವೇನೆ

ಮಾವು ಚಿಗುರಾಲಿ ಬೇವು ಪಲವಾಗಲಿ
ಅಣ್ಣಗಳ ಗುರುವನೆನೆಯಾದೆ
ಅಣ್ಣಗಳ ಗುರುವನೆನೆಯಾದೆ ದರಣಿಮ್ಯಾಲೆ
ತಾಯಿ ನಾವಿದ್ದು ಪಲವೇನೆ

ತಲೆಯ ಮ್ಯಾಲೆ ಮಣಿಮಕುಟ ಅಣೆಮ್ಯಾಲೆ ಅರಿನಾಮ
ಬಲಬುಜದಮ್ಯಾಲೆ ಸಿವಸೆಂಕು
ಬಲಬುಜದಮ್ಯಾಲೆ ಸಿವಸೆಂಕು ದ್ವಾರಾವತಿಯ
ಕಿಸ್ಣ ಗೋವಿಂದ್ನ ನ್ಯನದೇನು

ನೆತ್ತಿಮ್ಯಾಲೆ ಮಣಿಮಕುಟ ಮಸ್ತುಕದಿ ಅರಿನಾಮ
ಅಸ್ತದಲಿ ಸಿವಚಕ್ರ ಸೆಂಕು
ಅಸ್ತದಲಿ ಸಿವಚಕ್ರ ಸೆಂಕು ಚಿನ್ನದಗಿರಿಯ
ಕಿಸ್ಣಗೋವಿಂದ್ನ ನ್ಯನದೇನು

ಗ್ಯಾನಪೂರ್ವಕವಾಗಿ ದೇವದೇವರ ನ್ಯನದೇನೆ
ದೇವಿನೀ ಕೊಟ್ಟಮತಿಯಿಂದ
ದೇವಿನೀ ಕೊಟ್ಟಮತಿಯಿಂದ ಚಿನ್ನದ ಗಿರಿಯ
ಗೋವಿಂದನ ನುಡಿಯ ನುಡಿದೇವೆ

ಕಸ್ಟಪೂರ್ವಕವಾಗಿ ಕ್ರಿಸ್ಣ ದೇವರ ನ್ಯನದೇವೆ
ಚಾಮುಂಡಿ ನೀ ಕೊಟ್ಟಮತಿಯಿಂದ
ಚಾಮುಂಡಿ ನೀ ಕೊಟ್ಟಮತಿಯಿಂದ ಚಿನ್ನದ ಗಿರಿಯ
ರಾಮಗೋವಿಂದ್ನ ನ್ಯನದೇವೆ

ನಂದ ಗೋಕುಲದಿಂದ ಕಂದಾರ ಜತೆಯಿಂದ
ರುಂದವನದಾಗೆ ಕರುಗಾಳು
ರುಂದವನದಾಗೆ ಕರುಗಾಳು ಕಾಯ್ವಂತ
ನಂದಗೋವಿಂದ್ನ ನ್ಯನದೇವೆ

ಅಸ್ಟ ಗೋಕುಲದಿಂದ ಮಕ್ಕಾಳ ಜತಿಯಿಂದ
ಬೆಟ್ಟದಾಮ್ಯಾಲೆ ಕರುಗಾಳು
ಬೆಟ್ಟದಾಮ್ಯಾಲೆ ಕರುಗಾಳು ಆಡಿಸುವಂತ
ಕ್ರಿಸ್ಟ ಗೋವಿಂದ್ನ ನ್ಯನದೇವೆ

ಅಲ್ಲವೇ ಅಂಗಡ್ಯಾಗೆ ಬೆಲ್ಲವೇ ಸೀರ್ಯಾದಾಗೆ
ಮಲ್ಲಿಗೈದಾವೆ ವನದಾಗೆ
ಮಲ್ಲಿಗೈದಾವೆ ವನದಾಗೆ ತಿಮ್ಮಯ್ಯ
ಸೊಲ್ಲೈದಾವೆ ನಮ್ಮ ಮನದಾಗೆ

ಅಂಕವೇ ಅಂಗಡ್ಯಾಗೆ ಬಿಂಕವೇ ಸೀರ್ಯಾದಾಗೆ
ಸಂಪಿಗೈದಾವೆ ವನದಾಗೆ
ಸಂಪಿಗೈದಾವೆ ವನದಾಗೆ ತಿಮ್ಮಯ್ಯಾನ
ಸಂಪತ್ತೆ ನಮ್ಮ ಮನೆಯಾಗೆ

ಆದಿಮನೆಯೋಳೆ ಪಾದದುಂಗುರಾದೋಳೆ
ಗೋದಿಸೀರೇಯ ನೆರಗ್ಯೊಳೆ
ಗೋದಿಸೀರೇಯ ನೆರಗ್ಯೊಳೆ ಸರಸೋತಿ
ಬರೆದುಕೊಡಮ್ಮ ಪದಗಾಳು

ಅಟ್ಟಿಮನೆಯೋಳೆ ಬೆಟ್ಟಿನುಂಗುರದೋಳೇ
ಪಟ್ಟೇಯ ಸೀರೆನೆರಿಗ್ಯೋಳೆ
ಪಟ್ಟೇಯ ಸೀರೆನೆರಿಗ್ಯೋಳೆ ಸರಸೋತಿ
ಏಳಿ ಕೊಡಮ್ಮ ಪದಗಾಳ

ಎಲ್ಲಿಗೋದ್ಯಮ್ಮ ಮಲ್ಲಿಗೆ ಮುಡಿಯೋಳೆ
ನಲ್ಲಾರಿ ಕಡದನಡುವೀನ
ನಲ್ಲಾರಿ ಕಡದನಡುವೀನ ಸರಸೋತಿ
ಎಲ್ಲಿಗೋದ್ಯಮ್ಮ ಪದಬರವು

ಎತ್ತಲೋದ್ಯಮ್ಮ ಮುತ್ತೀನ ಮುಡಿಯೋಳೆ
ಚಿತ್ತಾರಿ ಕಡಗದನಡುವೀನ
ಚಿತ್ತಾರಿ ಕಡಗದನಡುವೀನ ಸರಸೋತಿ
ಎತ್ತಲೋದ್ಯಮ್ಮಪದಬರವು

ಮೂಡುವೋ ಸೂರ್ಯನಂಗೆ ಮ್ವಾಡದಾಮಿಂಚಿನಂಗೆ
ಮೂಡಿದ ಸ್ರೀ ಕಿಸ್ಣಸೆರೆಯಾಗೆ
ಮೂಡಿದ ಸ್ರೀ ಕಿಸ್ಣಸೆರೆಯಾಗೆ ಎತ್ತಂತ
ದೇವಕಿಯ ಸೆರೆಯ ಬಿಡಿಸೋಕೆ

ವುಟ್ಟೀದ ಸೂರ್ಯನಂಗೆ ದಿಕ್ಕಿನಾಮಿಂಚಿನಂಗೆ
ವುಟ್ಟೀದ ಸ್ರೀಕಿಸ್ಣಸೆರೆಯಾಗೆ
ವುಟ್ಟೀದ ಸ್ರೀಕಿಸ್ಣಸೆರೆಯಾಗೆ ಎತ್ತಂತ
ವಾಸುದೇವುನ ಸೆರೆಯ ಬಿಡಿಸೋಕೆ

ಅತ್ತು ಮಕ್ಕಳನೆತ್ತು ಕತ್ತೀಗೆ ಬಲಿಕೊಟ್ಟೆ
ಮತ್ತೊಂದನೆತ್ತು ಅಲವಳಿದೆ
ಮತ್ತೊಂದನೆತ್ತು ಅಲವಳಿದೆ ಆಕಾಸ್ರೇಣಿ
ನುಡುದು ಮಕ್ಕಳ ಕೊಲಿಸೀದ

ಆರುಮಕ್ಕಳನೆತ್ತ ಆದ್ಯಾಕೆ ಬಲಿಕೊಟ್ಟ
ಮೇಲೊಂದನೆತ್ತು ಅಲುವಳಿದೆ
ಮೇಲೊಂದನೆತ್ತು ಅಲುವಳಿದೆ ಆಕಾಸ್ರೇಣಿ
ನುಡಿದು ಮಕ್ಕಳ ಕೊಲಿಸೀದ

ಆಸಾಕೆ ಅರಿವಿಲ್ಲ ಬೀಸಾಕಿ ತೊಟ್ಲಿಲ್ಲ
ಬಾಲಾನ ಕಳುವಾಕೆ ಪತವಿಲ್ಲ
ಬಾಲಾನ ಕಳುವಾಕೆ ಪತವಿಲ್ಲ ವಸುದೇವ
ಅಂಗಂದು ದೇವಕಿಯ ಅಳುತಾಳೆ

ಕಟ್ಯಾಕೆ ಬಟ್ಟಿಲ್ಲ ತೂಗಾಕೆ ತೊಟ್ಲಿಲ್ಲ
ಕಿಸ್ಣನಾ ಕಳುವಾಕೆ ಪತವಿಲ್ಲ
ಕಿಸ್ಣನಾ ಕಳುವಾಕೆ ಪತವಿಲ್ಲ ವಸುದೇವ
ಅಂಗಂದು ದೇವಕಿಯೆ ಆಳುತಾಳೆ

ಆಕಿ ಕಣ್ಣೀರು ಆಕಾಸದ ಮಳಿಯಾಗಿ
ಸೂಸ್ಯಾವೆ ಸೆರೆಯ ಮನೆಯಾಗೆ
ಸೂಸ್ಯಾವೆ ಸೆರೆಯ ಮನೆಯಾಗೆ ಮದುರೇಯ
ಕ್ವಾಟೆ ವತ್ತುರಿಸಿ ಅರುದಾವೆ

ರೆಂಟೆ ಕಣ್ಣೀರು ಅಂಬಾರದ ಮಳಿಯಾಗಿ
ತುಂಬ್ಯಾವೆ ಸೆರೆಯಾಮನೆಯಾಗೆ
ತುಂಬ್ಯಾವೆ ಸೆರೆಯಾಮನೆಯಾಗೆ ಮದುರೇಯ
ತುಂಬ ವತ್ತುರಿಸಿ ಅರುದಾವೆ

ಆವೀನಾಸೀಗೆ ವೂವೀನ ಕಾಗೂಡಿ
ನಾರಿ ದೇವಕಿಯ ಮಗನೀಗೆ
ನಾರಿ ದೇವಕಿಯ ಮಗನೀಗೆ ಮಗನು
ವೊರೊಡೊತ್ತಿಗೆ ದೇವೇಂದ್ರನೆ ಕಳಿವ್ಯಾನೆ

ಸರ್ಪಾನಾಸೀಗೆ ಮುತ್ತೀನ ಕಾಗೂಡಿ
ಅಕ್ಕದೇವಕಿಯ ಮಗನೀಗೆ
ಅಕ್ಕದೇವಕಿಯ ಮಗನೀಗೆ ಮಗನು
ವೊರಡೊತ್ತಿಗೆ ಅಪ್ಪ ದೇವೇಂದ್ರ ಕಳಿವ್ಯಾನೆ

ವುಟ್ಟಿಬಂದೇನಮ್ಮ ದುಕ್ಕಮಾಡಬ್ಯಾಡ
ವುಟ್ಟಿರುವ ಅಗ್ಯೋರಿಗೆ ಎದೆಸೂಲ
ವುಟ್ಟಿರುವ ಅಗ್ಯೋರಿಗೆ ಎದೆಸೂಲ ಗಂಟಲುಗಾಣ
ಎತ್ತಮ್ಮ ದುಕ್ಕಾವಸೈರೀಸೆ

ಮೂಡಿಬಂದೇನಮ್ಮ ಗೋಳುಮಾಡಲುಬ್ಯಾಡ
ಮೂಡಿರುವ ಅಗೆಯೋರಿಗೆ ಎದೆಸೂಲ
ಮೂಡಿರುವ ಅಗೆಯೋರಿಗೆ ಎದೆಸೂಲ ಗಂಟಲುಗಾಣ
ತಾಯಮ್ಮ ದುಕ್ಕ ಸೈರೀಸೇ

ತಾಯಿಗರ್ಬಾವೆಂಟು ತಾಳಿದವತಾರೆಂಟು
ಸ್ರಾವಣಸುದ್ದತಿತಿಯೆಂಟು
ಸ್ರಾವಣಸುದ್ದತಿತಿಯೆಂಟು ಐಕುಂಟಾದ
ಸ್ವಾಮಿ ಗೋಕುಲಕೆ ಬರುವಾಗ

ಎತ್ತೀದವತಾರವೆಂಟು ಎತ್ತೋಳಗರ್ಬವೆಂಟು
ಸುಕ್ಕರವಾರ ಸುದ್ದತಿತಿಯೇಂಟು
ಸಕ್ಕರವಾದ ಸುದ್ದತತಿಯೆಂಟು ಐಕುಂಟಾದ
ಕ್ರಿಸ್ಣಗೋಕುಲಕೆ ಬರುವಾಗ

ಸರ್ಪಾರತ್ನದ ಬೆಳುಕು ಮುತ್ತೀನಕಾಗೂಡಿ
ಉತ್ರೇಯಮಳೆಯ ಸೆಳವು
ಉತ್ರೇಯಮಳೆಯ ಸೆಳವು ಬೂಮ್ಯಮ್ಮನ
ಮುತ್ತಿನ ಮುಂಜೆರಗು ನಡೆಮುಡಿ

ಸರ್ಪರತ್ನದ ಬೆಳುಕು ಮುತ್ತಿನ ಕಾಗೂಡಿ
ಉತ್ರೇಯಮಳೆಯ ಸೆಳವು
ಉತ್ರೇಯಮಳೆಯ ಸೆಳವು ಬೂಮ್ಯಮ್ಮನ
ಮುತ್ತಿನ ಮುಂಜೆರೆಗು ನಡೆಮುಡಿ

ಮುತ್ತಿನ ಮಂಜೆರೆಗು ನಡೆಮುಡಿ
ಕಿಸ್ಣಗೋಕುಲಕೆ ಬರುವಾಗ

ನಾಗರತ್ನದ ಬೆಳಕು ವೂವಿನ ಕಾಗುಡಿ
ಬಾರಿಮೇಗಾದ ಸೆಳೆವು
ಬಾರಿಮೇಗಾದ ಸೆಳೆವು ಬೂಮ್ಯಮ್ಮನ
ವೂವಿನ ಮುಂಜೆರಗು ನಡೆಮುಡಿ

ವೂವಿನ ಮುಂಜೆರಗು ನಡೆಮುಡಿ
ಐಕುಂಟಾದ ಸ್ವಾಮಿ ಗೋಕುಲಕೆ ಬರುವಾಗ

ಒಂದೊಂದು ಅನಿಯಾಗ ಸಂಜೆಗತ್ತಲಾಗ
ಒಂದೋದು ನಾಯಿ ಬಗುಳ್ಯಾವೆ
ಒಂದೋದು ನಾಯಿ ಬಗುಳ್ಯಾವೆ ಗೋಕುಲದಾಗ
ಒಂದೋರಿಗೆ ಮಂಜುಗವುದಾವೆ

ಆಡಅನಿಯಾಗೆ ಮ್ವಾಡ ಕತ್ತಲಾಗೆ
ನೋಡಿದ ನಾಯಿಗಳೆ ಬಗುಳ್ಯಾವು
ನೋಡಿದ ನಾಯಿಗಳೆ ಬಗುಳ್ಯಾವು ಗೋಕುಲದಾಗೆ
ವೋದೋರಿಗೆ ಮಂಜುಗವುದಾವೆ

ನಾರಿಗೋಪಿ ನಿನ್ನ ಬಾಲಗ ಬುದ್ದಿಯೇಳೆ
ವೋಗಿವಗತನವ ಕೆಡಿಸೋನೆ
ವೋಗಿವಗತನವ ಕೆಡಿಸೋನೆ ಗೋಪಿಕಿಸ್ಣ
ಬಾಲನ ಯಸೋದಿ ಕರಕಳ್ಳೆ

ನಂದಗೋಪಿ ನಿನ್ನ ಕಂದಗ ಬುದ್ದಿಯೇಳೆ
ಬಂದು ವಗತನವಕೆಡಿಸೋನು
ಬಂದು ವಗತನವಕೆಡಿಸೋನು ಗೋಪಿಕಿಸ್ಣ
ಬಾರೆ ಯಸೋದಿ ಕರಕೊಳ್ಳೆ

ತಿಳಿವಿನ ತಿಮ್ಮ ಬಾರೋ ವನದ ಕೋಗಿಲೆಯೇಬಾರೋ
ಅರಿದಾರ ಕೊರಳಪದಕವೆಬಾರೋ
ಅರಿದಾರ ಕೊರಳಪದಕವೆಬಾರೋ ಬಾರೆಂದು
ಬಾಲನವರಮ್ಮ ಕರೆದಾಳೆ