ಕೈಜಿಡ್ಡು ಕಸ್ತೂರಿ ಮೈಜಿಡ್ಡು ಮಾಣಿಕ್ಯ
ಸೀರೇಯ ಜಿಡ್ಡು ಸೆರಗೀಲಿ
ಸೀರೇಯ ಜಿಡ್ಡು ಸೆರಗೀಲಿ ಮೂಡನಾಡ
ಗೋವಿಂದ ಗೊಲ್ಲರಿಗೆ ಒಲುದಾನೆ

ಅಸುರು ಬೆತ್ತದ ಕೋಲು ನೆತ್ತೀಲಿಬೆಣ್ಣೆಮುದ್ದೆ
ಮೂಡನಾಡ ತಿಮ್ಮಯ್ಯಗೆ ಗೊಲ್ಲರಿಗೆ ಒಲುದಾನೆ

ನಾಗಬೆತ್ತದ ಕೋಲು ಕೈಯ್ಯಾಗೆ ಬೆಣ್ಣೆಮುದ್ದೆ
ಮೂಡನಾಡಗೋವಿಂದ ಗೊಲ್ಲರಿಗೆ ಒಲುದಾನೆ

ಕಸ್ಟ ಬಂದಲ್ಲಿ ಕ್ರಿಸ್ಣನ ನೆನಸೇವು
ಕಸ್ಟ ಅಬಿಮಾನ ನಿಮದಾಗಿ
ಕಸ್ಟ ಅಬಿಮಾನ ನಿಮದಾಗಿ ನಮಕಾಯುವಂತ
ಕ್ರಿಸ್ಣ ನಮಮ್ಯಾಲೆ ದಯವಿರಲಿ

ಬಂಗಬಂದಲ್ಲಿ ರಂಗಯ್ಯ ನೀಕಾಯೋ
ಬಂಗವವುಮಾನ ನಿಮದಾಗಿ
ಬಂಗವವುಮಾನ ನಿಮದಾಗಿ ನಮಕಾಯ್ವಂತ
ರಂಗ ನಮಮ್ಯಾಲೆ ದಯವಿರಲಿ

ವೊತ್ತುಂಟೆಎದ್ದು ಬಟ್ಟನ ಮುಕತೊಳುದು
ಇಟ್ಟಳೆ ಸಾದು ಸಿಲುಕಾವ
ಇಟ್ಟಳೆ ಸಾದು ಸಿಲುಕಾವ ಗೊಲ್ಲತಿ
ಅತ್ತೆಮ್ಮ ಮಸುರು ಸುರಿವ್ಯಾಳೆ

ಬೆಳಗೇಲಿ ಎದ್ದು ನ್ಯಾರನ್ನ ಮುಕತೊಳುದು
ಸೂಡ್ಯಾಳೆ ಸಾದಸಿಲುಕಾವ
ಸೂಡ್ಯಾಳೆ ಸಾದಸಿಲುಕಾವ ಗೊಲ್ಲತಿ
ಅವರಮ್ಮ ಮೊಸರಸುರಿವ್ಯಾಳೆ

ರತ್ನಾದ ಕುಡುಗೋಲು ಮುತ್ತೀನ ಇಡಿಯಗ್ಗ
ವಜ್ರಮಾಣಿಕದ ಗುದಿನೇಮಿ
ವಜ್ರಮಾಣಿಕದ ಗುದಿನೇಮಿ ತಕ್ಕಂಡು
ತಲೆಬಾಗಿ ಮಸುರ ಕಡೆದಾಳೆ

ತಲೆಬಾಗಿ ಮಸುರ ಕಡೆವ ಗೊಲ್ಲತಿ ಕಂಡು
ಅರಿನಾಮದಯ್ಯನಸುನಕ್ಕ

ರನ್ನಾದ ಕಡಗೋಲು ಚಿನ್ನಾದ ಇಡಿಯಗ್ಗ
ಅವಳ ಮಾಣಿಕದ ಕಡೆಗೋಲು
ಅವಳ ಮಾಣಿಕದ ಕಡೆಗೋಲು ಇಡಕಂಡು
ನಾರಿ ಮಸುರ ಕಡೆಯೋಳೆ

ನಾರಿ ಮಸುರ ಕಡೆಯೋಳೆ ಕಂಡು
ಗೋಪಾಲಕ್ರಿಸ್ಣ ವುಸಿನಕ್ಕ

ಅಟ್ಯಾಗ ಕ್ರಿಸ್ಣ ಆವುಕಾವುತ ಬಂದ
ಆಲುಮಾರೊಳನ ತಡೆದಾನೆ
ಆಲುಮಾರೊಳನ ತಡೆದಾನೆ ಕೇಳ್ಯಾನೆ
ಆಲೀನಸುಂಕ ಕೊಡಬೇಕೆಂದು

ಆಲೀನ ಸುಂಕ ಕೊಟ್ಟು ಆದಿಬಿಡಂದಾರೆ
ಕ್ರಿಸ್ಣ ಬಾಗಿ ಮುಂಜೆರಗ ಇಡಿದಾನೆ

ಅಟ್ಯಾಗ ಕ್ರಿಸ್ಟ ಎತ್ತುಕಾವುತ ಬಂದ
ತುಪ್ಪ ಮಾರೊಳನ ತಡೆದಾನೆ
ತುಪ್ಪ ಮಾರೊಳನ ತಡೆದಾನೆ ಕೇಳ್ಯಾನೆ
ತುಪ್ಪಾದ ಸುಂಕ ಕೊಡಬೇಕು

ತುಪ್ಪಾದ ಸುಂಕಕೊಟ್ಟು ಹಾದಿಬಿಡಂದಾರೆ
ಕ್ರಿಸ್ಣ ಬಾಗಿ ಮುಂಜೆರಗ ಇಡಿದಾನೆ

ಕುಸುರೆ ಕಡಗಾದ ಅಸನಾದ ಗೊಲ್ಲುತಿ
ವಸಮನೆಗೆ ರಂಗ ಕರೆದಾನೆ
ವಸಮನೆಗೆ ರಂಗ ಕರೆದಾನೆ ಪಟ್ಟಾದ
ರಾಯಕಂಡಾರೆ ಬಯವೇನೋ

ಕೀಲು ಕಡಗಾದ ಮೇಲಾದ ಗೊಲ್ಲತಿಯ
ವಾರೀಗೆ ರಂಗ ಕರೆದಾನೆ
ವಾರೀಗೆ ರಂಗ ಕರೆದಾನೆ ಮೋವಾದ
ಗಂಡ ಕಂಡಾರೆ ಬಯವೇನೆ

ಆಲು ಸ್ವಾರೀಯ ಬಾರಿಮ್ಯಾಲಿಡೆಯೆಂದ
ದಾಯನಾಡಾಕೆ ನೀನು ಬರಬೇಕೆಂದ

ದಾಯನಾಡಾಕೆ ಮಾವ ಕಂಡಾನರಿಯೆ
ಮಾನಾ ಕಳೆದಾನೋ ಸ್ರೀ ಅರಿಯೇ

ಮಾವಾನಂಬೋನು ಅವನ್ಯಾರೆ
ನನ್ನಾಕೂಡೆ ದಾಯನಾಡುಬಾರೆ

ತುಪ್ಪಾದ ಸ್ವಾರೇಯ ತಿಪ್ಪೇಯ ಮ್ಯಾಲಿಡೆಯೆಂದು
ಲೆತ್ತಾವನಾಡು ನಾಬೆ ನನಕೂಡೆಯೆಂದಾನು

ತುಪ್ಪಾದಸ್ವಾರೇಯ ತಿಪ್ಪೇಯ ಮ್ಯಾಲಿಟ್ಟು
ಲೆತ್ತಾವನಾಡಾಕೆ ಬಂದಾರೆ ಅರಿಯೆ
ಲೆತ್ತಾವನಾಡಾಕೆ ಬಂದಾರೆ ಅರಿಯೆ ವುಚ್ಚು
ಬಿಡಿಸ್ಯಾಳು ನಮ್ಮತ್ತೆ ಸ್ರೀ ಅರಿಯೆ

ಅತ್ತೆಯೆಂಬೋಳು ಅವಳ್ಯಾರೆ
ನನ ಕೂಟೆ ಲೆತ್ತಾನಾಡಾಕೆ ಬಾರೆ

ಆಲು ಅರಿವೇನೊತ್ತು ಜ್ಯಾರಾಳೆ ಗೊಲ್ಲತಿ
ದ್ಯಾವಾರೋಲಗದ ಬಸವಣ್ಣ
ದ್ಯಾವಾರೋಲಗದ ಬಸವಣ್ಣ ಸರಣಂದು
ಆರ್ಯಾವೆ ಕೊಡವೆ ದಗನಾಕೆ

ಆರ್ಯಾವೆ ಕೊಡವೆ ದಗನಾಕೆ ಗೊಲ್ಲತಿ
ಮೇಲು ಜಂಗಿನ ಕೆಸರ ತುಳದಾಳೆ

ಮಜ್ಜಿಗೆಯರಿವೇನೊತ್ತು ಬಿದ್ದಾಳೆಗೊಲ್ಲತಿ
ಗುಜ್ಜಾರ್ವಾಲಗದ ಬಸವಣ್ಣ
ಗುಜ್ಜಾರ್ವಾಲಗದ ಬಸವಣ್ಣ ಸೆರಣಂದು
ಎದ್ದಾವೆ ಕೊಡವೆ ದಗನಾಕೆ

ರಾತ್ರಿಯ ನಮ್ಮನಿಗೆ ಕಳ್ಳಾನುಬಂದಿದ್ದ
ಸೆಳ್ಳುಗುರಿಲಿ ಅಗುಣೆ ತಗುದಿದ್ದ
ಸೆಳ್ಳುಗುರಿಲಿ ಅಗುಣೆ ತಗುದಿದ್ದ ಕ್ರಿಸ್ಣಯ್ಯ
ಆಲು ಚೆಲ್ಲಿದ್ದ ನಡುವುನಿಲಿ

ಸಂಜೇಲಿ ನಮ್ಮನಿಗೆ ಕಳ್ಳಾನುಬಂದಿದ್ದ
ಎಬ್ಬುಗುರಿಲಿ ಅಗುಣೆ ತಗುದಿದ್ದ
ಎಬ್ಬುಗುರಿಲಿ ಅಗುಣೆ ತಗುದಿದ್ದ ಕ್ರಿಸ್ಣಯ್ಯ
ಮಸುರು ಚೆಲ್ಲಿದ್ದನ ನಡುಮನಿಗೆ

ವಲೆಯಾದೋಳೆ ಊರಾವರಗಿರುವೋಳೆ
ಬಾಡೀದ ಎಲೆಯ ಮೆಲುವೋಳೆ
ಬಾಡೀದ ಎಲೆಯ ಮೆಲುವೋಳೆ ಗೊಲ್ಲತಿಗೆ
ನೀನೆಂಗೆ ಒಲುದೆ ಸಿರಿ ಅರಿಯೆ

ವಲಯಾಗಿರಲೇಳೆ ವೂರಾವರಗಿರಲೇಳೆ
ಬಾಡೀದ ಎಲೆಯಾಮೆಲಲೇಳೆ
ಬಾಡೀದ ಎಲೆಯಾಮೆಲಲೇಳೆ ಗೊಲ್ಲತಿನ
ಅಗಲಿಯೊಂದರಗಳಗೆ ಇರಲಾರೆ

ಮುಟ್ಟು ಆಗಿರುವೋಳು ಅಟ್ಟ್ಯಾವರಗಿರುವೊಳು
ಬತ್ತೀದ ಎಲೆಯಾ ಮೆಲುವೋಳು
ಬತ್ತೀದ ಎಲೆಯಾ ಮೆಲುವೋಳು ಗೊಲ್ಲತಿನ
ಗ್ಯಾನಗೋವಿಂದ ಒಲುದನಲ್ಲೇ

ಮುಟ್ಟು ಆಗಲೇಳೆ ಅಟ್ಟಿವರಗಿರಲೇಳೆ
ಬತ್ತೀದ ಎಲೆಯ ಮೆಲಲೇಳೆ
ಬತ್ತೀದ ಎಲೆಯ ಮೆಲಲೇಳೆ ಗೊಲ್ಲತಿನ
ಬಿಟ್ಟೊಂದರ ಗಳಿಗೆ ಇರಲಾರೆ

ಸನಿವಾರ ಸಂತೆಮಾಡಿ ನಡುವೆ ವುಸ್ತಿವೋದ
ಪುನುಗು ಪೂಜಾಜಿ ಬೆಲೆಮಾಡಿ
ಪುನುಗು ಪೂಜಾಜಿ ಬೆಲೆಮಾಡಿ ಪರರೆಂಡ್ರಿಗೆ
ವಸ್ತಿ ಉಳುದಾನೆ ಕಿಸ್ಣಯ್ಯ

ಅತ್ತೇಯಕೊಂಡೋಗಿ ತಿಪ್ಪೇಯ ಅತ್ತಿಸ್ದ
ಮಾವುಗೆ ಗನಗಾಳೆ ಇಡಿಸ್ಯಾನೆ
ಮಾವುಗೆ ಗನಗಾಳೆ ಇಡಿಸ್ಯಾನೆ ಎಣ್ಣೆನಿನ್ನ
ಬಂಡುಮಾಡೋರನ್ನ ಬಿಡಿಸಾನೆ

ಮಾವಾನ ಕೊಂಡೋಗಿ ಮಾಳೀಗೆ ಅತ್ತಿಸ್ದ
ಗಂಡಾಗೆ ಗನಗಾಳೆ ಇಡಿಸ್ಯಾನೆ
ಗಂಡಾಗೆ ಗನಗಾಳೆ ಇಡಿಸ್ಯಾನೆ ಎಣ್ಣೆನಿನ್ನ
ಖಂಡುಮಾಡೋರನ್ನ ಬಿಡಿಸಾನೆ

ಸಿರಿಅರಿಯೆ ಸಿರಿಅರಿಯೆ ಸೀರೀಯ ಕೊಡುನಮದು
ಮಾವಾ ಕಂಡಾರೆ ಬೈದಾರು
ಮಾವಾ ಕಂಡಾರೆ ಬೈದಾರು ಸೀರೇಯು
ಮನಮುತ್ತುಗಳು ಬಿಗಿದೋವು

ಇಂದಾಲ ಕೈಮುಂದಾಕೆ ಕಟಿಕಂಡು
ದೊಂಬಾರಲಾಗ ವಡಿಯೂತ
ದೊಂಬಾರಲಾಗ ವಡಿಯೂತ ಬಂದಾರೆ
ಸೀರೆ ನಮ್ಮೀಗೆ ಕೊಡುತೀನಿ

ಸಿರಿ ಅರಿಯೆ ಸಿರಿ ಅರಿಯೇ ಕುಪ್ಪಸವ ಕೊಡುನಮಗ
ಅತ್ತೆ ಕಂಡಾರೆ ಬೈತಾರೆ ನಮ್ಮ
ಅತ್ತೆ ಕಂಡಾರೆ ಬೈತಾರೆ ನಮ್ಮ ಕುಪ್ಪಸಕೆ
ಬಟ್ಟಮುತ್ತುಗಳೇ ಬಿಗುದಾವೆ

ಆಸೇಯ ಕೈಯ್ಯ ಕೈಗೆ ಕಟ್ಟಿಕಂಡು
ಪಾತಾರಲಾಗ ವಡಯೂತ
ಪಾತಾರಲಾಗ ವಡಯೂತ ಬಂದಾರೆ
ಕುಪ್ಪಸವ ನಿಮಗೆ ಕೊಡುತೀನಿ

ಅಣ್ಣಾಗೆ ವೋಗೋದು ಅನ್ನೆರಡು ದಿನವೈತೆ
ಅಣ್ಣಾನಮನೆಯ ಬಳುದಾರೆ
ಅಣ್ಣಾನಮನೆಯ ಬಳುದಾರೆ ಅಣ್ಣಗಳು
ಅಳ್ಳಿಗೊಂದಾಳ ಕಳಿವ್ಯಾರೆ

ಅಪ್ವಗೋಗೋದು ಇಪ್ಪತ್ತು ದಿನವೈತೆ
ಅಪ್ವಗಳೆಮನೆ ತೊಳುದವರೆ
ಅಪ್ಪಗಳೆಮನೆ ತೊಳುದವರೆ ಅಪ್ವಗಳು
ಪಟ್ಟಣಕೊಂದಾಳ ಕಳುವವರೆ

ಅತ್ತು ಕಂಡುಗ ನೆಲ್ಲು ಕುಟ್ಟಿ ಕ್ಯಾಸಲು ಮಾಡಿ
ಅಟ್ಯಾಗ ಸೆಂಕದಣಿಮಾಡಿ
ಅಟ್ಯಾಗ ಸೆಂಕದಣಿಮಾಡಿ ಚಿನ್ನದಗಿರಿಯ
ಕ್ರಿಸ್ಣಾಗ ಪೂಜೇಯನೆಡಿಸ್ಯಾರೆ

ಆರು ಕಂಡುಗ ನೆಲ್ಲ ತೂರಿಕ್ಯಾಸಲು ಮಾಡಿ
ವೋಣ್ಯಾಗ ಸೆಂಕದಣಿಮಾಡಿ
ವೋಣ್ಯಾಗ ಸೆಂಕದಣಿಮಾಡಿ ಚಿನ್ನದಗಿರಿಯ
ಗೋವಿಂದಗ ಪೂಜೇಯ ನೆಡಿಸ್ಯಾರೆ

ಕ್ವಾಣೇಯ ಮೈಯಾಗೆ ಪೂಜೆಯೂ ಆಗಿ
ತ್ರಾಣದೀವಿಗೆ ಬೆಳಕೀಲಿ
ತ್ರಾಣದೀವಿಗೆ ಬೆಳಕೀಲಿ ಕರಡ್ಯೋರು
ಬಲ ಮೇಲಗಿರಿಗೆ ನಡೆದಾರೆ

ಇಂದಾಲಮನಿಯಾಗೆ ಚೆಂಬೆರಡು ಪೂಜ್ಯಾಗಿ
ಗಂದದೀವಿಗೆ ಬೆಳಕೀಲಿ
ಗಂದದೀವಿಗೆ ಬೆಳಕೀಲಿ ಕರಡ್ಯೋರ
ಕಂದ ಮೇಲಗಿರಿಗೆ ನಡೆದಾನೆ

ನಡೆದಲ್ಲಿ ಗೋವಿಂದ ನುಡುವಲ್ಲಿ ಗೋವಿಂದ
ಎಡವೀದರಲ್ಲೀಗೆ ಸಿರಿಅರಿಯೆ
ಎಡವೀದರಲ್ಲೀಗೆ ಸಿರಿಅರಿಯೆ ರಾಮರ
ಪರಿಸೆ ನಡೆದಾವೆ ಮೂಡಮೊಕನಾಗಿ

ನಿಂತಲ್ಲಿ ಗೋವಿಂದ ಕುಂತಲ್ಲಿ ಗೋವಿಂದ
ಕೊಂಕೀದರಲ್ಲೀಗೆ ಸಿರಿ ಅರಿಯೆ
ಕೊಂಕೀದರಲ್ಲೀಗೆ ಸಿರಿ ಅರಿಯೆ ರಾಮರ
ಪರಿಸೆ ನಡೆದಾವೆಮೂಡಮೊಕನಾಗಿ

ಅತ್ತಾಲೆ ಡಿಮಿಡಿಮಿ ಇತ್ತಾಲೆ ಡಿಮಿಡಿಮಿ
ನಿಬ್ಯಾಣದಾಗೆ ಡಿಮಿಡಿಮಿ
ನಿಬ್ಯಾಣದಾಗೆ ಡಿಮಿಡಿಮಿ ಕಾರದಿಟ್ಟು
ಕುಟ್ಟಿತುಂಬೋರೆ ಗಡಿಯಿಲ್ಲ

ಅಲ್ಲೀನೆ ಡಿಮಿಡಿಮಿ ಸಾಲಗೇರ್ಯಾಗೆ ಡಿಮಿಡಿಮಿ
ಸಾಲಗೇರ್ಯಾಗೆ ಡಿಮಿಡಿಮಿ
ಸಾಲಗೇರ್ಯಾಗೆ ಡಿಮಿಡಿಮಿ ಕಾರದಿಟ್ಟು
ಮಾಡಿತುಂಬೋರೆ ಗತಿಯಿಲ್ಲ

ತುಪ್ಪಾದ ಅಂಚಿಟ್ಟು ಇಪ್ಪತ್ತೋಳಿಗೆ ಮಾಡಿ
ಮತ್ತೊಂದೆಮಾಡೆ ಇರಿಯಕ್ಕ
ಮತ್ತೊಂದೆಮಾಡೆ ಇರಿಯಕ್ಕ ಮೂಡನಾಡ
ತಿಮ್ಮಯ್ಯಗೋಗೊರೆ ಅಸುದಾರೆ

ಎಣ್ಣೇಯ ಅಂಚಿಕ್ಕಿ ಅನ್ನೆರಡೋಳಿಗೆ ಮಾಡಿ
ಇನ್ನೊಂದೆ ಮಾಡೆ ಅಡೆದಮ್ಮ
ಇನ್ನೊಂದೆ ಮಾಡೆ ಅಡೆದಮ್ಮ ಮೂಡನಾಡ
ಗೊವಿಂದಗೋಗೋರೆ ಅಸುದಾರೆ

ಆದೀಯ ಮನೆಯಮ್ಮ ಬೀದೀಯ ಮನೆಯಮ್ಮ
ಅದೇವೇ ನಮ್ಮ ಅವಲಕ್ಕಿ
ಅದೇವೇ ನಮ್ಮ ಅವಲಕ್ಕಿ ಮೂಡನಾಡ
ಗೋವಿಂದಗೋಗೋರೆ ಅಸುದಾರೆ

ಸಂದೀಯ ಮನೆಯಕ್ಕ ಗೊಂದೀಯ ಮನೆಯಕ್ಕ
ಬೆಂದವೇನಮ್ಮ ಸಿನುಕುಳ್ಳಿ
ಬೆಂದವೇನಮ್ಮ ಸಿನುಕುಳ್ಳಿ ಮೂಡನಾಡ
ತಿಮ್ಮಯ್ಯ ಗೋಗೋರೆ ಅಸುದಾರೆ

ಮಾಳೀಗೆ ಮನೆಯಾಗೆ ಮನುಗಿರುವ ಬಸವಾನ
ನಾರೇರ ವೋಗಿ ಮಕತೊಳುದು
ನಾರೇರ ವೋಗಿ ಮಕತೊಳುದು ದೂಪನಾಕಿ
ಸ್ವಾಮಿ ಕುಂಟಣೆಗೆ ನಡಿಬಸವ

ಕೊಟ್ಟೀಗೆ ಮನೆಯಾಗೆ ಕಟ್ಟಿರುವ ಬಸವಾಗೆ
ನಿಸ್ತ್ರೇರ ವೋಗಿ ಮಕತೊಳುದು
ನಿಸ್ತ್ರೇರ ವೋಗಿ ಮಕತೊಳುದು ದೂಪನಾಕಿ
ಅಪ್ಪನ ಕುಂಟಣೆಗೆ ನಡಿಬಸವ

ವೋರೀಯ ಇಡಿತರುಸಿ ವೋಣ್ಯಾಗನಿಲ್ಲುಸಿ
ಸೀಳಿಕೇದಿಗೆಯ ಮುಡಿಸ್ಯಾರೆ
ಸೀಳಿಕೇದಿಗೆಯ ಮುಡಿಸ್ಯಾರೆ ದೂಪನಾಕಿ
ಕುಸುಲಾದ ಡಮರುಗ ವೊರಿಸ್ಯಾರೆ

ಡಮಗೆಲ್ಲಿ ಆದಾವೆ ಡಮಗೆಲ್ಲಿವಡಿಸ್ಯಾರೆ
ಅಲ್ಲಿನ್ನ ಆಲಮ್ನ ಗುಡಿಯಾಗೆ
ಅಲ್ಲಿನ್ನ ಆಲಮ್ನ ಗುಡಿಯಾಗೆ ಅಪ್ವಗಳು
ಮುತ್ತು ಕೊಟ್ಟೆ ಡಂಗುರು ವಡಿಸ್ಯಾರೆ

ಸಜ್ಜೆ ತೆನಿಮ್ಯಾಲೆ ಗುಬ್ಬಿ ಗೂಡಾನಿಟ್ಟು
ಮದ್ದಾನೆ ಮ್ಯಾಲೆ ಡಮಗೇರಿ
ಮದ್ದಾನೆ ಮ್ಯಾಲೆ ಡಮಗೇರಿ ಅಣ್ಣಗಳು
ಮುದ್ದು ಮೂಡಲಗಿರಿಗೆ ನಡೆದಾರೆ

ಜ್ವಾಳದ ತೆನಿಮ್ಯಾಲೆ ಕೋಗುಲಿಗೂಡನಿಕ್ಕಿ
ಕಾಳೋರಿ ಮ್ಯಾಲೆ ಡಮಗೀಲಿ
ಕಾಳೋರಿ ಮ್ಯಾಲೆ ಡಮಗೀಲಿ ಅಣ್ಣಗಳು
ಮುದ್ದು ಮೂಡಲಗಿರಿಗೆ ನಡೆದಾರೆ

ಎಡೆಯಾ ಬಸವಾಗೆ ಎಡದೀಡೆ ಬೆಲ್ಲಾವ
ವಡಿಯಾ ತಿಮ್ಮಯ್ಯನ ಗಿರಿಗೆ
ವಡಿಯಾ ತಿಮ್ಮಯ್ಯನ ಗಿರಿಗೆ ವೋಗಬಸವ
ವಡದಿಡೆ ತೆಂಗೀನ ಎಳೆಗಾಯಿ

ಮುದ್ದು ಬಸವಾಗೆ ಎದ್ದಿಡೆ ಬೆಲ್ಲಾವ
ಮುದ್ದುತಿಮ್ಮಯ್ಯ ಗಿರಿಗೋಗ
ಮುದ್ದುತಿಮ್ಮಯ್ಯ ಗಿರಿಗೋಗ ಬಸ್ಯಾಗೆ
ಎಬ್ಬಿಡು ತೆಂಗೀನ ಎಳೆಗಾಯಿ

ಚಂದ್ರಗಿರಿಯವ್ವನ ಕಂಡೆವಂಬುತಾರೆ
ಕೊಂಡೆವೆಂಬುತಾರೆ ಮಣಿಸರವ
ಕೊಂಡೆವೆಂಬುತಾರೆ ಮಣಿಸರವ ಅಣ್ಣಗಳು
ವೊಂದಿಸುತಾರೆ ಬಸವಾಗೆ

ಸೂರ್ಯದ ಗಿರಿಯಪ್ಪಾನ ನೋಡಿವೆಂಬುತಾರೆ
ಮಾಡಿಸುತಾರೆ ಮುತ್ತಿನಸರವ
ಮಾಡಿಸುತಾರೆ ಮುತ್ತಿನಸರವ ಅಣ್ಣಗಳು
ರೂಡಿಸುತಾರೆ ಬಸವಾಗೆ

ಅಣ್ಣಾರಿಗೆ ವೋಗೋರಿಗೆ ಇನ್ನೇನೇಳಮ್ಮ
ವೊನ್ನುಬೇಕು ನಮಗೆ ಬಳೆಬೇಕು
ವೊನ್ನುಬೇಕು ನಮಗೆ ಬಳೆಬೇಕು ಅಣ್ಣಯ್ಯ
ಮುತ್ತೈದೆತನವ ಪಡಿಬೇಕು

ಅಪ್ವಾರಿಗೆ ವೋಗೋರಿಗೆ ಮತ್ತೇನು ಏಳಲಮ್ಮ
ಮುತ್ತುಬೇಕು ನಮಗೆ ಬಳೆಬೇಕು
ಮುತ್ತುಬೇಕು ನಮಗೆ ಬಳೆಬೇಕು ಅಣ್ಣಯ್ಯ
ಮುತ್ತೈದೆತನವ ಪಡಿಬೇಕು

ಗಂಡದಾಸಾಲಿಗೆಲ್ಲ ತಂಗಿಬೀಗನಾಕು
ಎಂಡಿರುಮಕ್ಕಳಾನೊಡಗೊಂಡು
ಎಂಡಿರುಮಕ್ಕಳಾನೊಡಗೊಂಡು ತಂಗಿನಾವು
ತಿಮ್ಮಯ್ಯಗೋಗಿ ಬರತೀವಿ