ಉಪ್ಪರಿಗೇಗೆಲ್ಲ ಅಕ್ಕಬೀಗನಾಕಿ
ಅಕ್ಕತಂಗೇರನ್ನ ವಡಗೋಡು
ಅಕ್ಕತಂಗೇರನ್ನ ವಡಗೋಡು ಅಕ್ಕನಾವು
ಗೋವಿಂದಗೋಗಿ ಬರತೀವಿ

ಎತ್ತು ಎತ್ತು ಮುಂದೆ ಎತ್ತಿನ ಕಂಟಣಮುಂದೆ
ಕಪ್ಪೀನ ಕಿವಿಯ ಸೊಸಿಯಿಂದೆ
ಕಪ್ಪೀನ ಕಿವಿಯ ಸೊಸಿಯಿಂದೆ ಮಗ ಮುಂದೆ
ಮೂಡನಾಡ ತಿಮ್ಮಯ್ಯಗೋಗಿ ಬರುತೀವಿ

ವೋರಿವೋರಿ ಮುಂದೆ ವೋರಿಕಂಟಣಿಮುಂದೆ
ವಾಲೇಯ ಕಿವಿಸೊಸೆಯಿಂದೆ
ವಾಲೇಯ ಕಿವಿಸೊಸೆಯಿಂದೆ ಮಗಮುಂದೆ
ಮೂಡನಾಡ ಗೋವಿಂದಗೋಗಿ ಬರತೀವಿ

ಅಣ್ಣಗೋಗಾಲರತಿ ಎಣ್ಣೆಗುಂಬಾಲರತಿ
ಸಣ್ಣಮಳಲಾನಡೆವರತಿ
ಸಣ್ಣಮಳಲಾನಡೆವರತಿ ಮೂಡನಾಡ
ತಿಮ್ಮಯ್ಯಗೋಗೋದು ನಮಗರತಿ

ಅಪ್ಪಗೋಗಾಲರತಿ ತುಪ್ಪದಲುಂಬಾರತಿ
ಉಕ್ಕಮಳಲಾಗ ನಡೆವರತಿ
ಉಕ್ಕಮಳಲಾಗ ನಡೆವರತಿ ಮೂಡನಾಡ
ತಿಮ್ಮಯ್ಯನಿಗೋಗುದುನಮಗರತಿ

ಇಪ್ಪತ್ತು ವರುಸಾದ ತುಪ್ಪಮುಗ್ಗಲಾದಾವು
ರೊಕ್ಕಸಾಲದಲೆಬರಲಿಲ್ಲ
ರೊಕ್ಕಸಾಲದಲೆಬರಲಿಲ್ಲ ತಿಮ್ಮಯ್ಯ
ಮತ್ತೆ ಪಾಲೀಸೊಪಡಿವೊನ್ನು

ಅನ್ನೆರಡುವರುಸಾದ ಎಣ್ಣೆ ಮುಗ್ಗಲಾದಾವು
ವೊನ್ನು ಸಾಲದಲೆ ಬರಲಿಲ್ಲ
ವೊನ್ನು ಸಾಲದಲೆ ಬರಲಿಲ್ಲ ತಿಮ್ಮಯ್ಯ
ಇನ್ನು ಪಾಲೀಸೊ ಪಡಿವೊನ್ನು

ತುಪ್ಪದರಿವೆ ಬರುತಾವೆ ಅತ್ತಿನೋಡೋ ತಿಮ್ಮಯ್ಯ
ರಾಮೇನಳ್ಳಿ ಬಯಲಾಗೆ
ರಾಮೇನಳ್ಳಿ ಬಯಲಾಗೆ ನಿನ್ನೊಕ್ಕಲೆಲ್ಲ
ಯಾಲಕ್ಕಿಸೂರೆ ಬಿಡುತಾರೆ

ಆಲರಿವೆಬರುತಾವೆ ಆಯ ನೋಡೋ ತಿಮ್ಮಯ್ಯನ
ರಾಯೋಬೇನಳ್ಳಿ ಬಯಲಾಗೆ
ರಾಯೋಬೇನಳ್ಳಿ ಬಯಲಾಗೆ ನಿನ್ನೊಕ್ಕಲೆಲ್ಲ
ಯಾಲಕ್ಕಿಸೂರೆ ಬಿಡುತಾರೆ

ಅಣ್ಣಗೋಗೋರು ಎಣ್ಣುಂಡಮುದುಕಾರು
ಕೆನ್ನೆಮ್ಯಾಲೆ ಅಸಿಬೆಬರಿಗಾಲು
ಕೆನ್ನೆಮ್ಯಾಲೆ ಅಸಿಬೆಬರಿಗಾಲು ಬಂದೋರನ್ನ
ಅನ್ನೆರಡು ದಿನಕೆ ಕಳುವಯ್ಯ

ಅಪ್ಪಾಗೆ ವೋಗೋರು ತುಪ್ಪುಂಡ ಮುದುಕಾರು
ನೆತ್ತಿಮ್ಯಾಲಸುಬೆ ಬರಿಗಾಲು
ನೆತ್ತಿಮ್ಯಾಲಸುಬೆ ಬರಿಗಾಲು ಬಂದರನ
ಇಪ್ಪತ್ತೆದಿನಕ ಕಳಿಸಯ್ಯ

ಅಣ್ಣಾಗೆ ವೋಗೋರೆ ಬಣ್ಣಾನುಟ್ಟುಕಳ್ಳಿ
ಬಣ್ಣಾವ ಬಿಟ್ಟುಬಿಳಿದುಡಿರಿ
ಬಣ್ಣಾವ ಬಿಟ್ಟುಬಿಳಿದುಡಿರಿ ಗಜಗೊಂಡಾದ
ಅನ್ನೆರಡೆ ವಂಡ ಮುಳುಗ್ಯಾಳೆ

ಅನ್ನೆರಡೆವಂಡ ಮುಳುಗೋದ ಅಮ್ಮಾಗೆ
ಆಗ ಕಾಣುತಾನೆ ಸಿರಿಅರಿಯೆ

ಅಪ್ಪಾಗೆ ವೋಗೋರು ಪಟ್ಟಿ ಉಟ್ಟುಕಳ್ಳಿ
ಪಟ್ಟೇಯ ಬಿಟ್ಟುಬಿಳಿದುಡಿ
ಪಟ್ಟೇಯ ಬಿಟ್ಟುಬಿಳಿದುಡಿ ಗಜಗೊಂಡಾದ
ಇಪ್ಪತ್ತೇ ವಂಡಮುಣುಗೋಳೆ

ಇಪ್ಪತ್ತೇ ವಂಡಮುಣುಗೋಳೆ
ಮತ್ತೆ ಕಾಣುತಾನೆ ಸಿರಿಅರಿಯೆ

ಎಣ್ಣೆ ವಳೆಯಾಗೆ ಅಣ್ಣಲಾರೆವುಬಂಡಿ
ಅಣ್ಣಯ್ಯಗ್ವಾಲೆಬರದೇನು
ಅಣ್ಣಯ್ಯಗ್ವಾಲೆಬರದೇನು ಚಿನ್ನದಗಿರಿಯ
ಸಣ್ಣನಾಮದರಸು ದಯವಾಗೋ

ತುಪ್ಪದೊಳೆಯಾಗೆ ಅತ್ತಲಾರವು ಬಂಡಿ
ಅಪ್ಪಯ್ಯಗ್ವಾಲೆ ಬರದೇನು
ಅಪ್ಪಯ್ಯಗ್ವಾಲೆ ಬರದೇನು ಚಿನ್ನದಗಿರಿಯು
ಪಟ್ಟೆನಾಮದರಸು ದಯವಾಗೋ

ಆರಲಾರೆ ಗಿರಿಯ ತೂರಲಾರೆ ಮೆಳೆಯ
ಆರಿಬರಲಾರೆ ಗಿರಿದೂರ
ಆರಿಬರಲಾರೆ ಗಿರಿದೂರ ದಾಸರ ಕೂಟೆ
ಯಾಲಕ್ಕಿ ಮುಡುಪು ಕಳಿಸೇನು

ಅತ್ತಲಾರೆ ಗಿರಿಯ ಸುತ್ತಲಾರೆ ಮೆಳೆಯ
ಅತ್ತಿಬರಲಾರೆ ಗಿರಿದೂರ
ಅತ್ತಿಬರಲಾರೆ ಗಿರಿದೂರ ದಾಸರ ಕೊಟೆ
ರೊಕ್ಕದ ಮುಡುಪು ಕಳಿಸೇನು

ರೊಕ್ಕದಮುಡುಪು ಕಳಿವೇನು ತಿಮ್ಮಯ್ಯ
ಒಪ್ಪೀಸಿಕಳ್ಳೋ ಅರಿಕೇಯ

ಒಪ್ಪೀಸಿಕಂಬಾಕೆ ಎತ್ತೇನೆ ಎಮ್ಮೇನೆ
ಸುತ್ತಿಬಾರೆ ನನ್ನ ಗಿರಿಗಾಳ
ಸುತ್ತಿಬಾರೆ ನನ್ನ ಗಿರಿಗಾಳ ಬಾಗಲುಮುಂದೆ
ಕತ್ತರಿಸೆ ಮಗನ ಜಡಿಗಾಳ

ವೋದ ವೋದರನೆಲ್ಲ ಮ್ವಾರೆ ಬೋಡನ ಮಾಡಿ
ಆದ ಮುಡುಪುಗಳ ಸೆಳಕಂಡು
ಆದ ಮುಡುಪುಗಳ ಸೆಳಕಂಡು ಗಿರಿಮ್ಯಾಲೆ
ಜಂಬಾರ ಮಗಳೆ ಇಳಿಯೆಂದ

ಬಂದ ಬಂದರನೆಲ್ಲ ಮಂಡೆ ಬೋಡರನಮಾಡಿ
ತಂದ ಮುಡಿಪುಗಳ ಸೆಳಕಂಡ
ತಂದ ಮುಡಿಪುಗಳ ಸೆಳಕಂಡ ಗಿರಿಮ್ಯಾಲೆ
ಜಂಜಾಟಮಗಳೆ ಇಳಿಯೆಂದ

ಅಪ್ಪನ ಗಿರಿಗೆ ವೋಗಿ ತುಪ್ಪದ ಗಿರಿಯಕಂಡೆ
ಅಪ್ಪ ತಿಮ್ಮಯ್ನ ಗಿರಿಗೋಗಿ
ಅಪ್ಪ ತಿಮ್ಮಯ್ನ ಗಿರಿಗೋಗಿ ನಾಕಂಡೆ
ಕೊಚ್ಚಕ್ಕಿಮಾರಮಳಿಗೇಯ

ಅಣ್ಣದ ಗಿರಿಗೋಗಿ ಚಿನ್ನದ ಗಿರಿಯ ಕಂಡೆ
ತಿಮ್ಮಯ್ಯಗಿರಿಗೋಗಿ
ತಿಮ್ಮಯ್ಯಗಿರಿಗೋಗಿ ನಾಕಂಡೆ
ಸಣ್ಣಕ್ಕಿಮಾರ ಮಳಿಗೇಯ

ಅಳ್ಳಾದ ನೀರೀಗೆ ಅರಿವೇಯ ಸೊಪ್ಪಿಗೆ
ಬಡವಾರ ಮನೆಯ ಔತುಣಕೆ
ಬಡವಾರ ಮನೆಯ ಔತುಣಕೆ ತಿಮ್ಮಯ್ಯ
ಮೇಲುಗಿರಿಯ ಇಳುದಾನೆ

ಬಾಡೀದ ಬದನೀಗೆ ಬಾವೀಯ ನೀರೀಗೆ
ಬಾಳೋರ ಮನೆಯ ಔತುಣಕೆ
ಬಾಳೋರ ಮನೆಯ ಔತುಣಕೆ ತಿಮ್ಮಯ್ಯ
ದೊರೆಮೇಲಗಿರಿಯ ಇಳಿದಾನೆ

ಬಿತ್ತೀದೊಲವಾ ಬಿಟ್ಟು ಎತ್ತಮಕ್ಕಳ ಬಿಟ್ಟು
ಅಪ್ಪಗತಿಯೆಂದು ಬರುವರಿಗೆ
ಅಪ್ಪಗತಿಯೆಂದು ಬರುವರಿಗೆ ಬಕುತರಿಗೆ
ಮತ್ತೇನು ಕೊಡುವೆ ಸಿರಿ ಅರಿಯೆ

ತುಪ್ಪ ಅನ್ನಕೊಡುವೆ ಬಾಗ್ಯವ ಕೊಡುವೆ
ಪುತ್ರಾನ ಕೊಡುವೆ ಬದಲೀಗೆ
ಪುತ್ರಾನ ಕೊಡುವೆ ಬದಲೀಗೆ ನಮಗಿರಿಗೆ
ತಪ್ಪದಂತೆ ಬರುವ ಬಕುತರಿಗೆ

ಅರುಗಿದೊಲವ ಬಿಟ್ಟು ಆಡುಮಕ್ಕಳ ಬಿಟ್ಟು
ಗುರುವೆ ಗತಿಯೆಂದು ಬರುವ
ಗುರುವೆ ಗತಿಯೆಂದು ಬರುವ ಬಕುತರಿಗೆ
ತಿರಗೇನು ಕೊಡುವ ಸಿರಿ ಅರಿಯೆ

ತುಪ್ಪಾನ್ನ ಕೊಡುವೆ ಮತ್ತಸ್ಟು ಭಾಗ್ಯ ಕೊಡುವೆ
ಪುತ್ರಾನ ಕೊಡುವೆ ಬಗಲೀಗೆ
ಪುತ್ರಾನ ಕೊಡುವೆ ಬಗಲೀಗೆ ನಮಗಿರಿಗೆ
ಒಪ್ಪುವಂತೆ ಬರುವ ಬಕುತರಿಗೆ

ವಡಿಯ ತಿಮ್ಮಯ್ಯ ದುಡುವ ನೋಡಲುಬಂದೆ
ಎಡುವುಗಲ್ಲುಗಳು ಎಟುವೂತ
ಎಡುವುಗಲ್ಲುಗಳು ಎಟುವೂತ ನಾಬಂದೆ
ಬಾಗಿಲು ನಿಂತೋರೆ ಬಿಡಿರಮ್ಮ

ಬಾಗಿಲು ನಿಂತೋರೆ ಬಿಡಿರಮ್ಮ ವಳಿಗಿರುವೋ
ನಾಗಬೂಸುರನೇ ದಯವಾಗೋ

ಅಪ್ಪ ಗೋವಿಂದಾನ ವಪ್ಪನೋಡಲು ಬಂದೆ
ಬಾಗಿಲು ಕಾಯೋಕೆ ಬಿಡಿರಲ್ಲೆ
ಬಾಗಿಲು ಕಾಯೋಕೆ ಬಿಡಿರಲ್ಲೆ ವಳಗಿರುವ
ನಾಗಬೂಸುರನೆ ದಯವಾಗೋ

ದೇವಾರ ನೋಡೇವು ಬಾಜು ಬಿಡೊಪೂಜಾರಿ
ಮ್ಯಾಗಾಳಕೀಲ ಸಡುಲೀಸೊ
ಮ್ಯಾಗಾಳಕೀಲ ಸಡುಲೀಸೊ ತಿಮ್ಮಯ್ಯ
ಮೇಲ್ದೀವಿಗೆ ಎಣ್ಣೆ ಉರುದೇವೆ

ತಿಮ್ಮಯ್ಯ ನೋಡೇವು ಎಂಬು ಬಿಡೊ ಪುಜಾರಿ
ಇಂದಾಲಕೀಲ ಸಡುಲೀಸೋ
ಇಂದಾಲಕೀಲ ಸಡುಲೀಸೋ ತಿಮ್ಮಯ್ನ
ನಂದ ದೀವಿಗೆ ಎಣ್ಣೆ ಎರುದೇವು

ಅಪ್ಪಾನ ಪಾಳೀ ಕಟ್ಟೈತೆ ನಾಣ್ಯಾದಾಗ
ಮುತ್ತೀನಲತೆ ಅರಗಿಳಿಯು
ಮುತ್ತೀನಲತೆ ಅರಗಿಳಿಯು ಅಂಸೆಯಿಂಡು
ಕೆತ್ತುತ ಬಡಗಿ ಕಡದವನೆ

ಅಣ್ಣಾನಪಾಳಿಯ ಅಣೈತೆ ನಾಣ್ಯದಾಗೆ
ಚಿನ್ನಾದ ಕೂಟ ಮಾದ್ವಾರ
ಚಿನ್ನಾದ ಕೂಟ ಮಾದ್ವಾರ ಮ್ಯಾಲೆ
ತಾವರೆಲತೆಯರ ಗಿಳಿಯು

ತಾವರೆಲತೆಯರ ಗಿಳಿಯು ಅಂಸೆಯಿಂಡು
ಮೂಡೂತ ಬಡಗಿ ಕಡಿದವನೆ

ಅಣ್ಣಾನ ಗಿರಿಯವೊಕ್ಕುನೋಡನು ಬಾರೆ
ಗಂದಾದ ಕರಡೀಲಿ ನೆಲಗಾರೆ
ಗಂದಾದ ಕರಡೀಲಿ ನೆಲಗಾರೆ ಕೊಟೈತೆ
ಅಣ್ಣತಿಮ್ಮಯ್ನಗಿರಿಯಾಗೆ

ಅಪ್ಪಾನಗಿರಿಯ ವೊಕ್ಕುನೋಡನುಬಾರೆ
ಮುತ್ತೀನಕರಡೀಗೆ ನೆಲಗಾರೆ
ಮುತ್ತೀನಕರಡೀಗೆ ನೆಲಗಾರೆ ಕೊಟ್ಟೈತೆ
ಅಪ್ಪತಿಮ್ಮಯ್ನ ಗಿರಿಯಾಗೆ

ಏರಿಮ್ಯಾಗಳ ನ್ಯಾರನ್ನ ತ್ರೊಳಸೀಯ
ನಾರಿಬಾರೆಂದು ಕರೆದಾನೆ
ನಾರಿಬಾರೆಂದು ಕರೆದಾನೆ ತಿಮ್ಮಯ್ಯ
ನಾಮಾವನಿಟ್ಟು ನಗಿಸ್ಯಾನೆ

ಕಟ್ಟಿಯಾಗಳ ಬಟ್ಟನ್ನ ತ್ರೊಳಸೀಯ
ನಿಸ್ತ್ರೆ ಬಾರೆಂದು ಕರೆದಾನು
ನಿಸ್ತ್ರೆ ಬಾರೆಂದು ಕರೆದಾನು ತಿಮ್ಮಯ್ಯ
ತಿಲುಕಾವನಿಟ್ಟು ನಗಿಸ್ಯಾನು

ಸಣ್ಣೋಳು ಲಕ್ಕಮ್ನ ಬಣ್ಣ ಉಡುವೆಂದಾರೆ
ಎಣ್ಣಾದವಂದುಮಡಿಗಾಳು
ಎಣ್ಣಾದವಂದುಮಡಿಗಾಳು ಮದುರೇಯ
ಅಣ್ಣುವಂಬಾಳೆ ವನದಾಗೆ

ಚಿಕ್ಕತ್ರೊಳಸಮ್ನದಸಲೀಯ ಉಡೆಂದಾರೆ
ಮಸಿಯಾದವಂದು ಮಡಿಗಾಳು
ಮಸಿಯಾದವಂದು ಮಡಿಗಾಳು ಮದುರೇಯ
ಮುಸುಗಿನೊಂಬಾಳೆವನದಾಗೆ

ನೀರು ಇದ್ದಲ್ಲಿ ನೆರುಳು ಇರುವಾದುಸಾಜ
ವರನು ಇದ್ದಲ್ಲಿ ವರತೇರಿರುವೋದು
ವರನು ಇದ್ದಲ್ಲಿ ವರತೇರಿರುವೋದು ಸಾಜ
ನಡಿಯೇ ನಿಮ್ಮಿಂದೆ ಬರುತೀನಿ

ವನಗಾಳಿದ್ದಲ್ಲಿ ಗಿಣಿಗಾಳಿರುವುದು ಸಾಜ
ವರನು ಇದ್ದಲ್ಲಿ ವರತೇರು
ವರನು ಇದ್ದಲ್ಲಿ ವರತೇರು ಸಾಜ
ನೆಡಿಯ ನಿಮ್ಮಿಂದೆ ಬರುತೀನಿ

ಗೋಕುಲದಲ್ಲಿ ಪುಟ್ಟಿದನಂತೆ
ಗೋವ್ ಗಾಳ ಕಾಯ್ದನಂತೆ
ಕೊಳಲೂದಿ ಸೆಳೆದು ಸೀರೆ
ಮರೆವನೇರಿದನೆ ಗೋಪಾಲ
ಆರತಿಮಾಡನು ರಾದೆ ಕ್ರಿಸ್ಣಗೆ
ಬಾರೆ, ಮಂಗಳಾ ಜಯಮಂಗಳಾ

ಕಲ್ಲುಕಂಬ ಕಟ್ಟುವರಂತೆ
ಕಂಬದಿಂದ ಪುಟ್ಟಿದನಂತೆ
ಕಾಳಿಂಗುನ ಪಣೆಯಾತುಳುದು
ಬಾಲೇರಿಗೊಲಿದ ಗೋಪಾಲಕ್ರಿಸ್ಣ
ಆರತಿಮಾಡನು ರಾದಕ್ರಿಸ್ಣಗೆ
ಬಾರೆಮಂಗಳಾ ಜಯಮಂಗಳಾ

ಮುದ್ದುಮುಡುಪಿನೋರು
ತೆಕ್ಕೆ ಪೆಂಜೀನೋರು
ಅತ್ತು ಬಿಲ್ಲುಬಾಣ ಅವುನೆಂಬಿದೋರು
ಬರುತಾರೆ ಮನಿಮನಿಗೆ
ತಪ್ಪೂಸಿಕೊಡವೇನು ತಿರುಪತಿ ತಿಮ್ಮಪ್ಪಾಗೆ

ತೆಲುಗಿತಿ ಗಂಡುಮಾಲೆ
ಆವುಪಾಂಡ್ಯದೇಸ
ಕಾಣಗುಜ್ಜರಿ ಬೀಮಪರದೇಸ
ಅಪ್ಪಾಳೆಸುಪ್ಪಾಳೆ ಸುತ್ತೇಳುಲೋಕಕ್ಕೆ
ಉಚ್ರಾಯ ಬಂದಾವು ಸುತ್ತೇಳುಲೋಕಕ್ಕೆ
ಮಂಗಳಾ ಜಯಮಂಗಳಾ

ಅಡಿಗೆಯಾಯಿತಂದು
ಬಾಳ ತಡುವು ಆಯಿತಂದು
ವಡೆಯ ಸ್ರೀ ಕ್ರಿಸ್ಣನ ಕರೆದು
ಬಾಯೆಂದಳುಮಡದಿ
ರುಕ್ಮಿಣೆಯ ಅಂದಮಾತ ಕೇಳಿ
ಸತ್ಯಭಾಮಣುಮಿಂದು ಮಡಿಉಟ್ಟು

ಕುಂದಾಣದೊಸ್ತ್ರ ಆಬರಣನಿಟ್ಟು
ವರಟಳರುಸದಿಂದ
ನಾರಾಯಣನ ಕರೆಯಾಲು
ವರವರಟಳರುಸದಿಂದಾ

ಬರುವ ಸ್ರತಿಯಳ ಕಂಡು ಸ್ರೀಯರಿ
ಎದ್ದು ಮೈಯ್ಯ ಮುರುದು
ಇತ್ತಬಾರೆ ಸತ್ಯಬಾಮೆಯೆಂದು
ಸಕ್ಕರಿಸಂಗಟಾ ಸಲಿಸಿ
ನಕ್ಕು ಮಾತನಾಡಿ ವೊತ್ತುವೋಯಿತು
ಸ್ವಾಮಿ ಅಪ್ಪಣೆ ಕೊಡು ಅರುಸದಿಂದ
ಅಕ್ಕರುಕ್ಮಿಣಿ ದೇವಿ
ಮನೆಗೆ ನಿನ್ನ ಕರೆದಾಳೋ ಕ್ರಿಸ್ಣರಾಯ
ಬಂದೆ ಬಂದ ಸತ್ಯಬಾಮನಕಂಡು
ನಾರಾಯಣನಕರದು ಬಾ ಎಂದಾರೆ
ಅಂಗೆ ಬಂದೆಯೇನೆ ನೀನು

ಇಲ್ಲ ಕಾಣೇಕ್ಕ
ನನ್ನೊಳಗಪರಾದಗಳಿಲ್ಲ
ಎಲ್ಲಿ ಕೂತೆನೀನು
ಮಲ್ಲ ಸುಳ್ಳುಸೇದನುಡಿಯ
ಅಚ್ಚ ಕುಚದಮ್ಯಾಲೆ
ಮಲ್ಲಿ ಬಸಳು ಸೆಳದರೇನೆ
ಅಕ್ಕನೀ ಕೊಟ್ಟ ವಸ ಪದಕದ ಕೀಲು
ವತ್ತೀದ ಕಲೆಯಲ್ಲವೇನೆ
ಎಲ್ಲಿ ಕಲಿತೆಯೇ ನೀನು
ಸುಳ್ಳು ಸೇದ ನುಡಿಯ
ಇಲ್ಲ ಕಾಣೇಕ್ಕ
ನನ್ನೊಳಗಪರಾದಗಳಿಲ್ಲ
ಮುದ್ದು ಮಾಣಿಕದ ಮ್ಯಾಲೆಮಲ್ಲ
ಎಸಳು ಸೆಳೆದರೇನೆ
ಅಕ್ಕ ನೀ ಕೊಟ್ಟ ವಸಬೇಸರಿಕೀಲು
ವತ್ತೀದ ಕಲೆಯಲ್ಲವೇನೆ
ಇಬ್ಬರಾವಾದವಾ ಕೇಳಿ ಸ್ರಿಯರಿ
ಎದ್ದುಮನೆಗೆ ಬಂದು ಮುದ್ದು ಮೋವನ್ನೆ
ಕದಗಳಾ ತಗಿರೆ ಮುನಿಸ್ಯಾಕೆಂದ
ಕದಗಳಾ ತಗುದಳೆ ರುಕ್ಮಿಣಿ
ಮರೆಯಾಗಿ ನಿಂತಾಳೆ
ಮುದ್ದುಮೋವನ್ನೆ ಮುನಿಸ್ಯಾಕೆಂದು
ಎದ್ದು ಗಲ್ಲುವ ಪಡಿದ
ಸತ್ಯಬಾಮನಮ್ಯಾಲಿದ್ದ ಪ್ರೇಮಸ್ರೀಯರಿ
ನನ್ನಲ್ಲಿರುವೋದೆ
ಇಬ್ಬರೊಳೊಂದೆ ಪ್ರೇಮಕಾಣಿರೆ
ನನ್ನೊಳಗೆರಡು ಬೇದವಿಲ್ಲ
ಎಡದಲಿ ಸತ್ಯಬಾಮೆ ಬಲದಲ್ಲಿ ರುಕ್ಮಣದೇವಿ
ಜಾಣ ಕ್ರಿಸ್ಣನ ಮುಕದಮ್ಯಾಲೆವುಸಿನಗೆಯೆ
ಎತ್ತೀದಳಾರುತಿಯ
ಸತ್ಯಬಾಮೆ ಬೆಳುಗಿದಳಾರುತಿಯ
ಇಂದು ದ್ರೊಪದಿಯ ಮಾನವೇ ಕಾಯ್ದ
ಮಾದವ ಕಿಸ್ಣನೇ ಪತಿರಾಯನಂದು
ಆರತಿ ಬೆಳುಗಿದಳು ಸತ್ಯಭಾಮೆ
ಮದುರ ಪುರದ ಮಾವ ಕಂಸನ
ಕೊಂದುಬಂದ ಕಿಸ್ಣನೇಪತಿಯೆಂದು
ಸತ್ಯಬಾಮ ಎತ್ತಿದಳಾರುತಿಯ
ಕಾಸಿದೋತಾಂಬರ
ಕೈಯ್ಯಲಿಟ್ಟೆ ಇನ್ನು
ಸತ್ಯಭಾಮೆ ಎತ್ತಿದಳಾರುತಿಯ

ಪಾದವ ತೋರೈ ಕ್ರಿಸ್ಣಪರಮಾತ್ಮ
ಚಿನ್ನದತಟ್ಟೆಯೊಳು ಚಿಗುರುಈಳ್ಯಾದೆಲೆ
ಬಣ್ಣ ಕಟ್ಟಿದಂತ ಅಡಕೆ
ಪಾದವ ತೋರೈ ಪರಮಾತ್ಮ
ಅರಿಸಿಣ ಕುಂಕುಮ ಪರಿಮಳಗಂದ
ಪರಿಪರಿವಿದದಲಿ ಪಾದವ ಪೂಜಿಪೆ
ಪಾದವ ತೋರೈ ಪರಮಾತ್ಮ
ಸಣ್ಣ ಮಲ್ಲಿಗೂವು ಜಾಜಿಸಂಪಿಗೂವು
ಪರಿಪರಿವಿದದಲ್ಲಿ ಪಾದವಪೂಜಿಸುವೆ
ದುಂಡುಮಲ್ಲಿಗೆಯೂವೀನ ದಂಡೆನಾಕುವೆ
ಪರಿಪರಿವಿದದಲಿ ಪೂಜಿಸುವೆನು
ಪಾದವ ತೋರೈ ಪರಮಾತ್ಮನೇ