ಭಕ್ತಿಯ ಸಂಕೇತವೇ ಆಗಿರುವ ಹನುಮಂತನ ಆರಾಧನೆಯೂ ಸಹ ಭಕ್ತಿಯುಗದ ನಂತರವೇ ವ್ಯಾಪಕವಾಗಿರಬೇಕು. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಹನ್ನೆರಡು ಮತ್ತು ಹದಿಮೂರನೆಯ ಶತಮಾನವು ಧರ್ಮಗಳ ನಡುವಿನ ವೈಮನಸ್ಸು ಮತ್ತು ಹೋರಾಟದ ಕಾಲವಾಗಿದ್ದಿತು. ಇದಕ್ಕೆ ಕಾವ್ಯ ಮತ್ತು ಶಾಸನಾಧಾರಗಳೂ ಇವೆ. ಮಧ್ಯ ಕರ್ನಾಟಕದ ಕೂಡಲೂರಿಗೆ ಹರಿಹರ ಎಂಬ ಹೆಸರು ಬಂದದ್ದು ಶೈವ ಮತ್ತು ವೈಷ್ಣವ ಧರ್ಮೀಯರ ಹೊಡೆದಾಟದ ಸಂದರ್ಭದಲ್ಲಿ. ದ್ವಾರಸಮುದ್ರದಿಂದ ಬಂದ ಹೊಯ್ಸಳ ದಂಡನಾಯಕನು ಹರಿಹರ ದೇವಾಲಯವನ್ನು ಕಟ್ಟಿಸಿ ಅಲ್ಲಿ ಧರ್ಮಸಮನ್ವಯ ವಾತಾವರಣವನ್ನೇರ್ಪಡಿಸಿದ. ರಾಘವಾಂಕನ ಸೋಮನಾಥ ಚರಿತೆಯಲ್ಲಿಯೂ ಧರ್ಮಸಂಘರ್ಷದ ವಿವರಗಳಿದ್ದು ಅನೇಕ ಜೈನ ದೇವಾಲಯಗಳನ್ನು ಉರುಳಿಸಿ ಶೈವ ದೇವಾಲಯಗಳಾಗಿ ಪರಿವರ್ತಿಸಿದ್ದರ ವಿವರಗಳು ಬರುತ್ತವೆ. ಈ ಬಗೆಯ ಧಾರ್ಮಿಕ ಹೋರಾಟಗಳು ಶಮನಕ್ಕೆ ಬಂದದ್ದು ಭಕ್ತಿಯುಗದಲ್ಲಿಯೇ ಎನಿಸುತ್ತದೆ. ಕವಿಗಳೂ ಸಹ ಶಿವ ಮತ್ತು ವಿಷ್ಣು ಒಂದೇ ಎಂಬ ಭಾವದಲ್ಲಿ ಕೃತಿ ರಚನೆ ಮಾಡಿದ್ದು ಹದಿನೈದನೇ ಶತಮಾನದಲ್ಲಿ. ಇದಕ್ಕೆ ಮಹಾಕವಿ ಕುಮಾರವ್ಯಾಸನೇ ಪ್ರಮಾಣ. ಇಂಥ ಧರ್ಮ ಸಮನ್ವಯದ ಭಾವನೆಯ ಹಿನ್ನೆಲೆಯಲ್ಲಿಯೇ ಹನುಮಂತರಾಯನ ಆರಾಧನೆ ಕರ್ನಾಟಕದಾದ್ಯಂತ ಆರಂಭವಾಗಿದೆ. ರಾಮ ವಿಷ್ಣುವಿನ ಅವತಾರವೆಂಬ ನಂಬಿಕೆಯಿದ್ದರೆ, ಅವನ ಭಕ್ತ ಹನುಮಂತ ಪ್ರಕೃತಿಯಲ್ಲಿ ಜನಿಸಿದವನು. ವಾಯುವಿನ ಮಗ. ತಮ್ಮ ಕುಲಮೂಲವನ್ನೆಲ್ಲ ಪ್ರಕೃತಿಯಿಂದಲೇ ನಿರ್ವಚಿಸಿಕೊಳ್ಳುವ ತಳವರ್ಗದವರಿಗೆ ಹನುಮಂತ ತಮ್ಮವನೇ ಎನಿಸಿರುವುದಲ್ಲದೆ ಭೃತ್ಯನಾಗಿಯೂ ಕೂಡ ಶ್ರೇಷ್ಠನಾದವ. ಇದರಿಂದ ಅವನನ್ನು ಭಕ್ತಿಯಿಂದಲೇ ಸ್ತುತಿಸಿರುವ ಈ ಜನಪದ ಪ್ರಾರ್ಥನಾಗೀತೆಯ ಸೊಲ್ಲು ಒಂದೇ:

ಸ್ವಾಮೀಯ ಮಕವ ತೊಳೆದು ತಾನಿಟ್ಟವನೆ
ಸಾದು ಕಸ್ತೂರೆಂಬ ತಿಲಕಾವ

ಈ ಕಥನಗೀತೆ ಚಳ್ಳಕೆರೆ ತಾಲ್ಲೂಕಿನ ಮಹದೇವಪುರದ ಹನುಮಂತರಾಯನನ್ನು ಕುರಿತ ಪ್ರಾರ್ಥನಾ ಗೀತೆಯಾಗಿದೆ. ಕರ್ನಾಟಕದ ಇತರೆಡೆಗಳಲ್ಲಿ ದೊರಕುವ ಹನುಮಂತರಾಯನ ಪ್ರಾರ್ಥನಾಗೀತೆಯೂ ಇದೇ ಮಾದರಿಯಲ್ಲಿದ್ದು, ಅದರಲ್ಲಿ ಗ್ರಾಮದ ಹೆಸರು ಬದಲಾಗಿರುತ್ತದಷ್ಟೆ.

ಹನುಮಂತರಾಯ ಗೀತೆ

ಎದ್ದು ನೋಡಿದರೆ ಎದ್ದಿನ್ನೆಗೈದಾನೆ
ಉದ್ದೂನೆಬಾಲಾದ ಅನುಮಯ್ಯ
ಉದ್ದೂನೆಬಾಲಾದ ಅನುಮಯ್ಯ ಮಾದೇವಪುರವ
ಎದ್ದಿನ್ನೆಗೈದಾನೆ ಬಯಲಲ್ಲಿ

ತಿರುಗಿ ನೋಡಿದರೆ ತರುಮಂದ್ಯಾಗೈದಾನೆ
ತಿರುಗಿಣಿಬಾಲದ ಅನುಮಯ್ಯ
ತಿರುಗಿಣಿಬಾಲದ ಅನುಮಯ್ಯ ಮಾದೇವಪುರದ
ತುರುಮಾಂದ್ಯಗವನೆ ಬಯಲಲ್ಲಿ

ಊರೀನಮಕನಾಗಿ ನೀರೀಗೆಬೆನ್ನಾಗಿ
ನಾಮ ಇಡುವೋನು ಇವನ್ಯಾರೆ
ನಾಮ ಇಡುವೋನು ಇವನ್ಯಾರೆ ಮಾದೇವಪುರದ
ನ್ಯಾರನ್ನಮುಖದ ಅನುಮಯ್ಯ

ಅಟ್ಟೀಗೆ ಮಕನಾಗಿ ಪಟ್ಟಣಕೆ ಬೆನ್ನಾಗಿ
ಬಟ್ಟು ಇಡುವೋನು ಇವನ್ಯಾರೆ
ಬಟ್ಟು ಇಡುವೋನು ಇವನ್ಯಾರೆ ಮಾದೇವಪುರದ
ನೆಟ್ಟನ್ನಮಕದ ಅನುಮಯ್ಯ

ಕರಿಯಾಕಲ್ಲಿನ ಮ್ಯಾಲೆ ಕಡೆದಂತೈದಾನೆ
ತಿರುಗಿಣಿ ಬಾಲಾದ ಅನುಮಯ್ಯ
ತಿರುಗಿಣಿ ಬಾಲಾದ ಅನುಮಯ್ಯ ಮಾದೇವಪುರದ
ಊರೂ ಮಂದಿಗೆ ಬಯವಿಲ್ಲ
ಇಟ್ಟುಗಲ್ಲಿನ ಮ್ಯಾಲೆ ವುಟ್ಟಿದಂಗೈದಾನೆ

ನೆಟ್ಟನ್ನ ಮಕದ ಅನುಮಯ್ಯ
ನೆಟ್ಟನ್ನ ಮಕದ ಅನುಮಯ್ಯ ಮಾದೇವಪುರದ
ಎದ್ದಿನ್ನೈಗೈದಾನೆ ಬಯವಿಲ್ಲ

ಬಡವಾರಾಕಿರುವೋ ಉಡುಗೀಯ ಸಗಣ್ಯಾಗೆ
ವಡದುಮೂಡಿದ ಲೆಂಕೆ ಅನುಮಯ್ಯ
ವಡದುಮೂಡಿದ ಲೆಂಕೆ ಅನುಮಯ್ಯ ಮಾದೇವಪುರದ
ತುರುಮಂದ್ಯಾಗವನೆ ಬಯವಿಲ್ಲ

ದೊಡ್ಡೋರಾಕಿರುವ ಅಬ್ಬೀಯ ಸಗಣ್ಯಾಗ
ಎದ್ದುಮೂಡಿದ ಲೆಂಕೆ ಅನುಮಯ್ಯ
ಎದ್ದುಮೂಡಿದ ಲೆಂಕೆ ಅನುಮಯ್ಯ ಮಾದೇವಪುರದ
ಎದ್ದಿನ್ನೆಯಾಗವನೆ ಬಯವಿಲ್ಲ

ವೋಣ್ಯಾಗಂಜಣದೇವಿ ಬಾಲಾನ ಪಡೆದಾರೆ
ತೊಡಿಯಾ ತೊಳುವಕ ನೀರಿಲ್ಲ
ತೊಡಿಯಾ ತೊಳುವಕ ನೀರಿಲ್ಲ ಅನುಮಯ್ಯ
ದೂರೇಳು ಸಮುದ್ರನ ತಿರುವ್ಯಾನೆ

ಮೈಯೆಲ್ಲ ಅರಿನಾಮ ಬೆಟ್ಯೆಲ್ಲ ಸೆಳ್ಳುಗುರು
ಅಯ್ಯಾಗ ಆಲು ಕೊಡುಲಾರೆ
ಅಯ್ಯಾಗ ಆಲು ಕೊಡುಲಾರೆ ಅನುಮಯ್ಯ
ಕೈಯೊಡ್ಡಿ ಆಲುಕರದೇನು

ವೊಟ್ಯಲ್ಲ ಅರಿನಾಮ ಬೆಟ್ಯಲ್ಲ ಸೆಳ್ಳುಗುರು
ಅಪ್ಪಾಗ ಆಲುಕೊಡಲಾರೆ
ಅಪ್ಪಾಗ ಆಲುಕೊಡಲಾರೆ ಅನುಮಯ್ಯ
ಬೆಟ್ಟೊಡ್ಡಿ ಆಲು ಕರೆದೇನು

ಇಟ್ಟುಗಲ್ಲಿನಮ್ಯಾಲೆ ವುಟ್ಟಿದಂಗೈದಾನೆ
ಸೊಟ್ಟಮುತ್ಯೋನು ಅನುಮಯ್ಯ
ಸೊಟ್ಟಮುತ್ಯೋನು ಅನುಮಯ್ಯ ಮಾದೇವಪುರದ
ಸುಟ್ಟಬಂದು ಲಂಕೇಯ ವರಗವನೆ

ಕರಿಯಾ ಕಲ್ಲಿನ ಮ್ಯಾಲೆ ಕಡೆದಂಗೈದಾನೆ
ವುರುಗು ಮುಸಿಡಿಯೋನು
ವುರುಗು ಮುಸಿಡಿಯೋನು ಅನುಮಯ್ಯ
ಊರು ಲಂಕೆಸುಟ್ಟುವರಗವನೆ

ಆವು ಕಾವೋರಿಂದೆತಾನು ಬಂದನು ಅನುಮಯ್ಯ
ತಾಮ್ರದ ಚೆಂಬುಬಲಗೈಲಿ
ತಾಮ್ರದ ಚೆಂಬುಬಲಗೈಲಿ ಮದೇವಪುರದ
ತಾವೊಳ್ಳೆದೆಂದು ನೆಲೆಗೊಂಡು

ಎತ್ತು ಕಾವೋರಿಂದೆ ಮತ್ತೆ ಬಂದನನುಮಯ್ಯ
ಮುತ್ತೀನ ಚೆಂಬುಬಲಗೈಲಿ
ಮುತ್ತೀನ ಚೆಂಬುಬಲಗೈಲಿ ಮಾದೇವಪುರದ
ದಿಕ್ಕೊಳ್ಳೆದೆಂದು ನೆಲೆಗೊಂಡ

ಕಟ್ಟು ಬಳ್ಳಿನಾಸಿ ಕಟ್ಯಾರೆ ದವನಾವೆ
ಬಿಟ್ಟೋರೆ ತೇರುಬಯಲೀಗೆ
ಬಿಟ್ಟೋರೆ ತೇರುಬಯಲೀಗೆ ಮಾದೇವಪುರ
ದೂಪದಲಿ ಬಿಟ್ಟವರೆ ಜನವೆಲ್ಲ

ಆಸುಗೊಳ್ಳಿನಾಸಿ ಆಸ್ಯವರೆ ದವನಾವ
ಬೀಸವರೆ ತೇರು ಬಯಲೀಗೆ
ಬೀಸವರೆ ತೇರು ಬಯಲೀಗೆ ಮಾದೇವಪುರ
ದೂಪದಲಿ ಬಿಟ್ಟವರೆ ಜನರೆಲ್ಲ

ತೇರುಸುಂಗರವಾಗಿ ಊರುಮುಂದೈದಾವೆ
ಸ್ವಾಮಿ ಅನುಮಯ್ನ ಬರ ಏಳು
ಸ್ವಾಮಿ ಅನುಮಯ್ನ ಬರ ಏಳು ಮಾದೇವಪುರ
ಗಂದಾದೋಕುಳಿಗೆ ದಿನ ಬಂತು

ಉಚ್ಚೈಸುಂಗರವಾಗಿ ಅಟ್ಟಿಮುಂದೈದಾವೆ
ಅಪ್ಪ ಅನುಮಯ್ನ ಬರ ಏಳು
ಅಪ್ಪ ಅನುಮಯ್ನ ಬರ ಏಳು ಮಾದೇವಪುರದ
ದೀಪದೋಕುಳಿಗೆ ದಿನಬಂದೋ

ವೂವಿಲ್ಲವೆಂದು ವೂವಿಗೋಗಲುದೀರೊ
ವೂವೇ ಅನುಮಯ್ನ ಗುಡಿಯಿಂದೆ
ವೂವೇ ಅನುಮಯ್ನ ಗುಡಿಯಿಂದೆ ಸೂರ್ಯಕಾಂತಿ
ವೂವರಳಿಬಾಯ ಬಿಡುತಾವೆ

ಮೊಗ್ಗಿಲ್ಲವೆಂದು ಮೊಗ್ಗೀಗೋಗಲು ದೀರೆ
ಮೊಗ್ಗೆ ಅನುಮಯ್ನ ಗುಡಿಯಿಂದೆ
ಮೊಗ್ಗೆ ಅನುಮಯ್ನ ಗುಡಿಯಿಂದೆ ಮೊಗ್ಗರಳಿ
ಬಾಯೆ ಬಿಡುತಾವೆ

ಸೆನಿವಾರ ಬರಲಿ ಮನೆಗೆ ದಾಸರು ಬರಲಿ
ಸನುಮಾನವಿರಲಿ ಮನದಲ್ಲಿ
ಸನುಮಾನವಿರಲಿ ಮನದಲ್ಲಿ ಮಾದೇವಪುರದ
ಸೆನಿವಾರದಯ್ಯ ಉಣಬಂದ

ಸುಕ್ಕರವಾದ ಬರಲಿ ಅಟ್ಟಿಗೆದಾಸರು ಬರಲಿ
ಎಚ್ಚರವಿರಲಿ ಮನದಲ್ಲಿ
ಎಚ್ಚರವಿರಲಿ ಮನದಲ್ಲಿ ಮಾದೇವಪುರದ
ಸುಕ್ರವಾರದಯ್ಯ ಉಣಬಂದ

ಸ್ವಾಮಿ ಅನುಮೈನ ದಾರುವಂದದ ಕೆಳಗೆ
ಸಾಣೆ ಕಲ್ಲಾಗಿ ಸವುದೇನು
ಸಾಣೆ ಕಲ್ಲಾಗಿ ಸವುದೇನು ಅನುಮೈಯ್ನ
ಪಾದ ಸೋಕಿದರೆ ಬದುಕೇನು

ಅಪ್ಪ ಅನುಮೈಯ್ನ ಉತ್ತರಾಸದ ಕೆಳಗೆ
ಇಟ್ಟಗಲ್ಲಾಗಿ ಸವುದೇನು
ಇಟ್ಟಗಲ್ಲಾಗಿ ಸವುದೇನು ಅನುಮೈಯ್ನ
ಬೆಟ್ಟು ಸೋಕಿದರೆ ಬದುಕೇನು

ಅಪ್ಪ ಪೂಜಾರಿ ಪುಸ್ಪಕೋಗಲುವಾಗ
ಸುತ್ತಲುಗೇರ್ಯಲ್ಲ ಸೊಸೆದೀರು
ಸುತ್ತಲುಗೇರ್ಯಲ್ಲ ಸೊಸೆದೀರು ಎಣುಮಕ್ಕಳು
ಮುತ್ತಿನಾರುತಿ ಬೆಳುಗ್ಯಾರು

ಅಣ್ಣ ಪೂಜಾರಿ ವೂವಿಗೋಗುಲುವಾಗ
ಸಾಲುಗೇರ್ಯಲ್ಲ ಸೊಸೆದೀರು
ಸಾಲುಗೇರ್ಯಲ್ಲ ಸೊಸೆದೀರು ಎಣುಮಕ್ಕಳು
ಸಾದಿನಾರುತಿಯ ಬೆಳುಗ್ಯಾರು

ಬಿಸಿನೀರುಮಿಂದವನೆ ದಸಲೀಯವೊದ್ದವನೆ
ಕುಸುಲದ ಕರಡಿಗೆ ಬಲಗೈಲಿ
ಕುಸುಲದ ಕರಡಿಗೆ ಬಲಗೈಲಿ ಪೂಜಾರಿ
ಎಸಳುಮಲ್ಲಿಗೆ ಬಿಡಿಸಲೊರಟಾನೆ

ತಣ್ಣೀರುಮಿಂದವನೆ ಬಣ್ಣಾವನೊದ್ದವನೆ
ಚಿನ್ನಾದ ಕರೀಡೀಗೆ ಬಲಗೈಲಿ
ಚಿನ್ನಾದ ಕರೀಡೀಗೆ ಬಲಗೈಲಿ ಪೂಜರಿ
ಸಣ್ಣಮಲ್ಲಿಗೆ ಬಿಡಿಸಲೊರಟವನೆ

ಆಯವುಳ್ಳ ತ್ವಾಟಕಸಯವುಳ್ಳ ಏಣಿನಾಕಿ
ಸಾಲ್ಯೇದಚ್ಚಡದ ಮಡಲೊಡ್ಡಿ
ಸಾಲ್ಯೇದಚ್ಚಡದ ಮಡಲೊಡ್ಡಿ ವೂವಕೊಯ್ವ
ಸೂರಿದನಿವನ್ಯಾರ ಮಗನಮ್ಮ

ಸೂರಿದನಿವನ್ಯಾರಮ್ಮ ಪೂಜಾರಿ
ಅಂದಕೊಂದೂವ ಕೊಯ್ದಾನೆ
ಅಂದಕೊಂದೂವ ಕೊಯ್ದಾನೆ ಕೊಯ್ದು ಮಾಲೆಕಟ್ಟಿ
ಸ್ವಾಮಿಗಾಕ್ಯಾನೆ ವರಮಾಲೆ

ಆಯವುಳ್ಳತ್ವಾಟಕ ಸಯವುಳ್ಳ ಏಣಿನಾಕಿ
ಸಾಲ್ಯೇದಚ್ಚಡದ ಮಡಲೊಡ್ಡಿ
ಸಾಲ್ಯೇದಚ್ಚಡದ ಮಡಲೊಡ್ಡಿ ವೂವಕೊಯ್ವ
ಸೂರಿದನಿವನ್ಯಾರ ಮಗನಮ್ಮ

ಕೆಂಪು ಕಣಗಾಲೂವು ಗುಂಪೊಡೆದ ಕೇದೀಗೆ
ಸ್ವಾಮಿನಿನ ಪೂಜೆಗೆ ಅಸನಾಗಿ
ಸ್ವಾಮಿನಿನ ಪೂಜೆಗೆ ಅಸನಾಗಿ ಪೂಜಾರಿ
ತಾನೆದ್ದು ಕೈಯ್ಯ ಮುಗುದಾನೆ

ಕರಿಯ ಕನಗಾಲು ಗರಿ ವಡೆದಕೇದಿಗೆ
ಸ್ವಾಮಿನಿನ ಪೂಜೆ ಅಸನಾಗಿ
ಸ್ವಾಮಿನಿನ ಪೂಜೆ ಅಸನಾಗಿ ಪೂಜಾರಿ
ದಾರಿಯೆದ್ದ ಕೈಯ್ಯ ಮುಗುದಾನೆ

ಕೆರೆಯಾಗ ನೀರಿಲ್ಲಂದು ತೊರೆಯಾನೀರಿಗೋದ
ಬರಿಯಬಿಚ್ಚುಣೆಗೆ ಬಲಗೈಲಿ
ಬರಿಯಬಿಚ್ಚುಣೆಗೆ ಬಲಗೈಲಿ ಪೂಜಾರಿ
ನಡಿಮುಡಿಯಮ್ಯಾಲೆ ಬರ ಏಳೆ

ಬೆಂಚೆಗೆ ನೀರಲ್ಲಂದು ಕಂಚಿ ನೀರಿಗೋದ
ಕಂಚಿನ ಬಿಜ್ಜುಣೆಗೆ ಬಲಗೈಲಿ
ಕಂಚಿನ ಬಿಜ್ಜುಣೆಗೆ ಬಲಗೈಲಿ ಪೂಜಾರಿ
ನಡಿಮುಡಿಯ ಮ್ಯಾಲೆ ಬರ ಏಳೆ

ಬಾಳೆ ಬಾಳೆಗುಂಟ ವೋಗ್ಯವನೆ ಪೂಜಾರಿ
ಬಾಳೇಗುಂಟ ಅರಿವ ತಿಳಿನೀರು
ಬಾಳೇಗುಂಟ ಅರಿವ ತಿಳಿನೀರು ತಕ್ಕಂಡು
ದೇವಾರ ಮೊಕವ ತೊಳೆದವನೆ

ನಿಂಬಿನಿಂಬೀಗುಂಟ ವೋದಾನೆ ಪೂಜಾರಿ
ನಿಂಬ್ಯಾಗೆ ಅರಿವಾ ತಿಳಿನೀರು
ನಿಂಬ್ಯಾಗೆ ಅರಿವಾ ತಿಳಿನೀರು ತಕ್ಕಂಡು
ಸ್ವಾಮೀಯ ಮಕವ ತೊಳೆದಾನೆ

ಸ್ವಾಮಿಯ ಮಕವ ತೊಳೆದು ತಾನಿಟ್ಟವನೆ
ಸಾದು ಕಸ್ತೂರೆಂಬಾತಿಲುಕಾವ

ಇಂದಲಪಾದದ ಮ್ಯಾಲೆ ಮುಂದಲ ಪಾದಾನಾಕಿ
ಜಂಗೂಸಿ ವೂವ ಮುಡಿಸೋನು
ಜಂಗೂಸಿ ವೂವ ಮುಡಿಸೋನು ಪೂಜಾರಿ
ಉಂಗುರಬಂದಾವೆ ಉಡುಗ್ವಾರೆ

ಆಸೆ ಪಾದದ ಮ್ಯಾಲೆ ಈಸೆಪಾದವನೂರಿ
ದಾಟಿ ದಾಟಿವೂವ ಮುಡಿಸೋನೆ
ದಾಟಿ ದಾಟಿವೂವ ಮುಡಿಸೋನೆ ಪೂಜಾರಿಗೆ
ಜೋತ್ರ ಬಂದಾವೆವುಡುಗ್ವಾರೆ

ಪೂಜಾರಿತಂದೂವು ಪೂಜೆಗೆ ಸಾಲದಂದು
ಸ್ವಾಮಿ ಅನುಮಯ್ಯ ಮುನುದವನೆ
ಸ್ವಾಮಿ ಅನುಮಯ್ಯ ಮುನುದವನೆ ಪೂಜಾರಿ
ವೋಗಿ ಕುಯ್ತಾರೋ ವೊಸವೂವ

ವೊಕ್ಕಳೂವು ತೆಕ್ಕೆಗೆ ಸಾಲಾವೆಂದು
ಅಪ್ಪ ಅನುಮಯ್ಯದ ಮುನುದಾನೆ
ಅಪ್ಪ ಅನುಮಯ್ಯದ ಮುನುದಾನೆ ಪೂಜಾರಿ
ವೊಕ್ಕು ಕುಯ್ತಾರೋ ವೊಸವೂವ

ಸ್ವಾಮಿ ಪೂಜೆ ಮಾಡಿ ಬಾಗಲಾಗುವನರಡಿ
ದಾರಿವಂದ್ಲ ದಾಟಿ ಬರುವೋನು
ದಾರಿವಂದ್ಲ ದಾಟಿ ಬರುವೋನು ಪೂಜಾರಿಗೆ
ಬಾಲನಬೇಡೋರುಗಡಿಯಿಲ್ಲ

ಅಪ್ಪನ ಪೂಜೆಮಾಡಿವುತ್ರಾಸಕ ವೂವರಡಿ
ವುತ್ರಾಸ ದಾಟಿ ಬರುವೋನೆ
ವುತ್ರಾಸ ದಾಟಿ ಬರುವೋನೆ ಪೂಜಾರಿಗೆ
ಪುತ್ರಾನ ಬೇಡೋರಿಗೆ ಗಡಿಯಿಲ್ಲ

ದೇವರಪೂಜೆ ಮಾಡಿ ಪೂಜಾರೆಲ್ಲಗೋದ
ದ್ವಾಡಗ ಬಂದಾವೆ ಗುಡಿಯಾಕೆ
ದ್ವಾಡಗ ಬಂದಾವೆ ಗುಡಿಯಾಕೆ ತೆಂಗಿನಕಾಯಿ
ಕಡುಕಡುದು ಉಗಿತಾವೆ

ಸ್ವಾಮಿಪೂಜೆ ಮಾಡಿ ಪೂಜೇರೆಲ್ಲಿಗೋದ
ಮಂಗಬಂದಾವೆ ಗುಡಿಯಾಕೆ
ಮಂಗಬಂದಾವೆ ಗುಡಿಯಾಕೆ ತೆಂಗೀನ
ಕೆಂಗು ಕಡಿಕಡಿದು ಉಗಿತಾವೆ

ಮುದ್ದುರಿಸೆ ನನ್ನ ನಿದ್ದೆಗಣ್ಣಯ್ಯಾನ
ಗೆಜ್ಜೆಕುದುರೆಮ್ಯಾಲೆ ಇರುವೋನು
ಗೆಜ್ಜೆಕುದುರೆಮ್ಯಾಲೆ ಇರುವೋನು ಅನುಮೈಯ್ನ
ಮುದ್ದುರಿಸಿ ಕೈಯ್ಯ ಮುಗುದೇವು

ಸಾದೂಸೆ ನನ್ನ ಸಾದುಗಣ್ಣಯ್ಯನ
ಸಾದುಗುದುರೆ ಮ್ಯಾಲಿರುವೋನ
ಸಾದುಗುದುರೆ ಮ್ಯಾಲಿರುವೋನ ಅನುಮೈಯ್ನೆ
ಜೋಡೂಸಿ ಕೈಯ್ಯಮುಗುದೇವು

ಸ್ವಾಮಿ ನಿನ್ನ ನ್ಯನದು ನಾನು ಧನ್ಯಳಾದೆ
ಸಾಲುವಳಿಯ ಬಿಟ್ಟು ಬಿಳಿದುಟ್ಟೆ
ಸಾಲುವಳಿಯ ಬಿಟ್ಟು ಬಿಳಿದುಟ್ಟೆ ನಿನಮಜ್ಜಣವ
ನಲವತ್ತೆ ಸಾರಿ ಮುಳುಗೆದ್ದೆ

ಅಪ್ಪ ನಿನ್ನ ನ್ಯನದೇ ಮತ್ತೆ ದನ್ಯಳಾದೆ
ಪಟ್ಟವಳಿಯ ಬಿಟ್ಟು ಬಿಳಿದುಟ್ಟು
ಪಟ್ಟವಳಿಯ ಬಿಟ್ಟು ಬಿಳಿದುಟ್ಟು ನಿನಮಜ್ಜಣದ
ಇಪ್ಪತ್ತುಸಾರಿ ಮುಣುಗೆದ್ದೆ

ಸಾಲು ಸಾಲು ನೂರು ಪ್ರಾಣದೀವಿಗೆ ನೂರು
ಸಾರಂಗನೂರು ಗಿಣಿನೂರು
ಸಾರಂಗನೂರು ಗಿಣಿನೂರು ಮಾದೇವಪುರದ
ಸ್ವಾಮಿ ನಿನಮ್ಯಾಲೆ ಸುತ್ತದೀವಿಗೆ ನೂರು

ಸುತ್ತಸುತ್ತನೂರು ಸುತ್ತದೀವಿಗೆ ನೂರು
ಸಪ್ಪಂಗ ನೂರು ಗಿಣಿನೂರು
ಸಪ್ಪಂಗ ನೂರು ಗಿಣಿನೂರು ಮಾದೇವ
ಅಪ್ಪನಿನ ಮ್ಯಾಲೆ ಪದನೂರು