ಸ್ವಾಮೀನೆ ಕ್ಯಾಸಯ್ಯವಾರೀಲಿ ಕುಂತುಕಂಡು
ಮೋವಾದಿಂದೂವೆ ಮಡಿಸೋನೆ ಬೋರಯ್ಯ
ಅಣ್ಣಯ್ಯಗಿಂತ ಚೆಲುವಾನೆ

ಅತ್ತುಸಾವಿರ ಕಾಯಿ ಎತ್ತಿಗೇರಿಕಂಡು
ಪಟ್ಟೇದಚ್ಚಡದ ನಡುಕಟ್ಟಿ ಬೋರಯ್ಯ
ಅಪ್ಪಯ್ಗೆ ಕಾಯಿವಡೆಸ್ಯಾನೆ

ಆರುಸಾವಿರ ಕಾಯಿ ಆನೆಗೇರಿಕಂಡು
ಸಾದಿನಚ್ಚಡದ ನಡುಕಟ್ಟಿ ಬೋರಯ್ಯ
ಅಣ್ಣಯ್ಗೆ ಕಾಯಿವಡೆಸ್ಯಾನೆ

ವೊಕ್ಕಳದನ್ನ ಗಂಟೆ ವೊಕ್ಕಿ ತೂಗುವನ್ಯಾರೆ
ಅಕ್ಕ ಬೋರಯ್ಯ ಮಗನೇನೆ ಕ್ಯಾಸಯ್ನ
ವೊಕ್ಕಿ ತೂಗ್ಯಾನೆ ಸಿವ ಗಂಟೆ

ನಾಗಳದನ್ನ ಗಂಟೆ ವೋಗಿ ತೂಗುವನ್ಯಾರೆ
ತಾಯಿ ಬೋರಯ್ಯನ ಮಗನೇನೆ ಕ್ಯಾಸಯ್ಯ
ವೋಗಿ ತೂಗ್ಯಾನೆ ಸಿವಗಂಟೆ

ಧೂಪಾದ ವೊಗೆ ವೋಗಿ ಆಕಾಸ ಮುಟ್ಯಾವೆ
ಅಪ್ಪ ಚೆನ್ನಯ್ಯ ಬೆವುತಾನೆ ಬೋರಯ್ಯ
ಸುತ್ತಿ ಕೊಡಯ್ಯ ವಗಿಗಾಳು

ಗಂದಾದ ವೊಗೆವೋಗಿ ಅಂಬಾರ ಮುಟ್ಯಾವೆ
ಸ್ವಾಮಿ ಕ್ಯಾಸಯ್ಯ ಬೆವತಾನೆ ಬೋರಯ್ಯ
ಬಾಗಿ ಕೊಡಯ್ಯ ವಗಿಗಾಳು

ಅಪ್ಪೇನೆ ಚೆನ್ನಯ್ಯ ವತ್ತಿಲಿ ಬಾಯಿಕಟ್ಟಿ
ಮುತ್ತೀನ ದೂಪಾರತಿ ಕೈಲಿಡಿದು ಬೋರಯ್ಯ
ಅಪ್ಪಯ್ಗೆ ಗಾಳಿವೊರಟಾವೆ

ಸಾಲೇನೆ ಕ್ಯಾಸಯ್ನ ವಾರೀಲಿ ಬಾಯಿಕಟ್ಟಿ
ವೊನ್ನಿನ ದೂಪಾರತಿಕೈಲಿಡಿದು ಬೋರಯ್ಯ
ಅಣ್ಣಯ್ಯ ಗಾಳಿಗೊರಟಾನೆ

ಅಪ್ಪಯ್ಯನ ಪೂಜೆ ಮಾಡಿರೆಟ್ಟೆರಡುನೊಂದಾವೆ
ದೊಡ್ಡೋನು ಪೂಜಾರಿ ಸೆಡವ್ಯಾನೆ ಬೋರಯ್ಯ
ಇರಿಯೋರು ಮಾನ್ಯೇವು ಕೊಡಿರಣ್ಣ

ಅಣ್ಣಯ್ಯನ ಪೂಜೆ ಮಾಡಿ ರೆಟ್ಟೆರಡು ನೊಂದಾವೆ
ಸಣ್ಣೋನು ಪೂಜಾರಿ ಸೆಡವ್ಯಾನೆ ಬೋರಯ್ಯ
ಒಕ್ಕಾಲು ಮಾನ್ಯೇವ ಕೊಡಿರಣ್ಣ

ಅತ್ತೇನೆ ಚತ್ರಿಕೆ ಅದಿನಾರು ಜಗಜಂಪು
ಚಿಕ್ಕದುರುಗದಲಿ ಅಣೆದಾರೆ ಅಣೆದಂತ
ಚತ್ರಿಕೆ ಅಪ್ಪಯ್ಯ ಗ್ವಾಲಾಲಿ ಇಡಿದಾರೆ

ಆರೇನೆ ಚತ್ರಿಕೆ ಅದಿನಾರು ಜಗಜಂಪು
ಮೇಲುದುರುಗದಲಿ ಅಣೆದಾರೆ ಅಣೆದಂತ
ಚತ್ರಿಕೆ ಅಣ್ಣಯ್ಯಗ್ವಾಲಾಲಿ ಇಡಿದಾರೆ

ಧೂಪಾದವೊಗೆ ವೋಗಿ ಆಕಾಸ ಮುಟ್ಯಾವೆ
ಅಪ್ಪ ಚನ್ನಯ್ಯ ಬೆವತಾನೆ ಕಾಲಿಲೋರು
ಕಂದ ಬೀಸಯ್ಯ ಚವಲೀಯ

ಗಂದಾದ ವೊಗೆ ವೋಗಿ ಅಂಬಾರಕ ಮುಟ್ಟ್ಯಾವೆ
ಸ್ವಾಮಿ ಕ್ಯಾಸಯ್ಯ ಬೆವೆತಾನೆ ಕಾಲಿಲೋರು
ಬಾಲ ಬೀಸಯ್ಯ ಚವುಲೀಯ

ಪೆಟ್ಟಿಗೆ ವೊರುವಣ್ಣಾಗೆ ಬಟ್ಟಮುತ್ತಿನ ಸರಣಾರು
ಪಟ್ಟೇದಟ್ಟಿ ನನ್ನ ನಡುವೀಗೆ ಚನ್ನಯ್ಯ
ಪೆಟ್ಟೀಗೆ ವೊರುವ ಮಗನೀಗೆ

ಕಂಬೀ ವೊರುವಣ್ಣಾಗೆ ಮುತ್ತೀನ ಮೂರಾರ
ಕೆಂಡಗಾಯವನ ನಡುವೀಗೆ ಪಾಲಯ್ಯ
ಕಂಬೀಯವೊರುವ ಮಗನೀಗೆ

ಅಪ್ಪಯ್ಯ ವೊರವೊರಟ ಮತ್ತೇಳಿರಿ ರಾಣ್ಯಾವೇ
ಮುತ್ತೀನ ಚೆಂಬಿಟಿಗೆ ಸುಲುವಲ್ಲೆ ಚನ್ನಯ್ಯ
ಅಣ್ಣಯ್ಯ ಬದ್ದುರವೆ ವರವರಟ

ಅಣ್ಣಯ್ಯ ವರವರಟು ಇನ್ನೇಳಿರಿ ರಾಣ್ಯೇವು
ಚಿನ್ನ ಚೆಂಬಿಟಿಗೆ ಸುಲುವಲ್ಲೇ ಕ್ಯಾಸಯ್ಯ
ಅಣ್ಣಯ್ಯ ಬದ್ದುರವೆ ವರವರಟ

ಅಪ್ಪಯ್ಯ ವರವರಟು ದೂರಾಯನೋಡ್ಯಾನೆ
ಬಾಲಮ್ಮ ಜತನಮಟಜತನ ನಿಡಿಗಲ್ಲೇ
ದೂರಾಯ ನೋಡಿಬರುತೀನಿ

ಅಣ್ಣಯ್ಯ ವರವರಟು ಸುತಾಯ ನೋಡ್ಯಾನೆ
ಬಾಲಮ್ಮ ಜತನ ಮಟಜತನ ನಿಡಿಗಲ್ಲೇ
ವೊಕ್ಕಾಯ ನೋಡಿಬರುತೀನಿ

ಅಪ್ಪೇನೆ ಚನ್ನಯ್ಯ ಅಟ್ಟಿ ವರಡಲುವಾಗ
ಸುತ್ತಲುಗೇರ್ಯಲ್ಲ ಸೊಸಿಗಾಳೆ ಬೊಮ್ಮಕಾಳೆ
ಜೋಡೀಲಿ ಪಾದತೊಳುದಾರೆ

ವುರಿಮೆಮ್ಯಾಲೆ ಕೈಮಾಡೋ ದರಮೋಜಿ ತಿಪ್ಪಯ್ಯ
ವೊಲವಂಕ ಕಾಣೋ ಗೆಲವಂಕ ತಿಪ್ಪಯ್ಯ
ವುರಿಮೀಯ ಮ್ಯಾಲೆ ಕೈಮಾಡೋ

ಅಪ್ಪೇನೆ ಚನ್ನಯಯ ಗಂಗೀಗೋಗಲುವಾಗ
ಗಂಬೀರಕಾಣೆ ಮಡಿವಾಳ ಚನ್ನಯ್ಗೆ
ಗಂಜೀಯ ಸ್ಯಾಲೆ ನೆಡಮುಡಿ

ಸ್ವಾಮೀನೆ ಪಾಲಯ್ಯ ಗಂಗೇಗೋಗಲುವಾಗ
ರಟ್ಯಾಳ ಕಾಣೋ ಮಡಿವಾಳ ಕ್ಯಾಸಯ್ಯ
ಪಟ್ಟೇದ ಸ್ಯಾಲೆ ನೆಡಮುಡಿ

ಅಪ್ಪಯ್ಯ ನಿನ ಬಸವ ಪುಟ್ಟಿದಂತ ಸ್ಯರಣಾರು
ಮತ್ತೇನುವೈದೆ ಮುರುತಾವು ಬೋರಯ್ಯ
ಎತ್ತ ತುಪ್ಪದಲಿ ಅದಮಾಡಿ

ಎತ್ತ ತುಪ್ಪದಲಿ ಅದಮಾಡಿ ಕೊಡಗರುದು
ಅಪ್ಪಯ್ನ ಮುಂದಾಡೋ ಬಸುವಾಗೇ

ಅಣ್ಣಯ್ಯ ನಿಮ ಬಸವ ಮಾಡಿದಂತ ಸ್ಯರಣಾರು
ಇನ್ನೇನು ವೈದೆ ಮುರುತಾವು ಬೋರಯ್ಯ
ಜೇನು ತುಪ್ಪದಲಿ ಅದಮಾಡಿ

ಜೇನು ತುಪ್ಪದಲಿ ಅದಮಾಡಿ ಕೋಡವರುದೆ
ಅಣ್ಣಯ್ನ ಮುಂದಾಡೋ ಬಸುವಾಗೇ

ಅರಗೀದ ವಲದಾಗ ಸುರವನ್ನೆಗಿಡದಾಗೆ
ಬರಿಯ ರಾಜುಣದ ಬಯಲಾಗೆ ಚನ್ನಯ್ಯ
ಸತ್ರಿಕೆ ಸಾಲೆ ನಡೆದಾವೆ

ಅರುಗೀದ ವಲದಾಗೆ ಉತ್ರಾಣಿಗಿಡದಾಗೆ
ಬಟ್ಟರಾಜುಣದ ಬಯಲಾಗೇ ಕ್ಯಾಸಯ್ನ
ಉರುಮೇಯ ಸಾಲು ನಡೆದಾವೆ

ಕಗ್ಗಲ್ಲು ಇಟ್ಟಗಿ ಕಗ್ಗಲ್ಲು ನುಚ್ಚಾಗಿ
ತಗ್ಗುಲಿ ಮರನೆ ಬಯಲಾಗೆ ಚೆನ್ನಯ್ಯ
ಕಟ್ಟಿದ ಮೀಸಾಲು ಮೊರಟಾವೆ

ಕಗ್ಗಲ್ಲು ಇಟ್ಟಾಗಿ ಕಗ್ಗಲ್ಲು ನುಚ್ಚಾಗಿ
ಅಲದಿಮ್ಮರನ ಬಯಲಾಗೆ ಕ್ಯಾಸಯ್ನ
ಆಲ ಮಿಸಾಲೇ ವೊರಟಾವೆ

ಪಟ್ಟೀದಚ್ಚಡದೋರೆ ಕುಂಬರುಮಾಲದೊರೆ
ಅಪ್ಪಯ್ಯ ನಿನ್ನ ಅರುಗೀಲಿ ಬರುವೋರೆ
ಅಪ್ಪಯ್ಗೆ ತಕ್ಕ ಇರಿಯೋರೆ

ಗಂಜಿಯಚ್ಚಡದೋರೆ ಪೇಟದರುಮಾಲುದೋರೆ
ಅಣ್ಣಯ್ಯ ನಿನ್ನರುಗೀಲಿ ಬರುವೋರೆ
ಅಣ್ಣಯ್ಗೆ ತಕ್ಕ ಬಗುತಾರೆ

ನಿಲ್ಲೀಸಿ ಅಕ್ಕಾರೆ ಲಿಂಗದಾರಣ ಚವುಲೆ
ಜನಕೆಲ್ಲ ಮಂಚಗವುದಾವೆ ಚನ್ನಯ್ಯ
ಜನಕ ಮದ್ದೂರಿ ವಸಚವುಲೆ

ಜಂಗೀಸಿ ಅಕ್ಕಾರೆ ಲಿಂಗದಾರಣೆ ಚವುಲೆ
ಮಂದೀಗೆ ಮಂಚಗವುದಾವೆ ಕ್ಯಾಸಯ್ನ
ಲಿಂಗ ಮದ್ದೂರಿ ವಸಚವುಲೇ

ಕೋರಿಲೊದ್ದುಕೊಂಡು ಗೊಂಚಲೋಲಾಡುಸ್ತ
ಪಂಚೇಳು ಜಡಿಯ ಕೊಡವೂತ ಚನ್ನಯ್ಯ
ಸಂಪತ್ತಿಲೊರಟ ಜಲದೀಗೆ

ಪಂಚೆವೊದ್ದುಕೊಂಡು ಗೊಂಚಲೋಲಾಡುಸ್ತ
ಪಂಚೇಳು ಜಡಿಯ ಕೊಡವೂತ ಚನ್ನಯ್ಯ
ಸಂಪತ್ತಿಲೊರಟ ಜಲದೀಗೆ

ಪಂಚಿಲೊದ್ದುಕೊಂಡು ಗೊಂಚಲೋಲಾಡುತ್ತ
ಪಂಚೇಳುಜಡಿಯ ಕೊಡುವೂತ ಪಾಲಯ್ಯ
ಸಂಪತ್ತಿಲೊರಟ ಜಲದೀಗೆ

ಬೆಟ್ಟವು ಇಳಿವಾಗ ಬಿಟ್ಟಾವು ಪಾದದ ಗೆಜ್ಜೆ
ಬಟ್ಟಂಗದುಡಿಗೆ ಸಡಿಲ್ಯಾವೆ ಚನ್ನಯ್ಯ
ಬೆಟ್ಟಾವ ಇಳಿವ ರವಸೀಗೆ

ಅಳ್ಳಾವ ಇಳಿವಾಗ ಬಿಟ್ಟಾವು ಪಾದದ ಗೆಜ್ಜೆ
ವುಲ್ಲಂಗದುಡಿಗೆ ಸಡಿಲ್ಯಾವೆ ಕ್ಯಾಸಯ್ನ
ಅಳ್ಳಾವ ಇಳಿವರಸೀಗೆ

ಅತ್ತಲಾರದ ಬೆಟ್ಟ ಅತ್ಯಾನೆ ಚೆನ್ನಯ್ಯ
ಸುತ್ತುನೋಡ್ಯಾನೆ ತನಪರಿಸೆ ಗುಪ್ಪನೋರ
ಎಚ್ಚಿದೊಕ್ಕಾಲೆ ಬರಲಿಲ್ಲ

ಆರಲಾರದ ಬ್ಯಟ್ಟ ಆರ್ಯಾನೆ ಕ್ಯಾಸಯ್ಯ
ಆಯನೋಡ್ಯಾನೆ ತನಪರಿಸೆ ಗುಪ್ಪನೋರ
ಮಾನ್ಯೆದೊಕ್ಕಾಲೆಬರಲಿಲ್ಲ

ಬಾಳೆಯಣ್ಣಿನಂಗೆ ಬಾಗಿರುವ ಗಂಗಮ್ಮ
ಬಾಗ್ಯಕೊಡು ನನ್ನ ಗುರುವೀಗೆ ಚನ್ನಯ್ಯಾಗೆ
ವಂಬತ್ತೆ ವಮ್ಮ ತೊಳುವಾಕೆ

ನಿಂಬೇಯಣ್ಣಿನಂಗೆ ತುಂಬಿರುವ ಗಂಗಮ್ಮ
ಇಂಬೇ ಕೊಡು ನಮ್ಮ ಗುರುವೀಗೆ ಪಾಲಯ್ಯಗೆ
ವಂಬತ್ತ ಗೆಜ್ಜೆ ತೊಳುವಾಕೆ

ಕಾಗೆ ಸುಳಿಯದಂಗೆ ಗೂಗೆ ಸುಳಿಯದ ಗಂಗೆ
ನರ ಮನುಸ ಸುಳಿಯಾದ ಗಂಗವ್ವಗೆ
ಸ್ವಾಮಿ ಕಿಸ್ಣಯ್ಯ ಇಳಿದಾನೆ

ಅಕ್ಸಿ ಸುಳಿದ ಗಂಗೆ ಪಕ್ಸಿ ಸುಳಿಯದ ಗಂಗೆ
ನರಮನಸ ಸುಳಿಯಾದ ಗಂಗಮ್ಮ
ಸ್ವಾಮಿ ಕಿಸ್ಣಯ್ಯ ಇಳಿದಾನೆ

ಸೆಂಕು ಮದ್ಯದ ಸೆಬ್ದ ಕೇಳ್ಯಾಳೆ ಗಂಗಮ್ಮ
ಓದಾಳು ಪಾತಾಳದೊಳಿಯಾಕೆ ಸಿವನಯ್ಯ
ಮುಂದಾಲೆಯಿಡಿದು ನೆಲ ಕಳೆದ

ಕಾಳೆ ಕರಣೆ ಸೆಬ್ದ ಕೇಳ್ಯಾಳೆ ಗಂಗಮ್ಮ
ವೋದಾಳು ಪಾತಾಳದೊಳಿಯಾಕೆ ಸಿವನಯ್ಯ
ಮಂಡೇಯ ಇಡುವು ನೆಲಕಳೆದ

ಆಕಾಸದ ಮಳೆಬಂದು ಬೂಪಾಲನ ಕೆರೆತುಂಬಿ
ತೋಪೆ ಕಸ್ತೂರಿ ತೆರೆವೊಯ್ದು ಚೆನ್ನಯ್ಯ
ಮುಂದಾಲ ಕೋಡ್ಯಾಕ ಇಳುದಾನೆ

ಅಮರಂಬದ ಮಳೆಬಂದು ಸಮರಂಬದ ಕೆರೆತುಂಬಿ
ಗಂದ ಕಸ್ತೂರಿ ತೆರೆ ವೊಯ್ದು ಕ್ಯಾಸಯ್ನ
ಇಂದಾಲ ಕೋಡ್ಯಾಕ ಇಳುದಾನೆ

ಗಿನ್ನಳದಾಗಳಾಲ ಗಿಣಿ ಮುಟ್ಟುವಂದು
ಗಂಜಿಯಚ್ಚಡವೆ ತೆರೆವೊಯ್ದು ಬೋರಯ್ಯ
ಅಪ್ಪಯ್ಗಾಲು ಸಲಿಸ್ಯಾನೆ

ಬಟ್ಟಳದಾಗಳಾಲ ಬೆಕ್ಳುಮುಟ್ಯಾವೆಂದು
ಸಾದಿನಚ್ಚಾಡವೆ ತೆರೆವೊಯ್ದು ಬೋರಯ್ಯ
ಅಣ್ಣಯ್ಗೆ ಆಲ ಸಲಿಸ್ಯಾನೆ

ಒಂದು ಎಡಗೀಲಣ್ಣು ಒಂದು ಎಡಗೀಲಿ ಕಾಯಿ
ಒಂದೇ ಎಡಗೀಲಿ ನೆನೆಯಕ್ಕಿ ಗುಪ್ಪನಾರ
ಅಕ್ಕ ಗಂಗವ್ಗೆ ಮಿತುನಾವೆ

ಒಂದು ಬಂಡಿಲಿ ಕಾಯಿ ಒಂದು ಬಂಡೀಲಣ್ಣು
ಒಂದೇ ಬಂಡೀಲಿ ನೆನೆಯಕ್ಕಿ ಗುಪ್ಪನಾರ
ತಾಯಿ ಗಂಗವ್ಗೆ ಮಿತುನಾವೆ

ಅಪ್ಪೇನೆ ಚನ್ನಯ್ಗೆ ಆರಿಗೆಲರಿತವ ತೆಗೆದು
ಅಯವತ್ತೆ ವೊನ್ನು ಕೈಯ್ಯಲಿಡಿದು ಬೋರಯ್ಯ
ಅಪ್ಪಯ್ಯಗಾಲ ಸಲಿಸ್ಯಾನೆ

ಸ್ವಾಮೇನೆ ಪಾಲಯ್ಯ ಅರುಗೀಲರಿತವ ತೆಗೆದು
ನಲವತ್ತೆವೊನ್ನೆ ಕೈಲಿಡಿದು ಬೋರಯ್ಯ
ಅಣ್ಣಯ್ಗೆ ನೀರ ಸಲಿಸ್ಯಾನೆ

 ಆಲೀನ ತಟ್ಟಿಮುಂದೆ ನೀರಿನ ಕಟ್ಟೆಕಟ್ಟಿ
ನೀರಾಗಾಡ್ಯಾನೆ ಬೆಳತಂಕ
ಮೊಸರಿನ ಕಟ್ಟೆ ಮುಂದೆ ಕೆಸರಿನ ಕಟ್ಟೆಕಟ್ಟಿ
ಕೆಸರಾಗಾಡ್ಯಾನೆ ಬೆಳತಂಕ

ಕಟ್ಟೀಯ ನೀರೀಗೆ ಬುಟ್ಟನ್ನ ಕಲ್ಲೀಗೆ
ಗಟ್ಟೀಸಿ ಬಡಿವ ಬಿಸಿಲೀಗೆ ಚನ್ನಯ್ಯ
ಪಟ್ಟಿ ನಾಣ್ಯಾವೆ ಒಣಗಾಲಿ

ಅಳ್ಳಾದ ನೀರೀಗೆ ತೆಳ್ಳನ್ನ ಕಲ್ಲೀಗೆ
ಜೆಲ್ಲೀಸಿ ಬಡಿವಬಿಸಿಲೀಗೆ
ಪುಲ್ಲೆ ನಾಣ್ಯವೇ ಒಣಗಾಲಿ

ಮುತ್ತೀನ ಬಸವಂತ ಮತ್ತೆಲ್ಲಿ ಆಡ್ಯಾನೆ
ಅಕ್ಕಗಂಗಮ್ನ ವಳೆಯಲ್ಲಿ ಆಡ್ಯಾನೆ
ದುಂಡುಮುತ್ತೀನ ಬಸವಂತ

ವೊನ್ನೀನ ಬಸವಂತ ಇನ್ನೆಲ್ಲಿ ಆಡ್ಯಾನೆ
ತಾಯಿಗಂಗಮ್ನ ವಳೆಯಲ್ಲಿ ಆಡ್ಯಾನೆ
ಸಣ್ಣಾ ಮಲ್ಲೀಗೆ ಬಸವಂತ

ಒಂದೆಲೆ ಒಂದಡಕೆ ಒಂದು ಬೆಟ್ಟಲಿಗಂದ
ಬಂದಾವೆ ಗಂಗ ನಮಸೇಜಿ ಇರುಗನಗೇರಿ
ಅಪ್ಪ ಚೆನ್ನಯ್ಯನ ಕಳುವಮ್ಮ

ಎರಡೆಲೆ ಎರಡಡಕೆ ಎರಡು ಬೆಟ್ಟಲಿಗಂದ
ಬಂದಾವೆ ಗಂಗ ನಿಮಸೇಜಿ ಇರುಗನೇರಿ
ಸ್ವಾಮಿ ಕಿಸ್ಣನ ಕಳುವಮ್ಮ

ಮೂರೆಲೆ ಮೂರಡಕೆ ಮೂರು ಬೆಟ್ಟಲಿಗಂದ
ಬಂದಾವೆ ಗಂಗ ನಿಮಸೇಜಿ ಇರುಗನಕೇರಿ
ಸ್ವಾಮಿ ಪಾಲಯ್ನ ಕಳುವಮ್ಮ

ಮುತ್ತಿನನ್ನ ದಗುಮೆ ಮತ್ತೆಲ್ಲಿ ವೊಯ್ಸಾರೆ
ಮತ್ತಿರುಗನಕೇರಿ ಬಯಲಾಗೆ ಇರಿಯೋರೆ
ಮುತ್ತು ಕೊಟ್ಟೆ ದಗಮೆವೊಯ್ಸಾರೆ

ವೊನ್ನಿನನ್ನ ದಗಮೆ ಇನ್ನೆಲ್ಲಿ ವೊಯ್ಸಾರೆ
ಇನ್ನುರುಗನ ಕೇರಿ ಬಯಲಾಗೆ ದೊರಿಗಾಳು
ವೊನ್ನು ಕೊಟ್ಟೆ ದಗಮೆ ವೊಯ್ಸಾರೆ

ಕರಿಯಾ ಕಂಬಳಿವೊದ್ದು ಕೊಡ್ಲಿ ಕೋಲ ನಿಡಿದು
ಸಾಸಾನ ಬಡಿದು ಮುಗಿನಿಡಿದು ಬೋರಯ್ಯ
ಎತ್ತೀಗೆ ಸಬರ ತಿರಿಗ್ಯಾನೆ

ಅಳ್ಳದಾಗೆ ಚನ್ನಯ್ಯ ದೊಳೆದ್ದು ಬರುವಾಗ
ಮತ್ತೆದೂಳ ಮರಿಯ ಕೊಡಿರಣ್ಣ ಚೆನ್ನಯ್ಗೆ
ಪಟ್ಟದೆತ್ತಿನ ಮುಂದೆ ವೊಯ್‌ರಣ್ಣ

ಕಟ್ಯಾಗೆ ಕ್ಯಾಸಯ್ಯ ರೊಚ್ಚೆದ್ದು ಬರುವಾಗ
ಇನ್ನು ದೂಳ ಮರಿಯ ಕೊಡಿರಣ್ಣ ಕ್ಯಾಸಯ್ನ
ವಾವುರಿಗೆ ಮುಂದೆ ವೊಯ್‌ರಣ್ಣ

ಕಟ್ಟಿಮ್ಯಾಲೆ ಬರುವೂತ ಬಟ್ಟಮಲ್ಲೀಗೆ ಬಿಡಿಸೂತ
ವಪ್ಪಾಕೊಂದೆಜ್ಜೆ ನಡೆವೂತ ಕ್ಯಾಸಯ್ಯ
ಕಟ್ಟಿಮ್ಯಾಲೆ ಬರುತಾನೆ

ಏರಿ ಮ್ಯಾಲೆ ಬರುವೂತ ಜಾಜಿ ಮಲ್ಲಿಗೆ ಬಿಡಿಸೂತ
ಮೋವಾಕೊಂದೆಜ್ಜೆ ನಿಡುವೂತ ಕ್ಯಾಸಯ್ಯ
ಏರಿಮ್ಯಾಲೆ ಬರುತಾನೆ

ಅಪ್ಪನಿನ್ನ ಕಾಲು ತುಪ್ಪಕಿನ್ನ ಮಿದುವೆ
ಮತ್ತೆಲ್ಲಿ ತುಳಿದೆ ಎಳೆಮುಳ್ಳು ಈರುಗನಗೇರಿ
ಸಾಲ ತುಗ್ಗುಲಿ ಮರದಡಿಯ

ಅಣ್ಣಾ ನಿನ್ನ ಕಾಲು ಬೆಣ್ಣೆಗಿನ್ನ ಮಿದುವೆ
ಇನ್ನೆಲ್ಲಿ ತುಳಿದೆ ಎಳೆಮುಳ್ಳು ಈರುಗನ ಗೇರಿ
ಸಣ್ಣ ತುಗ್ಗಲಿ ವನದಾಗೆ

ಬೆಟ್ಟಾವ ಅತ್ತುವಾಗ ಬಿಟ್ಟಾವು ಪಾದದಗೆಜ್ಜೆ
ಬಟ್ಟಂಗದುಡಿಗೆ ಸಡಿಲ್ಯಾವೆ ಚನ್ನಯ್ಯ
ಬೆಟ್ಯಾವನತ್ತೂವ ರವಸೀಗೆ

ಅಳ್ಳಾವ ಅತ್ತುವಾಗ ಚೆಲ್ಯಾವುಪಾದದಗೆಜ್ಜೆ
ವುಲ್ಲಂಗದುಡಿಗೆ ಸಡಿಲ್ಯಾವೆ ಕ್ಯಾಸಯ್ಯ
ಅಳ್ಳಾವನತ್ತೂವ ರವಸೀಗೆ

ಸೆತ್ರಿಕೆ ಸೆತ್ರಿಕೆ ಸಾಲಿಟ್ಟು ಬರುವಾಗ
ಕತ್ತೀಯ ವುಡುಗ ಕಡಿಗೋಗು ಕಂಡಂತ
ಅಂದುಳದಾರತಿಯ ಬೆಳಗೇವು

ಅಂದುಲವೆ ಅಂದುಲವೆ ವೊಂದಿಸಿ ಬರುವಾಗ
ಗಿಂಡೀಯ ವುಡುಗ ಕಡಿಗೋಗೋ ಕಂಡಂತ
ಅಂದುಳದಾರತಿಯ ಬೆಳಗೇವು

ಅತ್ತುಸುತ್ತಿನ ಕ್ವಾಟಿ ಅತ್ತಿಬಂದಯ್ಯಾಗೆ
ಸೆತ್ರಿಕೆವೊಯ್ಯೆ ಎದುರೀಗೆ ಚನ್ನಯ್ಗೆ
ಅತ್ತಿಬಂದಂತ ವಡಿಯಾಗೆ

ಆರುಸುತ್ತಿನ ಕ್ವಾಟೆ ಆರಿಬಂದಯ್ಯಾಗೆ
ಸೆತ್ರಿಕೆವೊಯ್ಯೆ ಎದುರೀಗೆ ಕ್ಯಾಸಯ್ಗೆ
ಆಕಿಬಂದಂತ ವಡಿಯಾಗೆ

ವಳಿಗೆ ವೋಗಲುವಾಗ ವಂಬಾಳೇ ಅಲ್ಲಾಡಾವೆ
ಕಿರುಜಡೆ ಬೆನ್ನಲಿ ವಳೆದಾವೆ ಚೆನ್ನಯ್ಗೆ
ವಳೆಗೋಗಿ ಗುಡಿಗೆ ಬರುವಾಗ

ನೀರು ಇಲ್ಲದ ತಾವು ನೀರ್ಯಾಕೆ ಆದಾವೆ
ಬುಟ್ಟಮಲ್ಲಿಗ್ಯಾಕೆ ಅರಳ್ಯಾವೆ ಈಯಟ್ಟಿ
ಅಪ್ಪಯ್ಯ ಬರುವ ಚೆದರೀಗೆ

ಕೆಸರು ಇಲ್ಲದ ತಾವು ಕೆಸರ್ಯಾಕೆ ಆದಾವೆ
ಸಣ್ಣಮಲ್ಲಿಗೆ ಯಾಕೆ ಅರಳ್ಯಾವೆ ಈಯಟ್ಟಿ
ಅಣ್ಣಯ್ಯ ಬರುವ ಚೆದರೀಗೆ

ಅಪ್ಪೇನೆ ಚನ್ನಯ್ಯ ಅಟ್ಟಿವೊಗುವಾಗ
ಸುತ್ತಾಲಗೇರ್ಯಲ್ಲ ಸೊಸಿಗಾಳು ಮೊಮ್ಮಕ್ಕಳ
ಜೋಡೀನಾರತಿಯ ಬೆಳಗ್ಯಾರೆ

ದೊಡ್ಡ ದೊಡ್ಡ ಪದನ ಬರಣೆಗೆ ತುಂಬಿ
ದೊಡ್ಡ ಮುದ್ದಿರಿಕೆಬಿಗಿದೊತ್ತಿ ಚನ್ನಯ್ಗೆ
ದೊಡ್ಡೋನಿಗೊಪ್ಪಿಸುವೆ ಪದನೂರು

ಸಣ್ಣ ಸಣ್ಣ ಪದ ಸಣ್ಣ ಬರಣೆಗೆ ತುಂಬಿ
ಸಣ್ಣ ಮುದ್ದಿರಿಕೆ ಬಿಗುದೊತ್ತಿ ಕ್ಯಾಸಯ್ಗೆ
ಸಣ್ಣೋನಿಗೊಪ್ಪಿಸಲು ಪದನೂರು

ಅಪ್ಪ ನಿಮ್ಮ ಆಡೇವೆ ಅಪ್ಪ ನಿಮ್ಮ ಪಾಡೇವೆ
ಅಪ್ಪ ನಿಮ್ಮ ನಿದ್ರೆ ಕೆಡಿಸೇವೆ ಚನ್ನಯ್ಯ
ಪಟ್ಟೆ ಮಂಚಾಕೆ ಪವಡೀಸೋ

ಅಣ್ಣಯ್ಯ ನಿಮ್ಮ ಹಾಡೇವೆ ಅಣ್ಣಯ್ಯ ನಿಮ್ಮ ಪಾಡೇವೆ
ಅಣ್ಣಯ್ಯ ನಿಮ್ಮ ನಿದ್ರೆ ಕೆಡಿಸೇವೆ ಕ್ಯಾಸಯ್ಯ
ವೂವೆ ಮಂಚಾಕೆ ಪವಡಿಸೋ

ಕರುವೀನ ಆಲು ಗುರುವೀನ ಮೀಸಾಲು
ಆರಿಯಾದೆ ನಾನೆ ಬಳಸೀದೆ ಚನ್ನಯ್ಯ
ಸರವೇ ತಪ್ಪುಗಳ ಕಡೆಯಾಯಿಸೋ

ಜಾಜೂರು ಚನ್ನಯ್ಯ ಜರಿಮಂಡ್ಲರಾಮಯ್ಯ
ಮುದ್ದು ಮೂಡ್ಲಗಿರಿ ತಿಮ್ಮಯ್ಯ ಚನ್ನಯ್ಗೆ
ಜಯಮಂಗಳಾರಾಮ ಸುಬ ಮಂಗಳಾ