ಚಳ್ಳಕೆರೆ ತಾಲ್ಲೂಕು, ನಾಯಕನಹಟ್ಟಿ ಹೋಬಳಿ, ನಲಗೇತ್ಲ ಹಟ್ಟಿಯಲ್ಲಿ ಇರುವ ಬುಡಕಟ್ಟು ದೇವತೆ ಚನ್ನಕ್ಯಾಸಯ್ಯ. ಚಿತ್ರದುರ್ಗ ಜಿಲ್ಲೆಯ ಮ್ಯಾಸಬೇಡ ಸಮೂಹದಲ್ಲಿ ದಾಸಪಂಥದ ಒಂದು ಗುಂಪು ಇದೆ. ಮೂಲತಃ ಮ್ಯಾಸಬೇಡರು ಶೈವಪಂಥೀಯರು. ಶ್ರೀಶೈಲ ಮಲ್ಲಿಕಾರ್ಜುನ ತಮ್ಮ ಕುಲಮೂಲ ದೇವತೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಹದಿನೈದನೇ ಶತಮಾನದಲ್ಲಿ ಭಕ್ತಿಪಂಥದ ಪ್ರಭಾವ ಈ ಸಮೂಹದ ಮೇಲಾಗಿರುತ್ತದೆ. ಇದರಿಂದ ಮೊಳಕಾಲ್ಮೂರು ತಾಲ್ಲೂಕು, ಕಂಪಳದೇವರ ಹಟ್ಟಿಯಲ್ಲಿ ನಡೆಯುವ ಮ್ಯಾಸಬೇಡರ ಜಾತ್ರೆ ವೈಷ್ಣವ ಬಕ್ತಿ ಪಂಥದ ಹಿನ್ನೆಲೆಯಲ್ಲೇ ಇರುತ್ತದೆ. ಇಲ್ಲಿ ಪ್ರಮುಖ ಪಾತ್ರ ವಹಿಸುವವರು ಶಂಖ, ಬನವಾಸಿ, ಜಾಗಟೆ ಹಿಡಿದ ದಾಸಪಂಥದವರು. ಬೇಡನಾಯಕ ಸಮೂಹದಲ್ಲಿ ಇವರನ್ನು ‘ದಾಸರಿ ಬೆಡಗು’ ಎಂತಲೇ ಹೇಳುತ್ತಾರೆ. ಬೇರೆ ಬೇರೆ ಹಟ್ಟಿಗಳಿಂದ ತಂದ ದೇವತೆಗಳನ್ನು ಲಕ್ಕಿ ಬರಲು, ಅಂದರೆ ವಿಷ್ಣುವಿಗೆ ಪ್ರಿಯವಾದ ಸಸ್ಯ ಸಮೂಹದಲ್ಲಿ ಕಟ್ಟಿದ ಗುಡಿಸಲಲ್ಲಿಟ್ಟು ಒಂಬತ್ತು ದಿನಗಳ ಕಾಲ ಜಾತ್ರೆ ನೆರವೇರಿಸುತ್ತಾರೆ. ಆ ಜಾತ್ರೆಯಲ್ಲಿ ಎತ್ತುಗಳದೇ ಪ್ರಮುಖ ಪಾತ್ರ. ಆ ಎತ್ತುಗಳನ್ನೇ ದೇವರೆಂದು ಮ್ಯಾಸಬೇಡರು ತಿಳಿಯುತ್ತಾರೆ. ಹೀಗೆ ಮ್ಯಾಸಬೇಡರು ಆರಾಧಿಸುವ ವಿಷ್ಣುಪಂಥದ ದೇವತೆ ಚೆನ್ನಕ್ಯಾಸಯ್ಯ. ಚನ್ನಕೇಶವ ಬೇಡರ ಬುಡಕಟ್ಟು ಹಟ್ಟಿಯನ್ನು ಪ್ರವೇಶಿಸಿದ್ದು ಕುತೂಹಲಕರ ಸಂಗತಿ. ಆದರೆ ನಲಗೇತ್ಲ ಹಟ್ಟಿಯ ಚನ್ನಕೇಶವನ ಗುಡಿಯಲ್ಲಿ ಕೇಶವನ ವಿಗ್ರಹದ ಆರಾಧನೆಯೇನು ನಡೆಯುವುದಿಲ್ಲ. ಅಲ್ಲಿ ಪೂಜೆಗೊಳ್ಳುವುದು ಬಿಲ್ಲು, ಬಾಣ, ಮತ್ತು ಕತ್ತಿ. ಅವುಗಳನ್ನೇ ಚನ್ನಕ್ಯಾಸಯ್ಯನೆಂದು ಪೂಜಿಸುತ್ತಾರೆ. ತಮ್ಮ ನಡುವೆ ಆಗಿ ಹೋದ ವೀರರನ್ನು ಗೌರವಿಸುವ ಬುಡಕಟ್ಟು ಸಮೂಹ ಅಂಥವನೊಬ್ಬನನ್ನು ವಿಷ್ಣುದೇವತೆಯೊಡನೆ ಸಮೀಕರಿಸಿ ಆರಾಧಿಸಿ ಬರುತ್ತಿರಬಹುದಷ್ಟೇ. ಹಾಗೆಯೇ ಜಗಳೂರು, ಚಳ್ಳಕೆರೆ ತಾಲೂಕಿನ ಮ್ಯಾಸಬೇಡರು ಜಗಳೂರಜ್ಜ ಎಂಬ ಇನ್ನೊಬ್ಬ ವೈಷ್ಣವ ಪಂಥದ ಸಂತನನ್ನು ಆರಾಧಿಸುವುದೂ ತಿಳಿದುಬರುತ್ತದೆ. ಈತನ ಮೇಲಿರುವ ದಂತಕತೆಯಲ್ಲಿ ಇವನು ತಿರುಪತಿ ತಿಮ್ಮಪ್ಪನ ಭಕ್ತನಾಗಿದ್ದು, ಅಲ್ಲಿಗೆ ಯಾತ್ರೆ ಹೋಗಿ ಬಂದದ್ದಾಗಿಯೂ ತಿಳಿದುಬರುತ್ತದೆ. ಮ್ಯಾಸಬೇಡರ ಸಮೂಹದ ಚನ್ನಕ್ಯಾಸಯ್ಯ ಕಥನಗೀತೆಯನ್ನು ಸಿರಿಯಜ್ಜಿ ಕಲಿತುಕೊಂಡಿರುತ್ತಾಳೆ. ಭೂಮಿತಾಯಿ, ಸರಸ್ವತಿಯ ಪ್ರಾರ್ಥನೆಯಿಂದ ಆರಂಭವಾಗುವ ಚನ್ನಕ್ಯಾಸಯ್ಯ ಗೀತೆ ಹಕ್ಕಿಪಕ್ಕಿ, ಪ್ರಾಣಿಸಮೂಹವನ್ನೆಲ್ಲ ಒಳಗೊಂಡು ಸುಮಾರು ಎಂಭತ್ತು ತ್ರಿಪದಿಗಳಲ್ಲಿ ಮುಂದುವರಿಯುತ್ತದೆ.

ಚನ್ನಕ್ಯಾಸಯ್ಯ ಗೀತೆ

ಎಲ್ಲ ಎಲ್ಲರ ಮುನ್ನ ಬಲ್ಲವಳ ಬಲಗೊಂಬೆ
ಎಳ್ಳು ಜೀರಿಗೆ ಬೆಳವೋಳ ಬೂಮ್ಯಮ್ಮನ
ಬಲ್ಲವಳ ಮದಲೇಬಲಗೊಂಬೆ

ಯಾತಯಾತಕ ಮುನ್ನ ಅಕೀಯಬಲಗೊಂಬೆ
ಕಾತೆ ರಾಜುಣವೇ ಬೆಳವೋಳ ಬೂಮ್ಯಮ್ಮನ
ಆಕೀಯ ಮೊದಲೇ ಬಲಗೊಂಬೆ

ವಾಲೆ ತೊಡಿಮ್ಯಾಲೆ ಗ್ಯಾನ ನಿನ್ನ ಮೇಲೆ
ಮ್ಯಾಲೊಂದು ಸೊಲ್ಲು ಮೊದಲರಿಯೆ ಚನ್ನಯ್ಯ
ವಾಲೇಯ ದಯಮಾಡೋ ನನಗುರುವೆ

ಆರೇನೆ ಮಾರುದ್ದ ವಾಲೀಯತಕ್ಕೊಂಡು
ಓಡೀರಿ ಅವನ ಮಡಲಿಂದ ಸರಸೋತಿ
ಬಾರಾದ ಪದನ ಬರಕೊಡವ್ವ

ಹತ್ತೇನೆ ಮಾರುದ್ದ ವತ್ತೀಗೆ ತಕ್ಕಂಡು
ಎತ್ತೀರಿ ಅವರ ಮಡಲಿಂದ ಸರಸೋತಿ
ತಪ್ಪೀದ ಪದನ ಬರಕೊಡವ್ವ

ಪದವೇನೆ ಬರುವಾಕೆ ನಾನೊಬ್ಬಳಲ್ಲವೆ
ನಾನೆ ನನ್ನಕ್ಕ ಸರಸೋತಿ ಇಬ್ಬರುಕೂಡಿ
ಚಿತ್ತವುಳ್ಳಕ್ಕಯ್ಗೆ ಬರಕೊಡುವೆ

ಪದವೇನೆ ಬರುವಾಕೆ ನಾನೊಬ್ಬಳಲ್ಲವೆ
ನಾನೆ ನನ್ನಕ್ಕ ಸರಸೋತಿ ಇಬ್ಬರುಕೂಡಿ
ಗ್ಯಾನವುಳ್ಳಕ್ಕಯ್ಗೆ ಬರಕೊಡುವೆ

ಗದ್ದೆಗರಿವಾನೀರು ತಿದ್ದೀದಂಗೈದಾವೆ
ರುದ್ದರನ ಮಗನ ಕಲಿವೀರಬದ್ರಸ್ವಾಮಿ
ತಿದ್ದಿಕೊಡೊ ನನ್ನ ಮತಿಗಾಳ

ನೆಲ್ಲುಗದ್ದೆಗೆ ನೀರು ಸೆಲ್ಲಿದಂಗೈದಾವೆ
ಮಲ್ಲಯ್ನ ಮಗನೇ ಕಲಿವೀರಬದ್ರುಸ್ವಾಮಿ
ಚೆಲ್ಲೆನ್ನ ವನಕ ಮತಿಗಾಳ

ತುಪ್ಪಾ ಬಾನವುಂಡು ಇಪ್ಪತ್ತೀಳ್ಯವಮೆದ್ದು
ಅಪ್ಪಗಳೊರಟಾರೆ ಮಲೆನಾಡ ಮಲೆದಾಗೆ
ಇಪ್ಪತ್ತೆ ಬಿದಿರೇ ಕಡಿದಾರೆ

ಇಪ್ಪತ್ತೇ ಬಿದಿರ ಕಡಿದ ವಡ್ಡರವ್ವ
ಇಪ್ಪತ್ತಗೇಣೀನ ಅರಮಾನೆ
ಆಲುಬಾನಾವುಂಡು ಅರುವತ್ತೀಳ್ಯವ ಮೆದ್ದು
ಅಣ್ಣಗಳೊರಟಾರೆ ಮಲೆನಾಡ ಮಲೆದಾಗೆ

ಅನ್ನೊಂದೆ ಬಿದರ ಕಡಿದಾರೆ
ಅನ್ನೊಂದೆ ಬಿದಿರ ಕಡಿದಾರೆ ವಡ್ಡರವ್ವ
ಅನ್ನೊಂದೆ ಗೇಣೀನ ಅರಮಾನೆ

ಒಂದು ಕಂಬ ಚಿನ್ನ ಒಂದು ಕಂಬ ರನ್ನ
ಒಂದೊಂದೇ ಕಂಬರವರತ್ನ ಚೆನ್ನಯ್ಯ
ಪೂಜಾರಿ ಬೋರಯ್ಯ ತರಿಸ್ಯಾನೆ

ಬೋದೀಗೆ ಬೋದಿಗೆ ಓದಿ ನಿಂತೈದಾವೆ
ಬೋದೀಗೆ ತರದಣ್ಣನ ಎಸರೇಳೆ ಚೆನ್ನಯ್ನಟ್ಟಿ
ನಾಯಕ ಮುತ್ತಯ್ಯ ತರಿಸ್ಯಾನೆ

ಅಂದಲವೆ ಅಂದಲವೆ ವೊಂದಿ ನಿಂತೈದಾವೆ
ಅಂದುಲ ತಂದಣ್ಣನ ಎಸರೇಳೆ ಚೆನ್ನಯ್ನಟ್ಟಿ
ಗೌಡ ಬೋರಯ್ಯ ತರಿಸ್ಯಾನೆ

ಎಲ್ಲೆಲ್ಲಿ ನೋಡಿದರೆ ಸುತ್ತು ಗುಡಿಸಲು ಕಾಣೆ
ಮುತ್ತಿನ ಅಣಿತಿಯೆ ಬರಬೇಕು
ಮುತ್ತೀನ ಅಣಿತಿ ಅಣೆದಂತೆ ಮಳಿಗ್ಯಾಗೆ

ಅಪ್ಪ ಚೆನ್ನಯ್ಯ ಮದುಮಗ ಆಗ ಸುದ್ದಿ
ಇಪ್ಪತ್ತು ರಾಜ್ಯೇವುಕ ಅರುದಾವೆ

ಎಲ್ಲೆಲ್ಲಿ ನೋಡಿದರಲ್ಲಲ್ಲಿ ವುಲ್ಲುಗಿಡಲಸು ಕಾಣೆ
ಮಲ್ಲಿಗೆ ಅಣತೆ ಅಣೆದಾರೆ ಚನ್ನಯ್ಯ
ಮಲ್ಲಿಗೆ ಅಣತೆ ಬರಬೇಕು

ಮಲ್ಲಿಗೆ ಅಣತೆ ಅಣೆದಂತೆ ಮಳಿಗ್ಯಾಗೆ
ಸ್ವಾಮಿ ಕ್ಯಾಸಯ್ಯನೆ ಮದುಮಗ
ಸ್ವಾಮಿ ಕ್ಯಾಸಯ್ಯ ಮದುಮಗನೆಂಬೋ ಸುದ್ದಿ
ಅನ್ನೊಂದು ರಾಜ್ಯೇವುಕ ಅರುದಾವೇ

ಅಪ್ಪಯ್ಯ ನಿನ ಮಟವೇ ಮತ್ತೆಲ್ಲಿ ಅಣೆದಾರೆ
ಮತ್ತೆ ಚೆನ್ನಯ್ಯನಟ್ಟಿ ಬಯಲಾಗೆ ಅಣೆದಾರೆ
ಮುತ್ತೀನಣತೇನೆ ಅಣೆದಾರೆ

ಅಣ್ಣಯ್ಯ ನಿನ ಮಟವ ಇನ್ನೆಲ್ಲಿ ಅಣೆದಾರೆ
ಮತ್ತೆ ಚನ್ನಯ್ಯನಟ್ಟಿ ಬಯಲಾಗೆ ಅಣೆದಾರೆ
ಮುತ್ತೀನಣತೇನೆ ಅಣೆದಾರೆ

ಮತ್ತೆ ಚನ್ನಯ್ಯನಟ್ಟಿ ಬಯಲಾಗೆ
ಲಕ್ಕೀಯ ಚಿತ್ತಾರದಣತೆ ಅಣೆದಾರೆ
ದೂಪಾದ ಅಡಿಗಲ್ಲು ದೂಪಾದ ನಿಡಿಗಲ್ಲು
ದೂಪಾದ ಕೊರಡು ನಿಡಿಗಾರೆ ಕೊಟ್ಟಾರೆ

ಅಪ್ಪ ಚೆನ್ನಯ್ಯ ಅರಮಾನೆ

ಗಂದಾದ ಅಡಿಗಲ್ಲು ಗಂದಾದ ನಿಡಿಗಲ್ಲು
ಗಂದಾದ ಕೊರಡು ನೆಲಗಾರೆ ಕೊಟ್ಟಾರೆ
ಸ್ವಾಮಿ ಕ್ಯಾಸಯ್ನ ಅರಮಾನೆ

ದೂಪಾದ ಅಡಿಗಲ್ಲು ದೂಪಾದ ನಿಡಿಗಲ್ಲು
ಅಪ್ಪಾ ಚನ್ನಯ್ಯ ಗುಡಿಯ ಬಾಗಲಮುಂದೆ
ವೂಕರಿಸುತಾವೆ ವುಲಿ ಕರಡಿ

ಗಂದಾದ ನಿಡಿಗಲ್ಲು ಗಂದಾದ ಅಡಿಗಲ್ಲು
ಸ್ವಾಮಿ ಕ್ಯಾಸಯ್ನ ವುದಿಮುಂದೆ ಬಾಗುಲಲಿ
ದಂಗುಳಿಸುತಾವೆ ವುಲಿಕರಡಿ

ಮೂಡಲಿಂದ ಬಂದಾವೆ ಮೂರು ಸಾವಿರಗಿಣಿ
ಮೂಗಿನ ಮ್ಯಾಲೆ ಮರಿಗ್ಯಾವೆ ಸುರಿಸಿಕಂಬ್ತ
ವೊಕ್ಯಾವೆ ಚನ್ನಯ್ಯ ಅರಮಾನೆ

ಅರುಮಾನೆವೊಕ್ಕಾವೆ ತೆಲಿಗಿಂಬು ತಗಿದಾವೆ
ಸಿಲುಮೆಲಗ್ಗಣೆಯ ಸಲಿಸ್ಯಾವೆ ಚಿನ್ನಯ್ಯನಮ್ಮ
ಅರಮನೆ ಬಾಳ ಅಸನಂದೆ

ಅತ್ಲಿಂದ ಬಂದಾವೆ ಅತ್ತು ಸಾವಿರಗಿಣಿ
ರೆಕ್ಕೀಯ ಮ್ಯಾಲೆ ಮರಿಯಾವೆ ಸುರಿಸಿಕಂಬ್ತ
ವೊಕ್ಯಾವು ಕ್ಯಾಸಯ್ನ ಅರಮನೆ

ಅರುಮಾನೆ ವೊಕ್ಯಾವೆ ತೆಲಿಗಿಂಬು ತಗಿದಾವೆ
ಸಿಲುಮೆಲಗ್ಗಣೆಯ ಸಲಿಸ್ಯಾವೆ ಕ್ಯಾಸಯ್ಯನಮ್ಮ
ಅರಮಾನೆ ಬಾಳ ಅಸನಂದೆ

ಗುಡಿಯೇನೆ ನೋಡಿದರೆ ಗುಡಿಯೊಂದು ಐಸಿರಿ
ಗುಡಿಯ ಬಾಗುಲಿಗೆ ರವರತ್ನ ಚೆನ್ನಯ್ಯ
ಪೂಜಾರಿನ್ನೆಂತ ದನಿಕಾನೆ

ವುದಿಯೇನೆ ನೋಡಿದರೆ ವುದಿಯೊಂದು ಐಸಿರಿ
ವುದಿಯ ಬಾಗುಲಿಗೆ ರವರ್ನ ಕ್ಯಾಸಯ್ನ
ಕೀಲಾರಿನ್ನೆಂತ ದನಿಕಾನೆ

ಅಟ್ಟೀನೆ ನೋಡಿದರೆ ಅಟ್ಯೊಂದು ಐಸಿರಿ
ಅಟ್ಟೀಗೆ ಗಟ್ಟಿಬಿಗುದಾರೆ ಚೆನ್ನಯ್ನ
ವಕ್ಕಲಿನ್ನೆಂತ ದನಿಕಾರೆ

ಸೂರಿದನೆ ಮೂಡ್ಯಾನೆ ಮುತ್ತಿನ ಕೋಲಾಡ್ಯಾನೆ
ಅಪ್ಪ ನಿಮ್ಮತ್ತೆ ಬರುವಾಗ ಮೂಡಿಬರುವ
ಸೂರ್ಯಾಗೆ ಮಾಲೆ ಮುಲುತಾವೆ

ಚಂದುರನೆ ಮೂಡ್ಯಾನೆ ವೂವಿನ ಕೋಲಾಡ್ಯಾನೆ
ತಂದೆ ನಿಮ್ಮತ್ತೆ ಬರುವಾಗ ಮೂಡಿಬರುವ
ಚಂದ್ರಾಗೆ ಮಾಲೆ ಮುಲುತಾವೆ

ಪಟ್ಟಿಗನ್ನ ಮ್ಯಾಲೆ ಏನೇನು ಬರೆದಾರೆ
ಬಟ್ಟಣ್ಣನೆಂಬೋ ಸಲಗೆತ್ತೆ ಚೆನ್ನಯ್ಯ ನಿಮ್ಮ
ಪೆಟ್ಟಿಗನ್ನ ಮ್ಯಾಲೆ ಬರದಾರೆ

ಕಂಬೀಯ ಮ್ಯಾಲೆ ಏನೇನು ಬರೆದಾರೆ
ಗಂಬೀರನೆಂಬೋ ಸಲಗತ್ತೆ ಕ್ಯಾಸಯ್ಯನಿಮ್ಮ
ಕಂಬೀನೆ ಮ್ಯಾಲೆ ಬರೆದಾರೆ

ಸೂರಿದನನ್ನ ಮ್ಯಾಲೆ ಏನೇನು ಬರೆದಾರೆ
ಸುರತಾಳನಂಬೋ ಸಲಗೆತ್ತೆ ಪಾಲಯ್ಯ ನಿಮ್ಮ
ಸೂರಿದನ ಮ್ಯಾಲೆ ಬರೆದಾರೆ

ಬಾಕಿದನ್ನ ಮ್ಯಾಲೆ ಏನೇನು ಬರೆದಾರೆ
ಬಹದ್ದೂರನೆಂಬೋ ಸಲಗೆತ್ತೆ ಬೊಮ್ಮಯ್ಯ ನಿನ್ನ
ಬಾಕೀಯ ಮ್ಯಾಲೆ ಬರೆದಾರೆ

ವೊಕ್ಕುಳದ ವುರಿಗೆಜ್ಜೆ ವೊಕ್ಕುಳದ ಕಿರಿಗೆಜ್ಜೆ
ಸೊಕ್ಕೆ ಚಿನ್ನದಲಿ ಇಡಿಯಗ್ಗ ಚನ್ನಯ್ಯ
ಎತ್ತಿನುದಿಯಾಗಳ ಬಸುವಾಗೆ

ನಾಗಳದ ವುರಿಗೆಜ್ಜೆ ನಾಗಳದ ಕಿರಿಗೆಜ್ಜೆ
ಲೋಲ ಚಿನ್ನದಲಿ ಇಡಿಯಗ್ಗ ಕ್ಯಾಸಯ್ನ
ಅವಿನುದಿಯಾಗಳ ಬಸುವಾಗೆ

ಎತ್ತೀನ ಎಜ್ಜೆ ಎತ್ತೇನು ಬಲ್ಲಾದೆ
ಎತ್ತೇ ಕಾವಣ್ಣ ಮಗ ಜಾಣ ಬೋರಯ್ಯ
ಗೊತ್ತೇ ತೋರ್ಯಾನೆ ಮಲೆನಾಡ

ಆವೀನ ಎಜ್ಜೆ ಆವೇನುಬಲ್ಲಾದೆ
ಆವೇ ಕಾವಣ್ಣಮಗ ಜಾಣ ಬೋರಯ್ಯ
ತಾವೇ ತೋರ್ಯಾನೆ ಮಲೆನಾಡ

ಎತ್ತೇನೆ ಕಾವಣ್ಣ ಮುತ್ತು ಎಲ್ಲಿ ಮುಡುದೆ
ಎತ್ತೆಲ್ಲಿ ನೀರು ಕುಡಿದಾವೆ ಈರನಗೆರೆ
ಮುತ್ತೀನ ಸಾಗ್ರದ ವಳಿಯಲ್ಲಿ

ಆವೇನೆ ಕಾವಣ್ಣ ವೂವು ಎಲ್ಲಿ ಮುಡುದೆ
ಆವೆಲ್ಲಿ ನೀರು ಕುಡಿದಾವೆ ಈರನಗೆರೆ
ವೂವಿನ ಸಾಗ್ರದ ವಳಿಯಲ್ಲಿ

ಮುತ್ತೀನನ್ನ ಎಡಿಗೆ ನೆತ್ತೀಯ ಮ್ಯಾಲಿಟಕಂಡು
ಅಪ್ಪಯ್ಯ ನಿನ್ನ ಇರಿಯೋರು ಕರಕಂಡು
 ಮೂರು ಬಗಸೆಗೆ ಇಡಿದಾರೆ

ಅಪ್ಪಯ್ಯ ನಿನ ಬಸವ ವುಟ್ಟಿದಂತ ಸ್ಯರಣಾರ
ಮುತ್ತಿನ ಕಾಲಪೆಂಡೆ ಎಳೆಯೂತ ಇಂದಕಸರುದು
ಅಪ್ಪಯ್ಯ ಮಟಕ ಜಯಜಯ

ಬುಡ್ಡಗಲ್ಲಿನ ಮ್ಯಾಲೆ ನುಗ್ಗಿಬಂದುವುಬೆಳ್ಳಿ
ವೊಡಬೆತ್ತದಲಿ ತರುಬೋನೆ ಬೋರಯ್ಯ
ಸೇಜಿ ಸಿರಿಗಂದ ಕೊಡುನಮಗೆ

ಸೇಜಿ ನಿಮಗಿರಲಿ ಸಿರಿಗಂದ ನಿಮಗಿರಲಿ
ಮುಂದೆ ನಡೆದಂತ ಪಡಿವೊನ್ನು ಕೊಟ್ಟಾರೆ
ಮುಂದಕ ಬಟ್ಟಣ್ಣ ನಡೆದಾನೆ

ಆನೆಗಲ್ಲಿನ ಮ್ಯಾಲೆ ಓಡಿಬಂದವು ಬೆಳ್ಳಿ
ವೊಡಬೆತ್ತದಲಿ ತರುಬ್ಯಾನೆ ಬೋರಯ್ಯ
ಸೇಜಿ ಸಿರಿಗಂದ ಕೊಡು ನಮಗೆ

ಸೇಜಿ ನಿಮಗಿರಲಿ ಸಿರಿಗಂದ ನಿಮಗಿರಲಿ
ಇಂದೆ ನಡೆದಂತ ಪಡಿವೊನ್ನು ಕೊಟ್ಟಾರೆ
ಮುಂದಕ ಮೈಲಣ್ಣ ನಡೆದಾನೆ

ಬಾಗಿ ಬಂದಾವವ್ವ ಬಾಲಗೋಡಿನ ಬಸವ
ತೂಗಿ ಬಂದಾವೆ ಎಳವೋರಿ ಚನ್ನಯ್ಯ
ಬಾಗ್ಯೇದ ಮಾಟಕ ಎದುರಾಗಿ

ಬಗ್ಗಿ ಬಂದಾವವ್ವ ಬಗ್ಗುಗೋಡಿನ ಬಸವ
ಬಾಗಿ ಬಂದಾವೆ ಎಳವೋರಿ ಕ್ಯಾಸಯ್ನ
ಉಗ್ರಾಣದ ಮಟಕೆ ಎದುರಾಗಿ

ಅಪ್ಪಯ್ಯ ನಿಮ ಬಸವ ತುಪ್ಪುಂಡ ಸೇಜಿಗಳು
ಉಕ್ಕುಮಡ್ಡಿ ಮೇಲೆ ಮದವೇರಿ ಬರುವಾಗ
ತುಪ್ಪಾ ಮಾರೋಳು ಕಡಿಗೋಗೆ

ಅಣ್ಣಯ್ಯ ನಿಮ ಬಸವ ಎಣ್ಣುಂಡ ಸೇಜಿಗಳು
ಉಕ್ಕುಮಡ್ಡಿಮೇಲೆ ಮದವೇರಿ ಬರುವಾಗ
ತುಪ್ಪಾ ಮಾರೊಳು ಕಡಿಗೋಗೆ

ತುಪ್ಪೇನೆ ಮಾರೋಳ ಯಾಕ ತುಳುದೆ ಬಟ್ಟಣ್ಣ
ಚಿತವೈತವಳ ಮನದಾಗೆ ನಿಮಪಾದಾಕ
ತುಪ್ಪ ತರುವುದು ಮರೆತಾಳೆ

ಅಣ್ಣಯ್ಯ ನಿಮ ಬಸವ ಎಣ್ಣುಂಡ ಸೇಜಿಗಳು
ಅಣ್ಣ ಮಡ್ಡಿತಿಂದು ಮದವೇರಿ ಬರುವಾಗ
ವೂವಮಾರೋಳೆ ಕಡಿಗೋಗೆ

ವೂವೇನೆ ಮಾರೋಳೆ ಯಾಕ ತುಳುದೆ ಮೈಲಣ್ಣ
ಗ್ಯಾನವೈತವಳ ಮನದಾಗೆ ನಮಪಾದಾಕ
ವೂವ ತರುವಾದೆ ಮರೆತಾಳೆ

ಅಸಿವುಲ್ಲು ಮೇದಾವೆ ಕುಸುಲೀಸಿ ನಡೆದಾವೆ
ಅಸುಮಗ ಚನ್ನಯ್ಯ ಇಡಿಜೇಜಿ ನಿಡಗಲ್ಲ
ಕಲ್ಲಾಗೆ ದಾಳಿ ಅರುದಾವೆ

ನೆಲ್ಲುಲ್ಲು ಮೇದಾವೆ ಗಲ್ಲೀಸಿ ನಡೆದಾವೆ
ಅಸುಮಗ ಕ್ಯಾಸಯ್ಯ ಇಡಿಜೇಜಿ ನಿಡಗಲ್ಲ
ಕೆಸರಾಗೆ ದಾಳಿ ಅರುದಾವೆ

ಎತ್ತೀನ ಮುಂದೆ ಬರುವ ಬಟ್ಟುಗಂದದ ಚೆಲುವ
ಎತ್ತೀನ ಬೋರಯ್ಯ ಮಗನೇನೆ ಕೊರಳಾಗಿರುವ
ಮುತ್ತೀನೊಲ ಮಾಲೆ ನಮದಯ್ಯ

ಆವೀನ ಮುಂದೆ ಬರುವ ಗೀರುಗಂದದ ಚೆಲುವ
ಆವೀನ ಬೋರಯ್ನ ಮಗನೇನೆ ಕೊರುಳಾಗಿರುವ
ವೂವಿನೊಲಮಾಲೆ ನಮದಯ್ಯ

ಎತ್ತುಬಂದಾವು ಎತ್ತಿನ ಮನೆ ಪಾಲವ್ವ
ಎತ್ತೀನ ಮುಂದೆ ವಳಲೂಡಿ ಆರತಿನೆತ್ತಿ
ಎತ್ತೀಗೆ ಸಾಸ್ಯೇವ ಕೊಡುಬಾರೆ

ಎತ್ತೀಗೆ ಬೆಳಗಿದರೆ ಎತ್ತೇನು ಕೊಡುವಾದು
ಎತ್ತೀನ ಮುಂದೆ ಕಿಲಾರಿಗೆ ಬೆಳಗಿರೆ
ಕೊಪ್ಪಿಗೊಜ್ಜುರವ ಬಿಗಿಸೇನು

ಆವು ಬಂದಾವು ಬಾರೆ ದೇವುರ ಮನೆ ಚೆನ್ನವ್ವ
ಆವೀನ ಮುಂದೆ ವಳಲೂಡಿ ಆರುತಿನೆತ್ತಿ
ಆವೀಗೆ ಸಾಸೇವ ಕೊಡುಬಾರೆ

ಆವೀಗೆ ಬೆಳಗಿದರೆ ಆವೇನು ಕೊಡುವೋದು
ಆವೀನೆ ಮುಂದಿರುವ ಕಿಲಾರಿಗೆ ಬೆಳಗಿದರೆ
ವಾಲಿಗೊಜ್ಜುರವ ಬಿಗಿಸೇನು

ಪಟ್ಟೀದಚ್ಚಡವಿಲ್ಲ ಮುತ್ತೀನ ಬೊಟ್ಟಿಲ್ಲ
ಬೊಟ್ಟೀಗೆ ತಾಯ್ತ ಮಣಿಯಿಲ್ಲ ಅಂದಿನ್ನ
ದೇವರು ಬೋರಯ್ಯ ವರನಲ್ಲೆ

ಪಟ್ಟೇದಚ್ಚಡವೈತೆ ಮುತ್ತೀನ ಬೊಟ್ಟೆತೆ
ಬಟ್ಟೀನ ತಾಯ್ತ ಮಣಿಯೈತೆ ಅಂದಿನ್ನ
ತಾಯಿ ಓಬವ್ವ ಕರೆದಾಳೆ

ಗಂಜೀಯಚ್ಚಡವಿಲ್ಲ ಗಂದಾದ ಬಟ್ಟಿಲ್ಲ
ತೋಳೀಗೆ ತಾಯ್ತ ಮಣಿಯಿಲ್ಲ ಅಂದಿನ್ನ
ದೇವರು ಬೋರಯ್ಯ ವರನಲ್ಲೆ

ಗಂಜೀಯಚ್ಚಡವೈತೆ ಗಂದಾದ ಬಟ್ಟೈತೆ
ತೋಳೀಗೆ ತಾಯ್ತ ಮಣಿಯೈತೆ ಅಂದಿನ್ನ
ತಾಯಿ ಓಬವ್ವ ಕರೆದಾಳೆ

ಅತ್ತೇನ ನೂರೊರುಸ ತುಪ್ಪುಂಡ ಮೈಯ್ಯೋನೆ
ಇಪ್ಪೆಯೆಲೆಯಂಗೆ ಬಳುಕೋನೆ ಬೋರಯ್ಯ
ಅಪ್ಪಯ್ಯಗೆಗಲ ಕೊಡುಬಾರೋ

ಆರೇನೆ ನೂರೊರುಸ ಆಲುಂಡಮೈಯ್ಯೋನೆ
ಬಾಳೆಯೆಲೆಯಾಗೆ ಬಳುಕೋನೆ ಬೋರಯ್ಯ
ಅಣ್ಣಯ್ಯಗೆಗಲ ಕೊಡುಬಾರೋ

ಇರಿಯೋರು ಕಿರಿಯೋರು ಕಟ್ಟ್ಯಾರೆ ಪಟ್ಟಾವ
ಪಾರ್ವತಿಯಡೆದ ಮಗನೀಗ ಬೋರಯ್ಯಾನೆ
ದೇವರೊರಿಸ್ಯಾರೆ ಇರಿಯೋರು

ಇರಿಯೋರು ಕಿರಿಯೋರು ಮಾಡ್ಯಾರೆಪಟ್ಟಾವ
ನೀಲಮ್ಮನಡೆದ ಮಗನೀಗೆ ಬೋರಯ್ಯಾಗೆ
ಸುತ್ಯಾರೆ ನಾಗಸರುಪಾನ

ಮುತ್ತಿನನ್ನ ದುಗುವೆ ಮುತ್ತೆಲ್ಲಿ ವೊಯ್ದಾರೆ
ಮತ್ತೆ ಚೆನ್ನಯ್ಯನಟ್ಟಿ ಬಯಲಾಗೆ ಇರಿಯೋರೆ
ಮುತ್ತಿನನ್ನ ದಗುಮೆ ವೊಯ್ಸಾರೆ

ವೊನ್ನೀನ ವುದಿಮೆ ಇನ್ನೆಲ್ಲಿ ವೊಯ್ಸಾರೆ
ಇನ್ನೇ ಚನ್ನಯ್ಯನಟ್ಟಿ ಬಯಲಾಗೆ ದೊರಿಗಾಳು
ವೊನ್ನು ಕೊಟ್ಟೆ ವುರಿಮೆ ವೊಯ್ಸಾರೆ

ಕಂಚಿನನ್ನ ಕಾಳೆ ಇನ್ನೆಲ್ಲಿ ಇಡಿಸ್ಯಾರೆ
ಇನ್ನೆ ಚನ್ನಯ್ಯನಟ್ಟಿ ಬಯಲಾಗೆ ಗೌಡಾರು
ಕಂಚೀನ ಕಾಳೆ ಇಡಿಸ್ಯಾರೆ

ಅಟ್ಟೀಯ ಇಂದಾಲ ಬಟ್ಟನ್ನ ವಂಬಾಳೆ
ಮತ್ಯಾರು ವೋಗಿ ಕಡಿಸ್ಯಾರೆ ಕಾರೆಲೋರು
ಎಚ್ಚಿದೊಕ್ಕಾಲ ಕಡಿಸ್ಯಾರೆ

ಏರೀಯ ಇಂದಾಲು ವಾಲಾಡೋ ವಂಬಾಳೆ
ಇನ್ಯಾರು ವೋಗಿ ಕಡಿಸ್ಯಾರೆ ಕಾರೇಲೋರು
ಮಾನ್ಯೇದೊಕ್ಕಾಲ ಕಡಿಸ್ಯಾರೆ

ಅಂದವುಳ್ಳ ತ್ವಾಟಾಕ ಚಂದವುಳ್ಳೇಣಿನಾಕಿ
ಪಟ್ಟೇದಚ್ಚಡದಲೇ ಮಡಲೊಡ್ಡಿ ಬೋರಯ್ಯ
ಅಪ್ಪಯ್ಯಗೂವ ಕೊಯ್ದಾನೆ

ಆಯವುಳ್ಳ ತ್ವಾಟಾಕ ಸಯವುಳ್ಳ ಏಣಿನಾಕಿ
ಗಂಜೀಯಚ್ಚಡದ ಮಡಲೊಡ್ಡಿ ಬೋರಯ್ಯ
ಅಣ್ಣಯ್ಯಗೂವ ಕೊಯ್ದಾನೆ

ಎಲ್ಲಿಂದ ತಂದೂವು ವಲ್ಲಾನೆ ಚೆನ್ನಯ್ಯ
ಅಲ್ಲೇ ನಿಡಿಗಲ್ಲು ಅಳಗೀನ ಕಾಲ್ಯದೂವು
ಮುತ್ತಿನ ಸರವೆಂದೆ ಮುಡಿದಾನೆ

ಎತ್ತಿದಂದೂವು ವಪ್ಪಾನೆ ಕ್ಯಾಸಯ್ಯ
ಮತ್ತೆ ನಿಡುಗಲ್ಲು ಅಳಗೀನ ಕಾಲ್ಯದೂವು
ಮಲ್ಲಿಗೆ ಸರವೆಂದೇ ಮುಡುದಾನೆ

ಪೂಜಾರಿ ತಂದೂವು ಪೂಜೇಗೆ ಸಾಲಾವು
ಪೂಜಾರಿ ಮಗನೆ ಕಲಿವೀರ ತಂದೂವು
ಪೂಜೇಗೆ ಸೆಲ್ಲಲರುದಾವೆ

ವೊಕ್ಕಲು ತಂದೂವು ಪಕ್ಕೀಗೆ ಸಾಲಾವೆ
ವೊಕ್ಕಾಲೋರಮಗನೆ ಕಲಿವೀರ ತಂದೂವು
ಪಕ್ಕೀಗೆ ಚೆಲ್ಲಲರುದಾವೆ

ಅಪ್ಪೇನೆ ಚನ್ನಯ್ಯ ವತ್ತಿಲಿಕುಂತಕಂಡು
ವಪ್ಪದಿಂದೂವೆ ಮಡಿಸೋನೆ ಬೋರಯ್ಯ
ಅಪ್ಪಯ್ಯಗಿಂತ ಚೆಲುವಾನೆ