ಚಿತ್ರದುರ್ಗ ಪಟ್ಟಣ ಮತ್ತು ಜಗಳೂರು ದಾರಿಯಲ್ಲಿ ಕಲ್ಲೇದೇವರ ಪುರವಿದೆ. ಇದು ಐತಿಹಾಸಿಕ ಮಹತ್ವ ಇರುವ ಸ್ಥಳ. ಇಲ್ಲಿರುವ ದೇವಾಲಯದಲ್ಲಿ ಹನ್ನೆರಡನೇ ಶತಮಾನದಲ್ಲಿ ಜೀವಿಸಿದ್ದ ಕಲ್ಯಾಣದ ಕ್ರಾಂತಿಯ ನೇತಾರ, ವಚನಕಾರ ಬಸವಣ್ಣನವರ ಹೆಸರಿನ ಪ್ರಸ್ತಾಪವಿರುವ ಶಾಸನವಿದೆ. ಈ ದೇವಾಲಯವೂ ಕೂಡ ಅಷ್ಟೇ ಪ್ರಾಚೀನವಾದುದು. ಹೊಯ್ಸಳರ ಕಾಲದ ತ್ರಿಕೂಟಾಚಲ ಗುಡಿ ಇದೆ. ಇದು ಕಲ್ಲೇ ದೇವರಪುರದ ಗುಡಿಯಾಗಿ ಆ ಸುತ್ತಿನ ಜನಪದರೆಲ್ಲ ಕಲ್ಲೇಶ್ವರನ ಹೆಸರಿನಿಂದಲೇ ತಮ್ಮನ್ನು ನಿರ್ವಚಿಸಿಕೊಳ್ಳುತ್ತಾರೆ. ಬಹುತೇಕ ಇದು ವೀರಶೈವ ಸಮೂಹದವರಿಗೆ ಸೇರಿದ ದೇವರು. ಈ ದೇವತೆಯ ಮೇಲೂ ಜನಪದ ಗೀತೆ ಪ್ರಚಾರದಲ್ಲಿದ್ದು, ಆ ಸುತ್ತಿನ ತಳವರ್ಗದ ಮಹಿಳೆಯರೆಲ್ಲ ಹಾಡುತ್ತಾರೆ. ಸಿರಿಯಜ್ಜಿಯೂ ಇದನ್ನು ಕಲಿತಿರುತ್ತಾಳೆ. ಕಲ್ಲೇಶ್ವರ ಎಂಬುದು ಕಲ್ಲು ಪದಕ್ಕೆ ಸೇರಿದ್ದಲ್ಲ. ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ಕನ್ನಡ ನಿಘಂಟಿನ ಎರಡನೇ ಸಂಪುಟದಲ್ಲಿ ‘ಕಲ’ ಎಂದರೆ ‘ಮಧುರ’, ‘ಇಂಪಾದ’ ಎಂಬ ಅರ್ಥದಿಂದ ಆರಂಭವಾಗಿ ಮಣ್ಣಿನ ಪಾತ್ರೆ, ಅಳತೆ, ಬೆರೆತುಕೊಂಡಿರುವುದು ಎಂದಿದ್ದು, ಹಾಗೆಯೇ ‘ಕಲಾವೆ’ ಎಂದರೆ ಒಂದು ಮೂಲಿಕೆ. ‘ಕಲಿಂದ’ ಎಂದರೆ ತಾವರೆಯ ಗಿಡ ‘ಕಲಿಂದಜೆ’ ಎಂದರೆ ಕಲಿಂದ ಪರ್ವತದಲ್ಲಿ ಹುಟ್ಟಿದುದು. ಕಾಲಿಂದಿನದಿ, ಕಲಕಾರಕೆ ಎಂದರೆ ಒಂದು ಬಗೆಯ ಗಿಡ. ಕಲ್ಪೇಶ್ವರ (ಕಲ್ಪ + ಈಶ್ವರ) ಹಾಗೆಯೇ ಕಹ್ಲಾರ ಎಂದರೆ ಎಳೆಗೆಂಪಿನ ಬಿಳಿಯ ನೈದಿಲೆ ಎಂಬ ಅರ್ಥವಿದೆ. ಇದರಲ್ಲಿ ಕಲ್ಪ ಈಶ್ವರ ಅಥವಾ ಕಹ್ಲಾರ ಈಶ್ವರ ಅಂದರೆ ಕಲ್ಪಕ್ಕೆ ಒಡೆಯನಾದ ಈಶ್ವರ ಇಲ್ಲ. ಕಹ್ಲಾರ ಹೂವಿನ ಪ್ರಿಯನಾದ ಈಶ್ವರನು ನೆಲೆಸಿದ ಸ್ಥಳ ಎಂಬ ಎರಡು ಪದಗಳಲ್ಲಿ ಒಂದು ಕಲ್ಲೇದೇವರಪುರ ಮೂಲ ನಾಮವಿರಬೇಕು. ಈ ಗೀತೆಯೂ ಸಹ ‘ಮಾತು ಮಾತಿಗೆ ಮುನ್ನ ಕಾತೇಯ ನೆನೆದೇವೆ ಕಾತೇ ಜೀರಿಗೆಯ ಬೆಳವೋಳೆ ಬೂಮ್ಯಮ್ಮನ ಮಾತಿಗೆ ಮುಂದಾಗಿ ನೆನೆದೇವೆ’ ಎಂದು ಆರಂಭವಾಗುತ್ತದೆ. ಕಾತೆ ಎಂದರೆ ಕಾಂತೆ. ಕಾಂತೆ ಎಂದರೆ ಇಲ್ಲಿ ಭೂಮಿತಾಯಿ. ಕಲ್ಲೇಶ್ವರನ ಪ್ರಾರ್ಥನಾ ಪದ್ಯಗಳೊಂದಿಗೆ ಅವನೊಡನೆ ಗೌರಮ್ಮನನ್ನು ಲಗ್ನ ಮಾಡುವ ತ್ರಿಪದಿಗಳೂ ಇವೆ. ಕಲ್ಲೇಶ್ವರನ ಗೀತೆಯ ಸೊಲ್ಲುಗಳೂ ನಾಲ್ಕು:

. ಅಪ್ಪಾನ ವುಣಿವೆ ಅತ್ತೆಂಟು ದಿನವೈತೆ
ವೋಗಿ ಬಗುತರನ ಬೆಸಕಳ್ಳೊ

. ಜಯವೆಂದು ಬೆಳಗಿರಿ ಪರಮಜಗದ್ಗುರು
ಕಲ್ಲಿನಾಥನಿಗೆ ಗುರುವರ ಕಲ್ಲಿನಾಥನಿಗೆ

. ಮುಂಗಾರಿ ಮಳೆಬಂದು ಬೂಮಿಗಂದಲವಾಕಿ
ಸ್ವಾಮಿ ಕಲ್ಲೇಸ ದಯಬಿಕ್ಸಾ

೪. ಮಂಗಳ ಮಯಿಮ ಕಾಣೆ ಕಲ್ಲೇಸ
ಜಂಗಮಲಿಂಗ ಕಾಣೆ ಕಲ್ಲೇಸ

 

ಕಲ್ಲೇಶ್ವರ ಗೀತೆ

ಮಾತುಮಾತಿಗೆ ಮುನ್ನ ಕಾತೇಯ ನೆನೆದೇವೆ
ಕಾತೇ ಜೀರಿಗೆಯ ಬೆಳವೋಳೆ ಬೂಮ್ಯಮ್ಮನ
ಮಾತೀಗೆ ಮುಂದಾಗಿ ನೆನೆದೇನೆ

ಲಿಂಗಾನ ನೆನೆ ಮನವೆ ಜಂಗುಮನ ನೆನೆ ಮನವೆ
ಲಿಂಗ ಜಂಗಮರ ನೆನೆ ಮನವೆ ಗುಡಿಯಾಗಿರುವ
ಸಂಗನ ಬಸವಣ್ಣನ ನೆನೆಮನವೆ

ನಾಗವೇಣಿಯಿಡಿದು ನಾವೀಗ ನೆನೆದೇವೆ
ಸಾಲುಗುಡ್ಡಾದ ವಡಿಯಾನ ಗೂಹೆಸ್ವರಯ್ಯ
ದೊಡ್ಡೋರನ ಮದುಲೆ ನೆನೆದೇವೆ

ರುದ್ರವೇಣಿಯಿಡಿದು ದೊಡ್ಡವ್ವರನ ನೆನೆದೇನ
ಅಬ್ಬಿಗೆ ಗಿರಿಯ ಏಡಿಯ ಈರಣ್ಣನ
ದೊಡ್ಡೋರನ ಮದುಲೇ ನೆನೆದೇನು

ಏರಿಯಿಂದಾಲ ಬೂದೂ ಬಾಳೆಯಣ್ಣು
ಬೇರೆ ಮುಂದಾಗಿ ಸಲುಸ್ಯೇವು ವಳಲಕೆರೆಯ
ವಾಲೇಯ ಬೆನವ ಕೊಡುಮತಿಯ

ಅಟ್ಟುಂಬ ಅಡವಿಯಾಗ ಪಟ್ಟೆಮಂಚದಾಗ
ಸರ್ಪಬೂಸೂರನ ತಲೆಗಿಂಬೆ ಎರಿಗುಂಟೆ
ಪ್ರೇಮಿ ನಮದನಿಗೇ ದಯವಾಗೋ

 

ಕಂಕಣ ಕಟ್ಟುವುದು

ಅಪ್ಪಾನ ವುಣವೆ ಅತ್ತೆಂಟು ದಿನವೈತೆ
ವೋಗಿಬಗುತರನ ಬೆಸಕಳ್ಳೋ ಬಕುತರಮನೆಯ
ಎಣ್ಣೇಯ ಕಂಬಿ ಬರಬೇಕು

ಎಣ್ಣೇಯ ಕಂಬಿ ಬರದಿದ್ದುಂಟಾದರೆ
ಬೇಗಾನೆ ಸಳಿಜನರ ಕಳಿವೇನೆ

ಅಯ್ಯಾನ ವುಣಿವೆ ಇನ್ನೆಂಟುದಿನವೈತೆ
ವೊಕ್ಕುಬಗುತರನ ಬೆಸಕಳ್ಳೋ ಬಕುತರಮನೆಯ
ತುಪ್ಪಾದಕಂಬಿ ಬರಬೇಕು

ತುಪ್ಪಾದ ಕಂಬಿ ಬರದಿದ್ದುಂಟಾದರೆ
ಗಕ್ಕನೆ ಸಳಿಜರವ ಕಳಿವೇನೆ

ಅತ್ತಿ ಮರನಾಕಿ ಅತ್ತೆಂಟು ದಿನವಾತು
ಕೆತ್ತಾನೆ ಬಡಗಿ ಕಡಿಯಾನೆ ಬಡಗಿಮನೆಯ
ಎತ್ತೀನ ಇಂಡೆ ತಿರುವಂದೆ

ಆಲಾದ ಮರನಾಕಿ ಆರೆಂಟು ದಿನವಾತು
ನೋಡಾನೆ
ಬಡಗಿ ಕಡಿಯಾನೆ ಬಡಗಿಮನೆಯ
ಆವೀನ ಇಂಡೆ ತಿರುವಂದೆ

ಬಡಗಿಸುತ್ತಾರೆ ನಗುಮುಖದ ವೈಯ್ಯಾರಿ
ಕಮಲಕಡುದಾನೆ ನೆಲುನಾಗೆ ಬಾಳೇಯ
ಕೊನೆಯ ತಿರುವ್ಯಾನೆ ಎಲೆಎಲೆಗೆ

ಕೆಂದ ಕುದುರೇಯ ಏರ್ಯಾನೆ ಅನ್ನದಾನಪ್ಪ
ತೇರೆ ಬೈಲಾಗೆ ಸುಳಿದಾವೆ ಮೂಡಾಲ
ಪರಿಸೇ ತಿರುಗಿ ಬರುತಾವೆ

ನೀಲೀನೆ ಕುದುರೆ ಏರ್ಯಾನೆ ಅನ್ನದಾನಪ್ಪ
ತೊರಿಯಾ ದಡದಲ್ಲಿ ಸುಳಿದಾನೆ ಪಡುವಾಲ
ಪರಿಸೇ ತಿರುಗಿ ಬರುತಾವೆ

ಪಡುವಲ ವರುಸೆ ನೋಡುದಲೆ ಬರುತಾವೆ
ಜಗದೊಡಿಯ ಕೇಳೋ ಅನ್ನದಾನಿ ನಿನಪರಿಸೆ
ತೊರಿಯಾ ದಡದಲ್ಲಿರಲೇಳೋ

ಮೂಡಾಲ ಪರಿಸೆ ಕಡೆಯರುದು ಬರುತಾವೆ
ಶಂಕರನ ಕೇಳೋ ಅನ್ನದಾನಿ ನಿನಪರಿಸೆ
ತೊರೆಯಾ ಬಯಲಾಗೆ ಇರಲೇಳೋ

ಟೆಂಕಾಲ ಪರಿಸೆ ಸೆಂಕಿಲ್ಲದೆ ಬರುತಾವೆ
ಶಂಕರನ ಕೇಳೋ ಅನ್ನದಾನಿ ನಿನಪರಿಸೆ
ಸಂತೆಬಯಲಾಗೆ ಇರಲೇಳೋ

ಬ್ರುಂಗುನಾರದ ಮುನಿಯೇ ಬಾರೋ
ನಂದೀಯ ಮೇಲೆ ಗುರುವೆ ಬಾರೋ ಕಲ್ಲೇಸನ
ತೇರೀಗೆ ಕಂಕಳವ ದರಿಸಾನ

 

ಕಲ್ಲೇಶ್ವರನ ಮದಲಿಂಗಶಾಸ್ತ್ರ

ಜೊತ್ತೆ ಮಂಟಪವ ಇಳಿದಾರು ಗುಡಿಯಾಗಿರುವ
ದೇವಾರೆ ಗತಿಯೆಂದು ನೆಡುದಾರೆ

ಜೀರಿಗೆ ರಾಜುಣವಿಡಿದು ಸಾಗಿರೆಮುತ್ತೈದೇರೆ
ಸಾಲು ಮಂಟಪವೇ ಇಳಿದಾರೆ

ಸಾಲು ಮಂಟಪವೇ ಇಳಿದು ಗುಡಿಯಾಗಿರುವ
ಮುಕ್ಕಣ್ಣನೆ ಗತಿಯೆಂದು ನಡೆದಾರೆ

ಮುತ್ತಿನ ಸಿಮ್ಯಾಸನಕೆ ವತ್ತಿ ನಿಂತೈದಾರೆ
ಚಿತ್ತಾರಿಲ್ಲದೆಲೆ ಬರದಿವರು ಕಲ್ಲೇಸನ
ಮತ್ತೆ ಕರಡಿ ವಾಲಗದನಿ ಮಾಡೋ

ಅವಳದ ಸಿಮ್ಯಾಸನಕೆ ಒದುಗಿ ನಿಂತೈದಾರೆ
ಅರಿದೇರಿಲ್ಲದಲೇ ಬರರಿವುರೇ ಪೂಜಾರಿ
ಇನ್ನೊಮ್ಮೆ ಕರಡಿದನಿ ಮಾಡೋ

ಜೋಡಿಲ್ಲದನಕ ಏರ್ಯಾರೆ ಅಸಿಗಾಳ
ಜೇಬಿನಾಣ್ಯೇವ ವದಿಯಾರೆ ನಾಯಕನಟ್ಟಿ
ರುದ್ರಾರೆ ಸಾಗಿಬರುಬೇಕೇ

ಜೊತ್ತಿಲ್ಲದನಕಾ ಅತ್ಯಾರೆ ಅಸಿಗಾಳ
ಪಟ್ಟೇನಾಣ್ಯೇವೆ ವದಿಯಾರೆ ಕೊಟ್ಟೂರು
ಉಚ್ಚಾರೆ ಸಾಗಿ ಬರಬೇಕು

ಅಪ್ಪಾ ಮದುಮಗ ಅಪ್ಪಯ್ಯ ಮದುಮಗ
ಅಪ್ಪನ ದಾನಿ ಮದುಮಗ ಜಗಲೂರು
ಅಕ್ಕಿವಂಬಾಳೆ ಬರಬೇಕು

ಅಣ್ಣಾ ಮದುಮಗ ಅಣ್ಣಯ್ಯ ಮದುಮಗ
ಅಣ್ಣಯ್ಯ ದಾನಿ ಮದುಮಗ ಜಗಲೂರು
ಅಕ್ಕಿವಂಬಾಳೆ ಬರಬೇಕು

ಅಣ್ಣಾಮದುಮಗ ಅಣ್ಣಯ್ಯ ಮದುಮಗ
ಅಣ್ಣಯ್ಯ ದಾನಿ ಮದುಮಗ ಜಗಲೂರು
ಅಣ್ಣಾ ವಂಬಾಳೆ ಬರಬೇಕು

ಅಪ್ಪ ಮದುಮಗನಂದು ಮತ್ತೇನು ಕಳಿವ್ಯಾರೆ
ಮುತ್ತೀನ ವೇಳೆ ಸೆರುಗೀನ ಸಲ್ಯೇವ
ಚಿಕ್ಕಮದಕೇರಿ ಕಳಿವ್ಯಾನೆ

ಅಣ್ಣ ಮದುಮಗ ಅಣ್ಣಯ್ಯ ಮದುಮಗ
ಅಣ್ಣನ್ನದಾನಿ ಮದುಮಗ ಜಗಲೂರು
ಅಕ್ಕಿ ವಂಬಾಳೆ ಬರಬೇಕು

ಅಣ್ಣಾಮದುಮಗ ಅಣ್ಣಯ್ಯ ಮದುಮಗ
ಅಣ್ಣಯ್ಯ ದಾನಿಮದುಮಗ ಜಗಲೂರು
ಅಣ್ಣೇ ವಂಬಾಳೆ ಬರಬೇಕು

ಅಪ್ಪ ಮದುಮಗನಂದು ಎತ್ತೀನು ಕಳಿವ್ಯಾರೆ
ಮುತ್ತೀನ ವೇಳೆ ಸೆರುಗೀನ ಸೆಲ್ಯೇವ
ಚಿಕ್ಕಮೆದಕೇರಿ ಕಳಿವ್ಯಾನೆ

ಅಣ್ಣ ಮದುಮಗ ಅಣ್ಣಯ್ಯ ಮದುಮಗ
ಅಣ್ಣನ್ನದಾನಿ ಮದುಮಗ ಜಗಲೂರು
ಅಣ್ಣಿ ವಂಬಾಳೆ ಬರಬೇಕು

ಅಣ್ಣ ಮದುಮಗನೆಂದು ಇನ್ನೇನು ಕಳಿವ್ಯಾರೆ
ಸಣ್ಣ ಸೆಲ್ಯಾವ ಕಳಿವ್ಯಾರೆ ಸೆಲ್ಯೇವ
ಈರ ಮದಕೇರಿ ಕಳಿವೇನೆ

ಎತ್ತೀನ ಮಲಸೆಟ್ಟಿ ನಿಟ್ಟುವಟ್ಟಿದಲೈಯ್ಯ
ವುಟ್ಟುಗಲ್ಲೊಡೆದ ಗುಡಿಗಟ್ಟಿ ವೊನ್ನುಸ್ತೂರು
ತಾವೊಳ್ಳೆದೆಂದು ನೆಲೆಗೊಂಡ

ತಾವೊಳ್ಳೆದೆಂದು ನೆಲಗೊಂಡ ಕಲ್ಲೇಸಾನ
ನಂದಾದೀವಿಗೆ ಉರಿದಾವೆ

ವೋರೀಯ ಮಲಸೆಟ್ಟಿ ಆಡುವುಂಡಾವೈಯ್ಯ
ಸಾಣೆ ಕಲ್ಲೊಡೆದು ಗುಡಿಗಟ್ಟಿ ವೊನ್ನುಸ್ತೂರಿ
ತಾವೊಳ್ಳೇದೆಂದೆ ನೆಲೆಗೊಂಡ

ತಾವೊಳ್ಳೇದೆಂದು ನೆಲೆಗೊಂಡ ಕಲ್ಲೇಸಾನ
ನಂದಾದೀವಿಗೆ ಉರುದಾವೆ

ಕಾವೀಯಕಂತೆ ಈರತ್ರು, ಬಂದಾರೆ
ಆದ ತರಗಲೆಯ ಮೆಲುವಾರೆ ಕೈಲಾಸದ
ಸಿದ್ದರು ಬಂದಾರೆ ಸಿವನ ಮದುವೀಗೆ

ರುದ್ರಾಕ್ಸಿ ಕಂತೆ ಸಿದ್ದಾರು ಬಂದೈದಾರೆ
ಇದ್ದ ತರಗೆಲೆಯ ಮೆಲುವೋರೆ ಕೈಲಾಸದ
ಮುನಿಗಾಳು ಬಂದಾರೆ ಮದುವೀಗೆ

ದುಂಡಕ್ಕಿ ಅನ್ನ ಇಂಡೆಮ್ಮೆ ನೊರೆಯಾಲು
ರೆಂಬೆ ಚೆನ್ನಯ್ಯನ ಮನಿಯಾಗೆ ಕೋರೂಟಾವ
ಪನ್ನಂಗದವರನೇ ಸಲಿಸ್ಯಾರೆ

ಸಣ್ಣಕ್ಕಿಯನ್ನ ಆಕಳನೊರಿಯಾಲು
ಕಾತೆ ನಿಂಬೆವ್ವನ ಮನಿಯಾಗೆ ಕೋರೋಟಾವ
ಸಾಕ್ಸಾತೀಸ್ವರನಿಗೆ ಸಲಿಸ್ಯಾರೆ

ಲಿಂಗಾ ನಿನ್ನೊಚನ ಕೊಂಡಾಡುವರಿಗೆಲ್ಲ
ತೆಂಗೀನ ಮರದ ಬುಡದಿಂದ ಕೊನೆಯಿಂದ
ತೆಂಗೇ ಕಾತಂತೆ ಸಿವನುಡಿ

ದೇವರೇ ನಿನ್ನೊಚನ ಈಡಾಡ್ಯಾವರುಗೆಲ್ಲ
ಮಾವಿನ ಮರದ ಬುಡದಿಂದ ಕೊನೆಯಿಂದ
ಮಾವೆ ಕಾತಂತೆ ಸಿವನುಡಿ

 

ಗೌರಮ್ಮನನ್ನು ಮದುಲಗಿತ್ತಿ ಮಾಡುವುದು

ಕಲ್ಲೇ ಗುಡಿಯೋಳೆ ಕೆಲಸದಡಿನೆರಿಗ್ಯೋಳೆ
ಬಲಗಾಸಿ ನಿನ್ನ ನಡುವೀಗೆ ಗೌರಮ್ಮ
ನಲ್ಯೋಳೆ ನಮಗೆ ದಯವಾಗೆ

ಪಟ್ಟೇದ ಸೀರೆ ಸುತ್ತಾಕಿ ಉಡಸೀರಿ
ಸುಸ್ಟಿಗೀಸ್ವರನಮಡದೀಗೆ ಮಂಡೆಮ್ಯಾಲೆ
ಬಿಚ್ಚಿ ಸೂಡೀರಿ ವಸವೂವು

ಸಾಲ್ಯೇದ ಸೀರೆ ಸೆರಗು ಬಿಟ್ಟುಡಿಸೀರಿ
ಅರಅರನ ಪಟ್ಟೇದ ಸೀರೇ ಗೌರಮ್ಮಾನ
ಕ್ಯಾದೀಗೆ ಸೂಡೀರಿ ವೊಸವೂವ

ಗಂಜೀಯ ಸೀರೆಯ ಅಂದವಾಗಿ ಉಡಿಸೀರಿ
ನಂದಿಗೀಸ್ವರನ ಮಡದೀಗೆ ಮಂಡೆಮ್ಯಾಲೆ
ವಂದಿಸೂಡೀರಿ ವಸವೂವ

ಪಟ್ಟೇದ ಸೀರೀಯ ಬಟ್ಟಮುತ್ತಿನುಡಿಯಕ್ಕಿ
ಚಿಕ್ಕ ಮದಕೇರಿ ಕಳಿವ್ಯಾನೆ ಗೌರಮ್ಮನ
ಪಟ್ಟೇ ಸಾಲ್ಯಾವ ಉಡುಬಾರೆ

ಪಟ್ಟೇ ಸಾಲ್ಯಾವ ಉಡುಬಾರೆ ಗೌರಮ್ಮ
ಅಂದಾರೆ ಕೊಪ್ಪೆಯಲ್ಲಾಡಿ ವುಸಿನಕ್ಕಾಳೆ

ಗಂಜೀಯ ಸೀರೆ ಮನ ಮುತ್ತಿನುಡಿಯಕ್ಕಿ
ಈರ ಮದಕೇರಿ ಕಳಿವ್ಯಾನೆ ಗೌರಕ್ಕ
ಚಂದ್ರಸಾಲ್ಯಾಗೆ ಉಡುಬಾರೆ
ಚಂದ್ರಸಾಲ್ಯಾಗೆ ಉಡುಬಾರೆ ಅಂದಾರೆ
ವಾಲೇಯನಲ್ಲಾಡಿ ವುಸಿನಕ್ಕಾಳೆ

ಜಯವೆಂದು ಬೆಳಗಿರಿ ಪರಮ ಜಗದ್ಗುರು
ಕಲ್ಲಿನಾಥನಿಗೆ ಗುರುವರ ಕಲ್ಲಿನಾಥನಿಗೆ

ಪುಸ್ತಕ ಪುರಾಣ ಓದುವ ಪುರುಸರು
ಚಂದದಿ ಓದುವರು ಗುರುವರ
ಜಯವೆಂದು ಬೆಳಗಿರಿ ಪರಮ ಜಗದ್ಗುರು ಕಲ್ಲಿನಾಥನಿಗೆ

 

ಕಲ್ಲೇಶ್ವರ ಜೋಳದ ಬೆಳೆಯನ್ನು ಬೂದಿ ಮಾಡಿದ್ದು

ಮುಂಗಾರಿ ಮಳೆಬಂದು ಬೂಮಿಗಂದಲವಾಕಿ
ಸ್ವಾಮಿ ಕಲ್ಲೇಸ ದಯಬಿಕ್ಸಾ ಕೋಲೆನ್ನ ಕೋಲೆ

ಈಗೆಲ್ಲಿ ಬಿಕ್ಸಯ್ಯ ಈಗೆಲ್ಲಿ ಬಿನ್ನಯ್ಯ
ಮಡಿಕೆ ವಡಿದಾಗ ಬರಲೇನೋ ಕೋಲೆನ್ನ ಕೋಲೆ

ನಾಕು ಮೂಲಿಗೆ ನಾನು ಏಕುಮಡಿಕೆಗಳೂಡಿ
ನಲಿ ನಲಿದೇ ಮಡಿಕೆರಳೇ ವಡಿವಾಗೆ ಕೋಲೆನ್ನ ಕೋಲೆ

ನಲಿನಲಿದೇ ಮಡಿಕೆಗಳೇ ವಡಿವಾಗ
ಸ್ವಾಮಿ ಕಲ್ಲೇಸ ದಯಬಿಕ್ಸಾ ಕೋಲೆನ್ನ ಕೋಲೆ

ಈಗೆಲ್ಲಿ ಬಿಕ್ಸಯ್ಯ ಈಗೆಲ್ಲಿ ಬಿನ್ನಯ್ಯ
ಜ್ವಾಳಾಬಿತ್ತೂವಾಗ ಬರಲೋಗೋ ಕೋಲೆನ್ನ ಕೋಲೆ

ನಾಕೂ ಮೂಲಿಗೆ ನಾಕು ಏಕು ಕೂರಿಗೆ ಮಾಡಿ
ನಲಿನಲಿದೇ ಜ್ವಾಳಾಬಿತ್ತಲುವಾಗೆ ಕೋಲೆನ್ನ ಕೋಲೆ

ನಲಿನಲಿದೇ ಜ್ವಾಳಾಬಿತ್ತಲುವಾಗ
ಸ್ವಾಮಿ ಕಲ್ಲಯ್ಯ ದಯಬಿಕ್ಸಾ ಕೋಲೆನ್ನ ಕೋಲೆ

ಈಗೆಲ್ಲಿ ಬಿಕ್ಸಯ್ಯ ಈಗೆಲ್ಲಿ ಬಿನ್ನಯ್ಯ
ಜ್ವಾಳಾ ಕೊಯ್ವಾಗ ಬರಲೋಗೋ ಕೋಲೆನ್ನ ಕೋಲೆ

ನಾಕು ಮೂಲಿಗೆ ನಾಕು ಏಕುಮಂಚಗಳಾಕಿ
ನಲಿನಲಿದೇ ಗುಬ್ಬಿಗಳೊಡಿವಾಗ ಕೋಲೆನ್ನ ಕೋಲೆ

ನಲಿನಲಿದೇ ಗುಬ್ಬಿಗಳೊಡೆದೆ ಕಾಯ್ವಾಗ
ಸ್ವಾಮಿ ಕಲ್ಲಯ್ಯ ನನಬಿಕ್ಸಾ ಕೋಲೆನ್ನ ಕೋಲೆ

ಈಗೆಲ್ಲಿ ಬಿಕ್ಸಯ್ಯ ಈಗೆಲ್ಲಿ ಬಿನ್ನಯ್ಯ
ತೆನಿಯಾ ಕೊಯ್ವಾಗ ಬರಲೋಗೋ ಕೋಲೆನ್ನ ಕೋಲೆ

ನಾಕೂಮೂಲಿಗೆ ನಾಕು ಏಕು ಬಡಿಗಳೂಡಿ
ನಲಿನಲಿದೆ ತೆನಿಯಾ ಕೊಯ್ವಾಗ ಕೋಲೆನ್ನ ಕೋಲೆ

ನಲಿನಲಿದೆ ತೆನಿಯಾ ಕೊಯ್ವಾ ಯಾಳ್ಯಾದಾಗೆ
ಸ್ವಾಮಿಕಲ್ಲೇಸ ದಯಬಿಕ್ಸಾ ಕೋಲೆನ್ನ ಕೋಲೆ

ಈಗೆಲ್ಲಿ ಬಿಕ್ಸಯ್ಯ ಈಗೆಲ್ಲಿ ಬಿನ್ನಯ್ಯ
ರಾಸಿ ತೂರುವಾಗ ಬರಲೋಗೋ ಕೋಲೆನ್ನ ಕೋಲೆ

ನಾಕು ಮೂಲಿಗೆ ನಾಕು ಏಕುತಟ್ಟಿಗಳಿಡಿರೆ
ನಲಿನಲಿದೇ ಜ್ವಾಳಾ ತೂರುವಾಗ ಕೋಲೆನ್ನ ಕೋಲೆ
ನಲಿನಲಿದೇ ಜ್ವಾಳಾ ತೂರುವಾಗ
ಕಲ್ಲೇಸಸ್ವಾಮಿ ದಯಾಬಿಕ್ಸಾ ಕೋಲೆನ್ನ ಕೋಲೆ

ಈಗೆಲ್ಲಿ ಬಿಕ್ಸಯ್ಯ ಈಗೆಲ್ಲಿ ಬಿನ್ನಯ್ಯ
ರಾಸೀಯ ಮಾಡುವಾಗ ಬರಲೋಗೋ ಕೋಲೆನ್ನ ಕೋಲೆ

ನಾಕು ಮೂಲೆಗೆ ನಾಕು ಏಕು ರಾಸಿಯ ಮಾಡಿ
ನಲಿನಲಿದೆ ರಾಸಿ ಮಾಡುವಾಗ ಕೋಲೆನ್ನ ಕೋಲೆ

ನಲಿನಲಿದೆ ರಾಸಿ ಮಾಡುವಾಗ
ಸ್ವಾಮಿ ಕಲ್ಲೇಸ ದಯಾಬಿಕ್ಸಾ ಕೋಲೆನ್ನ ಕೋಲೆ

ಈಗೆಲ್ಲಿ ಬಿಕ್ಸಯ್ಯ ಈಗೆಲ್ಲಿ ಬಿನ್ನಯ್ಯ
ರಾಸೀಯ ಮಾಡುವಾಗ ಬರಲೋಗೋ ಕೋಲೆನ್ನ ಕೋಲೆ

ನಾಕೂ ಮೂಲೆಗೆ ನಾಕು ಏಕುರಾಸಿಯ ಮಾಡಿ
ನಲಿನಲಿದೆ ರಾಸಿ ಮಾಡುವಾಗ ಕೋಲೆನ್ನ ಕೋಲೆ

ನಲಿನಲಿದೆ ರಾಸಿ ಮಾಡುವಾಗ
ಸ್ವಾಮಿ ಕಲ್ಲೇಸ ದಯಾಬಿಕ್ಸಾ ಕೋಲೆನ್ನ ಕೋಲೆ

ಈಗೆಲ್ಲಿ ಬಿಕ್ಸಯ್ಯ ಈಗೆಲ್ಲಿ ಬಿನ್ನಯ್ಯ
ಜ್ವಾಳಾ ಏರುವಾಗ ಬರಲೋಗೋ ಕೋಲೆನ್ನ ಕೋಲೆ

ನಾಕೂ ಮೂಲೆಗೆ ನಾಕು ಏಕು ತೊಟ್ಟಿಲಕಟ್ಟಿ
ನಲಿನಲಿದೆ ರಾಸಿಯ ಏರುವಾಗ ಕೋಲೆನ್ನ ಕೋಲೆ

ನಲಿನಲಿದೇ ರಾಸೀಯ ಏರುವ ಯಾಳ್ಯಾದಾಗ
ಸ್ವಾಮಿ ಕಲ್ಲೇಸ ದಯಾಬಿಕ್ಸಾ ಕೋಲೆನ್ನ ಕೋಲೆ

ನಾಕೂ ಮೂಲಿಗೆ ನಾನು ಏಕುಪಾರಗಳಾಕಿ
ಇಲ್ಲೀಗೆ ಜಂಗಮ ಯಂಗೆ ಬಂದಾನೆ ಕೋಲೆನ್ನ ಕೋಲೆ

ಇಲ್ಲೀಗೆ ಜಂಗಮ ಯಂಗೆ ಬಂದಾನೆ
ನಡುವೇ ಕಲ್ಲೇಸ ನಿಂತು ದಯಬಿಕ್ಸಾ ಕೋಲೆನ್ನ ಕೋಲೆ

ಈಗೆಲ್ಲಿ ಬಿಕ್ಸಯ್ಯ ಈಗೆಲ್ಲಿ ಬಿನ್ನಯ್ಯ
ರಾಸಿವೋಗಿ ಮನೆಗೆ ಬೀಳುವಾಗ ಕೋಲೆನ್ನ ಕೋಲೆ

ಕಟ್ಟಿರುವೆಂಟತ್ತು ಕರಗಲು ಆಗ್ಯಾವೆ
ವೂಡಿರುವಬಂಡಿ ಆರೋಣಲಿ ಕೋಲೆನ್ನ ಕೋಲೆ
ಕೈಯಾಗಿರುವ ಬಾರಿಕೊಲೆ ಆವಾಗಿ
ಆರಿಯಾಲಿ ಮಾಡಿರುವ ರಾಸಿ ದೂಳಾಗಿ ಕೋಲೆನ್ನ ಕೋಲೆ

ಮಂಗಳ ಮಯಿಮ ಕಾಣೆ ಕಲ್ಲೇಸ
ಜಂಗುಮ ಲಿಂಗ ಕಾಣೆ ಕಲ್ಲೇಸ

ಅಪ್ಪ ಕಲ್ಲೇಲಿಂಗ ನಿಂತು ನೋಡಿದವಯ್ಯ
ಸಂಪಿಗೆ ವನವೆ ಎಲಿದೋಟ ಕಲ್ಲೇಲಿಂಗ
ತಂಪೊಳ್ಳೋದೆಂದು ನೆಲಿಗೊಂಡ

ಅಣ್ಣ ಕಲ್ಲೇಲಿಂಗ ನಿಂತು ನೋಡಿದರೆ ಸುರ
ಹೊನ್ನೇ ಮರನೆ ಎಲಿದೋಟ ಕಲ್ಲೇಲಿಂಗ
ತಾವೊಳ್ಳೇದೆಂದು ನೆಲೆಗೊಂಡ

ಅಣ್ಣ ನೋಡನು ಬನ್ನಿ ಎಣ್ಣುಂಡ ಮೈಯ್ಯರನ
ಸಣ್ಣ ರುದ್ರಾಕ್ಷಿ ಕೊರಳೋರು ಕಲ್ಲೇಲಿಂಗ
ವೋಗಿ ಪ್ರಾಣಗಳ ವುಳಿಸ್ಯಾನೆ
ಅಪ್ಪ ಕಲ್ಲೇಲಿಂಗ ತುಪ್ಪುಂಡ ಮೈಯ್ಯರನ
ಚಿಕ್ಕ ರುದ್ರಾಕ್ಷಿ ಕೊರಳೋರು ಕಲ್ಲೇಲಿಂಗ
ಸತ್ತ ಪ್ರಾಣಿಗಳ ಉಳಿಸ್ಯಾರೆ
ಸತ್ತ ಪ್ರಾಣಿಗಳ ಉಳಿಸ್ಯಾರೆ
ಅಪ್ಪನಿನಗ್ಯಾರು ಎದುರುಂಟು

ಅಪ್ಪಾನ ಗುಡಿಮುಂದೆ ಮತ್ತೇನು ಬೆಳೆದಾವು
ಸಣ್ಣರುದ್ರಾಕ್ಷಿ ಸರವೇ ಗಂಡೆಂಡಾರು
ಬಾಲಾನ ಬೇಡದವರಿಗೆ ಕಡೆಯಿಲ್ಲ.

ಅಣ್ಣಾನ ಗುಡಿಮುಂದೆ ಇನ್ನೇನು ಬೆಳೆದಾವೆ
ಸಣ್ಣಾ ರುದ್ರಾಕ್ಷಿ ಸರಬಾಗಿ ಗಂಡೆಂಡಾರು
ಬಾಲಾನ ಬೇಡದವರಿಗೆ ಕಡೆಯಿಲ್ಲ

ಅಪ್ಪಾನ ಗುಡಿಮುಂದೆ ಸಣ್ಣಮಕ್ಕಳು ತುಳಿಗೆಸರು
ನಾರೇರ ನೆರಿಗೆ ಉಡಲತ್ತಿ ಗಂಡೆಂಡಾರು
ಬಾಲಾನ ಬೇಡೋರೆ ಕಡಿಯಿಲ್ಲ

ಅಪ್ಪಾನ ಗುಡಿಮುಂದೆ ವೊಕ್ಕುದುಮೂಗಿನಕ್ಕಿ
ಕರ್ಪೂರ ತುಂಬ್ಯಾರೆ ಗಿರಿಗೆಲ್ಲ ಅವರೇನಮ್ಮ
ರೊಕ್ಕಬೇಡ್ಯಾರ ಸಿಕರಕ್ಕೆ

ಅಯ್ಯಾನ ಗುಡಿಮುಂದೆ ಬಣ್ಣದ ಮೂಗಿನಕ್ಕಿ
ಕರ್ಪೂರ ತುಂಬ್ಯಾರೆ ಗಿರಿಗೆಲ್ಲ ಅವರೇನಮ್ಮ
ವೊನ್ನ ಬೇಡ್ಯಾರೆ ಸಿಕರಕ್ಕೆ ಸ್ವಾಮಿ

ಅರೆಸಳಿನ ಕಟ್ಟಾಣಿ ಏರಿಸಿ ಕಟ್ಟೈತೆ
ವುಚ್ಚೈದ ಮುಂದೆ ಕಳಸಕ್ಕೆ ಅಕ್ಕನೀಲಮ್ಮ
ಅವುದೇನರಿ ಸ್ವಾಮಿ ಬನ್ನಿ

ಅತ್ತೆಸಳಿನ ಕಟ್ಟಾಣೆ ಎತ್ತರಿಸಿ ಕಟ್ಟೈತೆ
ತೇರೀನ ಮುಂದೆ ಕಳಸಾವೆ ಇಡಿದಿರುವಾರೆ
ತಾಯಿ ನೀಲಮ್ಮ ಅವುದೇಸ್ವಾಮಿ