ಪ್ರಸಿದ್ಧ ವಚನಕಾರ ಅಲ್ಲಮಪ್ರಭುವಿನ ಅಂಕಿತನಾಮ ಗುಹೇಶ್ವರ. ಇದು ಜನಪದರಲ್ಲಿ ಪ್ರಸ್ತಾಪವಾಗಿರುವುದು ತುಂಬ ಕುತೂಹಲಕರ. ಕಲ್ಲೇದೇವರಪುರ ಬಳಿಯ ಗುಡ್ಡದ ಮೇಲಿರುವ ಪುಟ್ಟಗುಡಿಯಲ್ಲಿ ಒಂದು ಲಿಂಗವಿದ್ದು ಅದನ್ನೇ ಗುಹೇಶ್ವರ, ಗೋಸರಪ್ಪನಗುಡ್ಡ ಎಂದು ಜಗಳೂರಿನ ಸುತ್ತಮುತ್ತಲಿನ ಜನ ಹೆಸರಿಸುತ್ತಾರೆ. ಅಲ್ಲದೆ ಜನ ತಮ್ಮನ್ನು ಗೋಸಲಯ್ಯ, ಗೋಸರಪ್ಪ, ಗೋಸಪ್ಪ ಎಂದು ಕರೆದುಕೊಳ್ಳುವುದೂ ರೂಢಿಯಲ್ಲಿದೆ. ಗೋರಖನಾಥೇಶ್ವರ ಎಂಬುದೇ ಗುಹೇಶ್ವರ, ಗೊಗ್ಗೇಶ್ವರ, ಗೊಗ್ಗಯ್ಯ ಎಂದಾಗಿರಬಹುದೇ? ಇದನ್ನು ಗಂಭೀರವಾಗಿ ಪರಿಗಣಿಸಲು ಇರಬಹುದಾದ ಕಾರಣವೇನೆಂದರೆ ಕಲ್ಲೇದೇವರ ಪುರದ ಶಾಸನದಲ್ಲಿ ಬಸವಣ್ಣನವರ ಹೆಸರಿರುವುದು. ಬಹುಶಃ ಬಸವಣ್ಣ, ಅಲ್ಲಮ, ಸಿದ್ಧರಾಮ ಇವರು ತಮ್ಮ ಪರ್ಯಟನೆಯ ಸಂದರ್ಭದಲ್ಲಿ ಚಿತ್ರದುರ್ಗದ ಈ ಐತಿಹಾಸಿಕ ಪ್ರದೇಶಕ್ಕೆ ಭೇಟಿ ನೀಡಿದ್ದಿರಬಹುದು. ಅಲ್ಲದೇ ಚಿತ್ರದುರ್ಗದ ಅನೇಕ ಗ್ರಾಮಗಳಲ್ಲಿ ಸಿದ್ಧರಾಮನ ಹೆಸರಿನಲ್ಲಿ ಸಿದ್ಧರಾಮೇಶ್ವರನ ಗುಡಿಗಳು ಹಲವಾರಿವೆ. ಕಲ್ಲೇದೇವರಪುರದ ತ್ರಿಕೂಟಾಚಲದ ಗುಡಿಯೊಳಗೆ ಇರುವ ಶಾಸನ (ಎಪಿಗ್ರಫಿ, ಕರ್ನಾಟಕ ಸಂಪುಟ XI ರಲ್ಲಿ ಜಗಳೂರು ತಾಲ್ಲೂಕು ಶಾಸನಸಂಖ್ಯೆ ೩೦) ಇದರ ಕಾಲ ಕ್ರಿ. ಶ. ೧೨೭೯, ೮೦. ಇದು ಸೇವುಣರ ರಾಮಚಂದ್ರನ ಕಾಲದ ಶಾಸನ. ಈ ಶಾಸನದ ಆರಂಭ ಭಾಗದಲ್ಲಿ ವಿಖ್ಯಾತ ಶಿವಶರಣರಾದ ಚೇರ, ಚೋಳ, ನಂಬಿ ಮುಂತಾದವರ ಜತೆಗೆ ಬಸವಣ್ಣನನ್ನು ಬಸವರಾಜ ಎಂದು ಉಲ್ಲೇಖಿಸಿದೆ. “ಚೇರ ಚೋಳ, ನಂಬಿ ಚಿಕ್ಕ ಕಕ್ಕ, ಚೆಂನ, ಹೊಂನ, ಬಂಕ, ಬಸವರಾಜ, ಭೋಜಾದಿ ಮರ್ತ್ಯಲೋಕದ ಮಹಾಗಣಾಚಾರ” ಎಂದಿದೆ. ಇದೇ ಶಾಸನದ ಮಧ್ಯಭಾಗದಲ್ಲಿ ನಾಥ ಸಂಪ್ರದಾಯ ಕೆಲವು ಸಿದ್ಧರ ಹೆಸರುಗಳೂ ಸಹ ಬರುತ್ತವೆ…,” ಚತುರಂಗಿನಾಥ, ಗೊರಖನಾಥ, ಸುಪ್ಪಾಣಿ ನಾಥ,…. ಹೀಗೆ. ಇದರ ಜತೆಗೆ ಮೊಳಕಾಲ್ಮೂರು ಪಟ್ಟಣದ ಪಶ್ಚಿಮ ದಿಕ್ಕಿಗೆ ಇರುವ ನುಂಕೆಮಲೆ ಬೆಟ್ಟದ ಬುಡದಲ್ಲಿ ನುಂಕೆಮಲೆ ಸಿದ್ಧೇಶ್ವರನ ಗುಡಿಯಿದ್ದು ಅದು ಈಗಲೂ ನಾಥ ಸಂಪ್ರದಾಯದ ಕೇಂದ್ರವಾಗಿಯೇ ಕಂಡುಬರುತ್ತದೆ. ಹೀಗಾಗಿ ಜನಪದರ ಬಾಯಲ್ಲಿ ಇಂದಿಗೂ ಉಳಿದುಬಂದಿರುವ ಗುಹೇಶ್ವರನ ಪ್ರಾರ್ಥನೆ ಒಂದು ಅಪರೂಪದ ಗೀತೆ ಎಂತಲೇ ತಿಳಿಯಬೇಕಾಗಿದೆ.

ಗುಹೇಶ್ವರಸ್ವಾಮಿ ಗೀತೆ

ಕಾವಿವೊದ್ದೇ ಕೈಲಾಸದ ಸ್ವಾಮಿ ಬಂದೇ
ಗುಡ್ಡಾವ ಅತ್ಯಾರೆ ಕಿಗ್ಗಣ್ಣಲಿ ನೋಡ್ಯಾರೆ
ಉಜ್ಜನಿಗಿನ್ನ ಇವೆ ಮೇಲು ಗುಹೇಸ್ವರಪ್ಪ
ಗುಡ್ಡಾದ ಮ್ಯಾಲೆ ನೆಲಗೊಂಡ

ಗಿರಿಗಾಳ ಅತ್ಯಾರೆ ಕಿರಿಗಣ್ಣಲಿ ನೋಡ್ಯಾರೆ
ಪರ್ವತಕಿನ್ನ ಇವೆ ಮೇಲು ಗುಹೇಸ್ವರಪ್ಪ
ಗಿರಿಗಾಳಮ್ಯಾಲೆ ನೆಲೆಗೊಂಡ

ಗುಡ್ಡಾವ ಇಳಿವಾಗ ಬಿದ್ದವು ಪಾದದ ಗೆಜ್ಜೆ
ಅಲವಂಗದುಡಿಗೆ ಸಡಿಲ್ಯಾವೆ ಗುಹೇಸ್ವರಪ್ಪ
ಗುಡ್ಡಾವ ಇಳಿವ ರವುಸಾಕೆ

ಅಳ್ಳಾವ ಇಳಿವಾಗ ಚೆಲ್ಯಾವ ಪಾದದಗೆಜ್ಜೆ
ಚೆಲುವಂಗದುಡಿಗೆ ಸಡಿಲ್ಯಾವೆ ಗುಹೆಸ್ವರಪ್ಪ
ಅಳ್ಳವ ಇಳಿವ ರಪುಸಾಕೆ

ಅಪ್ಪಾ ನಿನ ಪಾದ ತುಪ್ಪಾಕಿಂತ ಮೆದುವೆ
ಮತ್ತೆಲ್ಲಿ ತುಳಿದೆ ವೊಸಮುಳ್ಳು ಕಲ್ಲೇಸಾನ
ಬಿಲ್ವಪತ್ರ ವನದಾಗೆ ತುಳುದೆ

ಅಣ್ಣಾ ನಿನ್ನಾ ಪಾದ ಎಣ್ಣಿಗಿಂತ ಮಿದುವು
ಇನ್ನೆಲ್ಲಿ ತುಳಿದೇ ವೊಸಮುಳ್ಳು ಕಲ್ಲೇಸಾನ
ಮಲ್ಲಿಗೂವಿನ ವನದಾಗೆ ತುಳಿದೆ

ವೊಕ್ಕುಳದ ವುರಿಗೆಜ್ಜೆ ಇಕ್ಕಳದ ಕಿರುಗೆಜ್ಜೆ
ಚೊಕ್ಕಚಿನ್ನದ ಮಕರಂಬ ಆಕೈದಾವೆ
ಅಪ್ಪಾ
ಅರಳಲ್ಲಿ ಬಸವಣ್ಣ

ಅಪ್ಪಾಗೆ ಇಡುದಾರೆ ಇಪ್ಪತ್ತು ಚತ್ರೀಕೆ
ಚಿಕ್ಕದುರುಗಾದ ಎಣಿಕೀಯ ಅಕೈದಾವೆ
ಅಪ್ಪಾಗ್ವಾಲಾಡಿ ಇಡುದಾರೆ

ಅಣ್ಣಾಗೆ ಇಡುದಾರೆ ಅನ್ನೊಂದು ಚಿತ್ರಿಕೆ
ಮ್ಯಾಲೆದುರುಗದ ಎಣಿಕೆ ಆಕೈದಾವೆ
ಅಣ್ಣಾಗ್ವಾಲ್ಯಾಡಿ ಇಡಿದಾರೆ

ಲಿಂಗ ಸಾರಂದಾಗೆ ಇಂಗ್ಯಾಕೆ ಸಾರೀದೆ
ಎಂಗೆ ಸಾರೀದೆ ತಳವಾರ ಕಲ್ಲೇದೇವರ ಪುರ
ಸುರಬಾನದಾರತಿ ಬರಲೆಂದ