ಸರಳ ಸ್ವಭಾವದವರಾದ ಡಾ. ಗದ್ದಗಿಮಠ ಅವರು ನಿರಂತರ ಬರಹಗಾರರು, ದಿನನಿತ್ಯ ಸಾಯಂಕಾಲ ೭ ಗಂಟೆಗೆ ಬರವಣಿಗೆ ಕಾರ್ಯದಲ್ಲಿ ನಿರತರಾಗಿರುತ್ತಿದ್ದರು. ಡಾ. ಭೂಸನೂರಮಠ ಅವರು ಮತ್ತು ಎಸ್‌.ಎಸ್‌. ಮಾಳವಾಡ ಅವರು ಡಾ. ಗದ್ದಗಿಮಠ ಅವರಿಗೆ Folk-lore ಸಾಹಿತ್ಯ ಸಾಹಿತ್ಯವೇ ಎಂದು ಪದೇ ಪದೇ ಗೇಲಿ ಮಾಡುತ್ತಿದ್ದರೂ ಕೂಡಾ ಸದಾಕಾಲ ಕೊರಳಲ್ಲಿ ಪೇಪರ ಮತ್ತು ಪೆನ್ನುಗಳುಳ್ಳ ಪ್ಯಾಡನ್ನು ಧರಿಸಿ ಸತತವಾಗಿ ಸಂಶೋಧನಾ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಿದ್ದರು.

ಉದಾರ ಸ್ವಭಾವದವರಾದ ಡಾ. ಗದ್ದಗಿಮಠ ಅವರು ಕಟ್ಟುಮಸ್ತಾದ ಉತ್ತಮ ವ್ಯಕ್ತಿತ್ವವುಳ್ಳವರಾಗಿದ್ದರು. ಸಿರಿಯನ್ನು ಎಂದಿಗೂ ಬೆನ್ನು ಹತ್ತಿದವರಲ್ಲ. ಜಾನಪದ ಸಿರಿ ಸಂಶೋಧನಾ ಕಾರ್ಯದಲ್ಲಿ ಸದಾಕಾಲ ಮಗ್ನರಾಗಿದ್ದು ತಂದೆ ತಾಯಿಗಳ ಪ್ರೇರಣೆಯಿಂದ ಜಾನಪದ ಮಹಾಪ್ರಬಂಧವನ್ನು ವೈಜ್ಞಾನಿಕ ದೃಷ್ಟಿಕೋನದಿಂದ ರಚಿಸಿರುವುದರಿಂದ ಈ ಮಹಾಪ್ರಬಂಧವು ಗದ್ದಗಿಮಠ ಅವರ ಕೃತಿಗಳಲ್ಲಿ ಮೇರು ಕೃತಿಯಾಗಿರುತ್ತದೆ. ಅತಿ ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಬಲಿಪಶುವಾಗುವ ಪ್ರಸಂಗ ಒದಗಿರುವುದರಿಂದ ಜಾನಪದ ತಜ್ಞರಾದ ಗದ್ದಗಿಮಠ ಅವರಿಗೆ ಮಾರ್ಗದರ್ಶಕರಾಗುವ ಸುವರ್ಣಾವಕಾಶ ಸಿಗದಂತಾಯಿತು. ಇವರ ಅಕಾಲಿಕ ಮರಣದಿಂದಾಗಿ ನಾಣ್ಣುಡಿಗಳನ್ನೊಳಗೊಂಡ ಕೋಶವು ಅರ್ಧಕ್ಕೆ ನಿಲ್ಲುವಂತಾಯಿತು. ಆಕಾಶದಲ್ಲಿಯ ನಕ್ಷತ್ರಗಳ ಆಧಾರದಿಂದ ತಮ್ಮ ಸಾವಿನ ಬಗ್ಗೆ ಗದ್ದಗಿಮಠ ಅವರು ಮೊದಲೆ ಹಲವು ಸಲ ನುಡಿದಿರುವರೆಂಬ ಪ್ರತೀತಿ ಕೂಡ ಅವರ ಮಕ್ಕಳಿಂದ ತಿಳಿದು ಬರುತ್ತದೆ. ಅತ್ಯಂತ ಅಚ್ಚುಕಟ್ಟಾದ ಜೀವನ ನಡೆಸುತ್ತಿದ್ದ ಬಸಯ್ಯನವರು ಅತೀ ಶಿಸ್ತು ಪ್ರಿಯರಾಗಿದ್ದರು.

ದೇವರ ಬಗ್ಗೆ ಅಪಾರ ಭಕ್ತಿವುಳ್ಳವರಾಗಿದ್ದರು. ಕೇವಲ ಇಷ್ಟ ಲಿಂಗಪೂಜಾನಿರತರಾಗಿರುತ್ತಿದ್ದರು. ಯಾವುದೇ ಮಠ ಮಂದಿರಗಳಿಗೆ ಹೋಗುತ್ತಿರಲಿಲ್ಲ. ಸೇವಕರನ್ನು ಸಮಾನ ಭಾವನೆಯಿಂದ ಕಾಣುತ್ತಿದ್ದರು. ಮೇಲು-ಕೀಳು ಜಾತಿ ತಾರತಮ್ಯ ಭಾವನೆಗಳಿಗೆ ಅವಕಾಶ ಕೊಡದೆ ಪ್ರಾಮಾಣಿಕರಾಗಿದ್ದರು. ತಮ್ಮ ಕೆಲಸವನ್ನು ಸ್ವತಃ ತಾವೇ ಮಾಡಿಕೊಳ್ಳುತ್ತಿದ್ದರು.

ಡಾ. ಗದ್ದಗಿಮಠ ಅವರ ನಿತ್ಯ ಆಹಾರ ವಿಧಾನವು ವಿಶೇಷವಾದುದಾಗಿತ್ತು. ಬೀಸಿದ ಹಿಟ್ಟು ಮತ್ತು ಕುಟ್ಟಿದ ಅಕ್ಕಿಯನ್ನು ಊಟಕ್ಕಾಗಿ ಉಪಯೋಗಿಸುತ್ತಿದ್ದರು. ಕಳಲೆಕಾಯಿ, ತೊಟ್ಟಲಕಾಯಿ, ತೊಂಡೆಕಾಯಿ ಇತ್ಯಾದಿಗಳನ್ನು ಊಟದಲ್ಲಿ ಹೆಚ್ಚು ಇಷ್ಟಪಡುತ್ತಿದ್ದರು.

ಉತ್ತರ ಕರ್ನಾಟಕದ ಬಹುಭಾಗವನ್ನೆಲ್ಲ ಸುತ್ತಿ ಜನಸಾಮಾನ್ಯರ ಸಂಪ್ರದಾಯ ಸಂಸ್ಕೃತಿಗಳಲ್ಲಿ ಒಂದಾಗಿ ಹಳ್ಳಿ-ಹಳ್ಳಿಗಳಲ್ಲಿ ಹೇಳ ಹೆಸರಿಲ್ಲದೆ ಅಡಗಿ ಕಾಲಗರ್ಭದಲ್ಲಿ ನಶಿಸಿಹೋಗುತ್ತಿದ್ದ ಜಾನಪದ ಸಾಹಿತ್ಯದ ಅಮೂಲ್ಯ ನಿಧಿಯಂತಿರುವ ಗೀತರತ್ನಗಳನ್ನು ಅಚ್ಚಳಿಯದೆ ಉಳಿಯುವಂತೆ ಸಂಗ್ರಹಿಸಿ ಕೊಟ್ಟ ಶ್ರೇಯಸ್ಸಿನ ಬಹಪಾಲು ಗದ್ದಗಿಮಠ ಅವರಿಗೆ ಸಲ್ಲುತ್ತದೆ. ಡಾ. ಗದ್ದಗಿಮಠ ಅವರ ಮನೆತನವೆ ಇಂತಹ ಜಾನಪದ ಗೀತೆಗಳ ಮಹಾಕೋಶವಾಗಿರುವುದರಿಂದ ಅವರಿಗೆ ಈ ಕಾರ್ಯಕ್ಕಾಗಿ ಸಹಜ ಸ್ಪೂರ್ತಿ ದೊರಕಿದೆ. ಆದ್ದರಿಂದ ಗದ್ದಗಿಮಠ ಅವರು ಅದನ್ನೆ ತಮ್ಮ ಜೀವನದ ಧ್ಯೇಯವನ್ನಾಗಿಸಿಕೊಂಡಿದ್ದರು. ಇದಕ್ಕಿಂತ ಮೊದಲು ಗದ್ದಗಿಮಠ ಅವರ ನಾಲ್ಕೈದು ಜಾನಪದ ಗೀತ ಸಂಗ್ರಹಗಳು ಪ್ರಕಟವಾಗಿದ್ದರೂ ಅವುಗಳಿಗೆಲ್ಲಾ ಮೂಲವಾದ ಅವರ ವಿಚಾರಸರಣಿಯನ್ನೊಳಗೊಂಡ ಕನ್ನಡ ಜಾನಪದ ಗೀತೆಗಳು ಗ್ರಂಥದ ಪ್ರಕಟಣೆಯಿಂದ ಈ ಸಾಹಿತ್ಯದ ವಿಶೇಷ ಅಭ್ಯಾಸಕ್ಕೆ ತುಂಬಾ ಸಹಾಯಕ ಕೃತಿಯಾಗಿರುತ್ತದೆ.

ಡಾ. ಗದ್ದಗಿಮಠ ಅವರ ತಂದೆಯವರು ನೂರೊಂದು ಶಿವಶರಣರ ಅಮೂಲ್ಯವಾದ ಹಂತಿಯ ಕಥನಕವನಗಳನ್ನು ಸುಗ್ಗಿಯ ಕಾಲದಲ್ಲಿ ಬೆಳಗಾಗುವವರೆಗೂ ಬಲು ಹುಮ್ಮಸ್ಸಿನಿಂದ ಕೋಚೆತ್ತಿ ಹಾಡುತ್ತಿದ್ದರು. ಆ ಹಾಡುಗಳ ನಿರರ್ಗಳ ಶೈಲಿ, ಕಥೆಯ ಬೆಡಗು, ರಸಪಾಕ, ಮಾರ್ದವತೆ, ನವೀನತೆ ಮೊದಲಾದವುಗಳು ಡಾ. ಗದ್ದಗಿಮಠ ಅವರ ಮನಸ್ಸನ್ನು ಸೆಳೆಯಲಾರಂಭಿಸಿದವು. ಅಂದಿನಿಂದ ಅವುಗಳ ಪ್ರಯೋಜನವನ್ನು ಅರಿತ ಗದ್ದಗಿಮಠ ಅವರು ಬಿಡುವಿನ ವೇಳೆಯಲ್ಲಿ ಜಾನಪದ ಸಿರಿಸಂಪತ್ತನ್ನು ಸಂಗ್ರಹಿಸಲಾರಂಭಿಸಿದರು. ಅವರ ತಂದೆ ಸಾವಳಿಗಯ್ಯನವರು ಹಂತಿಯ ಪದಗಳಲ್ಲಿ ಹಾಡುವ ಶಿವಶರಣರ ಹಾಡುಗಳನ್ನು ತಾಯಿ ಅನಸುಯಾದೇವಿಯವರು ತಮ್ಮ ಮೂರು ಜನ ಗೆಳತಿಯರೊಡನೆ ವಿವಿಧ ಧಾಟಿಯಲ್ಲಿ ಶಿವಸೊಲ್ಲುಗಳ ಜೊತೆಗೆ ಶ್ರಾವಣ ಮಾಸದಲ್ಲಿ ಹಾಡುತ್ತಿದ್ದರು. ಅಲ್ಲದೆ ಮಹಾಭಾರತ, ರಾಮಾಯಣಗಳ ಪ್ರಸಂಗವನ್ನು ಕುರಿತು ಹಾಡು, ಮಳೆರಾಜನ ಹಾಡು, ಶಿವಶರಣೆ ಚನ್ನಮ್ಮನ ಹಾಡು, ಗುಣಸಾಗರಿಯ ಹಾಡು, ರಡ್ಡೇರ ಅವ್ವಣ್ಣೆವ್ವನ ಹಾಡು ಈ ಮುಂತಾದ ದೊಡ್ಡ ದೊಡ್ಡ ಹಾಡುಗಳನ್ನು ಅನಸೂಯದೇವಿಯವರು ಹಾಡುತ್ತಿದ್ದರು, ಈ ಎಲ್ಲ ಹಾಡುಗಳನ್ನು ಗದ್ದಗಿಮಠ ಅವರು ಅತ್ಯಂತ ಉತ್ಸುಕತೆಯಿಂದ ಸಂಗ್ರಹಿಸುತ್ತಿದ್ದರು.

ಈ ಜಾನಪದ ಹಾಡುಗಳನ್ನು ನರಗುಂದ, ನವಲಗುಂದ, ಶಲವಡಿ, ಬದಾಮಿ, ಕೆರೂರ, ಜಾಲಿಹಾಳ, ನರೇಗಲ್‌, ಮುಳಗುಂದ, ತೋರಗಲ್ಲು, ಕಡಕೋಳ, ಮುರಗೋಡ, ಬೈಲಹೊಂಗಲ, ವಡಗಾವಿ(ಬೆಳಗಾವಿ), ಗೋಕಾವಿ, ಧಾರವಾಡ, ಹುಬ್ಬಳ್ಳಿ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮಹಿಳೆಯರು ಹಾಡುತ್ತಿರುವ ಪ್ರಸಂಗದಲ್ಲಿ ಆ ಹಾಡುಗಳನ್ನೆಲ್ಲಾ ಕೇಳಿಸಿಕೊಂಡು ಬರೆದುಕೊಂಡು ಸಂಗ್ರಹಿಸಿದ ಶ್ರಮಜೀವಿಗಳು ಡಾ. ಗದ್ದಗಿಮಠ ಅವರು.

ತುಂಬಾ ದೊಡ್ಡದಾಗಿರುವ ಹಾಡುಗಳನ್ನು ಸಂಕಲನ ಮಾಡುವದು ಬಲು ಕಷ್ಟಸಾಧ್ಯವಾಗಿರುವ ಕಾರ್ಯ. ಇದಕ್ಕೆ ತಾಳ್ಮೆ ಅತ್ತವಶ್ಯ. ಹಾಡುಗಳನ್ನು ಹಾಡುವವರು ವಿಶೇಷವಾಗಿ ಅವುಗಳನ್ನು ಕಂಠಪಾಠ ಮಾಡಿರುವದೇ ಹೆಚ್ಚು. ಇಂಥ ಹಾಡುಗಳನ್ನು ಹಾಡುವ ಸಮಯದಲ್ಲಿ ಅಕಸ್ಮಾತ್‌ಒಂದೊಂದು ನುಡಿಗಳು ಮರೆತರೆ ಹಾಡುವವರಿಗೆ ಇಡೀ ಹಾಡು ನೆನಪಾಗದೆ ಅಷ್ಟಕ್ಕೆ ನಿಂತುಬಿಡುತ್ತಿತ್ತು. ಅಲ್ಲದೆ ಕೆಲವು ಸಲ ಹಾಡು ಬಂದರೂ ಹಾಡು ಹೇಳಲು ಹಲವರು ಒಪ್ಪುವದು ಕಷ್ಟ. ಇಂತಹ ಸಂದರ್ಭದಲ್ಲಿ ಸಾಹಿತ್ಯ ಸಂಕಲನ ಮಾಡುವುದೇ ದುಸ್ತರ. ಕೆಲವೊಮ್ಮೆ ಸಂಕಲನಕಾರರು ಹಾಡುಗಾರರು ಬೇಡಿದಷ್ಟು ಹಣತೆತ್ತು ಹಾಡು ಹೇಳಿಸುವ ಪ್ರಸಂಗವೂ ಬರುತ್ತಿತ್ತು.ಹೀಗೆ ಅನೇಕ ವಿಧದ ಅನುಭವಗಳನ್ನು ಪಡೆದ ಗದ್ದಗಿಮಠ ಅವರು ಬಂದದ್ದಕ್ಕೆ ಟೊಂಕಕಟ್ಟಿ ನಿಂತು ತಮ್ಮ ಆಯುಷ್ಯವನ್ನೇ ಕ್ಷೇತ್ರಕಾರ್ಯದ ನಿಮಿತ್ತ ಮೀಸಲಾಗಿಟ್ಟು ಕಷ್ಟಸಾಧ್ಯವಾದ ಸಂಕಲನ ಕಾರ್ಯವನ್ನುಗೈದು ಜಾನಪದ ಐಸಿರಿಯನ್ನು ಕನ್ನಡ ನಾಡಿಗೆ ಕೊಡುಗೆಯಾಗಿ ಸಲ್ಲಿಸಿರುವ ಅವರ ಸಾಧನೆ ಅವಿಸ್ಮರಣೀಯವಾದುದು.

ಮಹಾಭಾರತ, ರಾಮಾಯಣ, ಶಿವಶರಣರ ಹಂತಿಯ ಹಾಡುಗಳನ್ನು ಪ್ರತ್ಯೇಕವಾಗಿ ಸಂಕಲನ ಮಾಡಿದ್ದಾರೆ. ನಾಲ್ಕು ಮುಗ್ಧ ಶಿವಶರಣರ ಹಂತಿಯ ಹಾಡುಗಳನ್ನು ‘ನಾಲ್ಕು ನಾಡ ಪದಗಳು’ ಎಂಬ ಪುಸ್ತಕ ರೂಪದಲ್ಲಿ ಪ್ರಕಟಿಸಿರುತ್ತಾರೆ. ಅಲ್ಲದೆ ಹೋಳಿಯ ಹಾಡುಗಳು ಎಂಬ ಬಿಡಿ ಪದ್ಯಗಳನ್ನು ದುಂದುಮಿಗಳನ್ನೂ ಪ್ರತ್ಯೇಕವಾಗಿ ಸಂಗ್ರಹಿಸಿದ್ದಾರೆ. ಕಂಬಿಯ ಹಾಡುಗಳು, ಸಂಪ್ರದಾಯದ ಹಾಡುಗಳು, ಸೋಬಾನ ಹಾಡುಗಳು, ಮದುವೆಯ ಹಾಡುಗಳು, ಬೀಸುವ ಹಾಡುಗಳು ಇನ್ನೀತರ ಕೋಲು ಪದಗಳು, ಹಂತಿಯ ಹಾಡುಗಳು ಈ ಮೊದಲಾದ ದೊಡ್ಡ ದೊಡ್ಡದಾಗಿರುವ ಹಾಡುಗಳನ್ನು ಒಂದೆಡೆ ಶೇಖರಿಸಿ ಆ ಸಂಕಲನ ಗುಚ್ಚಕ್ಕೆ ‘ಜಾನಪದ ಸಂಭಾರ’ ಎಂದು ಕರೆದಿದ್ದಾರೆ. ಶಿವಶರಣರ ಹಂತಿಯ ಹಾಡುಗಳಲ್ಲಿ ಅವರವರ ಚರಿತಾನುಸಾರವಾಗಿ ಹಾಡುಗಳನ್ನು ಕೂಡಿಸಿ, ಕಾಯಕ ಗೀತೆಗಳು, ಸಮರಸ ಗೀತೆಗಳು, ‘ಮೂರು ನಾಡಪದಗಳು’ ಎಂದು ಅವುಗಳನ್ನು ಕರೆದಿದ್ದಾರೆ. ಅವು ಹಸ್ತಪ್ರತಿರೂಪದಲ್ಲಿರುತ್ತವೆ. ಈ ಎಲ್ಲ ಹಾಡುಗಳನ್ನು ತಮ್ಮ ಪಿ.ಎಚ್‌.ಡಿ. ಮಹಾಪ್ರಬಂಧದಲ್ಲಿ ಸಂದರ್ಭಕ್ಕನುಸಾರವಾಗಿ ಬಳಸಿಕೊಂಡಿದ್ದಾರೆ. ಈ ಗ್ರಂಥವು ಉತ್ತರ ಕರ್ನಾಟಕದ ಜನಜೀವನವನ್ನು ಸಾಧ್ಯವಿದ್ದ ಮಟ್ಟಿಗೆ ಚಿತ್ರಿಸಲು ನೆರವಾದ ಉತ್ಕೃಷ್ಟ ಕೃತಿಯಾಗಿರುತ್ತದೆ. ಜಾನಪದ ಸಾಹಿತ್ಯದಲ್ಲಿ ಡಾ. ಗದ್ದಗಿಮಠ ಅವರಿಗೆ ಅಂತ ಅದಮ್ಯ ಅಭಿರುಚಿ ಹುಟ್ಟಲು ಅವರ ಮಾತಾ ಪಿತರೇ ಮೂಲ ಕಾರಣೀಕರ್ತರೂ ಆಗಿದ್ದಾರೆ.

ಅಪಾರವಾದ ಜಾನಪದ ಸಾಹಿತ್ಯದಲ್ಲಿ ಇಲ್ಲಿಯವರೆಗೆ ಆಗಿರುವ ಕ್ಷೇತ್ರಕಾರ್ಯದ ಕೆಲಸವು ತೀರ ಕಡಿಮೆಯೆಂದೇ ಹೇಳಬಹುದು. ಉತ್ತರ ಕರ್ನಾಟಕದಲ್ಲಿ ಹಲಸಂಗಿ ಗೆಳೆಯರ ಗುಂಪಿನವರು ಸಂಗ್ರಹಿಸಿದ ಸಾಹಿತ್ಯದ ಹೊರತಾಗಿ ಜಾನಪದ ವಾಙ್ಮಯದ ಸಂಕಲನ ಕಾರ್ಯ ನಿರಂತರವಾಗಿ ನಡೆದುಕೊಂಡು ಬರಬೇಕಾದ ಅಗತ್ಯವಿದೆ. ಹಲಸಂಗಿ ಗೆಳೆಯರ ಗುಂಪಿನವರು ಬಹಳವಾದಿ ಬಿಡಿ ಪದ್ಯಗಳು, ಲಾವಣಿಗಳು ಹಾಗೂ ಹಲಕೆಲವು ಹಾಡುಗಳನ್ನು ಮಾತ್ರ ಸಂಗ್ರಹಿಸಿದ್ದಾರೆ. ದೀರ್ಘವಾದ ಹಾಡುಗಳ ಸಂಗ್ರಹದ ಕೊರೆತಯು ಕಂಡುಬರುತ್ತದೆ. ಆ ಕೊರತೆಯನ್ನು ನೀಗಿಸಿದ ಶ್ರೇಯಸ್ಸು ಡಾ. ಬಿ.ಎಸ್‌. ಗದ್ದಗಿಮಠ ಅವರದಾಗಿದೆ. ಜಾನಪದ ಛಂದಸ್ಸನ್ನು ಮೊಟ್ಟಮೊದಲು ಬಳಸಿದ ಕೀರ್ತಿಶಾಲಿಗಳು ಆಗಿದ್ದಾರೆ. Classical ನೃತ್ಯದ ಬಗ್ಗೆ ಲೇಖನವನ್ನು ಬರೆದಿದ್ದಾರೆ. ಆದರೆ ಸ್ವತಃ ಅವರು Classical Dance ಮಾಡುತ್ತಿದ್ದಿಲ್ಲ.