ಕನಸು ನನಸಾಗುತಿದೆ ಏಕೈಕ ಕರ್ನಾಟಕ;
ಕಣ್‌ನಟ್ಟು ಬಯಸಿ ಕಾಣ್ ದಿಕ್‌ತಟಧ್ವಜಪಟ!

ಕಾವೇರಿ ಸಿರಿಯಡಿಯ, ಗೋದಾವರಿಯ ಮುಡಿಯ,
ಮೂಡುಮಲೆಯೆಡದ ಗಡಿಯ,
ಪಡುಗಡಲ ಬಲದ ತಡಿಯ;
ವರ್ಣಶಿಲ್ಪದ ಕಲೆಯ ಚೆಲ್ವಿನ ಶಿಲೆಯ ಗುಡಿಯ
ಕನ್ನಡದಿಂಪು ನುಡಿಯ
ಕನಸು ನನಸಾಗುತಿದೆ ಏಕೈಕ ಕರ್ನಾಟಕ:
ಕಣ್‌ನಟ್ಟು ಬಯಸಿ ಕಾಣ್ ದಿಕ್‌ತಟಧ್ವಜಪಟ!

ಶಿಶುರೂಪಿ, ಪಶುರೂಪಿ, ಜನರೂಪಿ, ಮನರೂಪಿ,
ನವ್ಯ ಶಾದ್ವಲ ರೂಪಿ,
ಕಲಕಲ ಪಕ್ಷಿರೂಪಿ;
ನವಸರೇವರದಂತೆ, ನವಶಾಲಿವನದಂತೆ,
ನವ ಯೌವನದ ಮೊದಲ ನವವಧೂವರರಂತೆ;
ನವಕವಿಯ ನವರಸ ನವೀನ ಕೃತಿಯಂತೆ
ದಿವ್ಯ ವೀಣಾಗಾನ ಗತಿಯಂತೆ;
ಮೂಡುತಿದೆ ಅದೋ ನೋಡು ಏಕೈಕ ಕರ್ನಾಟಕ
ಕಣ್‌ನಟ್ಟು ಬಯಸಿ ಕಾಣ್ ದಿಕ್‌ತಟಧ್ವಜಪಟ!

ಕನ್ನಡದ ಮಕ್ಕಳಿರ ಬನ್ನಿರೈ ಓ ಬನ್ನಿ;
ತನ್ನತನದನಿತನೂ ನಿವೇದಿಸಲು ಬನ್ನಿ;
ತಿರೆ ಕಿವುಡು ಸೀಳ್ವಂತೆ ನೀಳಿಂಚರದೊಳೆನ್ನಿ:
“ಭಾರತಾಂಬೆಯ ಕನ್ಯೆ ಕನ್ನಡಾಂಬೆಯೆ ಧನ್ಯೆ!
ಜಯತು ಜಯ್!
ಜಯತು ಜಯ್!
ಜಯತು ಜಯ್! ಜಯ್! ಜಯ್!”