ಪೂಜ್ಯ ಅಧ್ಯಕ್ಷರಲ್ಲಿಯೂ ಗೌರವ ಸದಸ್ಯರಲ್ಲಿಯೂ ವಿಜ್ಞಾಪನೆ;

ಕಾರ್ಯಕ್ರಮದ ಪಟ್ಟಿ ದಟ್ಟಯಿಸಿ ಹೋಗಿರುವ ಇಂದಿನ ಕನ್ನಡದ ಉತ್ಸವದಲ್ಲಿ ಕನ್ನಡ ಸಾಹಿತ್ಯದ ಮೇಲೆ ಮಾತನಾಡಲು ನನಗೆ ಹದಿನೈದು ನಿಮಿಷಗಳ ಅವಕಾಶದ ಉದಾರದಾನ ಲಭಿಸಿದೆ. ಆ ಔದಾರ್ಯವನ್ನು ನಾನು ಜಿಪುಣನಾಗಿ ವಿನಿಯೋಗಿಸಿದರೆ ಕಾರಣವರಿತ ನೀವು ಸಹಾನುಭೂತಿಯಿಂದ ಕೇಳುವಿರೆಂದು ನಂಬುತ್ತೇನೆ.

ರಸಾನುಭವಕಾರಿಯಾದ ಬರವಣಿಗೆಯೆಲ್ಲವೂ ಸಾಹಿತ್ಯ ಎಂಬ ಬಿರುದಿಗೆ ಯೋಗ್ಯವಾಗುತ್ತದೆ.

ಸಾಹಿತ್ಯ ಸಂಸ್ಕೃತಿಯ ಕಣ್ಣು. ಕಣ್ಣು ಹೊರಗಡೆಯ ಲೋಕವನ್ನು ಮನಸ್ಸಿಗೆ ಕಾಣಿಸುವುದಲ್ಲದೆ ಮನಸ್ಸಿನ ಜಗತ್ತನ್ನು ಹೊರಗಡೆಗೆ ಇಂಗಿತವಾಗಿ ತೋರುತ್ತದೆ. ಮುಖ ಹೃದಯಕ್ಕೆ ಕನ್ನಡಿಯಾದರೆ ಕಣ್ಣು ಮುಖಕ್ಕೆ ಪ್ರಾಣಸ್ಥಾನವಲ್ಲವೆ? ವ್ಯಕ್ತಿಯ ಓಜಸ್ಸಿನ ಪ್ರಕಾಶನಕ್ಕೆ ಕಿಟಕಿಯಲ್ಲವೆ ಕಣ್ಣು!

ಹಾಗೆಯೆ ಒಂದು ಜನಾಂಗದ ಶ್ರೇಷ್ಠತೆಗೆ ಅದರ ಸಂಸ್ಕೃತಿ ಸಾಕ್ಷಿಯಾಗುವಂತೆ ಆ ಸಂಸ್ಕೃತಿಗೆ ಅದರ ಸಾಹಿತ್ಯ ಅಕ್ಷಿಯಾಗುತ್ತದೆ. ಎಂದರೆ ಸಾಹಿತ್ಯ ಸಂಸ್ಕೃತಿಗೆ ಹೊಸಹೊಸ ಉಣಿಸನಿತ್ತು ಹೊರೆಯುವಂತೆ ಸಂಸ್ಕೃತಿಯ ಹೃದಯವನ್ನು ಬಿಚ್ಚಿ ತೋರಿ ಅದನ್ನು ಮರೆಯುತ್ತದೆ. ಒಂದು ದೃಷ್ಟಿಗೆ, ಸಾಹಿತ್ಯ ಜನ ಜೀವನದ ವಾಣಿ; ಮತ್ತೊಂದು ದೃಷ್ಟಿಗೆ, ಅದು ಜನಜೀವನಕ್ಕೆ ತನ್ನ ಶ್ರೀಮಂತ ವಕ್ಷದ ಪೀಯೂಷಪಾನದಿಂದ ರಕ್ಷಣೆ ಶಿಕ್ಷಣೆಗಳನ್ನಿತ್ತು, ಅದಕ್ಕೆ ಅಮೃತತ್ವವನ್ನು ದಯಪಾಲಿಸಿ, ಅದನ್ನು ಕೈಹಿಡಿದು ನಡೆಯಿಸುವ ಮಾತೃಶ್ರೀ ಮಹಾರಾಣಿ. ಆದ್ದರಿಂದ ಪ್ರತಿಯೊಂದು ನಾಡಿನ ಜನಮನದ ಜೀವಸಾರ ಸ್ವರೂಪವಾದ ಸಂಸ್ಕೃತಿ ಚಿರಕಾಲ ಉಳಿಯಬೇಕಾದರೂ ಇತರ ದೇಶ ಮತ್ತು ಕಾಲದವರಿಗೆ ಅದು ತಿಳಿಯಬೇಕಾದರೂ ಅದರ ಸಾಹಿತ್ಯದೇವಿ ನುಡಿದಲ್ಲದೆ, ಅದರ ಸರಸ್ವತಿಯ ವೀಣೆ ಮಿಡಿದಲ್ಲದೆ, ಸಾಧ್ಯವಿಲ್ಲ.

ಕನ್ನಡಿಗರ ಪ್ರಾಣಸಮುದ್ರಮಂಥನದಿಂದ ಹುಟ್ಟಿಬಂದ ಹಾಲಾಹಲ ವಿಷವು ಮಹಾದೇವನ ಶ್ರೀಕಂಠದಲ್ಲಿರಬಹುದು; ಆದರೆ ಆ ಕಡೆಹದಿಂದ ಹೊರ ಹೊಮ್ಮಿದ ಅಮೃತವನ್ನು ಕಾಣಬೇಕಾದರೆ, ಅದನ್ನು ಪಾನಮಾಡಬೇಕಾದರೆ, ನಮ್ಮ ಪೂಜೆಯ ಹೂವು ನುಡಿವೆಣ್ಣು ಹಿಡಿದಿರುವ ರಸಕಲಶದ ಮೇಲೆ ಬೀಳಬೇಕಾಗುತ್ತದೆ. ಆ ದೇವಿಯ ಕೃಪೆ ನೀಡಿದ ಆಶೀರ್ವಾದ ಪ್ರಸಾದದಿಂದ ಸತ್ವಶಾಲಿಗಳಾಗಬೇಕಾಗುತ್ತದೆ.

ತತ್ತ್ವಶಾಸ್ತ್ರದಲ್ಲಿ ಮಾಯೆಗೂ ಅವಿದ್ಯೆಗೂ ಅನಾದಿತ್ವವನ್ನು ಆರೋಪಿಸುತ್ತಾರೆ. ಹಾಗೆಯೆ ನಮ್ಮ ಸಾಹಿತ್ಯದ ವಿಚಾರವಾಗಿಯೂ ಅದು ಅತಿ ಪ್ರಾಚೀನವೆಂದೂ ಅಥವಾ ಅನಾದಿಯೇ ಎಂದೂ ವಿಶೇಷ ಭಕ್ತರಾದವರು ಹೇಳಿಕೊಳ್ಳಬಹುದು. ಆದರೆ ಆ ಅನಾದಿತ್ವ ಸಾಹಿತ್ಯ ಪ್ರಾರಂಭಕಾಲಕ್ಕಿಂತಲೂ ಆ ಕಾಲದ ವಿಚಾರವಾಗಿ ನಮಗಿರುವ ಅಜ್ಞಾನಕ್ಕೇ ಹೆಚ್ಚಾಗಿ ಅನ್ವಯಿಸುತ್ತದೆ. ಆದ ಕಾರಣ ಸದ್ಯಕ್ಕ ಆ ಅಜ್ಞಾನದ ಅಮಿತ ಪ್ರಪಂಚದ ಗೋಜಿಗೆ ಹೋಗದೆ ಜ್ಞಾನದ ಸ್ವಲ್ಪ ಪ್ರಪಂಚದಲ್ಲಿಯೆ ತೃಪ್ತಿ ಪಡೆಯುವುದು ಲೇಸು.

ಕವಿಚಕ್ರವರ್ತಿ ಪಂಪನು ಕನ್ನಡ ಭಾಷೆಯ ಸಿರಿಮುಡಿಗೆ ಹೂ ಮುಡಿಸಲು ಹೊರಟಂದಿನಿಂದ ನಮ್ಮ ಸಾಹಿತ್ಯ ಮೊದಲಾಗುತ್ತದೆ. ನೃಪತುಂಗನ ಕವಿರಾಜ ಮಾರ್ಗವನ್ನು ಪ್ರಕೃತದಲ್ಲಿ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಏಕೆಂದರೆ ಅದು ಒಟ್ಟಿನಲ್ಲಿ ರಸಾನುಭವಕಾರಿಯಾದ ಬರವಣಿಗೆ ಅಲ್ಲ, ಆದ್ದರಿಂದ ಸಾಹಿತ್ಯ ಅಲ್ಲ. ಸಾಹಿತ್ಯದ ಇತಿಹಾಸದೃಷ್ಟಿಯಿಂದ ಮಾತ್ರ ಅದು ಕುತೂಹಲಕಾರಿ. ಆದ್ದರಿಂದ ಕನ್ನಡ ಸಾಹಿತ್ಯಕ್ಕೆ ಪಂಪನೆ ಆದಿಕವಿ.

ಅಂತೂ ಕನ್ನಡ ವಾಗ್ದೇವಿ ಸುಮಾರು ಹತ್ತು ಶತಮಾನಗಳಿಂದ ಹಾದಿ ನಡೆದುಬಂದು, ಸೀರೆ ನಸುಮಾಸಿ, ಮೋರೆ ನಸುಬಾಡಿ, ನಮ್ಮ ಮುಂದೆ ಬಾಗಿ ನಿಂತಿದ್ದಾಳೆ, ಪ್ರಶ್ನೆಚಿಹ್ನೆಯಾಗಿ. ಆ ಪ್ರಶ್ನೆಚಿಹ್ನೆ ಮುಂದೇನು ಗತಿ ಎಂದು ಕೇಳುತ್ತಿದೆ. ಅದಕ್ಕೆ ನಾವಿಂದು ಕೈಕೊಂಡಿರುವಂತಹ ಕನ್ನಡದ ಉತ್ಸವಗಳೂ ಕನ್ನಡಿಗರ ಉತ್ಸಾಹವೂ ಉತ್ತರ ಹೇಳಬೇಕಾಗಿದೆ.

ಹಿಂತಿರುಗಿ ನೋಡಿದರೆ ಆ ನಿಡುದಾರಿಯಲ್ಲಿ ಉಬ್ಬುತಗ್ಗುಗಳೂ ಏಳುಬೀಳುಗಳೂ ಕಾಣುತ್ತವೆ; ಒಮ್ಮೆ ಹಸುರು ಬಯಲುಗಳು ಕಂಗೊಳಿಸುತ್ತವೆ; ಒಮ್ಮೆ ಪಾಳುಕೊರಕಲುಗಳು ಆಕಳಿಸುತ್ತವೆ. ಆ ಹಾದಿಯಾದರೂ ಉದ್ದಕ್ಕೂ ಹೆದ್ದಾರಿಯಲ್ಲ. ಹಲವು ಕಿರುಗಲ್ಲಿಗಳೂ ಇವೆ. ಹೆದ್ದಾರಿಗಳಲ್ಲಿ ಗಾಳಿ ಬೆಳಕುಗಳ ನೂತನತೆ, ಸಾಲುಮರಗಳ ಮನೋಹರತೆ, ಬಾನು ಬಯಲುಗಳ ವಿಶಾಲತೆ ಇವುಗಳು ಮನಸ್ಸಿಗೆ ಉಲ್ಲಾಸ ತರುವಂತೆ, ಕಿರುಗಲ್ಲಿಗಳಲ್ಲಿ ದುರ್ವಾಸನೆ, ಅಮಂಗಲ ಲಿಪಿ, ಅಶ್ಲೀಲ ವಿಕೃತಿ, ಹೀನಾಭಿರುಚಿ, ಸಂಕುಚಿತ ಬುದ್ಧಿ ಇವುಗಳು ಎದುರುಬಂದು ಜುಗುಪ್ಸೆ ಹುಟ್ಟಿಸುತ್ತವೆ. ಪಂಪ, ರನ್ನ, ನಾಗವರ್ಮ, ನಾಗಚಂದ್ರ, ಹರಿಹರ, ರಾಘವಾಂಕ. ಬಸವೇಶ್ವರ, ಕುಮಾರವ್ಯಾಸ, ಲಕ್ಷ್ಮೀಶ, ಸರ್ವಜ್ಞ, ಪುರಂದರದಾಸ ಮೊದಲಾದ ಮಹಾಕವಿ, ಸತ್ಕವಿ ಮತ್ತು ಸಂತಕವಿಗಳ ಸಂಗದಲ್ಲಿ ಸುಗ್ಗಿಯ ತಿಂಗಳಲ್ಲಿ ಹೆದ್ದಾರಿ ನಡೆಯುವಂತಾಗುತ್ತದೆ. ಅಕ್ಕಪಕ್ಕಗಳಲ್ಲಿ ಗಲ್ಲಿಗಳೂ ಅನೇಕವಿವೆ ಎಂಬುದು ಹಾದಿ ನಡೆಯುವವರಿಗೆ ಗೊತ್ತಾಗುತ್ತದೆ. ನಾತವೆ ತೋರುಬೆರಳಾಗಿರುವ ಗಲ್ಲಿಗಳಿಗೆ ಹೆಸರ ಕೈಮರಗಳೇಕೆ? ಬಹುಶಃ ಸಾಹಿತ್ಯಪ್ರಪಂಚದಲ್ಲಿಯೂ ಹೆದ್ದಾರಿಯ ನೈರ್ಮಲ್ಯಕ್ಕೆ ಗಲ್ಲಿಗಳು ಆವಶ್ಯಕವೊ ಏನೊ!

ಕನ್ನಡ ಸಾಹಿತ್ಯವನ್ನು ಕಾಲ ಮತ್ತು ಭಾಷೆ ಇವುಗಳ ದೃಷ್ಟಿಯಿಂದ ಹಳಗನ್ನಡ, ನಡುಗನ್ನಡ, ಹೊಸಗನ್ನಡ ಎಂದು ಹಂಚಬಹುದು. ಮತದೃಷ್ಟಿಯಿಂದ ಜೈನ ಶೈವ ವೈಷ್ಣವ ಸಾಹಿತ್ಯಗಳೆಂದು ವಿಂಗಡಿಸುವ ವಾಡಿಕೆಯಿದೆ. ಹಾಗೆ ಹೆಸರಿಡುವುದರಲ್ಲಿ ಏನಾದರೂ ನ್ಯೂನತೆ ಕಂಡುಬಂದರೆ ಅದಕ್ಕೆ ಆ ವಾಡಿಕೆ ಹೊಣೆಯಲ್ಲ.

ನಮ್ಮ ದೇಶದ ಸಂಸ್ಕೃತಿಗೆ ಬೇರು ಸೇರುಗಳೆರಡೂ ಧರ್ಮ ಎಂದು ಹೇಳುತ್ತಾರೆ. ಪುರುಷಾರ್ಥಗಳಲ್ಲಿಯೂ ಧರ್ಮಕ್ಕೆ ಪ್ರಥಮಸ್ಥಾನವನ್ನೂ ಮೋಕ್ಷಕ್ಕೆ ಪರಮಸ್ಥಾನವನ್ನೂ ಕೊಟ್ಟಿದ್ದಾರೆ. ಆದಕಾರಣ ಸಂಸ್ಕೃತಿ ಕಣ್ಣಾಗಿರುವ ಸಾಹಿತ್ಯಕ್ಕೂ ಆ ಧರ್ಮಮೋಕ್ಷಗಳೆ ಜೀವದುಸಿರಾಗುವುದರಲ್ಲಿ ವಿಶೇಷವೇನಿಲ್ಲ. ‘ಕಲೆಗಾಗಿ ಕಲೆ’ ಎಂಬ ಸ್ವೈರಮಂತ್ರವನ್ನು ಹಾಡಿಕೊಂಡು ನಡೆದು ಕೊಚ್ಚೆಯುಸುಬಿನಲ್ಲಿ ಕಂತಿ ಹಾಳಾಗುವುದಕಿಂತಲೂ ಧರ್ಮ ಮೋಕ್ಷಗಳ ತೋಳ್ಸರೆಯಲ್ಲಿ ಬೆಳೆದು ಬಾಳುವುದೆ ಸಾಹಿತ್ಯಕ್ಕೆ ಕ್ಷೇಮ, ಶ್ರೇಯಸ್ಸು. ಇಂದ್ರಿಯ ಚಪಲತೆಗೂ ಮನೋದೌರ್ಬಲ್ಯಕ್ಕೂ ಆತ್ಮದ ಪತನಕ್ಕೂ ಕಲೋಪಾಸನೆ ಎಂದು ಹೆಸರಿಟ್ಟ ಮಾತ್ರಕ್ಕೆ ಅದು ಕಲೆಯೂ ಆಗುವುದಿಲ್ಲ, ಉಪಾಸನೆಯೂ ಆಗುವುದಿಲ್ಲ.

ಆದರೆ ‘ಕಲೆಗಾಗಿ ಕಲೆ’ಯ ಸಾಹಿತ್ಯವನ್ನು ಹೇಗೆ ಅಶ್ಲೀಲತೆಯ ರೊಚ್ಚೆಗೆಳೆಯಬಹುದೋ ಹಾಗೆಯೆ ‘ಧರ್ಮಕ್ಕಾಗಿ ಕಲ’ ಎಂಬ ಸೂತ್ರವೂ ಅದನ್ನು ನೀರಸಾಚಾರಗಳ ಶುಷ್ಕಸಂಪ್ರದಾಯದ ಮತಭ್ರಾಂತಿಯ ಮರುಭೂಮಿಗೆ ಎಳೆದೊಯ್ದು, ಬಾಯಿಗೆ ನೀರನ್ನೂ ಬಿಡದೆ, ಕೊಂದುಹಾಕುವ ಸಂಭವವುಂಟು. ಸಂಭವದ ಮಾತಿರಲಿ; ನಮ್ಮ ಭಾಗಕ್ಕೆ ಅದು ಕೊಂಚಮಟ್ಟಿಗೆ ನಿತ್ಯಾನುಭವವೂ ಆಗಿಬಿಟ್ಟಿದೆ. ನಮ್ಮ ಸಾಹಿತ್ಯಸಹ್ಯಾದ್ರಿಯ ಶಿಖರಗಳಲ್ಲಿ ಕಾಮನಬಿಲ್ಲಿನ ಬಣ್ಣದ ಸೀರೆಯ ದೇವಕಾಮಿನಿಯರು ನರ್ತನ ಮಾಡುತ್ತಿರುವರಾದರೂ ಆ ಗಿರಿಪಂಕ್ತಿಯ ಸಾನುಪ್ರದೇಶದ ಅರಣ್ಯಗಳಲ್ಲಿ ಸ್ವಮತಭ್ರಾಂತಿಯ ಮತ್ತು ಪರಮತಖಂಡನೆಯ ಮುಳ್ಳುಹಂದಿಗಳು ಕಣೆ ನಿಮಿರಿಕೊಂಡು ಗುದ್ದಾಡಿಕೊಳ್ಳುತ್ತಿವೆ. ಅಲ್ಲಿಗೆ ತಿರುಗಾಡಲು ಹೋಗುವವನ ಹೆದರುಗಣ್ಣು ಪ್ರಕೃತಿ ಸೌಂದರ್ಯದ ಕಡೆಗೆ ಹೇಗೆ ತಾನೆ ಹರಿದೀತು? ಭ್ರಾಂತಿಯ ಕಣೆಹಂದಿಗಳು ಕಾದಾಡುವಲ್ಲಿ ಕಲೆಯ ಕಣ್ಣಿಗೆ ಶಾಂತಿಯೆಲ್ಲಿ?

ನಮ್ಮ ಜನಜೀವನದಲ್ಲಿ ಧರ್ಮವು ಹೇಗೆ ಮತವಾಗಿಹೋಯಿತೊ ಹಾಗೆಯೆ ಸಾಹಿತ್ಯದಲ್ಲಿಯೂ ಉದಾರಧರ್ಮವು ಸಂಕುಚಿತ ಮತವಾಗಿ, ದೇವಿಯ ಕಂಠಕ್ಕೆ ಹಾಕಿದ ಹಾರವೇ ಆಕೆಯ ಕೊರಳಿಗೆ ಉರುಳಾಗಿ ಹೋಯಿತು. ಹೂ ಉದುರಿ ಹೋದಮೇಲೆ ನೇಣು ತಾನೆ ಉಳಿಯುವುದು ಹಾರದಲ್ಲಿ!

ಮತಸಾಹಿತ್ಯದಲ್ಲಿ ಏನಾದರೂ ಶ್ರೇಷ್ಠಾಂಶವಿದ್ದರೆ ಅದಕ್ಕೆ ಕಾರಣ ಆ ಮತತ್ವವಲ್ಲ; ಮತತ್ವವನ್ನೂ ಸಹಿಸಿಕೊಂಡು ಮೀರಿ ಹೆಡೆಯೆತ್ತಿರುವ ವಿಶ್ವಧರ್ಮ.

ಮೇಲೆ ನಿರ್ದೇಶಿಸಿರುವ ಸಾಹಿತ್ಯಕ್ಕೆ ಪ್ರೇರಕವಾಗಿರುವ ಶಕ್ತಿಗಳಲ್ಲಿ ಮತವೇ ಪ್ರಬಲಪ್ರಧಾನವಾದುದಾದರೂ ಆ ಸಾಹಿತ್ಯದಲ್ಲಿ ಇರಬಹುದಾದ ಶ್ರೇಷ್ಠಾಂಶಕ್ಕೆ, ಎಂದರೆ ವಿಶ್ವಸಾಹಿತ್ಯಾಂಶಕ್ಕೆ, ಆ ಮತತ್ವ ಸ್ವಲ್ಪವೂ ಕಾರಣವಲ್ಲವಾದ್ದರಿಂದ ನಮ್ಮ ಸಾಹಿತ್ಯ ಚರಿತ್ರೆಯಲ್ಲಿ ಮತದೃಷ್ಟಿಯ ವಿಭಜನೆಯನ್ನು ಅಮುಖ್ಯವಾಗಿ ಸ್ವೀಕರಿಸಬಹುದು; ಅಥವಾ ಪರಿತ್ಯಜಿಸಿದರೂ ಹಾನಿಯಿಲ್ಲ. ಏಕೆಂದರೆ ವೀರಶೈವ ಸಾಹಿತ್ಯ ಸೃಷ್ಟಿಯಾಗುತ್ತಿದ್ದ ಕಾಲದಲ್ಲಿ ಜೈನಸಾಹಿತ್ಯ ಸೃಷ್ಟಿ ಹೊಯ್‌ಕಯ್ಯಾಗಿಯೆ ಮುಂಬರಿಯುತ್ತಿತ್ತು. ಹಾಗೆಯೆ ವೈಷ್ಣವ ಸಾಹಿತ್ಯ ಸೃಷ್ಟಿಯಾಗುತ್ತಿದ್ದ ಕಾಲದಲ್ಲಿ ವೀರಶೈವ ಸಾಹಿತ್ಯ ಕಣ್ಣು ಮೂಗು ಮುಚ್ಚಿಕೊಂಡು ಜಪಮಣಿಗಳನ್ನು ಲೆಕ್ಕ ಹಾಕುತ್ತಾ ಕುಳಿತಿರಲಿಲ್ಲ. ಜೊತೆ ಜೊತೆಗೆ ಜನಪದ ಸಾಹಿತ್ಯವೂ ಆ ಮತ ಈ ಮತಕ್ಕೆ ಸೇರದೆ ಸಾರ್ವಜನಿಕವಾಗಿ ಮುಂಬರಿಯುತ್ತಿತ್ತು ಎಂಬುದನ್ನು ಗಮನಿಸಬೇಕು.

ನಮ್ಮ ಸಾಹಿತ್ಯ ಜೀವಸಾಹಿತ್ಯ. ಜೀವನ ಲಕ್ಷಣ ಬೆಳವಣಿಗೆ. ಬೆಳವಣಿಗೆಗೆ ಒಂದು ಪ್ರಬಲವಾದ ಚಿಹ್ನೆ ಎಂದರೆ ಬದಲಾವಣೆ. ಕಾಲ ದೇಶ ಪರಿಸ್ಥಿತಿಗಳಿಗೆ ತಕ್ಕಂತೆ ಬದಲಾವಣೆ ಹೊಂದುತ್ತಾರ ಬೆಳೆಯುತ್ತಿರುವ ಸಾಹಿತ್ಯದ ಜೀವಸಾಹಿತ್ಯ. ಅಂತಹ ಬದಲಾವಣೆ ಯಾವಾಗಲೂ ಏರಿಕೆಯಾಗಿಯೇ ಇರದೆ ಇರಬಹುದು. ಇಳಿಕೆಯಾಗಿದ್ದರೂ ಚಿಂತೆಯಿಲ್ಲ; ಹೆದರಬೇಕಾಗಿಲ್ಲ.

ಕನ್ನಡಿಗರು ಮೊದಲಿನಿಂದಲೂ ಸಾಹಸಪ್ರೇಮಿಗಳು. ಬದಲಾಯಿಸುವುದಕ್ಕಾಗಲಿ ಬೆಳೆಯುವುದಕ್ಕಾಗಲಿ ಅವರು ಹಿಂಜರಿದವರಲ್ಲ. ಕರ್ಮ ಧರ್ಮ ಮತ್ತು ಕಲಾರಂಗಗಳಲ್ಲಿ ಬರಿಯ ತಟಸ್ಥಾಚಾರಶೀಲವಾಗಿರದೆ ವಿಚಾರ ಪ್ರಚಾರ ಮತ್ತು ಪ್ರಯೋಗಶೀಲರಾಗಿ ಮುಂದುವರಿದಿದ್ದಾರೆ. ಅವರ ಸಾಹಿತ್ಯದಲ್ಲಿಯೂ ಅದೇ ಸಾಹಸಪ್ರಿಯತೆ ಪ್ರತಿಬಿಂಬಿಸಿದೆ, ಆತ್ಮ ಮತ್ತು ಆಕಾರ ಎರಡರಲ್ಲಿಯೂ. ಅದಕ್ಕಾಗಿ ನಮ್ಮ ಪೂರ್ವಿಕರಿಗೆ ಋಣಿಗಳಾದ ನಾವು ಎಷ್ಟು ಕೃತಜ್ಞರಾದರೂ ಸಾಲದಾಗಿದೆ. ಅವರ ನೆತ್ತರು ನಮ್ಮ ನಾಳಗಳಲ್ಲಿ ಹರಿಯುತ್ತಿರುವುದರಿಂದಲೆ ನಾವಿಂದು ಸಾಹಸಿಗಳಾಗಿ ಮುಂದುವರಿಯುತ್ತಿದ್ದೇವೆ. ಹೊಸಹಾದಿ ನಡೆಯುತ್ತಿರುವ ನಮ್ಮ ಸಾಹಸಕ್ಕೆ ಅವರ ಮೇಲ್ಪಂಕ್ತಿಯೂ ಆಶೀರ್ವಾದವೂ ಉತ್ತೇಜನಗಳಾಗಿವೆ.

ಕ್ರಿಸ್ತಾಬ್ದ ಹತ್ತು ಹನ್ನೊಂದನೆಯ ಶತಮಾನಗಳಲ್ಲಿ ಪ್ರಬಲವಾಗಿದ್ದ ಜೈನ ಮತದ ಬಾಹುಮುದ್ರೆಯಲ್ಲಿ ಹಳಗನ್ನಡ ಸಾಹಿತ್ಯ ಮೊಳೆತು ಬೆಳೆಯಿತು. ರತ್ನತ್ರಯವೆಂದು ಪ್ರಸಿದ್ಧರಾಗಿರುವ ಪಂಪ ಪೊನ್ನ ರನ್ನರು ಕಲಾದೇವಿಯ ಪೂಜೆಗಾಗಿ ರಸಪೂರ್ಣವೂ ಉತ್ಕೃಷ್ಟವೂ ಆಗಿರುವ ಲೌಕಿಕ ಕಾವ್ಯಗಳನ್ನು ಬರೆದುದಲ್ಲದೆ ತಮ್ಮ ಮತಧರ್ಮಪ್ರಚಾರಕ್ಕಾಗಿಯೂ, ಬಹುಶಃ ಆತ್ಮದ ಶ್ರೇಯಸ್ಸಿಗಾಗಿಯೂ, ಕಲಾದೃಷ್ಟಿಯಿಂದ ಮಹಾಶ್ರೇಷ್ಠವೆಂದು ಹೇಳಲಾಗದಿದ್ದರೂ, ಜಿನಧರ್ಮ ಸಮುದ್ಧರಣಾರ್ಥವಾಗಿ, ದಿವ್ಯ ಪುರಾಣಗಳನ್ನೂ ಬರೆದಿದ್ದಾರೆ.* ಆ ಕಾಲದ ಸಾಹಿತ್ಯದಲ್ಲಿ ಹೊಸತನದ ಒಂದು ಸ್ಫೂರ್ತಿ, ಕ್ಷಾತ್ರಶ್ರದ್ಧೆ, ಧೀರಪ್ರತಿಭೆ ಮತ್ತು ಜೀವಕಳೆ ಇವುಗಳನ್ನು ಕಾಣುತ್ತೇವೆ. ಮತಸಾಹಿತ್ಯದಲ್ಲಿಯೂ ಉದಾರ ಸಹಾನುಭೂತಿ ತೋರುತ್ತದೆ.

ಹನ್ನೆರಡನೆಯ ಶತಮಾನದಲ್ಲಿ ಎಂದು ಆಚಾರ್ಯ ಬಸವೇಶ್ವರನು ಸಮಾಜ ಸುಧಾರಣೆಯ ಪ್ರಚಾರಕಾರ್ಯಕ್ಕೆ ಕೈಹಾಕಿ ಶೈವಮತಕ್ಕೆ ವೀರತ್ವವನ್ನು ದಯಪಾಲಿಸಿದನೋ ಅಂದಿನಿಂದ ನಾಡಿನ ಬಾಳು ಕಡೆಗೋಲಿಗೆ ಸಿಕ್ಕಿ ಕದಡಿದಂತಾಯಿತು. ಜನಸಾಮಾನ್ಯರಲ್ಲಿ ಹೊಸಮತ ಪ್ರಚಾರಮಾಡಬೇಕಾಗಿ ನುಡಿಯದೇವಿ ಹಿಂದಣ ಯುಗದ ಚಂಪೂ ಕಾವ್ಯಗಳ ಸ್ವರ್ಣ ಸಿಂಹಾಸನದಿಂದ ಜೊಂಡಿನ ಚಾಪೆಗೆ ಅವತರಿಸಿ ಸಲುಗೆಯಿಂದ ಮಾತಾಡ ತೊಡಗಿದಳು. ಕನ್ನಡಕ್ಕೆ ನಿಸರ್ಗವಾದ ಮಾತ್ರಾಛಂದಸ್ಸೂ ವಚನಶೈಲಿಯ ಗದ್ಯಸಾಹಿತ್ಯವೂ ನೂರ್ಮೊಗವಾಗಿ ಮೂಡಿದುವು. ಷಟ್ಪದೀ ಕಾವ್ಯಕರ್ತೃವೆಂದು ಹೆಸರುಪಡೆದ ರಾಘವಾಂಕನ ಮಾವ ಹರಿಹರಕವಿಗೆ ಬಂದ “ರಗಳೆಯ ಕವಿ” ಎಂಬ ವಿಡಂಬನೆಯ ಬಿರುದು ಆಗಿನ ಕಾಲದಲ್ಲಿ ಮತ ಮತ್ತು ಸಾಹಿತ್ಯ ಪ್ರಪಂಚಗಳಲ್ಲಿದ್ದ ಬಿಸಿಗೆ ಧ್ವನಿಯಾಗಿದೆ.

ಜೈನ ಮತ್ತು ವೀರಶೈವ ಮತಗಳು ಒಂದನ್ನೊಂದು ಮೀರಲು ಹೋರಾಡುತ್ತಿದ್ದಾಗಲೆ ವೈಷ್ಣವಮತಪ್ರವಾಹವೂ ನಾಡಿನ ಮೇಲೆ ದುಮುಕಿತು. ಜೈನ ಕವಿಗಳು ಜೈನ ಸಂಪ್ರದಾಯಕ್ಕನುಸಾರವಾಗಿ ಭಾರತ ರಾಮಾಯಣಗಳನ್ನು ಬರೆದಂತೆ ವೈಷ್ಣವ ಕವಿಗಳೂ ವೈದಿಕ ಸಂಪ್ರದಾಯದ ರಾಮಾಯಣ ಭಾರತಗಳನ್ನು ರಚಿಸಿದರು. ಈ ನಡುಗನ್ನಡ ಸಾಹಿತ್ಯದ ಗಲಿಬಿಲಿಯ ಸಂತೆಯಲ್ಲಿ ಒಂದು ವಿಶೇಷವೇನೆಂದರೆ, ವೀರಶೈವರ ಅಂಗಡಿಗಳಲ್ಲಿ ಆರ್ಯ ಪುರಾಣಗಳಾದ ಭಾರತ ಭಾಗವತ ರಾಮಾಯಣಗಳು ವಿಶೇಷವಾಗಿ ಪ್ರದರ್ಶಿತವಾಗಿಲ್ಲ. ಅವರು ಸ್ಥಳೀಯ ದ್ರಾವಿಡ ಸಾಮಗ್ರಿಯಿಂದಲೇ ವೀರರನ್ನೂ ಭಕ್ತರನ್ನೂ ಅವತಾರಪುರುಷರನ್ನೂ ನಿರ್ಮಿಸಿಕೊಂಡಿದ್ದಾರೆ. ಹೊರಗಿನಿಂದ ಆಮದುಮಾಡುವ ಗೋಜಿಗೆ ಹೋಗಲಿಲ್ಲ. ಅದು ವೀರತನದ ಸ್ವಾಭಿಮಾನಕ್ಕೂ ಪ್ರತಿಭಟನೆಗೂ ಅತಿ ಶ್ರದ್ಧೆಯಿಂದ ಪ್ರೇರಿತವಾಗುವ ಹಾಸ್ಯಮತಿ ರಾಹಿತ್ಯಕ್ಕೂ ಹೆಗ್ಗುರುತಾಗಿದೆ.

ಸುಮಾರು ಹದಿನಾರಿನೆಯ ಶತಮಾನದಿಂದ ಪ್ರಾರಂಭವಾದ ಹೊಸಗನ್ನಡ ಯುಗವು ಅಶಾಂತಿಯ ಕಾಲ; ಅವನತಿಯ ಕಾಲ. ರಾಜಕೀಯ ಸಾಮಾಜಿಕ ಮತ್ತು ಧಾರ್ಮಿಕ ಪ್ರಪಂಚಗಳೆಲ್ಲವೂ ವಿಕ್ಷುಬ್ಧವಾಗಿದ್ದ ಕಾಲ; ಸಂಕಟದ ಕಾಲ. ಜನತೆ ಹೋರಾಡಿ ಕೈಲಾಗದೆ ಕೆಳಗುರುಳಿದ ಕಾಲ. ಅಂತಹ ಶೋಕ ಸಮಯದಲ್ಲಿ ದಾಸ್ಯಭಾವ ತಲೆದೋರುತ್ತದೆ; ಭಕ್ತಿ ಹೆಚ್ಚುತ್ತದೆ. ಆದ್ದರಿಂದಲೆ ಸಾಹಿತ್ಯದಲ್ಲಿಯೂ ಭಕ್ತಿಯ ಮತ್ತು ವೈರಾಗ್ಯದ ಹಾಡುಗಬ್ಬಗಳು ಯಥೇಚ್ಛವಾಗಿ ಹುಟ್ಟಿದುವು.

ಸಾಹಿತ್ಯದ ಅಗಲವೇನೋ ಹೆಚ್ಚಾಯಿತು; ಆದರೆ ಆಳ ಕಡಿಮೆಯಾಯಿತು. ಪಂಪನ ಗುಣ್ಪನ್ನಾಗಲಿ, ರನ್ನನ ಓಜಸ್ಸನ್ನಾಗಲಿ, ನಾರಾಣಪ್ಪನ ಉತ್ಸಾಹವನ್ನಾಗಲಿ ನೆನಪಿಗೆ ತರುಣ ಕಾವ್ಯ ರಚನೆಯಾಗಲಿಲ್ಲ. ಒಂದಲ್ಲ ಅನೇಕ ಅರ್ಥಗಳಲ್ಲಿ ಸಾಹಿತ್ಯವು ಸಾಮಾನ್ಯವಾಯಿತು. ಆದರೆ ಒಂದು ಸಂತೋಷದ ಸಂಗತಿ; ಸರ್ವಜ್ಞನ ಕೃತಿಗಳಲ್ಲಿ ಮತ್ತು ದಾಸರ ಪದಗಳಲ್ಲಿ ಸಾಹಿತ್ಯವು ಬರಿಯ ಕಣ್ಣೀರೊರಸುವ ಕೆಲಸವನ್ನು ಮಾಡಿ ತೃಪ್ತವಾಗದೆ ಬೆನ್ನುತಟ್ಟಿ ಹುರಿದುಂಬಿಸುವ ಮತ್ತು ಬೈದು ಚುಚ್ಚಿ ಎಚ್ಚರಿಸುವ ಪ್ರಯತ್ನವನ್ನೂ ಕೈಕೊಂಡಿತ್ತು.

ಆಧುನಿಕ ಯುಗವು ಹತ್ತೊಂಬತ್ತನೆಯ ಶತಮಾನದಿಂದ ಪ್ರಾರಂಭವಾಗುತ್ತದೆ. ಅದಕ್ಕೆ ಅತ್ಯಂತ ಸಮೀಪದಲ್ಲಿ ಮಾತ್ರವಲ್ಲದೆ ಅದರೊಳಗೂ ಇರುವ ಆಧುನಿಕರಾದ ನಾವು ಅದರ ಮೇಲ್ಮೆ ಕೀಳ್ಮೆಗಳನ್ನು ಕುರಿತು ಯಾವುದನ್ನೂ ನಿಷ್ಕೃಷ್ಟವಾಗಿ ಹೇಳಲಾಗುವುದಿಲ್ಲ. ಆದರೂ ನಾವು ಎಲ್ಲಿದ್ದೇವೆ, ಏನು ಮಾಡುತ್ತಿದ್ದೇವೆ, ಎತ್ತ ಹೋಗುತ್ತಿದ್ದೇವೆ, ಎಂದು ಮಾರ್ಗಾವಲೋಕನ ಮಾಡುವುದು ಹಾದಿಗರೆಲ್ಲರ ಕರ್ತವ್ಯವಾಗಬೇಕು.

ರಾಜಕೀಯ ಪ್ರಪಂಚದಲ್ಲಿ ಪಾಶ್ಚಾತ್ಯ ದೇಶಗಳ ಪ್ರಾಬಲ್ಯವು ಸರ್ವಶಕ್ತವೂ ಸರ್ವವ್ಯಾಪಿಯೂ ಆಗಿರುವ ಈ ಯುಗದಲ್ಲಿ ಪಾಶ್ಚಾತ್ಯ ಸಂಸ್ಕೃತಿಯ, ಸಾಹಿತ್ಯದ ಮತ್ತು ವಿಜ್ಞಾನದ ಪ್ರಭಾವದಿಂದ ದೂರವಾಗುವುದಾಗಲಿ ತಪ್ಪಿಸಿಕೊಳ್ಳುವುದಾಗಲಿ ಸಾಧ್ಯವೂ ಅಲ್ಲ, ಶ್ರೇಯಸ್ಸೂ ಅಲ್ಲ. ಈಗಾಗಲೆ ಇಂಗ್ಲಿಷ್ ವಿದ್ಯೆಯ ಥೇಮ್ಸ್ ನದಿ ಸಂಸ್ಕೃತದ ಭಾಗೀರಥಿ ಮತ್ತು ಕನ್ನಡದ ಕಾವೇರಿಗಳೊಡನೆ ಸಂಗಮಿಸಿ ಹರಿಯತೊಡಗಿದೆ. ಹೊಸ ನೀರಿನ ಮಹಿಮೆಯಿಂದ ಹೊಸ ಹೊಸ ಪೈರು ಹಸುರಾಗಿ ಹುಲುಸಾಗಿ ಬೆಳೆಯಲಾರಂಭಿಸಿದೆ. ಕೊಯ್ಲಿನ ಪರಿಶೀಲನೆ ಮುಂದೆ ಬರುವವರಿಗಿರಲಿ.

ಆಧುನಿಕ ಯುಗವು ವಿಚಾರಶೀಲ ವೈಜ್ಞಾನಿಕ ಯುಗ. ವಿಮರ್ಶೆ, ಪರೀಕ್ಷೆ, ಪ್ರಯೋಗ ಇವು ಈ ಕಾಲದ ಧ್ಯೇಯೋಕ್ತಿಗಳು. ಶ್ರದ್ಧೆಗಿಂತಲೂ ಹೆಚ್ಚಾಗಿ ಬುದ್ಧಿ ಆಳುವ ಕಾಲವಿದು. ಇದು ‘ಬಹುಮತ’ದ ‘ಬಹುಜನ ಹಿತ’ದ ಮತ್ತು ‘ಬಹುಜನ ಸುಖ’ದ ಕಾಲ. ಹೊಂಗನಸಿನ ಪದ್ಯದ ಕಾಲವಲ್ಲ; ಗಟ್ಟಿಯಾದ ಗದ್ಯದ ಕಾಲ. ಸಾಹಿತಿಯ ಕೃತಿ ನೂರಾರು ಒರೆಗಲ್ಲುಗಳಲ್ಲಿ ಮೋರೆ ತೀಡಿಸಿಕೊಂಡು ಎಲ್ಲರಿಂದಲೂ ಮೆಚ್ಚುಗೆ ಪಡೆದು ಗೆದ್ದು ಬದುಕಬೇಕಾಗಿದೆ. ಆದರೆ ಬಹುಜನಾಭಿಪ್ರಾಯದ ಮೆಚ್ಚುಗೆ ಪಡೆದು ಬಹುಜನಪ್ರಿಯವಾದ ಮಾತ್ರಕ್ಕೇ ಬಹು ಶ್ರೇಷ್ಠವಾಗುತ್ತದೆಯೇ ಎಂದು ಒಂದೊಂದು ಸಾರಿ ಎಂತಹ ಉಗ್ರ ಸಮತಾವಾದಿಯ ಹೃದಯವೂ ಆಶಂಕೆಯಿಂದ ತೂಗುಯ್ಯಲೆಯಾಗುತ್ತದೆ.

ಅದು ಹೇಗಾದರಿರಲಿ. ಹತ್ತು ಶತಮಾನಗಳಿಂದ ನಡೆದುಬಂದ ಕನ್ನಡ ಸಾಹಿತ್ಯದೇವಿ ನಮ್ಮ ಮುಂದೆ ನಿಂತಿದ್ದಾಳೆ. ದಣಿದಿದ್ದರೂ ತಣಿವಿಲ್ಲದೆ ಮುಂಬರಿಯಲು ಕಾತರಳಾಗಿ ನಿಂತಿದ್ದಾಳೆ. ಅವರವರ ಶಕ್ತಿಗನುಸಾರವಾಗಿ ಭಕ್ತಿಯಿಂದ ಆಕೆಯ ಸೇವೆತೆ ಸೊಂಟಕಟ್ಟಿ ನಿಲ್ಲುವುದು ನಮ್ಮೆಲ್ಲರ ಜೀವನ ದೀಕ್ಷೆಯಾಗಬೇಕು. ನಮ್ಮ ಪುಣ್ಯವಶದಿಂದ ಇಂದಿನ ಅಧ್ಯಕ್ಷರಂತಹ ಗಂಭೀರ ಪ್ರಕೃತಿಯ, ಉದಾರ ಸಹನೆಯ, ಸುತೀಕ್ಷ್ಣ ಬುದ್ಧಿಯ ಗಗನೋಪಮ ವ್ಯಕ್ತಿಗಳು ಕನ್ನಡ ಸಾಹಿತ್ಯೋತ್ಸವದಲ್ಲಿ ತೇರುಮಿಣಿಗೆ ಕೈಕೊಟ್ಟು ಎಳೆಯುತ್ತಾ ಮಾರ್ಗದರ್ಶಿಗಳಾಗಿ ನಮ್ಮನ್ನೆಲ್ಲ ಕರೆಯುತ್ತಿದ್ದಾರೆ. ಅಂತಹ ಆಚಾರ್ಯರಲ್ಲಿ ಪೂಜ್ಯರೊಬ್ಬರು ಮೊನ್ನೆ ತಾನೆ ದಿವಂಗತರಾದರು. ಅವರ ಕರೆ ವ್ಯರ್ಥವಾಗದೆ ಅವರ ಆತ್ಮಕ್ಕೆ ಶಾಂತಿಯುಂಟಾಗಲಿ.

ಸಾಹಿತ್ಯದೇವಿಯ ಸೇವೆಗೆ ಸರ್ವರಿಗೂ ಅವಕಾಶವಿದೆ. ಅಲ್ಲಿ ದೇವಾಲಯ ಪ್ರವೇಶದ ಸಮಸ್ಯೆಯಿಲ್ಲ. ಆಕೆಯ ಪೂಜೆಗೆ ಯಾರು ಬೇಕಾದರೂ ಹಣ್ಣು ಕಾಯಿ ತರಬಹುದು. ನುಡಿಗುಡಿಯ ಬಾಗಿಲು ಇಚ್ಛೆ ಆಸಕ್ತಿ ಭಕ್ತಿಗಳಿರುವ ಎಲ್ಲರಿಗೂ ಯಾವಾಗಲೂ ತೆರೆದಿರುತ್ತದೆ. ಜಾತಿ ಮತ ಅಂತಸ್ತುಗಳ ಭೇದವಾಗಲಿ, ದೊಡ್ಡವರು ಚಿಕ್ಕವರು ಎಂಬ ತಾರತಮ್ಯವಾಗಲಿ ಅಲ್ಲಿಲ್ಲ. ಭಕ್ತಿ ಮತ್ತು ಸೇವಾಸಕ್ತಿಗಳಿದ್ದರಾಯಿತು. ಹೊಸಸಾಹಿತ್ಯದ ಸೃಷ್ಟಿಮಾತ್ರವೇ ಆಕೆಯ ಸೇವೆ ಎಂದು ಭಾವಿಸಬಾರದು. ಸಾಹಿತ್ಯಪ್ರಚಾರ, ಸಾಹಿತ್ಯಾಧ್ಯಯನ, ಜನಪದ ಸಾಹಿತ್ಯ ಇತ್ಯಾದಿಗಳ ಸಂಗ್ರಹ ಕಾರ್ಯ, ಸಾಹಿತ್ಯ ಪ್ರೋತ್ಸಾಹಕ್ಕಾಗಿ ನೀಡುವ ಧನಸಹಾಯ ಇವುಗಳೆಲ್ಲವೂ ದೇವಿಯ ಪೂಜೆ, ಆದ್ದರಿಂದ ಆ ಪೂಜೆಯಲ್ಲಿ ವಿದ್ಯಾರ್ಥಿಗಳು, ವಿದ್ವಾಂಸರು, ಹಣವಂತರು, ಬಡವರು, ವರ್ತಕರು, ಜಮೀನುದಾರರು ಸರ್ವರೂ ತಮ್ಮ ತಮ್ಮ ರೀತಿಯಲ್ಲಿ ಭಾಗಿಗಳಾಗಿ ಧನ್ಯರಾಗಬಹುದು.

ಆದರೂ ನಮ್ಮ ಜನತೆಯ ದೃಷ್ಟಿ ಇನ್ನೂ ಕನ್ನಡ ಸರಸ್ವತಿಯ ಮಂದಿರದ ಕಡೆಗೆ ಸಾಕಾದಷ್ಟು ಒಲೆಯದಿರುವುದನ್ನು ನೋಡಿ ಉತ್ಸಾಹಿಗಳಿಗೆ ಎದೆನೋವಾಗುತ್ತಿದೆ. ದೇವಾಲಯಗಳನ್ನು ಕಟ್ಟಿಸುತ್ತಾರೆ; ಅನ್ನ ಸತ್ರಗಳನ್ನು ನಿರ್ಮಿಸಿ ದರಿದ್ರ ನಾರಾಯಣ ಸೇವೆಗೆ ಭೋಜನಮಾಡಿಸುತ್ತಾರೆ; ರೋಗ ಪರಿಹಾರಕ್ಕೆ ಚಿಕಿತ್ಸಾಲಯಗಳನ್ನು ರಚಿಸುತ್ತಾರೆ. ಅವೆಲ್ಲವೂ ಪುಣ್ಯತರುವ ಮಹಾಕಾರ್ಯಗಳೇ ಹೌದು. ಆದರೆ ಸಾಹಿತ್ಯ ಮನಸ್ಸನ್ನೆ ದೇವಸ್ಥಾನವನ್ನಾಗಿ ಮಾಡುವುದಿಲ್ಲವೆ? ಅದು ಆತ್ಮಕ್ಕೆ ರಸಾನ್ನ ದಾನಮಾಡುವ ದೇವಸತ್ರವಲ್ಲವೆ? ಮನೋಮಂದಿರದಲ್ಲಿ ಅಜ್ಞಾನ ದಾರಿದ್ರ್ಯವನ್ನು ಪರಿಹರಿಸಿ ಜ್ಞಾನನಾರಾಯಣನನ್ನು ಪ್ರತಿಷ್ಠಿಸುವುದಿಲ್ಲವೆ? ಜೀವನದ ಜಡತ್ವವನ್ನು ನೀಗಿ ಚೇತನಾಮೃತವನ್ನು ದಯಪಾಲಿಸುವ ಚಿಕಿತ್ಸಾಲಯವಲ್ಲವೆ? ಆರೋಗ್ಯಾಶ್ರಮವಲ್ಲವೆ? ಕೀರ್ತಿದೃಷ್ಟಿಯಿಂದ ಕೂಡ ಅದಕ್ಕಿಂತಲೂ ಹೆಸರನ್ನು ಶಾಶ್ವತವನ್ನಾಗಿಮಾಡುವುದು ಬೇರೊಂದಿದೆಯೆ? ಅರಿಕೇಸರಿಯ ಹೆಸರಿರುವುದು ಪಂಪನಿಂದಲ್ಲವೆ? ನಾವಿಂದು ಅತ್ತಿಮಬ್ಬೆಯನ್ನು ನೆನೆಯುವುದು ರನ್ನನಿಂದಲ್ಲವೆ? ಶ್ರೀರಾಮ ಮತ್ತು ಶ್ರೀಕೃಷ್ಣರ ಹೆಸರುಗಳೂ ಮಹಾಸಾಹಿತ್ಯಕರ್ತೃಗಳಿಗೆ ಋಣಿಗಳಾಗಿಲ್ಲವೆ? ಯಾವ ಕಡೆಯಿಂದ ನೋಡಿದರೂ ಸಾಹಿತ್ಯದೇವಿ ವರದಹಸ್ತೆಯಾಗಿ ನಿಂತಿದ್ದಾಳೆ. ಆದ್ದರಿಂದ ಲಕ್ಷ್ಮಿಯ ಪುತ್ರರಲ್ಲಿ ಸರಸ್ವತಿಯ ಯಃಕಶ್ಚಿತ ಭಕ್ತಕಿಂಕರನೊಬ್ಬನ ಸವಿನಯಪ್ರಾರ್ಥನೆ: ತಾವೆಲ್ಲರೂ ತಾಟಸ್ಥ್ಯವನ್ನೂ ಔದಾಸೀನ್ಯವನ್ನೂ ದೂರಮಾಡಿ ಔದಾರ್ಯದ ಸಂಗದಲ್ಲಿ ದೇವಿಯ ಸೇವೆಗೆ ಮುಂಬರಿಯಬೇಕೆಂದು ಬೇಡುತ್ತೇನೆ.

ಕಡೆಯ ಮಾತಾಗಿ, ತಾರುಣ್ಯದ ಔದಾರ್ಯಕ್ಕೆ ಒಂದು ಎಚ್ಚರಿಕೆಯನ್ನು ಸ್ನೇಹಪೂರ್ವಕವಾಗಿ ಸೂಚಿಸುತ್ತೇನೆ. ಸಮುದ್ರ ಜಗದ್ವ್ಯಾಪಿಯಾಗಬೇಕೆಂದು ಪ್ರಯತ್ನಿಸಿದರೆ ಅದರ ಔದಾರ್ಯ ಹಾಸ್ಯಾಸ್ಪದವಾಗುವುದಿಲ್ಲ, ವ್ಯರ್ಥವಾಗುವುದಿಲ್ಲ. ನೀರನ್ನೆ ಕಾಣದ ಅನೇಕ ಮರುಭೂಮಿಗಳು ಫಲವತ್ತಾಗುವ ಸಂಭವವೂ ಉಂಟು. ಆದರೆ ಕೊಡ ಕಡಲಿನ ಔದರ್ಯವನ್ನು ಅನುಕರಿಸಲು ಹೊರಟರೆ ಹುಲಿಯ ಬಣ್ಣಕ್ಕೆ ನರಿ ಮೈಸುಟ್ಟುಕೊಂಡಂತೆ ಹಾಸ್ಯಸ್ಪದವಾಗುತ್ತದೆ: ಮರುಭೂಮಿ ಫಲವತ್ತಾಗುವುದುದಂತಿರಲಿ, ಯಾವ ಸಸ್ಯವೂ ಅದರಿಂದ ಉದ್ಧಾರವಾಗುವುದಿಲ್ಲ. ಹಾಗೆ ಮಾಡುವುದಕ್ಕೆ ಬದಲಾಗಿ ಮನೆಯ ಅಂಗಳದ ಗಿಡಕ್ಕಾದರೂ ನೀರೆರೆದರೆ ಆ ಗಿಡಕ್ಕೂ ತೃಪ್ತಿ; ಕೊಡವೂ ಕೃತಾರ್ಥವಾಗುತ್ತದೆ; ಮನೆಯವರಿಗೂ ಪ್ರಯೋಜನವಾಗುತ್ತದೆ.* ಮೈಸೂರಿನಲ್ಲಿ ೧೪.೧೨.೩೭ರಲ್ಲಿ ನಡೆದ ‘ಕನ್ನಡದ ಉತ್ಸವ’ದ ಕಾಲದಲ್ಲಿ ಕೊಟ್ಟ ಉಪನ್ಯಾಸ.

* ನಿಷ್ಪಕ್ಷಪಾತವಾದ ವಿಮರ್ಶದೃಷ್ಟಿಯಿಂದ ಹೇಳುವುದಾದರೆ ಪೊನ್ನನಿಗೆ ಪಂಪ ರನ್ನರ ಸಮಾನಸ್ಥಾನವಾಗಲಿ, ರನ್ನನಿಗೆ ಪಂಪನ ಸಮಾನಸ್ಥಾನವಾಗಲಿ ದೊರೆಯುವುದಿಲ್ಲ. ಅಲ್ಲದೆ ಪಂಪನ ‘ಆದಿ ಪುರಾಣ’ದ ದರ್ಶನಪೂರ್ವಕವಾದ ಕಲೆ ಅವನ ಕಲಾಪೂರ್ಣವಾದ ‘ವಿಕ್ರಮಾರ್ಜುನ ವಿಜಯ’ದ ದರ್ಶನಕ್ಕಿಂತಲೂ ಶಾಶ್ವತತರವಾದ ಪರಮ ಪುರುಷಾರ್ಥಪರವಾಗಿರುವುದರಿಂದ ಅದು ಸುಪಕ್ವ ಚೇತನದ ಸಹೃದಯರಿಗೆ ಮೆಚ್ಚಾಗುವ ಸಂಭವ ಉಂಟು.