ಕನ್ನಡಮ್ಮನ ಹಿರಿಯ ಮಕ್ಕಳಿರಾ, ಕಿರಿಯ ಮಕ್ಕಳಿರಾ, ಓ ನನ್ನ ಸೋದರ ಸೋದರಿಯರಿರಾ,

ದೇಶದೇವಿಯ ಪೂಜೆಗೆ ಇಂದು ನಾಡೆಲ್ಲ ನೆರೆಯುತ್ತಿದೆ; ಎಲ್ಲರನ್ನೂ ಕರೆಯುತ್ತಿದೆ. ಈ ಪುಣ್ಯಸಂಭ್ರಮ ಸಮಯದಲ್ಲಿ ತಮ್ಮೆಲ್ಲರೊಡಗೂಡಿ ಆ ದೇವಿಯ ಮಹಾರಾಧನೆಯಲ್ಲಿ ಭಾಗಿಯಾಗುವ ಕೃಪೆ ಆಕೆಯ ತೊದಲು ಮಕ್ಕಳಲ್ಲೊಬ್ಬನಾದ ನನಗೂ ದೊರೆಕೊಂಡಿರುವುದಕ್ಕಾಗಿ ತಮ್ಮೆಲ್ಲರನ್ನೂ ವಂದಿಸಿ, ನಾಡದೇವಿಗೆ ಮುಡಿ ಬಾಗುತ್ತೇನೆ.

ಇಂದು ಕನ್ನಡನಾಡಿನ ಮೂಲೆಮೂಲೆಗಳಲ್ಲಿ ಎಚ್ಚತ್ತು ಕಣ್ದೆರೆಯುತ್ತಿರುವವರೆಲ್ಲರೂ ಈ ನಾಡಹಬ್ಬದಲ್ಲಿ ಉತ್ಸಾಹದಿಂದಲೂ ಆವೇಶದಿಂದಲೂ ತನುಮನಧನವನ್ನು ಸಮರ್ಪಿಸಿ ಭಾಗಿಗಳಾಗಿದ್ದಾರೆ. ಈ ಉತ್ಸಾಹದ ಅರ್ಥವೇನು? ಈ ಆವೇಶದ ಉದ್ದೇಶವೇನು? ಯಾವ ದೇವತೆಗಾಗಿ ಈ ತೇರು ಶೃಂಗಾರವಾಗಿದೆ? ಯಾವ ಮಂಗಳಕ್ಕಾಗಿ ಆ ಗುಡಿಯಲ್ಲಿ ಆರತಿಯಾಗುತ್ತಿದೆ? ಯಾರ ಮಹಿಮೆಗಾಗಿ ಇಲ್ಲಿ ಮಕ್ಕಳು ಜಯಧ್ವನಿಗೈಯುತ್ತಿದ್ದಾರೆ? ಯಾರ ಶ್ರೇಯಸ್ಸಿಗೆ ಅಲ್ಲಿ ದೊಡ್ಡವರು ಪರಿಶ್ರಮಿಸುತ್ತಿದ್ದಾರೆ? ಯಾವ ನನಸದು ನಮ್ಮನ್ನು ಮುನ್ನೂಂಕುತ್ತಿದೆ? ಯಾವ ಕನಸಿದು ನಮ್ಮೆಲ್ಲರನ್ನೂ ಸೆಳೆಯುತ್ತಿದೆ? ದೇಶ ದೇವಿ ಇದಾರು? ಈ ಪೂಜೆಯ ಅರ್ಥ ಉದ್ದೇಶಗಳೇನು?

ಕನ್ನಡಿಗರ ಆತ್ಮಜಾಗ್ರತಿಯಿಂದ ಸಪ್ರಾಣವಾಗುತ್ತಿರುವ ಅವಿಚ್ಛಿನ್ನ ಕರ್ನಾಟಕವೆ ಈ ದೇಶದೇವಿ. ಕರ್ನಾಟಕಮಾತೆಯ ಪ್ರಾಣಪ್ರತಿಷ್ಠೆಗಾಗಿ ಕನ್ನಡಿಗರು ತಮ್ಮ ಸರ್ವಸ್ವವನ್ನೂ ಬಲಿದಾನಮಾಡಲು ಸೊಂಟಕಟ್ಟುತ್ತಿದ್ದಾರೆ ಎಂಬುದೆ ಈ ಆರಾಧನೆಯ ಅರ್ಥ. ಕನ್ನಡಿಗರ ಸರ್ವತೋಮುಖವಾದ ಏಳ್ಗೆಯೆ ಈ ಉತ್ಸಾಹದ ಉದ್ದೇಶ. ಕನ್ನಡ ನೆಲದೊಗ್ಗಟ್ಟಿಗಾಗಿ, ಕನ್ನಡ ನುಡಿಯ ನಡೆಯ ನಯದ ಸಿರಿಯೊಗ್ಗಟ್ಟಿಗಾಗಿ ಕಂಕಣಬದ್ಧರಾಗಿ, ಶಕ್ತಿ ಸಿಡಿಯೆ ದುಡಿದು, ಭಕ್ತಿಯುಕ್ಕಿ ಬಯಸುತ್ತೇವೆ ಎಂಬ ದೃಢಮನಸ್ಸಿನ ರಥೋತ್ಸವಕ್ಕಾಗಿಯೆ ನಾವಿಂದು ಒಂದುಗೂಡಿದ್ದೇವೆ.

ತಪಃಪೂರ್ಣವಾಯಿತೆಂದರೆ ಒಬ್ಬನ ಇಚ್ಛೆಯೆ ಅಘಟನ ಘಟನಕಾರಿಯಾಗುತ್ತದೆ ಎಂದ ಮೇಲೆ ಅನೇಕರು ಒಮ್ಮನಸ್ಸಿನಿಂದ ಇಚ್ಛಿಸಿದರೆ ಆಗಬಹುದಾದದು ಆಗದಿರುತ್ತದೆಯೆ? ಕೋಟಿ ಕೈಗಳು ಒಂದಕ್ಕೊಂದು ಸೇರಿದರೆ ಸ್ವರ್ಗದ ಕಲ್ಪವೃಕ್ಷದ ದೇವಫಲಗಳನ್ನೂ ನೆಲಕ್ಕುರುಳಿಸುವ ದೋಟಿಯಾಗಲಾರದೆ? ಒಬ್ಬನು ಕೂಗಿದರೆ ನೆರೆಮನೆಗೂ ಕೇಳಿಸದೆ ಇರಬಹುದು. ನಾಡೆಲ್ಲ ನೆರೆದು ಒಕ್ಕೊರಲಾಗಿ ಕರೆದರೆ ಆ ಧ್ವನಿ ಉದಾಸೀನ ಪೃಥ್ವಿಯ ಪರ್ವತಕಾನನಗಳಿಂದ ಪ್ರತಿಧ್ವನಿತವಾಗಿ, ಸಾಗರದ ಘೋಷವನ್ನೂ ಮಿಕ್ಕುಮೀರಿ, ಅಂತರಿಕ್ಷದ ದೇವತೆಗಳ ಕಿವುಡನ್ನೂ ಹೊಡೆದೆಬ್ಬಿಸುವುದಿಲ್ಲವೆ? ಹಾಗೆ ಮಾಡುತ್ತದೆಂದೇ ನಂಬಿ ನಾವಿಂದು ದೇಶದೇವಿಯ ತೇರೆಳೆಯಲೆಂದು ಇಲ್ಲಿ ಸೇರಿದ್ದೇವೆ. ಮತ್ತು ಆ ಹೆಮ್ಮೆಯ ಹಬ್ಬಕ್ಕೆ ಕನ್ನಡಮ್ಮನ ಕಂದರನ್ನೆಲ್ಲ ಕೂಗಿ ಕರೆಯುತ್ತಿದ್ದೇವೆ.

ಇತ್ತೀಚೆಗೆ ಜನಾಂಗಗಳ ಜೀವನದಲ್ಲಿ ಕಾರ್ಯಕಾರಿಯಲ್ಲದ ಉದಾರ ಅಸ್ಪಷ್ಟತೆಗೆ ಬದಲಾಗಿ ಫಲಕಾರಿಯಾದ ಸ್ಪಷ್ಟತೆ ಮೂಡುತ್ತಿದೆ. ಏಕೆಂದರೆ, ಬಲಿಷ್ಠರ ಔದಾರ್ಯದಲ್ಲಿ ಔದಾರ್ಯಕ್ಕಿಂತಲೂ ಹೆಚ್ಚಾಗಿ ಬಲವೇ ಪ್ರಕಾಶಿತವಾಗುತ್ತದೆ. ಔದಾರ್ಯವೇಷಿಯಾದ ಬಲವು ತಿಂಡಿಯಿಂದ ತನ್ನ ಕೊಂಡಿಯನ್ನು ಮರೆಮಾಡಿ ಕೊಂಡಿರುವ ಗಾಳದಂತೆ ಮೃತ್ಯುಕರವಾದುದು. ಅದರಿಂದ ಹೊಟ್ಟೆ ತುಂಬುವುದಕ್ಕೆ ಬದಲು ಗಂಟಲು ಹರಿದುಹೋಗುತ್ತದೆ. ಆದ್ದರಿಂದಲೆ ಆ ಆಕಾಶದೆತ್ತರದ ಆದರ್ಶದಿಂದ ಒಂದಿನಿತು ಚ್ಯುತಿಗೊಂಡರೂ ಚಿಂತೆಯಿಲ್ಲವೆಂದು ಭಾವಿಸಿ ಜನಾಂಗಗಳು ತಮ್ಮತಮ್ಮ ಸ್ವಾಸ್ಥ್ಯಗಳನ್ನು ಭದ್ರಪಡಿಸಿಕೊಳ್ಳಲು ಹವಣಿಸುತ್ತಿವೆ. ದೊಡ್ಡದೊಡ್ಡವರು ದೊಡ್ಡದೊಡ್ಡ ವಿಧಾನಗಳಿಂದ ಪ್ರಯತ್ನಿಸುತ್ತಿರುವಂತೆ ಸಣ್ಣವರು ಸಣ್ಣ ರೀತಿಯಿಂದ ಕಾರ್ಯಸಾಧನೆಯಲ್ಲಿ ಸಾಹಸಿಗಳಾಗಿದ್ದಾರೆ. ಇಂದು ಇಲ್ಲಿ ನೆರೆದಿರುವ ನಾವೆಲ್ಲರೂ, ತಿಳಿದೋ ಅಥವಾ ತಿಳಿಯದೆಯೋ, ಅಂತಹ ಸಾಹಸಿಗಳ ಗುಂಪಿಗೆ ಸೇರಿದವರಾಗಿದ್ದೇವೆ. ಅದನ್ನು ಭಾವಿಸುವ ನನ್ನ ಹೃದಯದಲ್ಲಿ ಹೇಗೆ ಹೆಮ್ಮೆಯ ಬುಗ್ಗೆ ಚಿಮ್ಮುತ್ತಿದೆಯೊ ಹಾಗೆಯೆ ನಿಮ್ಮೆಲ್ಲರ ಹೃದಯಗಳಲ್ಲಿಯೂ ಅದು ಚಿಮ್ಮುತ್ತಿದೆಯೆಂದು ನಾನು ಬಲ್ಲೆ.

ಸಮಸ್ತ ಭರತಖಂಡವೂ ಒಂದು ಕೊರಲಾಗಿ, ಒಂದು ಮೈಯಾಗಿ, ಕೋಟ್ಯನು ಕೋಟಿ ಕೈಗಳಿಂದ ಸಾಹಸಮಾಡುತ್ತಿದೆ. ತನ್ನ ಸ್ಪಷ್ಟತೆಯನ್ನು ಪ್ರಕಟಿಸುವುದಕ್ಕೆ. ಬಲಿಷ್ಠರ ಔದಾರ್ಯದ ಉದರದಲ್ಲಿ ನೆಮ್ಮದಿಯಾಗಿ ನಿದ್ರಿಸುವುದಕ್ಕೆ ಅದಕ್ಕೆ ಮನಸ್ಸಿಲ್ಲ. ಆ ಸ್ವಾತಂತ್ರ್ಯ ಸಂಪಾದನೆಯ ವಿಚಾರದಲ್ಲಿ ಯಾವನೊಬ್ಬ ದೇಶಭಕ್ತ ಭಾರತೀಯನಲ್ಲಿಯೂ ಭಿನ್ನಾಭಿಪ್ರಾಯವಿಲ್ಲ. ಸ್ವಾತಂತ್ರ್ಯದೇವಿಯ ಆರಾಧನೆಗೆ ಆವಶ್ಯಕವಾದ ನೈವೇದ್ಯಗಳೆಲ್ಲವನ್ನೂ ಅರ್ಪಿಸಲು ಬಲ್ಲವರೆಲ್ಲರೂ ಸಿದ್ಧರಾಗಿದ್ದಾರೆ. ಅದು ಅತ್ಯಂತ ಅಗ್ರಗಣ್ಯ ವಿಷಯವೆಂಬುದನ್ನು ಎಲ್ಲರೂ ಒಪ್ಪುತ್ತಾರೆ.

ಆದರೆ, ಸೆರೆಮನೆಯಿಂದ ಬಿಡುಗಡೆ ಬಯಸುವ ಸೆರೆಯಾಳು ತನ್ನ ಅಂಗಗಳ ಆರೋಗ್ಯದ ವಿಚಾರದಲ್ಲಿ ಅಲಕ್ಷ್ಯಮಾಡಿದರೆ ಅವಿವೇಕವಾಗುತ್ತದೆ. ಅವನ ಒಟ್ಟು ಮೈ ಸೆರೆಯಿಂದ ಹೊರಗೆ ಬರಬೇಕಾದುದು ಅವಶ್ಯ. ಆದರೆ ಸೆರೆಯಿಂದ ಹೊರಗೆ ಬಂದ ಮೇಲೆ, ಅವನು ಹೊಸದಾಗಿ ಪಡೆದ ಸ್ವಾತಂತ್ರ್ಯವು ಸಾರ್ಥಕವಾಗಬೇಕಾದರೆ ಅವನ ಅಂಗೋಪಾಂಗಗಳೆಲ್ಲವುಗಳ ಯೋಗಕ್ಷೇಮವೂ ಅತ್ಯಗತ್ಯ. ಉಪಾಂಗಗಳು ರೋಗಪೀಡಿತವಾಗಿದ್ದರೂ ದುರ್ಬಲವಾಗಿದ್ದರೂ ಅವನು ಅಸೀಮ ಸಾಹಸದಿಂದ ಗೆದ್ದುಕೊಂಡ ಆ ಸ್ವಾತಂತ್ರ್ಯ ನಿರರ್ಥಕವಾಗುತ್ತದೆ.

ಅದರಂತೆಯೆ ವಿರಾಡ್ರೂಪಿಣಿಯಾದ ಭರತಮಾತೆಯನ್ನು ಬಂಧನಮುಕ್ತಳನ್ನಾಗಿ ಮಾಡುವುದಕ್ಕೆ ನಾನಾ ಪ್ರಾಂತಗಳ ಆಕೆಯ ಪುತ್ರರೆಲ್ಲರೂ ಒಟ್ಟುಗೂಡಿ ದುಡಿಯಬೇಕು ಎನ್ನುವ ವಿಚಾರದಲ್ಲಿ ಯಾರಲ್ಲಿಯೂ ಎರಡುಮನಸ್ಸಿಲ್ಲ. ಆದರೆ ಆಕೆಯ ತನುಜಾತೆಯರಂತಿರುವ ಪ್ರಾಂತಗಳೆಲ್ಲವೂ ಬಹುಕಾಲದಿಂದಲೂ ಬೆಳೆಯಿಸಿಕೊಂಡು ಬಂದ ತಮ್ಮ ತಮ್ಮ ಸಂಪದ್ಯುಕ್ತವಾದ ವ್ಯಕ್ತಿತ್ವಗಳನ್ನೆಲ್ಲ ಬಲಿಗೊಡಬೇಕು ಎಂಬ ರಾಜಕೀಯಾದ್ವೈತವಾದವು ಅನೇಕ ಸದಭಿಪ್ರಾಯದ ಮತ್ತು ಸದ್ಬುದ್ಧಿಯ ಶ್ರದ್ಧಾಳುಗಳಿಗೆ ಅರ್ಥವಾಗುತ್ತಿಲ್ಲ; ಅಲ್ಲದೆ ವಿಲಕ್ಷಣವಾಗಿಯೂ ತೋರುತ್ತಿದೆ.

ಭರತಖಂಡವು ಒಂದು ಜನಾಂಗವೂ ಅಲ್ಲ, ಅನೇಕ ಜನಾಂಗಗಳೂ ಅಲ್ಲ; ಅದು ಅನೇಕ ಜನಾಂಗಗಳ ಒಂದು ಜನಾಂಗ. ಆದ್ದರಿಂದಲೆ ಭರತಮಾತೆಯನ್ನು ಎಷ್ಟರಮಟ್ಟಿಗೆ ಆರಾಧಿಸುತ್ತಿದ್ದೇವೆಯೋ ಅಷ್ಟರಮಟ್ಟಿಗೇ ಕರ್ನಾಟಕ ಮಾತೆಯನ್ನೂ ಪೂಜಿಸಲು ನಮಗೆ ಸಾಧ್ಯವಾಗಿದೆ. ತನ್ನ ಸಂಸಾರವನ್ನು ಪ್ರೀತಿಸಿದ ಮಾತ್ರದಿಂದಲೆ ಯಾರೂ ಸಮಾಜಕ್ಕೆ ವೈರಿಯಾಗಲಾರನು. ಸಮಾಜವೆಂದರೇನು? ಅಂತಹ ಅಸಂಖ್ಯ ಸಂಸಾರಗಳ ಕೂಟವಲ್ಲವೆ? ಎಲ್ಲ ಸಂಸಾರಗಳ ಸುಖವೆ ತಾನೆ ಒಟ್ಟು ಸಮಾಜದ ಸುಖ! ಎಲ್ಲ ಪ್ರಾಂತಗಳ ಅಂಗಸೌಂದರ್ಯದಿಂದ ತಾನೆ ಭರತಮಾತೆ ಸರ್ವಾಂಗ ಸುಂದರಿಯಾಗುತ್ತಾಳೆ! ಇಡೀ ಮನುಷ್ಯನನ್ನು ಜೈಲಿನಿಂದ ಹೊರಗೆ ಬಿಟ್ಟು, ಅವನ ಅಂಗಾಂಗಗಳಿಗೆ ಬೇರೆಬೇರೆಯಾಗಿ ಸಂಕೋಲೆಗಳನ್ನು ಬಿಗಿದರೆ ಅವನು ಸ್ವತಂತ್ರನೆನಿಸಿಕೊಳ್ಳುವುದಿಲ್ಲ. ಆದುದರಿಂದ ಪ್ರಾಂತ ಪ್ರಾಂತಗಳ ವ್ಯಕ್ತಿತ್ವ ರಕ್ಷಣೆಗೆ ಸ್ವಾತಂತ್ರ್ಯವೂ ಭರತಖಂಡದ ಪೂರ್ಣ ಸ್ವಾತಂತ್ರ್ಯದಷ್ಟೇ ಅವಶ್ಯವಾದುದು. ಆದರೆ ಪ್ರತಿಯೊಂದು ಪ್ರಾಂತ್ಯಕ್ಕೂ ಅದರ ಬೆಳೆ, ಅದರ ಕೈಗಾರಿಕೆ, ಅದರ ಹಣಕಾಸಿನ ವ್ಯವಸ್ಥೆ, ಅದರ ನಡೆ, ನುಡಿ, ಸಾಹಿತ್ಯ, ಸಂಸ್ಕೃತಿ ಮೊದಲಾದುವುಗಳನ್ನು ಕಾಪಾಡಿಕೊಳ್ಳುವ ಹಕ್ಕು ಅದಕ್ಕೆ ಬೇಕೇಬೇಕಾಗುತ್ತದೆ. ಆ ಹಕ್ಕಿಗೆ ಭಂಗ ಬಂದರೆ, ಭರತಖಂಡವು ಸಂಪೂರ್ಣ ಸ್ವರಾಜ್ಯವನ್ನು ಸಂಪಾದಿಸಿದರೂ ಆ ಸ್ವಾತಂತ್ರ್ಯವು ಭಗ್ನದರ್ಪಣವಾಗುತ್ತದೆ; ಅಂತಃಕಲಹದ ವಿಕಾರವನ್ನು ಮಾತ್ರ ವಿಕಾರವಾಗಿ ಪ್ರತಿಬಿಂಬಿಸುವ ಒಡೆದ ಕನ್ನಡಿಯಾಗುತ್ತದೆ.

ಹಾಗಾಗಬೇಕೆಂದು ಯಾವ ದೇಶಭಕ್ತನೂ ಹಾರೈಸುವುದಿಲ್ಲ. ಹಾಗಾಗದಿರುವಂತೆ ನೋಡಿಕೊಳ್ಳುವುದು ನಮ್ಮ ಪರಮ ಪ್ರಾಣಕರ್ತವ್ಯ. ಕರ್ನಾಟಕದ ಏಕೀಕರಣಕ್ಕೂ ಕನ್ನಡಸಾಹಿತ್ಯದ ಪುನರುಜ್ಜೀವನಕ್ಕೂ ಕನ್ನಡ ಸಂಸ್ಕೃತಿಯ ಪುನಃಪ್ರಕಾಶನಕ್ಕೂ ಎಡೆಬಿಡದೆ ಮನಮುಟ್ಟಿ ದುಡಿಯುವುದರಿಂದಲೇ ಅಂತಹ ಕರ್ತವ್ಯಪಾಲನೆ ಮಾಡಿದಂತಾಗುತ್ತದೆ.

ಮಕ್ಕಳೆಲ್ಲ ಮನಸ್ಸು ಮಾಡಿದರೆ ನಾಡತಾಯಿ ಮೂಡುತ್ತಾಳೆ. ಅದೃಶ್ಯವಾದವಳು ಪ್ರತ್ಯಕ್ಷವಾಗುತ್ತಾಳೆ. ಅರೂಪವಾಗಿರುವ ಆಕೆಯ ಆತ್ಮಶಕ್ತಿ ಬೃಹದಾರಕಾರದಿಂದ ಗೋಚರವಾಗುತ್ತದೆ. ಆಕೆ ಕವಿಕಲ್ಪನೆಯ ಮಿಥ್ಯಾಸೃಷ್ಟಿಯೆಂದು ಯಾರೂ ತಿಳಿಯದಿರಲಿ. ಏಕೆಂದರೆ, ಬರಿಯ ಮಿಥ್ಯೆಯಿಂದ ಶಕ್ತಿ ಗೋಚರವಾಗದು. ಸುಂಟರಗಾಳಿಯನ್ನು ನೀವೆಲ್ಲರೂ ನೋಡಿದ್ದೀರಿ. ಗಾಳಿಯನ್ನು ಕಂಡಿದ್ದೀರಿ ಎಂದರೆ ಆಶ್ಚರ್ಯವಾಗುತ್ತದೆ. ಆದರೂ ಸುಂಟರಗಾಳಿಯನ್ನು ನೋಡಿದ್ದೇವೆ. ಆ ಅನಿಲಶಕ್ತಿ ತಿರ್ರನೆ ತಿರುಗುವಾಗ ಧೂಳು ತರಗೆಲೆ ಕಸಕಡ್ಡಿಗಳನ್ನೆಲ್ಲ ಸುತ್ತಿಸುತ್ತ ಹೊತ್ತುಕೊಂಡು ಮೇಲೇಳುತ್ತದೆ. ಆಗ ನಮಗೆ ಸುಂಟರಗಾಳಿಯ ಇರವು ದೃಗ್ಗೊಚರವಾಗುತ್ತದೆ. ಹಾಗೆಯೆ ದೇಶದೇವಿಯ ಕೃಪಾಶಕ್ತಿ ತಿರ್ರನೆ ತಿರುಗುತ್ತಾ ಮೇಲೆದ್ದಿತೆಂದರೆ ಜಡವಾಗಿ ಹುಡಿಯಲ್ಲಿ ಹೊರಳುತ್ತಿರುವ ಬಣಗು ತೃಣಕಣ ಕಸಕಡ್ಡಿಗಳೆಲ್ಲ ಸಶಕ್ತವಾಗಿ, ಸಪ್ರಾಣವಾಗಿ, ಸಚೇತನವಾಗಿ ಊರ್ಧ್ವಗಾಮಿಗಳಾಗಿ ಮುಗಿಲಿಗೇರಿ ಲೋಕದೃಷ್ಟಿಯನ್ನೆ ಸೂರೆಗೊಳ್ಳುತ್ತವೆ. ಆ ಶಕ್ತಿ ವಲಯಕ್ಕೆ ಸಿಕ್ಕುವ ಪ್ರತಿಯೊಬ್ಬನೂ, ಬಡವನಾಗಲಿ ದೊಡ್ಡವನಾಗಲಿ, ಪ್ರಸಿದ್ಧನಾಗಲಿ ಅಪ್ರಸಿದ್ಧನಾಗಲಿ, ಜಾತಿ ಕುಲ ವಯಸ್ಸುಗಳ ತಾರತಮ್ಯವಿಲ್ಲದೆ ಗಗನಕ್ಕೇರುತ್ತಾನೆ; ಕೃತಾರ್ಥನಾಗುತ್ತಾನೆ; ಧನ್ಯನಾಗುತ್ತಾನೆ.

ಕನ್ನಡದ ನೆಲದೊಗ್ಗಟ್ಟಿಗಾಗಿ ಕರ್ನಾಟಕ ಏಕೀಕರಣದ ರಾಜಕೀಯ ಚಳವಳಿ ನಡೆಯುತ್ತಿದೆ. ಕನ್ನಡದ ನಡೆಯ ಮತ್ತು ನುಡಿಯ ಒಗ್ಗಟ್ಟಿಗಾಗಿ ಸಾಹಿತ್ಯದ ಸಾಂಸ್ಕೃತಿಕ ಚಳವಳಿ ಮುಂಬರಿಯುತ್ತಿದೆ. ಕನ್ನಡನಾಡಿನ ಸಿರಿಯ ಎಳ್ಗೆಗಾಗಿ ಆರ್ಥಿಕ ಚಳವಳಿ ಇನ್ನೂ ಸಾಕಷ್ಟು ನಡೆದಿಲ್ಲ; ಇನ್ನೂ ಸ್ಪಷ್ಟವಾಗಿ ರೂಪುಗೊಂಡಿಲ್ಲ. ಆದರೆ ಅದೂ ಇಂದೋ ನಾಳೆಯೋ ರೂಪುಗೊಳ್ಳಲೇಬೇಕಾಗಿದೆ. ಕನ್ನಡನಾಡಿನಲ್ಲಿ ಕನ್ನಡಿಗರ ಬ್ಯಾಂಕುಗಳೂ ಕನ್ನಡಿಗರ ಜೀವವಿಮಾ ಕಂಪೆನಿಗಳೂ ಕನ್ನಡಿಗರ ಕಾರ್ಖಾನೆಗಳೂ ಕನ್ನಡಿಗರ ಕೈಗಾರಿಕೆಗಳೂ ಮತ್ತು ಕನ್ನಡಿಗರ ವ್ಯಾಪಾರಸಂಸ್ಥೆಗಳೂ ಹುಟ್ಟಿ ಬೆಳೆದು ಕರ್ಣಾಟಕದ ಸಂಪದಭ್ಯುದಯದ ಮಟ್ಟವನ್ನು ಮೇಲ್ಗೊಳಿಸಬೇಕಾದರೆ, ನಮ್ಮವರು ಕಣ್ಣುಮುಚ್ಚಿಕೊಂಡು ಹೊರನಾಡಿಗರ ಕೈ ಬಾಯಿ ತುಂಬುವ ತಮ್ಮ ದಾನಶೌರ್ಯದ ವಿಚಾರದಲ್ಲಿ ಇನ್ನೂ ಸ್ವಲ್ಪ ಹೆಚ್ಚಿನ ವಿವೇಚನೆಯಿಂದ ವರ್ತಿಸಬೇಕಾಗಿರುವ ಕಾಲ ಈಗಲೀಗ ಬಂದಿದೆ.

ರಾಜಕೀಯ ಮತ್ತು ಆರ್ಥಿಕ ದೃಷ್ಟಿಯಿಂದ ಕರ್ನಾಟಕ ಏಕೀಕರಣವು ಅತ್ಯಾವಶ್ಯಕವಾದುದಾದರೂ, ಸಾಧ್ಯದೂರವಲ್ಲದಿದ್ದರೂ, ಸದ್ಯಕ್ಕೆ ದೂರಸಾಧ್ಯವಾಗಿದೆ. ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯಗಳ ದೃಷ್ಟಿಯಿಂದ ಆ ಪ್ರಯತ್ನಕ್ಕೆ ಪ್ರತಿನಿಧಿಯಾಗಿ ಕೇಂದ್ರಸಂಸ್ಥೆಯಾಗಿರುವ ಪರಿಷತ್ತೂ, ಆ ಉದ್ಯಮವನ್ನೇ ವಿಧ ವಿಧ ರೀತಿಗಳಿಂದ ಸಫಲಗೊಳಿಸುತ್ತಿರುವ ನೂರಾರು ಕರ್ನಾಟಕ ಸಂಘಗಳೂ, ಸಂಸ್ಥೆಗಳ ಮುಖಾಂತರವಾಗಿಯೊ ಅಥವಾ ಪ್ರತ್ಯೇಕವಾಗಿಯೊ ನಿರಂತರವೂ ಆ ವ್ರತಸಾಧನೆಯಲ್ಲಿಯೆ ದೀಕ್ಷೆಗೊಂಡಿರುವ ಇತರ ಮಹಾನುಭಾವ ವ್ಯಕ್ತಿಗಳೂ ಕೆಲಕಾಲದಲ್ಲಿಯೆ ಆ ಕನಸನ್ನು ನನಸುಗೊಳಿಸುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ. ತಾವೆಲ್ಲರೂ ಅವರಿಗೆ ನೆರವಾದರೆ ಅವರ ತಪಸ್ಸಿದ್ಧಿ ಶೀಘ್ರ ಸಾಧ್ಯವಾಗುತ್ತದೆ.

ರಾಜಕೀಯ ದೃಷ್ಟಿಯಿಂದ ಭೌಗೋಲಿಕ ಕರ್ನಾಟಕವು ಹರಿಹಂಚಿಹೋಗಿದ್ದರೂ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಇವುಗಳ ದೃಷ್ಟಿಯಿಂದ ಕನ್ನಡನಾಡಿನ ನಿಜ ಬೆಸುಗೆ ಇನ್ನೂ ಬಿಚ್ಚಿ ಬಿರಿದಿಲ್ಲ. ಕನ್ನಡ ನೆಲವು ನಾಲ್ಕಾರು ಸರಕಾರಗಳ ಬೇರೆಬೇರೆ ಆಧಿಪತ್ಯಕ್ಕೆ ಈಡಾಗಿ ಬಿರಿದಿದ್ದರೂ ಕನ್ನಡಿಗರೊಲವು ಎಕಚ್ಛತ್ರಾಶ್ರಯದಲ್ಲಿದೆ. ಕರ್ನಾಟಕಕ್ಕೆ ಅಖಂಡವಾದ ಭೂಸಾಮ್ರಾಜ್ಯವಿನ್ನೂ ಸಿದ್ಧವಾಗದಿದ್ದರೂ ಸಾಹಿತ್ಯ ಸಾಮ್ರಾಜ್ಯವೇನೊ ಸಿದ್ಧವಾಗಿದೆ. ಎಲ್ಲಿಯವರೆಗೆ ಕನ್ನಡಿಗರೆಲ್ಲರೂ, ಅವರು ಎಲ್ಲಿಯೆ ಇರಲಿ, ಪಂಪ ರನ್ನ ನಾಗವರ್ಮ ರಾಘವಾಂಕ ನಾರಣಪ್ಪ ಲಕ್ಷ್ಮೀಶ ಮೊದಲಾದ ಕವಿವರ್ಯರ ಸಾಹಿತ್ಯ ಸಿಂಹಾಸನಕ್ಕೆ ತಲೆಬಾಗುತ್ತಾರೋ ಅಲ್ಲಿಯವರೆಗೆ ಕನ್ನಡ ಸಾಮ್ರಾಜ್ಯಕ್ಕೆ ಚ್ಯುತಿಯಿಲ್ಲ. ನುಡಿಯೊಲ್ಮೆಯೊಂದಿದ್ದರೆ ದೇಶದೇವಿಯ ಗುಡಿಯ ಕಟ್ಟಡದ ಕಲ್ಲುಗಳ ಬೆಸುಗೆಗೆ ವಜ್ರಗಾರೆಯಾಗುತ್ತದೆ. ಆ ಒಲ್ಮೆ ಮಡಿದಂದು ಕಟ್ಟಡದ ಕಲ್ಲುಗಳು ಸಡಿಲಗೊಂಡು ಗುಡಿ ಕೆಳಕ್ಕುರುಳಿ ನೆಲಸಮವಾಗುತ್ತದೆ. ಸುಡೆಟಾನ್ ಪ್ರಾಂತವು ಜರ್ಮನೇತರ ಸರ್ಕಾರಕ್ಕೆ ಇಪ್ಪತ್ತು ವರ್ಷಗಳಿಂದ ಸೇರಿಹೋಗಿದ್ದರೇನಂತೆ? ಎಲ್ಲಿಯವರೆಗೆ ಆ ಪ್ರಾಂತದ ಜರ್ಮನರು ತಮ್ಮ ಭಾಷೆ, ತಮ್ಮ ಸಾಹಿತ್ಯ, ತಮ್ಮ ಸಂಸ್ಕೃತಿ, ತಮ್ಮ ಗಯಟೆ, ತಮ್ಮ ಷಿಲರ್ ಎಂಬ ಅಭಿಮಾನವನ್ನು ಸಜೀವವಾಗಿಟ್ಟುಕೊಂಡಿದ್ದರೋ ಅಲ್ಲಿಯವರೆಗೆ ಅವರು ಸೂಕ್ಷ್ಮವೂ ಶಾಶ್ವತತರವೂ ಆದ ನೈಜ ಜರ್ಮನ್ ಸಾಮ್ರಾಜ್ಯಕ್ಕೆ ಸೇರಿದವರಾಗಿಯೆ ಇದ್ದರು. ಕೃತಕವಾದ ರಾಜಕೀಯ ವಿಭಜನೆ ನೈಜವಾದ ಸಂಸ್ಕೃತಿಯ ಏಕತೆಯನ್ನು ಎಂದಿಗೂ ಶಾಶ್ವತವಾಗಿ ನಾಶಮಾಡಲಾರರು. ಇಂದಲ್ಲ ನಾಳೆ ನೈಜಕ್ಕೆ ಜಯವಿದೆ. ಕೃತಕಕ್ಕೆ ಪತನವಿದೆ. ಆದ್ದರಿಂದ ವಿವಿಧ ರಾಜಕೀಯ ವಿಭಾಗಗಳಲ್ಲಿ ಹರಿಹಂಚಿಹೋದ ಕರ್ಣಾಟಕದ ಉದಾರಹೃದಯದ ಜನರಲ್ಲಿ ನುಡಿಯೊಲ್ಮೆಯ ಕಿಡಿ ಕೆಡದಂತೆ ನಿರಂತರವೂ ಸಾವೇಶಪ್ರೋತ್ಸಾಹವೀಯ ಬೇಕಾದುದು ಕರ್ನಾಟಕದ ಪುನರುತ್ಥಾನಕ್ಕಾಗಿ ದುಡಿಯಲು ದೀಕ್ಷೆಗೊಂಡ ತಪಸ್ವಿಗಳೆಲ್ಲರ ಕರ್ತವ್ಯ. ಏಕೆಂದರೆ, ನುಡಿ ಬಿಟ್ಟರೆ ನಾಡು ಬಿಟ್ಟಂತೆ. ಭಾಷೆಗೇಡಿ ದೇಶಗೇಡಿಯೂ ಆಗುತ್ತಾನೆ. ಅನಿವಾರ್ಯ.

ತಪಸ್ಸು ನಿರ್ವಿಘ್ನವಾಗಿ ಸಾಗುವುದು ಅಪೂರ್ವವಂತೆ; ಪುರಾಣಕಥೆಗಳನ್ನು ನೋಡಿದರೆ, ಅಸಂಭವವೆಂದರೂ ಎನ್ನಬಹುದು. ಬಹುಶಃ ತಪಸ್ಸಿನ ಬೆಂಕಿಗೆ ವಿಘ್ನದ ಕಟ್ಟಿಗೆ ಆವಶ್ಯಕವೊ ಏನೊ! ಪ್ರತಿಯೊಬ್ಬ ವಿಶ್ವಾಮಿತ್ರನಿಗೂ ತಪೋಭಂಗಕಾರಿಣಿಯಾದ ಮೇನಕೆ ಎಲ್ಲಿಂದಲೊ ಬರುತ್ತಾಳೆ! ಕನ್ನಡ ನುಡಿಯೊಗ್ಗಟ್ಟಿನ ವಿಶ್ವಾಮಿತ್ರನ ತಪಸ್ಸಿಗೂ ಅಪ್ಸರಿಯರಿಂದ ಅಪಾಯ ತಪ್ಪಿದ್ದಲ್ಲ. ಅಪಾಯ ಬರುವುದು ಅಪ್ಸರಿಯಿಂದಲ್ಲ; ಅಪ್ಸರಿಯ ಸಂಗದಿಂದ ತಪೋಭಂಗವಾಗುವುದಿಲ್ಲ ಎಂಬ ಬಿನ್ನಾಣದ ವಾದದಿಂದ. ಅಂತಹ ವಾದವು ಅದೂರ ದೃಷ್ಟಿಯ, ಅಲ್ಪಮತಿಯ, ಅನುಭವಹೀನತೆಯ ಆತ್ಮ ವಂಚನೆಯಲ್ಲದೆ ಮತ್ತೇನು? ಅಲಂಕಾರದ ತೆರೆಯನ್ನೆತ್ತಿ ಅದರ ಹಿಂದುಗಡೆಯ ಕಠೋರ ಸತ್ಯವನ್ನು ಪ್ರದರ್ಶಿಸುವುದಕ್ಕೆ ಈ ಲಲಿತ ಸನ್ನಿವೇಶದಲ್ಲಿ ನನಗೆ ಮನಸ್ಸು ಬರುವುದಿಲ್ಲ. ಆದರೂ ಇಷ್ಟು ಮಾತ್ರ ಹೇಳುತ್ತೇನೆ:

ತಮ್ಮ ಮನೆಯ ನೆಮ್ಮದಿಯ ವಿಷಯದಲ್ಲಿ ಹೆರರ ಮಾತು ಸಲಹೆಯಾಗಿರಬೇಕೇ ಹೊರತು ವೇದವಾಕ್ಯವಾಗಿರಬಾರದು. ಏಕೆಂದರೆ, ನಮ್ಮ ಕಷ್ಟ ಸಂಕಟಗಳೂ ಆಸೆ ಬಯಕೆಗಳೂ ಅನ್ಯರ ಮನಸ್ಸಿಗೆ ಸಂಪೂರ್ಣವಾಗಿ ಬರಲಾರವೆಂದೇ ತೋರುತ್ತದೆ.

ಕನ್ನಡ ಜನತೆ ಎಚ್ಚತ್ತಿದೆ; ಕನ್ನಡ ಸಾಹಿತ್ಯ ಆ ಎಚ್ಚರವನ್ನು ಮರುಬಿಂಬಿಸುತ್ತಿದೆ ಮತ್ತು ಹುರುಪುಗೊಳಿಸುತ್ತಿದೆ; ಲೇಖಕರು ಹೆಚ್ಚು ಹೆಚ್ಚು ಆಸಕ್ತಿಯಿಂದ ವಿಜ್ಞಾನ ವ್ಯಾಪಾರಾದಿ ಶಾಸ್ತ್ರವಿಷಯಗಳನ್ನು ಕುರಿತು ಗ್ರಂಥಗಳನ್ನು ಬರೆಯುತ್ತಿರುವಂತೆಯೆ ಜನರೂ ಅವುಗಳನ್ನು ಕೊಂಡು, ಓದಿ, ಮುಂದುವರಿಯುತ್ತಿದ್ದಾರೆ ಎಂಬ ನಂಬುಗೆ ಹಬ್ಬುತ್ತಿದೆ. ಜನರ ಸಾಹಿತ್ಯೋತ್ಸಾಹಕ್ಕೆ ಮಾಪನ ಯಂತ್ರಗಳಂತಿರುವ ಪುಸ್ತಕವ್ಯಾಪಾರಿಗಳನ್ನೂ ಪತ್ರಿಕಾ ಸಂಪಾದಕರುಗಳನ್ನೂ ಕೇಳಿ ತಿಳಿಯುವವರಿಗೆ ಮಾತ್ರ ಆ ನಂಬುಗೆ ಸ್ವಲ್ಪಮಟ್ಟಿಗಾದರೂ ಅತಿಶಯೋಕ್ತಿಯಾಗಿರುವಂತೆ ತೋರುತ್ತದೆ. ಈ ಅಪನಂಬಿಕೆ ಶಿವಮೊಗ್ಗೆಯಂತಹ ಸುಶಿಕ್ಷಿತ ನಾಗರಿಕ ನಗರಕ್ಕೆ ಅನ್ವಯಿಸದಿರಬಹುದು. ಆದರೆ ಶಿವಮೊಗ್ಗೆಯೊಂದರ ಜಾಗ್ರತಿ ಸಮಸ್ತ ಕರ್ನಾಟಕದ ಜಾಗ್ರತಿಯಲ್ಲ. ಶಿವಮೊಗ್ಗೆಯ ಜನರನ್ನು ತೃಪ್ತಿಗೊಳಿಸಿ ಮೆಚ್ಚಿಸುವುದಕ್ಕಲ್ಲ ಈ ಪ್ರಶಂಸೆ, ಅವರನ್ನು ಇನ್ನೂ ಕಾರ್ಯೋನ್ಮುಖರನ್ನಾಗಿ ಮಾಡುವುದಕ್ಕೆ.

ಸಾಹಿತ್ಯಪ್ರಚಾರವು ಆವೇಶದಾವಾಗ್ನಿಯ ಪ್ರಸಾರವೆಂದು ತಿಳಿಯಿರಿ. ವಾಙ್ಮಂತ್ರ ಶಕ್ತಿಗೆ ಶಿಲೆ ಸಜೀವವಾಗುತ್ತದೆ; ನುಡಿಕಲೆಯ ಹೊಳೆಯಲ್ಲಿ ಮಿಂದು ಹೊಲೆ ಹೊಸ ಮಡಿಯಾಗುತ್ತದೆ.

ಕರ್ಣಾಟಕ ಭಕ್ತರಲ್ಲಿ, ಕನ್ನಡ ಸಾಹಿತ್ಯ ಸೇವಕರಲ್ಲಿ ಕನ್ನಡಮ್ಮನ ಮಕ್ಕಳಲ್ಲಿ ಆ ನಾಡದೇವಿಯ ಉಪಾಸಕನಾದ ಕಬ್ಬಿಗನೊಬ್ಬನು ಇಂತೆಂದು ಪ್ರಜ್ಞಾಪಿಸುತ್ತಿದ್ದಾನೆ:

ನಾವು ತೋರಿಸುತ್ತಿರುವ ಆಸಕ್ತಿ ಶ್ಲಾಘನೀಯವಾಗಿದೆ; ಆದರೂ ಸಾಲದಾಗಿದೆ.

ನಮ್ಮ ಇಚ್ಚೆ ಎಚ್ಚತ್ತಿದೆ; ಆದರಿನ್ನೂ ಮುನ್ನುಗ್ಗಿ ಹೋರಾಡುವುದನ್ನು ಕಲಿಯಬೇಕಾಗಿದೆ.

ನಮ್ಮ ಆಸೆ ಕೆರಳಿದೆ; ಆದರಿನ್ನೂ ಕಾರ್ಯಕಾರಿಯಾಗಿ ಸೃಷ್ಟಿಸಲು ತೊಡಗಿಲ್ಲ.

ನಮ್ಮ ಆತ್ಮಗೌರವದ ಸರ್ಪಕ್ಕೆ ಅವಹೇಳನದ ಪದಾಘಾತವಾಗಿದೆ; ಆದರಿನ್ನೂ ಹೆಡಯೆತ್ತಿ ನಿಂತಿಲ್ಲ.

ನಮ್ಮ ಸ್ವಾರ್ಥತೆ ಬಲಿಪೀಠಕ್ಕೇರಿದೆ; ಆದರಿನ್ನೂ ದೃಢಚಿತ್ತದ ಖಡ್ಗವು ಕೆಳಗಿಳಿದಿಲ್ಲ. ಆದ್ದರಿಂದ ತ್ಯಾಗದೇವತೆ ಪ್ರತ್ಯಕ್ಷಳಾಗಿಲ್ಲ.

ತ್ಯಾಗದೇವತೆ ಪ್ರತ್ಯಕ್ಷಳಾಗುವವರೆಗೂ ಕರ್ನಾಟಕ ದೇಶದೇವಿ ನಮಗೆ ಸುಪ್ರಸನ್ನಳಾಗುವುದಿಲ್ಲ.

ದೇವಿ ಪ್ರಸನ್ನಳಾಗುವವರೆಗೂ ನಮಗೆ ನಿದ್ದೆಯಿಲ್ಲ, ಸುಖವಿಲ್ಲ, ಶಾಂತಿಯಿಲ್ಲ!* ಶಿವಮೊಗ್ಗೆಯ ಕರ್ನಾಟಕ ಸಂಘದವರು ಆಚರಿಸಿದ ನಾಡಹಬ್ಬದಲ್ಲಿ ೩೦-೯-೩೮ರಲ್ಲಿ ಮಾಡಿದ ಅಧ್ಯಕ್ಷ ಭಾಷಣ.