ತರುಣ ಕವಿಗಳಲ್ಲಿ ಬಿನ್ನಹ,

ಹಿರಿಯರೂ ನನ್ನ ವಿದ್ಯಾಗುರುಗಳಲ್ಲೊಬ್ಬರೂ ಆಗಿರುವ ಶ್ರೀಯುತ ಕೃಷ್ಣಶಾಸ್ತ್ರಿಗಳ ಮಾತು ಮೀರಲಾರದೆ, ಅವರ ಆಹ್ವಾನವನ್ನು ಆಜ್ಞೆಯೆಂದೇ ಭಾವಿಸಿ, ವಿನಯದಿಂದಲೂ ಹೆಮ್ಮೆಯಿಂದಲೂ ಈ ತರುಣ ಕವಿ ಸಮ್ಮೇಳನದ ಅಧ್ಯಕ್ಷತೆ ವಹಿಸಲು ಒಪ್ಪಿಕೊಂಡೆ. ಇದರಲ್ಲಿ ಗುರುಗಳಿಗೆ ಶಿಷ್ಯನ ಮೇಲಿರುವ ಪ್ರೀತಿ, ವಿಶ್ವಾಸ, ಅಭಿಮಾನ, ಒಲವರಗಳು ಹೊರಹೊಮ್ಮುವುವೆ ಹೊರತು ಶಿಷ್ಯನ ಹೆಚ್ಚಿಗೆ ಯಾವುದೂ ತೋರುವುದಿಲ್ಲ. ಪವಿತ್ರಳೂ ಸನಾತನಳೂ ಅನಂತ ಯೌವನಯುಕ್ತಳೂ ಆಗಿರುವ ಕನ್ನಡ ನುಡಿವೆಣ್ಣಿನ ಚರಣ ಸೇವೆಗೆ ಸೊಂಟ ಕಟ್ಟಿ ನಿಂತಿರುವ ತರುಣ ಭಕ್ತರ ದರ್ಶನೆ ಲಭಿಸಿತಲ್ಲಾ, ಪರಿಚಯವಾಯಿತಲ್ಲಾ, ಸಂಗ ದೊರಕಿತಲ್ಲಾ, ಅಲ್ಪಮಹಿಮನಾದ ನಾನೂ ಅವರೊಡನೆ ದೇವಿಯ ಸೇವೆ ಮಾಡುವಂತಾಯಿತಲ್ಲಾ ಎಂದೊಮ್ಮೆ ಎದೆ ಹಿಗ್ಗುತ್ತಿದೆ. ಮತ್ತೊಮ್ಮೆ ಈ ಮಹಾ ಕಾರ್ಯದ ಅಗಾಧ ಮಹಿಮೆಯನ್ನೂ ತನ್ನ ಅಲ್ಪತ್ವವನ್ನೂ ನೆನೆದು ಕೊಂಡು ಹೃದಯ ಕುಗ್ಗುತ್ತಿದೆ. ಆದರೂ ಗುರು ಕೃಪೆಯ ಮೇಲೆ ಭಾರ ಹಾಕಿ, ಅದರ ಪಾವನತೆಯಲ್ಲಿ ನೆಚ್ಚಿಗೆಯಿಟ್ಟು, ಅದರ ಶಕ್ತಿಯಲ್ಲಿ ಭರವಸೆ ಹೊಂದಿ, ಬಾಂದಳವ ನಪ್ಪಲೆಳಸುವ ಬಾಲನಂತೆ ನನ್ನ ಇಂದಿನ ಕಾರ್ಯಕ್ಕೆ ಕೈಹಾಕುವೆನು.

“ಈ ತಿಂಗಳು ಕೊನೆಯಲ್ಲಿ ಒಂದು ವಿಧವಾದ ವಿದ್ಯಾರ್ಥಿ ಕವಿ ಸಮ್ಮೇಳನವನ್ನು ಕೂಡಿಸಬೇಕೆಂದು ನಮ್ಮ ಸಂಘ ನಿರ್ಧರಿಸಿದೆ. ನೀವು ಅಗ್ರಾಸನವನ್ನು ವಹಿಸಬೇಕು. ನೆವ ಗಿವ ಒಂದನ್ನೂ ಕೇಳುವನಲ್ಲ, (ಇದು ಆಹ್ವಾನಪತ್ರದ ಧಾಟಿ!) ಇಂತಹ ಕವಿಸಮ್ಮೇಳನ ಸೇರುವುದು ಇದೇ ಮೊದಲು. ಇದರಿಂದ ನಾವು ತರುಣ ಕವಿಗಳ ಪರಿಚಯವನ್ನು ಮಹಾಜನಗಳಿಗೆ ಮಾಡಿಕೊಟ್ಟ ಹಾಗಾಗುವುದು; ಅಲ್ಲದೆ ಕವಿಗಳಲ್ಲಿ ಪರಸ್ಪರ ಮೈತ್ರಿ ಸಹಕಾರಗಳನ್ನು ಹೆಚ್ಚಿಸಿದಂತಾಗುವುದು. ಹಿರಿಯರಾದ ಮಹಾಜನಗಳಿಗೆ ತಮ್ಮ ಕಿರಿಯರಲ್ಲಿ ಹೆಮ್ಮೆಯೂ, ಕನ್ನಡ ಸಾಹಿತ್ಯದ ಮುಂದಿನ ಅಭಿವೃದ್ಧಿಯಲ್ಲಿ ಭರವಸೆಯೂ ಹುಟ್ಟುವುದು.” ಹೀಗೆಂದು ಅವರು ಕಾಗದ ಬರೆದಿದ್ದರು. ಈ ಕಾಗದದಲ್ಲಿ ಅವರು ಈ ಸಮ್ಮೇಳನದ ಧ್ಯೇಯ, ಉಪಯೋಗ, ಮೂಲಾರ್ಥಗಳನ್ನು ಹೊರಗೆಳೆದು ಸೂಚಿಸಿಬಿಟ್ಟಿದ್ದಾರೆ. ಒಂದು ನಾಡಿನ ಕವಿಗಳೂ ಗ್ರಂಥಕರ್ತರೂ ಹೀಗೆ ಆಗಾಗ ಕಲೆತು ತಮ್ಮ ತಮ್ಮ ಕೃತಿಗಳನ್ನು ಓದುವುದರಿಂದ ಸಾಹಿತ್ಯದಲ್ಲಿ ಒಂದು ವಿಧವಾದ ಪರಸ್ಪರ ಉತ್ತೇಜನ ಉಂಟಾಗುವುದರಲ್ಲಿ ಸಂದೇಹವಿಲ್ಲ. ಆದ್ದರಿಂದ ಈ ಸಮ್ಮೇಳನದ-ಕರ್ತೃಗಳಿಗೆ ತರುಣ ಕವಿಗಳ ಅಭಿನಂದನೆಗಳನ್ನೆಲ್ಲಾ ನನ್ನೊಂದು ವಾಣಿಯಿಂದ ಸೂಚಿಸುತ್ತೇನೆ.

ಆದರೆ ಇಂದು, ಇಲ್ಲಿ, ನನ್ನ ಹೃದಯವನ್ನೆಲ್ಲ ಬಿಚ್ಚಿ ಹೇಳುವಹಾಗಿಲ್ಲ. ಏಕೆಂದರೆ ಇಲ್ಲಿ ನೆರೆದಿರುವುದು ಹೊಸಬಾಳಿನ, ಹೊಸ ದೃಷ್ಟಿಯ, ಹೊಸ ಕಳೆಯ, ಹೊಸ ಸಾಹಸದ, ಹೊಸ ಸಾಹಿತ್ಯದ, ಪವಿತ್ರ ದೇವಮಂದಿರವನ್ನು ಕಟ್ಟಲೆಳಸುತ್ತಿರುವ ಹೊಸ ಶಿಲ್ಪಿಗಳ, ಕಿರಿಯ ಕವಿಗಳ ಕೂಟ. ಈ ಸೇತುಬಂಧನದ ದಿವ್ಯಸಾಹಸದಲ್ಲಿ ಅಲ್ಪಸ್ವಲ್ಪ ಮಣಲಿನ ಕಣಗಳನ್ನಾದರೂ ತಂದು ಹಾಕಲು ಯತ್ನಿಸುತ್ತಿರುವ ನಾನೂ ಒಂದು ಅಳಿಲು. ಆದ್ದರಿಂದ ಇತರರು ಹೊಗಳಬೇಕಾದ ನಮ್ಮ ಮಂದಿರದ ಅಂದಚಂದವನ್ನು ನಾವೇ ಹೊಗಳಿಕೊಳ್ಳುವುದು ಅಷ್ಟೇನು ಆತ್ಮಗೌರವದ ಕಾರ್ಯವಲ್ಲ. ಸುಂದರವಾಗಿರುವ ಮಂದಿರದ ಸೌಂದರ್ಯವನ್ನು ಮತ್ತೂ ಹೆಚ್ಚಿಸುವುದೆಂತು? ನಮ್ಮ ಮಂದಿರಕ್ಕೆ ಯಾವ ‘ಮಾದರಿ’ ಇರಬೇಕು? ಈಗ ಅಲ್ಲಿರುವ ಕುಂದುಕೊರತೆಗಳೇನು? ಅವುಗಳನ್ನು ನಿವಾರಿಸುವ ಬಗೆ ಹೇಗೆ? ನಾವು ಯಾವ ಮಾರ್ಗವನ್ನು ಅವಲಂಬಿಸಬೇಕು? ಇದರಲ್ಲಿ ನಮ್ಮ ಗುರಿಯೇನು? ಇವೇ ಮೊದಲಾದ ಕೆಲವು ವಿಷಯಗಳು ಇಂದಿನ ಭಾಷಣದ ಸಾರಾಂಶ.

ಎಲ್ಲಕ್ಕೂ ಮೊದಲು ನಮ್ಮ ಹಿರಿಯರಲ್ಲಿ ಒಂದು ವಿಜ್ಞಾಪನೆ. ಏಕೆಂದರೆ, ಅನುಭವಸಾಲದ ನಮ್ಮನ್ನು ಅನುಭವಶಾಲಿಗಳಾದ ತಾವು ಚೆನ್ನಾಗಿ ಪರೀಕ್ಷಿಸದೆ ತಿರಸ್ಕರಿಸಿದರೆ ತಮ್ಮ ಅನುಭವದ ಹೆಚ್ಚಿಗೆಯಲ್ಲಿ ನಮಗೆ ನೆಚ್ಚುಗೆಡಬಹುದು. ‘ಹಳೆಯದೆಲ್ಲಾ ಹೊನ್ನು; ಹೊಸತೆಲ್ಲಾ ಮಣ್ಣು’ ಎಂಬ ಸೂತ್ರದಿಂದ ಮಾತ್ರ ಹೊರಡಬೇಡಿ. ನಮ್ಮ ಹೊಸ ಸಾಹಸವನ್ನು ಸುಮ್ಮನೆ ತಿರುಳಿಲ್ಲದ ಭ್ರಾಂತಿಯೆಂದು ಹಳೆಯದಿರಿ. ಹೊಸ ಸಾಹಿತ್ಯವನ್ನು ಓದಿನೋಡಿ; ಪರೀಕ್ಷಿಸಿ. ನಿಮ್ಮ ಸ್ವಂತ ಒರೆಗಲ್ಲಿನಲ್ಲಿಯೇ ಅದನ್ನು ತಿಕ್ಕಿನೋಡಿ. ಮನಸ್ಸು ತೃಪ್ತಿಯಾದರೆ ಹೊಗಳಿ; ಇಲ್ಲದಿದ್ದರೆ ಖಂಡಿಸಿ, ತಪ್ಪುಗಳನ್ನು ತೋರಿಸಿಕೊಡಿ. ಅದರಿಂದ ನಮಗೂ ಶ್ರೇಯಸ್ಸು; ನಿಮಗೂ ಕಿರಿಯರನ್ನು ತಿದ್ದಿದೆವಲ್ಲಾ ಎಂಬ ತೃಪ್ತಿ. ನಾವು ತಮ್ಮ ಸೂಚನೆಗಳನ್ನು ಅಲ್ಲಗಳೆಯುವಷ್ಟು ಮೊಂಡರಲ್ಲ; ಕುರುಡರಲ್ಲ. ತಮ್ಮ ಸಲಹೆಗಳನ್ನೆಲ್ಲ ಭಕ್ತಿಯಿಂದ ಸ್ವೀಕರಿಸುತ್ತೇವೆ. ಆದಷ್ಟು ಪ್ರಯತ್ನಪಟ್ಟು ಅವುಗಳನ್ನೆಲ್ಲ ಪ್ರಯೋಗಕ್ಕೆ ತರಲೆಳಸುತ್ತೇವೆ. ಹಳೆಯ ಬೆಳಕು ಬಲು ಸೊಗಸಾದುದು,; ಜ್ಯೋತಿರ್ಮಯವಾದುದು, ಪವಿತ್ರವಾದುದು! ಹೌದು; ಯಾರು ‘ಅಲ್ಲ’ ಎನ್ನುವವರು? ಆದರೆ ಹೊಸ ಬೆಳಕಿಗೆ ಕಣ್ಣನ್ನೇಕೆ ಮುಚ್ಚುವುದು? ಅದನ್ನೂ ನೋಡಿ, ತಮ್ಮ ಘನವಾದ ಅಭಿಪ್ರಾಯಗಳನ್ನು ಸೂಚಿಸಿ.

ಹೊಸತೆಂದರೇನು? ಹಳೆಯದರ ನಿಷೇಧವಲ್ಲ. ಹಳತಿಲ್ಲದ ಸಂಪೂರ್ಣವಾದ ಹೊಸತು ಸೃಷ್ಟಿಯಲ್ಲಿ ಎಲ್ಲಾದರೂ ಉಂಟೆ? ತರುಣರಾದ ನಾವು ಕೂಡ ಎಂದೋ ಎಲ್ಲಿಯೋ ಮುದುಕರಾಗಿ ಮಡಿದು ಮರಳಿ ಬಂದವರೆಂದು ಶಾಸ್ತ್ರಗಳೂ ಹೇಳುವುದಿಲ್ಲವೆ? ಹಳೆಯದರ ತಳಹದಿಯಿಂದ ರೂಪಾಂತರವಾಗಿ ಹೊಸತು ಮೂಡುತ್ತದೆ. ಇಷ್ಟೆ ಹೊರತು ಹೊಸತಕ್ಕೂ ಹಳೆಯದಕ್ಕೂ ನಿಜವಾಗಿಯೂ ಹೋರಾಟವಿಲ್ಲ. ಸ್ವಾತಂತ್ರ್ಯವೆಂದರೆ ಸ್ವೇಚ್ಛಾಚಾರವಲ್ಲ. ಹೊಸ ಛಂದಸ್ಸು ಎಂದರೆ ನಿಯಮವಿರುದ್ಧವಾದ ನುಡಿಗಳ ದಾಂಧಲೆಯಲ್ಲ. ಹೊಸದರ ಮೂಲ ತತ್ತ್ವವೂ ಹಳೆಯದರ ಮೂಲತತ್ತ್ವವೂ ಎಲ್ಲಾ ಒಂದೇ. ಅದೇ ಮಣ್ಣು, ಅದೇ ಇಟ್ಟಿಗೆ; ಆಕೃತಿ ಮಾತ್ರಬೇರೆ. ಇಷ್ಟು ಮಾತ್ರಕ್ಕೆ ಹೊಸತೆಂದು ನಿಂದಿಸುವುದೇಕೆ?

ಹಳೆಯ ಹಾದಿಯನ್ನು ಬಿಟ್ಟರಲ್ಲಾ ಎಂದಷ್ಟೇ ತಮ್ಮ ಸಿಟ್ಟು? ಕನ್ನಡಿಗರಾದ ತಾವು ಹೀಗೆ ಸಿಟ್ಟುಮಾಡುವುದು ಉಚಿತವಲ್ಲ. ಈ ಹೊಸ ಹಾದಿಯಲ್ಲಿ ಹೋಗುವ ಹುಚ್ಚು ಕನ್ನಡಿಗರಿಗೇನು ಹೊಸತಲ್ಲ. ಇದು ಪುರಾತನ ಕಾಲದಿಂದಲೂ ನಡೆದುಬಂದುದು. ಕನ್ನಡನುಡಿಯ ಚರಿತ್ರೆಯನ್ನು ಯಾರಾದರೂ ಅವಲೋಕಿಸಿದರೆ ಈ ಗುಟ್ಟು ಗೊತ್ತಾಗುವುದು. ಕರ್ಣಾಟಕ ಸಾಹಿತ್ಯ ಸಾಮ್ರಾಜ್ಯದ ಚರಿತ್ರಪಥದಲ್ಲಿ ‘ದಂಗೆ’ಯ ಮೇಲೆ ‘ದಂಗೆ’ ನಡೆದ ಹೆಜ್ಜೆಯ ಗುರುತುಗಳಿವೆ. ಆದ್ದರಿಂದಲೆ ನಮ್ಮ ಸಾಹಿತ್ಯ ಇನ್ನೇನೂ ಮಹಾಕಾರ್ಯಗಳನ್ನು ಸಾಧಿಸದಿದ್ದರೂ ಈ ವಿಧವಾದ ನವಸಾಹಸಗಳಿಂದ ಜೀವನದ ರಸವನ್ನು ಕಾಪಾಡಿಕೊಂಡು ಬಂದಿದೆ. ಕಾಲಕಾಲಕ್ಕೆ ತಕ್ಕಂತೆ ಜನಗಳ ಭಾವಗಳು ಮಾರ್ಪಾಟಾಗುತ್ತವೆ. ಸಾಹಿತ್ಯವು ಜನಜೀವನದ ವಾಣಿ ಎಂದಮೇಲೆ, ಅದೂ ಕೂಡ ನಾನಾ ರೂಪವನ್ನು ಧರಿಸಿ, ನಾನಾ ಭಾವಗಳನ್ನು ಸುರಿಸಿ, ದೇಶದ ಮನಸ್ಸನ್ನು ವರಿಸಿ, ತನ್ನ ಗದ್ದುಗೆಯಿಂದ ಕೆಳಗಿಳಿದುಬಂದು ಜನತೆಯನ್ನು ಮೇಲೇರಿಸಿ, ದೇಶದ ಜೀವನವನ್ನು ಉತ್ತಮ ಭೂಮಿಕೆಯಲ್ಲಿಡುವುದು ಅದರ ಪರಮಕರ್ತವ್ಯ. ಒಂಬತ್ತು ಹತ್ತನೆಯ ಶತಮಾನಗಳ ವೃತ್ತಕಂದಗಳಿಂದ ಕೂಡಿದ ಚಂಪೂಗ್ರಂಥಗಳ ಮೇಲೆ ಹನ್ನೆರಡನೆಯ ಶತಮಾನದಲ್ಲಿ ಹರಿಹರ ರಾಘವಾಂಕರೆ ಮೊದಲಾದವರು ‘ದಂಗೆ’ಯೆದ್ದು ಷಟ್ಪದೀ ಕಾವ್ಯಗಳನ್ನು ಬರೆಯಲಿಲ್ಲವೆ? ಅಲ್ಲಿಂದ ಮುಂದೆ ಗಣನೆಯಿಲ್ಲದ ಬದಲಾವಣೆಗಳು ನಮ್ಮ ಸಾಹಿತ್ಯದಲ್ಲಿ ನಡೆಯಲಿಲ್ಲವೆ? ತ್ರಿಪದಿ, ಚೌಪದಿ, ರಗಳೆ, ಸಾಂಗತ್ಯ, ಯಕ್ಷಗಾನ ಇವುಗಳೆಲ್ಲಾ ಹೇಗೆ ಹುಟ್ಟಿದುವು? ನವಪ್ರಯತ್ನದ ಫಲರೂಪವಾಗಿಯೇ ಅಲ್ಲವೆ? ಇಂಗ್ಲೀಷು ಮುಂತಾದ ಪಾಶ್ಚಾತ್ಯ ಸಾಹಿತ್ಯಗಳಲ್ಲೂ ಇಂತಹ ವಿಪ್ಲವಗಳನ್ನು ನಾವು ಎದುರುಗೊಳ್ಳುವುದಿಲ್ಲವೆ? ಹೀಗಿರಲು, ಇದನ್ನೆಲ್ಲಾ ತಿಳಿದೂ ಕನ್ನಡ ನುಡಿಯಲ್ಲಿ ಈಚೀಚೆಗೆ ಬಂದಿರುವ ಮತ್ತು ಬರುತ್ತಿರುವ ಹೊಸ ಸಾಹಿತ್ಯದ ಮಾರ್ಗವನ್ನು ಅಲ್ಲಗಳೆಯುವವರಿಗೆ ಒಂದು ಎದೆ ಸಾಲದು; ಎಂಟೆದೆ ಬೇಕು!

ಇನ್ನು ತರುಣ ಕವಿ ಸಹೋದರರಲ್ಲಿ ನನ್ನದೊಂದು ಬಿನ್ನಹ. ಪಂಡಿತ ವರ್ಗದಲ್ಲಿ ಹೇಗೆ ಹೊಸ ಸಾಹಿತ್ಯವನ್ನು ಕಂಡರೆ ಒಂದು ವಿಧವಾದ ತಿರಸ್ಕಾರ ಉಂಟಾಗಿದೆಯೋ ಹಾಗೆಯೇ ತರುಣರಲ್ಲಿ ಈಚೀಚೆಗೆ ಹಳೆಯ ಸಾಹಿತ್ಯವೆಂದರೆ ಒಂದು ವಿಧವಾದ ಉಪೇಕ್ಷೆ ಮೂಡುತ್ತಿದೆ. ಹೊಸ ಸಾಹಿತ್ಯವನ್ನು ಹಳಿದರೂ ಅವರೇನೋ ಬದುಕಬಹುದು; ಆದರೆ ನಾವು ಹಳೆಯದನ್ನು ಹಳಿದು ಕ್ಷಣಕಾಲವಾದರೂ ಬದುಕಲಾರೆವು. ಹಳೆಯದೆಂದರೆ ಹೊಸದರ ಬೆನ್ನುಮೂಳೆ. ಅದು ನಮ್ಮ ಬಲವಾದ ತಳಹದಿ. ಅದನ್ನು ಬಿಟ್ಟು ನಿಂತರೆ ನಮಗೆ ನೂರು ಎದೆಗಳಿದ್ದರೂ ಸಾಲದು! ತಮಗೊಂದು ಸೂಚನೆ. ಶ್ರೀಯುತ ಬಿ.ಎಂ.ಶ್ರೀಕಂಠಯ್ಯನವರು ಈ ಸಾರಿ ಕಲ್ಬುರ್ಗಿಯಲ್ಲಿ ಕರ್ಣಾಟಕ ಸಾಹಿತ್ಯ ಪರಿಷತ್ ಸಮ್ಮೇಳನದಲ್ಲಿ ಮಾಡಿದ ಭಾಷಣವನ್ನು ತಾವೆಲ್ಲರೂ ಚೆನ್ನಾಗಿ ಒಮ್ಮನಸ್ಸಿನಿಂದ ಪಾರಾಯಣ ಮಾಡಬೇಕು. ಅವರು ಸಾರಿಸಾರಿ ಹೇಳಿರುವ ಅಮೂಲ್ಯವಾದ ಉಪದೇಶಗಳನ್ನು ತಮ್ಮ ಹೃತ್ಪಂಜರಗಳಲ್ಲಿ ಜಾಗರೂಕತೆಯಿಂದ ಬಚ್ಚಿಟ್ಟುಕೊಂಡು ಅದರಂತೆ ಆಚರಿಸಲು ಯತ್ನಿಸಬೇಕು. ಹಳೆಯ ಸಾಹಿತ್ಯವನ್ನು ಚೆನ್ನಾಗಿ ಓದಿ, ಕಡೆದು, ನವನೀತವನ್ನು ಸವಿಯದಿದ್ದರೆ ನಮಗೆ ಅಮೃತತ್ವ ಎಂದಿಗೂ ಲಭಿಸುವುದಿಲ್ಲ. ಭಾಷೆಯ ಬಿಗಿ, ಶಬ್ದಗಳ ಜೋಡಣೆ, ರಚನೆಯ ವೀರಮಾರ್ಗ, ಪದಗಳನ್ನು ಆಯ್ದು, ನೆಯ್ದು, ರಸವನ್ನು ಹೊಯ್ದು, ಮನಮೋಹಿಸುವ ರಸಋಷಿಯ, ಸೌಂದರ್ಯಯೋಗಿಯ ಇಂದ್ರಜಾಲ, ಇವುಗಳೆಲ್ಲಾ ಬರಬೇಕಾದರೆ ಪ್ರಾಚೀನ ಸಾಹಿತ್ಯದೇವಿಯ ಚರಣತಲದಲ್ಲಿ ನಾವು ಬಹುಕಾಲ ಆಕೆಯ ಶಿಷ್ಯರಾಗಿ, ಆಕೆಯ ಭಕ್ತರಾಗಿ, ಆಕೆಯ ಮಕ್ಕಳಾಗಿ, ಶಿಷ್ಯನಂತೆ ವಿಷಯಗಳನ್ನು ಸಂಗ್ರಹಿಸಿ, ಭಕ್ತನಂತೆ ಕೃಪೆಯನ್ನು ಅರ್ಜಿಸಿ, ಮಕ್ಕಳಂತೆ ಒಲ್ಮೆಯನ್ನು ಪಡೆದು, ಧನ್ಯರಾಗಿ, ದಿವ್ಯರಾಗಿ, ಸಿದ್ಧರಾಗಿ ಹೊರ ಹೊರಡಬೇಕು. ಇಲ್ಲದಿದ್ದರೆ ನಮ್ಮ ಕಬ್ಬಗಳು ತಾತ್ಕಾಲಿಕವಾದ ರಕ್ಕೆಗಳನ್ನು ಪಡೆದು ಅನಂತವಿಶ್ವದಲ್ಲಿ ಸಂಚರಿಸಲೆಳಸುವ ಮಳೆಯ ಹುಳುಗಳಂತೆ ಬಹು ಬೇಗ ಸತ್ತುಹೋಗುತ್ತವೆ, ಸುಟ್ಟು ಸೀಯುತ್ತವೆ, ಹೆಸರಿಲ್ಲದಂತಾಗುತ್ತವೆ. ತರುಣ ಕವಿಯೆ, ವಿನಯದಿಂದ ಶಿಷ್ಯನಂತೆ ಮುಂದೆ ಹೋಗು; ಹೆಮ್ಮೆಯಿಂದ ಆಚಾರ್ಯನಂತೆ ನಟಿಸಿ ದುಡುಕದಿರು!

ಕವಿತೆಯೆಂದರೇನು? ಕವಿಗಳೆಂದರೆ ಯಾರು? ಕಬ್ಬಿಗನ ಗುರಿಯೇನು? ಕಬ್ಬಗಳ ಉದ್ದೇಶವೇನು? ಕವಿತೆಯೆಂದರೆ ಆತ್ಮವು ತನಗೆ ತಾನೆ ಮಾಡಿಕೊಳ್ಳುವ ಒಂದು ಅಲೌಕಿಕ ವಿಚಿತ್ರವಾದ ಸ್ವಾರಾಧನೆ. ಆನಂದವೆ ಅದರ ಶೀಲ. “ಕವಿತೆ ಅತ್ಯುತ್ತಮವೂ ಸುಖ ತಮವೂ ಆದ ಮನಸ್ಸಿನ ಸೌಂದರ್ಯಯೋಗಿ ತನ್ನ ಜೀವಮಾನದ ಸುಖತಮವಾದ ಅತ್ಯುತ್ತಮ ಮುಹೂರ್ತಗಳಲ್ಲಿ ಹಾಡುವ ಆತ್ಮ ಗೀತಾಂಜಲಿ” ಎಂದು ಆಂಗ್ಲೇಯ ಕವಿಕೋಗಿಲೆಯಾದ ಷೆಲ್ಲಿ ಬರೆದಿದ್ದಾನೆ. ಈ ರಸಭರಿತವಾದ ಸೂತ್ರದಲ್ಲಿ ಸಮಸ್ತ ಕವಿತಾಪ್ರಪಂಚವೂ ಅಡಕವಾಗಿದೆ ದುಃಖಬಂದರೆ ಕಣ್ಣೀರು ಸುರಿಸುತ್ತೇವೆ. ಸಂತೋಷವಾದರೆ ಚೆನ್ನಾಗಿ ನಗುತ್ತೇವೆ. ಹಾಗೆಯೇ ಜೀವನದ ಸುಖ, ದುಃಖ; ಸೃಷ್ಟಿಯ ಸೌಂದರ್ಯ, ರಹಸ್ಯ; ಸಮಸ್ತ ವಿಶ್ವದ ಹಿಂದಿರುವ ಒಂದು ಮಹಾ ಪವಿತ್ರ ವ್ಯಕ್ತಿತ್ವದಲ್ಲಿ ನಮಗುಂಟಾಗುವ ವೇದನಾಪೂರ್ವಕವಾದ ಪ್ರೇಮ, ಭಕ್ತಿ; ಇವೇ ಮೊದಲಾದ ದಿವ್ಯಭಾವಗಳು ಪ್ರತಿಭಾ ಸಂಪನ್ನವಾದ ಕವಿಯ ಎದೆಯಲ್ಲಿ ಉದ್ರೇಕವಾದಾಗ, ಹಸುರು ನೆಲದಿಂದ ಉಕ್ಕಿ ನೆಗೆಯುವ ಬುಗ್ಗೆಯಂತೆ ನಿರಂತರವಾಗಿ, ನಿರಾಯಾಸವಾಗಿ ಚಿಮ್ಮಿ ಹೊಮ್ಮುವ ಭಾವಾತ್ಮಕವಾದ ಲಲಿತ ಪದಗಳ ಮನೋಹರವಾದ ಇಂಪಾದ ವಸಂತ ನೃತ್ಯವೆ, ಸುಗ್ಗಿಯ ಕುಣಿತವೆ, ನಿಜವಾದ ಕವಿತೆ! ಕವಿತೆಗೆ ಕಲ್ಪನಾಪ್ರತಿಭೆ ಬೇಕೇಬೇಕು; ಭಾವವೆ ಅದರ ಆತ್ಮ, ಶಬ್ದಗಳೆ ಅದರ ದೇಹ. ಅದು ಆತ್ಮವು ತನಗೆ ತಾನೆ ಆಡಿಕೊಳ್ಳುವ ಮಾತು. ಅದಕ್ಕೆ ಸದಸ್ಯರು ಬೇಕಿಲ್ಲ. ಅದು ಎಂದಿಗೂ ಉಪದೇಶಕ್ಕೆ ಹೊರಡದು. ಕೇಳುವವರನ್ನು ಮೈಮರೆಸಿ ವಶಮಾಡಿಕೊಳ್ಳುತ್ತದೆ. ಅದು ಬರಿಯ ಬುದ್ಧಿಯ ಕಾರ್ಯವಲ್ಲ. ಪಾಂಡಿತ್ಯದಿಂದ ಅದು ಲಭಿಸುವುದಿಲ್ಲ. ಪೃಥಕ್ಕರಣದೃಷ್ಟಿ ಬುದ್ಧಿಯ ಕಾರ್ಯ; ಏಕೀಕರಣದೃಷ್ಟಿ ಪ್ರತಿಭೆಯ ಕಾರ್ಯ. ಕವಿತೆ ಏಕಾಂತ ಧ್ಯಾನದಿಂದ ಹೊರಸೂಸುವ ಗಾನ. ಅದು ಹಳೆಯದನ್ನು ಹೊಸತು ಮಾಡಿ ನಮ್ಮ ಭಾವಗಳಿಗೆ ನಿತ್ಯಯೌವನವನ್ನು ದಾನಮಾಡುತ್ತದೆ. ಅದರ ತತ್ತ್ವವು ಸರ್ವಕಾಲ ಸರ್ವದೇಶಗತವಾದುದು. “ಕವಿತೆಯಲ್ಲಿ ಏನೋ ಒಂದು ದಿವ್ಯಾಂಶವಿದೆ” ಎಂಬುದು ಬೇಕನ್ ಮಹಾಶಯನ ವಚನ. “Poetry is indeed something divine. It is at once the centre and circumference of knowledge. It is that which comprehends all science; and that to which all science must be referred. It is at the same time the root and blossom of all other systems of thought; it is that from which all spring and that which adorns all; and that which if blighted denies the fruit and the seed and withholds from the barren world the nourishment and the succession of the scions of the tree of life. It is the perfect and consummate surface and bloom of all things; it is the odour and the colour of the rose to the texture of the elements which compose it, as the form and splendour of unfaded beauty to the secrets of anatomy and corruption.” ಎಂದು ಷೆಲ್ಲಿಯ ಮತ. ಕವಿತೆ ವಿಶ್ವದ ಶಿವ ಸತ್ಯಸೌಂದರ್ಯಗಳನ್ನು ಅನುಭವಿಸುವ ರಸಿಕನ ಎದೆಯ ವೀಣೆಯಿಂದ ಮೂಡಿಬರುವ ಮಂಜುಳಗಾನ! ಅದು ನಮ್ಮ ಹೃದಯವನ್ನು ವಿಕಸಿತವಾಗುವಂತೆ ಮಾಡಿ ಜನತ್ತನ್ನು ನಮಗೆ ಒಲಿಸುತ್ತದೆ. ಅದರ ದಿವ್ಯಸ್ಪರ್ಶದಿಂದ ಸರ್ವವೂ ಮನೋಹರವಾಗಿ ಪರಿಣಮಿಸುತ್ತದೆ; ಮಿಂಚಿ ಮಾಯವಾಗುವ ಪರಮಾನಂದವು ಅವಿಚ್ಛಿನ್ನವಾಗುವಂತೆ ಮಾಡುತ್ತದೆ. ಮೃತ್ಯು ರೋಗ ಮೊದಲಾದ ಭಯಂಕರ ವ್ಯಾಪಾರಗಳೂ ಕೂಡ ಕವಿತೆಯ ಮುಂದೆ ಸೌಮ್ಯವಾಗುತ್ತವೆ. ವಿಶ್ವವೆಂಬ ಮಹಾ ಸ್ವರಮೇಳದಲ್ಲಿ ಅವುಗಳೆಲ್ಲ ಹೋರಾಟವಿಲ್ಲದೆ ಸಂಗಮಿಸಿ ಹರಿಯುತ್ತವೆ. ಹೆಚ್ಚೇನು? ಕವಿತೆ ನಮ್ಮ ಬಾಳಿಗೆ ಬಹು ಮುಖ್ಯವಾಗಿರುವ ಆನಂದದ ಆಗರ; ಶಾಂತಿಯ ನೆಲೆಮನೆ.

ಹಾಗಾದರೆ ಛಂದೋಬದ್ಧವಾಗಿರುವ ಭಾಷೆಯೆಲ್ಲವೂ ಕವಿತೆಯೇ ಎಂದೂ ಯಾರಾದರೂ ಕೇಳಬಹುದು. ಎಂದಿಗೂ ಅಲ್ಲ. ಕವಿಗೂ ಪದ್ಯರಚಕನಿಗೂ ತುಂಬ ಅಂತರವುಂಟು. ಭಾವ ಮೈಗೊಳ್ಳುವುದಕ್ಕೆ ಪದ್ಯರಚನಾಕೌಶಲ ಆವಶ್ಯಕವಾದರೂ, ಅದು ಕವಿತೆಯ ಅತ್ಯಂತ ಮುಖ್ಯಾಂಗವಲ್ಲ. ಶಬ್ದವೈಚಿತ್ರ್ಯ ಕಲಾಕೋವಿದನನ್ನು ಸೂಚಿಸುವುದೇ ಹೊರತು ಅದು ರಸಋಷಿಯ ಆತ್ಮಕ್ಕೆ ಸಾಕ್ಷಿಯಲ್ಲ. ಪ್ರತಿಯೊಬ್ಬ ಕವಿಯೂ ಪದ್ಯರಚಕನೆ; ಆದರೆ ಪದ್ಯರಚಕರೆಲ್ಲ ಕವಿಗಳಲ್ಲ! ಯಾವ ಪದ್ಯರಚನೆಯಲ್ಲಿ ಮಾಧುರ್ಯ, ಶಕ್ತಿ, ಋಜುಭಾವ, ವೈವಿಧ್ಯ ಮೊದಲಾದವು ತುಂಬಿ ತುಳುಕುವುವೋ ಅದನ್ನು ಕವಿತೆಯೆಂದು ಕರೆಯಬಹುದು. ಉತ್ತಮ ಕವಿತೆಗೂ ಸಾಧಾರಣ ಕವಿತೆಗೂ ಭೇದವೇನೆಂದರೆ: ಒಂದನೆಯದರಲ್ಲಿ ಭಾವವೇ ಪ್ರಧಾನ, ಎರಡನೆಯದರಲ್ಲಿ ಸಿದ್ಧಾಂತ ಕುಶಲತೆಗಳು ಪ್ರಧಾನ! ಕವಿಯ ಗಮ್ಯಸ್ಥಾನ ಕಲೆಯ ರಸಾನಂದ; ಪದ್ಯ ರಚಕನದು ಕಮ್ಮಾರ-ಪ್ರಯೋಜನ. ಕವಿತೆ ನೃತ್ಯದಂತೆ; ಪದ್ಯರಚನೆ ಪ್ರಯಾಣದಂತೆ. ನೃತ್ಯಮಾಡುವಾಗ ನಟನು ಬೇಕಾದಷ್ಟು ಶಕ್ತಿಯನ್ನು ಉಪಯೋಗಿಸುವನಾದರೂ, ಹೆಜ್ಜೆಗಳನ್ನು ಅನೇಕ ಸಾರಿ ಎತ್ತಿ ಇಡುವನಾದರೂ ಇದ್ದಲ್ಲಿಯೆ ಇರುತ್ತಾನೆ. ಅವನು ಯಾವುದಾದರೂ ಗೊತ್ತಾದ ಸ್ಥಳವನ್ನು ಸೇರಲೆಳಸುವ ಪ್ರಯಾಣಿಕನಲ್ಲ. ಆನಂದವೇ ನೃತ್ಯದ ಲಕ್ಷ್ಯ. ಪ್ರಯಾಣಿಕನಾದರೋ ತನ್ನ ಪ್ರತಿಯೊಂದು ಹೆಜ್ಜೆಯನ್ನೂ ಲಾಭಕ್ಕಾಗಿಯೇ ಇಡುತ್ತಾನೆ. ತನ್ನನ್ನು ಗೊತ್ತಾದ ಸ್ಥಳಕ್ಕೆ ಬಳಿಸಾರಿಸದ ಒಂದು ಅಡಿಯನ್ನಾದರೂ ಅವನು ಇಡಲೊಲ್ಲನು. ಪ್ರಯಾಣಿಕನ ಭಾಗಕ್ಕೆ ನೃತ್ಯ ವ್ಯರ್ಥಕಾರ್ಯ. ಪದ್ಯರಚಕರಿಂದ ಸಾಹಿತ್ಯದೇವಿಯ ದೇಹ ಕೊಬ್ಬಬಹುದೇ ಹೊರತು ಅವರಿಂದ ಆಕೆಯ ಆತ್ಮ ಕಲ್ಯಾಣವಾಗಲಾರದು.

ಕವಿಗಳೆಂದರೆ ಯಾರು? ಯಾವಾತನು ತನ್ನ ಪುಣ್ಯವಶದಿಂದ ಅಂತರಾತ್ಮನ ದಿವ್ಯವಾಣಿಯ ಮಂಜುಳಗಾನಕ್ಕೆ ನಿಮಿತ್ತಮಾತ್ರವಾದ ಕೊಳಲಾಗುವನೋ ಆತನೇ ಕವಿ. ಆ ಮಹಿಮಾನಂದಮಯವಾದ ವಿಶ್ವವಾಣಿ ತನ್ನಿಂದ ಎಡೆಬಿಡದೆ ತಡೆಯಿಲ್ಲದೆ ಹೊರಸೂಸುವಂತೆ, ತನ್ನ ಅಂತರಂಗವನ್ನು ಪರಿಶುದ್ಧತೆ ಎಂಬ ಗಂಗೆಯ ಅಮಲ ತೀರ್ಥಜಲದಲ್ಲಿ ಸದಾ ಮೀಯಿಸುವುದೇ ಕಬ್ಬಿಗನ ಸಾಧನೆಯಾಗಿರಬೇಕು! ಕವಿಯನ್ನು ಕುರಿತು ಷೆಲ್ಲಿ ಏನು ಹೇಳಿರುವನೋ ಕೇಳಿ: “A poet as he is the author to others of the highest wisdom, pleasure, virtue and glory, so he ought personally to be the happiest, the best, the wisest and most illustrious of men….Poets are the hierophants of an unapprehended inspiration, the mirrors of the gigantic shadows which futurity casts upon the present; the words which express what they understand not; the trumpets which sing to battle and feel not what they inspire; the influence which is moved not, but moves. Poets are the unacknowledged legislators of the world.” ಕವಿ ಪ್ರತಿಭಾಶಾಲಿಯಾಗಿಯೂ ಸ್ಫೂರ್ತಿಸಂಪನ್ನನಾಗಿಯೂ ಸೌಂದರ್ಯಯೋಗಿಯಾಗಿಯೂ ಲಾವಣ್ಯಾತ್ಮನಾಗಿಯೂ ಇರುವ ಋಷಿಯಾಗಿರಬೇಕು. ಆತ್ಮಾನುಭವವೇ ಆತನಿಗೆ ಪರಮಪ್ರಮಾಣ; ಬುದ್ಧಿಶಕ್ತಿ ಗೌಣ. ಆತನ ದೃಷ್ಟಿಗೆ ವೀಣಾ ಸದೃಶವಾದ ಸೂಕ್ಷ್ಮತೆ ಇರಬೇಕು. ಮಹಾಕವಿಯಾದವನು ತನ್ನಿಂದ ಹೊರಸೂಸುವ ದಿವ್ಯವಾಣಿಯ ಅಮರಸಂಗೀತದಿಂದ ಜಗತ್ತಿನ ಮನಸ್ಸನ್ನು ಮೋಹಿಸಿ ತನ್ನ ಕಡೆಗೆ ಸೆಳೆದುಕೊಂಡು, ಅದನ್ನು ತನ್ನ ಮಟ್ಟಕ್ಕೆ ಏರಿಸಬೇಕೇ ಹೊರತು, ತಾನು ಅದರ ಮಟ್ಟಕ್ಕೆ ಇಳಿಯಬಾರದು. ಕವಿಚಕ್ರವರ್ತಿ ರನ್ನನ ಮತವೇನೆಂಬುದನ್ನು ನೋಡಿ:

ಕವಿಮಾರ್ಗದೊಳೊಳಪೊಕ್ಕುಂ
ನವರಸಮಂ ತೆರೆಯೆ ನುಡಿದನೆನಿಸಿದ ಕವಿ ಸ
ತ್ಕವಿಯೆನಿಕುಂ ಗೂಡಾರದ
ಕವಿಯಂತಿರೆ ಮುಚ್ಚಿಪೋದ ಕವಿಯುಂ ಕವಿಯೇ?
ದರವುರಮುಮಂಟಸುಂಟೆಯು
ಮರೆವೊರಕನುಮೆನಿಸಿ ತರತರಂ ನುಡಿದು ಸಭಾಂ
ತರದೊಳ್ ರಂಜಿಪುದೆ? ರಸಾಂ
ತರಂಗಳಂ ಮುಟ್ಟಿನುಡಿದು ರಂಜಿಸವೇಡಾ!

‘ರಸಾಂತರಂಗಳಂ ಮುಟ್ಟಿನುಡಿ’ ಯುವ ಶಕ್ತಿ ಸ್ವಾಭಾವಿಕವಾಗಿಯೆ ಬರಬೇಕು. ಸುಮ್ಮನೆ ನಾಲ್ಕು ನುಡಿಗಳನ್ನು ಹೊಸೆದ ಮಾತ್ರದಿಂದ ಯಾವನೂ ಕವಿಯಾಗಲಾರನು. ಪ್ರತಿಭೆಯಿಂದ ಹೊರಸೂಸದ ಕವಿತೆ ಪದ್ಯವಲ್ಲ: ಹುಚ್ಚುಹಿಡಿದ ಗದ್ಯ! ಇದನ್ನೆ ಕುರಿತು ಕವಿಯೊಬ್ಬನು:

ಮಳೆಯಿಲ್ಲದೆ ಪೊಯ್ನೀರಿಂ
ಬೆಳೆಗುಮೆ ಧರೆ? ಮರುಗಿ ಕುದಿದು ಶಾಸ್ತ್ರದ ಬಲದಿಂ
ದಳಿಪಿಂ ಪೇಳ್ದೊಡಮದು ಕೋ
ಮಳಮಕ್ಕುಮೆ ಸಹಜಮಿಲ್ಲದಾತನ ಕಬ್ಬಂ?

ಎಂದು ಹಾಡಿದ್ದಾನೆ. ಆದ್ದರಿಂದ ಯಾವಾತನಲ್ಲಿ ಆನಂದರೂಢವಾದ ಪ್ರತಿಭೆ ಭಾವಾತಿಶಯದಿಂದ ತುಂಬಿ ತುಳುಕಿ ಸರಸವಾದ ಮಾತುಗಳಲ್ಲಿ ಮೈಗೊಳ್ಳುವುದೊ ಆತನೆ ಕವಿ. ಯಾವಾತನು ಸೃಷ್ಟಿಯ ಸೌಂದರ್ಯದಿಂದ ಮೋಹಿತನಾಗಿ ಮೈಮರೆತು, ಅದರಲ್ಲಿ ತಲ್ಲೀನನಾಗಿ, ಆ ರಹಸ್ಯಲೋಕದ ಸಂದೇಶಗಳನ್ನು ಹೊರಗೆಡಹಲು ಶಕ್ತನಾಗುವನೊ ಆತನೆ ಕವಿ. ಯಾವಾತನು ಪರಮಾತ್ಮನೆಂದು ಕರೆಯಲ್ಪಡುವ ಆ ಮಹಾ ಜಗದಾದಿ ಚೈತನ್ಯದ ಸಾನ್ನಿಧ್ಯದಲ್ಲಿ ನೆಲಸಿ, ಆ ದಿವ್ಯತತ್ತ್ವದ ಶಕ್ತಿಯನ್ನು ಪಡೆದು, ಹರಿಯುವ ಜೀವರನ್ನು ಹಾರುವಂತೆ ಮಾಡಿ ಅವರಿಗೆ ತನ್ನ ಅಮರಗಾನದಿಂದ ಆತ್ಮಾನಂದವನ್ನು ದಾನಮಾಡುವನೊ ಆತನೆ ನಿಜವಾದ ಕವಿಗುರು. ಯಾವಾತನು ತನ್ನ ಭಾವದ ಇಂದ್ರಜಾಲದಿಂದ ಕವಿತೆಯೆಂಬ ಮಿಂಚಿನ ಮಧುರವಾದ ಕೂರಸಿಯಿಂದ, ಜೀವರ ಅಶಕ್ತಿಯನ್ನು ಕತ್ತರಿಸಿ, ಬಾಳಿಗೆ ಹೊಸ ರಸವನ್ನು ನೀಡಿ, ಭೂಮಿಯನ್ನು ವೈಕುಂಠವನ್ನಾಗಿ ಮಾಡುವನೊ ಆತನೆ ಸಹಜ ರಸಋಷಿ. ಇದೇ ಕವಿಗಳ ಅತ್ಯುನ್ನತ ಆದರ್ಶ. ಕವಿತೆ ತರಳೆಯ ಲಾವಣ್ಯದಲ್ಲಿ ಪರಿಸಮಾಪ್ತಿ ಹೊಂದಬಾರದು. ಅದು ಕೆಲವು ಸಂದರ್ಭಗಳಲ್ಲಿ ವೀರನ ಖಂಡೆಯದಂತೆ ಮೋಹನಭೀಷಣವಾಗಿಯೂ, ಕಾಳಿಯ ನೃತ್ಯದಂತೆ ಮಂಗಳಭಯಂಕರವಾಗಿಯೂ ಇರಬೇಕಾಗುತ್ತದೆ. ದೇಶದ ದಾಸ್ಯವನ್ನು ಪರಿಹರಿಸಿ ಸ್ವಾತಂತ್ರ್ಯಸಾಮ್ರಾಜ್ಯ ಸ್ಥಾಪನೆ ಮಾಡುವ ಕಾರ್ಯಭಾರದಲ್ಲಿ ಕವಿಗಳು ತಟಸ್ಥರಾಗಿರುವುದು ಉಚಿತವಲ್ಲ. ಹಾಗೆ ಮಾಡಿದರೆ, ರೋಮ್ ನಗರ ಉರಿಯುತ್ತಿದ್ದಾಗ ನೀರೊ ಚಕ್ರವರ್ತಿ ಪಿಟೀಲು ಬಾರಿಸಿದಂತಾಗಿ ಹಾಸ್ಯಾಸ್ಪದವಾಗುತ್ತದೆ.

ಅಂದರೆ, ಕವಿಗಳ ಕಾರ್ಯದ ಮಹತ್ತು ಕಡೆಯದೂ ಅಲ್ಲ; ಕೀಳಾದುದೂ ಅಲ್ಲ. “Poets are the unacknowledged legislators of the world” ಎಂದು ಹೇಳಿದ ಷೆಲ್ಲಿಯ ಮಾತಿನಲ್ಲಿ ಬಹಳ ಅರ್ಥವಿದೆ. ಕವಿಗಳು ತಮ್ಮ ಗಾನದ ಇಂದ್ರಜಾಲದಿಂದ ಜನರ ಮನಸ್ಸನ್ನು ಎತ್ತಕಡೆಗೆ ಬೇಕಾದರೂ ತಿರುಗಿಸಬಹುದು. ಆದ್ದರಿಂದ ಕವಿಗಳ ಮೇಲಿರುವ ಭಾರ ಅಷ್ಟೇನೂ ಕಿರಿದಲ್ಲ. ಬಹಳ ಪವಿತ್ರ ತಮವಾದದ್ದು. ಅಂತಹ ಪಾವನವಾದ ಭಾರವನ್ನು ವಹಿಸಲು ನಾವೆಲ್ಲ ಅರ್ಹರಾಗಬೇಕು ಎಂಬುದೆ ನನ್ನ ಪ್ರಾರ್ಥನೆ. ಹೃದಯವನ್ನು ವಿಸ್ತಾರವಾಗಿಟ್ಟುಕೊಂಡು, ಹೊರಗಿನ ಬೆಳಕು ಒಳಗೆ ಬರದಂತೆ ಮನಸ್ಸಿನ ಬಾಗಿಲನ್ನು ಕಿರಿದುಮಾಡದೆ, ಮುಚ್ಚದೆ, ಬೆಳಕು ಮೂಡುವ ಕಡೆಗೆಲ್ಲಾ ತಿರುಗಿ ತಲೆಬಾಗಿ, ಶಿಷ್ಯಬುದ್ಧಿಯಿಂದ ಕಾಂತಿಯನ್ನು ಸ್ವೀಕರಿಸಿ ಕತ್ತಲೆಯನ್ನು ಹೋಗಲಾಡಿಸಿಕೊಂಡು, ಕಡೆಗೆ ನಾವೇ ಬೆಳಕಿನ ಆಗರವಾಗುವಂತೆ ಈಗಿನಿಂದಲೂ ಪ್ರಯತ್ನಿಸಬೇಕು. ನಮ್ಮ ಅದ್ಯತನರಾದ ಹಿರಿಯ ಕವಿಗಳ ಉತ್ತಮ ಕೃತಿಗಳನ್ನು ಗೌರವ ಬುದ್ಧಿಯಿಂದ, ವಿಮರ್ಶಕ ದೃಷ್ಟಿಯಿಂದ ಚೆನ್ನಾಗಿ ಓದಿ, ಅವರ ಮಾರ್ಗದ ಗುಣಾವಗುಣಗಳನ್ನು ತಿಳಿದು, ಅತಿಶಯೋಕ್ತಿಗೆ ಮಣಿಯದೆ ಯೋಗದೃಷ್ಟಿಯಿಂದ ಮುಂದುವರಿಯಬೇಕು.

ಮಹನೀಯರೆ, ಕವಿಸಹೋದರರೆ, ತಮ್ಮ ಪ್ರಶಸ್ತವಾದ ಕಾಲವನ್ನು ಇನ್ನು ಹೆಚ್ಚಾಗಿ ಹರಣಮಾಡೆನು. ನನಗೆ ತೋರಿದ ಅಲ್ಪಸ್ವಲ್ಪ ವಿಷಯಗಳನ್ನು ಬಹಳ ಸಂಕೋಚದಿಂದ, ಸಂಗ್ರಹವಾಗಿ, ತಮ್ಮ ಅವಗಾಹನೆಗೆ ತಂದಿರುತ್ತೇನೆ. ಅಲ್ಪಾನುಭವದಿಂದ, ಆಡಿದ ಮಾತುಗಳಲ್ಲಿ ಏನಾದರೂ ಅತ್ಯುಕ್ತಿ ಇದ್ದರೆ ಮನ್ನಿಸಬೇಕೆಂದು ಪ್ರಾರ್ಥಿಸಿ, ಮೇಲೇರಿದಂತೆಲ್ಲ ನನ್ನ ನಮ್ರತೆ ಹೆಚ್ಚಾಗುವಂತೆ ತಮ್ಮಿಂದ ಹರಕೆಯನ್ನು ಕೈಕೊಂಡು, ನನ್ನ ಗುರುವರ್ಯರ ಆಶೀರ್ವಾದವನ್ನು ಹೊಂದಿ, ಈ ಸಣ್ಣ ಭಾಷಣವನ್ನು ಮುಗಿಸುತ್ತೇನೆ.